“ಪರಂಗಿ” ಬಂದುದು ಎಲ್ಲಿಂದ?

bgl_swamy.jpgಬಿ ಜಿ ಎಲ್ ಸ್ವಾಮಿ

“ಪರಂಗಿ”ಯವರೆಂದರೆ ಇಂಗ್ಲಿಷರು ಎಂಬುದು ಇಂದಿನ ಸಾಮಾನ್ಯ ತಿಳಿವಳಿಕೆ. ಚಾರಿತ್ರಿಕ ಹಿನ್ನೆಲೆಯಲ್ಲಿ ಇದರ ಬೆಳವಣಿಗೆ ಸ್ವಾರಸ್ಯವಾಗಿದೆ. ಮೊದಮೊದಲು ಪರದೇಶದಿಂದ ನಮ್ಮ ದೇಶಕ್ಕೆ ಅಧಿಕ ಸಂಖ್ಯೆಯಲ್ಲಿ ಬಂದು ನೆಲೆಸಿದ ಬಿಳಿಯ ಜನಾಂಗ ಪೋರ್ಚುಗೀಸರದೇ. ಕ್ರುಸೇಡ್ ಕಾಲದಿಂದಲೂ ಫ್ರೆಂಚ್ ಜನಾಂಗಕ್ಕೆ ಫ್ರಾಂಕ್ಸ್ ಎಂಬ ಹೆಸರು ಸಂದಿತ್ತು. ಯೂರೋಪಿನಲ್ಲಿ ಪಾಶ್ಚಿಮಾತ್ಯರಿಗೂ ಇದೇ ಹೆಸರು ಬಳಕೆಯಲ್ಲಿತ್ತು. ಭಾರತಕ್ಕೆ ಬಂದು ನೆಲೆಸಿದ ಪೋರ್ಚುಗೀಸರಿಗೂ ನಮ್ಮವರು ಈ ಪದದ ರೂಪಾಂತರವನ್ನೇ – ಪರಂಗಿ – ಉಪಯೋಗಿಸಿದರು. ಪೋರ್ಚುಗೀಸು – ಹಿಂದೂ ವಿವಾಹಗಳ ಫಲಕ್ಕೂ ಇದೇ ಹೆಸರು ಅಂಟಿಕೊಂಡಿತು. ಅಂತರ್ಜಾತಿ ವಿವಾಹಗಳಿಂದ ಹುಟ್ಟಿದವರನ್ನು ಕೀಳು ಭಾವನೆಯಿಂದ ಸಂಭೋದಿಸುವ ಪ್ರತ್ಯೇಕತೆಯನ್ನು ಪಡೆದುಕೊಂಡಿತು, ಕ್ರಮೇಣ ಭಾರತಕ್ಕೆ ಬಂದ ಬಿಳಿಯ ಜನಾಂಗಕ್ಕೆಲ್ಲ ಈ ಪರಿಭಾಷೆಯೇ ಅನ್ವಯವಾಯಿತು.

ಇಲ್ಲಿ ಒಂದು ಟೀಕೆ ಉಚಿತವಾಗಿದೆ. ಪೋರ್ಚುಗೀಸು – ಹಿಂದೂ ವಿವಾಹಗಳು ಎಷ್ಟೋ ಕುಲೀನ ಮನೆತನಗಳಲ್ಲಿ ನಡೆದವು; ಗಣ್ಯ ವಂಶಜರ ಪಾರಂಪರ್ಯ ಬೆಳೆಯಿತು. ಅಂಥವರಿಗೆ ಪರಂಗಿ – ಅಪ್ ಪ್ರಯೋಗ ಸಲ್ಲಲಿಲ್ಲ. ಸಮಾಜದ ಕೆಳದರ್ಜೆಯಲ್ಲಿ ಹೇಯ ನಡತೆಯಿಂದ ಜನಿತರಾದವರಿಗೆ ಈ ಪ್ರಯೋಗ ಸಂದಿತು. ಜನತೆಯ ಕೀಳು ಶ್ರೇಣಿಯಲ್ಲಿ ಈ ಬೆರಕೆಗಳಿಗೆ ಉತ್ತೇಜನ ಕೊಡುವುದು ಆಲ್ಬುಕರ್ಕನ ಪಾಲಿಸಿಗಳಲ್ಲೊಂದಾಗಿತ್ತು. ಪರಂಗಿ ಪದಕ್ಕೆ ಆಡುಮಾತಿನ ಇನ್ನೊಂದು ದುರದೃಷ್ಟವೂ ಸಂಭವಿಸಿತು. ಒಂದು ಬಗೆಯ ಮೇಹರೋಗಕ್ಕೆ ಪೋರ್ಚುಗೀಸು ಭಾಷೆಯಲ್ಲಿ ಬ್ರಾಂಕೊ ಎಂಬ ಹೆಸರಿದೆ. ತಮಿಳರ ಮಾತಿನಲ್ಲಿ ಇದು ಪಿರಂಕಿ(ಗಿ) ಆಗಿಬಿಟ್ಟಿತು. ಪರಂಗಿ ರೋಗವೆಂಬ ಪದ ಹುಟ್ಟಿದ್ದು ಹೀಗೆ. ಪೋರ್ಚುಗೀಸರು ಮೊದಲು ಪರಂಗಿಯರಾದರು; ಪೋರ್ಚುಗೀಸು-ಹಿಂದೂ ಮದುವೆಗಳಿಂದ ಹುಟ್ಟಿದವರು ಪರಂಗಿಯವರೆಂದು ದೂಷಿತರಾದರು. ಮೇಹಜಾಡ್ಯ ಪರಂಗಿ ರೋಗವಾಯಿತು. ೧೭ನೇ ಶತಮಾನದಲ್ಲಿ ಪರಂಗಿ ಎಂಬುದು ಸಾಮಾನ್ಯವಾದ ಬೈಗುಳವಾಗಿತ್ತು. ೧೬೩೯ರಲ್ಲಿ ಪಾದರಿ ಮಾರ್ಟಿಂಜ್ ಎಂಬಾತ ಬರೆದಿಟ್ಟಿರುವ ಮುಕ್ತಕ: “ಕರಾವಳಿ ಪ್ರದೇಶದ ಪೋರ್ಚುಗೀಸರು ಭಾರತೀಯರ ಚಿತ್ತಕ್ಕೆ ನೋವುಂಟು ಮಾಡಿ ತನ್ಮೂಲಕ ಅವರ ತಾತ್ಸಾರವನ್ನು ತಂದುಕೊಂಡಿದ್ದಾರೆ.”

ಆದರೆ “ಪರಂಗಿ” ಪದಕ್ಕೆ ಕುಹಕವಾಗಲಿ ಹೀನಾಯವಾಗಲಿ ಸೋಕದಿದ್ದ ಸಂದರ್ಭಗಳೂ ಇದ್ದವು. ಹೊರದೇಶದಿಂದ ಆಮದಾದ ಗಿಡಮರಗಳಿಗೆ ಪರಂಗಿ ಚೆಕ್ಕೆ, ಪರಂಗಿಹಣ್ಣು, ಪರಂಗಿತಾಳೆ ಮೊದಲಾದ ಪದಗಳು ಉದಯವಾದದ್ದು ಇಂಥ ಪರ್ವಗಳಲ್ಲಿ. ಬಿಳಿಯರು ಯುದ್ಧಕಾಲದಲ್ಲಿ ಉಪಯೋಗಿಸುತ್ತಿದ್ದ ಕ್ಯಾನನ್ (cannon) ಎಂಬ ಗುಂಡು ಹಾರಿಸುವ ಶಸ್ತ್ರ ನಮಗೆ ಹೊಸತಾಗಿದ್ದುದರಿಂದ ಆ ಯಂತ್ರಕ್ಕೆ ಫಿರಂಗಿ ಎಂಬ ಮಾತು ಸಂದಿರುವಂತೆ ಭಾಸವಾಗುತ್ತದೆ.

(“ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೆರಿಕ” ಕೃತಿಯಿಂದ)

‍ಲೇಖಕರು avadhi

August 11, 2007

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: