ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪರಂ ಪರಂ ಪರಮಗೀತೆ…

ಪ್ರಜ್ಞಾ ಮತ್ತಿಹಳ್ಳಿ

ಕೋಗಿಲೆ ಹಾಡೋದನ್ನು ಕೇಳಿರ್ತೀರಾ, ಗಿಳಿ ಚಿಲಿಪಿಲಿ ಎಂದು ಉಲಿಯೋದನ್ನೂ ಕೇಳಿರ್ತಿರಾ ಆದರೆ ಎಂದಾದರೂ ಹೆಬ್ಬುಲಿ ಹಾಡೋದನ್ನು ಕೇಳಿದಿರಾ? ಅಂತ ಪಕ್ಕಾ ಫಿಲ್ಮೀ ಶೈಲಿಯಲ್ಲಿ ಕೇಳ್ತೀದೀನಿ. ಏನು ಹೇಳ್ತಿರಾ? ಅಯ್ಯೊ ಈ ಕನ್ನಡ ಕವಿಗಳ ಸಹವಾಸ ಹೇಳಕಾಗಲ್ಲ ಸ್ವಾಮಿ ಕಲ್ಲುಕಲ್ಲಿನಲು ಕೇಳಿ ಬರುತಲಿದೆ ಅಂತ ಕಲ್ಲಿನ ಕೈಲೇ ಹಾಡಿಸಿದಾರೆ ಇನ್ನು ಹುಲಿ ಕೈಲಿ ಹಾಡಿಸೋದು ಅವರಿಗೇನು ಕಷ್ಟವಿಲ್ಲ ಬಿಡಿ ಅಂತ ಹೇಳ್ತೀರೇನೊ. ಹುಲಿ ಹಾಡಿದಾಗ ಏನೇನು ಆಗುತ್ತೆ ಅಂತ ಪರಿಣಾಮವನ್ನು ತಿಳಕೊಳ್ರಿ ಅಲ್ಲಿದೆ ನಿಜವಾದ ಕಥೆ-ವ್ಯಥೆ. ಹುಲಿ ಯಾವಾಗ ಹಾಡ್ತು? ಯಾಕೆ ಹಾಡ್ತು? ಅದು ಹಾಡುವುದು ವೈಜ್ಞಾನಿಕವಾ? ಮೂಢ ನಂಬಿಕೆಯಾ? ಅಂತೆಲ್ಲ ಬುದ್ಧಿಜೀವಿಗಳ ಪ್ರಶ್ನೆ ಕೇಳಿ ತರಲೆ ಮಾಡಬೇಡಿ. ಸ್ವಾರಸ್ಯವಿರುವುದು ಪರಿಣಾಮದೊಳಗೆ ಗೊತ್ತಾಯ್ತ?

ಹಾಡು ಕೋಗಿಲೆ ಅಂತ ರಿಯಾಲಿಟಿ ಶೋ ನೋಡಿರಬಹುದು ಅಲ್ಲವೆ? ನನಗೆ ರಾಷ್ಟ್ರ ಮಟ್ಟದಲ್ಲಿ ಹಾಡಿನ ಹೆಬ್ಬುಲಿ ಅಂತ ಒಂದು ಶೋ ಮಾಡಿದರೆ ಚೆನ್ನಾಗಿರುತ್ತೆ ಅಂತ ಆಸೆ. ಹಾಡಿಗೂ ಹುಲಿಗೂ ಎಂಥಾ ಸಂಬಂಧವಿರೋಕೆ ಸಾಧ್ಯ? ಅಂತ ನೀವು ತಲೆ ಕೆರೆದುಕೊಳ್ಳ ಬೇಡಿರಿ. ನಮ್ಮ ಮನೆಯಲ್ಲಿ ಒಂದು ಹಾಡಿನ ಹೆಬ್ಬುಲಿಯಿದೆ. ಅದು ಹಾಡಲು ಕುಳಿತಾಗ ನೀವೊಮ್ಮೆ ಕಣ್ತುಂಬಾ ನೋಡಬೇಕು. ಹೌದು ನಮ್ಮದು ಕೇಳುವ ಹಾಡಿನ ಹುಲಿಯಲ್ಲ. ಇದರದು ನೋಡುವ ಹಾಡು. ಅಂದರೆ ಆ ಭಾವ ಭಂಗಿಯನ್ನು ರಭಸದ ಅಭಿನಯವನ್ನು ಹಾಡುವಾಗ ಬಡಿಯುವ ವಸ್ತುಗಳು ಪಡೆಯುವ ಆಕಾರವನ್ನು ನೀವು ಕಣ್ಣಲ್ಲಿಯೇ ಕಂಡು ಆನಂದಿಸಬೇಕಾಗುತ್ತದೆ. ಆನಂದಿಸಲಾಗದಿದ್ದರೆ ಅಂದರೆ ಆ ವಸ್ತುಗಳ ಮಾಲಿಕರು ನೀವಾಗಿದ್ದರೆ ಅನುಭವಿಸಬೇಕಾಗುತ್ತದೆ. ಉದಾಹರಣೆಗೆ ಬಕೇಟು ಅದು ತನ್ನ ತಳವನ್ನು ಛಿದ್ರ ವಿಚ್ಛಿದ್ರ ಮಾಡಿಕೊಂಡು ಗತಪ್ರಾಣವಾದಾಗ ನೀವು ಬಿಕ್ಕಳಿಕೆಗಳನ್ನು ಕಂಠದಲ್ಲಿಯೇ ಒಳತಳ್ಳಬೇಕು. ಹಳೆಯ ಡಬ್ಬಿಗಳು ನುಗ್ಗು ಮಾಡಿಕೊಂಡು ತಮ್ಮ ಮೂಲ ಆಕಾರದಿಂದ ಬಹುದೂರ ಕುರೂಪಿಯಾದಾಗ ನೀವು ಸೆಂಟಿಮೆಂಟಲ್‌ ಫೂಲ್‌ ಆಗದೆ ಹೋಗಲಿ ಬಿಡಿ ಹೊಸದು ಕೊಡರಾಯಿತು ಅಂತ ಸಮಾಧಾನ ಪಡೆಯಬೇಕು. ಆ ಕ್ಷಣ ನೀವು ಸದಾ ಹೊಸತಿಗೆ ತುಡಿಯುವ ನಾವಿನ್ಯತೆಯ ಹರಿಕಾರರಾಗಬೇಕು.

ತಾಟು-ಕೊಡಪಾನ ಇತ್ಯಾದಿ ಸ್ಟೀಲು ಪಾತ್ರೆಗಳು ಆಕಾರಹೀನರಾದರೆ ಬಾಹ್ಯ ಆಕಾರಕ್ಕೆ ಮಹತ್ವವಿಲ್ಲ ಅಂತರಂಗ ಶುದ್ಧಿಯೇ ಮುಖ್ಯವೆಂದು ಆಧ್ಯಾತ್ಮದ ಮುಲಾಮು ಹಚ್ಚಿಕೊಂಡು ನಿಮ್ಮ ವಸ್ತು ಮೋಹವನ್ನು ಮಡಚಿ ಮೂರು ಮಡಕೆ ಮಾಡಿ ಅಟ್ಟಕ್ಕೇರಿಸಬೇಕು.  ಹುಲಿ ಹಾಡಲು ತೊಡಗಿದೊಡನೆ ನಿಮ್ಮ ಅಹಂಕಾರ ನಿರಸನ ಕಾರ್ಯಕ್ರಮ ಶುರುವಾಗುತ್ತದೆ.

ಮೊದಲು ನಿಮಗೆ ನಿಮ್ಮ ಭಾಷಾಜ್ಞಾನದ ಬಗೆಗೆ ಇರುವ ಅಹಂಭಾವ ಬಿಟ್ಟು ಹೋಗುತ್ತದೆ. ಏಕೆಂದರೆ ಅದು ಯಾವ ಭಾಷೆಯ ಹಾಡು ಎಂದು ಎಷ್ಟು ತಿಣುಕಾಡಿದರೂ ತಿಳಿಯುವುದಿಲ್ಲ. ಹಿಂದಿ, ತಮಿಳು, ತೆಲಗು, ಪಂಜಾಬಿ ಹೀಗೆ ಯಾವುದೇ ಭಾರತೀಯ ಭಾಷೆಯದಾಗಿದ್ದರೂ ಹುಲಿಯು ತನ್ನದೇ ಆದ ರೀತಿಯಲ್ಲಿ ಉಚ್ಛರಿಸುತ್ತ ಹಾಡುವುದರಿಂದ ನಿಮಗೆ ಅದು ಯಾವ ಭಾಷೆಯದಾಗಿರಬಹುದು ಎಂದು ಕಂಡುಹಿಡಿಯುವುದೇ ಒಂದು ದೊಡ್ಡ ಸವಾಲಿನ ಕೆಲಸವಾಗುತ್ತದೆ. ಅಷ್ಟಾಗಿಯೂ ನೀವು ಭಾಷೆ ತಿಳಿದುಕೊಂಡ ನಂತರ ನಿಮಗೆ ಅದು ಯಾವ ಹಾಡಿರಬಹುದು ಅಂತ ಸಂಶಯ ಶುರುವಾಗುತ್ತದೆ. ಧಾಟಿಯೇ ಗೊತ್ತಾಗದಂತೆ ಹಾಡುವ ಕಲೆಗಾರಿಕೆ ಗೊತ್ತಿರುವುದೂ ಇಡೀ ದೇಶದಲ್ಲಿ ನಮ್ಮ ಹುಲಿಗೆ ಮಾತ್ರ. ಹಾಡುತ್ತ ಹಾಡುತ್ತ ಒಂದು ಧಾಟಿಯಿಂದ ಇನ್ನೊಂದು ಧಾಟಿಗೆ ಜಿಗಿದುಬಿಡುತ್ತಾನೆ. ಖ್ಯಾತ ಸಂಗೀತಗಾರರು ರಾಗದಿಂದ ರಾಗಕ್ಕೆ ಜಿಗಿಯುವ ಕಲೆಗಾರಿಕೆ ತೋರಿಸುತ್ತಾರಲ್ಲ ಹಾಗೆ ನಮ್ಮ ಹೆಬ್ಬುಲಿ ಧಾಟಿಯನ್ನು ಬದಲಿಸಿ ಹಾಡಿದಾಗ ಆ ಹಾಡು ಮೂಲದಲ್ಲಿ ಯಾವುದು ಎಂದು ಅದರ ಮೂಲ ಗಾಯಕನಿಗೆ ಕೂಡ ಗೊತ್ತಾಗುವುದಿಲ್ಲ. ಅಸಲಿ ವಿಷಯಕ್ಕೆ ಬಂದು ಬಿಡುತ್ತೇನೆ.

ನಮಗೆಲ್ಲ ಅಂದರೆ ನನಗೆ-ಮಕ್ಕಳಿಗೆ ಸಂಜೆಯಾದೊಡನೆ ಭಯ ಶುರುವಾಗುತ್ತದೆ. ವಾರಾಂತ್ಯದ ರಜೆಯ ದಿನಗಳಾದರೆ ಆ ಭಯ ಹಗಲಿಗೂ ವಿಸ್ತರಣೆಯಾಗುತ್ತದೆ. ನೀವು ದೆವ್ವದ ಕಾಟ ಅಂದುಕೊಂಡಿರೊ ಏನೊ ಅಲ್ಲವೆ? ಕಾಟ ದೆವ್ವದ್ದಲ್ಲ, ಪಂಚಮ ವೇದದ್ದು. ಅಂದರೆ ಸಂಗೀತದ್ದು. ಹೀಗೆ ಹೇಳಿದೊಡನೆ ಕೆಕ್ಕರಿಸಿಕೊಂಡು ನೋಡಬೇಡಿರಿ. ನಾವೇನು ಸಂಗೀತ ದ್ವೇಷಿಗಳಲ್ಲ. ಸರಿಯಾದ ರಾಗವನ್ನು ಶೃತಿಬದ್ಧವಾಗಿ ಹಾಡಿದರೆ ತಾಳ ಹಾಕುತ್ತ ಆಸ್ವಾದಿಸುತ್ತೇವೆ. ಆದರೆ ನನ್ನ ಮಕ್ಕಳ ಅಪ್ಪನಿದ್ದಾನಲ್ಲ ಹಾಗೆಂದರೆ ತಿಳಿಯಲಿಲ್ಲವೆ? ಉತ್ತರ ಭಾರತದಲ್ಲಿ ಗಂಡನನ್ನು ಕರೆಯುವುದೇ ಹೀಗೆ. ಅವರು ಅಪಾರವಾದ ಗೌರವ ಕೊಡುವಾಗ ಪತಿ ಪರಮೇಶ್ವರ ಎನ್ನುತ್ತಾರೆ. ಅದನ್ನೇ ಹೃಸ್ವಗೊಳಿಸಿ ಪರಂ ಎನ್ನೋಣ.  ನಮ್ಮ ಪರಂಗೆ ಹಾಡುವ ಹುಚ್ಚು. ಅದು ಹುಚ್ಚು ಎಂದು ಯಾಕೆ ಹೇಳುತ್ತೇನೆಂದರೆ ನನಗೆ ಹುಚ್ಚಿನ ಮನೋಶಾಸ್ತ್ರೀಯ ವ್ಯಾಖ್ಯೆ ಗೊತ್ತಿದೆ. ಯಾವುದಾದರೊಂದು ಮನಸ್ಸಿನ ಸ್ಥಿತಿಯು ತಾತ್ಕಾಲಿಕವಾಗಿ ಅಥವಾ ನಿರ್ದಿಷ್ಟವಾದ ಸಮಯದಲ್ಲಿ ಒಂದು ಭಾವನೆಯನ್ನು ವಿಜೃಂಭಿಸಿ ಉಳಿದ ಸಮಯದಲ್ಲಿ ಸಹಜವಾಗಿ ವರ್ತಿಸಿದರೆ ಇದೊಂದು ಬಗೆಯ ಹುಚ್ಚು ಎಂದು ಪುಸ್ತಕದಲ್ಲಿ ಬರೆದಿದ್ದಾರೆ.

ಪರಂ ಇಡೀ ದಿನ ತನ್ನ ಕಚೇರಿಯಲ್ಲಿ ಸಹಜವಾಗಿಯೇ ಇರುತ್ತಾನೆ. ಒಂದು ಕ್ಷಣವೂ ಬಿಡುವಿಲ್ಲದೇ ದುಡಿಯುತ್ತಾನೆ. ಆಗ ಯಾವ ಹಾಡಿನ ಉಸಾಬರಿಗೂ ಹೋಗುವುದಿಲ್ಲ.ಮನೆಯ ಕಂಪೌಂಡಿನ ಒಳಗೆ ಕಾಲಿಡುತ್ತಲೇ ಖಯಾಲಿ ಶುರುವಾಗುತ್ತದೆ. ಹಾಗಂತ ಯಾವುದೇ ಶಾಸ್ತ್ರೀಯ ಸಂಗೀತದ ಸುದ್ದಿಗೆ ಹೋಗುವುದಿಲ್ಲ. ಒಂದು ಹಳೆಯ ಹಿಂದಿ ಹಾಡನ್ನು ಹಿಡಿದುಕೊಳ್ಳುತ್ತಾನೆ. ಅದು ಯಾವ ಹಾಡು ಇರಬಹುದೆಂದು ನಮಗ್ಯಾರಿಗೂ ತಿಳಿಯುವುದಿಲ್ಲ. ಯಾಕೆಂದರೆ ಪರಂ ಹಾಡಿನ ಪಲ್ಲವಿಯನ್ನು ಅಪ್ಪಿತಪ್ಪಿಯೂ ಹಾಡುವುದಿಲ್ಲ. ಮೊದಲನೆಯ ಚರಣದ ಎರಡನೆಯ ಸಾಲನ್ನು ಹಾಡುತ್ತಾನೆ. ಅದರಲ್ಲಿಯೂ ಅವನಿಗೆ ಯಾವ ಹಾಡಿನ ಸಾಹಿತ್ಯವೂ ಸರಿಯಾಗಿ ಬರುವುದಿಲ್ಲ.ಹಾಗೆಂದು ಅವನಿಗೆ ಆ ಕುರಿತು ಕಿಂಚಿತ್ತೂ ಬೇಸರವಿಲ್ಲ ಹಾಡುತ್ತಿರುವ ಆ ಕ್ಷಣದ ಹುರುಪಿಗೆ ರಂಗೇರಿದ ಮನಸ್ಸು ಯಾವ ಶಬ್ದವನ್ನು ಬಯಸಿ ನಾಲಿಗೆಗೆ ದೊರಕಿಸುತ್ತದೆಯೋ ಆ ಶಬ್ದವನ್ನು ಉಚ್ಚರಿಸಿ ಹಾಡಿನಲ್ಲಿನ ಬಿಟ್ಟಸ್ಥಳ ತುಂಬಿಕೊಳ್ಳುತ್ತಾನೆ. ಹೀಗೆ ಇವನ ಬಹುತೇಕ ಹಾಡುಗಳ ಗೀತ ರಚನೆಕಾರ-ಸಂಗೀತಕಾರ ಇವನೇ ಇರುವುದರಿಂದ ಕೇಳುಗರಿಗೆ ಆ ಹಾಡಿನ ಗುರುತು ಸಿಗುವುದಿಲ್ಲ. ಯಾವುದೋ ಹಾಡಿನ ತಮ್ಮನಂತೆ-ತಂಗಿಯಂತೆ ಕೆಲವು ಬಾರಿ ಮೂಲ ಹಾಡಿನ ಗುಮ್ಮನಂತೆ-ತಿಮ್ಮನಂತೆ ಈ ಹಾಡುಗಳು ಇರುತ್ತವೆ. ಅದರಲ್ಲೂ ಹಾಡುಗಾರನ ಉತ್ಸಾಹ ಹೆಚ್ಚಾದಂತೆಲ್ಲ ಆ ಹಾಡುಗಳಲ್ಲಿನ ಹೆಮ್ಮಿಂಗ್‌ (ಲಲಲಾ ಪಪಪಾ ತರರರಾ ಇತ್ಯಾದಿ) ದೀರ್ಘವಾಗುತ್ತದೆ.

ಏಯ್‌ ಈ ಹಾಡೊಳಗೆ ಅದು ಅಷ್ಟೊತ್ತು ಇಲ್ಲೊ ಎಂದು ಶೋತೃಗಳು ಅಸಹಾಯಕರಾಗಿ ಅರಚಿಕೊಳ್ಳುತ್ತೇವೆ. ನಾ ಸೇರಿಸಿಕೊಂಡೆ ಏನೀಗ ಎಂದು ಪ್ರಶ್ನಿಸಿದವನೆ ಹಾಡುಗಾರ ಹೆಬ್ಬಲಿ ಮತ್ತೆ ಆವೇಶದಿಂದ ಅರಚತೊಡಗುತ್ತಾನೆ. ನಾಗರಹೊಳೆ ಕಾಡಲ್ಲಿ ಹುಲಿಗೆ ಸಿಕ್ಕ ಚಿಗರೆಯಂತೆ ಹತಾಶೆಯಿಂದ ಹಾಡಿನ ದವಡೆಗೆ ನಮ್ಮನ್ನು ಕೊಟ್ಟುಕೊಳ್ಳುತ್ತೇವೆ. ಇವನ ಕಾಟಕ್ಕೆ ಬೇಸತ್ತ ಮಕ್ಕಳು ಊರಿಗೆ ಫೋನು ಮಾಡಿ ಅಜ್ಜಿಯ ಬಳಿ ಅಂದರೆ ಇವನ ತಾಯಿಯ ಹತ್ತಿರ ದೂರು ಹೇಳಿದರು. ಪೂರ್ತಿ ಕೇಳಿದ ನಂತರ ಅವರು ತಣ್ಣಗೆ ಉತ್ತರಿಸಿದರು. ಅವನು ಹುಟ್ಟಿದಾಗಿನಿಂದ ಹೀಗೇ ಹಾಡುತ್ತಿದ್ದಾನೆ. ಹಾಡು ಅನ್ನುವುದು ಅವನಿಗೆ ಹುಟ್ಟಿದಾರಭ್ಯ ಹಿಡಿದ ಹುಚ್ಚು. ಶಿಶುವಾಗಿದ್ದಾಗ ಅವನು ಅಳುತ್ತಲೇ ಇರಲಿಲ್ಲ ಧ್ವನಿ ತೆಗೆದು ಹಾಡುವಂತೆ ಕೂಗುತ್ತಿದ್ದ. ಕೇಳಲಿಕ್ಕೆ ಕಷ್ಟವಾಗುವಂತೆ ಇತ್ತಾದರೂ ಬೇರೆ ಉಪಾಯವಿರಲಿಲ್ಲ. ಎಂತ ಮಾಡಿದರೂ ಅವನ ಬಾಯಿ ಮುಚ್ಚಿಸಲು ಆಗುತ್ತಿರಲಿಲ್ಲ. ಕೇಳಲಿಕ್ಕೆ ಕಡಿಮೆ ಕಷ್ಟವಿರುವುದನ್ನೇ ಅವನು ಹಾಡಲಿ ಅಂತ ಬೇಡಿಕೊಳ್ಳಿ ಅಂದರು.

ಕರೊನಾ ಕಾಲದಲ್ಲಿ ತಿಂಗಳುಗಟ್ಟಲೆ ಕಛೇರಿ ಮುಚ್ಚಿದಾಗ ಹಗಲಿರುಳೆನ್ನದೇ ಹಾಡುತ್ತ ತನ್ನ ಸಮಯ ಕಳೆದು ಬಿಡುವುದು ಅಂತ ಹೆಬ್ಬಲಿ ದೃಢ ನಿಶ್ಚಯ ಮಾಡಿದ್ದ. ಆಗ ನಾವೆಲ್ಲ ರೂಮು ಸೇರಿಕೊಂಡು ಕಿವಿಗಳಿಗೆ ಇಯರ್‌ ಫೋನು ತುರುಕಿಕೊಂಡು ಲ್ಯಾಪುಟಾಪುಗಳಲ್ಲಿ ಭಾರೀ ದಾಢಸಿ ಶಬ್ದಗಳ ವರ್ಣರಂಜಿತ ಸಿನಿಮಾಗಳನ್ನು ನೋಡುತ್ತಿದ್ದೆವು. ನಮ್ಮ ಪಕ್ಕದ ಮನೆಯ ಆಂಟಿಯ ಮಕ್ಕಳು ಬೇರೆ ಬೇರೆ ದೇಶದಲ್ಲಿದ್ದಾರಾಗಿ ಅವರು ಒಬ್ಬೊಂಟಿಯಾಗಿ ವಾಸಬೇಕಲ್ಲ ಅಂತ ಕೊರಗುತ್ತಿದ್ದರು. ಈಗ ಕರೊನಾ ಕಾರಣದಿಂದ ನಾವ್ಯಾರೂ ಮನೆಗೆ ಹೋಗಿ ವಿಚಾರಿಸುವಂತೆಯೂ ಇರಲಿಲ್ಲ. ಒಂದು ದಿನ ಅವರ ಮಗಳು ಅಮೇರಿಕೆಯಿಂದ ಫೋನು ಮಾಡಿದ್ದಳು. ಆಂಟಿ ನಿಮಗೆ ತುಂಬಾ ಥ್ಯಾಂಕ್ಸು, ನಮ್ಮಮ್ಮಂಗೆ ಒಬ್ರೇ ಇರೋಕೆ ಭಯವಾಗುತ್ತೆ. ಅಂಕಲ್‌ ಅದೇನೋ  ಆರ್ಕೆಸ್ಟ್ರಾ ಮಾಡ್ತಾರಂತೆ, ಅಮ್ಮಂಗೆ ಅವರ ಹಳ್ಳಿ, ಅಲ್ಲಿಯ ಕೊಟ್ಟಿಗೆಯಲ್ಲಿರೊ ಎಮ್ಮೆ-ಕೋಣಗಳು, ನಾಯಿ-ಕುದುರೆಗಳು ಇತ್ಯಾದಿ ನೆನಪಾಗಿ ಅವರ ಬಾಲ್ಯದ ದಿನಗಳಲ್ಲಿ ಇದೀನಿ ಅನ್ನಿಸಿ ಉತ್ಸಾಹ ಬರುತ್ತಂತೆ. ಅಂದಾಗ ನಂಬಿಕೆಯೇ ಬರಲಿಲ್ಲ. ನೀವೇ ನೋಡಿ ಆಂಟಿ ಅಮ್ಮ ಎರಡು ಜಡೆ ಹಾಕ್ಕೊಂಡು ನನ್ನ ಹಳೆ ಸ್ಕರ್ಟ ಹಾಕ್ಕೊಂಡು ಫೋಟೊ ಕಳಿಸಿದಾರೆ ಅಂತ ತೋರಿಸಿದಾಗ ಎಚ್ಚರ ತಪ್ಪುವಂತೆ ಆಯಿತು.

ಕಳೆದ ವಾರ ವಾಕಿಂಗ್‌ ಹೊರಟಿದ್ದೆ ಹಿಂದಿನ ಬೀದಿಯ ಪಾರ್ಕಲ್ಲಿ ಹತ್ತು ಸುತ್ತು ಹಾಕಿದರಾಯ್ತು ಅಂತ ಶುರು ಮಾಡುವಷ್ಟರಲ್ಲಿ ಪಾರ್ಕಿನ ಎದುರ ಮನೆ ಅಂಕಲ್‌ ಕರೆದರು. ಏನಮ್ಮಾ ಆರು ತಿಂಗಳಿಂದ ಒಬ್ಬಾತ ಪೀಡೆ ಥರಾ ಮೇಲ್ಗಡೆ ಮನೆಲಿ ಬಾಡಿಗೆಗೆ ಇದ್ದ, ಬಿಡಿಸಬೇಕು ಅಂತ ಎಷ್ಟೇ ಒದ್ದಡಿದ್ರೂ ಆಗಿರಲಿಲ್ಲ, ನಿನ್ನೆ ಸಂಜೆ ನಿನ್ನ ಗಂಡ ಬಲಮಾ ಬಲಮಾ ಲಾಗೆ ನಾ ಮೊರೆ ಲಾಗಿ ನಾ ಮೊರೆ ಅಂತ ಅದ್ಯಾವ ಥರಾ ಚೀರಾಡಿದ್ರು ಅಂದರೆ ಆಸಾಮಿ ಗಂಟು ಮೂಟೆ ಕಟ್ಗೊಂಡು ಓಡೇ ಹೋದ ನೋಡು. ಬಹಳ ಥ್ಯಾಂಕ್ಸ ಕಣಮ್ಮ ಅಂದರು. ಪೆಪೆಪೆ ಅಂದೆ. ಆದರೆ ಹುಶಾರು ಕಣಮ್ಮ ಇವತ್ತು ಒಬ್ಬನು ಬರ್ತಾ ಇದಾನೆ. ಒಳ್ಳೆ ಆಸಾಮಿ ಇವನ್ನ ಓಡಿಸೋ ಹಾಗಿಲ್ಲ ಮತ್ತೆ ಅಂದರು. ಮನೆಗೆ ಬಂದವಳೇ ಹೇಳಿದೆ ನಾಳೆಯಿಂದ ದೂರವಾದ್ರೂ ಪರವಾಗಿಲ್ಲ ಆಚೆ ಬೀದಿ ಪಾರ್ಕಿಗೆ ವಾಕಿಂಗ್‌ ಹೋಗ್ತೀನಿ ಇನ್ನೊಂದು ವರ್ಷ ಹಿಂದಿನ ಬೀದಿಗೆ ಕಾಲಿಡೊಲ್ಲ ಅಂತ. ಮೊನ್ನೆ ತರಕಾರಿ ಅಂಗಡಿಯಲ್ಲಿ ಬೆಂಡೆಕಾಯಿ ಆರಿಸ್ತಾ ಇದ್ದೆ. ಒಬ್ಬಾಕೆ ಹೊಸ ಮುಖ ಹಲ್ಲು ಕಿಸಿದು ಚೆನ್ನಾಗಿದಿರಾ ಅಂತು. ಹೂಂ ಅಂದೆ. ಪರಿಚಯ ಸಿಕ್ತ ಅಂದಳು ಇಲ್ಲ ಅಂತ ನಿಜ ಹೇಳಿ ಬಿಟ್ಟೆ. ಇದ್ರಲ್ವಾ ಸಿಗೊದು ಅಂದಳು. ಮುಖಕ್ಕೆ ರಾಚಿದಂತೆ ಆಗಿ ಯಾರು ನೀವು ಅಂದೆ. ಈ ಬೀದಿಗೆ ಹೊಸದಾಗಿ ಬಾಡಿಗೆ ಬಂದಿದೀವಿ. ನಮಗೆಲ್ಲ ನಿಮ್ಮ ಮನೆಯ ಹಾಡು ತುಂಬಾ ಪರಿಚಯ ಅಂದಳು. ಅದೇನು ನಿನ್ನೆ ಇಡೀ ದಿನ ಹಾಡೇ ಇಲ್ಲ ಅಂದಳು. ನಮ್ಮ ಯಜಮಾನ್ರು ಊರಿಗೆ ಹೋಗಿದಾರೆ ಅಂತ ಉಗುಳು ನುಂಗಿದೆ. ಇವತ್ತು ಫೋನು ಮಾಡಿ ಕರೆಸಿಬಿಡಿ ಅಂದಳು. ಕೆನ್ನೆಗೆ ಹೊಡೆದಂತಾಗಿ ಆಂ ಎಂದು ಕೂಗಿದೆ. ನಮ್ಮ ಕುಸುಮಾ ಹಾಡಿಲ್ಲದೆ ಊಟಾನೇ ಮಾಡಲ್ಲ, ಆಂ ಆಂ ಅಂತ ಘೋರಾಕಾರವಾಗಿ ಅತ್ತು ಊಟ ಮಾಡಿಸಬೇಕಾಗಿದೆ. ನಂಗೆ ತುಂಬಾ ಅಳೋಕೆ ಬರೊಲ್ಲ ಸುಸ್ತಾಗುತ್ತೆ ಅಂದಳು. ಪೂರ್ತಿ ಒಣಗಿ ಹೋದ ನಾಲಿಗೆಯಿಂದ ತೊದಲುತ್ತ ಕೇಳಿದೆ ಕುಸುಮ ಯಾರು? ಅಷ್ಟರಲ್ಲಿ ಆಕೆಯ ಪಕ್ಕವಿದ್ದ ದೈತ್ಯ ಆಕೃತಿಯೊಂದು ಸೊಪ್ಪು ತಿನ್ನಲು ಬಂದ ಆಕಳನ್ನು ಅಟ್ಟಿಸಿಕೊಂಡು ವೌ ವೌ ಎಂದು ಜೋರಾಗಿ ಕೂಗಿತು. ಕುಸುಂ ಕೀಪ್‌ ಕ್ವಾಯಟ್‌ ಎಂದು ಆಕೆ ಮುದ್ದುಗರೆದು ತಲೆ ಸವರಿದಳು. ಬೆಂಡೆಕಾಯಿ ಬಿಟ್ಟು ಒಳಗೋಡಿ ಬಂದು ಬಾಗಿಲು ಹಾಕಿಕೊಂಡೆ.

 ಅಪ್ಪ ಕೆಲಸ ಮಾಡುವಾಗ ಹಾಡುವುದಿಲ್ಲ. ಖಾಲಿಯಿದ್ದಾಗ ಮಾತ್ರ ಹಾಡುವುದು ಅದಕ್ಕಾಗಿ ಅವನಿಗೆ ನಿರಂತರವಾಗಿ ಕೆಲಸ ಕೊಡೋಣವೆಂದು ಮಕ್ಕಳು ಯೋಜನೆ ಹಾಕಿದರು. ಅದರ ಪ್ರಕಾರ ನಾನು ಚಹಾ-ಅನ್ನ ಇತ್ಯಾದಿ ಮಾಡುವುದನೆಲ್ಲ ನಿಲ್ಲಿಸಿದೆ. ಅಪ್ಪ ಅಮ್ಮನ ಅನ್ನ ತುಂಬಾ ಮೆತ್ತಗಾಗುತ್ತದೆ ನೀನು ಉದುರುದುರಾಗಿ ಮಾಡುತ್ತಿ ಪ್ಲೀಸ್‌ ನೀನೇ ಮಾಡಪ್ಪ ಎಂದು ಪೂಸಿ ಹೊಡೆದರು. ನಿನ್ನ ಚಹಾ ಕುಡಿದ ಮೇಲೆ ಇನ್ನೇನು ಬೇಕೆಂದೇ ಅನ್ನಿಸುವುದಿಲ್ಲ, ನೀನೇ ಚಾ ಮಾಡಪ್ಪ ಎಂದು ಬೇಡಿಕೊಂಡರು. ಊಟವಾಗುತ್ತಿದ್ದಂತೆಯೆ ಪಗಡೆಯಾಡೋಣ, ಇಸ್ಪೀಟು ಆಡೋಣ, ಕೇರಂ ಆಡೋಣ ಅಂತೆಲ್ಲ ಕೌಟುಂಬಿಕ ಆಟವನ್ನು ಆರಂಭಿಸಿದರು. ಕೆಲಸ-ಆಟಗಳ ಮಧ್ಯೆ ಹಾಡು ಪೂರ್ತಿ ನಿಲ್ಲದಿದ್ದರೂ ರಭಸ ಕೊಂಚ ತಗ್ಗಿತು.

ಮೊನ್ನೆ ಸಂಜೆ ಏನೂ ಕೆಲಸವಿಲ್ಲದ್ದರಿಂದ ನಮ್ಮ ಹೆಬ್ಬುಲಿ ಹಾಡುವ ಕೆಲಸಕ್ಕೆ ತನ್ನನ್ನು ಪೂರ್ತಿಯಾಗಿ ಕೊಟ್ಟುಕೊಂಡ. ಖಾಲಿಯಾದ ದೊಡ್ಡ ಅಕ್ಕಿ ಡಬ್ಬವೂ ಅವನ ಹುರುಪಿಗೆ ಸಾಥ್‌ ಕೊಟ್ಟಿತು. ಘಟಾ ಸಾವನ್‌ ಕಿ ಘಟಾ ಅಂತ ಡಬ್ಬಿ ಬಡಿದು ಮನಸೋ ಇಚ್ಛೆ ಹಾಡಿಕೊಂಡ. ನಾವೆಲ್ಲ ರೂಮು ಸೇರಿ ಬಾಗಿಲು ಹಾಕಿಕೊಂಡು ಕಿವಿಗೆ ಇಯರ್‌ ಫೋನು ತುರುಕಿಕೊಂಡು ಸಿನಿಮಾ ನೋಡಿದೆವು. ಸ್ವಲ್ಪವೇ ಹೊತ್ತಿಗೆ ಗುಡುಗು-ಸಿಡಿಲುಗಳ ಭಾರೀ ಮಳೆ ಬರಲು ಶುರುವಾಯಿತು. ಮಗರಾಯ ಅಮ್ಮಾ ಇಲ್ಲಿ ನೋಡಮ್ಮ ನ್ಯೂಸಿನಲ್ಲಿ ಅಪ್ಪನ್ನ ತೋರಿಸ್ತಿದಾರೆ ಅಂತ ಘಾಬರಿಯಿಂದ ಫೋನು ಹಿಡಿದ. ಪಕ್ಕದ ಮನೆಗೆ ಹೊಸದಾಗಿ ಬಾಡಿಗೆ ಬಂದ ಹುಡುಗ ನ್ಯೂಸು ಚಾನೆಲ್ಲಿನವನಂತೆ ಸಾವನ್‌ ಕಿ ಘಟಾ ಹಾಡನ್ನು ಆಮೇಲೆ ಸುರಿದ ಮಳೆಯನ್ನು ಒಟ್ಟಿಗೆ ಶೂಟ್‌ ಮಾಡಿ ತನ್ನ ಕ್ರಿಯೆಟಿವಿಟಿಯನ್ನು ಮೆರೆದಿದ್ದ.

ನಿನ್ನೆ ಕಾಲೇಜಿಂದ ಬಂದ ಮಗಳು ಅಮ್ಮಾ ಎದುರಗಡೆ ಮನೆ ವಾಣಿಯಕ್ಕ ತನ್ನ ಎಂಗೇಜಮೆಂಟ್‌ ಮುರಿದುಕೊಂಡಳಂತೆ ಅಂದಳು. ಅಯ್ಯೊ ಯಾಕೆ? ಅಷ್ಟೊಂದು ಗ್ರ್ಯಾಂಡ್‌ ಆಗಿ ಮಾಡಿದ್ರಲ್ಲ ಅಂತ ಆಶ್ಚರ್ಯದಿಂದ ಕೇಳಿದೆ. ಹಿಂದಿನ ದಿನ ಆ ಹುಡುಗ ಕೆಂಪು ಗುಲಾಬಿ ಬೊಕೆಯನ್ನು ಕಳಿಸಿದ್ದ, ನಮ್ಮಪ್ಪ ಈ ಗುಲಾಬಿ ಹೂವು ನಿನಗಾಗಿ ಇದು ಚೆಲ್ಲುವ ಪರಿಮಳ ನಿನಗಾಗಿ ಅಂತ ಅರ್ಧ ಗಂಟೆ ಕಿರಿಚಿದನಲ್ಲ, ಅವಳಿಗೆ ಹೊಟ್ಟೆ ತೊಳೆಸಿ ವಾಂತಿಯಾಗಿ ಆ ಬೊಕೆ ಕಂಡರೆ ವಾಕರಿಕೆ ಬರೊಕೆ ಶುರುವಾಯ್ತಂತೆ ಪಾಪ ಅಂದಳು.

ಒಂದು ಭಾನುವಾರ ಹೆಬ್ಬುಲಿ ಬೆಳಿಗ್ಗೆಯೇ ಉತ್ಸಾಹ ಉಕ್ಕೇರಿ ಎದ್ದೇಳು ಮಂಜುನಾಥ ಹಾಡಲು ಶುರು ಮಾಡಿದ ಅದರಲ್ಲಿ ಎದ್ದೇಳು, ಏಳು ಈ ಶಬ್ದಗಳನ್ನೇ ಮತ್ತೆ ಮತ್ತೆ ರಿಪೀಟ್‌ ಮಾಡುತ್ತ ಒಂದೊಂದನ್ನು ಎಪ್ಪತ್ತೆಂಭತ್ತು ಸಲ ಬೇರೆ ಬೇರೆ ಸ್ವರ ವಿನ್ಯಾಸದಲ್ಲಿ ಚೀರುತ್ತ ಹಾಡಿಕೊಂಡ. ಸ್ವಲ್ಪ ಹೊತ್ತಿಗೆ ಹಿತ್ತಿಲ ಬೇಲಿಯ ಹತ್ತಿರ ಹಿಂದಿನ ಮನೆ ಶೋಭಕ್ಕ ಕರೆದರು. ಕೈಲೊಂದು ಪಾಯಸದ ಲೋಟ. ಮೂರು ವರ್ಷದಿಂದ ನನ್ನ ಮಗ ಕೂತಲ್ಲೇ ಗೂಬೆ ಥರಾ ಕೂತ್ಕೊತಿದ್ದ ಕಣ್ರೀ, ಒಂದು ಕೆಲಸ, ಕಾರ್ಯ ಅಂತ ಏನೂ ಮಾಡದೇ ದಂಡ-ಪಿಂಡವಾಗಿದ್ದ ಇವತ್ತು ನಿಮ್ಮ ಮನೆಯವರ ಹಾಡಿನ ಪುಣ್ಯ ನೋಡ್ರಿ ಕೇಳಕಾಗದೆ ಎದ್ದು ಸರಸರ ಅಂತ ತಯಾರಾಗಿ ಕೆಲಸ ಹುಡುಕ್ಕೊಂಡು ಹೋಗಿದಾನೆ, ಸಿಕ್ಕೋವರೆಗೂ ಮನೆಗೆ ಕಾಲಿಡಲ್ಲ ಅಂತ ಪ್ರತಿಜ್ಞೆ ಬೇರೆ ಮಾಡಿದಾನಮ್ಮ ಅಂತ ಹೇಳಿ ಆನಂದಬಾಷ್ಪ ಒರೆಸಿಕೊಂಡರು.

ನೋಡಿ ಇವೆಲ್ಲ ಕೆಲವೇ ಕೆಲವೇ ಸ್ಯಾಂಪಲ್‌ ಘಟನೆಗಳು. ನಮ್ಮ ಹಾಡಿನ ಹುಲಿಯಿಂದ ನಿಮಗೂ ಏನಾದರೂ ಪ್ರಯೋಜನ ಆಗಬಹುದೇ ಎಂದು ಆಲೋಚಿಸಿ. ಹಾಗೇನಾದರೂ ಇದ್ದರೆ ನಮ್ಮ ಹೆಬ್ಬುಲಿಯನ್ನು ಸಂಪರ್ಕಿಸಿ. ಯಾವುದೇ ಸಂಭಾವನೆಯನ್ನು ಪಡೆಯದೆ, ಯಾವ ವಾದ್ಯಗಾರರ ಸಾಥ್‌ ಬಯಸದೇ ತಾನೊಬ್ಬನೇ ಎಲ್ಲವನ್ನೂ ನಿಭಾಯಿಸುವ ಅಪ್ರತಿಮ, ಅಪ್ಪಟ ಸಂಗೀತಪ್ರೇಮಿ ಕಲಾವಿದ ಹುಲಿಯನ್ನು ಕರೆಸಿ ಕಛೇರಿ ಮಾಡಿಸಿ ನೀವೂ ಕೃತಾರ್ಥರಾಗಿ ಎನ್ನುವುದು ನನ್ನ ಉಚಿತ ಸಲಹೆ

‍ಲೇಖಕರು Admin

24 December, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading