ಶ್ರೀಹರ್ಷ ಸಾಲಿಮಠ
ಅಂಬೇಡ್ಕರ್ ಜಯಂತಿಯ ದಿನ ಶ್ರೇಷ್ಠ ಕ್ರಿಕೆಟಿಗ ಪಲ್ವಂಕರ್ ಬಾಲೂ ಅವರ ಬಗ್ಗೆ.
ಲಗಾನ್ ಚಿತ್ರದ “ಕಚರಾ” ಪಾತ್ರ ಎಲ್ಲರಿಗೂ ನೆನಪಿರಬಹುದು. ಇದರ ಪ್ರೇರಣೆ ಬಿ ಎಸ್ ಚಂದ್ರಶೇಖರ್ ಎಂದು ಎಲ್ಲರೂ ಅಂದುಕೊಂಡಿರುವುದು ಸರಿಯಷ್ಟೇ. ಆದರೆ ಅದು ಅರ್ಧ ಮಾತ್ರ ಮೂಲತಃ ಅದರ ಪ್ರೇರಣೆ “ಪಲ್ವಂಕರ್ ಬಾಲೂ” ಅವರದ್ದು.
ಪಲ್ವಂಕರ್ ಬಾಲೂ ನಮ್ಮ ಧಾರವಾಡದಲ್ಲಿ ದಲಿತ ಕುಟುಂಬದಲ್ಲಿ ೧೮೭೬ ರಲ್ಲಿ ಜನಿಸಿದರು. ನಂತರ ಅವರ ಕುಟುಂಬ ಪುಣೆಗೆ ವಲಸೆ ಹೋಗಿ ಅಲ್ಲಿನ ಕ್ರಿಕೆಟ್ ಮೈದಾನವೊಂದರಲ್ಲಿ ಕಸ ಹೊಡೆಯುವ ಕೆಲಸಕ್ಕೆ ಸೇರಿಕೊಂಡರು. ಆಗಿನ ಕ್ರಿಕೆಟರ್ ಜೆ ಜಿ ಗ್ರೇಗ್ ಒಂದು ದಿನ ಪ್ರಾಕ್ಟೀಸ್ ಮಾಡಲು ಬೌಲರ್ ಗಳಿಲ್ಲದೇ ಕಸ ಬಳಿಯುತ್ತಿದ್ದ ಪಲ್ವಂಕರ್ ನನ್ನು ಕರೆದು ತಮಗೆ ಬೌಲ್ ಮಾಡಲು ಹೇಳಿದರು. ಬಾಲೂ ಅವರ ಸ್ಪಿನ್ ಬಾಲಿಂಗ್ ಪ್ರತಿಭೆ ನೋಡಿ ಅವಾಕ್ಕಾಗಿ ನಿಂತರು. ಅನೇಕ ದಿನಗಳವರೆಗೆ ಗ್ರೇಗ್ ಬಲೂ ನ ಬಳಿ ಬೌಲಿಂಗ್ ಮಾಡಿಸಿಕೊಂಡು ತಮ್ಮ ಬ್ಯಾಟಿಂಗ್ ಬಲಪಡಿಸಿಕೊಂಡರು. ಪ್ರತಿ ಬಾರಿ ತಮ್ಮನ್ನು ಔಟ್ ಮಾಡಿದಾಗ ಬಲೂಗೆ ಎಂಟಾಣೆಯನ್ನು ಕೊಡುತ್ತಿದ್ದರು.
ಬಲೂ ಪ್ರತಿಭೆ ವೇಗವಾಗಿ ಜಗತ್ತಿಗೆ ತಿಳಿಯತೊಡಗಿತು. ಆಗ ರಾಷ್ಟ್ರಮಟ್ಟದಲ್ಲಿ ಯುರೋಪ್ ಟೀಂ ಜೊತೆ ನಾಲ್ಕು ಪ್ರಮುಖ ಟೀಂಗಳು ಆಡುತ್ತಿದ್ದವು. ಹಿಂದೂ, ಮುಸ್ಲಿಂ, ಪಾರಸಿ ಮತ್ತು ಇತರೆ ತಂಡ.

ಅದರಲ್ಲಿ ದುರ್ಬಲವಾಗಿದ್ದುದು ಹಿಂದೂ ತಂಡ. ಬಲೂ ಅವರನ್ನು ಸೇರಿಸಿಕೊಂಡರೆ ತಮ್ಮ ತಂಡ ಬಲವಾಗುತ್ತದೆ ಎಂದು ಹಿಂದೂ ತಂಡ ಕಂಡುಕೊಂಡಿತು. ಬಾಲೂನನ್ನು ತಂಡಕ್ಕೆ ಸೇರಿಸಿಕೊಳ್ಳಲಾಯಿತು. ಆದರೆ ಸಾಮಾಜಿಕ ಅಸಮತೋನ ಅಲ್ಲಿ ಅವರನ್ನು ಅಲ್ಲೂ ಬೆಂಬಿಡದೆ ಕಾಡಿತು. ಅವರಿಗೆ ಬೇರೆ ತಟ್ಟೆ ಲೋಟಗಳನ್ನು ಇಡಲಾಗಿತ್ತು. ಎಲ್ಲರ ಜೊತೆ ಕೂರದೆ ಹೊರಗಡೆ ಕೂತು ಊಟಮಾಡಬೇಕಿತ್ತು. ಅವರಿಗೆ ಬಾಲ್ ಹಸ್ತಾಂತರಿಸುವಾಗ ಚೆಂಡನ್ನು ನೆಲಕ್ಕೆ ಹಾಕಿ ಕಾಲಿನಿಂದ ಅವರ ಕಡೆ ನೂಕಲಾಗುತ್ತಿತ್ತು. ಪ್ರತಿ ಬಾರಿ ವಿಕೆಟ್ ತೆಗೆದಾಗ ಮೇಲ್ಜಾತಿಯವರು ಮಾತ್ರ ಒಬ್ಬರನ್ನೊಬ್ಬರು ತಟ್ಟಿಕೊಂಡು ಸಂಭ್ರಮಿಸುತ್ತಿದ್ದರು. ವಿಕೆಟ್ ತೆಗೆದ ಬಾಲೂ ದೂರದಲ್ಲಿ ನಿಂತು ನೋಡುತ್ತಿದ್ದರು. ಆದರೆ ಬಲೂ ಇದಾವುದಕ್ಕೂ ತಲೆ ಕೆಡಿಸಿಕೊಳ್ಳದೆ ವಿಕೆಟ್ ಮೇಲೆ ವಿಕೆಟ್ ತೆಗೆದು ಇಂಡಿಯಾದ ಅತ್ಯುತ್ತಮ ಸ್ಪಿನ್ನರ ಎನಿಸಿಕೊಂಡರು. ಕೆಲವು ದಾಖಲೆಗಳ ಪ್ರಕಾರ ಬಾಲೂ ಸ್ಪಿನ್ ಬೌಲಿಂಗ್ ಮಾಡುವಾಗ ಚೆಂಡಿನಿಂದ “ಗರ್‌ರ್ರ್…” ಎಂದು ಸದ್ದು ಬರುತ್ತಿತ್ತಂತೆ!
ಬಲೂ ಅಸ್ಪೃಷ್ಯತೆಯ ನಿವಾರಣೆಯಲ್ಲಿ ಇಂಡಿಯಾದಲ್ಲಿ ಹೊಸ ಕ್ರಾಂತಿಯನ್ನೇ ತಂದರು. ಪಟಿಯಾಲಾದ ಮಹಾರಾಜ ತನ್ನ ಕ್ರಿಕೆಟ್ ತಂಡವನ್ನು ಕಟ್ಟುವಾಗ ಪಲ್ವಂಕರ್ ಬಾಲೂರನ್ನು ಸೇರಿಸಿಕೊಂಡರು. ಮಹಾರಾಜಾ ರಣಜಿತ್ (ಇವರ ಹೆಸರಲ್ಲೇ ರಣಜಿ ಟ್ರೋಫಿ ನಡೆಯುವುದು) ನಂತರ ಇಂಡಿಯಾ ತಂಡದ ಪರವಾಗಿ ಇಂಗ್ಲೆಂಡ್ ನಲ್ಲಿ ಆಡಿದ ಕ್ರಿಕೆಟರ್ ಪಲವಂಕರ್ ಬಲೂ!
ಅತ್ಯಂತ ಹಿರಿಯ ಮತ್ತು ಪ್ರತಿಭಾವಂತ ಕ್ರಿಕೆಟಿಗರಾಗಿದ್ದರೂ ಬಲೂ ಗೆ ತಂಡದ ನಾಯಕತ್ವವನ್ನು ಕೊಡಲಾಗಲಿಲ್ಲ. ಕೆಳಜಾತಿಯವನ ನಾಯಕತ್ವದಲ್ಲಿ ಆಡಲು ಮೇಲ್ಜಾತಿಯವರು ಒಪ್ಪಲಿಲ್ಲ. ಆದರೆ ಇವರ ತಮ್ಮ ವಿಠ್ಠಲ್ ಪಲ್ವಂಕರ್ ಇವರದೇ ದಾರಿಯಲ್ಲಿ ನಡೆದು ಮುಂದೆ ಹಿಂದೂ ತಂಡದ ನಾಯಕರಾದರು. ಅವರನ್ನು ಮೇಲ್ಜಾತಿಯ ಹಿಂದೂಗಳು ಹೆಗಲ ಮೇಲೆ ಹೊತ್ತುಕೊಂಡು ಮೆರವಣಿಗೆ ಮಾಡಿದರು! ಇದು ನಡೆದದ್ದು ೧೯೨೦ ರಲ್ಲಿ! ಗಾಂದಿಜಿ ಅಸ್ಪೃಶ್ಯತೆಯ ವಿರುದ್ಧ ಆಂದೋಲನ ನಡೆಸುವ ದಶಕಗಳ ಮೊದಲು! ಕ್ರಿಕೆಟ್ ಪ್ರತಿಭೆ ದಲಿತರನ್ನು ಸಾಮಾಜಿಕ ಹೋರಾಟಕ್ಕಿಂತಲೂ ಮುಂಚೆಯೇ ಬಿಡುಗಡೆಯ ಕಡೆ ಮುನ್ನಡೆಸಿತ್ತು.

ನಿವೃತ್ತಿಯ ನಂತರ ಬಲೂ ಅಂಬೇಡ್ಕರರ ಜೊತೆಗೆ ಸಾಕಷ್ಟು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡರು. ಅಸ್ಪೃಷ್ಯತೆಯ ನಿವಾರಣೆಗೆ ಸಾಕಷ್ಟು ಕೊಡುಗೆಯನ್ನು ನೀಡಿದರು.
ಪಲ್ವಂಕರ್ ಬಾಲೂ ಭಾರತೀಯ ದಲಿತರ ಮೇಲೇಳಿಗೆಯಲ್ಲಿ ಬಂದ ಮೊಟ್ಟಮೊದಲ ರೋಮಾಂಚಕ “ಸಾಮಾಜಿಕ ತಿರುವು” ಅಂತ ತಜ್ಙರು ವಿಶ್ಲೇಷಿಸುತ್ತಾರೆ. ಪಲ್ವಂಕರ್ ಬಾಲೂ ಭಾರತೀಯ ಕ್ರಿಕೆಟ್ ಇತಿಹಾಸ ಮಾತ್ರವಲ್ಲ ಅಸ್ಪೃಶ್ಯತೆಯ ನಿವಾರಣೆಯಲ್ಲೂ ಸಹ ಮೈಲಿಗಲ್ಲು!






0 Comments