
ಪಾಲಹಳ್ಳಿ ವಿಶ್ವನಾಥ್
ಇಂದು ಖ್ಯಾತ ಚಿತ್ರದುರ್ಗ ಕೋಟೆಯನ್ನು ನೋಡಲು ಹೋದರೆ, ಅಲ್ಲಿಯ ಗೈಡುಗಳು ಹಲವಾರು ಸ್ವಾರಸ್ಯದ ಜಾಗಗಳನ್ನು ತೋರಿಸುತ್ತಾರೆ: ಪಾಳು ಬಿದ್ದಿರುವ ಪಾಳೆಗಾರರ ಅರಮನೆಗಳು, ಕೆಲವು ದೇವಸ್ಥಾನಗಳು, ಗೋಪುರಗಳು, ಕಂಬಗಳು, ಗುಪ್ತ ದಾರಿಗಳು, ಹೊಂಡಗಳು ಇತ್ಯಾದಿ. ಮುಂದೆ ನಿಮ್ಮ ಉತ್ಸಾಹ ನೋಡಿಕೊಂಡು ಇನ್ನೂ ವಿಶೇಷವಿದೆ, ಆದರೆ ಇನ್ನು ಸ್ವಲ್ಪ ಹಣವಾಗುತ್ತದೆ ಎನ್ನುತ್ತಾರೆ, ನೀವು ಇಲ್ಲ ಎಂದರೆ ‘ಮುಗಿಯಿತು ಸಾರ್’ ಎಂದು ಹೇಳಿ ಹೊರಟು ಹೋಗುತ್ತಾರೆ.
ನೀವು ಹಣ ಕೊಟ್ಟು ಹೆಚ್ಚು ಆಸಕ್ತಿ ತೋರಿಸಿದರೆ, ಹಿಡಿಂಬೇಶ್ವರನ ದೇವಸ್ಥಾನದ ಬಳಿಯ ದೊಡ್ಡ ಅಲದ ಮರದ ಬಳಿ ಕರೆದುಕೊಂಡು ಹೋಗಿ ಹತ್ತಿರ ಬಿದ್ದಿರುವ ತುಂಡು ಕಲ್ಲುಗಳ ರಾಶಿಯನ್ನು ತೋರಿಸುತ್ತಾರೆ ಅವುಗಳನ್ನು ಸರಿಯಾಗಿ ಗಮನಿಸಿದರೆ ಒಂದು ತಲೆ ಕಾಣಿಸುತ್ತದೆ – ಚೆನ್ನಾಗಿ ಕಡೆದ ದೊಡ್ಡ ಮೀಸೆ ಇಟ್ಟುಕೊಂಡು ತಲೆ ಕೂದಲು ಹಿಂದೆ ಬಾಚಿಕೊಂಡ ಮನುಷ್ಯನ ತಲೆ! ಅದು ಪೂಜಾರಿ ವೀರಣ್ಣನವರ ತಲೆ ಎಂದು ಹೇಳುತ್ತಾರೆ. ಬನ್ನಿ ಅವರ ಕಥೆ ಹೇಳುತ್ತೇನೆ ಎಂದು ಅಲ್ಲೇ ಮರದ ನೆರೆಳಿನಲ್ಲಿ ಕೂರಿಸಿ ತಮ್ಮ ಕಥೆ ಶುರು ಮಾಡುತ್ತಾರೆ.
ನಾಯಕರು, ಅಂದರೆ ಚಿತ್ರದುರ್ಗದ ಪಾಳೆಗಾರರು, ದೈವ ಭಕ್ತರು. ಅವರಲ್ಲಿ ಪ್ರತಿಯೊಂದು ಪೀಳಿಗೆಯೂ ದೇವಸ್ಥಾನಗಳನ್ನು ಕಟ್ಟಿಸಿತು. ಆದ್ದರಿಂದ ಊರಿನಲ್ಲಿ ಅನೇಕ ಗುಡಿಗಳಿವೆ. ಹೆಸರೇ ಹೇಳುವಂತೆ ಹಿಡಿಂಬೇಶ್ವರನ ದೇವಸ್ಥಾನ ಶಿವನ ದೇವಾಲಯ. ಗರ್ಭಗುಡಿಯಲ್ಲಿ ಒಂದು ದೊಡ್ಡ ಲಿಂಗ. ಪ್ರತಿ ದಿನ ಅದಕ್ಕೆ ಅಭಿಷೇಕಮಾಡಿ ನೋಡಿಕೊಳ್ಳುತ್ತಿದ್ದದ್ದು ಪೂಜಾರಿ ವೀರಣ್ಣನವರ. ದೇವಾಲಯವನ್ನು ಮೊದಲು ಕಟ್ಟಿದಾಗ ಪೂಜಾರಿಯಾಗಿದ್ದವರು ವೀರಣ್ಣನವರ ಮುತ್ತಾತ ಶಿವಪ್ಪನವರು. ದೇವಾಲಯದ ಉಸ್ತುವಾರಿ ಮನೆತನದಲ್ಲಿಯೆ ಉಳಿದುಕೊಂಡಿತ್ತು.
ವೀರಣ್ಣನವರು ದೇವರ ಗುಡಿಯನ್ನು ಚೆನ್ನಾಗಿ ಇಟ್ಟಿದ್ದರು; ಸ್ವಚ್ಛ ಆವರಣ, ಸುತ್ತ ಮುತ್ತ ಸಮನಾದ ಹುಲ್ಲನ್ನು ಬೆಳೆಸಿದ್ದರು. ಅವರ ಗುಡಿ ಬಹಳ ಜನಪ್ರಿಯವಾಗಿತ್ತು. ಪ್ರತಿದಿನವೂ ಸುಮಾರು ಹಣ ಹುಂಡಿಯಲ್ಲಿ ಬೀಳುತ್ತಿತ್ತು. ಆ ಹಣವನ್ನು ವೀರಣ್ಣನವರ ಮೂರು ಭಾಗ ಮಾಡುತ್ತಿದ್ದರು; ಒಂದು ರಾಜನ ಕೋಶಕ್ಕೆ, ಎರಡನೆಯದು ಬಡಬಗ್ಗರಿಗೆ, ಮೂರನೆಯದು ಸ್ವಂತ ಖರ್ಚಿಗೆ.

ಸಾಮಾನ್ಯವಾಗಿ ನಾಯಕರು ಗುಡಿಗಳನ್ನು ಬೆಳಿಗ್ಗೆ ಒಂದು ಬಾರಿ, ಸಂಜೆ ಒಂದು ಬಾರಿ ನೋಡಿ ಬರುವ ಅಭ್ಯಾಸ. ಅವರ ಜೊತೆ ಆಸ್ಥಾನದ ಸಂಗೀತಗಾರರಾದ ಭೈರವಿ ವೆಂಕಟಸುಬ್ಬಯ್ಯನವರು ಕೂಡ ಬರುತ್ತಿದ್ದರು. ಆಸ್ಥಾನದಲ್ಲಿ ಕೆಲಸ ಮುಗಿದ ನಂತರ ಗುಡಿಗಳಿಗೆ ಭೇಟಿ. ಬೆಟ್ಟದ ಮೆಲಿನ ಹಿಡಿಂಬೇಶ್ವರ ದೇವಾಲಯವನ್ನು ಕಡೆಯಲ್ಲಿ ನೋಡಿ ವಾಪಸ್ಸು ಅರಮನೆಗೆ ಹೋಗುತ್ತಿದ್ದರು. ಒಂದೊಂದು ದಿನ ಅಲ್ಲೇ ಹೆಚ್ಚು ಕುಳಿತಿದ್ದಾಗ ವೆಂಕಟಸುಬ್ಬಯ್ಯನವರ ಸಂಗೀತಕ್ಕೆ ನಾಯಕರು ಅಪ್ಪಣ ಕೊಡಿಸುತ್ತಿದ್ದರು. ಊರಿನ ಜನವೂ ಹೊರಗೆ ಕುಳಿತು ಸಂಗೀತವನ್ನು ಕೇಳಿಸಿಕೊಂಡು ಹೋಗುತ್ತಿದ್ದರು.
ನಾಯಕರು ತಮ್ಮ ಗುಡಿಗೆ ಯಾವ ಸಮಯದಲ್ಲಿ ಬರುತ್ತಾರೆ ಎಂಬುದು ವೀರಣ್ಣನವರಿಗೆ ಖಚಿತವಾಗಿ ತಿಳಿದಿತ್ತು. ಪ್ರತಿ ದೇವಾಲಯದ ಘಂಟೆಗೂ ವಿಶಿಷ್ಟ ಶಬ್ದವಿತ್ತು. ವೀರಣ್ಣನವರ ಗುಡಿಗೆ ಬರುವ ಮೊದಲು ನಾಯಕರು ಏಕನಾಥಮ್ಮನ ದೇವಸ್ಥಾನಕ್ಕೆ ಭೇಟಿ ಕೊಡುತ್ತಿದ್ದರು. ಆ ಗುಡಿಯ ಗಂಟೆಯಂತೂ ಕೇಳಲು ಬಹಳ ಸುಮಧುರವಾಗಿತ್ತು. ಅದನ್ನು ಕೇಳಿದ ತಕ್ಷಣ ವೀರಣ್ಣನವರು ಬೇಗಲೇ ತಯಾರಾಗುತ್ತಿದ್ದರು. ವೀರಣ್ಣನವರು ಆಜಾನುಬಾಹು, ಧಡೂತಿಯ ವ್ಯಕ್ತಿ.
ಸಾಮಾನ್ಯರಿಗಿಂತ ಹೆಚ್ಚು ಹಸಿವಿನವರು. ಅದರೆ ಅವರ ಧರ್ಮಪತ್ನಿ ಹಾಸಿಗೆ ಹಿಡಿದು ವರ್ಷಗಳೆ ಆಗಿದ್ದವು. ತಮ್ಮ ಹಸಿವು ತೀರಿಸಿಕೊಳ್ಳಲು ವೀರಣ್ಣನವರು ಆಸ್ಥಾನ ನರ್ತಕಿಯ ಗೆಳತಿಯೊಬ್ಬರನ್ನು ಆರಿಸಿಕೊಂಡಿದ್ದರು. ಪ್ರತಿ ರಾತ್ರಿ ಗುಡಿಯಿಂದ ಆಕೆಯ ಮನೆಗೆ ಹೋಗಿ ಬೆಳಿಗ್ಗೆ ಎದ್ದು ತಮ್ಮ ಮನೆಗೆ ಹೋಗುವ ಅಭ್ಯಾಸವಿದ್ದಿತು. ಹೀಗೆಯೇ ನಡೆದುಕೊಂಡು ಹೋಗುತ್ತಿದ್ದಾಗ ಪಾಳೆಯಗಾರರ ಮಗನ ಮದುವೆಯಾಯಿತು. ಎಂದಿನಂತೆ ನಾಯಕರು ಗುಡಿಗೆ ಬಂದು ಹೋಗಿದ್ದರು. ಆದರೆ ಮಾರನೆಯ ದಿನ ಸಂಜೆ ನಾಯಕರು ಗುಡಿಗೆ ಪ್ರತಿದಿನ ಬರುತ್ತಿದ್ದ ಸಮಯಕ್ಕೆ ಬರಲಿಲ್ಲ.
ಸಾಮಾನ್ಯವಾಗಿ ಪ್ರತಿದಿನ ಸುಮಾರು ಏಳು ಗಂಟೆಗೆ ನಾಯಕರು ವೀರಣ್ಣನವರ ಗುಡಿಗೆ ಬರುತ್ತಿದ್ದರು. ಆದರೆ ಅಂದು ಏನೋ ಕೆಲಸವಿತ್ತೋ ಅಥವಾ ಶ್ರಮವಾಗಿತ್ತೋ ತಿಳಿಯದು, ಗಂಟೆ ಏಳಾಯಿತು, ಎಂಟಾಯಿತು, ಒಂಭತ್ತಾಯಿತು. ಸರಿ, ನಾಯಕರು ಇಂದು ಬರುವುದಿಲ್ಲ ಎಂದು ನಿರ್ಧರಿಸಿ ಪೂಜೆ ಮಾಡಿ ಗುಡಿಗೆ ಬೀಗ ಹಾಕಿ ಮಲ್ಲಿಗೆ ಹೂವನ್ನು ತಮ್ಮ ಪ್ರೇಯಸಿಯ ಮನೆಗೆ ತೆಗೆದುಕೊಂಡುಹೋಗಿ ಅವಳಿಗೆ ಹೂವನ್ನು ಮುಡಿಸಿದರು. ಇನ್ನೇನು ಅವರು ಮಲಗಬೇಕು, ಅಷ್ಟರಲ್ಲಿ ಏಕನಾಥಮ್ಮನ ಗುಡಿಯ ಗಂಟೆಗಳ ಶಬ್ದ ಕೇಳಿಸಿತು. ಅಂದರೆ ತಮ್ಮ ಗುಡಿಗೆ
ನಾಯಕರು ಇನ್ನು ಕೆಲವೇ ನಿಮಿಷಗಳಲ್ಲಿ ಬರುವವರಿದ್ದರು.

ಗಂಟೆಯನ್ನು ಕೇಳಿದ ವೀರಣ್ಣನವರು ಅವಸರದಲ್ಲಿ ಎದ್ದು ತಮ್ಮ ಪ್ರೇಯಸಿಯ ಮುಡಿಯಿಂದ ಮಲ್ಲಿಗೆ ದಂಡೆಯನ್ನು ಬಿಡಿಸಿಕೊಂಡು ಮೈ ಮೆಲೆ ನೀರು ಸುರಿದುಕೊಂಡು ಗುಡಿಗೆ ಓಡುತ್ತ ಹೋದರು. ಅಲ್ಲಿ ಎಲ್ಲ ದೀಪಗಳನ್ನೂ ಹಚ್ಚಿದರು. ನಾಯಕರು ಮತ್ತು ವೆಂಕಟಸುಬ್ಬಯ್ಯನವರು ಬಂದಾಗ ಅವರಿಗೆ ವಂದಿಸಿ ವೀರಣ್ಣ ಪೂಜಾರಿಯವರು ಪೂಜೆ ಮಾಡಿ ಮಲ್ಲಿಗೆ ಹೂವಿನ ದಂಡೆಯನ್ನು ನಾಯಕರಿಗೆ ಕೊಟ್ಟರು. ಅವರು ಅದನ್ನು ಕಣ್ಣಿಗೆ ಒತ್ತಿಕೊಳ್ಳುವಾಗ ಕರಿಯ ದಾರದ ತರಹ ಏನೋ ಕಾಣಿಸಿತು. ಸರಿಯಾಗಿ ನೋಡಿದರೆ ಅದು ಕರಿಯ ಕೂದಲು, ಉದ್ದನೆಯ ಕೂದಲು. ನಾಯಕರ ಕಣ್ಣು ಕೆಂಪಾಯಿತು.
‘ಇದೇನು ವೀರಣ್ಣನವರೇ? ಹೂವಿನ ಜೊತೆ ಕೂದಲು’
‘ಫ್ರಭು, ಇದು ಶಿವನ ಕೂದಲು’
‘ಪೂಜಾರಿಯವರೇ! ಅಂದರೆ ನೀವು ಹೇಳುತ್ತಿರುವುದು ಕಲ್ಲು ಲಿಂಗದ ಕೂದಲು?
‘ಹೌದು ಪ್ರಭು’
‘ನೀವು ಏನು ಹೇಳ್ತಾ ಇದ್ದೀರ ಎಂದು ನಿಮಗೆ ತಿಳಿಯುತ್ತಿದೆಯೇ?’
‘ನಾನು ಸುಳ್ಳು ಹೇಳುತ್ತಿಲ್ಲ, ಪ್ರಭು’
‘ಕಲ್ಲಿನ ವಿಗ್ರಹಕ್ಕೆ ಕೂದಲು ಬಂದುಬಿಟ್ಟಿದೆಯೇ?’
‘ಪ್ರಭು, ನಿಮಗೆ ಅದು ಕಲ್ಲು, ನನಗಲ್ಲ’
‘ವೀರಣ್ಣನವರೆ, ನಾನು ಒಳಗೆ ಹೋಗಿ ಅದನ್ನು ನೋಡಬಹುದೆ?’
ಅಗ ಸುಬ್ಬಣ್ನನವರು ‘ಪ್ರಭು..’ ಎಂದರು.
ಆಗ ನಾಯಕರು ‘ಏನು ಸುಬ್ಬಣ್ಣನವರೆ?’
‘ನೀವು ಒಳಗೆ ಹೋಗುವುದು ಬೇಡ. ನಿಮಗೆ ಕಾಣಿಸದ್ದು ಅವರಿಗೆ ಕಾಣಿಸಿರಬಹುದು’
‘ಏನು ಹೇಳುತ್ತಿದ್ದೀರಿ?’
‘ನೋಡಿ, ನಾನು ಹಾಡುವಾಗ ನನಗೆ ತಾಯಿ ಶಾರದೆ ಕಾಣಿಸುತ್ತಾಳೆ. ನಿಮಗೆ ಕಾಣಿಸುತ್ತಾಳೆಯೇ?
‘ಇಲ್ಲ ಸುಬ್ಬಣ್ಣನವರೆ’
‘ಅದೇ ರೀತಿ ನಮಗೆಲ್ಲ ಕಾಣದಿರುವುದು ಆ ಶಿವನ ಪೂಜಾರಿಯವರಿಗೆ ಕಾಣಿಸಬಹುದಲ್ಲವೆ?’ ‘ಇಲ್ಲ ಸುಬ್ಬಣ್ಣನವರೆ. ನನಗೆ ನಂಬಿಕೆ ಇಲ್ಲ. ನಾನು ಒಳಗೆ ಹೋಗಿ ಲಿಂಗವನ್ನು ಪರಿಶೀಲಿಸಲೇಬೇಕು ಆದರೆ, ಈಗ ಸಮಯವಿಲ್ಲ. ಬೆಳಿಗ್ಗೆ ಬೇಗನೇ ಬರುತ್ತೇವೆ. ಅಷ್ಠು ಹೊತ್ತಿಗಾದರೂ ಅದಕ್ಕೂ ಕೂದಲು ಬಂದಿರಲಿ’ ಎಂದು ವ್ಯಂಗವಾಗಿ ನಕ್ಕು ಹೊರಟು ಹೋದರು. ಆದರೆ ಸುಬ್ಬಣನವರು ವೀರಣ್ಣನವರ ಜೊತೆ ಉಳಿದುಕೊಂಡರು. ಅವರಿಗೆ ವೀರಣ್ಣ ‘ಸ್ವಾಮಿಯೋರೆ, ಶಿವ ನನ್ನ ಕೈಲಿ ಹೇಳಿಸಿದ. ಅದು ಸುಳ್ಳಾಗಲು ಸಾಧ್ಯವೆ?’ ಸುಬ್ಬಣ್ಣನವರು ‘ಬನ್ನಿ, ಶಿವಸ್ತೋತ್ರ ಮಾಡೋಣ’ ಎಂದು ಭೈರವಿ ರಾಗವನ್ನು ಹಾಡಲು ಪ್ರಾರಭಿಸಿದರು.
ಬೆಳಗಿನ ಜಾವ ಅವರ ಸಂಗೀತ ನಿಂತಾಗ ಗರ್ಭಗುಡಿಯಿಂದ ಏಳು ಹೆಡೆಯ ಸರ್ಪವೊಂದು ಹೊರಹೋಯಿತೆಂದು ಹೇಳುತ್ತಾರೆ. ಅವರಿಬ್ಬರೂ ಸ್ನಾನಮಾಡಿ ಗುಡಿಯಲ್ಲಿ ನಾಯಕರಿಗೆ ಕಾದು ನಿಂತರು. ನಾಯಕರೂ ತಮ್ಮ ಆಳುಕಾಳುಗಳೊಂದಿಗೆ ಗುಡಿಗೆ ಬಂದರು. ವೀರಣ್ಣನವರು ಪೂಜೆಮಾಡಿ ನಾಯಕರಿಗೆ ಪ್ರಸಾದವನ್ನು ಕೊಟ್ಟರು. ಅದಾದನಂತರ ನಾಯಕರು ‘ನಾವು ಒಳಗೆ ಹೋಗಿ ಲಿಂಗವನ್ನು ಪರಿಶೀಲಿಸಬಹುದೇ ವೀರಣ್ಣನವರೇ’? ಎಂದು ಕೇಳಿದಾಗ ‘ಅವಶ್ಯ’ ಎಂದರು.

ವೀರಣ್ಣನವರು ಆಗ ನಾಯಕರು ‘ಸುಬ್ಬಣ್ಣನವರೆ! ನೀವು ಹೋಗಿ ವಿಗ್ರಹವನ್ನು ಪರಿಶೀಲಿಸಬಹುದಲ್ಲಾ! ನಾನು ನಿಮ್ಮನ್ನು ನಂಬುತ್ತೇನೆ.’ ಅದಕ್ಕೆ ಸುಬ್ಬಣ್ಣನವರು ‘ಇಲ್ಲ ಪ್ರಭು, ಅದು ಸರಿಯಲ್ಲ. ಪೂಜಾರಿಯವರನ್ನು ಶಂಕಿಸಿದವರು ನೀವು. ನೀವು ಹೋಗಿ ಪರಿಶೀಲಿಸುವ ತನಕ ಅವರ ಮಾತಿಗೆ ಬೆಲೆ ಇರುವುದಿಲ್ಲ. ದಯವಿಟ್ಟು ಒಳಗೆ ಹೋಗಿ’ ‘ಅಲ್ಲ, ಸುಬ್ಬಣ್ಣನವರೆ! ನಮ್ಮಂತಹವರು ಗರ್ಭಗುಡಿಯ ಒಳಗೆ ಹೋಗಬಹುದೇ ಅಪಚಾರವಾಗುವದಿಲ್ಲವೇ? ‘ಏನು ಪ್ರಭು! ನೀವು ಈಗ ಹೀಗೆ ಮಾತನಾಡುತ್ತಿದ್ದೀರಿ! ಯಾವುದು ತಪ್ಪು, ಯಾವುದು ಸರಿ ಎಂದು ಚರ್ಚಿಸುತ್ತಿದ್ದೀರಿ! ನೀವು ಅವರನ್ನು ಶಂಕಿಸಬಾರದದಿತ್ತು, ಆದರೆ ಶಂಕಿಸಿದಿರಿ. ಆದ್ದರಿಂದ ನೀವೇ ದಯವಿಟ್ಟು ಒಳಗೆ ಹೋಗಿ
ನಿಜವೇನೆಂದು ತಿಳಿದುಕೊಳ್ಳಿ.’
ನಂತರ ಏನಾಯಿತು ಎಂಬುದನ್ನು ಒಬ್ಬೊಬ್ಬ ಗೈಡು ಒಂದೊಂದು ತರಹ ಹೇಳುತ್ತಾರೆ. ಕೆಲವರ ಪ್ರಕಾರ ನಾಯಕರಿಗೆ ಒಳ ಹೋಗಲು ಧೈರ್ಯವಾಗಲಿಲ್ಲವಂತೆ. ಇನ್ನು ಕೆಲವರ ಪ್ರಕಾರ ನಾಯಕರು ಒಳಹೋಗಿನೋಡಿದಾಗ ಲಿಂಗದ ತಲೆಯಲ್ಲಿ ಬಹಳ ಕೂದಲು ಇದ್ದದ್ದು ಕಾಣಿಸಿತಂತೆ. ಆಗ ಸುಬ್ಬಣ್ಣನವರು ನಾಯಕರಿಗೆ ಅದು ನಿಜವೇ ಎಂದು ಪರಿಶೀಲಿಸಿ ಎಂದರಂತೆ. ನಾಯಕರು ಕೂದಲು ಎಳೆದಾಗ ಐದಾರು ಎಳೆ ಕೈಗೆ ಬಂದಿತಂತೆ. ಆದರೆ ಲಿಂಗದ ತಲೆಯಮೇಲೆ ರಕ್ತವೂ ಕಾಣಿಸಿಕೊಂಡಿತಂತೆ.
ನಾಯಕರು ಹೆದರಿ ನಡುಗಲಾರಂಭಿಸಿದಾಗ ಅವರ ಕೈ ಹಿಡಿದುಕೊಂಡು ಸುಬ್ಬಣ್ಣನವರು ಅವರನ್ನು ಗರ್ಭಗುಡಿಯ ಹೊರಗೆ ಕರೆದುಕೊಂಡುಹೋದರಂತೆ. ನಾಯಕರು ವೀರಣ್ಣನವರ ಕ್ಷಮೆ ಕೇಳಿ ಗುಡಿಯಿಂದ ಹೊರಟುಹೋದರಂತೆ. ವೀರಣ್ಣನವರು ಒಂದು ಕಡೆ ಕುಳಿತು ತಮ್ಮನ್ನೇ ಹಳಿದುಕೊಳ್ಳಲು ಪ್ರಾರಂಭಿಸಿದರು ‘ಎಂತಹ ನೀಚ ನಾನು! ಆ ಶಿವನಿಗೇ ತೊಂದರೆ ಕೊಟ್ಟುಬಿಟ್ಟೆನಲ್ಲ! ನನಗೋಸ್ಕರ ಅವನು ತಲೆಯಲ್ಲಿ ಕೂದಲು ಬರೆಸಿಕೊಳ್ಳಬೇಕಾಯಿತಲ್ಲ! ಸುಬ್ಬಣ್ಣನವರೆ, ನಾನು ಎಂತಹ ಸ್ವಾರ್ಥಿ! ‘ಸುಬ್ಬಣ್ಣ ಅವರನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದರೂ ವೀರಣ್ಣನವರ ಕಣ್ಣೀರು ಹೆಚ್ಚಾಗುತ್ತಲೇ ಹೋಯಿತು.
ಅಂದು ಮಧ್ಹ್ಯಾನವೇ ವೀರಣ್ಣ ಕತ್ತಿಯಿಂದ ತಮ್ಮ ತಲೆಯನ್ನು ಕತ್ತರಿಸಿ ಹಾಕಿದರಂತೆ. ಸುಬ್ಬಣ್ಣನವರಿಗೆ ಬಹಳ ದುಃಖವಾಗಿ ಆಸ್ಥಾನದಲ್ಲಿ ಇನ್ನು ಮುಂದೆ ಹಾಡುವುದಿಲ್ಲ ಎಂದು ನಾಯಕರಿಗೆ ಹೇಳಿ ಕಳಿಸಿದರಂತೆ. ನಾಯಕರಿಗೂ ಬಹಳ ಪಶ್ಚಾತ್ತಾಪವಾಗಿ ವೀರಣ್ಣನವರ ವಿಗ್ರಹವೊಂದನ್ನು ಮಾಡಿಸಿ ಗುಡಿಯ ಮುಂದೆ ಪ್ರತಿಷ್ಟಾಪನೆ ಮಾಡಿಸಿದರಂತೆ. ದುರ್ಗದ ಅಸ್ತಮಾನ ಆವತ್ತಿನಿಂದಲೆ ಶುರುವಾಯಿತೆಂದು ಸ್ಥಳ ಪುರಾಣಿಕರು ಹೇಳುತ್ತಾರೆ. ಗೈಡುಗಳು ಈ ಕಥೆಯನ್ನುಎಷ್ಟು ಬಾರಿ ಹೇಳಿದ್ದಾರೋ ಏನೋ ! ಆದರೂ ಕಡೆಯಲ್ಲಿ ಅವರ ಕಣ್ಣಿನಲ್ಲೂ ನೀರಿರುತ್ತದೆ. ( ಒಂದು ದಶಕಕ್ಕೂ ಹಿಂದೆ ನಾನು ಬರೆಯುತ್ತಿದ್ದ ‘ಸುಲೇಖ’ ಎಂಬ ಆಂಗ್ಲ ಜಾಲತಾಣದಲ್ಲಿ ತರಾಸು ಅವರ ‘ಹಂಸಗೀತೆ’ಯನ್ನು ಸಂಕ್ಷಿಪ್ತವಾಗಿ ಹೇಳಲು ಪ್ರಯತ್ನಿಸಿದ್ದೆ. ಇದು ಮೊದಲನೆಯ ಭಾಗದ ಅನುವಾದ )






ಜಿ.ವಿ. ಅಯ್ಯರ್ ರವರು ಈ ಅತಿರಂಜಿತ ಕಥಾಭಾಗವನ್ನು ‘ಹಂಸಗೀತೆ’ಯಲ್ಲಿ ಸೇರಿಸಲಿಲ್ಲ.
ಹೌದು, ಸಿನೆಮಾದಲ್ಲಿ ಇದು ಇಲ್ಲ . ಧನ್ಯವಾದಗಳು
ಬಹಳ ಕುತೂಹಲಕಾರಿಯಾಗಿತ್ತು…! ಧನ್ಯವಾದಗಳು ಚೆಂದದ ಬರಹ ಕೊಟ್ಟಿರುವುದಕ್ಕೆ.
ಬಹಳ ಧನ್ಯವಾದಗಳು. ಮೂಲಕ್ಕೆ ‘ ಹಂಸಗೀತೆ’ ಓದಿ