
ಪಾರ್ವತಿ ಜಿ ಐತಾಳ್
ಪರಿಸರ ಪ್ರೀತಿ, ಪರಿಸರ ಕಾಳಜಿ ಮತ್ತು ಜೀವ ವೈವಿಧ್ಯದ ಬಗೆಗಿನ ಅಮಿತ ಕುತೂಹಲಗಳಿಂದ ತುಂಬಿದ ವಿಶಿಷ್ಟ ಕಾದಂಬರಿ ‘ಅಬ್ಬೆ’. ಇದು ಕೆಲವು ಸಿದ್ಧ ನಂಬಿಕೆಗಳನ್ನು ಒಡೆಯುವ ಕೃತಿಯೂ ಹೌದು. ಶಶಿಧರ ಹಾಲಾಡಿಯವರ ಎರಡನೇ ಕಾದಂಬರಿಯಿದು. ಸಾಹಿತ್ಯ ಪ್ರಿಯರಿಗೆ ಖುಷಿ ಕೊಡುವಂಥ ರೀತಿಯಲ್ಲಿ ವಿಜ್ಞಾನದ ವಿಷಯಗಳನ್ನು ಒಂದು ವಾಸ್ತವದ ಸ್ಪರ್ಶವಿರುವ ಕಾಲ್ಪನಿಕ ಗ್ರಾಮೀಣ ಪ್ರದೇಶದಲ್ಲಿ ನಡೆಯುವ ಘಟನೆಗಳೊಂದಿಗೆ ಹದವಾಗಿ ಹೊಸೆದು ಓದುಗರಿಗೆ ಒಂದು ಹೊಸ ಲೋಕವನ್ನು ಲೇಖಕರು ಇಲ್ಲಿ ಕಟ್ಟಿ ಕೊಟ್ಟಿದ್ದಾರೆ. ತೇಜಸ್ವಿಯವರ ನಂತರ ಕನ್ನಡ ಸಾಹಿತ್ಯದಲ್ಲಿ ಈ ಶೈಲಿಯ ಕಾದಂಬರಿ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲು.
ಹೊಸದಾಗಿ ಬ್ಯಾಂಕ್ ನೌಕರಿಗೆ ಸೇರಿದ ಶಿವರಾಂ ಎಂಬ ಯುವಕ ಈ ಕಥನದ ನಿರೂಪಕ. ಉತ್ತಮ ಪುರುಷದಲ್ಲೇ ನಿರೂಪಣೆ ಸಾಗುತ್ತದೆ. ಅರಸೀಕೆರೆಯ ಸಮೀಪದ ಕಲ್ಕೆರೆ ಅನ್ನುವ ಹಳ್ಳಿಯೊಂದರ ಬ್ರಾಂಚ್ ಆಗಿದ್ದು ನಿರೂಪಕ ಅಲ್ಲಿಗೆ ಹೋಗುವ ದಿನದಿಂದ ಹಿಡಿದು ಅಲ್ಲಿಂದ ಪೋರ್ಟ್ ಬ್ಲೇರಿಗೆ ವರ್ಗವಾಗಿ ಹೋಗುವ ದಿನದ ತನಕದ ನಾಲ್ಕು ತಿಂಗಳುಗಳ ಕಾಲದ ಅನುಭವಗಳನ್ನು ಕಾದಂಬರಿ ಚಿತ್ರಿಸುತ್ತದೆ. ಕರಾವಳಿಯಲ್ಲಿ ಹುಟ್ಟಿ ಬೆಳೆದ ಶಿವರಾಂಗೆ ಬಯಲು ಸೀಮೆಯ ಬದುಕು ಹೊಸದು. ಜೀವ ವಿಜ್ಞಾನದಲ್ಲಿ ಬಿ.ಎಸ್.ಸಿ ಮಾಡಿದ ಅವನಿಗೆ ಬ್ಯಾಂಕಿಂಗ್ ಕ್ಷೇತ್ರವೂ ತೀರಾ ಹೊಸದು. ಆದರೆ ಹೊಸದೆಲ್ಲವನ್ನೂ ತಿಳಿಯುವ ಅದಮ್ಯ ಕುತೂಹಲ, ಕಲಿಯುವ ಉತ್ಸಾಹ ಮತ್ತು ಗ್ರಹಿಸುವ ಜಾಣ್ಮೆ ಅವನಲ್ಲಿದೆ.

ಸರಳ ಸಜ್ಜನ ಸಾತ್ವಿಕ ಸ್ವಭಾದವನೂ ನಿಗರ್ವಿಯೂ ಹುಸಿ ಪ್ರತಿಷ್ಠೆ ಇಲ್ಲದವನೂ ಆದ ಅವನು ಹಳ್ಳಿಯಲ್ಲಿ ಹಲವರ ಸ್ನೇಹ ಸಂಪಾದಿಸುತ್ತಾನಾದರೂ ಬ್ಯಾಂಕಿನ ಒಳಗಿನ ಮಂದಿಯ ರಾಜಕೀಯದಿಂದಾಗಿ ಏನು ಮಾಡುವುದೆಂದು ತಿಳಿಯದೆ ಒದ್ದಾಡುತ್ತಾನೆ. ಅದರಲ್ಲೂ ಬ್ಯಾಂಕಿನ ಸ್ಯಾಡಿಸ್ಟ್ ಸ್ವಭಾವದ ಹಾಗೂ ಹಲವು ರೀತಿಯಲ್ಲಿ ತನ್ನ ಅಧಿಕಾರವನ್ನು ದುರ್ಬಳಕೆ ಮಾಡುವ ಮ್ಯಾನೇಜರ್ ಅವನನ್ನು ವಿನಾಕಾರಣ ಬೈದು ಭಂಗಿಸಿ ಹಂಗಿಸಿ ಅಧಿಕಾರ ಚಲಾಯಿಸುತ್ತಾನೆ. ಕ್ಯಾಷಿಯರ್ ತನ್ನ ಯಾವುದೋ ಲಾಭಕ್ಕೋಸ್ಕರ ಶಿವರಾಂನನ್ನು ಬೆಂಬಲಿಸುತ್ತಿರುತ್ತಾನೆ. ಉದ್ಯೋಗ ಸ್ಥಳದಲ್ಲಿ ಸೃಷ್ಟಿಯಾಗುವ ಭಯ, ಆತಂಕ ತಲ್ಲಣಗಳಿಂದ ಶಿವರಾಂಗೆ ಒಂದೇ ಒಂದು ಹೊರದಾರಿಯೆಂದರೆ ಪರಿಸರ ವೀಕ್ಷಣೆಯ ಅವಕಾಶ.
ಕಾಲೇಜು ಪ್ರಿನ್ಸಿಪಾಲ್ ಹಾಗೂ ಪರಿಸರ ಸಂಶೋಧಕ ಡಾ.ಕಲ್ಲೂರಾಯ, ಬ್ಯಾಂಕಿನ ತಾತ್ಕಾಲಿಕ ಕೆಲಸಗಾರ ಭಾಸ್ಕರ ಮತ್ತು ಅತವನು ಕ್ರಿಕೆಟ್ ಆಡುವ ಊರಿನ ಪಡ್ಡೆ ಹುಡುಗರ ಜತೆಗೂಡಿ ಗರುಡನಗಿರಿ ಬೆಟ್ಟ -ಹಿರೇಕಲ್ಲು ಗುಡ್ಡಗಳಂಥ ಪರಿಸರ ಸಮೃದ್ಧ ಸ್ಥಳಗಳಿಗೆ ಭೇಟಿ ನೀಡಿ ಅಲ್ಲಿ ಕಾಣುವ ಅಪರೂಪದ ಗಿಡ ಮರ ಪ್ರಾಣಿ ಪಕ್ಷಿಗಳನ್ನು ನೋಡುವುದು. ಪುತ್ರಜಾಜಿ ಮರವೆಂಬ ವಿಶಿಷ್ಟ ಜಾತಿಯ ಮರ , ಫ್ಲಾಮಿಂಗೋ ಹಕ್ಕಿ, ವಿಚಿತ್ರವಾಗಿ ಕೂಗುವ ಗೂಬೆ, ಮರಕುಟುಕ ಹಕ್ಕಿಗಳನ್ನು ಅವನು ನೋಡಿ ಖುಷಿ ಪಡುವುದು ಅಲ್ಲೇ. ಗರುಡನಗಿರಿ ಮತ್ತು ಹಿರೇಕಲ್ಲು ಗುಡ್ಡಗಳ ಬುಡದಲ್ಲಿ ರಿಸರ್ವ್ ಫಾರೆಸ್ಟ್ ಎಂಬ ಬಹಳ ಹಳೆಯ ಬೋರ್ಡ್ ಇತ್ತಾದರೂ ಅಲ್ಲಿ ಗಿಡಗಳೇ ಬೆಳೆಯದಂತೆ ಮೇಕೆಗಳನ್ನು ಮೇಯಿಸುವ ಊರ ಮಂದಿಯ ನಿರ್ಲಕ್ಷ್ಯಕ್ಕೆ ಅವನು ನೊಂದುಕೊಳ್ಳುತ್ತಾನೆ. ಮಾತ್ರವಲ್ಲದೆ ಕಲ್ಲೂರಾಯರ ಸೂಚನೆಯಂತೆ ಆ ಬಗ್ಗೆ ಪತ್ರಿಕೆಗೂ ಬರೆದು ಮುಂದೆ ಸರಕಾರವು ಆ ಬಗ್ಗೆ ಕ್ರಮ ಕೈಗೊಳ್ಳುವುದಕ್ಕೆ ಪ್ರೇರಣೆಯಾಗುತ್ತಾನೆ.
ಕಲ್ಕೆರೆಗೆ ಹೋದ ಆರಂಭದಲ್ಲೇ ಕೆಂಚಪ್ಪ ಎಂಬವನ ಕೈಯಲ್ಲಿ ನೋಡಿದ ಪೆಂಗೋಲಿನ್ (ಚಿಪ್ಪು ಹಂದಿ) ಎಂಬ ಪ್ರಾಣಿಯನ್ನು ನೋಡಿದ ಶಿವರಾಂನ ಮೇರೆ ಮೀರಿದ ಕುತೂಹಲವು ಮುಂದೆ ಹಳ್ಳಿಯಲ್ಲಿ ಗುಟ್ಟಾಗಿ ನಡೆಯುತ್ತಿದ್ದ ವನ್ಯಜೀವಿಗಳ ಅಕ್ರಮ ಸಾಗಾಟದ ದ ಧಂಧೆ, ಮರಗಳನ್ನು ಕಡಿದು ಮಾಡುತ್ತಿದ್ದ ಕಳ್ಳಸಾಗಣೆಗಳ ಬಗ್ಗೆ ತಿಳಿಯುವಂತೆ ಮಾಡುತ್ತದೆ. ಅಬ್ಬೆ ಎಂಬ ವಿಷಕಾರಿ ಜೇಡ ಕಚ್ಚಿ ಜನರು ಸಾಯುತ್ತಿದ್ದಾರೆಂದು ಜನರಲ್ಲಿ ಹುಟ್ಟಿಕೊಂಡ ನಂಬಿಕೆಯ ಬಗ್ಗೆ ಅವನ ಜಿಜ್ಟಾಸೆ ಬೆಳೆಯುತ್ತದೆ. ಆದರೆ ಜನರು ಸತ್ತ ಸ್ಥಳಗಳಲ್ಲೆಲ್ಲೂ ಅಂಥ ಜೇಡವನ್ನು ಇದುವರೆಗೆ ಯಾರೂ ನೋಡಿಲ್ಲವೆನ್ನುವುದು ಅವರ ಸಾವಿಗೆ ಕಾರಣ ಅಬ್ಬೆ ಹೌದೇ ಅಲ್ಲವೇ ಎಂಬ ಸಂಶಯವನ್ನು ಅವನಲ್ಲಿ ಹುಟ್ಟುಹಾಕುತ್ತದೆ. ಈ ಬಗ್ಗೆ ಸಂಶೋಧನೆ ನಡೆಯ ಬೇಕಾಗಿದೆಯೆಂದು ಕಲ್ಲೂರಾಯರ ಜತೆಗೆ ಅವನು ಮಾತನಾಡುತ್ತಾನೆ. ಇಂಥ ಅನೇಕ ವಿಷಯಗಳಲ್ಲಿ ಅವನು ತೋರಿಸುತ್ತಿದ್ದ ಆಸಕ್ತಿ, ನೂರಾರು ಪ್ರಶ್ನೆಗಳನ್ನು ಕೇಳಿ ಬಲ್ಲ ಮೂಲಗಳಿಂದ ಮಾಹಿತಿಗಳನ್ನು ಕಲೆ ಹಾಕುವ ಅವನ ಪ್ರವೃತ್ತಿಗಳು ಕಳ್ಳತನದಿಂದ ತಮ್ಮ ಸ್ವಾರ್ಥ ಸಾಧಿಸುತ್ತಿದ್ದ ಹಲವರಿಗೆ ಇಷ್ಟವಾಗುವುದಿಲ್ಲ.. ಹಾಗೆ ಊರವರ ಜತೆಗೆ ಸಂಚು ನಡೆಸಿ ಮ್ಯಾನೇಜರ್ ಮಾಡಿದ ಕುತಂತ್ರಕ್ಕೆ ಬಲಿಯಾಗಿ ಪ್ರೊಬೇಷನರಿ ಅವಧಿಯ ನಾಲ್ಕು ತಿಂಗಳುಗಳು ಮುಗಿಯುವಷ್ಟರಲ್ಲಿ ಶಿವರಾಂ ಅಂಡಮಾನಿಗೆ ವರ್ಗವಾಗಿ ಹೋಗಬೇಕಾಗುತ್ತದೆ.

ಇಲ್ಲಿ ಎರಡು ವಿಷಯಗಳಲ್ಲಿ ಲೇಖಕರು ಸಿದ್ಧ ನಂಬಿಕೆಗಳನ್ನು ಮುರಿಯುತ್ತಾರೆ. ಒಂದು ಪ್ರಕೃತಿಯ ಮಡಿಲಲ್ಲಿ ಬೆಳೆಯುವ ಗ್ರಾಮೀಣ ಪ್ರದೇಶದ ಮಂದಿ ಪ್ರಕೃತಿಯಂತೆಯೇ ಮುಗ್ಧರೂ ಸತ್ಯನಿಷ್ಠರೂ ಆಗಿರುತ್ತಾರೆಂಬುದು. ಕಲ್ಕೆರೆಯಲ್ಲಿ ಕಾಣುವ ನಿಗೂಢ ಲೋಕ ನಾಗರಿಕ ಜಗತ್ತಿನ ಯಾವುದೇ ಭೂಗತ ಜಗತ್ತಿಗೆ ಕಡಿಮೆಯಿಲ್ಲ. ಇನ್ನೊಂದು : ಮಹಿಳೆಯನ್ನು ಈ ಜಗತ್ತು ಅಮಾಯಕಳು, ಅತ್ಯಾಚಾರಕ್ಕೆ ಒಳಗಾಗುವವಳು ಹಾಗೂ ಶೋಷಿಸಲ್ಪಟ್ಟವಳು ಎಂದು ನಂಬಿದೆ. ಆದರೆ ಇಲ್ಲಿ ಸದಾಶಿವನ ಹೆಂಡತಿ ತನ್ನ ಗಂಡನ ಮರಣಾನಂತರ ಪರಪುರುಷರೊಂದಿಗೆ ರಾಜಾರೋಷವಾಗಿ ತಿರುಗಾಡುವುದಲ್ಲದೆ ಮ್ಯಾನೇಜರ್ ಜತೆಗೆ ಸಂಚುಹೂಡಿ ಶಿವರಾಂ ಮೇಲೆ ಅಸಭ್ಯ ವರ್ತನೆಯ ಆರೋಪ ಹೊರಿಸಿ ಅವನನ್ನು ಅಸಹಾಯಕ ಸ್ಥಿತಿಗೆ ತಳ್ಳುತ್ತಾಳೆ.
ನಿರೂಪಕನ ಮನಸ್ಸಿನಲ್ಲಿ ಏಳುವ ನೂರು ಪ್ರಶ್ನೆಗಳಿಗೆ ಕೊನೆಯ ವರೆಗೂ ಉತ್ತರವೇ ಸಿಗದಿರುವ ಒಂದು ನಿಗೂಢ ಲೋಕವನ್ನು ಕಾದಂಬರಿಯ ಉದ್ದಕ್ಕೂ ನಾವು ಕಾಣುತ್ತೇವೆ. ಗರುಡನಗಿರಿ ಬೆಟ್ಟದಲ್ಲಿ ಕಾಣುವ ಪಾಳುಬಿದ್ದ ಬ್ರಿಟಿಷ್ ಬಂಗಲೆ, ಕೆಂಚಪ್ಪನ ಗುಡಿಸಲು, ಸಂನ್ಯಾಸಿ ಮಠ, ನಿರೂಪಕನ ತಂಡವು ಭೇಟಿಯಾಗುವ ನಗುಮುಖದ ಸ್ವಾಮಿಗಳು, ದಟ್ಟ ಕಾಡಿನ ಕತ್ತಲು, ನಿಶ್ಶಬ್ದ ವಾತಾವರಣ, ರಾತ್ರಿ ಹೊತ್ತು ದೊಂದಿಯ ಬೆಳಕಿನಲ್ಲಿ ಕೆರೆಯ ಏರಿಯ ಮೇಲಿನ ಮರಗಳನ್ನು ಹೊಡೆದುರುಳಿಸಿ ಸಾಗಿಸುವ ಕೃತ್ಯ, ಆಶ್ರಯವನ್ನು ಕಳೆದುಕೊಂಡ ನೂರಾರು ಕೊಕ್ಕರೆಗಳ ಆರ್ತನಾದ, ಭರಮಪ್ಪನನ್ನು ಕರಡಿ ಎಳೆದುಕೊಂಡು ಹೋಗಿ ಸಾಯಿಸಿದ ಸುದ್ದಿ, ಕಚ್ಚಿದ ಹಾವುಗಳನ್ನು ಕಂಡ ಕಂಡಲ್ಲಿ ಚಚ್ಚಿ ಸಾಯಿಸುವ ಜನರ ಕ್ರೌರ್ಯ- ಹೀಗೆ ಹೃದಯ ವಿದ್ರಾವಕ ದೃಶ್ಯಗಳ ಮೆರವಣಿಗೆ ಸಾಗುತ್ತದೆ. ಇವು ಕಾದಂಬರಿಗೊಂದು ಮಾಯಾವಾಸ್ತವದ ಗುಣವನ್ನೂ ಕೊಡುತ್ತವೆ.
ಇಡೀ ಕಾದಂಬರಿ ಪ್ರೀತಿ ಪ್ರೇಮಗಳಂತಹ ಯಾವುದೇ ರೀತಿಯ ನವಿರಾದ ಭಾವನಾತ್ಕಕ ಅಥವಾ ಮನುಷ್ಯ ಸಂಬಂಧಗಳ ದುರಂತ ಕಥೆ ಇಲ್ಲದೆಯೂ ತನ್ನ ಸುಂದರ ಕಥನ ಶೈಲಿಯಿಂದ ಓದುಗರನ್ನು ಹಿಡಿದಿರಿಸುತ್ತದೆ. ಒಂದೇ ಓಟಕ್ಕೆ ಓದಿಸಿಕೊಂಡು ಹೋಗುತ್ತದೆ. ಪ್ರಕೃತಿ ಪರಿಸರಗಳ ವರ್ಣನೆಯ ಸಂದರ್ಭ ಬಂದಾಗಲೆಲ್ಲ ಲೇಖಕರ ಚಿತ್ರಕ ಸಾಮರ್ಥ್ಯ ಗರಿಗೆದರುತ್ತದೆ. ಸ್ಥಳಗಳನ್ನಾಗಲಿ ವ್ಯಕ್ತಿಗಳನ್ನಾಗಲಿ ಚಿತ್ರಿಸುವಾಗ ಚಿತ್ರಗಳು ಸ್ಪಷ್ಟವಾಗಿ ಓದುಗನ ಕಣ್ಣಿಗೆ ಕಟ್ಟುವಂತಿರುತ್ತವೆ. ಆದ್ದರಿಂದಲೇ ಅಬ್ಬೆ ಓದುಗರ ಮನಸ್ಸನ್ನು ಗೆಲ್ಲ ಬಲ್ಲ ಒಂದು ಯಶಸ್ವಿ ಕೃತಿಯೆಂದು ನಿಸ್ಸಂದೇಹವಾಗಿ ಹೇಳಬಹುದು.






0 Comments