ಹುಸೇನ್ ಪಾಶಾ
ಪತ್ರಕರ್ತರು ಹೀಗೂ ಇರ್ತಾರಾ?
-ಹೀಗೆ ಉದ್ಗರಿಸಿದ್ದು ಮೊನ್ನೆ ರೈಲಿನಲ್ಲಿ ನನ್ನ ಸಹ ಪ್ರಯಾಣಿಕ. ಪಿ.ಸಾಯಿನಾಥರ ಕನ್ನಡಕ್ಕೆ ಜಿ. ಎನ್.ಮೋಹನ್ ಅನುವಾದಿಸಿರುವ “ಬರ ಅಂದ್ರೆ ಎಲ್ರಿಗೂ ಇಷ್ಟ” ಕೃತಿಯ ಕುರಿತು ಆತನ ಉದ್ಗಾರವದು. ಮೊನ್ನೆ ಧಾರವಾಡಕ್ಕೆ ಹೊರಟಾಗ ಪಕ್ಕದಲ್ಲಿದ್ದ ಈ ಯುವಕ ನನ್ನಲ್ಲಿದ್ದ ದಿನಪತ್ರಿಕೆ ಓದಿದ. ನಂತರ “ಅಗ್ನಿ”ವಾರಪತ್ರಿಕೆ ಕೇಳಿ ಪಡೆದ. ಅದರಲ್ಲಿ ನನ್ನ ಬಾಸ್ ಶ್ರೀಧರ್ ಸರ್ ಬರೆದ “ರೆಡ್ಡಿ ಲೆಸನ್”ಎಂಬ ಬರಹ ಓದಿದ.
ನಂತರ ಪುಸ್ತಕದ ’ಬರ ಅಂದ್ರೆ…..’ ಟೈಟಲ್ ನೋಡಿ, ಅದರ ಸೈಜ್ ನೋಡಿ(506 ಪುಟಗಳು)ಇದು ಕಾದಂಬರಿನಾ? ಎಂದ. ಅಲ್ಲ ಸತ್ಯ ಕಥೆಗಳ ಪುಸ್ತಕ ಅಂದೆ. ಅಂದ್ರೆ? ಮತ್ತೆ ಆತನ ಪ್ರಶ್ನೆ.
ನಮ್ಮ ದೇಶದಲ್ಲಿ ಇರುವ ಕೆಲ ಪ್ರದೇಶಗಳ ಧಾರುಣ ಮತ್ತು ವಾಸ್ತವದ ಚಿತ್ರಣ ನೀಡುವ ಪುಸ್ತಕವಿದು ಅಂದೆ. ಇಷ್ಟು ದಪ್ಪ ಪುಸ್ತಕ ಹೆಂಗೆ ಬರೆದ್ರು? ಆತನ ಪ್ರಶ್ನೆ.
ತಿರುಗಿದ್ರು, ವರ್ಷಕ್ಕೆ 300 ದಿನದಂತೆ 80 ಸಾವಿರ ಕಿ.ಮೀ. ತಿರುಗಿದ್ದಾರೆ. ವಿ.ವಿ. ಗಿರಿ ಅಂತ ರಾಷ್ಟ್ರಪತಿ ಇದ್ರು. ಅವರ ಮೊಮ್ಮಗ ಈ ಸಾಯಿನಾಥರು. ಇಂಗ್ಲೀಷನಿಂದ ಕನ್ನಡಕ್ಕೆ ತಂದವರು ಜಿ.ಎನ್.ಮೋಹನ್ ಅಂತ ಅವರ ಹೆಸರು ಅಂದೆ. ಇದರಲ್ಲಿ ಮೂರು ಬಾರಿ ಎತ್ತಂಗಡಿಯಾದ ಗ್ರಾಮದ ಬವಣೆ, ಮಿಲಿಟರಿಯವರು ಫೈರಿಂಗ್ ಸೆಂಟರ್ ಮಾಡಿಕೊಂಡ ಗ್ರಾಮದವರು ರಾತ್ರಿ ಕಾಡಿನೊಳಗೆ ಇದ್ದು ಬೆಳಿಗ್ಗೆ ವಾಪಸ್ ಊರಿಗೆ ಬರ್ತಾರೆ. ರಾತ್ರಿ ಊರು ಬಿಟ್ಟಿದ್ದಕ್ಕೆ ಅವರಿಗೆ ಒಂದೂವರೆ ರೂಪಾಯಿ ಹಣ ನೀಡಲಾಗುತ್ತದೆ. ಅಂತಹ ಊರುಗಳಿಗೆಲ್ಲ ಹೋಗಿ ಹುಡುಕಿ ಬರೆದಿದ್ದಾರೆ ಅಂದೆ.
ಆಗ ಬಂದದ್ದೆ ಮೇಲಿನ ಉದ್ಗಾರ-ಪತ್ರಕರ್ತರು ಹೀಗೂ ಇರ್ತಾರಾ?
ನಂತರ ಅಭಿನವ ಪ್ರಕಾಶನದ ವಿಳಾಸ ಪಡೆದು ಹೊರಟು ಹೋದ.
* * * * *
ಕಳೆದ ಅಕ್ಟೋಬರ್‌ನಲ್ಲಿ ಲಾಡ್ಲಿ ಮೀಡಿಯಾ ಅವಾರ್ಡ ಸ್ವೀಕರಿಸಿ ಕೇರಳದಿಂದ ವಾಪಸ್ ಬರುವಾಗ ಕೊಟ್ಯಾಯಂ ಬಳಿ ಸಂಜೆ ನಮ್ಮ ಬೋಗಿಗೆ ಬಂದ 60 ರ ವೃದ್ಧ ಬ್ಯಾಗಲ್ಲಿ ಪುಸ್ತಕ ತುಂಬಿಕೊಂಡು ಬಂದಿದ್ದ. ಅರ್ಧ ಗಂಟೆಯಲ್ಲಿ ಸಾವಿರಾರು ರೂಪಾಯಿಗಳ ಪುಸ್ತಕ ಮಾರಿದ. ಪತ್ರಿಕೆಗಳನ್ನು ಅಭಿಮಾನದಿಂದ ಓದುವ ಕೇರಳಿಗರು ಪುಸ್ತಕಗಳನ್ನು ರೈಲಿನಲ್ಲಿ ಮಾರುವುದು ಕೊಳ್ಳುವುದು ಕಂಡು ಅಚ್ಚರಿಯಾಯ್ತು . ನಮ್ಮ ರೈಲುಗಳಲ್ಲಿ ಪತ್ರಿಕೆಗಳನ್ನೆ ಮಾರಲ್ಲ. ಮಾರಲು ಬಂದ್ರೆ ಕೊಳ್ಳಲ್ಲ.
ಕೇರಳದಿಂದ ಬೆಂಗಳೂರಿಗೆ ಬಂದು ಪ್ರತಿಭಾ ನಂದಕುಮಾರರ “ಅನುದಿನದ ಅಂತರಗಂಗೆ” ಮತ್ತು “ಬರ ಅಂದರೆ ಎಲ್ಲರಿಗೂ ಇಷ್ಟ”ಪುಸ್ತಕ ಖರೀದಿಸಿದೆ. ಎರಡೂ ದಪ್ಪ ದಪ್ಪ ಪುಸ್ತಕಗಳೆ. ಬೆಂಗಳೂರಿನಿಂದ ಕೊಪ್ಪಳಕ್ಕೆ ಬರುವಾಗ ರಾತ್ರಿ ರೈಲಿನಲ್ಲಿ ಯಾರೋ ಬರ ಅಂದ್ರೆ….ಪುಸ್ತಕ ಎಗರಿಸಿಕೊಂಡು ಹೋಗಿದ್ದರು. ಪ್ರತಿಭಾ ನಂದಕುಮಾರರ ಅಂತರಗಂಗೆ ಬಿಟ್ಟು ಹೋಗಿದ್ದರು.
* * * * * * *
ಕಳೆದ ತಿಂಗಳು ಧಾರವಾಡದಲ್ಲಿ ನಡೆದ ದೇವನೂರು ಮಹಾದೇವರವರೊಂದಿಗೆ ಸಂವಾದದಲ್ಲಿ ಭಾಗವಹಿಸಲು ಹೋದಾಗ ಅಲ್ಲಿ ಬರ ಅಂದ್ರೆ…….ಕಂಡಿತು. ಕೂಡಲೇ ಖರೀದಿಸಿಬಿಟ್ಟೆ .ಮತ್ತೆ ಕಳೆದಿತು ಅಂತ ಆತುರದಿಂದ ಓದಿ ಮುಗಿಸಿದೆ .ಮತ್ತೆ ಓದಬೇಕೆನಿಸಿದ್ದರಿಂದ ಈಗ ಹೋದಲ್ಲೆಲ್ಲ ಒಯ್ಯುತ್ತೇನೆ. ಹಾಗೆ ಮೊನ್ನೆ ಮತ್ತೆ ಧಾರವಾಡಕ್ಕೆ ಹೊರಟಾಗ ಒಂದೊಂದು ಅಧ್ಯಾಯ ಓದಿ ಬರಹದ ಸಾರ ದಕ್ಕಿಸಿಕೊಳ್ಳಲು ರೈಲಿನ ಕಿಟಕಿಯಿಂದ ಹೊರಗೆ ಕಣ್ಣು ಹಾಯಿಸಿದರೆ ಗದಗ ಆಸುಪಾಸಿನಲ್ಲಿ ಬರಗಾಲದ ಚಿತ್ರಣಗಳು…….
* * * * * *
ಓದಿನ ನಡುವೆ ಎದ್ದು ರೈಲಿನ ಟಾಯ್ಲೆಟ್ ಗೆ ಹೋದರೆ ಟಾಯ್ಲೆಟ್ ಮುಂದೆ (ಬಹುಶ ಅವರು) ರಾಜಸ್ತಾನದ ಬುಡಕಟ್ಟು ಅಲೆಮಾರಿ ಜನಾಂಗದ ಮಹಿಳೆಯೊಬ್ಬಳು ತನ್ನ ಮೂರು ಮಕ್ಕಳೊಂದಿಗೆ ಅನ್ನ ಕಲೆಸಿಕೊಂಡು ಅವರೊಟ್ಟಿಗೆ ಊಟ ಮಾಡುತ್ತಿದ್ದಳು. ಮನಸ್ಸಗೆ ಕೆಟ್ಟೆನಿಸಿ ಬೋಗಿಯ ಇನ್ನೊಂದು ತುದಿಯಲ್ಲಿದ್ದ ಟಾಯ್ಲೆಟ್ ಗೆ ಹೋದರೆ ಎರಡರಲ್ಲೂ ಅದೇ ಬುಡಕಟ್ಟು ಅಲೆಮಾರಿ ಜನಾಂಗದ ಕುಟುಂಬಗಳು ಟಾಯ್ಲೆಟ್ ನಲ್ಲಿ ಬಟ್ಟೆ ತೊಳೆದುಕೊಳ್ಳುತಿದ್ದರು.ಅವರ ಪೈಕಿ ಒಬ್ಬಾತ ರೈಲಿನ ಬಾಗಿಲಲ್ಲಿ ನಿಂತು ಗಾಳಿಗೆ ಬಟ್ಟೆ ಒಣಗಿಸುತ್ತಿದ್ದ.
ಅವರ ಬದುಕು ಕಂಡು ಮತ್ತೆ ಮನಸ್ಸಿಗೆ ಕೆಟ್ಟೆನಿಸಿತು.
* * * * * *
ನಮ್ಮ ದೇಶದಲ್ಲಿ ಆಳುವ ಸರ್ಕಾರದಿಂದಲೇ ತೊಂದರೆಗೊಳಪಡುತ್ತಿರುವ ಪ್ರದೇಶಗಳ ಬಗ್ಗೆ ಬರೆದ ಸಾಯಿನಾಥರನ್ನು ನಮ್ಮ ಸರ್ಕಾರಗಳು ನಕ್ಸಲ್ ಬೆಂಬಲಿಗರು ಅಂತ ಬ್ರಾಂಡ್ ಮಾಡಲಿಲ್ಲ ಅದೇ ಪುಣ್ಯ. ಈ ಪುಸ್ತಕ ಕನ್ನಡಕ್ಕೆ ತಂದ ಜಿ ಎನ್ ಮೋಹನ್ ರಿಗೆ ಧನ್ಯವಾದಗಳು








very well written , i have felt depressed whenecer reading the sainath’s “everybody loves a good drought” , its an eyeopener for people who want to know about agriculture in India
ನಾವು ಯುವಲೇಖಕರಬಳಗದಿಂದ ನಮ್ಮ ಹಾಡ್ಲಹಳ್ಳಿ ಪಬ್ಲಿಕೇಷನ್ಸ್ ನಲ್ಲಿ ಒಂದೊಂದು ಪುಸ್ತಕದ ಪರಿಚಯ ಮಾಡಿಸುವ ಕೆಲಸ ಮಾಡುತ್ತೇವೆ.ಆಗ ನಮಗೆ ಕಾಡಿದ ಪ್ರಶ್ನೆ ಎಂತಹ ಪುಸ್ತಕ ಎಂತಹ ಪುಸ್ತಕದ ಬಗ್ಗೆ ಮಾತನಾಡಬೇಕೆಂದು.ಬರ…..ಪುಸ್ತಕ ಬಿಟ್ಟು ಸೂಕ್ತವಾದ ಬೇರೆ ಪುಸ್ತಕ ಮಾತನಾಡುವುದು ಸರಿಯಾಗುವುದಿಲ್ಲ ಂತಲೇ ಅನಿಸಿತು.ಯಾವ ಕಾರಣಕ್ಕೆ ಅಂತ ಲೇಖನ ಚೆನ್ನಾಗಿ ವಿವರಿಸಿದೆ.
It is indeed a well written book by P Sainath and we are more glad that the book has been brought into Kannada by Mohan sir. Awaiting your next book on Che Guevara…
ಸಾಕಷ್ಟು ದಿನಗಳಿಂದ ಕೇಳುತ್ತ ಬಂದಿರುವ ಪುಸ್ತಕದ ಬಗ್ಗೆ ಒಳ್ಳೆಯ ಪರಿಚಯ. ಈಗಂತೂ ಆ ಪುಸ್ತಕವನ್ನು ತರಿಸಿಲೇ ಬೇಕು. ಮುಂಬಯಿಯಲ್ಲಿ ಕನ್ನಡ ಪುಸ್ತಕ ಓದಬೇಕೆಂದರೆ ಸ್ವಲ್ಪ ಸಮಯ ಕಾಯಬೇಕಾಗುತ್ತದೆ. ಕನ್ನಡಕ್ಕೆ ಅನುವಾದಿಸಿದ ಜಿ.ಎನ್ ಮೋಹನ್ ಅವರಿಗೆ ಅಭಿನಂದನೆಗಳು.