ನಾಗೇಶ್ ಕಾಳೇನಹಳ್ಳಿ
ಮೊನ್ನೆ ಗುರುವಾರ ಸಂಜೆ ಪ್ರೆಸ್ ಕ್ಲಬ್ಬಿನಲ್ಲಿ ನಾನು, ಜಗಣ್ಣ, ಸಿದ್ದ ಸೇರಿದ್ದೆವು. ಮಾತಿನ ಮಧ್ಯೆ ಕೆ.ಬಿ. ಹೆಂಗೌರಂತೆ ಗುರೂ ಅಂದ ಜಗಣ್ಣ. ಇನ್ನೂ ವೆಂಟಿಲೇಟರ್ ನಲ್ಲಿದ್ದಾರಂತೆ, ಮೊನ್ನೆ ಸಿ.ಎಸ್.ದ್ವಾರಕನಾಥ್ ಹೋಗಿ ಬಂದಾಗ ಹೇಳಿದ್ರು. ಇಷ್ಟು ದಿವಸ ಆದ್ರೂ ವಾರ್ಡ್ ಗೂ ಶಿಫ್ಟ್ ಆಗಿಲ್ಲಾ ಅಂದ್ರೆ ಕಷ್ಟ ಇರಬೇಕು ಅಂದೆ. ಅವನ ಮುಖ ಕ್ಷಣಾರ್ಧದಲ್ಲಿ ಬಾಡಿತು. ಕೆ.ಬಿ ಮಗನಿಗೆ ಫೋನ್ ಮಾಡಿ ವಿಚಾರಿಸಿದ. ಈಗ ಪರವಾಗಿಲ್ಲವೆಂಬ ಸಮಾಧಾನದ ಉತ್ತರ ಬಂತು.
*****
ಕೆ.ಬಿ. ಬಗ್ಗೆ ಮಾತನಾಡಿಕೊಂಡು ಹೋಗಿ ಬೆಳಗಾಗುವಷ್ಟರಲ್ಲಿ ಅವರು ಇನ್ನಿಲ್ಲವೆಂಬ ಸುದ್ದಿ ಫೋನ್ ಇನ್ ಬಾಕ್ಸ್ ನಲ್ಲಿ ಬಂದಿತ್ತು. “ಕೆ.ಬಿ. ಹೋಗ್ಬಿಟ್ರಂತೆ” ಎಂಬ ಮೆಸೇಜ್ ಅಗ್ರಹಾರ ಕೃಷ್ಣಮೂರ್ತಿ ಕಳಿಸಿದ್ದರು. ಜಗಣ್ಣ ಕೆ.ಬಿ.ಸಾವಿನ ಸುದ್ದಿ ಹೊತ್ತ ವಿಜಯವಾಣಿಯ ನ್ಯೂಸ್ ಕ್ಲಿಪ್ ರವಾನಿಸಿದ್ದ. ಮಾಮೂಲಿಗಿಂತ ಕೊಂಚ ತಡವಾಗಿ ಎದ್ದಿದ್ದ ನಾನು ಕಚೇರಿಗೆ ಫೋನ್ ಮಾಡಿ ರಜೆ ಹೇಳಿ ತುಮಕೂರಿನ ಕಡೆ ಹೊರಟೆ. ಕೆ.ಬಿ. ಮಗಳ ಜೊತೆ where abouts ತಿಳಿದುಕೊಳ್ಳುತ್ತಲೇ ಇದ್ದೆ. ಕೆಲ ವಾರಗಳ ಹಿಂದೆ ನನಗೆ ಕೆ.ಬಿ ಅವರ ಆಕ್ಸಿಡೆಂಟ್ ಸುದ್ದಿ ಮುಟ್ಟಿಸಿದ್ದ ಹಿರಿಯ ಗೆಳೆಯ ಕುಚ್ಚಂಗಿ ಪ್ರಸನ್ನ ರ ಜೊತೆ ಮಾತನಾಡುತ್ತಲೇ ಇದ್ದೆ. ಅಂತಿಮ ದರ್ಶನಕ್ಕೆ ಕೆಂಕೆರೆಗೆ ಹೋಗುವುದಾ., ತುಮಕೂರಿನ ಟೌನ್ ಹಾಲ್ ಗೆ ಹೋಗೋದಾ., ಇಲ್ಲವೇ ಮನೆಯ ಬಳಿ ನೋಡೋದಾ ಎಂದು ಯೋಚಿಸುತ್ತಲೇ ತುಮಕೂರು ಮುಟ್ಟಿದೆ. ಬಾಡಿ ಬರೋದು ತಡ ಎಂದು ಗೊತ್ತಾಗಿ ಕೆ.ಬಿ. ಮನೆಗೆ ಹತ್ತಿರದ ಡಾಬಾ ಒಂದರಲ್ಲಿ ಪ್ರೊ ಐ.ಎಂ.ಎಸ್ ಜೊತೆ ಮಾತನಾಡುತ್ತಾ ಕುಳಿತೆ. ಕೊಂಚಹೊತ್ತಿನಲ್ಲಿ ಮನೆಯ ಬಳಿ ಹೋಗಿ ಶಾಮಿಯಾನ ಬ್ಯಾರಿಕೇಡ್ ಪೊಲೀಸ್ ಎಲ್ಲವೂ ವ್ಯವಸ್ಥೆ ಆಗಿದ್ದನ್ನು ಕಂಡು ಮತ್ತೆ ಹೋಗಿ ಐ.ಎಂ.ಎಸ್ ಜೊತೆಯಾದೆ.
*****
ಟೌನ್ ಹಾಲ್ ನಿಂದ ಬಾಡಿ ಹೊರಟ ಸುದ್ದಿ ತಿಳಿದು ಕೆ.ಬಿ. ಮನೆಯತ್ತ ಹೊರಟೆ. ಸಂಜೆ 4-15 ಕ್ಕೆ ಮನೆಯ ಮುಂದೆ ಕೆ.ಬಿ. ಪಾರ್ಥಿವ ಶರೀರ ಬಂತು. ಆಂಬುಲೆನ್ಸ್ ನಿಂದ ಇಳಿಸಿ ಕಾಂಪೋಂಡಿನೊಳಗೆ ಹೋಗುವಷ್ಟರಲ್ಲಿ ಕೆ.ಬಿ. ಪತ್ನಿ ಸಾಮೀ., ಮಖ ತೋರಿಸ್ರಪ್ಪಾ ಎಂದು ಚೀರುತ್ತಾ ಬರುವಾಗ ಮಗ ಕೈಹಿಡಿದು ಮೆಲ್ಲನೆ ಮೆಟ್ಟಿಲು ಇಳಿಸಿದ್ದು… ಕೆ.ಬಿ. ಮಗಳು ಹಗುರವಾಗಿ ಅಪ್ಪನ ಹಣೆ ಸವರಿ ಉಮ್ಮಳಿಸಿ ಬರುತ್ತಿದ್ದ ದುಃಖ ಕಣ್ಣೀರ ರೂಪ ಪಡೆದು ಅಪ್ಪನ ತಲೆ ತಾಗಿದ್ದು., ಬಿಟ್ಟೂ ಬಿಡದಂತೆ ಸಾಮೀ., ಅಯ್ಯೋ ಸಾಮೀ.., ಎಂಬ ಕೆ.ಬಿ.ಪತ್ನಿಯ ರೋಧನೆ ನನ್ನನ್ನು ನಡುಗಿಸಿ ಬಿಟ್ಟಿತು. ಅಪಾರ ಜನ ಸೇರಿದ್ದರು. ಜನರ ನೂಕು ನುಗ್ಗಲಿನಲ್ಲಿ ನನಗೂ ಕೆ.ಬಿ. ಮುಖ ಕಡೆಯದಾಗಿ ಸಿಕ್ಕಿತು. ಅಂತಿನ ನಮನ ಸಲ್ಲಿಸಿ ಹಿಂದಿರುಗಿದೆ.
*****

ನಾನು ಕಡೆಯದಾಗಿ ಕೆ.ಬಿ. ಅವರನ್ನು ಮಾತನಾಡಿಸಿದ್ದು ಭಾ.ಜ.ಪ ಸರ್ಕಾರ ರಚಿಸಿದ ಮೇಲೆ ಪ್ರೊ ಎಸ್.ಜಿ.ಸಿದ್ದರಾಮಯ್ಯ ಹಾಗೂ ಅರವಿಂದ ಮಾಲಗತ್ತಿ ಅವರ ಹುದ್ದೆಗಳಿಗೆ ರಾಜೀನಾಮೆ ನೀಡಿದ ಸಂದರ್ಭದಲ್ಲಿ. ಸಾರ್. ಸ್ವಲ್ಪ ದಿನ ಸುಮ್ನೆ ಇದ್ದಿದ್ರೆ ಅವ್ರೇ ಕಳಿಸ್ತಿದ್ರು. ಆಗ ಸರ್ಕಾರದ ತೀರ್ಮಾನದ ವಿರುದ್ಧ ಮಾತನಾಡೋ ಒಂದು ಅವಕಾಶನೂ ಸಿಗ್ತಿತ್ತು. ಈಗ ಇಲ್ದೆ ಆಯ್ತಲ್ವ ಅಂದೆ. ಸರಿ ಕಣಯ್ಯ I am with you. ಸ್ವಲ್ಪ ಸುಮ್ನಿದ್ದಿದ್ರೆ ಒದ್ ಓಡ್ಸೋರು, ಆಗ ತಗಾದೆ ತೆಗೀಬೋದಾಗಿತ್ತು. ಈಗ ಆ ಅವಕಾಶವೂ ಇಲ್ಲ ಅಂದರು. ಇನ್ನೇನೋ ಎಲ್ಲಾ ಚನ್ನಾಗೈತೇನೋ., ಮಗ ಹೆಂಗೌನೆ ಎಂದು ಕೇಳೋದು ಮರೀಲಿಲ್ಲ. ಸ್ಕೂಲ್ ಗೋಗ್ತಿದಾನೆ ಸಾ. ಹೋಮ್ ವರ್ಕು, ಪರೀಕ್ಷೆ ಯಾವ್ದೂ ಇಲ್ದೆ ಇರೋ ಸ್ಕೂಲಿಗಾಕಿದೀನಿ ಅಂದೆ. ಒಳ್ಳೇದಾಯ್ತು ಬಿಡು. ಸಿಕ್ತೀನಿ ಕಣೋ… ಎಂದು ಮಾತು ಮುಗಿಸಿದರು.
*****
ಇತ್ತೀಚೆಗೊಮ್ಮೆ ಅಗ್ರಹಾರ ಕೃಷ್ಣಮೂರ್ತಿ ಅವರ ಪರ ಒಂದು ಪ್ರೆಸ್ ರಿಲೀಸ್ ಗೆ ಕೆ.ಬಿ. ಸಿಗ್ನೇಚರ್ ಕೋರಬೇಕಿತ್ತು. ಎಂದಿನಂತೆ ಫೋನ್ ಸ್ವಿಚ್ ಆಫ್, ನಾಟ್ ರೀಚಬಲ್, ಇಲ್ಲವೇ ರಿಂಗ್ ಆದರೂ ಉತ್ತರವಿಲ್ಲ. ಅಲ್ಲಿಗೆ ಸುಮ್ಮನಾದೆ.
ನನಗೆ ಕೆ.ಬಿ., ಸಿ.ಜಿ.ಕೆ., ಕಿ.ರಂ., ಇವರೆಲ್ಲಾ ಹೆಚ್ಚು ಆತ್ಮೀಯವೆನಿಸುವುದು ಅವರು ತಮ್ಮ ಸುತ್ತಲ ಹುಡುಗರಿಗೆ ಸ್ಪಂದಿಸುತ್ತಿದ್ದ ಕ್ರಮದಲ್ಲಿ. ಆ ಸ್ಪಂದನೆಯಲ್ಲಿ ಅಪ್ಪ, ಅಮ್ಮ, ಅಣ್ಣ, ಅಕ್ಕ, ಗೆಳೆಯ, ಗೆಳತಿ, ಗುರು ಯಾರನ್ನು ಬೇಕಾದರೂ ಕಂಡುಕೊಳ್ಳಬಹುದಾಗಿತ್ತು.
*****
ಒಮ್ಮೆ ಕೆ.ಬಿ. ಫೋನ್ ಮಾಡಿ ‘ನಿನಗೊಂದು ಜವಾಬ್ದಾರಿ ಕೊಡೋದೈತಯ್ಯಾ ಮಧ್ಯಾನ್ಹ ಸಿಕ್ತೀಯಾ ಅಂದರು.’ ಕ್ಲಬ್ಬಿನಲ್ಲಿ ಸೇರುವ ತೀರ್ಮಾನ ಮಾಡಿದೆವು. ಅವರು ‘ಜವಾಬ್ಧಾರಿ’ಯನ್ನೂ ಜೊತೆಯಲ್ಲಿಯೇ ಕರೆತಂದಿದ್ದರು. ಈ ಹುಡುಗ ಅದೇನೋ ಎಡಿಟಿಂಗ್ ಕಲ್ತಿದ್ದಾನಂತೆ ಟಿ.ವಿ.ಯಲ್ಲಿ ಕೆಲಸ ಮಾಡ್ಬೋದಂತೆ ನೋಡು ಅಂದರು. ಜೊತೆಗೆ ಅವನ ಹಿನ್ನೆಲೆಯನ್ನೂ ತಿಳಿಸಿದರು. ಅಂಥ ಹುಡುಗರ ನೆರವಿಗೆ ನಿಲ್ಲಬೇಕಾದ್ದು ನಮ್ಮ ಕರ್ಥವ್ಯವೆಂದು ನಮಗೆ ಕಲಿಸಿದ್ದು ಕೂಡಾ ಸಿ.ಜಿ.ಕೆ., ಕಿ.ರಂ. ಕೆ.ಬಿಯಂಥವರೇ.
*****
ಅದೊಂದು ದಿನ ಮದ್ಯಾನ್ಹ ಈಚಲ ಹೆಂಡ ಕುಡಿದು ಮಂಪರು ಬಂದು ಇನ್ನೇನು ಮಲಗೋಣವೆನ್ನುವಷ್ಟರಲ್ಲಿ ಏಯ್ ಇಲ್ಲೊಂದು ಫಂಕ್ಷನ್ ಇದೆ ಕಣ್ರಯ್ಯಾ ನಾನೇ ಚೀಫ್ ಗೆಸ್ಟ್ ಹೋಗಬೇಕು ಎಂದು ನಮ್ಮನ್ನೂ ಜೊತೆಮಾಡಿಕೊಂಡು ಹಿರೇಮಠದ ಕಡೆ ನಡೆದರು. ಒಂದು ಗಂಟೆಯ ಹಿಂದಷ್ಟೇ ನಾನು ಅವರ ಮುಂದೆ ಒದಿದ್ದ ಪಧ್ಯವನ್ನು ಆ ಸಭೆಯಲ್ಲಿ ಓದಿಸಿದರು. ಸಭೆ ಮುಗಿಸಿ ವಾಪಸಾಗುವಾಗ ಒಳ್ಳೇ ಕಿತಾಪತಿ ಸಾ ನೀವು ಅಂದೆ. ಯಾಕೆ., ಚನ್ನಾಗಿದೆ ಅದು. ಬರೀತಿರು ಅಂದರು. ಸರಿ ಎಂದು ಸುಮ್ಮನಾದೆ.
*****

1970 ರ ದಶಕದ ದಲಿತ ಲೇಖಕ ಕಲಾವಿದರ ಸಂಘ (ದಲೇಕಸಂ), ರೈತ ಚಳವಳಿ, ದ.ಸಂ.ಸ ಹುಟ್ಟಿದ ಬಗೆಯ ಐತಿಹಾಸಿಕ ಘಟನೆಗಳ ಬಗ್ಗೆ ನಮ್ಮ ಪೀಳಿಗೆಯವರು ಆಸಕ್ತಿ ತೋರಿದಲ್ಲಿ ವಿವರಸಿ ಹೇಳುತ್ತಿದ್ದರು. ಮಾತಿನ ಓಘದಲ್ಲಿ ತಡವಾದರೆ ಅವರ ಡ್ರೈವರ್ “ ಎದ್ ನಡೀ ಸಾಕು ಹೋಗಾನ’ ಎಂದು ಗದರಿದರೆ, ಲೋ ಇವ್ನಿಗೆ ಯಾರು ದುಡ್ ಕೊಟ್ರೋ ಎಂದು ಅಲ್ಲೇ ಕುಂತಿರುತ್ತಿದ್ದ ನಮ್ಮನ್ನು ಗದರುತ್ತಿದ್ದರು. ಡ್ರೈವರ್ ಮತ್ತು ಇವರ ನಡುವೆ ಇದ್ದ ಸಲಿಗೆ ನನಗೆ ಅಚ್ಚರಿ ತಂದರೂ ಕೆ.ಬಿ ಎಚ್ಚರದಿಂದಲೇ ಆ ಸಮಾನತೆಯನ್ನು ಕಾಯ್ದುಕೊಂಡಿರಬಹುದು ಎಂದೆನಿಸದೆ ಇರಲಿಲ್ಲ. Be the change you want to see in this world ಎಂಬ ಗಾಂಧಿ ಮಾತಿನಂತೆ.
*****
ಅದೊಮ್ಮೆ ಗಾಂಧಿ ಜಯಂತಿಯಂದು ಕೆ.ಬಿ. ಮನೆಗೆ ಹೋದೆ. ಕೆಲ ಕಾಲ ಕೂತು ಮಾತನಾಡಿ ಟೀ ಕುಡಿದು ಆಚೆ ಹೊರಟೆವು. ನಾಲ್ಕೈದು ಮಕ್ಕಳು ಒಂದು ತಟ್ಟೆಯಲ್ಲಿ ಗಾಂಧಿ ಫೋಟೋ ಇಟ್ಟು ಹಣ್ಣು, ಕಾಯಿ, ಹೂ, ಊದಗಡ್ಡಿಯೊಂದಿಗೆ ಬಂದರು. ಸಾ ಬನ್ನಿ ಪೂಜೆ ಮುಗಿಸ್ಕೊಂಡು ಹೋಗಿ ಅಂದರು. ನಾವು ಮರು ಮಾತನಾಡದೆ ಗಾಂಧಿ ಪೂಜೆ ಮುಗಿಸಿಕೊಂಡು ಹೊರಟೆವು. ನೋಡಯ್ಯಾ ಈ ಗಾಂಧಿ ಎಲ್ಲ ವಯಸ್ಸಿನರಲ್ಲಿ ನೆಲೆ ನಿಂತಿದ್ದಾನೆ. ಏನಯ್ಯಾ ಅದು.., ಎಂದು ಧ್ಯಾನಸ್ಥರಾಗಿ ಕುಳಿತರು.
*****
ಸಮಾನ್ಯವಾಗಿ ಕೆ.ಬಿ. ಪ್ರೆಸ್ ಕ್ಲಬ್ ಆವರಣಕ್ಕೆ ಬಂದ ಕೂಡಲೇ ಅವನು ನಾಗೇಶ ಎಲ್ಲಿದಾನೆ ಅವನ ತಲೆ ತಗಂಡು ಬಂದ್ರೆ 1 ರೂಪಾಯಿ ಬಹುಮಾನ ಎಂದು ಕ್ಲಬ್ಬಿನ ಹುಡುಗರಿಗೆ ಹೇಳುತ್ತಿದ್ದರು. ಇಲ್ಲವೇ ಅವರಿಗೂ ಮುನ್ನ ನಮ್ಮ ಕ್ಲಬ್ಬಿನ ಹುಡುಗರು ಸಾರ್ ನಾಗೇಶ್ ಇನ್ನೂ ಬಂದಿಲ್ಲ ಅಂತಲೋ., ಒಳಗಿದಾರೆ ಎಂದೋ ಹೇಳಿ ಅವರನ್ನು ಕೂರಲು ಹೇಳಿ ನನಗೆ ಸುದ್ದಿ ಮುಟ್ಟಿಸುತ್ತಿದ್ದರು. ತಿಂಡಿ ತೀರ್ಥ ಎಲ್ಲಾ ಆದ್ಮೇಲೆ ಕಿಸೆಯಿಂದ ಒಂದು ಕವರ್ ತೆಗೆದು ನೋಡು ಅದ್ರಲ್ಲಿ ಎಷ್ಟಿದೆ. ಸಾಕಾಗ್ಬೋದು ಎಂದು ಅವರಿಗೆ ಯಾವುದೋ ಸಭೆಯಲ್ಲಿ ಕೊಟ್ಟ ಗೌರವಧನ ಟೇಬಲ್ಲಿಗಿರಿಸಿ ಹೋಗುತ್ತಿದ್ದದ್ದು ವಾಡಿಕೆ.
*****
ಕೆ.ಬಿ.ಗೆ ಯಾವಾಗ ಫೋನ್ ಮಾಡಿದ್ರೂ Out of coverage area, not reachable, switched off, ಮತ್ತು ರಿಂಗ್ ಆದರೂ ಫೋನ್ ಎತ್ತುವುದಿಲ್ಲ. ಫೋನ್ ರಿಸೀವ್ ಮಾಡಿದ್ರೆ “ ಏನಯ್ಯಾ., ಯಾಕೋ ತೊಂದ್ರೆ ಕೊಡ್ತೀರಾ ಫೋನ್ ಮಾಡಿ., ಹೂ ಹೇಳು ಏನು ? ಎಂದೇ ಮಾತು ಶುರು ಮಾಡುತ್ತಿದ್ದರು. ಮಾತಿನ ವಿಷಯ ಅವಲಂಭಿಸಿ ಅದಕ್ಕೆ ತಕ್ಕ ಸಮಯ ಕೊಡುತ್ತಿದ್ದದ್ದನ್ನು ನಾನು ಗಮನಿಸಿದ್ದೇನೆ.
ಕೆ.ಬಿ. ಅಂಥವರ ಅಗಲಿಕೆ ಕೇವಲ ಕುಟುಂಬಕಷ್ಟೇ ನಷ್ಟವಲ್ಲ. ಅವರ ಸಾವು ಸಾಮಾಜಿಕ ನಷ್ಟ. We all miss you SIR. ಇನ್ಮು ಮುಂದೆ ನಿಮಗೆ ಯಾವ ಫೋನ್ ಕೂಡಾ ತೊಂದರೆ ಕೊಡುವುದಿಲ್ಲ ಬಿಡಿ. NOW YOU ARE PERAMANENTLY NOT REACHABLE…… RIP






0 Comments