ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗಿರೀಶ್ ಕಾಸರವಳ್ಳಿ ಬರೆಯುತ್ತಾರೆ: ಅವರು ಋತುಪರ್ಣೋ ಘೋಷ್

ಗಿರೀಶ್ ಕಾಸರವಳ್ಳಿ

ಮೊನ್ನೆ ನಿಧನರಾದ ಋತುಪರ್ಣೋ ಘೋಷ್ ರದು ವಿಶಿಷ್ಠ ವ್ಯಕ್ತಿತ್ವ. ತಮ್ಮ ಚಿತ್ರಗಳಿಂದ ಹೆಸರಾದಂತೆಯೇ ಅವರ ಕೆಲವು ನಡಾವಳಿಗಳಿಂದಲೂ ಹಲವರ ಗಮನ ಸೆಳೆದವರು. ಒಂದು ನಿಟ್ಟಿನಿಂದ ನೋಡಿದಾಗ ಅಸ್ಖಲಿತ ಇಂಗ್ಲೀಷ್ನಲ್ಲಿ, ತಮ್ಮ ದನಿಯನ್ನು ಕೋಮಲವಾಗಿಸಿಕೊಂಡು ಲಘು ಹಾಸ್ಯ ಚಟಾಕಿಗಳನ್ನು ಹಾರಿಸುತ್ತಾ, ಸೊಫಿಸ್ಟಿಕೇಟೆಡ್ ಮ್ಯಾನರಿಸಂನಿಂದ ಜನರನ್ನು ಸೆಳೆಯುತ್ತಿದ್ದ ಅವರು ಬೆಂಗಾಲಿ ಭದ್ರ ಲೋಕ್ನ ಉತ್ತಮ ಮಾದರಿಯಾಗಿ ಕಾಣಿಸುತ್ತಿದ್ದರು.

ಇನ್ನೊಂದು ನಿಟ್ಟಿನಿಂದ ನೋಡಿದಾಗ ಚಿತ್ರ ವಿಚಿತ್ರ ಪೋಷಾಕುಗಳನ್ನು ಧರಿಸಿ, ಸೌಂದರ್ಯ ಸ್ಪರ್ಧೆಯ ಕ್ಯಾಟ್ ವಾಕ್ ನಡಿಗೆ ನಡೆಯುತ್ತಾ ಬರುತ್ತಿದ್ದ ಅವರು ಒಬ್ಬ ಸೊಗಸುಗಾರನಾಗಿ ಕಾಣಿಸುತ್ತಿದ್ದರು. ಆದರೆ ಇವೆರಡಕ್ಕೂ ಮೀರಿದ ಒಬ್ಬ ಪ್ರಖರ ಚಿಂತಕ, ವಿಚಾರವಾದಿ, ಸೂಕ್ಷ್ಮ ಸಂವೇದನೆಯ ಮಾನವೀಯ ಕಾಳಜಿಯುಳ್ಳ ಸಾಮಾಜಿಕ ಅವರೊಳಡಗಿದ್ದಾನೆ ಎಂದು ಅರಿವಾಗುವುದು ಅವರ ಚಿತ್ರಗಳನ್ನು ನೋಡಿದಾಗ.
ಸ್ವಾತಂತ್ರಾನಂತರದ ಬೆಂಗಾಲಿ ಚಿತ್ರಪರಂಪರೆಯಲ್ಲಿ ಸತ್ಯಜಿತ್ ರೇ, ಮೃಣಾಲ್ ಸೆನ್ ಹಾಗೂ ಋತ್ವಿಕ್ ಘಟಕರನ್ನು ಮೊದಲ ಪರಂಪರೆಯವರೆಂದೂ , ಬುದ್ಧದೇವ್ ದಾಸ್ಗುಪ್ತ, ಗೌತಮ್ ಘೋಷ್ ಹಾಗೂ ಅಪಣರ್ಾ ಸೆನ್ರನ್ನು ಎರಡನೆಯ ಪೀಳಿಗೆಯವರೆಂದೂ ಕರೆಯುವುದು ವಾಡಿಕೆ. ಆ ಕ್ರಮದಲ್ಲಿ 3ನೆಯ ಪೀಳಿಗೆಯನ್ನು ಗುರುತಿಸ ಹೊರಟರೆ ಅವರಲ್ಲಿ ಬಹು ಮುಖ್ಯರಾಗಿ ಕಾಣಿಸುವವರು ಋತುಪರ್ಣೋ ಘೋಷ್
ಅವರ ಚಿತ್ರಯಾತ್ರೆ ಆರಂಭವಾಗಿದ್ದು `ಹಿರೇರ್ ಅಂಗಟಿ`( ವಜ್ರದ ಉಂಗುರ- 1992) ಎಂಬ ಮಕ್ಕಳ ಚಿತ್ರದಿಂದ. ನಾನು ನೋಡಿರದ ಆ ಚಿತ್ರ ತುಂಬಾ ಭಿನ್ನವಾಗಿತ್ತು ಎಂಬ ಮಾತುಗಳನ್ನು ಕೇಳಿದ್ದೇನೆ. ಅವರು ದೇಶಾದ್ಯಂತ ಹರಡಿರುವ ಗಂಭೀರ ಚಿತ್ರರಸಿಕರ ಗಮನ ಸೆಳೆದಿದ್ದು ಎರಡನೇ ಚಿತ್ರ `ಉನಿಷೆ ಏಪ್ರಿಲ್`( ಏಪ್ರಿಲ್ ಹತ್ತೊಂಬತ್ತು-1994) ಮೂಲಕ. ವೃತ್ತಿಗೆ ಪೂರ್ಣವಾಗಿ ತನ್ನನ್ನು ಸಮರ್ಪಿಸಿಕೊಂಡ ಯಶಸ್ವಿ ನೃತ್ಯಗಾತಿಯೊಬ್ಬಳು ವೈಯಕ್ತಿಕ ಜೀವನದಲ್ಲಿ ಸೋತಿದ್ದರ ಕಥೆ ಇದು. ತಾಯಿ ಮತ್ತು ಡಾಕ್ಟರ್ ವೃತ್ತಿಯಲ್ಲಿರುವ ಅವಳ ಮಗಳ ನಡುವೆ ನಡೆಯುವ ಮುಖಾಮುಖಿಯಲ್ಲಿ ಅವರು ಅಂತರ್ ಸಂಬಂಧಗಳನ್ನು ಬಿಚ್ಚಿಕೊಳ್ಳುತ್ತಾ ಹೋಗುವಂತೆ ಚಿತ್ರ ಕಟ್ಟಿದ ಕ್ರಮ ತುಂಬಾ ಭಿನ್ನವಾಗಿತ್ತು. ಆ ವರ್ಷದ ರಾಷ್ಟ್ರಪತಿಗಳ ಸ್ವರ್ಣ ಪದಕ ವಿಜೇತ ಚಿತ್ರ ಮಗಳ ಪಾತ್ರವಹಿಸಿದ್ದ ದೇಬಶ್ರೀ ರಾಯ್ ಅವರಿಗೆ ಶ್ರೇಷ್ಠ ನಟಿ ಪ್ರಶಸ್ತಿಯನ್ನು ಗಳಿಸಿ ಕೊಟ್ಟಿತ್ತು.

ಅವರ ಈ ಯಶಸ್ಸು ಮುಂದಿನ ಚಿತ್ರಗಳಲ್ಲೂ ಮುಂದುವರೆಯಿತು. `ದಹನ್` ವಸ್ತು ಮತ್ತು ನಿರ್ವಹಣೆಯಿಂದ ಸಮಾಜದ ವೈರುದ್ಧ್ಯಗಳತ್ತ ಬೊಟ್ಟು ಮಾಡಿ ನಮ್ಮ ಆತ್ಮ ಪ್ರಜ್ನೆಯನ್ನೇ ಪ್ರಶ್ನೆ ಮಾಡುವಂತಿತ್ತು. ಹುಡುಗಿಯೊಬ್ಬಳ ಅತ್ಯಾಚಾರಕ್ಕೆ ನಾಲ್ಕು ಜನರು ಮುಂದಾದಾಗ ಅಲ್ಲಿರುವ ಜನರು ಕಂಡು ಕಾಣದಂತೆ ಮುಖ ತಿರುಗಿಸಿ ನಡೆದು ಬಿಡುತ್ತಾರೆ. ಆದರೆ ದಿಟ್ಟೆಯೊಬ್ಬಳ ಪ್ರತಿಭಟನೆಯಿಂದ ಅತ್ಯಾಚಾರ ತಪ್ಪುತ್ತದೆ. ಹುಡುಗಿಯರಿಬ್ಬರನ್ನೂ ಮಾಧ್ಯಮಗಳು ದೊಡ್ಡ ನಾಯಕಿರೆನ್ನುವಂತೆ ಬಿಂಬಿಸುತ್ತವೆ. ಆದರೆ ದಿನಗಳೆದಂತೆ ವೈಯಕ್ತಿಕ ಜೀವನವನ್ನು ಕೆದಕಲಿಚ್ಚಿಸುವ ಮಾಧ್ಯಮ ಹಾಗೂ ಮಧ್ಯಮ ವರ್ಗದ ಕೆಟ್ಟ ಕುತೂಹಲ, ಅನ್ಯಾಯದ ಮಾರ್ಗ ಗಳ ಮೂಲಕ ಆ ನಾಲ್ವರು ಅತ್ಯಾಚಾರಿಗಳ ವಿಜ್ರೃಂಭಿಸುವ ಪರಿ ನಮ್ಮ ಸಮಾಜದ ವೈರುದ್ಧ್ಯಗಳನ್ನು ತೋರಿಸುತ್ತದೆ. ಮುಖ್ಯ ಪಾತ್ರ ವಹಿಸಿದ ಇಂದ್ರಾನಿ ಹವಲ್ದಾರ್ ಹಾಗೂ ರಿತುಪಣರ್ಾ ಸೆನ್ಗುಪ್ತಾ ಇಬ್ಬರೂ ಆ ವರ್ಷ ಶ್ರೇಷ್ಠ ನಟಿ ಪ್ರಶಸ್ತಿಯನ್ನು ಹಂಚಿ ಕೊಂಡರು. (ತಾಯಿ ಸಾಹೇಬಾ ಚಿತ್ರದ ಅಭಿನಯಕ್ಕಾಗಿ ಜಯಮಾಲಾ ರವರು ಜ್ಯೂರಿ ಪ್ರಶಸ್ತಿ ಪಡೆದದ್ದೂ ಅದೇ ವರ್ಷ). ಸ್ತ್ರೀ ಪಾತ್ರಗಳ ಮೂಲಕ ಸಮಾಜವನ್ನು ವಿಮಶರ್ಾತ್ಮಕವಾಗಿ, ಸೂಕ್ಷ್ಮತೆಯಲ್ಲಿ ನೋಡುವ ಅವರ ಕ್ರಮ ಮುಂದಿನ ಕೆಲವು ಚಿತ್ರಗಳಲ್ಲೂ ಮುಂದುವರೆಯಿತು. ಅವರ ಮುಂದಿನ ಚಿತ್ರ ‘ ಬಾರಿವಾಲಿ’ಯೂ ಎಲ್ಲರ ಗಮನ ಸೆಳೆಯಿತಲ್ಲದೇ ಮುಖ್ಯ ಪಾತ್ರ ನಿರ್ವಹಣೆಗಾಗಿ ಹಿಂದಿ ನಟಿ ಕಿರನ್ ಖೇರ್ ಶ್ರೇಷ್ಠ ನಟಿ ಪ್ರಶಸ್ತಿಯನ್ನೂ ಪಡೆದರು.
ಲಿರಿಕಲ್ ಹ್ಯೂಮನಿಸ್ಟ್ ಸಂಪ್ರದಾಯದ ಸತ್ಯಜಿತ್ ರೇಯವರು ಪ್ರಖರವಾದ ವಾಸ್ತವಿಕ ಶೈಲಿಯಲ್ಲಿ ಸಮುದಾಯ ಜೀವನದಲ್ಲಿ ಮಾನವೀಯತೆ ಅನಾವರಣಗೊಳ್ಳುವುದನ್ನು ಚಿತ್ರಿಸುತ್ತಿದ್ದರು. ಮೃಣಾಲ್ ಸೇನ್ ಅವರು ನಿಷ್ಠ ರಾಜಕೀಯ ಸೈದ್ಧಾಂತಿಕ ನೆಲೆಯಿಂದ ಚಿತ್ರಗಳನ್ನು ಮಾಡಿದವರು. . ಬುದ್ದದೇವ್ ದಾಸ್ ಗುಪ್ತಾರವರು ಸರ್ರಿಯಲಿಸ್ಟಿಕ್ ದೃಶ್ಯ ರೂಪಕಗಳ ಮೂಲಕ ಕಾವ್ಯಾತ್ಮಕವಾಗಿ ಚಿತ್ರ ನಿರೂಪಿಸುವವರು. ಋತುಪರ್ಣೋ ರ ಶೈಲಿ ಇವರೆಲ್ಲರಿಗಿಂತ ಭಿನ್ನ. ಸಾಂಪ್ರದಾಯಿಕ ಚಿತ್ರ ಪರಂಪರೆಗೆ ಸೇರ ಬಹುದಾದ ಇವರ ಚಿತ್ರಗಳಲ್ಲಿ ನವಿರಾದ ನಾಟಕೀಯತೆಯನ್ನು ಕಾಣಬಹುದು. ಅಭಿಜಾತ ಸಾಹಿತ್ಯ ಮಾರ್ಗ ದಲ್ಲಿಯಂತೆ ಸರಳ ರೇಖಾತ್ಮಕ ಕಥನ , ಭಾವನಾತ್ಮಕ ಒಳತೋಟಿಗಳನ್ನು ಹಂದರ ಹಂದರವಾಗಿ ಬಿಡಿಸಿಡುವ ಪಾತ್ರ ಚಿತ್ರಣ, ರೂಪಕಕ್ಕಿಂತ ವಾಸ್ತವಕ್ಕೇ ದಕ್ಕುವ ನಿರೂಪಣಾ ಮಾರ್ಗ ಅವರದ್ದು. ವಾಚ್ಯ ಎನ್ನಿಸದ ಹಾಗೇ ಸಾಂಕೇತಿಕವೂ ಆಗದ ಮೊನಚಾದ ಅರ್ಥಗರ್ಭಿತ ಸಂಭಾಷಣೆ, ಸಾಂಪ್ರದಾಯಿಕ ನೆಲೆಯಲ್ಲಿ ರುಚಿಸಬಹುದಾದ ತಾಂತ್ರಿಕ ಪಕ್ವತೆ, ಮಧುರ ಅನುಭವವನ್ನು ಹುಟ್ಟಿಸಬಲ್ಲ ಅಭಿನಯ ಕ್ರಮ ಇವುಗಳಿಂದಾಗಿ ಗುಣಾತ್ಮಕವಾಗಿಯೂ ವ್ಯಾವಹಾರಿಕವಾಗಿಯೂ ಅವರ ಚಿತ್ರಗಳು ಮನ್ನಣೆ ಪಡೆಯುತ್ತಿದ್ದವು.

ಪರಂಪರೆಯಿಂದ ಬಂದ ಚಿತ್ರಕಟ್ಟುವ ಕ್ರಮವನ್ನು ಆಧುನಿಕ ಕ್ರಮಕ್ಕೆ ಒಗ್ಗಿಸಿದ ಅವರ ಪ್ರಯೋಗಶೀಲತೆ ತೊಂಬತ್ತರ ದಶಕದ ನಂತರ ಭಾರತೀಯ ಚಿತ್ರಗಳ ಎದುರಿಸುತ್ತಿದ್ದ ಬಿಕ್ಕಟ್ಟಿಗೆ ಪರಿಹಾರದಂತಿದ್ದವು. ಊನಿಶೆ ಏಪ್ರಿಲ್, ದಹನ್, ಬಾರಿವಾಲಿಗಳನ್ನು ನಾನು ಅವರ ಚಿತ್ರಯಾತ್ರೆಯ ಮೊದಲ ಘಟ್ಟ ಎಂದು ಗುರುತಿಸುತ್ತೇನೆ
2003ರಲ್ಲಿ ತೆರೆ ಕಂಡ ಶುಭೋ ಮುಹುರತ್ ನಿಂದ ಅವರ ಎರಡನೆಯ ಘಟ್ಟ ಆರಂಭವಾಯಿತೆನ್ನ ಬಹುದೇನೋ. ಬೆಂಗಾಲಿ ನಟನಟಿಯರನ್ನು ಬಿಟ್ಟು ಚಿತ್ರದ ಯಶಸ್ಸಿಗಾಗಿ ಹಿಂದಿ ತಾರೆಯರ ಮೊರೆ ಹೋಗಲು ಆರಂಭಿಸಿದ್ದು ಆಗಲೇ. ಇದರಿಂದ ಎಲ್ಲೋ ಒಂದು ಕಡೆ ಅವರ ಚಿತ್ರಗಳ ಬಂಧ ಸಡಿಲವಾಗತೊಡಗಿತು ಎಂದು ನನ್ನ ಅನ್ನಿಸಿಕೆ. ಶುಬೋ ಮುಹರತ್, ಅಂತರ್ ಮಹಲ್, ಚೋಖೇರ್ ಬಾಲಿ, ಲಾಸ್ಟ್ ಲಿಯರ್ ನಂತಹ ಚಿತ್ರಗಳನ್ನು ಉದಹರಿಸಬಹುದು.. ರಬೀಂದ್ರನಾಥ್ ಟಾಗೋರ್ ರ ಕಥೆ ಆಧರಿಸಿದ ಚೋಖೇರ್ ಬಾಲಿ ಚಿತ್ರದಲ್ಲಿ ಬಾಲಿವುಡ್ ನ `ಗಾ್ಲೃಮರ್ ಡಾಲ್` ಐಶ್ವರ್ಯ ರೈ ಬಿನೋದಿನಿಯಾಗದೇ ಐಶ್ವರ್ಯಾ ರಾಯ್  ಆಗಿಯೇ ಉಳಿದು ಬಿಡುತ್ತಾರೆ. ಆನಂತರ ಅಮಿತಾಬ್ ಬಚ್ಚನ್ ಕುಟುಂಬದ ಒಬ್ಬೊಬ್ಬರನ್ನೂ ವ್ರತದಂತೆ ಕರೆತಂದು ಪಾತ್ರ ಮಾಡಿಸ ಹೊರಟರು. ನಂತರ ಕಾರ್ಪೊರೇಟ್ ಜಗತ್ತಿನ ವ್ಯವಹಾರಗಳೊಂದಿಗೆ ಕೈ ಬೆಸೆದರು, ಬಾಲಿವುಡ್ ಖ್ಯಾತರನ್ನು ತನ್ನ ಚಿತ್ರಗಳಿಗೆ ಅನಿವಾರ್ಯ ಎಂಬಂತೆ ಬಿಂಬಿಸ ತೊಡಗಿದರು. ಈ ಪ್ರಯತ್ನಗಳಲ್ಲಿ ಅವರ ಪ್ರತಿಭೆ ಮುಕ್ಕಾಗುತ್ತಿತ್ತು, ಚಿತ್ರಗಳು ಸೊರಗುತ್ತಿದ್ದವು ಎನ್ನುವ ಸತ್ಯವನ್ನು ಋತುಪರ್ಣೋಗೆ ಯಾರಾದರೂ ಅರಿವು ಮಾಡಿಕೊಟ್ಟಿದ್ದರೆ ಚೆನ್ನಿರುತ್ತಿತ್ತು. ಬಾಲಿವುಡ್ ಕಲಾವಿದರನ್ನು ಕರೆ ತರುವ ಮೂಲಕ ಅವರು ತಮ್ಮ ಗಹನವಾದ ಚಿಂತನೆಗಳನ್ನು ಹೆಚ್ಚು ಜನಕ್ಕೆ ಮುಟ್ಟಿಸುವಲ್ಲಿ ಯಶಸ್ವಿಯಾದರು. ಇದೊಂದು ಪ್ಯಾರಾಡಾಕ್ಸ್ ಆದರೂ ಸತ್ಯ. ಕಥನ ಕ್ರಮವನ್ನು ನೀರಾಗಿಸದೆಯೂ ಜನಪ್ರಿಯ ನಟರನ್ನು ಬಳಸಿ ಹೆಚ್ಚು ಜನರನ್ನು ತಲುಪಲು ಸಾಧ್ಯ ಎಂಬುದನ್ನು ಋತುಪರ್ಣೋರಿಗೂ ತೋರಿಸಲು ಸಾಧ್ಯವಾಗಲಿಲ್ಲ.
ಇಷ್ಟಾಗಿಯೂ ಇಲ್ಲಿ ಗಮನಿಸ ಬೇಕಾದ ಮಹತ್ವದ ಸಂಗತಿಯೊಂದಿದೆ. ಸಾಮಾನ್ಯವಾಗಿ ಕಲಾತ್ಮಕ ಚಿತ್ರಗಳಿಂದ ತಮ್ಮ ಪ್ರಯಾಣವನ್ನು ಆರಂಭಿಸಿದವರು ಹೆಚ್ಚು ( ಹೆಚ್ಚು ಎನ್ನುವುದಕ್ಕೆ ಪ್ರಮಾಣವೇನೋ ಗೊತ್ತಿಲ್ಲ) ಪ್ರೇಕ್ಷಕರನ್ನು ತಲುಪ ಬೇಕು ಎಂಬ ನೆಪವೊಡ್ಡಿ ಚಿತ್ರೋದ್ಯಮದ ಭಾಗವಾಗಿ ಕಳೆದು ಹೋಗುತ್ತಾರೆ. ಆದರೆ ಋತುಪರ್ಣೋರವರ ಚಿತ್ರ ಜೀವನ ಅ ರೀತಿಯಾಗಲಿಲ್ಲ. ಎರಡನೇ ಘಟ್ಟದಲ್ಲಿ ಕೂಡ ಸಾಮಾಜಿಕ ಸಂಘರ್ಷ ಗಳಿಗೆ ಸ್ಪಂದಿಸುತ್ತಾ ಅವರ ಚಿತ್ರಗಳ ಆತ್ಮ ಪುಟಿಯುತಿತ್ತು. ಅವರು ತಮ್ಮ ಚಿತ್ರಗಳಲ್ಲಿ ಹೊರ ಆವರಣದಲ್ಲಿ ಹೊಂದಾಣಿಕೆ ಮಾಡಿಕೊಂಡರೇ ಹೊರತು ಒಳ ಹೂರಣದಲ್ಲಿ ಅಲ್ಲ.
ಅವರ ಇತ್ತೀಚಿಗೆ ನಿರ್ದೇಶಿಸಿದ ಚಿತ್ರಾಂಗದಾ( 2012), ಹಾಗೂ ಚಿತ್ರಕಥೆ ಬರೆದು, ಅಭಿನಯಿಸಿದ ಆರೆಕ್ತಿ ಪ್ರೇಮೆರ್ ಗೋಲ್ಪೋ,( ಮತ್ತೊಂದು ಪ್ರೇಮ ಕಥೆ- 2011) ಮೆಮೋರೀಸ್ ಇನ್ ಮಾರ್ಚ್ (2011) ಗಳಲ್ಲಿ ಸಲಿಂಗ ಕಾಮ ಮುಖ್ಯ ವಸ್ತು. ಸಲಿಂಗ ಪ್ರೇಮಿಯ ಪಾತ್ರವನ್ನೂ ತಾವೇ ನಿರ್ವಹಿಸಿದರು.( ಅದರೊಂದಿಗೇ ತಾವು ಒಬ್ಬ ಉತ್ತಮ ನಿರ್ದೇಶಕ, ಉತ್ತಮ ಚಿತ್ರಕಥಾ ಲೇಖಕ ಮಾತ್ರ ಅಲ್ಲ. ಉತ್ತಮ ನಟನೂ ಹೌದು ಎಂದು ಸಾಬೀತು ಮಾಡಿದರು) ಸಲಿಂಗ ಕಾಮದಂತಹ ಸೂಕ್ಷ್ಮ ವಸ್ತುವನ್ನು ರೋಚಕತೆಗಾಗಿ ಬಳಸದೇ , ಅಶ್ಲೀಲತೆಯ ಸೋಂಕೂ ಇಲ್ಲದ ಹಾಗೆ, ಮಡಿವಂತ ಭಾರತೀಯ ಪ್ರೇಕ್ಷಕನಿಗೆ ಮುಜುಗರವಾಗದಂತೆ ಹೇಳುತ್ತಾ ಭಾರತೀಯ ಚಿತ್ರ ರಂಗವಷ್ಟೇ ಅಲ್ಲ ಭಾರತೀಯ ಸಮಾಜವೂ ಗಂಭೀರವಾಗಿ ಕೈಗೆತ್ತಿಕೊಳ್ಳದಿದ್ದ ವಿಷಯವೊಂದನ್ನು ಮುನ್ನೆಲೆಗೆ ತಂದು ವ್ಯಾಪಕವಾಗಿ ಚರ್ಚೆಯಾಗಿ ಭಿನ್ನ ಲೈಂಗಿಕತೆಯನ್ನು ಒಪ್ಪಿಕೊಳ್ಳುವಂತೆ ಮಾಡಿದ್ದು ನನಗೆ ಮಹತ್ವದ ಸಂಗತಿ ಎನ್ನಿಸುತ್ತದೆ. . ಒಂದು ಹಂತದಲ್ಲಿ ಜಾಗೃತಿ, ಇನ್ನೊಂದು ಹಂತದಲ್ಲಿ ಜಿಜ್ಞಾಸೆ ಇದನ್ನು ಅವರ ಚಿತ್ರಗಳು ಗಮನಾರ್ಹವಾಗಿ ಸಾಧಿಸಿದ್ದವು.
ಅವರ ದೊಡ್ಡ ಶಕ್ತಿ ಎಂದರೆ 90ರ ದಶಕದ ನಂತರದ ಚಿತ್ರಗಳು ಕೈ ಬಿಡುತ್ತಿದ್ದ ಕ್ಲಾಸಿಕಲ್ ಚಿತ್ರ ಚೌಕಟ್ಟನ್ನು ಪುನಹ ಜನಪ್ರಿಯ ಮಾಡಿದ್ದು. ಖ್ಯಾತ ಬಂಗಾಳಿ ಚಿತ್ರ ಹಾಗೂ ಸಾಹಿತ್ಯ ವಿಮರ್ಶ ಶಮಿಕ್ ಬಂದೋಪಾಧ್ಯಾಯ ಹೇಳುತ್ತಿದ್ದ `ಘೋಷ್ ಹಳೆಯ ಸಂವೇದನೆಗೆ ಹೊಸ ಜೀವಂತಿಕೆಯನ್ನು ನೀಡಿದ್ದಾರೆ` ಎಂಬ ಮಾತು ನನಗೆ ಬಹಳ ಆರ್ಥಪೂರ್ಣ ಎನ್ನಿಸುತ್ತದೆ. ಋತುಪರ್ಣೋ  ಪ್ರೊಲಿಫಿಕ್ ಫಿಲಂ ಮೇಕರ್. 20 ವರ್ಷಗಳಲ್ಲಿ 22 ಸಿನೆಮಾ ಮಾಡಿದ್ದಾರೆ. ಅಂದರೆ ಸರಾಸರಿ ವರ್ಷಕ್ಕೊಂದು. ಸತ್ಯಜಿತ್ ರೇ ಕೂಡ ಹೀಗೆ ಮಾಡುತ್ತಿದ್ದರು. ನಮ್ಮ ಡಾ ಶಿವರಾಮ ಕಾರಂತರ ಸಾಹಿತ್ಯ ಕೃಷಿ ಇದ್ದಂತೆ. ಹೀಗಾದಾಗ ನಿದರ್ೇಶಕ ಮತ್ತು ಪ್ರೇಕ್ಷಕನ ನಡುವೆ ಒಂದು ಸಾವಯವ ಸಂಬಂಧ ಬೆಳೆಯುವ ಅವಕಾಶವಿರುತ್ತದೆ.
ನಿರ್ದೇಶಕನ ಜೊತೆ ಅವನ ಪ್ರೇಕ್ಷಕನೂ ಸಾಗುತ್ತಿರುತ್ತಾನೆ, ಮಾಗುತ್ತಿರುತ್ತಾನೆ. ಋತುಪರ್ಣೋ ಈ ದಿಸೆಯಲ್ಲಿ ಅದೃಷ್ಟ ವಂತರು. ಇದರ ಜೊತೆಗೇ ಭಾರಿ ಬಂಡವಲು ಹೂಡುವ ನಿರ್ಮಾಪಕರು ಅವರ ಬೆನ್ನಿಗಿದ್ದರು. ಬಂಗಾಲಿ ಚಿತ್ರರಂಗದ ಘಟಾನುಘಟಿ ನಟನಟಿಯರು ಅವರ ಚಿತ್ರಗಳಲ್ಲಿ ಅಸಂಪ್ರದಾಯಿಕವಾದ ಪಾತ್ರಗಳನ್ನು ಮಾಡಲು ಮುಂದಾದರು. ಅಷ್ಟೇ ಒಳ್ಳೆಯ ಪ್ರೇಕ್ಷಕರು ಸಿಕ್ಕರು. ಘೋಷರಿಗಿದ್ದ ಈ ಅದೃಷ್ಟ ಎಷ್ಟು ಭಾರತೀಯ ಚಿತ್ರ ನಿರ್ದೇಶಕರಿಗೆ ದೊರೆತಿದೆ?
‘ಉನೀಷೆ ಏಪ್ರಿಲ್’ ಚಿತ್ರಕ್ಕೆ ಪ್ರಶಸ್ತಿ ಬಂದಾಗ ನನಗೆ ಋತುಪರ್ಣೋ ಹೆಸರು ಮೊದಲು ತಿಳಿದಿದ್ದು. ನಂತರ ಅವರ ‘ದಹನ್’ ಚಿತ್ರಕ್ಕೆ ಪ್ರಶಸ್ತಿ ಬಂದಾಗ ನನ್ನ ‘ತಾಯಿ ಸಾಹೇಬ’ ಚಿತ್ರಕ್ಕೆ ರಾಷ್ಟ್ರಪತಿಗಳ ಸ್ವರ್ಣ ಪದಕ ಬದಿತ್ತು. ಆ ವರ್ಷದ ಪ್ರಶಸ್ತಿ ವಿತರಣಾ ಸಮಾರಂಭದಂದು ಅವರನ್ನು ಮೊದಲ ಬಾರಿಗೆ ಭೇಟಿಯಾದೆ. ನಂತರ ಅವರು 22 ಚಿತ್ರಗಳಿಂದ 12 ಬಾರಿ ರಾಷ್ಟ್ರಪತಿಗಳ ಪ್ರಶಸ್ತಿ ಪಡೆದಿದ್ದಾರೆ. ನಾನೂ ನನ್ನ 14 ಚಿತ್ರಗಳಿಂದ ಅಷ್ಟೇ ಬಾರಿ ಪ್ರಶಸ್ತಿ ಪಡೆದಿದ್ದೇನೆ. ಹಾಗಾಗಿ ಅವರನ್ನು ಆ ಸಮಾರಂಭಗಳಲ್ಲಿ ಭೇಟಿಯಾಗುವ ಅವಕಾಶವಾಗುತ್ತಿತ್ತು. ಆತ್ಮೀಯತೆ ಬೆಳೆಯಿತು. ಅನೇಕ ವಿಚಾರಗಳಲ್ಲಿ ಪರಸ್ಪರ ಗೌರವವನ್ನು ಹೊಂದಿದ್ದೆವು. ಚಿತ್ರ ನಿರೂಪಣೆ ವಿಚಾರದಲ್ಲಿ ಭಿನ್ನತೆ ಇದ್ದರೂ ಅದು ಸಂವಾದಕ್ಕೆ ಕಾರಣವಾಗಿತ್ತೇ ಹೊರತು ಸಂಘರ್ಷಕ್ಕೆ ಕಾರಣವಾಗಿರಲಿಲ್ಲ. ಮೊನ್ನೆ ಮರು ಪ್ರಸಾರವಾದ ಅವರ ಹಳೆಯ ಸಂದರ್ಶನವೊಂದರಲ್ಲಿ ಅವರ ಮೆಚ್ಚಿನ ಚಿತ್ರಗಳ ಬಗ್ಗೆ ಮಾತನಾಡುತ್ತಾ ನನ್ನ ಚಿತ್ರಗಳನ್ನೂ ಸ್ಮರಿಸಿ ಕೊಂಡಿದ್ದರು. ಒಮ್ಮೆ ಭೇಟಿಯಾದಾಗ ಅವರ ಕೆಲವು ಚಿತ್ರಗಳ ಡಿವಿಡಿ ಕೊಟ್ಟಿದ್ದರು. ನನ್ನ ಕೆಲವು ಚಿತ್ರಗಳ ಡಿವಿಡಿ ಬೇಕೆಂದಿದ್ದರು. ಅತಿ ಸೋಮಾರಿಯಾದ ನಾನು ನಾಳೆ ಕಳುಹಿಸಿದರಾಯ್ತು ಎನ್ನುತ್ತಾ 4 ವರ್ಷ ದೂಡಿದೆ. ಹಾಗಾಗಿ ನನ್ನ ಇತ್ತಿಚಿನ ಚಿತ್ರಗಳ ಬಗ್ಗೆ ಅವರ ಅಭಿಪ್ರಾಯ ತಿಳಿಯುವ ಅವಕಾಶ ಸದಾ ಕಾಲಕ್ಕೂ ಸಿಗದಂತಾಯ್ತು.
ಕಳೆದ ಭೇಟಿಯಲ್ಲಿ ಅವರು ದೈಹಿಕವಾಗಿ ಕುಸಿದಿದ್ದನ್ನು ಗಮನಿಸಿದ್ದೆ. ಆದರೆ ಅವರ ಅನಾರೋಗ್ಯದ ವಿಚಾರ ನನಗೆ ಗೊತ್ತಾಗಲಿಲ್ಲ. ಪಿತ್ತಕೋಶದ ಸಮಸ್ಯೆ ವಿಚಾರವನ್ನು ಅವರೂ ಹೇಳಿರಲಿಲ್ಲ. ಅವಿವಾಹಿತರಾಗಿದ್ದ ಋತುಪರ್ಣೋರು ಹೆತ್ತವರು ತೀರಿಕೊಂಡ ನಂತರ ಒಂಟಿತನವನ್ನು ಅನುಭವಿಸುತ್ತಿದ್ದರು ಎಂದು ಕೇಳಿದ್ದೆ. ಅದೇನೇ ಇರಲಿ 49 ಖಂಡಿತಾ ಸಾಯುವ ವಯಸ್ಸಲ್ಲ ಅದರಲ್ಲೂ ಭಾರತೀಯ ಚಿತ್ರರಂಗ ಅವರಿಂದ ಬಹಳಷ್ಟನ್ನು ನಿರೀಕ್ಷಿಸುತ್ತಿದ್ದಾಗ!

(ನಿರೂಪಣೆ: ಎನ್.ಎಸ್.ಶ್ರೀಧರ ಮೂರ್ತಿ)

ವಿಜಯ ವಾಣಿ

‍ಲೇಖಕರು avadhi

4 June, 2013

2 Comments

  1. MANDYA RAMESH

    TUMBAA OLLEYA,MAAHITI IRUVA LEKHANA..KAASARAVALLI SIRGE,SHREEDAR SIRGE..THANKS.

  2. ಜಿ.ಎನ್ ನಾಗರಾಜ್

    ಋತುಪರ್ಣೋ ಘೋಷ್ ರವರ ಬಗ್ಗೆ ಒಂದು ಆತ್ಮೀಯವಾದ ಹಾಗೂ ಅವರ ಚಿತ್ರಜೀವನದ ಸಾರವನ್ನು ಕಾಸರವಳ್ಳಿಯವರು ನಮ್ಮ ಮುಂದೆ ಬಡಿಸಿದ್ದಾರೆ. ಒಬ್ಬ ಪ್ರತಿಭಾವಂತ ಮತ್ತೊಬ್ಬ ಪ್ರತಿಭಾವಂತನ ಬಗ್ಗೆ ತೋರಿಸಿದ ಗೌರವ ಸ್ವಾಗತಾರ್ಹ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading