
ಪಾರ್ವತಿ ಜಿ ಐತಾಳ್
‘ಚಿತ್ತರಂಗ’ ಖ್ಯಾತ ಕಥೆಗಾರ್ತಿ ಆಶಾ ರಘು ಅವರು ಇತ್ತೀಚೆಗೆ ಪ್ರಕಟಿಸಿರುವ ಅವರ ನಾಲ್ಕನೆಯ ಕಾದಂಬರಿ. ಚಲನಚಿತ್ರೋದ್ಯಮದ ಕುರಿತಾದ ಇದು ವಾಸ್ತವವಾದಿ ಶೈಲಿಯ ಕಾದಂಬರಿ. ಇಲ್ಲಿ ನಡೆಯುವ ಘಟನೆಗಳ ಹೊರಕವಚವು ವಾಸ್ತವದಲ್ಲಿ ಹಿಂದೆ ನಡೆದಂಥ ಸಂಗತಿಗಳೇ ಆಗಿರುವುದಾದರೂ ಒಳಹೂರಣ ತುಂಬಿರುವುದು ಲೇಖಕಿಯ ಕಲ್ಪನೆಗಳಿಂದ ಮಾತ್ರ. ಚಿತ್ರರಂಗದ ಒಳಗೆ ದುಡಿಯುವವರ ಚಿಂತನೆಗಳು,ಆಲೋಚನೆಗಳು, ಭಾವನೆಗಳು, ಚಿತ್ತ ಚಾಂಚಲ್ಯ ಮತ್ತು ಸಂಘರ್ಷಗಳ ಚಿತ್ತ ಕದಡುವ ಚಿತ್ರಣ ಇಲ್ಲಿದೆ. ಚಿತ್ರರಂಗಕ್ಕೆ ಸಂಬಂಧಿಸಿದ ನೂರಾರು ವಿಚಾರಗಳ ಕುರಿತು ಅವರ ಕಲ್ಪನೆಗಳು ಓಡುವ ರೀತಿ ಚಿತ್ರರಂಗದ ಹೊರಗಿರುವವರು ಹೋಗಲಿ, ಒಳಗಿರುವವರೂ ಮೂಗಿಗೆ ಬೆರಳೇರಿಸುವಷ್ಟು ಅದ್ಭುತವಾಗಿ ಬಂದಿವೆ.
ಪ್ರತಿಭಾವಂತ ಚಿತ್ರ ನಿರ್ದೇಶಕ ಸುಬ್ಬಣ್ಣನ ಸಂಪೂರ್ಣ ಹಿನ್ನೆಲೆಯ ವಿವರಗಳು ನಮಗೆ ಸಿಗುವುದು ಆತ ನೀಡುವ ಒಂದು ಪತ್ರಿಕಾ ಸಂದರ್ಶನದ ಮೂಲಕ. ಮುಂದೆ ಆತನ ಗರಡಿಯಲ್ಲಿ ಪಳಗಿ ಪ್ರಸಿದ್ಧ ನಟಿಯಾಗಿ ಬೆಳಗುವ ಕಸ್ತೂರಿಯೂ ಆತನಂತೆಯೇ ಬಡತನದ ಹಿನ್ನೆಲೆಯಿಂದ ಬಂದವಳು. ಇಬ್ಬರಿಗೂ ರಂಗಭೂಮಿಯ ಅನುಭವವೂ ಸಾಕಷ್ಟಿದೆ. ಆತನ ವ್ಯಕ್ತಿತ್ವದಿಂದ ಆಕರ್ಷಿತಳಾದರೂ ಆತ ವಿವಾಹಿತನಾಗಿದ್ದು ಮಕ್ಕಳೂ ಇದ್ದವನಾಗಿದ್ದರಿಂದ ವಿವಾಹ ಬಂಧನದಿಂದ ದೂರ ಉಳಿಯುತ್ತಾಳೆ ಕಸ್ತೂರಿ. ಖ್ಯಾತಿಯ ತುತ್ತತುದಿಯಲ್ಲಿದ್ದಾಗಲೇ ಆತನಿಂದ ಬೇರಾಗುತ್ತಾಳೆ ಕೂಡಾ. ತನ್ನಿಂದಲೇ ಆದ ಪ್ರಮಾದದಿಂದಾಗಿ ಚಿತ್ರರಂಗದ ಅವಕಾಶಗಳನ್ನು ಕಳೆದುಕೊಂಡು ಆರ್ಥಿಕ ನಿರ್ವಹಣೆಗೋಸ್ಕರ ನಾಟಕದ ನಟಿಯಾಗಿ ದಿನದೂಡುತ್ತಾಳೆ. ನಾಟಕದವನೊಬ್ಬನ ಸಂಗ ಮಾಡಿ, ಅವನನ್ನು ಮದುವೆಯಾಗಿ ಅದರಲ್ಲೂ ಮನ:ಶಾಂತಿ ಸಿಗದೆ ಆತ್ಮಹತ್ಯೆ ಮಾಡಿಕೊಂಡು ಬದುಕನ್ನು ಕೊನೆಗೊಳಿಸುತ್ತಾಳೆ.

ಅಷ್ಟು ಹೊತ್ತಿಗಾಗಲೇ ಸುಬ್ಬಣ್ಣನ ಬದುಕಿನಲ್ಲಿ ಇನ್ನೊಬ್ಬ ಪ್ರತಿಭಾವಂತ ನಟಿ ಅಹಲ್ಯಾಳ ಪ್ರವೇಶವಾಗಿ ಅವರಿಬ್ಬರ ನಡುವಣ ಸಂಬಂಧ ಗಾಢವಾಗುತ್ತದೆ. ಹೆಣ್ಣಿನ ಬಗ್ಗೆ ದೌರ್ಬಲ್ಯವಿಲ್ಲದವನಾದರೂ, ಹೆಂಡತಿಯನ್ನು ನೋಯಿಸಲು ಎಳ್ಳಷ್ಟೂ ಇಷ್ಪವಿಲ್ಲದವನಾಗಿದ್ದರೂ ಅಹಲ್ಯಾ ಜತೆಗಿನ ಅವನ ಸಂಬಂಧ ಅನೇಕ ತಿರುವುಗಳನ್ನು ಪಡೆಯುತ್ತದೆ. ಅವರ ಚಿತ್ರಬದುಕು ಏಳುಬೀಳುಗಳೊಂದಿಗೆ ಸಾಗುತ್ತದೆ. ಅಹಲ್ಯಳನ್ನು ಮದುವೆಯಾದರೂ ಅಪರಾಧಿ ಮನೋಭಾವ ಬಹುವಾಗಿ ಕಾಡಿ ಸುಬ್ಬಣ್ಣ ತನ್ನ ಸಂಪಾದನೆಯನ್ನೆಲ್ಲ ತನ್ನ ಮೊದಲ ಸಂಸಾರಕ್ಕೇ ಕೊಡುತ್ತಾನೆ. ಬರಬರುತ್ತ ಮೊದಲ ಹೆಂಡತಿಯ ಜತೆಗೇ ಕಾಲ ಕಳೆಯುತ್ತಾನೆ. ಕೊನೆಗೆ ತನ್ನ ಐವತ್ತಾರನೇ ವಯಸ್ಸಿನಲ್ಲೇ ಹೃದಯಸ್ತಂಭನದಿಂದ ಸಾಯುತ್ತಾನೆ.
ಕಾದಂಬರಿಯ ಕಥೆಯಲ್ಲಿ ತೀವ್ರವಾಗಿ ಕಾಡುವ ಅಥವಾ ಮನಸ್ಸನ್ನು ಕದಡುವ ಸನ್ನಿವೇಶಗಳೇನೂ ಇಲ್ಲ. ಪಾತ್ರಗಳ ಒಳತೋಟಿಯ ಚಿತ್ರಣಕ್ಕೇ ಇಲ್ಲಿ ಹೆಚ್ಚು ಪ್ರಾಧಾನ್ಯ ಕಲ್ಪಿಸಲಾಗಿದೆ. ಪಾತ್ರಗಳು ಅನುಭವಿಸುವ ಕಷ್ಟಗಳು, ಎದುರಿಸುವ ಸಮಸ್ಯೆಗಳು, ಸಂಕಷ್ಟಕರ ಸನ್ನಿವೇಶಗಳಲ್ಲಿ ಅವರ ಆಲೋಚನೆಗಳು, ಗಂಡು-ಹೆಣ್ಣಿನ ನಡುವಣ ಈಗೋ ಸಮಸ್ಯೆಗಳು, ಸಂಗಾತಿಯ ಬಗ್ಗೆ ಇಟ್ಟುಕೊಳ್ಳುವ ಅತಿಯಾದ ಪೊಸೆಸಿವ್ ಭಾವನೆಯಿಂದಾಗಿ ಹುಟ್ಟಿಕೊಳ್ಳುವ ವೈಮನಸ್ಸುಗಳು, ಸಮಾಜವು ನಂಬಿಕೊಂಡು ಆಚರಿಸುತ್ತ ಬಂದ ಪರಂಪರೆಯ ವಿರುದ್ಧ ಹೋದಾಗ ಕಾಡುವ ಅಪರಾಧಿ ಭಾವ_ ಇವುಗಳೆಲ್ಲದರ ಚಿತ್ರಣ ಕಾದಂಬರಿಯಲ್ಲಿ ಅತ್ಯಂತ ಮನೋಜ್ಞವಾಗಿ ಬಂದಿದೆ. ಚಿತ್ರರಂಗದ ಒಳಗಿನ ಅನುಭವಗಳು, ನಿರ್ದೇಶನ, ನಿರ್ಮಾಣ, ನಟನೆ ಹಾಗೂ ಚಿತ್ರವು ಸಿದ್ಧವಾಗಿ ಬರುವಲ್ಲಿಯ ವರೆಗಿನ ಎಲ್ಲಾ ಕೆಮಿಸ್ಟ್ರಿಯ ಬಗ್ಗೆ ಲೇಖಕರು ಬಹಳಷ್ಟು ಅಧ್ಯಯನ ಮತ್ತು ಪೂರ್ವ ತಯಾರಿ ಮಾಡಿದ್ದು ಕಾದಂಬರಿಯುದ್ದಕ್ಕೂ ಎದ್ದು ಕಾಣುತ್ತದೆ.

ಚಿತ್ರರಂಗವಾಗಲಿ ಅಂದಿನ ವೃತ್ತಿರಂಗಭೂಮಿಯಾಗಲಿ ಪುರುಷ ಪ್ರಧಾನ ಕ್ಷೇತ್ರಗಳು ಅನ್ನುವ ಸತ್ಯವನ್ನು ಕಾದಂಬರಿ ಮತ್ತೆ ಮತ್ತೆ ನೆನಪಿಸುತ್ತದೆ. ಹೆಣ್ಣು ಎಷ್ಟೇ ಪ್ರತಿಭಾವಂತಳಾದರೂ ಆಕೆಗೆ ಅಲ್ಲಿ ಸಿಗುವುದು ಎರಡನೇ ಸ್ಥಾನ. ಹೆಣ್ಣಿನ ಶೋಷಣೆ ಇಲ್ಲಿ ಅಲ್ಲಲ್ಲಿ ಕಾಣುತ್ತದೆ. ಕಲಾವಿದೆಯಾಗಬೇಕೆಂಬ ಮಹದಾಸೆ ಇಟ್ಟುಕೊಂಡು ಬರುವ ಹೆಣ್ಣುಮಕ್ಕಳನ್ನು ಸಮಾಜ ನಿಕೃಷ್ಟವಾಗಿ ಕಾಣುತ್ತದೆ ಮತ್ತು ಕ್ಷೇತ್ರದ ಒಳಗಿನವರು ಅವರನ್ನು ಬೇರೆ ಉದ್ದೇಶಗಳಿಗೆ ಬಳಸಿಕೊಳ್ಳುತ್ತಾರೆ. ಅವರು ನಿರ್ಮಾಪಣ ನಿರ್ದೇಶನದಂತಹ ಜವಾಬ್ದಾರಿಗಳನ್ನು ತೆಗೆದುಕೊಳ್ಳ ಬಯಸಿದರೆ ಅವರನ್ನು ಕೈಲಾಗದವರು, ವ್ಯವಹಾರ ಜ್ಞಾನವಿಲ್ಲದವರು ಎಂಬಂತೆ ನೋಡುತ್ತದೆ. ಈ ಎಲ್ಲ ಹುಳುಕುಗಳ ಮೇಲೆ ಲೇಖಕಿ ಬೆಳಕು ಚೆಲ್ಲಿದ್ದು ಕಾದಂಬರಿಯ ಧನಾತ್ಮಕ ಅಂಶ. ಅದರಲ್ಲಿ ಸುಬ್ಬಣ್ಣ ಪಾತ್ರದ ಹಿರಿಮೆಯೆಂದರೆ ಹೆಣ್ಣಿನ ವಿಚಾರದಲ್ಲಿ ಸಮಾಜದ ತಾರತಮ್ಯ ಧೋರಣೆಯ ಬಗ್ಗೆ ನ್ಯಾಯಪರವಾದ ಚಿಂತನೆ ಮಾಡುವ ಪ್ರಜ್ಞಾವಂತಿಕೆ. ಸುಬ್ಬಣ್ಣ ಇತರರಂತೆ ಹೆಣ್ಣಿನ ಹಿಂದೆ ಬೀಳುವುದಿಲ್ಲ, ಹೆಣ್ಣನ್ನು ಯಾವುದಕ್ಕೂ ಬಲವಂತ ಪಡಿಸುವುದಿಲ್ಲ . ಕೊನೆಯಲ್ಲಿ ಸಾಯುವುದಕ್ಕೆ ಮೊದಲು ಪತ್ನಿ ರಾಜೇಶ್ವರಿಗೆ ಆತ ಹೇಳಿದ ‘ನಾನು ಸತ್ತ ನಂತರ ನೀನು ತಾಳಿ, ಬಳೆ, ಕುಂಕುಮಗಳನ್ನು ಧರಿಸುವುದನ್ನು ಬಿಡಬಾರದು’ ಎಂಬ ಮಾತು ಆತನ ಸ್ತ್ರೀಸಂವೇದನೆಯ ಪ್ರತೀಕವಾಗಿ ನಿಲ್ಲುತ್ತದೆ.
ಸನ್ನಿವೇಶ ಸಂದರ್ಭಗಳಿಗೆ ಹೊಂದಿಕೊಳ್ಳುವ ಸೂಕ್ತ ಪದಗಳ ಬಳಕೆ ಮಾಡಿದ ಭಾಷಾ ಸೌಂದರ್ಯವು ಕಾದಂಬರಿಯ ಇನ್ನೊಂದು ಹೆಚ್ಚುಗಾರಿಕೆ. ಸರಳವಾದ ಕಥನಶೈಲಿ ಮತ್ತು ಪ್ರಧಾನ ಪಾತ್ರಗಳ ಆತ್ಮಕಥನದ ಮಾದರಿಯ ನಿರೂಪಣಾ ತಂತ್ರಗಳು ಓದುಗರಿಗೆ ಒಂದೇ ಗುಕ್ಕಿನ ಓದನ್ನು ಸಾಧ್ಯವಾಗಿಸುತ್ತದೆ.






0 Comments