ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪಿ ಚಂದ್ರಿಕಾ ಅಂಕಣ- ಅವನ ಕೈಗಳ ಕೆಲಸಕ್ಕೆ ನಮ್ಮ ಕಣ್ಣುಗಳು ಸೋಲುತ್ತಿದ್ದವು…

‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ.

‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು ಕಥಾ ಸಂಕಲನ, ಕಾದಂಬರಿ ಚಂದ್ರಿಕಾ ಅವರ ಹಿರಿಮೆಯನ್ನು ಸಾರಿವೆ.

ಸದಾ ಚಟುವಟಿಕೆಯ ಚಂದ್ರಿಕಾಗೆ ಕೃಷಿಯಲ್ಲೂ ಆಸಕ್ತಿ. ಕನ್ನಡದ ಹೆಮ್ಮೆಯ ಪ್ರಕಟಣಾ ಸಂಸ್ಥೆ ‘ಅಭಿನವ’ದ ರೂವಾರಿಗಳಲ್ಲೊಬ್ಬರು.

ಇಂದಿನಿಂದ ಅವರ ಹೊಸ ರೀತಿಯ ಅಂಕಣ ಆರಂಭ. ಇದನ್ನು ಕಾದಂಬರಿ ಎಂದು ಕರೆಯಿರಿ, ಇಲ್ಲಾ ಅನುಭವ ಕಥನ ಎನ್ನಿ. ಚಂದ್ರಿಕಾ ನಡೆಸುವ ಪ್ರಯೋಗ ಮಾತ್ರ ಸದ್ದಿಲ್ಲದೇ ಹೊಸ ಅಲೆಯನ್ನು ಸೃಷ್ಟಿಸುತ್ತಲೇ ಇರುತ್ತದೆ.

10

ಯಾವಾಗಲೂ ಅಲ್ಲದಿದ್ದರೂ ಕೆಲವೊಮ್ಮೆ ಶೂಟಿಂಗ್ ಮಾಡುವಾಗ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಬಹುಮುಖ್ಯ. ತ್ರ‍್ರಿವಳಿ ತಲ್ಲಾಖ್‌ನ ಕಥೆಯನ್ನು ಹೇಳುವಾಗ (ʻಒಂದು ತುಂಡುಗೋಡೆ’ಯ ಕಥೆ ಎಂದು ಯಾರಿಗೂ ಹೇಳದೆ ಗೌಪ್ಯತೆಯನ್ನು ಕಾಪಾಡುವುದೂ ಕೂಡಾ ನಮ್ಮ ಮನಸ್ಸಿನಲ್ಲಿತ್ತು) ಅದೂ ಅವರದೇ ಜಾಗದಲ್ಲಿ ಶೂಟ್ ಮಾಡುವಾಗ ಅಲ್ಲಿಯ ಮುಖಂಡರನ್ನು ಸಂಪರ್ಕಿಸಿ ವಿಷಯವನ್ನು ಹೇಳುವುದು ನಾವು ಸುರಕ್ಷಿತವಾಗಿರುವುದಕ್ಕೆ ದಾರಿ ಎನ್ನುವುದನ್ನು ಎಲ್ಲರೂ ನಂಬಿದ್ದರಿಂದ ಯು. ಟಿ. ಖಾದರ್ ಮೊದಲುಗೊಂಡು ಅನೇಕ ಮುಖಂಡರನ್ನು ಸಂಪರ್ಕಿಸಿ ಮಾತನಾಡಿದ್ದರು ಪಂಚಾಕ್ಷರಿ. ಆದರೆ ಲೋಕಲ್ ರಾಜಕೀಯ ಸ್ವರೂಪಗಳೇ ಬೇರೆ ಇರುತ್ತದೆ.

ಧರ್ಮ ಇದರ ಜೊತೆ ಸೇರುವುದರಿಂದ ತುಂಬಾ ಸೂಕ್ಷ್ಮವಾದ ಸಂಗತಿ ಇದಾಗುತ್ತದೆ. ಆದ್ದರಿಂದ ಉಲ್ಲಾಳದ ದರ್ಗಾಕ್ಕೆ ಹೋಗಿ ಬರುವ ಯೋಚನೆಯಲ್ಲಿದ್ದೆವು. ಆರಂಭದಲ್ಲೇ ಆರ್ಟ್ ಡೈರೆಕ್ಟರ್ ಅನಿವಾರ್ಯ ಕಾರಣಗಳಿಂದ ಬಿಟ್ಟುಹೋಗಿದ್ದರಿಂದ ಆ ಜವಾಬ್ದಾರಿಯನ್ನು ನಾನೇ ತೆಗೆದುಕೊಂಡಿದ್ದೆ. ನನ್ನ ಜೊತೆ ಚಂಚಲಾ ಇದ್ದುದ್ದರಿಂದ ಮತ್ತು ಆಕೆಗೆ ಕೆಲಸ ಗೊತ್ತಿದ್ದರಿಂದ ತಾನೂ ಸಹಾಯ ಮಾಡುವುದಾಗಿ ಭರವಸೆ ಕೊಟ್ಟಿದ್ದರು. ಆ ಧೈರ್ಯದಿಂದ ನಾನೂ ಒಂದು ಹೆಜ್ಜೆ ಮುಂದೆ ಇಟ್ಟಿದ್ದೆ. ನನ್ನ ಜೊತೆ ಪುಟ್ಟಣ್ಣ ಮತ್ತು ಪುನೀತ ಇಬ್ಬರೂ ಕೆಲಸಮಾಡುತ್ತಿದ್ದರು. ಇಬ್ಬರಿಗೂ ಅಂಥಾ ದೊಡ್ಡ ಅನುಭವ ಇರಲಿಲ್ಲ. ಆದರೆ ಮಾಡಬೇಕು ಎನ್ನುವ ಹುಮ್ಮಸ್ಸು ಮಾತ್ರ ಇತ್ತು.

ನಮ್ಮ ಮೂರು ಜನರ ಟೀಂ ಆರ್ಟ್ ಡಿಪಾರ್ಟ್‌ ಮೆಂಟಿನ ಆಗುಹೋಗುಗಳನ್ನು ನೋಡುಕೊಳ್ಳುವುದಾಗಿತ್ತು. ಸುಭಾಷಿಣಿ ಎಂಬುವರು ರಾಷ್ಟ್ರಪ್ರಶಸ್ತಿ ವಿಜೇತ ಖ್ಯಾತ ಸಿನಿಮಾ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ ಸಾರ್ ಜೊತೆಗೆ ಎಸ್ ಎಲ್ ಭೈರಪ್ಪನವರ ಕಾದಂಬರಿ ʻನಾಯಿ ನೆರಳು’ನಲ್ಲಿ ನಾನು ಕೆಲಸ ಮಾಡುತ್ತಿದ್ದಾಗ ಕಾಸ್ಟೂಮ್ ಡಿಸೈನ್ ಮಾಡಿದ್ದಳು. ಅವಳು ಶೂಟಿಂಗ್‌ಗೆ ಬರುವುದು ಆಗದೇ ಇದ್ದಿದ್ದರಿಂದ, ಅವಳ ಟೀಂನ್ನು ನಮ್ಮೊಟ್ಟಿಗೆ ಕಳಿಸುವುದಾಗಿ ಹೇಳಿದ್ದರು. ಎಲ್ಲಕ್ಕೂ ಮುಂಚೆ ನಮ್ಮ ಕೆಲಸ ಇದ್ದಿತ್ತಾದ್ದರಿಂದ ನಾವು ಹೋಗಿದ್ದೆವು. ಎರಡು ದಿನಗಳ ನಂತರ ಮಿಕ್ಕವರೆಲ್ಲಾ ಬಂದರು.

ಜಕ್ಕು ಮಹಮದ್‌ರ ಮನೆಯ ಮುಂದಕ್ಕೆ ಅಡುಗೆ ಮನೆಯ ಹಾಗೆ ಒಂದು ತೆಂಗಿನ ಸೋಗೆಯ ಗುಡಿಸಲನ್ನು ಹಾಕುವ ಕೆಲಸವನ್ನು ನಾನು ಮತ್ತು ನನ್ನ ಸ್ನೇಹಿತರು ಸೇರಿ ಪ್ಲಾನ್ ಮಾಡುತ್ತಿದ್ದೆವು. ಹಸೀನಮ್ಮನ ಬಳಿ ಇದ್ದ ಕೀಯಿಂದ ಮನೆಯ ಬೀಗವನ್ನು ತೆಗೆದು ಒಳಗೆ ತುಂಬಿದ್ದ ಮರಳನ್ನು ತೆಗೆದು ನೀಟ್ ಮಾಡುವ ಕೆಲಸವನ್ನು ಮುಗಿಸಿಯಾಗಿತ್ತು. ನಮ್ಮ ಹತ್ತಿರ ಇದ್ದ ಸಲಕರಣೆಗಳಿಂದ ಎಲ್ಲವನ್ನೂ ಮಾಡಲಿಕ್ಕಾಗುತ್ತೆ ಎಂದು ಅನ್ನಿಸದ ಕಾರಣ ಇಂಥಾ ಕೆಲಸಗಳಿಗೆ ಎತ್ತಿದ ಕೈ ಎಂದು ಹಸೀನಮ್ಮ ರೆಕಮೆಂಡ್ ಮಾಡಿದ್ದರಿಂದ ಸಲಾಂ ಸಾಬ್‌ನನ್ನು ಹುಡುಕಿಹೋದೆವು. ಸಲಾಂ ಸಾಬ್ ಮಧ್ಯಮಾಕೃತಿಯ ಇಪ್ಪತ್ತೆಂಟು ಮೂವತ್ತರ ಹುಡುಗ. ಗೋಧಿ ಮೈಬಣ್ಣ. ಚುರುಕು ಎಂದರೆ ಅವನ ಕೈಗಳ ಕೆಲಸಕ್ಕೆ ನಮ್ಮ ಕಣ್ಣುಗಳು ಸೋಲುತ್ತಿದ್ದವು. ತುಂಬಾ ಮಾತಾಡದ, ಆದರೆ ಆಪ್ತವಾಗುವ ನಗು.

ಸಲಾಂ ಸಾಬ್‌ಗೆ ಎಲ್ಲ ವಿವರಿಸಿ ʻಹೀಗೆ ಬರಬೇಕು… ಇಷ್ಟು ಆಳದ ಗುಂಡಿ ಹೊಡೆಯಿರಿ’ ಎಂದೆಲ್ಲಾ ಹೇಳುವಾಗ, ಚಂದ್ರಹಾಸ್ ಹಾಗೂ ಪಂಚಾಕ್ಷರಿ ಬಂದರು. ಗುಡಿಸಿಲಿಗಾಗಿ ಸೋಗೆಯನ್ನು ಹೊಂಚುವ ಗಡಿಬಿಡಿಯಲ್ಲಿ ನಾನಿದ್ದೆ. ಸಲಾಂಸಾಬ್ ಕೆಲಸಕ್ಕಾಗಿ ಐದು ಸಾವಿರ ಹಣವನ್ನು ಕೇಳಿದ್ದ. ಹಣದ ವಿಷಯದಲ್ಲಿ ನನಗೆ ಯಾವ ಸ್ವಾತಂತ್ರ್ಯವೂ ಇಲ್ಲದ ಕಾರಣ ಪಂಚಾಕ್ಷರಿಗೆ ಮಾತಾಡುವಂತೆ ಹೇಳಿದೆ. ಅದಕ್ಕವರು ʻಮೊದಲು ನಾವು ಉಲ್ಲಾಳ ದರ್ಗಾಕ್ಕೆ ಹೋಗಿ ಬರೋಣ’ ಎಂದರು. ಬಾವಿಕಟ್ಟೆಗೆ ಒರಗಿ ನಿಂತು ʻನಾನು ಬರಬೇಕಾ? ಇಲ್ಲಿ ಕೆಲಸ ಮಾಡಿಸುತ್ತಿದ್ದೆ’ ಎಂದೆ. ʻಬನ್ನಿ ಅಲ್ಲಿ ಕಥೆಯ ಬಗ್ಗೆ ಏನಾದರೂ ಕೇಳಿದರೆ ಹೇಳಲಿಕ್ಕೆ ಬೇಕಲ್ಲ?’ ಎಂದರು ಪಂಚಾಕ್ಷರಿ. ʻಎಲ್ಲೆಲ್ಲಿಂದಲೋ ಜನ ದರ್ಗ ನೋಡಲಿಕ್ಕೆ ಬರ್ತಾರೆ ಅಂಥಾದ್ದರಲ್ಲಿ ಅವಕಾಶ ಸಿಕ್ಕಿದೆ ಬರಬಾರದೇ’ ಎಂದರು. ಚಂಚಲಾಗೆ ಮನೆಯಲ್ಲಿ ಕೆಲಸ ಇದ್ದಿದ್ದರಿಂದ ಅವರು ನಮ್ಮೊಟ್ಟಿಗೆ ಇರಲಿಲ್ಲ.

ಇಷ್ಟೆಲ್ಲಾ ಮಾತು-ಕತೆ ನಡೆಯುವಾಗ ಬಾವಿಯ ಎದುರಿದ್ದ ಕಿಟಕಿಯ ಪರದೆ ಸರಿಯಿತು. ಅತ್ಯಂತ ಸುಂದರ ಸಿಗ್ಧವಾಗಿದ್ದ ಐವತ್ತರ ಆಸುಪಾಸಿನ ಹೆಣ್ಣುಮಗಳೊಬ್ಬಳು ಕಾಣಿಸಿಕೊಂಡರು. ಅವರನ್ನು ನೋಡಿ ನಾನು ಅವಾಕ್ಕಾದೆ. ಥೇಟ್ ವಯಸ್ಸಾದ ಮಧುಬಾಲಾಳ ಹಾಗಿದ್ದ ಆಕೆ, ನನ್ನನ್ನು ʻಬಾ’ ಎಂದು ಕರೆದರು. ನಾನು ಕಿಟಕಿಯ ಬಳಿಗೆ ಹೋದೆ. ಕಿವಿಯಲ್ಲಿ ಅಲೀಖತ್ತು, ಕತ್ತಿಗೆ ಆತುಕೊಂಡಂತಿದ್ದ ಕರಿ ಮಣಿಯ ಸರ, ತಲೆಗೆ ಕಟ್ಟಿದ್ದ ಬಟ್ಟೆ. ಕಿಟಕಿಯಿಂದಲೇ ನನ್ನ ಕೈಗೆ ಐವತ್ತು ರೂಪಾಯಿಗಳನ್ನು ಕೊಟ್ಟು, ʻಇದನ್ನು ದರ್ಗಾಕ್ಕೆ ಹಾಕಿಬಿಡಿ’ ಎಂದಿದ್ದರು. ನನಗೆ ಅಚ್ಚರಿಯಾಯಿತು, ಇಲ್ಲೆ ಇದ್ದವರು ದರ್ಗಾಗೆ ತಾವು ಹೋಗಿ ಬಂದರೆ ಆಗುವುದಿಲ್ಲವಾ? ಅಥವಾ ಹೋದಾಗ ಹಾಕಿದ್ದರೆ ಆಗುತ್ತಿರಲಿಲ್ಲವಾ? ಎಂದೆಲ್ಲಾ ಕೇಳಿಕೊಳ್ಳುವಾಗಲೇ, ʻದರ್ಗಾಗೆ ಯಾರಾದರೂ ಹೋಗುತ್ತಾರೆ ಎಂದು ಗೊತ್ತಾದರೆ ಅವರ ಕೈಲಿ ದುವಾ ಮಾಡಿ ಕಳಿಸುವುದು ನಮ್ಮ ಪದ್ಧತಿ’ ಎಂದರು ಆಕೆ. ನಾನು ಹಣವನ್ನು ತೆಗೆದುಕೊಳ್ಳುತ್ತಾ ʻಯಾರ ಹೆಸರಲ್ಲಿ ಇದನ್ನು ಹಾಕಬೇಕು’ ಎಂದೆ. ʻಪಚ್ಚಿಲ ಮಹಮದ್, ಅವರು ನನ್ನ ಸಾಬ್. ಅವರ ಹೆಸರಲ್ಲಿ ಹಾಕಿಬಿಡಿ, ಹಾಕುತ್ತೀರಲ್ಲಾ?’ ಎಂದು ಕೇಳಿದಾಗ ನಾನು ʻಹುಂ’ ಎಂದು ತಲೆ ಹಾಕಿದ್ದೆ. ಗಂಡನ ಹೆಸರನ್ನು ಹೇಳುವಾಗ ಆಕೆಯ ಕಣ್ಣುಗಳಲ್ಲಿ ಎಂಥದ್ದೋ ಹೆಮ್ಮೆ. ಸುಂದರವಾದ ಮುಖ ತುಸುವೇ ಕೆಂಪಾಗಿ ಇನ್ನಷ್ಟು ಚೆನ್ನಾಗಿ ಕಂಡಿದ್ದರು.

ಎಂಥದ್ದು ಇದು ಪಚ್ಚಿಲ? ನನಗೆ ತಲೆ ಕೆಟ್ಟಿತ್ತು. ಜಕ್ಕು ಮಹಮದನ ಘಟನೆ ಇನ್ನೂ ನೆನಪಿಂದ ಮಾಸಿರಲಿಲ್ಲ. ಆದರೆ ಆತನ ಹೆಂಡತಿಯೇ ಆ ಪದವನ್ನು ಬಳಕೆ ಮಾಡಿದ್ದರಿಂದ, ಅದು ತಪ್ಪರ್ಥದ ಪದ ಅಲ್ಲವೇನೋ ಎಂದುಕೊಂಡೆ. ʻನಿಮ್ಮ ಹೆಸರು?’ ಎಂದ ನನಗೆ, ಸ್ಕ್ರೀನ್‌ನ್ನು ಮುಚ್ಚುತ್ತಾ ʻಅಲೀಮಮ್ಮ’ ಎಂದಿದ್ದರು. ದರ್ಗಾಗೆ ಹಾಕಬೇಕಿದ್ದ ಹಣ ನನ್ನ ಕೈಲಿತ್ತು. ಚಂದ್ರಹಾಸರು ಅದನ್ನು ನೋಡಿ, ʻದರ್ಗಾದ ಮಹಾತ್ಮೆ ಇದೇ ನೋಡಿ. ನಿಮ್ಮ ಕೈಗೆ ಮುಡಿಪಿನ ಹಣ ಬಂದು ಈಗ ದರ್ಗಾಗೆ ನೀವು ಬರುವುದು ಅನಿವಾರ್ಯವಾಯ್ತು’ ಎಂದು ನಕ್ಕರು. ಕೆಲಸದ ತಯಾರಿಯಲ್ಲಿದ್ದ ಸಲಾಂಸಾಬ್‌ನನ್ನು ʻಪಚ್ಚಿಲ ಅಡ್ಡ ಹೆಸರಲ್ಲ ತಾನೆ?’ ಎಂದು ಕೇಳಿದೆ. ಅವನು ʻನೀವು ದರ್ಗಾಕ್ಕೆ ಹೋಗಿ ಬನ್ನಿ ಮತ್ತೆ ಹೇಳುವಾ. ನಾನು ಕೇಳಿದ ಹಣವನ್ನು ಮಾತ್ರ ನನಗೆ ಕೊಡಿಸಿಕೊಡಿ’ ಎಂದ.   

ಉಲ್ಲಾಳ ದರ್ಗಾದ ಆವರಣ ಪ್ರವೇಶ ಮಾಡುವಾಗಲೇ ದೈವೀಕವಾದ ಯಾವುದೋ ಶಕ್ತಿ ಅಲ್ಲಿ ತುಂಬಿದೆ ಎನ್ನಿಸಿಬಿಟ್ಟಿತ್ತು. ದರ್ಗಾದಲ್ಲಿ ಮಸೀದಿ ಕೂಡಾ ಇದೆ. ನಾವು ಹೋಗುವ ಹೊತ್ತಿಗೆ ಮಧ್ಯಾಹ್ನದ ನಮಾಜ್‌ನ ಹೊತ್ತಾದ್ದರಿಂದ ಅದಕ್ಕಾಗಿ ತಯಾರಿ ನಡೀತಾ ಇತ್ತು. ನಾವು ಭೇಟಿಯಾಗಬೇಕಿದ್ದಿದ್ದು ಅಬ್ದುಲ್ ರಶೀದ್ ಎನ್ನುವ ಜಮಾತ್‌ನ ಮುಖ್ಯಸ್ಥರನ್ನು. ತೆಳು ನೀಳಕಾಯದ ಸಾಧಾರಣ ಬಣ್ಣದ ಅವರು, ತಮ್ಮ ಕೈಕಾಲುಗಳನ್ನು ಆವರಣದಲ್ಲೇ ಇದ್ದ ನಲ್ಲಿಯಲ್ಲಿ ತೊಳೆದು ಪವಿತ್ರವಾದ ಪ್ರಾರ್ಥನೆಯ ಹೊತ್ತಿಗಾಗಿ ತಮ್ಮನ್ನು ತಯಾರು ಮಾಡಿಕೊಳ್ಳುತ್ತಿದ್ದರು. ನಮ್ಮನ್ನು ನೋಡಿ ʻಬೆಳಗ್ಗೆಯಿಂದ ನಿಮಗಾಗಿ ಕಾಯುತ್ತಿದ್ದೆ… ನಮಾಜ್ ಮುಗಿಸಿ ಬರುತ್ತೇನೆ. ದರ್ಗಾವನ್ನು ಒಂದು ಸುತ್ತು ನೋಡಿ ಬನ್ನಿ’ ಎಂದರು. ಅನಿವಾರ್ಯವಾಗಿ ನಾವು ಕಾಯಲೇಬೇಕಾಯಿತು. 

ಸೈಯದ್ ಮದನಿ ಎನ್ನುವ ಸಂತ ಧರ್ಮ ಪ್ರಚಾರಕ್ಕಾಗಿ ಅರಬ್ ದೇಶದಿಂದ, ಹಿಂದೂ ಮಹಾಸಾಗರದ ಮೇಲೆ ಬಟ್ಟೆಯೊಂದನ್ನು ಹಾಕಿ ಅದರ ಮೇಲೆ ಕುಳಿತು ಸಾವಿರಾರು ಮೈಲಿ ಕ್ರಮಿಸಿ ಭಾರತವನ್ನು ತಲುಪಿದ್ದರಂತೆ. ಆತನ ಈ ಪವಾಡದಿಂದ ಜನ ರೋಮಾಂಚಿತರಾಗಿ ಅವರನ್ನು ಆರಾಧಿಸಲು ಆರಂಭಿಸುತ್ತಾರೆ. ಆತನ ಬಳಿ ಬಂದು ತನ್ನ ಕಷ್ಟಗಳಿಗೆ ಪರಿಹಾರವನ್ನು ಕೇಳುತ್ತಾರೆ, ದೈವಾಂಶ ಸಂಭೂತರಾದ ಮದನಿಯವರು ಸರ್ವಧರ್ಮದವರಿಗೂ ಸಮನವಾಗಿ ಉಪದೇಶವನ್ನು ಮಾಡುತ್ತಾ ಜನರ ಕಷ್ಟವನ್ನು ಕಳೆಯುತ್ತಿರುತ್ತಾರೆ.

ಉರುಸ್ಸಿನ ಸಮಯದಲ್ಲಿ ಎಲ್ಲಾ ಕಡೆ ಕೆರೆ, ಬಾವಿಗಳು ಬತ್ತಿ, ನೀರಿಗಾಗಿ ಹಾಹಾಕಾರ ಎದ್ದಾಗ ತಮ್ಮ ಪವಾಡದಿಂದ ಬಾವಿಯಲ್ಲಿ ನೀರು ಚಿಮ್ಮಿಸಿದ ಕತೆ ಜನಜನಿತ. ಅಂಥಾ ಸಂತನ ದಿವ್ಯಸನ್ನಿಧಿಯಲ್ಲಿ ನಾವೆಲ್ಲ ನಿಂತಿದ್ದೆವು. ಜನ ತುಂಬಿ ತುಳುಕುತ್ತಿದ್ದರು. ಕೆಲ ಹೆಂಗಳೆಯರು ತಮ್ಮ ಮಕ್ಕಳ ಸಮೇತ ಬಂದು ಸೈಯದ್ ಮದನಿಯವರ ಸಮಾಧಿಯ ಎದುರು, ಹೊರಗೇ ನಿಂತು ಏನನ್ನೋ ಬೇಡಿಕೊಳ್ಳುತ್ತಿದ್ದರು. ಹೊಸದಾಗಿ ಮದುವೆಯಾದ ಜೋಡಿ, ವಯಸ್ಸಾದವರು ಹೀಗೆ ಗುಂಪುಗುಂಪಾಗಿ ದರ್ಶನ ಪಡೆಯುತ್ತಿದ್ದರು.

ನವಿಲುಗರಿಯಿಂದ ಬಂದ ಭಕ್ತಾದಿಗಳಿಗೆ ತಲೆಯ ಮೇಲೆ ಸಣ್ಣದಾಗಿ ಹೊಡೆಯುತ್ತಿದ್ದರು. ಪಕ್ಕದಲ್ಲಿ ಸಾಂಬ್ರಾಣಿಯ ವಾಸನೆ ಭಕ್ತಿಯ ಆವರಣವನ್ನು ನಿರ್ಮಿಸುವಲ್ಲಿ ಸಹಕಾರಿಯಾಗಿತ್ತು. ಗಂಡಸರು ಮಾತ್ರ ಸಮಾಧಿಯ ಸ್ಥಳಕ್ಕೆ ಹೋಗಬಹುದಿತ್ತು. ಎಲ್ಲ ಧರ್ಮಗಳಲ್ಲಿ ಹೆಣ್ಣುಮಕ್ಕಳಿಗೆ ಯಾಕೆ ಈ ನಿಷೇಧ ಎಂದು ಅರ್ಥವಾಗದೆ ಹೋಯಿತು. ಚಂಚಲಾ ಇದ್ದಿದ್ದರೆ ಇದರ ಬಗ್ಗೆ ಮಾತಾಡಿಕೊಳ್ಳಬಹುದಿತ್ತು ಎಂದುಕೊಂಡೆ. ಚಂದ್ರಹಾಸರು ಮತ್ತು ಪಂಚಕ್ಷರಿ ಒಳಗೆ ಹೋಗಿದ್ದರಿಂದ ನಾನೊಬ್ಬಳೇ ಹೊರಗೆ ನಿಂತೆ.

ನಮಾಜು ಮುಗಿಸಿಕೊಂಡು ಅಬ್ದುಲ್ ರಶೀದರು ನಮ್ಮ ಜೊತೆಗೂಡಿದರು. ನಮ್ಮ ಪರಿಚಯವನ್ನು ಚಂದ್ರಹಾಸರು ಅವರಿಗೆ ಮಾಡಿಕೊಟ್ಟರು. ತುಂಬು ಸೌಜನ್ಯದಿಂದ ನಮ್ಮೊಂದಿಗೆ ಮಾತಾಡಿದ ಅಬ್ದುಲ್ ರಶೀದರು ನಮ್ಮನ್ನು ಆಫೀಸಿಗೆ ಕರೆದೊಯ್ದರು. ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರಾಗಿದ್ದ ಅವರಿಗೆ ಜನಬಳಕೆ ತುಂಬಾ ಇತ್ತು ಎನ್ನುವುದನ್ನು ಅವರ ನಡೆಯೇ ತೋರಿಸುತ್ತಿತ್ತು. ಆಫೀಸಿನ ಒಳಗೆ ಕಾಲಿಡುತ್ತಿದ್ದಂತೆ ಅತ್ತರಿನ ವಾಸನೆ ಮೂಗಿಗೆ ಬಡೆದು ತೇಲುವಂತಾಗುತ್ತಿತ್ತು. ಆರೇಳು ಜನ ಜಮಾತಿನ ಸದಸ್ಯರು ಇದ್ದರು. ವಯಸ್ಸಾದ, ತುಂಬಾ ಗಂಭೀರವಾಗಿದ್ದ ಜಮಾತಿನ ಮುಖ್ಯಸ್ಥರು ನಮ್ಮನ್ನು ಆಪ್ತವಾಗಿ ಬರಮಾಡಿಕೊಂಡು ಮಾತಾಡಿದರು.

ನಮ್ಮ ಧರ್ಮದ ಬಗ್ಗೆ ನಿಮಗೇನು ಗೊತ್ತು ಎಂದು ಯಾರಾದರೂ ಕೇಳಿಬಿಟ್ಟರೆ ನಾನೂ ಅಲ್ಪ ಸ್ವಲ್ಪ ಕುರಾನ್ ಓದಿರುವ ವಿಷಯ ಪ್ರಸ್ತಾಪ ಮಾಡಿದರಾಯಿತು ಎಂದು ನೆನಪು ಮಾಡಿಕೊಳ್ಳಲು ಯತ್ನಿಸಿದೆ. ನಮ್ಮ ಉದ್ದೇಶ ಹೇಳಿದ ಮೇಲೆ, ʻನಮ್ಮ ಸಮಾಜವನ್ನು ಎಜ್ಯುಕೇಟ್ ಮಾಡಲಿಕ್ಕೆ ನಾವೂ ಪ್ರಯತ್ನ ಪಡ್ತಾ ಇದೀವಿ’ ಎನ್ನುತ್ತಾ ಮಾತು ಸಮಾಜ ಜನ ನಂಬಿಕೆ ವಿಶ್ವಾಸ ಹೀಗೆಲ್ಲೆಲ್ಲೋ ಹರಿದಾಡಿತು. ಕಡೆಗೆ ನಾವು ಬಂದ ಕೆಲಸದ ಫಲಶ್ರುತಿ ʻಮಾಡಿ’ ಎನ್ನುವ ಅಭಯದಾನ ಸಿಕ್ಕಿತು. ಅಲ್ಲಿದ್ದವರೆಲ್ಲಾ ಉನ್ನತ ವಿದ್ಯಾಭ್ಯಾಸ ಪಡೆದವರೇನಲ್ಲದಿದ್ದರೂ ಅವರ ಮಾತುಗಳಲ್ಲಿ ಇಂಗ್ಲಿಶ್ ಸಲೀಸಾಗಿ ನುಸುಳಿಬರುತ್ತಿತ್ತು.

ಸದ್ಯದ ವಿದ್ಯಮಾನಗಳನ್ನು ರಾಜಕೀಯ ಪರಿಸ್ಥಿತಿಗಳನ್ನು ಅವರು ಬಲ್ಲವರಾಗಿದ್ದರು. ನಾವು ಹೊರಡುವ ವೇಳೆಯಲ್ಲಿ ನಮಗೆಲ್ಲರಿಗೂ ಹಸಿ ಖರ್ಜೂರ, ದ್ರಾಕ್ಷಿ, ಗೋಡಂಬಿ ಕಲ್ಲುಸಕ್ಕರೆಗಳಿದ್ದ ಬಾಕ್ಸ್ ಕೊಟ್ಟರು. ಹೊರಡುವ ವೇಳೆಯಲ್ಲಿ ನನಗೆ ಅಲೀಮಮ್ಮ ಕೊಟ್ಟಿದ್ದ ಐವತ್ತು ರೂಗಳ ನೋಟು ನೆನಪಾಯಿತು. ʻಕಾಣಿಕೆಯನ್ನು ಎಲ್ಲಿ ಹಾಕಬೇಕು’ ಎಂದು ಅಬ್ದುಲ್ ರಶೀದರನ್ನು ಕೇಳಿದೆ. ʻನೀವು ಹರಕೆ ಒಪ್ಪಿಸುತ್ತಿದ್ದಿರಾ?’ ಎಂದರು. ʻಇಲ್ಲ ಸಾರ್’ ಎಂದು ಅಲೀಮಮ್ಮನ ವಿಷಯ ಹೇಳಿ, ʻಅವರ ಗಂಡನ ಹೆಸರಲ್ಲಿ ಒಪ್ಪಿಸಬೇಕು’ ಎಂದೆ. ಅವರು ತೋರಿದ ಕಡೆ ಅದನ್ನು ಹಾಕಿ ಬಂದೆ. ಹಣದ ವಿಷಯ ನೆನಪಾಗದೇ ಇದ್ದಿದ್ದರೆ ನನ್ನ ತಲೆಯ ಮೇಲೆ ದೊಡ್ಡ ಭಾರವೇ ಉಳಿದುಬಿಡುತ್ತಿತ್ತು.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

20 August, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading