ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪಿ ಚಂದ್ರಿಕಾ ಅಂಕಣ – ಮುಕ್ಕಚ್ಚೇರಿಯ ಹೆಂಗಸರ ಮಧ್ಯೆ…

‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ.

‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು ಕಥಾ ಸಂಕಲನ, ಕಾದಂಬರಿ ಚಂದ್ರಿಕಾ ಅವರ ಹಿರಿಮೆಯನ್ನು ಸಾರಿವೆ.

ಸದಾ ಚಟುವಟಿಕೆಯ ಚಂದ್ರಿಕಾಗೆ ಕೃಷಿಯಲ್ಲೂ ಆಸಕ್ತಿ. ಕನ್ನಡದ ಹೆಮ್ಮೆಯ ಪ್ರಕಟಣಾ ಸಂಸ್ಥೆ ‘ಅಭಿನವ’ದ ರೂವಾರಿಗಳಲ್ಲೊಬ್ಬರು.

ಇಂದಿನಿಂದ ಅವರ ಹೊಸ ರೀತಿಯ ಅಂಕಣ ಆರಂಭ. ಇದನ್ನು ಕಾದಂಬರಿ ಎಂದು ಕರೆಯಿರಿ, ಇಲ್ಲಾ ಅನುಭವ ಕಥನ ಎನ್ನಿ. ಚಂದ್ರಿಕಾ ನಡೆಸುವ ಪ್ರಯೋಗ ಮಾತ್ರ ಸದ್ದಿಲ್ಲದೇ ಹೊಸ ಅಲೆಯನ್ನು ಸೃಷ್ಟಿಸುತ್ತಲೇ ಇರುತ್ತದೆ.

23

ನವೆಂಬರ್ ನಾಲ್ಕು ನಾನು ಹುಟ್ಟಿದ ದಿನ. ನನಗೆ ಆಚರಣೆಯಲ್ಲಾಗಲೀ ಸಂಖ್ಯೆಯಲ್ಲಾಗಲೀ ನಂಬಿಕೆಯಿಲ್ಲ. ಶೂಟಿಂಗ್ ನಡೆಯುವಾಗ ನನ್ನ ಮೊಬೈಲನ್ನು ಜೇಬಿನಲ್ಲಿಟ್ಟುಕೋ ಎಂದು ಪುನೀತನಿಗೆ ಕೊಟ್ಟಿದ್ದೆ. ಅವನು ನನ್ನ ಮಗನ ಜೊತೆ ಮಾತಾಡುತ್ತಾ ಅಮ್ಮ ನಿಮ್ಮ ಮಗನ ಫೋನ್ ಎಂದು ತಂದುಕೊಟ್ಟಿದ್ದ. ನನ್ನ ಗಂಡ ಮತ್ತು ಮಗ ಇಬ್ಬರೂ ನಾಳಿನ ನನ್ನ ಹುಟ್ಟಿದ ಹಬ್ಬಕ್ಕಾಗಿ ಹೊಸ ಮೊಬೈಲ್ ತಂದ ಸುದ್ದಿಯನ್ನು ಹೇಳಿದ್ದರು.

ಅಂದು ಪುನೀತ ನನಗೆ ಐನೂರು ರೂಪಾಯಿಗಳನ್ನು ಕೊಡುವಂತೆ ದುಂಬಾಲು ಬಿದ್ದ. ಈಗ ಯಾಕೋ ಎಂದು ಕೇಳಿದ್ದಕ್ಕೆ ಅಮ್ಮಾ ನೀನು ಸುಮ್ಮನೆ ಕೊಡು ಆಮೇಲೆ ನನ್ನ ಸಂಬಳದಲ್ಲಿ ಮುರಿದುಕೋ ಎಂದಿದ್ದ. ಅವತ್ತು ರಾತ್ರಿ ಹೊರಗೆ ಊಟ ಮುಗಿಸಿದ ಮೇಲೆ ಮೇಲಿನ ಹಾಲ್‌ನಲ್ಲೇ ನಿಲ್ಲಿಸಿಕೊಂಡ. ಹೊಟೇಲಿನವರು ಬೀಗ ಹಾಕಬೇಕು ಎಂದು ಬಂದಾಗಲೂ ಅವನ ಹತ್ತಿರ ಕೀ ತೆಗೆದುಕೊಂಡು `ಏನು ಹೋದರೂ ನಾನೇ ಜವಾಬ್ದಾರಿಎಂದ. ಇವನಿಗೇನು ತಲೆಕೆಟ್ಟಿದೆಯಾ ಎಂದು ನಾನು ಪುಟ್ಟಣ್ಣ ಮಾತಾಡಿಕೊಂಡೆವು. ಹನ್ನೆರಡು ಗಂಟೆಗೆ ಅಲಾರಾಂ ಇಟ್ಟುಕೊಂಡು ಅದು ರಿಂಗ್ ಆದ ತಕ್ಷಣ ನನ್ನ ಮತ್ತು ಪುಟ್ಟಣ್ಣನ ರ್ಯ್ಂನ ಬಳಿಉ ಬಂದು ಎಬ್ಬಿಸಿದ ಏನೋ ನಿನ್ನ ತಲೆ ನೋವು ಎಂದರೆ, `ಅಮ್ಮಾ ಕಣ್ಣುಮುಚ್ಚಿಕೋಎಂದ. ಅಷ್ಟು ಹೊತ್ತಿಗೆ ನನಗೆ ಸೂಚನೆ ಸಿಕ್ಕಿಬಿಟ್ಟಿತ್ತು ಇವನಿಗೆ ಹೇಗೋ ವಿಷಯ ಗೊತ್ತಾಗಿದೆ ಎಂದು.

ನನ್ನ ಮಾತನ್ನು ಕೇಳಿಸಿಕೊಳ್ಳುವ ಸ್ಥಿತಿಯಲ್ಲಿ ಅವನು ಇರಲಿಲ್ಲ. ನಾನು ಕಣ್ಣುಮುಚ್ಚಿಕೊಂಡೆ. ಅವನ ಆಣತಿಯ ಮೇರೆಗೆ ಕಣ್ಣನ್ನು ತೆಗೆದೆ. ನನ್ನೆದುರು ಪುಟ್ಟದಾದ ಒಂದು ಕೇಕ್ ಇತ್ತು. ಅದರ ಮೇಲೆ `ಹ್ಯಾಪಿ ಬರ್ತಡೆ ಅಮ್ಮಾಎಂದು ಬರೆದಿತ್ತು. ನನ್ನ ಕಣ್ಣುಗಳು ತುಂಬಿ ಬಂದಿತ್ತು. ಯಾರೋ ಈ ಹುಡುಗ, ಪರಿಚಯ ಒಂದೆರಡು ವಾರಗಳದ್ದು. ಈ ಪ್ರೀತಿಗೆ ಏನು ಹೇಳಲಿ ಅನ್ನಿಸಿತ್ತು.

ನಮ್ಮ ಜೀವನ ಪಯಣದಲ್ಲಿ ಅಚಾನಕ್ ಆಗಿ ಏನೆಲ್ಲವನ್ನೂ ಪಡೆದುಕೊಳ್ಳುತ್ತೇವಲ್ಲಾ? ಪುಟ್ಟಣ್ಣ ಮೇಡಂ ಕೇಕ್ ಕಟ್ ಮಾಡಿಬಿಡಿ ಎಂದ. ಅವನಿಗೆ ನಿದ್ದೆ. ಕೇಕ್ ತಿಂದೇ ಮಲಗುವ ಉಮೇದು ಅವನದ್ದು. ಪುನೀತ ಮಾತ್ರ ಒಪ್ಪಲೇ ಇಲ್ಲ. ಮತ್ತೆ ಇದನ್ಯಾಕೆ ತಂದೆ? ಎಂದು ಪುಟ್ಟಣ್ಣ ಅವನನ್ನು ಬೈದ. `ಅಮ್ಮಾ ಇಂಥಾ ಬರ್ತಡೆಗಳನ್ನು ಸಾಕಷ್ಟು ಮಾಡಿಕೊಂಡಿರುತ್ತಾರೆ ಆದರೆ ನಾನು ಮಾಡುವ ಈ ಸೆಲಬ್ರೇಷನ್ ಅನ್ನು ಅವರು ಯಾವತ್ತೂ ಊಹೆ ಕೂಡಾ ಮಾಡಿಕೊಂಡಿರಲ್ಲಎಂದ. ನನಗೂ ಕುತೂಹಲ ಅನ್ನಿಸಿತು. ಅದಕ್ಕೆ ಅವನು `ಅಮ್ಮಾ ಈ ವರ್ಷದ ನಿಮ್ಮ ಹುಟ್ಟುಹಬ್ಬದ ಆಚರಣೆ ನಿಮ್ಮ ಪ್ರೀತಿಯ ಮುಕ್ಕಚೇರಿಯ ಹೆಂಗಸರ ಮಧ್ಯೆ. ಹೇಗಿದೆ ನನ್ನ ಐಡಿಯಾ?’ ಎಂದ. ನನಗೆ ನಿಜಕ್ಕೂ ಇದು ಅಚ್ಚರಿಯೂ ಸಂತೋಷದಾಯಕವೂ ಆದ ಸಂಗತಿಯಾಗಿತ್ತು.

ಮಾರನೇ ದಿನ ಬೆಳಗ್ಗೆ ಆರು ಗಂಟೆಗೇ ನನ್ನನ್ನು ಮುಲ್ಕಿಯ ಬಪ್ಪನಾಡು ದುರ್ಗಾಪರಮೇಶ್ವರಿಯ ದೇವಸ್ಥಾನಕ್ಕೆ ಕರೆದೊಯ್ದು ನನ್ನ ಹೆಸರಲ್ಲಿ ಅರ್ಚನೆ ಮಾಡಿಸಿ, ಪ್ರಸಾದಕೊಡಿಸಿದ್ದ. ಇದೆಲ್ಲಾ ಜಾಸ್ತಿಯಾಯ್ತು ಕಣೋ ಎಂದಿದ್ದಕ್ಕೆ ನೀನು ಸುಮ್ಮನಿರಮ್ಮನಾನು ಇದನ್ನೆಲ್ಲಾ ನಂಬ್ತೀನಿ ಎಂದಿದ್ದ. ಈ ಹುಡುಗ ನಡೆ ನುಡಿಯಲ್ಲಿ ತುಂಬಾ ಶುದ್ಧ. ಮನಸ್ಸು ಇನ್ನೂ ಪರಿಶುದ್ಧ. ಎದುರಿರುವ ಯಾರೇ ಆಗಲಿ ಅವರನ್ನು ಕ್ಯಾರೇ ಅನ್ನುತ್ತಿರಲಿಲ್ಲ. ತನಗೆ ಸರಿ ಎಂದು ಕಂಡಿದ್ದನ್ನೇ ಮಾಡುತ್ತಿದ್ದ ಹಿಂದೆ ಸೀರಿಯಲ್ಲುಗಳಲ್ಲಿ ತಾನು ಮಾಡಿದ ಕೆಲಸದ ಅನುಭವ ಹೇಳುವಾಗಲೂ ಇಂಥಾದ್ದೇ ಕಾರಣಕ್ಕೆ ಹೊರಗುಳಿದ ಕಥೆಗಳನ್ನು ಹೇಳಿದ್ದ. ಇಂಥಾ ಕಥೆಗಳನ್ನು ಹೇಳುವಾಗ ಅವನಿಗೆ ವಿಷಾದಕ್ಕಿಂತ ಸಂತೋಷ ಹೆಮ್ಮೆಯೇ ಇರುತ್ತಿತ್ತು.

ಬಪ್ಪನಾಡು ದುರ್ಗಾಪರಮೇಶ್ವರಿ ದೊಡ್ಡ ದೇವಸ್ಥಾನ. ಬೇಡ ಎಂದರೂ, ಸಮಯ ಆಗುತ್ತದೆ ಎಂದು ಗೋಗರೆದರೂ ಬಿಡದೆ ತನ್ನ ಜೊತೆ ನನ್ನನ್ನು ಇಪ್ಪತ್ತೊಂದು ಸುತ್ತು ಸುತ್ತಿಸಿದ್ದ. `ಅಮ್ಮ ದೇವರಲ್ಲಿ ಸರಿಯಾಗಿ ಕೇಳಿಕೋ ಮುಂದಿನ ದಿನಗಳಲ್ಲಿ ಒಳ್ಳೆಯದನ್ನು ಮಾಡು ಅಂತಎಂದು ಪದೇಪದೇ ಹೇಳಿದ್ದ. `ಆಯ್ತಪ್ಪಾ ನಾವು ಶೂಟಿಂಗ್ ಹೊರಡುವಾಗ ಲೇಟ್ ಆಗುತ್ತೆ, ಇನ್ನೊಬ್ಬರಿಗೆ ತೊಂದರೆ ಕೊಡಬಾರದುಎಂದು ಅವನನ್ನು ಸಾಗಹಾಕಿಕೊಂಡು ಬಂದಿದ್ದೆ.

ಅವತ್ತು ಮುಕ್ಕಚೇರಿಯ ಕೇರಿಯಲ್ಲಿ ಸಂಭ್ರಮ ಇತ್ತು. ಮಧ್ಯಾಹ್ನ ಊಟದ ವೇಳೆಯಲ್ಲಿ ಕೇಕ್ ನೋಡಿದ ತಕ್ಷಣ, `ಹೌದಾ ಮೇಡಂ ನಿಮ್ಮ ಬರ್ತಡೆಯಾ? ಎಷ್ಟನೇ ವರ್ಷದ್ದು?’ ಎಂದೆಲ್ಲಾ ಕೇಳಿದರು. `ನಲವತ್ತಾರುಎಂದರೆ, `ನಿಮಗೆ ಅಷ್ಟು ವರ್ಷ ಎಂದು ಗೊತ್ತೇ ಆಗುವುದಿಲ್ಲಎಂದು ನಾನು ಹೆಮ್ಮೆ ಪಡುವ ಹಾಗೆ ಮಾಡಿದರು. `ಹಾಗೇನೂ ಇಲ್ಲ ಬಿಡಿ ಆಗುವ ವಯಸ್ಸು ಆಗೇ ಆಗುತ್ತೆಎಂದಾಗ, `ಇರಬಹುದು, ಆದರೆ ನಿಮ್ಮ ಉತ್ಸಾಹ ನಮಗಿಲ್ಲ ನೋಡಿ ನಮಗೆಲ್ಲಾ ಮೂವತ್ತೈದು ನಲವತ್ತು ದಾಟಿದರೆ ಅಜ್ಜಿಗಳಾಗುವ ವಯಸ್ಸು ಎನ್ನಿಸಿಬಿಡುತ್ತೆ. ಅಷ್ಟು ಹೊತ್ತಿಗೆ ನಮ್ಮಹೆಣ್ಣುಮಕ್ಕಳ ಮದುವೆಯನ್ನೂ ಮಾಡಿಬಿಟ್ಟಿರುತ್ತೇವೆ. ನೀವು ಜೀವನಾನ ಈಗ ಸ್ಟಾರ್ಟ್ ಮಾಡಿದ್ದೀರೇನೋ ಅನ್ನಿಸುತ್ತೆಎಂದರು. ಇದ್ಯಾಕೋ ಜಾಸ್ತಿ ಅನ್ನಿಸ್ತು ಎಂದು ಪುನೀತನಿಗೆ `ಕೇಕ್ ಕಟ್ ಮಾಡುವಾ, ಇಲ್ಲಾಂದ್ರೆ ಸುಮ್ಮನೆ ಟೈಂ ಆಗಿಹೋಗುತ್ತೆಎಂದೆ.

ಅಲ್ಲಿ ನಾನು ಪುಟ್ಟಣ್ಣ, ಪುನೀತ ಬಿಟ್ಟರೆ ಟೀಮ್‌ನವರು ಯಾರೂ ಇರಲಿಲ್ಲ. ಕೇಕ್ ಕಟ್ ಮಾಡಿದೆ. ಎಲ್ಲ ಹೆಂಗಸರೂ ತಮ್ಮ ಪಾಲಿಗೆ ಬಂದ ಕೇಕಲ್ಲಿ ತುಂಡನ್ನು ನನ್ನ ಬಾಯಿಗಿಟ್ಟು ಹರಸಿದರು. ಹಸೀನಮ್ಮ ಇರಿ ಎಂದು ಮನೆಗೆ ಹೋಗಿ ಒಂದು ಸ್ಕಾರ್ಫ್ ತಂದು ನನ್ನ ಕೈಲಿಟ್ಟು ನಮ್ಮೆಲ್ಲರ ಪರವಾಗಿ ಎಂದಳು. ತಿಳಿ ಗುಲಾಬಿ ಮತ್ತು ತಿಳಿ ನೀಲಿ ಬಣ್ಣದ ಸ್ಕಾರ್ಫ್ ನನ್ನ ಕೈಗಳಲ್ಲಿ ಬೆಚ್ಚಗೆ ನಗುತ್ತಿತ್ತು. ಅಲೀಮಮ್ಮ `ಮುಂದಿನ ನಿಮ್ಮ ಬರ್ತಡೆ ದಿನ ನಮ್ಮನ್ನೆಲ್ಲಾ ನೆನಪಿಸಿಕೊಳ್ಳಿಎಂದಿದ್ದರು.

ಈ ಗಲಾಟೆ ಕೇಳಿ ನಮ್ಮವರು ಬಗ್ಗಿ ನೋಡಿದರು, ಆಗ ಅವರಿಗೆ ವಿಷಯ ಗೊತ್ತಾಯಿತು. ಪಂಚಾಕ್ಷರಿ `ನನಗೇ ಹೇಳದೆ ಮಾಡಿದಿರಿಎಂದು ದೂರಿದರು. ಇದರಲ್ಲಿ ನನ್ನದೇನೂ ಇಲ್ಲ ಎಲ್ಲಾ ಪುನೀತ ಮಾಡಿದ್ದು ಎಂದೆ. ಪುನೀತ ಉಳಿದ ಕೇಕನ್ನು ತನಗೆ ಬೇಕಾದವರಿಗೆ ಕೊಟ್ಟಿದ್ದ. `ನಮಗೆ ರಾತ್ರಿ ಪಾರ್ಟಿ ಬೇಕು ಎಂದಿದ್ದರುಉಳಿದವರು. `ಅಯ್ಯೋ ನಾನು ಸಣ್ಣ ಮಗು ಅಲ್ಲಪ್ಪಾ ಬರ್ತಡೆ ಮಾಡಿಕೊಳ್ಳಲಿಕ್ಕೆ. ಮನೆಯಲ್ಲೂ ಇದೆಲ್ಲಾ ಏನೂ ಮಾಡಲ್ಲ, ಈ ಹುಚ್ಚು ಹುಡುಗ ಮಾಡಿದ್ದಾನೆ ಅಷ್ಟೇಎಂದಿದ್ದೆ. ಆದರೂ ಪುನೀತ ಮುಕ್ಕಚ್ಚೇರಿಯ ಹೆಂಗಸರ ನಡುವೆ ನನ್ನ ಬರ್ತಡೆ ಆಚರಿಸಿದ್ದು ನಿಜಕ್ಕು ಸಂತೋಷವೇ. ಆದರೆ ಅವರು ಹೇಳಿದ್ದ ಒಂದು ಮಾತು ಮಾತ್ರ ಈಗಲೂ ನನ್ನ ಹೃದಯವನ್ನು ಇರಿಯುತ್ತಲೇ ಇದೆ.

`ಕೆಲಸ ಮಾಡಲಿಕ್ಕೆ ಅಂತ ಹುಟ್ಟಿದವರು ನಾವು, ನಮ್ಮ ಯಾರ ಹುಟ್ಟಿದ ದಿನವೂ ಗೊತ್ತಿಲ್ಲ. ನಮಗಾಗಿ ಯಾರೂ ಹೀಗೆ ಹಬ್ಬ ಮಾಡಲ್ಲ. ಅಷ್ಟೇ ಯಾಕೆ ನಮ್ಮ ಆರೋಗ್ಯ ಕೆಟ್ಟು, ಗಂಡಸರು ಕೈಸುಟ್ಟುಕೊಂಡಾಗ ಮಾತ್ರ ನಮ್ಮ ಕೆಲಸದ ಅರಿವಾಗುತ್ತದೆ. ಅದೂ ಸ್ವಲ್ಪ ಹೊತ್ತು ಮತ್ತೆ ನಾವು ಕೆಲಸ ಶುರು ಮಾಡಿದ್ರೆ ಅದೂ ಮರೆತುಹೋಗುತ್ತೆ. ನಿಮ್ಮ ಲೈಫೇ ಚೆನ್ನಾಗಿದೆ. ಹೀಗೆ ಚೆನ್ನಾಗಿರಿಎಂದಿದ್ದರು. ನಾನು ಏನನ್ನು ಅರ್ಥ ಮಾಡಿಕೊಳ್ಳುತ್ತಿದ್ದೇನೆ? ಇದ್ಯಾವ ಪಯಣ? ಎಲ್ಲಿದ್ದವಳು ಇಲ್ಲಿಗೇಕೆ ಬಂದೆ? ಈ ಜನರ ಜೊತೆ ಯಾಕಿದ್ದೇನೆ? ನನಗೂ ಇವರಿಗೂ ಇರುವ ವ್ಯತ್ಯಾಸವೇನು? ಬದುಕು ಕಟ್ಟಿಕೊಳ್ಳಲು ಹೊರಟವರಿಗೆ ಬದುವ ಛಲ ಬಿಟ್ಟು ಏನಿರಲು ಸಾಧ್ಯ? ತಂದು ಹಾಕುವ ಗಂಡ, ತಿನ್ನುವ ಮಕ್ಕಳನ್ನು ಬಿಟ್ಟು ಇವರ ಜಗತ್ತು ಏನಿದೆ? ಎಂದು ಯೋಚಿಸಿದರೆ ಏನೂ ಇಲ್ಲ.

ಚರಿತ್ರೆಯಲ್ಲಿ ಇಲ್ಲದವರು, ಚರಿತ್ರೆಯೇ ನಿರಾಕರಿಸಿದವರು ಒಳಗೆ ಆರದ ಗಾಯದಿಂದ ನರಳುತ್ತಿರುವವರು ಎಲ್ಲರ ಇತಿಹಾಸ ಬರೆಯಬೇಕಿದೆ. ಅಕ್ಷರ ಬಲ್ಲ, ಅರಿವಿನ ಬೆನ್ನು ಹತ್ತಿರುವ ನಮಗೇ ಇಲ್ಲದ ಚರಿತ್ರೆ ಇವರಿಗೆಲ್ಲಿ ಬರಬೇಕು? ಚರಿತ್ರೆಯಲ್ಲಿಲ್ಲದವರಿಗೆ ಶತಮಾನ, ವರ್ಷ, ದಿನಾಂಕಗಳು ಏನು ತಾನೆ ಮಾಡಿಯಾವು? ನನ್ನ ಮನಸ್ಸು ಪ್ರಾರ್ಥಿಸುತ್ತಿತ್ತು, ಇವರೆಲ್ಲರ ಹುಟ್ಟಿದ ದಿನಾಂಕವನ್ನು ನೆನಪಿಟ್ಟುಕೊಳ್ಳುವ ದಿನ ಬರಲಿ ಎಂದು.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

10 December, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading