ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪಿ ಚಂದ್ರಿಕಾ ಅಂಕಣ – ಬಿಟ್ಟು ಬಂದ ಸ್ಕ್ರಿಪ್ಟ್ ಮತ್ತು ಸಲಾಂ ಸಾಬ್…

‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ.

‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು ಕಥಾ ಸಂಕಲನ, ಕಾದಂಬರಿ ಚಂದ್ರಿಕಾ ಅವರ ಹಿರಿಮೆಯನ್ನು ಸಾರಿವೆ.

ಸದಾ ಚಟುವಟಿಕೆಯ ಚಂದ್ರಿಕಾಗೆ ಕೃಷಿಯಲ್ಲೂ ಆಸಕ್ತಿ. ಕನ್ನಡದ ಹೆಮ್ಮೆಯ ಪ್ರಕಟಣಾ ಸಂಸ್ಥೆ ‘ಅಭಿನವ’ದ ರೂವಾರಿಗಳಲ್ಲೊಬ್ಬರು.

ಇಂದಿನಿಂದ ಅವರ ಹೊಸ ರೀತಿಯ ಅಂಕಣ ಆರಂಭ. ಇದನ್ನು ಕಾದಂಬರಿ ಎಂದು ಕರೆಯಿರಿ, ಇಲ್ಲಾ ಅನುಭವ ಕಥನ ಎನ್ನಿ. ಚಂದ್ರಿಕಾ ನಡೆಸುವ ಪ್ರಯೋಗ ಮಾತ್ರ ಸದ್ದಿಲ್ಲದೇ ಹೊಸ ಅಲೆಯನ್ನು ಸೃಷ್ಟಿಸುತ್ತಲೇ ಇರುತ್ತದೆ.

32

ವೈರ್ ಹೊತ್ತಿದ ಬೆಂಕಿ ನಂದಿದ ಹಾಗೆ ನಮ್ಮ ಒಳಗಿನ ಆತಂಕಗಳು ಕರಗಿ ಪುನರೂರು ಹೊಟೇಲನ್ನು ಸೇರಿದಾಗ ಅವತ್ತು ಸ್ವಲ್ಪಜಾಸ್ತಿಯೇ ಹೊತ್ತಾಗಿತ್ತು. ಹೊಟೇಲಿನಲ್ಲಿ ರಾತ್ರಿಯ ಊಟದ ವ್ಯವಸ್ಥೆ ನಿಲ್ಲಿಸಿದ್ದರಿಂದ ಮತ್ತು ಹೊತ್ತಾಗಿದ್ದರಿಂದ ಹತ್ತು ಗಂಟೆಯ ಮೇಲೆ ಯಾರೂ ಹೊಟೇಲ್ ತೆರೆದಿಡುತ್ತಿರಲಿಲ್ಲ. ಮತ್ತೆ ಅರ್ಧ ಕಿಲೋಮೀಟರ್ ನಡೆದು ಹೋಗಿ ಊಟ ಮಾಡಬೇಕಾಯಿತು. ಅವು ಹೈವೆ ಡಾಬಾಗಳು ಆದ್ದರಿಂದ ಹನ್ನೆರಡರ ವರೆಗೂ ತೆರೆದಿರುತ್ತಿತ್ತು. ನಮ್ಮ ಪುಣ್ಯಕ್ಕೆ ಅದರಲ್ಲೂ ಒಂದು ಪೂರ್ಣ ಸಸ್ಯಾಹಾರಿ ಡಾಬಾ ಆಗಿತ್ತು.

ಜಿತೇಂದ್ರ ಮಾತ್ರ ಅವತ್ತು ಕಾಣಲೇ ಇಲ್ಲ. ಅದೇನು ಅವರ ಮನೆಗೇ ಹೋಗಿಬಿಟ್ಟಿದ್ದರೋ? ಅಥವಾ ರೂಮಿನ ಒಳಗೇ ಇದ್ದೂ ಬಾಗಿಲನ್ನು ತೆರೆಯಲಿಲ್ಲವೋ ಗೊತ್ತಾಗಲಿಲ್ಲ. ಅವತ್ತು ರಾತ್ರಿ ಒಳ್ಳೆಯ ನಿದ್ದೆ; ಬಹುಶಃ ಮನಸ್ಸು ನಿರಾಳವಾಗಿದ್ದಕ್ಕೆ ಎಂದುಕೊಳ್ಳುತ್ತೇನೆ.

ಮಾರನೇ ದಿನ ಮುಲ್ಕಿಯಲ್ಲಿ ಶ್ರೀನಿವಾಸಾಚಾರಿಯ ಚಿನ್ನದ ಅಂಗಡಿಯಲ್ಲಿ ಶೂಟಿಂಗ್. ಮುಲ್ಕಿಯ ಊರು ಹಳೆಯದು ಮತ್ತು ಹೊಸದು ಎಂದು ಎರಡು ಭಾಗಗಳಲ್ಲಿದೆ. ಹಳೆಯ ಊರು ದೊಡ್ಡ ದೊಡ್ಡ ಮನೆಗಳು ಮುರಿದುಬಿದ್ದ ಛಾವಣಿಯ ಕುಸಿದ ಕಂಬಗಳ, ಜನಗಳೇ ಬದುಕಿರದ ಬಹಳಷ್ಟು ಮನೆಗಳ ಜನಗಳಿದ್ದರೂ ಒಂದಿಬ್ಬರು. ಒಟ್ಟಿನಲ್ಲಿ ಶಾಪಗ್ರಸ್ತ ಊರು. ಆ ಊರ ತುದಿಯಲ್ಲಿ ವಿಜಯ ಕಾಲೇಜು. ಅಲ್ಲಿ ಮಾತ್ರವೇ ಸ್ವಲ್ಪ ಗಲಾಟೆ.
ಇದನ್ನು ಬಿಟ್ಟರೆ ಊರು ಅಂತ ಗಲಾಟೆಯಿಂದ ಇರುವುದು ಇನ್ನೊಂದು ಭಾಗದಲ್ಲಿ – ಅದು ಕಾರ್ನಡ್. ಊರಿನ ಹೆಸರನ್ನು ಬೋರ್ಡ್ ಮೇಲೆ ಓದಿದ ತಕ್ಷಣ ನನಗೆ ನೆನಪಗಿದ್ದು ಗಿರೀಶ್ ಕಾರ್ನಾಡ್. ಈ ಕಾರ್ನಾಡೆ ಅವರ ತಂದೆಯ ಊರೂ ಹೌದು. ನಂತರ ವೈದ್ಯ ವೃತ್ತಿಯ ಅವರು ಮಹರಾಷ್ಟಾçಕ್ಕೆ ಹೋಗಿದ್ದು. ಅಲ್ಲೇ ಪೊಲೀಸ್ ಸ್ಟೇಷನ್ನು, ಆಸ್ಪತ್ರೆ, ಪೋಸ್ಟ್ ಆಫೀಸು ಎಲ್ಲವೂ ಇರೋದು.

ನಾವು ಶೂಟ್ ಮಾಡಿದ ಚಿನ್ನದ ಅಂಗಡಿ ಹುಡುಕಿದ್ದೇ ಒಂದು ಸಾಹಸಮಯ ಪಯಣವಾಗಿತ್ತು. ಮಂಗಳೂರು, ಮುಲ್ಕಿ ಉಡುಪಿ ಎಲ್ಲಾ ಕಡೆಯೂ ಹುಡುಕಾಟ ಮಾಡಿದೆವು. ಚಿನ್ನದ ಅಂಗಡಿಯನ್ನು ಯಾರು ಶೂಟಿಂಗ್‌ಗೆ ಕೊಡುತ್ತಾರೆ? ವ್ಯಾಪಾರ ಮಾಡುವುದು ಬೇಡವಾ? ಮೊದಲು ನಮಗೆ ಇದು ದೊಡ್ಡದಾ ವಿಷಯ ಅನ್ನಿಸಲೇ ಇಲ್ಲ. ಆದರೆ ಹುಡುಕಾಟದಲ್ಲಿ ನಮಗೆ ತಿಳಿದ ಸತ್ಯ ನಮಗೆ ಯಾರೂ ಚಿನ್ನದ ಅಂಗಡಿಯನ್ನು ಶೂಟಿಂಗ್‌ಗಾಗಿ ನಮ್ಮಂಥಾ ಸಿನೆಮಾಗಳಿಗೆ ಕೊಡಲಾರರು ಎಂದು.

ಒಂದು ಕಡೆ ವ್ಯಾಪಾರ ಲಾಸು ಇನ್ನೊಂದು ಕಡೆ ನಮ್ಮಿಂದ ಹೆಚ್ಚು ಹಣವೂ ಸಿಗುವುದಿಲ್ಲ. ಹೋಗಲಿ ಅಂಥಾದ್ದೊಂದು ಸೆಟ್ ಹಾಕಿ ಬಿಡೋಣ ಎಂದು ಹಳೆಯ ಅಂಗಡಿಗಳನ್ನೆಲ್ಲಾ ಜಾಲಾಡಿಸಿದೆವು. ಊರಲ್ಲಿರುವ ಖಾಲಿ ಅಂಗಡಿಗಳು ಹಾಳುಬಿದ್ದು ಧೂಳು ಹಿಡಿದಿದ್ದವು. ನಮಗೆ ಹುಚ್ಚು ಹಿಡಿಸಿದ್ದ ಅಂಗಡಿಗಳ ಬಾಗಿಲುಗಳು ಮಾತ್ರ ಈಗಲೂ ಕಣ್ಣಿಗೆ ಕಟ್ಟಿದ ಹಾಗೇ ಇದೆ.

ಜಬೂತಾದ ಮರದ ಹಲಗೆಗಳಿಂದ ಮಾಡಿದ ಒಂದರ ಪಕ್ಕ ಒಂದನ್ನು ಜೋಡಿಸಿ ಕಬ್ಬಿಣದ ಸರಪಳಿಯನ್ನು ಕೊಕ್ಕೆಗೆ ತಗುಲಿಸಿ ಬೀಗ ಹಾಕುವಂಥಾದ್ದು. ಆ ದೈತ್ಯವಾದ ಹಲಗೆಗಳನ್ನು ಎತ್ತಿಡುವುದೇ ಸಾಹಸಮಯವಾದ ಕೆಲಸವಾಗಿತ್ತು. ನನಗಂತೂ ಹೇಗಪ್ಪಾ?! ಎನ್ನುವ ಆತಂಕ ಶುರುವಾಗಿಬಿಟ್ಟಿತ್ತು. ಇದ್ದ ಕಡೆಯಲ್ಲಿ ಏನಾದರೂ ಸರಿ ಮಾಡುವುದೋ, ಅಲ್ಪ ಸ್ವಲ್ಪ ಸಾಮಾನುಗಳನ್ನು ತಂದಿಡುವುದೋ ಮಾಡಿದರೆ ಆದು ಬೇರೆಯ ಮಾತು ಏನೂ ಇಲ್ಲದ ಕಡೆ ಶೂನ್ಯದಲ್ಲಿ ಏನನ್ನಾದರೂ ಹುಟ್ಟು ಹಾಕುವುದು ಎನ್ನುವುದು ಕಷ್ಟದ ಕೆಲಸ. ಆದ್ದರಿಂದ ಚಿನ್ನದ ಅಂಗಡಿಯನ್ನು ಹುಡುಕುವುದೇ ಒಳಿತು ಎನ್ನುವ ತೀರ್ಮಾನಕ್ಕೆ ಬಂದುಬಿಟ್ಟೆವು.

ಸಣ್ಣದಾದರೂ ಸರಿ ಚಿಕ್ಕ ಪುಟ್ಟದಾಗಿ ವಡವೆ ರಿಪೇರಿ ಮಾಡುವ ಅಂಗಡಿಗಳು ಸಿಕ್ಕೇ ಸಿಗುತ್ತದೆ. ಅಲ್ಲಿ ಕುಲುಮೆ, ಚಿನ್ನ ಕರಗಿಸುವ ಮೂಸೆ, ಅರ ಇತ್ಯಾದಿಗಳು ಇರುತ್ತವೆ. ಅಷ್ಟು ಸಿಕ್ಕರೂ ಚಿನ್ನದ ಅಂಗಡಿ ಎಂದು ಎಸ್ಟಾಬ್ಲಿಷ್ ಮಾಡಿಬಿಡೋಣ, ಮೇಲೊಂದು ಗ್ಲಾಸ್ ಬಾಕ್ಸ್ ಹುಡುಕೋಣ ಎಂದೆಲ್ಲಾ ಯೋಚಿಸಿದೆವು. ಪಂಚಾಕ್ಷರಿಗೆ ಅಟ್ಮಾಸ್ಫಿಯರ್ ಕ್ರಿಯೇಟ್ ಮಾಡುವುದು ಕಷ್ಟ ಎನ್ನಿಸಿತು. ಅಲ್ಲೇ ಮುಂದೆ ಸ್ವಲ್ಪ ಆಧುನಿಕವಾಗಿದ್ದ ಆಗಿದ್ದ ಚಿನ್ನದ ಅಂಗಡಿ ಕಂಡಿತು. ಅಂಗಡಿ ಒಂಥರಾ ಚೆನ್ನಾಗಿತ್ತು. ಪಕ್ಕದಲ್ಲೆ ದೊಡ್ದದೊಂದು ಮಳೆನೀರು ಹಾಯುವ ಮೋರಿ. ಶಾಂಭವಿ ನದಿಯ ನೀರು ನೆಲದ ಕೆಳ ಪದರದಿಂದ ಹರಿದು ಇಲ್ಲಿ ಮೇಲೆಕ್ಕೆ ಉಕ್ಕಿ, ತಿಳಿಯಾದ ನೀರು ಜುಳು ಜುಳು ಎಂದು ಹರಿಯುತ್ತಲಿತ್ತು. ಅಕ್ಕ ಪಕ್ಕ ನೀರಿನ ಪಕ್ಕ ಮಾತ್ರೆವೇ ಹುಟ್ಟಿಕೊಳ್ಳುವ ಜರೀಗಿಡಗಳು ಎತ್ತರೆತ್ತರಕ್ಕೆ ಬೆಳೆಯುವ ಯಾವುದೋ ಜಾತಿಯ ಹುಲ್ಲು ಹೀಗೆ.

ಅರುಣಾ ಜ್ಯೂಯಲರ್ಸ್ ಅಂತ ಚಿಕ್ಕದೊಂದು ಬೋರ್ಡು ತಗುಲಿಸಿಕೊಂಡಿದ್ದ ಆ ಅಂಗಡಿ ಒಳಗೆ, ಬೆಂಗಳೂರಿನ ಸಲೂನ್ ಶಾಪ್‌ಗಳಿರುತ್ತವಲ್ಲ ಹಾಗೆ ಸ್ವಲ್ಪ ಉದ್ದಕ್ಕೆ ಅಗಲ ಕಡಿಮೆ. ಅಂಗಡಿಯಾತ ಹುಡುಗ, ಹೆಸರು ಹರೀಶ್ ಅಂತ ನೆನಪು. ನಾವು ಶೂಟಿಂಗ್‌ಗೆ ಅಂಗಡಿ ಕೊಡು ಅಂತ ಕೇಳಿದ್ದಕ್ಕೆ ತಡಬಡಾಯಿಸಿ, ಕೊಡೋಕ್ಕಾಗಲ್ಲ ಸುಮ್ಮನೆ ರಗಳೇ ಆಗುತ್ತೆ’ ಎಂದಿದ್ದ. ಅವನನು ಸಮಾಧಾನ ಮಾಡಿ ಇಂಥಾ ಸಿನೆಮಾ ಮಾಡ್ತಾ ಇರೋದು ಅದಕ್ಕೆ ಅಷ್ಟೇ ಎಂದೆಲ್ಲಾ ಹೇಳಿದರೂ ಅವನು ಒಪ್ಪಲಿಲ್ಲ. ಸುತಾರಂ ಇಲ್ಲ ಎಂದುಬಿಟ್ಟ. ಇದೊಳ್ಳೆ ಕಥೆ ಆಯ್ತಲ್ಲಾ ಎನ್ನುತ್ತಾ ತಲೆ ಕೆಡಿಸಿಕೊಂಡು,ನೋಡಪ್ಪ ನಿನ್ನ ವ್ಯಾಪಾರ ಇಲ್ಲದಿದ್ದಾಗಲೇ ಮಾಡಿಕೊಳ್ಳುತ್ತೇವೆ, ತೊಂದರೆ ಆಗಲ್ಲ’ ಎಂದೆಲ್ಲಾ ಅವನಿಗೆ ತಿಳಿ ಹೇಳಿದೆ.

ಕಡೆಗೆ ಈ ಅಂಗಡಿ ನನ್ನದಲ್ಲವೇ ಅಲ್ಲ. ನಮ್ಮ ಓನರ್ ಊರಲ್ಲಿ ಇಲ್ಲ’ ಎಂದು ಪ್ಲೇಟ್ ಉಲ್ಟ ಮಾಡಿಬಿಟ್ಟ. ಬೇಸರದಿಂದ ಅಲ್ಲಿಂದ ಹೊರಟು ಸುಮ್ಮನೆ ಸುತ್ತಲಿಕ್ಕೆ ಶುರು ಮಾಡಿದೆವು. ಊರೂ ವಿಚಿತ್ರವೇ ಉದ್ದಕ್ಕೆ ಇದೆಯೇ ಹೊರತು ಅಗಲಕ್ಕಿಲ್ಲ ಅಂತ ಗೊತ್ತಾಗಿದ್ದೇ ಆ ಸುತ್ತಾಟದಲ್ಲಿ. ಹಾಗೆ ಸುತ್ತುತ್ತಾ ಕಾರ್ನಾಡಿಗೆ ಬಂದೆವು. ಅಲ್ಲಿ ನೋಡಿ ನಮ್ಮ ನಿಧಿ ಸಿಕ್ಕಿದ್ದು. ಆಚೆ ಈಚೆ ಕಡೆ ತರಕಾರಿ ದಿನಸಿಯ ಅಂಗಡಿ ಮತ್ತೊಂದು ಕಡೆ ಬ್ಯೂಟಿ ಪಾರ್ಲರ್.

ಮಧ್ಯದಲ್ಲಿ ರಾರಾಜಿಸುತ್ತಿತ್ತು ಶ್ರೀ ಲಕ್ಷ್ಮಿ ಗಣೇಶ ಜ್ಯೂಯಲರಿ ವಕ್ರ್ಸ್. ಅದರ ಓನರ್ ಶರತ್ ಪ್ರಸಾದ್,ಅಯ್ಯೋ ಬನ್ನಿ ಸಾರ್. ನಿಮಗೆ ನಾನು ಕೊಡುತ್ತೇನೆ. ಆದರೆ ನನ್ನದು ಒಂದೇ ಕಂಡೀಷನ್ನು ನನಗೆ ವ್ಯಾಪಾರಕ್ಕೆ ಜನಬಂದಾಗ ಬಿಟ್ಟುಕೊಡಬೇಕು’ ಎಂದಿದ್ದ. ಅದಕ್ಕೆ ನಾವು ಸಿದ್ಧಾವಾಗೇ ಇದ್ದೆವು. ಅದಲ್ಲದೆ ನಮಗೂ ಬೇರೆ ದಾರಿ ಇರಲಿಲ್ಲ. ಅಷ್ಟು ಜನ ಕಲಾವಿದ ತಂತ್ರಜ್ಞರನ್ನು ಇಟ್ಟುಕೊಂಡು ವ್ಯಾಪಾರಕ್ಕೆ ಅಂತ ಜನ ಬಂದಾಗಲೆಲ್ಲಾ ಬಿಟ್ಟುಕೊಡೋದು ಸಾಧ್ಯವಾ? ಎಂದು ಪಂಚಾಕ್ಷರಿ ಗೊಣಗಿಕೊಂಡರು. ಅವರ ಜವಾಬ್ದಾರಿ ಬೇರೆಯೇ.

ದಿನಕ್ಕೆ ಎಷ್ಟು ಜನ ಬರ್ತಾರೆ ಏನು’ ಎಂದೆಲ್ಲ ವಿಚಾರಿಸಿಕೊಂಡೆವು.ಒಂದು ಅಥವಾ ಎರಡು ವ್ಯಾಪಾರ ಆದ್ರೆ ಅದೇ ದೊಡ್ಡದು’. ಆಗ್ಲಿ ಬಿಡಪ್ಪ ಅವರು ಬಂದಾಗ ಬ್ರೇಕ್ ಕೊಡ್ತೀವಿ’ ಎಂದೆವು. ಆತ ತುಂಬಾ ಮಾತಾಡಿದ. ನಾವೂ ಅಷ್ಟೇ ಮಾತಾಡಿದೆವು. ನಮಗೆ ನಮ್ಮ ಕೆಲಸ ಆಗಬೇಕಿತ್ತು. ಅವನಿಗೆ ತನ್ನ ಜ್ಯೂಯಲರಿ ಶಾಪ್ ಫೇಮಸ್ ಆಗುವುದು ಬೇಕಿತ್ತು. ಆತನಿಗೆ ನಾವು ಬೋರ್ಡ್ ಶೂಟ್ ಮಾಡುವುದಿಲ್ಲ ಅಂತ ಗೊತ್ತಿರಲೇ ಇಲ್ಲ. ಜನರೇಟರ್ ವೈರು ಸುಟ್ಟಿತ್ತಲ್ಲ, ಅವತ್ತಿನ ಮಾರನೆ ದಿನವೇ ಕಾರ್ನಾಡಿನ ಚಿನ್ನದಂಗಡಿಯಲ್ಲಿ ಶೂಟಿಂಗ್. ಇನ್ನೇನು ಗಾಡಿ ಹತ್ತಬೇಕು ಎನ್ನುವಾಗ ಸಲಾಂ ಸಾಬ್‌ನದ್ದು ಫೋನ್ ಬಂದು.ಅರೆ ಈ ಹುಡುಗ ಯಾಕಪ್ಪಾ ಫೋನ್ ಮಾಡ್ತಾ ಇದಾನೆ.

ನೆನ್ನೆಯ ಘಟನೆಯ ಅಹಿತ ಪರಿಣಾಮ ಏನಾದರೂ ಆಗಿದೆಯಾ?’ ಎಂದೆಲ್ಲ ಕಾಡತೊಡಗಿತು. ನೆನ್ನೆ ಗಲಾಟೆಯಲ್ಲಿ ನಿಮ್ಮ ಪುಸ್ತಕವನ್ನು ಬಿಟ್ಟು ಹೋಗಿದ್ದೀರಿ’ ಎಂದ.ಹೌದಾ? ಏನದು ಪುಸ್ತಕ ಎಂದೆ. ಅದೇ ಡೈಲಾಗ್ ಬರೆದಿದೆಯಲ್ಲಾ ಅದು’ ಎಂದ. ನಮ್ಮ ಸ್ಕ್ರಿಪ್ಟ್ ಅಲ್ಲೇ ಬಿಟ್ಟುಬಂದಿದ್ದೆವು. ಸಲಾಂ ಸಾಬ್ ಸ್ವಲ್ಪ ಗಂಭೀರವಾಗಿ,ನೀವು ಮಾಡುತ್ತಿರುವ ಸಿನೆಮಾ ಪಾತುಮ್ಮಾ ಅಲ್ಲವಾ?’ ಎಂದ. ನನಗೆ ಆಶ್ಚರ್ಯವಾಯಿತು. ಪಾತುಮ್ಮಾ ಅಂತಲೇ ಹೆಸರನ್ನು ರಿಜಿಸ್ಟರ್ ಮಾಡಿಸಿರೋದು’ ಎಂದೆ.ಸುಳ್ಳು ಹೇಳುತ್ತಿದ್ದೀರಿ, ನೀವು ಮಾಡುತ್ತಿರುವು ಒಂದು ತುಂಡು ಗೋಡೆಯನ್ನು’ ಎಂದ ಅವನ ಮಾತಿನಲ್ಲಿ ಯಾಕೋ ಪ್ರಖರತೆ ಇತ್ತು ಅನ್ನಿಸಿತು. ನೀವು ನಮ್ಮೊಂದಿಗೆ ಸುಳ್ಳನ್ನು ಹೇಳಿದ್ದೀರಿ ಎನ್ನುವ ಭಾವವಿತ್ತಾ? ಗೊತ್ತಿಲ್ಲ.

ಮೊದಲಿಗೆ ನಾನು ಸಲಾಂ ಸಾಬ್, ಬೈ ಮಿಸ್ಟೇಕ್ ಹಾಗೆ ಪ್ರಿಂಟ್ ಆಗಿದೆ’ ಎಂದೆ. ಇಲ್ಲಾಮೇಡಂ ನಾನು ಒಂದು ತುಂಡು ಗೋಡೆಯನ್ನು ಓದಿದ್ದೇನೆ. ನಮ್ಮ ಜನವೇ ಅಲ್ಲವಾ ಬರೆದದ್ದು’ ಎಂದ. ನನಗೆ ಮಾತಾಡಲಿಕ್ಕೆ ಮಾತಿಲ್ಲವಾಗಿತ್ತು. ಮೊದಲಿಗೆ ನಾವು ಒಂದು ತುಂಡು ಗೋಡೆ ಎಂತಲೇ ಸಿನೆಮಾಗೆ ಹೆಸರನ್ನು ಇಟ್ಟುಕೊಳ್ಳುವುದೆಂದೂ, ಬದಲಿಸುವುದು ಬೇಡ, ಗೊತ್ತಿರುವ ಕಥೆಯಾದ್ದರಿಂದ ಹೆಸರೂ ಒಂದು ಹಂತಕ್ಕೆ ಸ್ಕೋರ್ ಮಾಡುತ್ತದೆ ಎನ್ನಿಸಿತ್ತು. ಆದರೆ ನಂತರ ಶೂಟಿಂಗ್ ಹೊರಡುವಾಗ ಹೆಸರನ್ನು ರಿಜಿಸ್ಟರ್ ಮಾಡಿಸುವಾಗ ಪಂಚಾಕ್ಷರಿ ಅದನ್ನು ಚರ್ಚೆ ಮಾಡಿ ಬದಲಿಸಿದ್ದರು.

ಸುಮ್ಮನೆ ಅದೇ ಹೆಸರಿನಲ್ಲೇ ಹೋದರೆ ಬೇರೆ ಏನಾದರು ಕಾಂಟ್ರವರ್ಸಿಯಾಗಿ ಸಿನೆಮಾ ನಿಲ್ಲುವ ಹಾಗಾದ್ರೆ ಎನ್ನುವುದು ಅವರ ಉದ್ದೇಶವಾಗಿತ್ತು. ಆದರೆ ನಾನು ಸ್ಕ್ರಿಪ್ಟ್ ಪ್ರಿಂಟ್ ತೆಗೆದುಬಿಟ್ಟಿದ್ದರಿಂದ, ಹೆಸರಿನಲ್ಲೇನಿದೆ ಎಂದು, ಮತ್ತೆ ಬದಲಿಸುವ ಗೋಜಿಗೆ ಹೋಗಲಿಲ್ಲ. ಮತ್ತದಕ್ಕೆ ಸಮಯವೂ ಇರಲಿಲ್ಲ. ಎಲ್ಲಾ ವಿಭಾಗಗಳಿಗೂ ಒಂದೊಂದು ಬೇಕಲ್ಲ ಎಂದು ಕಾಪಿಗಳನ್ನು ಕೊಟ್ಟಿದ್ದೆ. ಬಿಟ್ಟು ಬಂದಿದ್ದ ಆ ಕಾಪಿ ಕಾಸ್ಟ್ಯೂಮ್‌ನವರದ್ದಾಗಿತ್ತು.ಇರಲಿ ಮೇಡಂ ನೀವು ಯಾವ ಹೆಸರಿನಲ್ಲಾದರೂ ಸಿನೆಮಾ ತೆಗೆಯಿರಿ, ತೊಂದರೆಯಿಲ್ಲ.

ನಿಮ್ಮ ಸ್ಕ್ರಿಪ್ಟ್ ನನ್ನ ಮನೆಯಲ್ಲೇ ಇರುತ್ತೆ. ನನ್ನನ್ನು ಬಿಟ್ಟರೆ ಮನೆಯಲ್ಲಿ ಯಾರಿಗೂ ಓದಲಿಕ್ಕೆ ಬರಲ್ಲ’ ಎಂದುಬಿಟ್ಟ. ನನಗೆ ತೀರಾ ಅವಮಾನದಿಂದ ಕುಗ್ಗುವ ಹಾಗೆ ಆದೆ. ತಿಳಿಯಾದ ಮನಸ್ಸುಗಳಿಗೆ ನಾವು ಮೋಸ ಮಾಡಿದವಲ್ಲಾ ಎಂದು. ಟೈಟಲ್ ಬದಲಿಸದೇ ಸ್ಕ್ರಿಪ್ಟ್ ಅನ್ನು ಎಲ್ಲರಿಗೂ ಕೊಟ್ಟಿದ್ದಕ್ಕೆ ಪಂಚಾಕ್ಷರಿ ನನ್ನ ಮೇಲೆ ಅಸಮಾಧಾನಿತರಾದರು. ಇದೆಲ್ಲವನ್ನೂ ಗುಟ್ಟಾಗೆ ಇಡಬೇಕು ಇದರಲ್ಲಿ ಮುಸ್ಲೀಂ ರ ವಿರುದ್ಧ ಯಾವ ಕೆಟ್ಟ ಸಂಗತಿಯೂ ಇಲ್ಲ. ಆದರೆ ಇಂಥಾಕಥೆ ಎಂದ ತಕ್ಷಣ ಇವರು ಹಿಂದೂ ಮುಸಲ್ಮಾನರ ಜಗಳದ ಕಥೆ ಹೇಳುತ್ತಾರೆ ಅದರಲ್ಲಿ ನಮ್ಮನ್ನು ವಿಲನ್‌ಗಳನ್ನಾಗಿ ಮಾಡಿಬಿಟ್ಟರೆ ಎನ್ನುವ ಅನುಮಾನ ಬಂದುಬಿಟ್ಟರೆ ಎನ್ನುವುದೇ ಕಾರಣವಾಗಿತ್ತು. ಹಾಗಾಗಿ ಯಾವುದನ್ನು ಹೇಳದೆ ಎಲ್ಲವನ್ನೂ ಗುಟ್ಟಾಗಿ ಇಟ್ಟಿದ್ದೆವು. ಅದೇ ಈಗ ನಮಗೆ ಹೊಡೆತ ಕೊಟ್ಟಿದ್ದು.

ಮಾರನೆ ದಿನ ಶೂಟಿಂಗ್‌ಗೆ ಹೋದಾಗ ಸಲಾಂ ನ್ಯೂಸ್ ಪೇಪರ್‌ನಲ್ಲಿ ಸುತ್ತಿದ್ದ ಸ್ಕ್ರಿಪ್ಟ್ ಅನ್ನು ತಂದುಕೊಟ್ಟು ಹೋಗಿದ್ದ, ಒಂದೂ ಮಾತಾಡದೆ. ಅವನ ಪ್ರೌಢತೆ ನನ್ನ ಒಳಗನ್ನು ಅಲ್ಲಾಡಿಸಿಬಿಟ್ಟಿತ್ತು. ಅದು ಪಾಪ ಪ್ರಜ್ಞೆಯಾ? ಮೋಸ ಮಾಡಿದೆವಲ್ಲಾ ಎನ್ನುವ ಸಂಕಟವಾ? ಅಥವಾ ನಮ್ಮ ಗುಟ್ಟು ಇವರಿಗೆ ಗೊತ್ತಾಯಿತಲ್ಲ ಎನ್ನುವ ಆತಂಕವಾ? ಗೊತ್ತಿಲ್ಲದ ತಳಮಳದಲ್ಲಿ ಒದ್ದಾಡಿಹೋಗಿದ್ದೆ.

। ಇನ್ನು ಮುಂದಿನ ವಾರಕ್ಕೆ ।

‍ಲೇಖಕರು Admin

11 February, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading