ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪಿಕ್ ಅಂಡ್ ಆಕ್ಟ್ ಜೀವ ಪ್ರೀತಿ

ಮನುಷ್ಯ ಜೀವಗಳಿಗೇ ಸಂಚಕಾರ ಇರುವ ಕೆಡುಕಿನ ದಿನಗಳ ನಡುವೆ ಬದುಕುತ್ತಿದ್ದೇವೆ ನಾವು. ಇದರ ಮಧ್ಯೆ absurd ಆದಂತಹ ಕೆಲವು ತೀರ್ಮಾನಗಳು ಮೇಲಿನಿಂದ ಉದುರಿ, ಉಗುಳಲೂ ಆಗದ-ನುಂಗಲೂ ಆಗದ ಸ್ಥಿತಿ ತಂದೊಡ್ಡುತ್ತಿವೆ. ಇಂತಹ ಅಸಂಗತಗಳೇ ಹೆಚ್ಚಾಗಿ ಆದ್ಯತೆಗಳ ತಳ ತಪ್ಪಿಸುವುದು.

ಕುಡಿತ-ಧೂಮಪಾನ ಕೆಟ್ಟದು ಎಂದು ದಿನಬೆಳಗಾದರೆ ಬೋಧಿಸುವ ಸರಕಾರ ಅದನ್ನು ನಿಷೇಧಿಸುವುದಿಲ್ಲ. ಆದರೆ, ಮುಖ್ಯರಸ್ತೆಗಳಿಂದ ಶರಾಬು ಅಂಗಡಿಗಳನ್ನು ದೂರ ಇರಿಸಬೇಕು ಎಂದು ನ್ಯಾಯಾಲಯದ ತೀರ್ಪು ಬರುತ್ತದೆ; ಅದರ ಫಲವಾಗಿ ಒಳನಾಡಿನ ಜನವಸತಿ ಪ್ರದೇಶಗಳಿಗೆ ಸ್ಥಳ ಬದಲಾಯಿಸುತ್ತಿರುವ ಶರಾಬು ಅಂಗಡಿಗಳು ದೇಶದಾದ್ಯಂತ ಅಲ್ಲಲ್ಲಿ ಜನವಸತಿಗಳ ಜೊತೆ ಗುದ್ದಾಡುತ್ತಿರುವ ಸುದ್ದಿಗಳು ಪ್ರತಿದಿನ ಕೇಳಿಬರುತ್ತಿವೆ.

ಜನ ಬದುಕಬೇಕಾದರೆ ಕಾಡು, ನದಿ, ಬೆಟ್ಟ, ಸಮುದ್ರ – ಇಡಿಯ ಪರಿಸರ ಸಹ್ಯವಾಗಿರಬೇಕು ಎಂದು ಸರ್ಕಾರದ ಕಾನೂನೇ ವಿಧಿಸುತ್ತದೆ, ಆದರೆ ಪಶ್ಚಿಮ ಘಟ್ಟಗಳು, ಕರಾವಳಿಯ ಕಡಲ ತೀರಗಳನ್ನು ಸಂಪೂರ್ಣವಾಗಿ ನಾಶ ಮಾಡುವ ಗುತ್ತಿಗೆಯನ್ನೂ ಸರಕಾರವೇ ಮಾರುತ್ತದೆ.

ಇಂತಹದೇ ಒಂದು ತೀರ್ಮಾನ ಜಲ್ಲಿಕಟ್ಟು, ಕಂಬಳಗಳ ವಿಚಾರದಲ್ಲೂ ಹೊರಬಂದಿದ್ದು, ಈಗ ಬಿಸಿಬಿಸಿ ಚರ್ಚೆಯ ವಿಚಾರವಾಗಿವೆ. 2014ರಲ್ಲಿ ಸುಪ್ರೀಂ ಕೋರ್ಟು ತಮಿಳುನಾಡಿನ ಜಲ್ಲಿಕಟ್ಟು ವನ್ನು ನಿಷೇಧಿಸಿದ್ದರೆ, ಕರ್ನಾಟಕದ ಹೈಕೋರ್ಟು ಇತ್ತೀಚೆಗೆ (ನವೆಂಬರ್ 2016) ಪೀಪಲ್ ಫಾರ್ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ (PETA)  ಕಾರ್ಯಕರ್ತರು ಸಲ್ಲಿಸಿದ್ದ ಅರ್ಜಿಯನ್ವಯ ಕರಾವಳಿಯ ಕಂಬಳಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿದೆ. ಸಂಪ್ರದಾಯ ಇದೆಯೆಂದು, ಅದಕ್ಕೆ ಅವಕಾಶ ನೀಡುವ ಮೂಲಕ ಪ್ರಕರಣ ತೀರ್ಮಾನ ಆಗುವ ತನಕ ಕಾನೂನು ಉಲ್ಲಂಘಿಸುವುದಕ್ಕೆ ಹಾದಿಮಾಡಿಕೊಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟವಾಗಿ ಹೇಳಿದೆ.

ಗಮನಿಸಬೇಕಾದ ಸಂಗತಿ ಎಂದರೆ, ಸರ್ಕಾರಗಳ ಮೂಗಿನಡಿಯೇ ನಡೆಯುವ ಕುದುರೆ ಜೂಜಿಗೆ ಇದ್ಯಾವುದೂ ಈತನಕ ಅನ್ವಯ ಆಗಿಲ್ಲ!

ಕಂಬಳ ಮೂಲದಲ್ಲಿ ಭೂಮಿಯ ಒಡೆತನದ ಡೌಲು ಹೌದಾದರೂ, ಅದಕ್ಕೆ ಜನಪದ – ಕೃಷಿ ಸಂಬಂಧಿ ಆಚರಣೆಯ ಮಗ್ಗುಲೂ ಇದೆ. ಕಂಬಳದ ಬಗ್ಗೆ ವಿವಾದಗಳು ಆರಂಭ ಆದ ಬಳಿಕ, ಎಚ್ಚರ ಮೂಡಿದ ಬಳಿಕ ಈಗ, ಅದಕ್ಕೆ ಸಂಬಂಧಿಸಿದ ವಿವಾದಿತ ಆಚರಣೆಗಳನ್ನು, ಓಡುವ ಕೋಣಗಳಿಗೆ ಹಿಂಸೆಯನ್ನು ಕೈಬಿಡುತ್ತಾ ಬರಲಾಗಿದೆ.

ಇಂತಹ ಸನ್ನಿವೇಶಗಳಲ್ಲಿ ಸ್ಪಷ್ಟವಾದ ಪರ – ವಿರೋಧ ನಿಲುವು ತಳೆಯುವುದು ಕಷ್ಟವಾದರೂ, ಒಂದು ಕಾನೂನು ಮತ್ತದರ ಲಾಜಿಕ್ಕು ಎಲ್ಲ ಸನ್ನಿವೇಶಗಳಿಗೂ ಸಮಾನವಾಗಿ ಅನ್ವಯ ಆಗಬೇಕೆಂದು ಬಯಸುವುದು ತಪ್ಪಲ್ಲ. ನದಿಯಲ್ಲಿರಬೇಕಾದ ಮೀನನ್ನು ಕೃತಕ ಕೆರೆಯಲ್ಲೋ, ಅಕ್ವೇರಿಯಂನಲ್ಲೋ ಬಂಧಿಸುವುದರಿಂದ ಆರಂಭಿಸಿ, ದನದ ಹಾಲು ಮನುಷ್ಯ ಕುಡಿಯುವ ತನಕ ಎಲ್ಲ ಕಡೆಗಳಲ್ಲೂ ಬೇರೆಬೇರೆ ದರ್ಜೆಯಲ್ಲಿ The prevention of Cruelty to Animals Act 1960  ಉಲ್ಲಂಘನೆ ಆಗುತ್ತಲೇ ಇದೆ. ಯಾವುದು ಆದ್ಯತೆಯದು ಎಂಬ ಪ್ರಶ್ನೆ ಎದುರಾದಾಗ, PETAದಂತಹ ಸಂಸ್ಥೆಗಳ ಆದ್ಯತೆಗಳು ಪಿಕ್ ಅಂಡ್ ಆಕ್ಟ್ ಪ್ರಹಸನಗಳಂತೆಯೇ ಕಾಣಿಸಲಾರಂಭಿಸುತ್ತವೆ.

ದೇಶದ ಕರಾವಳಿಯ ನಿವಾಸಿಯಾಗಿ ನನಗೆ, ಇಲ್ಲಿನ ಪಶ್ಚಿಮ ಘಟ್ಟಗಳನ್ನು ಉಳಿಸಿಕೊಳ್ಳುವುದು, ಅರಬ್ಬೀ ಸಮುದ್ರದ ಜೀವ ವೈವಿಧ್ಯಗಳನ್ನು ಕಾಪಾಡಿಕೊಳ್ಳುವುದು ಮೊದಲ ಆದ್ಯತೆ. ಇಲ್ಲಿನ ಘಟ್ಟದ ತಪ್ಪಲಿನಲ್ಲಿ MRPL, UPCL ನಂತಹ ಬೃಹತ್ ಕೈಗಾರಿಕೆಗಳು ಅಳತೆ ಮೀರಿ ಬೆಳೆಯುತ್ತಿರುವಾಗ (ಈವತ್ತು ಬೆಳಗ್ಗೆ ಎಂ ಆರ್ ಪಿ ಎಲ್ ವಿಸ್ತರಣೆಗೆ ಪೆರ್ಮುದೆ, ಕುತ್ತೆತ್ತೂರು, ಗುರುಪುರ ಪರಿಸರದ 1000 ಎಕರೆ ಭೂಮಿ ಭೂಸ್ವಾಧೀನಕ್ಕೆ ನೋಟೀಸು ಪ್ರಕಟಣೆಗೊಂಡಿದೆ), ಸಮುದ್ರದಲ್ಲಿ ಲೆಕ್ಕಕ್ಕಿಂತ ಹೆಚ್ಚು ಆಳಸಮುದ್ರ ಮೀನುಗಾರಿಕೆ ಸಂಸ್ಥೆಗಳು ಸಾಗರಗರ್ಭವನ್ನು ಬಗೆಯುತ್ತಿರುವಾಗ, ನದಿಯ ಮರಳು ಗುತ್ತಿಗೆ ಮಾಫಿಯಾದ ಕೈನಲ್ಲಿ ಜೀವ ತೆಗೆಯಬಲ್ಲ ಗಾತ್ರದ ವ್ಯವಹಾರವಾಗಿ ಬೆಳೆದಿರುವಾಗ, ಎತ್ತಿನ ಹೊಳೆ ಪಶ್ಚಿಮ ಘಟ್ಟದ ನೆತ್ತಿಯನ್ನೇ ಬಗೆಯುತ್ತಿರುವಾಗ, ಕೊಡಗಿನಲ್ಲಿ ಕಾಡಿನ ಮೂಲನಿವಾಸಿಗಳನ್ನು ಹಂತಹಂತವಾಗಿ ತಳತಪ್ಪಿಸುತ್ತಿರುವಾಗ…

ಕಂಬಳ, ಜಲ್ಲಿಕಟ್ಟು ಹೆಸರಿನಲ್ಲಿ ನಡೆಯುತ್ತಿರುವ ಪಿಕ್ ಅಂಡ್ ಆಕ್ಟ್ ಪ್ರಹಸನಗಳು ವಿಶ್ವಾಸದ ಬದಲು ಸಂಶಯವನ್ನೇ ಹುಟ್ಟಿಸುತ್ತಿವೆ.

ಹೆಚ್ಚಿನ ಓದಿಗಾಗಿ:

PCA Act 1960 ಕಾನೂನು: http://cyberlawyer.lawyer/mod/ page/view.php?id=1795

PETA  ಕಡೆಯಿಂದ ಸಮಜಾಯಿಷಿ: http://www.petaindia.com/blog/ faq-on-jallikattu-bull-races- and-peta-india/

‍ಲೇಖಕರು admin

12 January, 2017

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading