ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪಿ ಚಂದ್ರಿಕಾ ಅಂಕಣ – ಫ್ರೀಡಾ ಆ್ಯಂಡೂ ಎನ್ನುವ ಆಮ್ರಪಾಲಿ…

‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ.

‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು ಕಥಾ ಸಂಕಲನ, ಕಾದಂಬರಿ ಚಂದ್ರಿಕಾ ಅವರ ಹಿರಿಮೆಯನ್ನು ಸಾರಿವೆ.

ಸದಾ ಚಟುವಟಿಕೆಯ ಚಂದ್ರಿಕಾಗೆ ಕೃಷಿಯಲ್ಲೂ ಆಸಕ್ತಿ. ಕನ್ನಡದ ಹೆಮ್ಮೆಯ ಪ್ರಕಟಣಾ ಸಂಸ್ಥೆ ‘ಅಭಿನವ’ದ ರೂವಾರಿಗಳಲ್ಲೊಬ್ಬರು.

ಇಂದಿನಿಂದ ಅವರ ಹೊಸ ರೀತಿಯ ಅಂಕಣ ಆರಂಭ. ಇದನ್ನು ಕಾದಂಬರಿ ಎಂದು ಕರೆಯಿರಿ, ಇಲ್ಲಾ ಅನುಭವ ಕಥನ ಎನ್ನಿ. ಚಂದ್ರಿಕಾ ನಡೆಸುವ ಪ್ರಯೋಗ ಮಾತ್ರ ಸದ್ದಿಲ್ಲದೇ ಹೊಸ ಅಲೆಯನ್ನು ಸೃಷ್ಟಿಸುತ್ತಲೇ ಇರುತ್ತದೆ.

30

ನದಿಯೇ ಹೀಗೆ, ತನಗೆ ಬೇಕಾದ ತಿರುವುಗಳನ್ನು ತಾನೇ ರೂಪಿಸಿಕೊಳ್ಳುತ್ತದೆ. ತನ್ನ ಹೆಜ್ಜೆ ಗುರುತುಗಳನ್ನು ತಾನೇ ನೋಡುತ್ತಾ ಗಾಂಭೀರ್ಯತೆಯಿಂದ ಸೊಕ್ಕಿ ಹರಿಯುತ್ತದೆ. ಶಾಂಭವೀ ನದಿಯ ಸೌಂದರ್ಯ ಕೂಡಾ ಇಂಥಾದ್ದೇ. ಅಗಾಧವಾದ ಹರಹು ವಿಪರೀತ ತಿರುವು, ಮುಂದೆ ಪ್ರಸನ್ನವಾಗಿ ಹರಿವು. ಒಟ್ಟಾರೆ ಆ ನದೀ ಪಾತ್ರದಲ್ಲಿ ಕೂತು ನೋಡುವುದೇ ಚೆನ್ನ.

ತೀರದಲ್ಲಿ ಸತ್ತವರ ಕ್ರಿಯಾ ಕರ್ಮಾದಿಗಳನ್ನು ಊರವರು ಮಾಡುವ ಗುರುತುಗಳಾದ ಮುಂಡನ ಮಾಡಿದ ಕೇಶರಾಶಿ, ಹಳೆಯ ಬಟ್ಟೆಗಳು, ಬಿಸುಟು ಹೋದ ಒಡೆದ ವಿಗ್ರಹಗಳು, ಹಳೆಯದಾದ ತಾಮ್ರಪಟಗಳು ಮತ್ತು ದಂಡೆಯ ಮೇಲೆ ಬಟ್ಟೆ ಬದಲಿಸಲಿಕ್ಕೆ ಸಣ್ಣ ಕೊಠಡಿಯೂ ಇತ್ತು. ಆದರೆ ಅಲ್ಲಿಯ ದುರ್ನಾತಕ್ಕೆ ಒಳಗೆ ಹೋಗುವುದು ಅಸಾಧ್ಯವೇ ಆಗಿತ್ತು. ಇವುಗಳ ಮಧ್ಯೆಯೂ ಶಾಂಭವಿ ನದಿ ಸುಂದರ ಎನ್ನಿಸುವುದು ತೀರಗಳಲ್ಲಿ ಹರಡಿ ನಿಂತಿರುವ ಹಸಿರು ವನರಾಶಿ, ನಡುವೆ ನದಿಯೇ ಮಾಡಿರುವ ನಡುಗಡ್ಡೆಗಳು, ಅಲ್ಲೇ ಒಂದು ತೋಟ, ಜನವಾಸ, ಓಡಾಡಲು ದೋಣಿಗಳನ್ನ ಬಿಟ್ಟರೆ ಬೇರೆ ಏನೂ ಇಲ್ಲ.

ನಾವು ಜಾಗವನ್ನು ನೋಡಲಿಕ್ಕೆ ಅಂತ ಹೋದಾಗ ಫ್ರಿಡಾ ಎನ್ನುವ ಹೆಣ್ಣುಮಗಳು ತಾನೇ ದೋಣಿಯನ್ನು ಹುಟ್ಟು ಹಾಕಿ ನಡೆಸುತ್ತಿದ್ದಳು. ನನಗೆ ಮೊದಲಿನಿಂದಲೂ ಹೀಗೇ ಹೆಣ್ಣುಮಕ್ಕಳು ಸೈಕಲ್, ಸ್ಕೂಟಿ, ಕಾರು ಏನನ್ನಾದರೂ ಸರಿಯೆ ನಡೆಸುತ್ತಿದ್ದರೆ ಕೌತುಕವೇ. ನಮ್ಮ ಮನೆಯಲ್ಲಿ ನನ್ನ ಬಗ್ಗೆ ಇರುವ ಅಸಮಾಧಾನ ಒಂದೇ. ಏನೇನಕ್ಕೋ ಧೈರ್ಯ ಮಾಡುತ್ತೀಯ. ಗಾಡಿ ಒಂದು ಓಡಿಸು’ ಎನ್ನುತ್ತಿರುತ್ತಾರೆ. ಗೊತ್ತಿಲ್ಲ ಮೊದಲಿನಿಂದಲೂ ನನಗೆ ಅದೊಂದೇ ಭಯ. ಸ್ಕೂಟಿ ಇರಲಿ ಸೈಕಲ್ ಕೂಡಾ ನನ್ನ ಕೈಲಾಗಲಿಲ್ಲ. ಎಲ್ಲವನ್ನೂ ಕಲಿತೆ ಆದರೆ ಕರಗತ ಮಾಡಿಕೊಳ್ಳಲಿಲ್ಲ. ಕಾರಣ ನನ್ನೊಳಗಿನ ಭಯ.

ನನ್ನ ಅಕ್ಕಪಕ್ಕ ಯಾವ ವೆಹಿಕಲ್ಲೂ ಇಲ್ಲ ಅಂದರೆ ನನ್ನ ಹಾಗೆ ಕಾರು ಓಡಿಸುವವರು ಯಾರೂ ಇಲ್ಲವೇನೋ! ಅದೇ ಒಂದು ಚಿಕ್ಕ ಗಾಡಿ ನನ್ನ ಪಕ್ಕ ಬಂದರೆ ಕೈ ಕಾಲುಗಳಲ್ಲಿ ನಡುಕ ಶುರುವಾಗಿಬಿಡುತ್ತೆ. ನನಗೇನೋ ಆಗುತ್ತೆ ಅನ್ನುವುದಕ್ಕಲ್ಲ: ಅವರಿಗೆ ನನ್ನಿಂದ ತೊಂದರೆಯಾಗಿ ಬಿಟ್ಟರೆ ಎನ್ನುವುದಕ್ಕೆ. ಫ್ರೀಡಾ ಮಧ್ಯದ ನಡುಗಡ್ಡೆಯಿಂದ ದೋಣಿ ನಡೆಸುತ್ತಾ ಬಂದಾಗ ಯಾವ ಲೋಕದಿಂದಲೋ ಬಂದವಳ ಹಾಗೆ ನೋಡಿದ್ದೆ. ದಿನಾ ನೀವೇ ಇದನ್ನ ನಡೆಸುವುದಾ? ಎಂದಾಗ ನನ್ನ ಮಾತಿನಲ್ಲಿನ ಅಚ್ಚರಿಯನ್ನು ಗಮನಿಸಿದ ಅವಳು ನಗುತ್ತಾ ನಡುಗಡ್ಡೆಯಲ್ಲಿರೋ ಎಲ್ಲಾ ಮನೆಯವರೂ ಇದನ್ನ ಕಲಿತೇ ಇರುತ್ತಾರೆ. ಇಲ್ಲಾಂದ್ರೆ ಹೊರಗಿನ ಸಂಪರ್ಕ ಎಷ್ಟು ಕಷ್ಟ ಅಲ್ಲವಾ?’ ಎಂದಿದ್ದಳು.

ದೋಣಿ ನಡೆಸುವುದು ಕಷ್ಟ ಅಲ್ಲವಾ ಎಂದ ನನ್ನ ಮಾತಿಗೆ, ಕಷ್ಟ ಎಂದುಕೊಂಡರೆ ಹೌದು ಇಲ್ಲದಿದ್ದರೆ ಇಲ್ಲ. ಪ್ರಕೃತಿಯ ಮಡಿಲಲ್ಲಿ ಇರುವವರಿಗೆ ಸುಲಭದ್ದು ಯಾವುದಿದೆ? ದುಡಿಯ ಬೇಕು, ತಿನ್ನಬೇಕು. ಕಷ್ಟ ಮಾತ್ರ ಈಗಲ್ಲ ಬಿಡಿ ಮಳೆಗಾಲಕ್ಕೆ ನೀವು ಇಲ್ಲಿ ಬರಬೇಕು. ಉಕ್ಕಿ ಹರಿಯುವ ನದಿ ನೋಡಿದರೆ ಭಯ ಹುಟ್ಟಿಸುತ್ತೆ. ಅಂಥಾದ್ದರಲ್ಲಿ ದಿನ ಶಾಲೆಗೆ ಆಚೆ ಬದಿಗೆ ಹೋಗಬೇಕಿತ್ತಲ್ಲ ಅದೂ ಮಕ್ಕಳನ್ನು ಕೂಡಿಸಿಕೊಂಡು…’ ಎಂದಿದ್ದಳು. ಅವಳ ಆಡದೆ ಉಳಿಸಿದ ಆ ಮಾತಿನ ಅರ್ಥ ಸಾವಿರ ಹೌದು. ಅದು ನಮಗೆ ಅರ್ಥವಾಗುತ್ತದೆ ಆದರೆ ಕಷ್ಟ ಅರಿವಾಗುವುದಿಲ್ಲ.

ಫ್ರಿಡಾ ಗಂಡ ಹಿಂದೆ ಮೀನು ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದವ, ಈಗ ಹೋಗುತ್ತಿಲ್ಲ. ಈಕೆ ತೋಟ ಮಾಡಿಕೊಂಡು ವ್ಯವಸಾಯ ಮಾಡುತ್ತಾಳೆ. ಮಕ್ಕಳನ್ನು ಓದಿಸಿ ಮಂಗಳೂರಿಗೆ ಮದುವೆ ಮಾಡಿಕೊಟ್ಟಿದ್ದಾಳೆ. ಈಗ ಗಂಡ ಹೆಂಡತಿ ಅಷ್ಟೇ ಇರುವುದು. ಗಂಡ ಹೊರಗೆ ಹೋದಾಗ ಇವಳೊಬ್ಬಳೇ. ಭಯ ಎನ್ನುವ ಪದಕ್ಕೆ ಅರ್ಥವೇ ಗೊತ್ತಿಲ್ಲವೇನೋ. ಅಂದು ಭಾನುವಾರವಾದ್ದರಿಂದ ಆಕೆ ಚರ್ಚ್ ಗೆ ಹೋಗುವ ಯೋಚನೆಯಲ್ಲಿದ್ದಳು. ನಮಗೆ ಜೀವನ ಕೊಟ್ಟ ದೇವರಿಗೆ ಒಂದು ದಿನವಾದರೂ ಕೃತಜ್ಞತೆ ಸಲ್ಲಿಸುವುದು ಬೇಡವೇ ಎಂದಿದ್ದಳು. ಹೋಗಿ ಬನ್ನಿ ಮತ್ತೊಮ್ಮೆ ನೀವು ದೋಣಿ ನಡೆಸುವುದನ್ನು ನೋಡಲಿಕ್ಕೆ ಇಲ್ಲೇ ಕಾಯುತ್ತೇವೆ’ ಎಂದಿದ್ದೆವು. ನಮಗೆ ಜಟ್ಟಿಯ ದೃಶ್ಯಗಳನ್ನು ಚಿತ್ರೀಕರಿಸಲಿಕ್ಕಿತ್ತು.

ಹಾಗೆ ಹೋದವಳು ವಾಪಾಸು ಬಂದಿದ್ದು ಒಂದು ಗಂಟೆಯ ನಂತರ. ಅಷ್ಟರಲ್ಲಿ ನಾವು ಅವಳು ದೋಣಿಯನ್ನು ನಡೆಸುವ ದೃಶ್ಯವನ್ನು ಚಿತ್ರೀಕರಿಸಿದರೆ ಹೇಗೆ ಎನ್ನುವ ಯೋಚನೆ ಮಾಡುತ್ತಿದ್ದೆವು. ಹಾಗೆ ಮಾಡಿದರೆ ನಮ್ಮ ಕಥೆಯ ನಾಯಕಿ ಮಾತ್ರವಲ್ಲದೆ ಎಲ್ಲಾ ಹೆಣ್ಣುಗಳ ಬಗ್ಗೆಯೂ ಒಂದು ಕಥೆಯನ್ನು ಸಮಾನಾಂತರವಾಗಿ ಹೇಳಿದಂತೆ ಆಗುತ್ತದೆ. ಇಂದು ಹೆಣ್ಣು ಎಲ್ಲಾ ಕೆಲಸವನ್ನೂ ಮಾಡಬಲ್ಲಳು. ನಡೆಸುವುದು ದೋಣಿಯಾದರೇನು? ವಿಮಾನವಾದರೇನು? ನಡೆಸುವ ಕ್ರಿಯೆಯಷ್ಟೇ ಇಲ್ಲಿ ಮುಖ್ಯ ಎನ್ನುವುದು ನಮ್ಮ ಯೋಚನೆಯಾಗಿತ್ತು.

ಆಕೆಗಾಗಿ ಕಾಯುತ್ತಾ ಕುಳಿತಿದ್ದೆವು. ವಾಪಾಸು ಬರುವಾಗ ನಮಗಾಗಿ ಕೇಕ್ ತಂದಿದ್ದಳು. ನಾನು ಹೀಗೆ ನೀವು ದೋಣಿಯನ್ನು ಹುಟ್ಟು ಹಾಕುತ್ತಾ ನಮ್ಮ ನಾಯಕಿಯನ್ನು ಆಚೆ ದಡಕ್ಕೆ ಬಿಡುವ ದೃಶ್ಯವನ್ನು ಚಿತ್ರೀಕರಿಸಿಕೊಳ್ಳಬೇಕು ಎಂದಿದ್ದೇವೆ ಎಂದೆ. ಅವಳಿಗೆ ಸಂತೋಷವಾಯಿತು. ಓಹೋ ಅದಕ್ಕೇನು ಆಗಲಿ’ ಎಂದಳು. ನನಗೆ ಆಕೆಯ ಜೊತೆ ಒಂದು ಸಣ್ಣ ಸುತ್ತು ಹೋಗಬೇಕು ಎನ್ನಿಸಿತು. ಆಕೆಯೊಂದಿಗೆ ಹೇಳಿದೆ, ಅದೂ ಬಿಡುವಾಗಿದ್ದರೆ ಮಾತ್ರ’ ಎನ್ನುವುದನ್ನೂ ಸೇರಿಸಿದೆ.

ಇಬ್ಬರೂ ನದಿಯ ದಡದಿಂದ ಸ್ವಲ್ಪ ದೂರ ಬಂದಿದ್ದೆವು. ಫ್ರೀಡಾ ಉದ್ದವಾದೊಂದು ಕೋಲಿನಿಂದ ನದಿಯ ಆಳದ ನೆಲವನ್ನು ಮೀಟಿ ದೋಣಿಯನ್ನು ಮುನ್ನಡೆಸುತ್ತಿದ್ದಳು. ಅಗಾಧವಾದ ಶಕ್ತಿ ಇತ್ತು ಎನ್ನುವುದನ್ನು ತೊಟ್ಟಿದ್ದ ಚೂಡಿದಾರ್‌ನ ಒಳಗೆ ಕಾಣುತ್ತಿದ್ದ ಹುರಿಗೊಂಡ ಅವಳ ತೋಳುಗಳು ಎತ್ತಿ ತೋರುತ್ತಿದ್ದವು. ನಾನು ಅವಳನ್ನೇ ಗಮನಿಸುತ್ತಿದ್ದೆ. ನನ್ನ ನೋಡಿ ನಕ್ಕ ಆಕೆ, ಯಾಕೆ ನಿಮ್ಮ ಕಡೆ ಹೆಣ್ಣು ಮಕ್ಕಳು ಕಷ್ಟದ ಕೆಲಸ ಮಾಡುವುದಿಲ್ಲವೋ?’ ಎಂದಳು. ಇಲ್ಲ ಮಾಡುತ್ತಾರೆ. ಆದರೆ ನೀವು ಮಾಡುತ್ತಿರುವ ಈ ಕೆಲಸ ನಾನು ನೋಡಿಲ್ಲ’ ಎಂದೆ.

ಕರಾವಳಿಯ ಹೆಣ್ಣು ಮಕ್ಕಳಿಗೆ ಶಕ್ತಿ ಜಾಸ್ತಿ ಉಂಟು. ನಮ್ಮನ್ನ ಯಾವತ್ತೂ ಹೆಣ್ಣುಮಕ್ಕಳು ಅಂತ ಅಲ್ಲ ಮಕ್ಕಳು ಅಂತಲೇ ಸಾಕುತ್ತಾರೆ. ತಂದೆ ತಾಯಿಯರಿಗೆ ಎಲ್ಲರೂ ಒಂದೇ’ ಎಂದಳು. ಅವಳ ಮಾತುಗಳಲ್ಲಿ ಸತ್ಯಾಂಶ ಇಲ್ಲವೆಂದಲ್ಲ. ಆದರೆ ಅದು ಪೂರ್ಣ ಸತ್ಯ ಅಲ್ಲ ಎನ್ನುವುದನ್ನು ಅನೇಕ ಸಂದರ್ಭಗಳಲ್ಲಿ ನೋಡಿದ್ದೇನೆ. ಫ್ರೀಡಾ ತನ್ನ ಬಗ್ಗೆ ಹೇಳುವ ಹುಕಿಯಲ್ಲಿದ್ದಳು, ಅಪ್ಪ ಅಮ್ಮ ಇಬ್ಬರೂ ಕೆಲಸಕ್ಕೆ ಅಂತ ಕೊಡಗಿನ ಕಡೆಗೆ ಹೋಗಿಬಿಡುತ್ತಿದ್ದರು.

ಕಾಫಿ ಕುಯ್ಲಿನ ಕಾಲಕ್ಕೆ ಇಲ್ಲಿಂದ ಸುಮಾರು ಜನ ಹೋಗುತ್ತಿದ್ದರು ಕೂಡಾ. ಹಾಗೆ ಹೋಗುವಾಗ ನನ್ನನ್ನು ನನ್ನ ತಂಗಿಯನ್ನೂ ಇಲ್ಲೇ ಬಿಟ್ಟು ಹೋಗುತ್ತಿದ್ದರು. ಹೀಗೇ ಬಿಟ್ಟು ಹೋದಾಗ ನನ್ನ ತಂಗಿಗೆ ಹುಷಾರಿಲ್ಲದ ಹಾಗಾಯ್ತು. ಹಣ ಖರ್ಚಾಗುತ್ತೆ ಇವರು ವಾಪಾಸು ಕೊಡ್ತಾರಾ ಇಲ್ಲಾವಾ? ಎಂದು ಯಾರೂ ನಮ್ಮ ಸಹಾಯಕ್ಕೆ ಬರಲೇ ಇಲ್ಲ. ಇದೇ ಹೊತ್ತಿನಲ್ಲಿ ನಮ್ಮ ಮನೆಯ ಪಕ್ಕದ ಮನೆಗೆ ಒಮ್ಮೆ ಆ್ಯಂಡೂ ಬಂದಿದ್ದು. ನಮ್ಮ ಪರಿಸ್ಥಿತಿ ನೋಡಿ ತಾನೇ ಮುಂದಾಗಿ ಸಹಾಯ ಮಾಡಿದ. ನನ್ನ ಪ್ರೀತಿಗೂ ಬಿದ್ದ. ನನಗೂ ಒಳಗೇ ಆಸೆ ಆದರೆ ಹೇಳಿಕೊಳ್ಳಲಾರೆ.

ಅಪ್ಪ ಅಮ್ಮ ಇಬ್ಬರೂ ಕೊಡಗಿಗೆ ಹೋಗಿದ್ದಾರೆ ಅವರು ಬರಬೇಕು. ಅವರದ್ದೇನೂ ತಕರಾರು ಇರುತ್ತಿರಲಿಲ್ಲ. ಮಗಳಿಗೆ ಹುಡುಕದೆಯೇ ಗಂಡು ಸಿಕ್ಕರೆ ಯಾಕೆ ಬೇಡ ಅನ್ನುವುದು. ಆದರೆ ಇದಕ್ಕೆಲ್ಲಾ ವಿರೋಧ ಇದ್ದದ್ದು ಅವರ ಕಡೆಯಲ್ಲೇ. ನಾವು ಬಡವರಲ್ಲವಾ? ಅವರ ಮನೆಯವರು ಒಪ್ಪಲಿಲ್ಲ. ಕನಿಷ್ಠ ಅಳಿಯ ಬಂದರೆ ಉಪಚಾರ ಮಾಡುವಷ್ಟಾದರೂ ಇರಬೇಕಲ್ಲವಾ? ಎಂದು. ಆ್ಯಂಡೂ ಮಾತ್ರ ನಾನೇ ಬೇಕು ಎಂದ. ಅವರು ಈ ಹುಡುಗಿಯನ್ನು ಮದುವೆಯಾದರೆ ನಿನಗೆ ನಮ್ಮ ಆಸ್ತಿ ಸಿಗಲಾರದು ಎಂದು ಹೇಳಿಬಿಟ್ಟರಂತೆ. ಎಲ್ಲಾ ಪ್ರೇಮ ಕಥೆಯಲ್ಲಿಯೂ ಹೀಗೇ ಒಂದು ಟ್ವಿಸ್ಟ್. ಮನೆಯವರನ್ನೆಲ್ಲಾ ಬಿಟ್ಟು ಬಂದ ಆ್ಯಂಡೂ ನನ್ನ ಜೊತೆಗೆ ಉಳಿದ. ಆಮೇಲಿನದ್ದಿದೆಯಲ್ಲಾ ಅದು ಊಹಿಸಿಕೊಳ್ಳಲಿಕ್ಕೂ ಆಗದ ನರಕ. ಸುಖವಾಗಿ ಬೆಳೆದ ಆ್ಯಂಡೂಗೆ ಯಾವ ಕೆಲಸವು ಗೊತ್ತಿಲ್ಲ.

ಒಂದು ಹೊತ್ತಿನ ಊಟಕ್ಕೂ ಇಲ್ಲ. ಮೇಲಾಗಿ ನಾನು ನನ್ನ ಮಗಳನ್ನು ಹೊಟ್ಟೆಯಲ್ಲಿ ಇಟ್ಟುಕೊಂಡಿದ್ದೆ. ಸಾಮಾನ್ಯ ಮೀನುಗಾರನಂತೆ ಸಮುದ್ರಕ್ಕೂ ಹೋಗಿ ಬಂದ. ಆದರೆ ಅವನ ಓದು ಅವನ ಕೈ ಬಿಡಲಿಲ್ಲ. ಓದಿರುವವ ಎಂದು ಮೀನು ಫ್ಯಾಕ್ಟರಿಯಲ್ಲಿ ಕೆಲಸ ಸಿಕ್ಕಿತು. ಈ ಜಾಗಕೊಂಡೆವು. ಮನುಷ್ಯನ ಹಟಮಾರಿತನದ ಬಗ್ಗೆ ಆಗಲೇ ನನಗೆ ಗೊತ್ತಾಗಿದ್ದು. ಬೆಟ್ಟ ಕಡಿದು ತೋಟ ಮಾಡುವಾಗ ಅವನ ಗುದ್ದಾಟ ಇದೆಯಲ್ಲಾ! ಅಬ್ಬಾ ಅನ್ನಿಸಿತು. ಆ್ಯಂಡೂಗೆ ಅಷ್ಟು ಹಟ ಎಲ್ಲಿಂದ ಬಂತು? ಒಂದೇ ಸಮನೆ ಕಲಸ ಮಾಡುವ ಶಕ್ತಿ ಅವನಲ್ಲಿ ಎಲ್ಲಿತ್ತು? ಫ್ಯಾಕ್ಟರಿಯಲ್ಲಿ ಕೆಲಸವನ್ನೂ ಮುಗಿಸಿ ಇಲ್ಲೂ ಕೆಲಸ ಮಾಡಿ ಕಾಡು ಕಡಿದು, ಗುಡ್ಡ ಮಣಿಸಿ ಅಂತೂ ತೋಟ ಮಾಡಿಯೇ ಬಿಟ್ಟ.

ನನ್ನ ಮಕ್ಕಳ ಜೊತೆ ತೋಟವೂ ಬೆಳೆೆಯಿತು. ಮಕ್ಕಳು ದೊಡ್ಡವರಾದ ಮೇಲೆ ನಾನು ಎಲ್ಲಾ ಜವಾಬ್ದಾರಿ ತೆಗೆದುಕೊಂಡೆ. ಈಗ ನೆಮ್ಮದಿಯಾಗಿದ್ದೇವೆ’. ಅವಳು ನನಗೆ ಆಮ್ರಪಾಲಿಯ ಹಾಗೆ ಕಂಡಳು. ಕೋಮಲವಾದ ದೇಹದಲ್ಲಿ ವಜ್ರದಷ್ಟು ಕಠಿಣವಾದ ಸಂಕಲ್ಪ. ಆದ್ದರಿಂದಲೇ ಬುದ್ಧ ಅವಳಿಗೆ ಯಾವ ಪ್ರಶ್ನೆಯನ್ನೂ ಕೇಳದೆ ದೀಕ್ಷೆ ಕೊಟ್ಟುಬಿಟ್ಟ. ಒಮ್ಮೆ ಫ್ರೀಡಾಳನ್ನು ಮುಟ್ಟಲೇ ಎಂದುಕೊಂಡೆ. ಅವಳನ್ನು ಮುಟ್ಟಿದರೆ ನನ್ನೊಳಗೂ ಒಂದು ಬದಾಲಾವಣೆಯಾಗಬಹುದು ಎಂದು.

ಫ್ರೀಡಾ ದೊಡ್ಡ ಸುತ್ತನ್ನು ಸುತ್ತಿಸಿ ಬಂದಳು. ಆಕೆ ನನಗೆ ತುಂಬಾ ಇಷ್ಟವಾಗಿಬಿಟ್ಟಿದ್ದಳು. ನನ್ನ ಕೈಲಿ ಸಿನಿಮಾ ಮಾಡುವ ಶಕ್ತಿ ಇದ್ದಿದ್ದರೆ ಇವಳೆ ನನ್ನ ನಾಯಕಿಯಾಗಿಬಿಡುತ್ತಿದ್ದಳು. ೫೫ರ ಹರೆಯದಲ್ಲೂ ಸುಸ್ತಿಲ್ಲ ಆಯಾಸವಿಲ್ಲ ದೇಹ ತೂಕವಿಲ್ಲ. ದಿನಾ ಮೀನು ತಿನ್ನುತ್ತಾ ಈಕೆ ಮತ್ಸ್ಯ ಕನ್ಯೆಯೇ ಆಗಿಬಿಟ್ಟಿರಬೇಕು. ದೋಣಿಯಲ್ಲಿ ತೇಲುತ್ತಿದ್ದಾಳೆ ಅಷ್ಟೇ ಅನ್ನಿಸಿತ್ತು.

ಇಷ್ಟು ಹೊತ್ತು ಹೋಗ್ತೀರ ಅಂದಿದ್ದರೆ ನಾವೂ ಬರ್ತಾ ಇದ್ವಲ್ಲಾ?’ ಎಂದಿದ್ದರು ಪಂಚಾಕ್ಷರಿ ಮತ್ತು ಚಂದ್ರಹಾಸ್. ಹೋಗಬೇಕು ಅಂತ ಹೋಗಿದ್ದಲ್ಲವಲ್ಲ. ಎಲ್ಲಾ ಅಚಾನಕ್ ಆಗಿ ಆಗಿದ್ದು. ಜೀವನವೇ ಇಷ್ಟಲ್ಲವೇ?’ ವೇದಾಂತ ಸುಮ್ಮನೆ ನಾಲಿಗೆಯ ಮೇಲೆ ಬಂತು.
ಡ್ರೋಣ್ ಕ್ಯಾಮೆರಾದಲ್ಲಿ ಜಟ್ಟಿ ಮತ್ತು ದೋಣಿಯ ಪಾಸಿಂಗ್ ದೃಶ್ಯ ಚಿತ್ರೀಕರಿಸುವ ದಿನ ನಾನು ಮೀನುಗಾರನೊಬ್ಬನಿಗೆ ನೂರು ರೂ ಮಾತಾಡಿಕೊಂಡು ಫ್ರೀಡಾಳನ್ನು ಹುಡುಕಿ ಅವಳ ದ್ವೀಪರಾಜ್ಯಕ್ಕೆ ಹೋದೆ. ಅವನು ನಮ್ಮನ್ನು ಬಿಟ್ಟೂ ಹೊರಟು ಬಿಟ್ಟ ಫ್ರೀಡಾ ತೋಟದಿಂದ ಬಂದಿದ್ದು ಸ್ವಲ್ಪ ತಡ ಆಯ್ತು. ಆಕೆಯ ಗಂಡ, ನಾನೇ ಬರಲೇ?’ ಎಂದಿದ್ದ. ಇಲ್ಲ ನಮಗೆ ಫ್ರೀಡಾ ಅವರೇ ಬೇಕಿತ್ತು’ ಎಂದಿದ್ದೆ. ಗವ್ವೆನ್ನುವ ನಿಶ್ಯಬ್ದ ಸೂರ್ಯ ನೆತ್ತಿಗೆ ಬಂದಿದ್ದರಿಂದ ಯಾವ ಪಕ್ಷಿಯೂ ದನಿ ಎತ್ತಿ ಕೂಗುತ್ತಿರಲಿಲ್ಲ.

ಫ್ರೀಡಾ ಮನೆಯ ನಾಯಿ ಎರಡು ಸಲ ಬೊಗಳಿ ಸುಮ್ಮನಾಗಿಬಿಟ್ಟಿತ್ತು. ಆಕೆಯ ಗಂಡ ಆ್ಯಂಡೂ ಅಂಥಾ ಮಾತುಗಾರನಲ್ಲ. ಆದರೆ ಅತ್ಯಂತ ಸುಂದರ ಅರವತ್ತರ ಪ್ರಾಯದಲ್ಲೂ ಕೆಂಪಗೆ ಮಿಂಚುತ್ತಿದ್ದ. ಆಹಾ ವಯಸ್ಸಿದ್ದಾಗ ಹೇಗಿದ್ದಿರಬಹುದು? ಫ್ರೀಡಾಳಂಥಾ ಹೆಣ್ಣು ಇಂಥವಿಗೆ ಒಲಿದಿದ್ದು ಸಾಧಾರಣವಾದ ಮಾತೇ. ಆದರೆ ಈತನ ಬದುಕಿನ ಬದ್ಧತೆ ಮಾತ್ರ ಅಪೂರ್ವ ಅನ್ನಿಸಿತ್ತು. ಈಗ ಸ್ವಲ್ಪ ಕಾಲು ನೋವು ಜಾಸ್ತಿ ಓಡಾಡಲ್ಲ. ಅದಕ್ಕೆ ಫ್ರೀಡಾನೇ ಎಲ್ಲಾ ನೋಡಿಕೊಳ್ಳುತ್ತಾಳೆ’ ಎಂದ. ಆತನ ಮುಖದಲ್ಲಿ ಮಗುವಿನ ಮುಗ್ಧತೆ ಇತ್ತು. ಫ್ರೀಡಾ ತೋಟದಿಂದ ಬರುತ್ತಲೇ. ನೆನ್ನೆಯೇ ಫೋನ್ ಮಾಡಿದ್ದರೆ ನಾನೇ ಅಲ್ಲಿಗೆ ಬಂದುಬಿಡುತ್ತಿದ್ದೆ’ ಎಂದಿದ್ದಳು. ಆದರೆ ಅಷ್ಟರಲ್ಲಿ ತಡವಾಯಿತು ಎಂದು ಅಲ್ಲೇ ಇದ್ದ ಯಾರೋ ದೋಣಿಯವನಜೊತೆ ಮಾತಾಡಿಕೊಂಡು ಚಿತ್ರೀಕರಣ ಮುಗಿಸಿಬಿಟ್ಟಿದ್ದರು. ಫ್ರೀಡಾ ಮಾತ್ರ ಬೇಸರಿಸಿಕೊಳ್ಳದೆ, `ಹೋಗಲಿ ಬಿಡಿ. ಈ ನೆಪದಲ್ಲಿ ನಾವಿಬ್ಬರೂ ಮಾತಾಡಲಿಕ್ಕಾಯಿತು’ ಎಂದು ನಮ್ಮನ್ನು ಆ ಕಡೆಯ ದಡಕ್ಕೆ ತಲುಪಿಸಿದ್ದಳು.

ಫ್ರೀಡಾ ಈ ಸಿನಿಮಾದಲ್ಲಿ ಕಂಡಿದ್ದಿದ್ದರೆ ನೆನಪಾದಾಗೆಲ್ಲಾ ನೋಡಬಹುದಿತ್ತು. ಸಿನೆಮಾ ಒಂಥರಾ ಆಲ್ಬಂ ಇದ್ದ ಹಾಗೆ. ವಯಸ್ಸಾದವರು ಇದ್ದರೆ- ಅವರೀಗ ಇದ್ದಾರೋ ಇಲ್ಲವೋ, ಸಣ್ಣ ವಯಸ್ಸಿನ ಮಗುವಿದ್ದರೆ- ಈಗ ಇದು ಎಷ್ಟು ದೊಡ್ಡದಾಗಿರಬಹುದು, ಕನ್ಯೆಯಿದ್ದರೆ- ಇಂಥಾ ಚಂದದ ಹುಡುಗಿ ಮುದುಕಿಯಾಗಿಬಿಟ್ಟಳೆ? ಹೀಗೆ ಏನೇನೆಲ್ಲಾ ಅನ್ನಿಸುತ್ತೆ. ಅಂತೂ ಫ್ರೀಡಾಳ ಜೊತೆಗಿನ ಈ ಪಯಣ ಮಾತ್ರ ನಿರುದಿಷ್ಯವಾಗಿ ಉಳಿದುಬಿಟ್ಟಿತ್ತು.

। ಇನ್ನು ಮುಂದಿನ ವಾರಕ್ಕೆ ।

‍ಲೇಖಕರು Admin

28 January, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading