
‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ.
‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು ಕಥಾ ಸಂಕಲನ , ಕಾದಂಬರಿ ಚಂದ್ರಿಕಾ ಅವರ ಹಿರಿಮೆಯನ್ನು ಸಾರಿವೆ.
ಸದಾ ಚಟುವಟಿಕೆಯ ಚಂದ್ರಿಕಾಗೆ ಕೃಷಿಯಲ್ಲೂ ಆಸಕ್ತಿ. ಕನ್ನಡದ ಹೆಮ್ಮೆಯ ಪ್ರಕಟಣಾ ಸಂಸ್ಥೆ ‘ಅಭಿನವ’ದ ರೂವಾರಿಗಳಲ್ಲೊಬ್ಬರು.
ಇಂದಿನಿಂದ ಅವರ ಹೊಸ ರೀತಿಯ ಅಂಕಣ ಆರಂಭ. ಇದನ್ನು ಕಾದಂಬರಿ ಎಂದು ಕರೆಯಿರಿ, ಇಲ್ಲಾ ಅನುಭವ ಕಥನ ಎನ್ನಿ. ಚಂದ್ರಿಕಾ ನಡೆಸುವ ಪ್ರಯೋಗ ಮಾತ್ರ ಸದ್ದಿಲ್ಲದೇ ಹೊಸ ಅಲೆಯನ್ನು ಸೃಷ್ಟಿಸುತ್ತಲೇ ಇರುತ್ತದೆ.
4
ಕಾಶಿಯಿಂದ ತಂದಿದ್ದ ಆ ಗೋಡೆಯ ತುಂಡನ್ನು ತನ್ನಲ್ಲಿ ಇಟ್ಟುಕೊಳ್ಳಲಾಗದೆ ಸಮುದ್ರಕ್ಕೆ ಎಸೆದು ನಿರಾಳವಾಗುತ್ತಾನೆ. ಹಣವನ್ನು ವಾಪಾಸು ತೆಗೆದುಕೊಳ್ಳಲು ಬಂದ ಪಾತುಮ್ಮ ಶ್ರೀನಿವಾಸಾಚಾರಿಯ ಬಳಿ ಆ ಗೋಡೆಯ ಒಂದು ಸಣ್ಣ ಚೂರನ್ನಾದರೂ ಸೇರಿಸಿ ಮನೆ ಕಟ್ಟಿಸುವ ಆಸೆಯನ್ನು ವ್ಯಕ್ತಪಡಿಸಿ, ಚಂದ್ರಣ್ಣನ ಬಳಿ ಇರುವ ಆ ಗೋಡೆಯ ಚೂರನ್ನು ಕೊಡಿಸುವಂತೆಯೂ, ಅದರ ಜೊತೆಯಲ್ಲೇ ಹಣವನ್ನು ಕೊಂಡೊಯ್ಯುತ್ತೇನೆ ಎಂತಲೂ ಕೇಳಿಕೊಳ್ಳುತ್ತಾಳೆ.
ಅಹಮದ್ ಭಾವ ಅಂಗಡಿಗೆ ಬಾರದೇ ಇರುವುದಕ್ಕೆ ಕಾರಣವಾದ ಅವನ ತಂಗಿಗೆ ಹೆರಿಗೆಯಲ್ಲಿ ಮಗು ತೀರಿ ಹೋಗಿದ್ದನ್ನು ವಿವರಿಸುವ ಕೇಶವನ ಮಾತಿಗೆ ಚಂದ್ರಣ್ಣ ತಾನು ತಪ್ಪು ತಿಳಿದೆನಲ್ಲಾ ಎಂದು ಪಶ್ಚಾತ್ತಾಪದಿಂದ ಕೊರಗುತ್ತಾನೆ. ಮತ್ತೆ ಕೇಶವ ಮಾತು ಮುಂದುವರೆಸಿ ಪಾತುಮ್ಮಳಿಗೆ ಚಂದ್ರಣ್ಣನ ಬಳಿಯಿರುವ ಆ ಗೋಡೆಯ ತುಂಡನ್ನು ಸೇರಿಸಿ ತನ್ನ ಮನೆಯನ್ನು ಕಟ್ಟುವ ಇಚ್ಛೆ ವ್ಯಕ್ತಪಡಿಸಿದ್ದನ್ನು ಹೇಳುತ್ತಾನೆ. ಅನಿರೀಕ್ಷಿತವಾದ ಪಾತುಮ್ಮಾಳ ಈ ಕೋರಿಕೆಯಿಂದ ಚಂದ್ರಣ್ಣ ಮೌನಕ್ಕೆ ಶರಣಾಗುತ್ತಾನೆ.
ರಾತ್ರಿ ಜೋರು ಮಳೆ, ಗಾಳಿಗೆ ಕಡಲು ಉಕ್ಕಿ ಪಾತುಮ್ಮನ ಗುಡಿಸಲು ಬಿದ್ದು ಹೋಗುತ್ತದೆ. ಈ ವಿಷಯ ತಿಳಿದು ಅಲ್ಲಿಗೆ ಬರುವ ಶ್ರೀನಿವಾಸಾಚಾರಿ ‘ನಿನ್ನ ಶ್ರಮದ ಈ ಹಣದಲ್ಲೇ ಮನೆ ಕಟ್ಟಿಸು ಇದರಲ್ಲೇ ರಾಮನೂ ಇದ್ದಾನೆ, ಅಲ್ಲಹುನೂ ಇದ್ದಾನೆ’ ಎಂದು ಪಾತುಮ್ಮನಿಗೆ ಅವಳು ಕೂಡಿಟ್ಟ ಹಣವನ್ನು ವಾಪಾಸು ನೀಡುತ್ತಾನೆ. ಮತ್ತು ಗುಡಿಸಲು ಬಿದ್ದ ಸಂದರ್ಭದಲ್ಲಿ ಪಾತುಮ್ಮಳಿಗೆ ಆದ ಗಾಯಕ್ಕೆ ಔಷಧಿ ಹಾಕಿಸಲು ಕರೆಯುತ್ತಾನೆ. ಈ ಮೂಲಕ ಸಮಾಕಾಲೀನ ಸಮಾಜದ ಜ್ವಲಂತ ಸಮಸ್ಯೆಗಳನ್ನು ಒರೆಗೆ ಹಚ್ಚುವ ಪ್ರಯತ್ನಿಸಲಾಗುತ್ತದೆ.
ತ್ರಿತಲ್ಲಾಖ್‌ನ ಧಾರ್ಮಿಕ ಸಮಸ್ಯೆಯನ್ನು ಬಿಡಿಸಿಕೊಳ್ಳುವ ಸಾಧ್ಯತೆನ್ನು ತೋರಿಸುತ್ತದೆ. ಕಡಲ ಕೊರೆತದ ಸಮಸ್ಯೆಯಿಂದ ತಮ್ಮ ಮನೆ ಕಳೆದುಕೊಳ್ಳುತ್ತಿರುವ ಜನರ ಬಗ್ಗೆ ಚಿಂತನೆಗೆ ಹಚ್ಚುತ್ತದೆ. ಹಾಗೂ ಬಾಬರಿ ಮಸೀದಿಯ ವಿವಾದಾತ್ಮಕ ಘಟನೆಯಿಂದ ದೇಶದಲ್ಲಿ ಏನೆಲ್ಲಾ ನಡೆದರೂ ಜನ ಸಾಮಾನ್ಯ ಹಿಂದೂ-ಮುಸಲ್ಮಾನರ ನಡುವೆ ಉಳಿದು ಬಂದಿರುವ ಮಾನವೀಯ ಸಂಬಂಧಗಳ ಹಾಗೂ ಮೌಲ್ಯಗಳ ಬಗ್ಗೆ ಹೇಳುತ್ತ ಭಾವೈಕ್ಯತೆಯನ್ನು ಎತ್ತಿಹಿಡಿಯುತ್ತದೆ.

ಇದನ್ನು ಬೋಳುವಾರರ ಜೊತೆ ಚರ್ಚಿಸಿ ಕಡೆಗೆ ಫೈನಲ್ ಮಾಡಿಕೊಂಡೆವು. ಮೊದ ಮೊದಲು ಬೋಳುವಾರರಿಗೆ ನಾವು ತ್ರಿವಳಿ ತಲ್ಲಾಖಿನ ವಿಷಯವನ್ನು ಸೇರಿಸಿದ್ದು ಇಷ್ಟವಾಗಿರಲಿಲ್ಲ. ‘ಇದನ್ನು ಮಧ್ಯ ಯಾಕೆ ಸೇರಿಸಿದ್ದು?’ ಎಂದರು. ತಮ್ಮ ಕಥೆಯೊಂದು ಹೀಗೆ ರೂಪಾಂತರಗೊಳ್ಳುವುದು ಎಲ್ಲ ಲೇಖಕರಿಗೂ ಇಷ್ಟವಾಗಬೇಕು ಅಂತೇನೂ ಇಲ್ಲ. ‘ಇದ್ದ ಹಾಗೆ ಮಾಡಿದರೆ ಏನಾಗುತ್ತೆ?’ ಎನ್ನುವುದು ಅವರ ನಿಲುವಾಗಿತ್ತು. ಸ್ವಲ್ಪ ಆ ವಿಷಯಕ್ಕೆ ಹಠ ಹಿಡಿದರು ಕೂಡಾ.
ನಂತರ ಈ ಕಾರಣಕ್ಕೆ ನಾವು ವಿವರಿಸಿದ ಮೇಲೆ ಒಪ್ಪಿಕೊಂಡರು. ಆದರೆ ಅವರು ಅದನ್ನು ಪೂರ್ತಿ ಒಪ್ಪಿದರು ಎಂದು ನಾನು ತಿಳಿಯುವುವುದಿಲ್ಲ. ಆದರೆ ಹೆಚ್ಚು ತಲೆ ಹಾಕಬಾರದು ಎನ್ನುವ ಕಾರಣಕ್ಕೆ ಸುಮ್ಮನಾಗಿರಬೇಕು. ಧರ್ಮಕ್ಕೆ ಸಂಬಂಧಪಟ್ಟ ಕೆಲ ವಿವರಗಳನ್ನು ಬೋಳುವಾವರೇ ನೀಡಿದರು. ಅದು ನಮಗೆ ಕಥೆಯನ್ನು ಕಟ್ಟುವಲ್ಲಿ ಸಹಾಯಕವೂ ಆಯಿತು. ಈ ಕಥೆಯ ಸಲುವಾಗೇ ನಾವು ಈ ಮನೆಯನ್ನು ಹುಡುಕುತ್ತಾ ಬೆಂಗಳೂರಿಂದ ಮಂಗಳೂರಿಗೆ ಬಂದದ್ದು.
೧೯೯೨ರ ಆ ಕಾಲಘಟ್ಟವನ್ನು ಎಸ್ಟಾಬ್ಲಿಷ್ ಮಾಡಲಿಕ್ಕೆ ನಮಗಿದ್ದ ಸವಾಲನ್ನು ಸಹಜವಾಗೇ ಆ ಜಾಗ ಅನುಕೂಲಕರವಾಗಿಸಿತ್ತು. ಇದ್ದ ಕೆಲ ಟಿವಿ ಫೂಟೇಜ್‌ಗಳು ನ್ಯೂಸ್ ಪೇಪರ್‌ನಲ್ಲಿನ ಸ್ಟೋರಿಗಳು ನಮಗೆ ಸಿಕ್ಕರೂ, ಟಿವಿಯಲ್ಲಿ ಇದನ್ನು ಸುದ್ದಿಯಾದ ಫೂಟೇಜ್‌ಗಳು ಸಿಗದ ಕಾರಣ ಮಸೀದಿ ಬಿದ್ದ ಕ್ಷಣವನ್ನು ಇಟ್ಟುಕೊಂಡು ನಾವೇ ನ್ಯೂಸ್ ಸಿದ್ಧ ಮಾಡಿಕೊಂಡೆವು. ಹೀಗೆ ಒಂದೊಂದೇ ಸಂಗತಿಗಳು ಸೇರುತ್ತಾ ಹೋದಂತೆ ಪ್ರಸ್ತುತ ಕಾಲಮಾನವನ್ನು ಅವತ್ತಿಗೆ ತೆಗೆದುಕೊಂಡು ಹೋಗಲು ಸಹಾಯಕವಾಯಿತು.
ಬೀಡಿ ಕಟ್ಟುತ್ತಾ ಗುಂಪಾಗಿ ತಮ್ಮ ತಮ್ಮ ಸುಖ-ದುಃಖ ಹೇಳುತ್ತಾ ಕುಳಿತಿದ್ದ ಹೆಂಗಸರ ಮನೆಗೂ ಎದುರು ಮನೆಗೂ ನಡುವೆ ಸಣ್ಣದೊಂದು ಓಣಿ. ಅದನ್ನು ದಾಟಿದರೆ ಇದ್ದಕ್ಕಿದ್ದಂತೆ ಬಯಲಾದ ಹಾಗೆ ವಿಶಾಲವಾದ ಜಾಗ. ಮಧ್ಯದಲ್ಲಿ ಬಾವಿ. ಬಾವಿಯೇ ಆ ಕೇರಿಗೆಲ್ಲ ಕುಡಿಯುವ ನೀರಿನ ಆಸರೆ. ಬಿಸಿಲು ನೆತ್ತಿಯ ಕಡೆಗೆ ವಾಲುವ ಮೊದಲು ಆ ಬಾವಿಯ ಸುತ್ತಾ ಜೀವ ಸಂಚಾರ.

ಸೂರ್ಯ ನೆತ್ತಿಗೆ ಬಂದನೆಂದರೆ ಸುತ್ತಾ ಮುತ್ತ ಜನರೇ ಇರುವುದಿಲ್ಲ, ಆದರೆ ಒಣಗಿಹಾಕಿದ್ದ ಬಟ್ಟೆಗಳು ಆ ಮನೆಯಲ್ಲಿ ಇಷ್ಟು ಜನ, ಯಾವ ಯಾವ ವಯೋಮಾನದವರು, ಹೆಣ್ಣು ಗಂಡುಗಳ ನಿಖರವಾದ ಲೆಕ್ಕವನ್ನು ಕೊಡುತ್ತಾ ತೂಗುತ್ತಿದ್ದವು. ಹಳತಾದ ಬಾವಿಯ ಕಟ್ಟೆ, ಸವೆದುಹೋದ ಮರದ ರಾಟೆ, ಹಗ್ಗ… ಎಲ್ಲವೂ ಅದರ ಬಳಕೆಯ ಧಾರಾಳತೆಯನ್ನು ಸಾರುತ್ತಿದ್ದವು. ಬಗ್ಗಿ ನೋಡಿದರೆ ನೀರು ಸ್ವಲ್ಪವೇ ಮೇಲೆ. ಬಾವಿಯ ಸುತ್ತಾ ಮರಳು. ಮಧ್ಯಾಹ್ನ ದಾಟಿದರೂ ಸೂರ್ಯನ ಶಾಖವನ್ನು ಹೀರಿಕೊಂಡು ಮಗುಮ್ಮಾಗಿತ್ತು. ಅದರ ಪಕ್ಕದಲ್ಲಿ ತಡೆಗೋಡೆಯನ್ನು ದಾಟಿ ಸಮುದ್ರ ಸೆಳವಿಗೆ ಯಾವಾಗ ಬೇಕಾದರೂ ಬಲಿಯಾಗಬಹುದಾದ ತೆಂಗಿನ ಮರ. ಹಿಂಬದಿಗೆ ಜನವಾಸವಿಲ್ಲದ ಮನೆ. ಅದರ ಬಾಗಿಲು ಮಾತ್ರ ಆ ಕಡೆಗಿತ್ತು. ಮತ್ತದರ ಎದುರೇ ನಮ್ಮ ಅಚ್ಚರಿಗೆ ಕಾರಣವಾಗಿ ನಿಂತಿದ್ದ ಮನೆ.
ಆ ಮನೆಯ ಬಾಗಿಲ ಬಳಿ ಕಾಲು ಭಾಗಕ್ಕೆ ಮರಳು ತುಂಬಿದ್ದರೆ ಹಿಂಭಾಗಕ್ಕೆ ತುಸು ಹೆಚ್ಚೇ ಅಂದರೆ ಸಾಧಾರಣ ನಿಲುವಿನ ಮನುಷ್ಯನೊಬ್ಬ ನಿಂತರೆ ಅವನ ತಲೆ ಮಾಡಿಗೆ ಬಡಿಯುವಂತಿತ್ತು. ಅಷ್ಟು ಮರಳು ತುಂಬಿಬಿಟ್ಟಿತ್ತು. ಭದ್ರಪಡಿಸಿದ್ದ ಬಾಗಿಲು ಆ ಮರಳನ್ನು ಒಳಗೆ ಹೋಗದ ಹಾಗೆ ತಡೆದಿತ್ತು. ಮರದ ಬಾಗಿಲು ಅಲ್ಲಲ್ಲಿ ಬಿರುಕು ಬಿಟ್ಟು ಒದ್ದರೆ ಬಿದ್ದು ಹೋಗುವಹಾಗಿತ್ತು.
‘ಅರೆ ಇದ್ಯಾಕೆ ಹೀಗೆ ನಿಂತಿರಿ?’ ವರ್ಷದ ಮಗುವನ್ನೆತ್ತಿಕೊಂಡಿದ್ದ ಗುಂಡಗುಂಡಗೆ ಆದರೆ ಮುದ್ದಾಗಿದ್ದ ೨೩-೨೪ರ ಹುಡುಗಿ ಕೇಳಿದಾಗಲೇ ನಾವು ಇಹಕ್ಕೆ ಮರಳಿದ್ದು. ನಿರ್ದೇಶಕರಾದ ಪಂಚಾಕ್ಷರಿ ‘ನೀವೇ ಮಾತಾಡಿ. ಮುಸ್ಲೀಂ ಹೆಣ್ಣುಮಕ್ಕಳ ಜೊತೆ ನಾವು ಮಾತಾಡಿದರೆ ತೊಂದರೆಯಾದೀತು’ ಎಂದು ನನಗೂ ಚಂಚಲಾಗೂ ಸೂಚಿಸಿದರು. ‘ಈ ಮನೆ ಯಾರದ್ದು?’ ಕೇಳಿದೆ. ‘ಓ ಇದಾ… ಇದು ನಮ್ಮ ಜಕ್ಕು ಕಾಕಾದು’ ಎಂದಳು. ‘ನಿಮ್ಮ ಜಕ್ಕು ಕಾಕಾ ಸರಿ, ಅವರ ಹೆಸರೇನು?’ ಎಂದು ಕೇಳಿದರು ಚಂದ್ರಹಾಸ್. ಜಕ್ಕು ಹೆಸರಲ್ಲವಾ? ಎಂದುಕೊಂಡೆ. ‘ಹಾಂ ಹೌದು ಅವರ ಹೆಸರು ಮಹಮದ್. ಮೀನು ಮಾರುತ್ತಾರೆ. ಅವರೆಂತಕ್ಕೆ ಬೇಕು? ಸಾಲ ಮಾಡಿದ್ದಾರಾ? ನೀವು ಬ್ಯಾಂಕಿನವರಾ?’ ಎಂದಳು ಮುಗ್ಧವಾಗಿ.
ನಾವು ಒಂದು ಸಿನಿಮಾ ತೆಗೆಯುತ್ತಿದ್ದೇವೆ. ಅದಕ್ಕೆ ಅವರನ್ನು ಮಾತಾಡಬೇಕಿತ್ತು ಎಂದಾಗಲೇ ಹಸೀನಮ್ಮನ ಮುಖದಲ್ಲಿ ದೊಡ್ಡ ನಗು.. ‘ಇನ್ಯಾರು ಸಿಗಲಿಲ್ಲವೋ ಹೀರೋ ನಿಮಗೆ, ನಮ್ಮ ಜಕ್ಕು ಕಾಕಾನೇ ಬೇಕಾ?’ ಎಂದು ನಗಾಡತೊಡಗಿದಳು. ಅವಳ ನಗುವಿನ ಜೊತೆ ನಾವೂ ನಗುವನ್ನು ಸೇರಿಸುತ್ತಾ ‘ನಮಗೆ ಬೇಕಿರುವುದು ನಿಮ್ಮ ಹೀರೋ ಜಕ್ಕು ಕಾಕ ಅಲ್ಲ; ಅವರ ಈ ಮನೆ’ ಎಂದೆ. ‘ಇಲ್ಲಿ ನೀವು ಶೂಟಿಂಗ್ ಮಾಡುವುದಾ? ಬೇರೆ ಯಾವ ಮನೆಯೂ ಸಿಗಲಿಲ್ಲವಾ? ಹೇಳಿ, ನಮ್ಮವರದ್ದೇ ಮನೆಯಿದೆ, ದೊಡ್ಡದು.

ಶೂಟಿಂಗ್ ಮಾಡಲಿಕ್ಕೆ ಚಂದ ಉಂಟು’ ಎಂದಳು. ‘ಇಲ್ಲ ನಾವು ತೆಗೆಯುತ್ತಿರುವುದು ಸಮುದ್ರ ನುಂಗಿ ಹಾಕಿದ ಮನೆಯ ಕಥೆಯನ್ನು, ಅದಕ್ಕೆ ಈ ಮನೆ ಸೂಕ್ತವಾಗಿದೆ’ ಎಂದು ಹೇಳಿದ ಮೇಲೆ ಉದ್ಗಾರ ತೆಗೆಯುತ್ತಾ ಜಕ್ಕು ಮಹಮದ್‌ನ ಬಗ್ಗೆ ವಿವರಗಳನ್ನು ಕೊಟ್ಟಳು. ‘ಇದು ಅವರಪ್ಪ ಕಟ್ಟಿಸಿದ ಮನೆ, ಇದರ ಮೇಲೆ ಅವರಿಗೆ ಅಭಿಮಾನ ಜಾಸ್ತಿ. ಜಕ್ಕು ಕಾಕನ ಹೆಂಡತಿ ಸತ್ತಮೇಲೆ ಈಗಲೋ ಆಗಲೋ ಬೀಳುವ ಈ ಮನೆಯಲ್ಲಿ ಮಕ್ಕಳನ್ನು ಬಿಟ್ಟು ಕೆಲಸಕ್ಕೆ ಹೋಗುವುದು ಹೇಗೆಂದು ಈಗ ಮುಖಚ್ಚೇರಿಯಲ್ಲಿ ಮನೆ ಮಾಡಿದ್ದಾರೆ’. ಆ ಹುಡುಗಿಯ ಸಾದ ಕಪ್ಪು ದುಂಡು ಮುಖದಲ್ಲಿ ಎಂಥದ್ದೊ ಆಕರ್ಷಣೆ, ತಿದ್ದಿ ತೀಡಿದ ಹಾಗೆ ಮುಖ ಚಹರೆ. ಹೆಸರು ಹಸೀನಾ ಆದರೂ ಮದುವೆಯಾದ ಹೆಂಗಸಿನ ಪಕ್ಕದಲ್ಲಿ ಅಮ್ಮ ಸೇರಿಸುವುದು ಅಲ್ಲಿ ಸಾಮಾನ್ಯವಾದ್ದರಿಂದ ಅವಳನ್ನು ಎಲ್ಲರೂ ಹಸೀನಮ್ಮ ಎಂದು ಕರೆಯುತ್ತಿದ್ದರು.
ವಯಸ್ಸಾದ ಕೆಲ ಹೆಂಗಸರು ಮಾತ್ರ ಅವಳನ್ನು ‘ಹಸೀನಾ’ ಎಂದು ಕರೆಯುತ್ತಿದ್ದರು. ಗಂಡನದು ಮೀನು ಫ್ಯಾಕ್ಟರಿಯಲ್ಲಿ ಕೆಲಸ. ಸಮುದ್ರದ ಮೀನನ್ನು ಫ್ಯಾಕ್ಟರಿಗೆ ಸಾಗಿಸಿ ಅಲ್ಲಿಂದ ಅದನ್ನು ಐಸಿನಲ್ಲಿ ಮುಚ್ಚಿ ಕಳಿಸಬೇಕಾದ ಕಡೆಗೆ ಕಳಿಸುವ ಕಡೆಯಲ್ಲಿ ಮ್ಯಾನೇಜರ್ ಹುದ್ದೆ. ದಿನಾ ಅವರ ಮನೆಯಲ್ಲಿ ಮಾತ್ರ ಒಳ್ಳೊಳ್ಳೆಯ ತಾಜಾ ಮೀನುಗಳ ಪದಾರ್ಥ ಸಿದ್ಧವಾಗುತ್ತಿತ್ತು. ಅವಳ ಅತ್ತೆ ಬರೀ ಉಪ್ಪು ಹುಳಿ ಖಾರ ಹಾಕಿ ಬೇಯಿಸುತ್ತಿದ್ದ ಮೀನುಗೆ ಹೇಗೋ ವಿಶಿಷ್ಟವಾದ ಪರಿಮಳ ಮತ್ತು ರುಚಿ ಸಿಕ್ಕುತ್ತಿತ್ತು.
। ಇನ್ನು ಮುಂದಿನ ವಾರಕ್ಕೆ ।






0 Comments