‘ಪಡ್ಡಾಯಿ’ ಕಟ್ಟಿದ ಕಥೆ- ಮಾಧವ ಮಾಕ್ಬೆತ್ ಆದ..

ಚಿಕ್ಕ ವಯಸ್ಸಿನಲ್ಲಿಯೇ ಚಿತ್ರರಂಗದಲ್ಲಿ ತಮ್ಮ ಛಾಪು ಮೂಡಿಸಿದವರು ಅಭಯ ಸಿಂಹ. ಇವರು ನಿರ್ದೇಶಿಸಿದ ಮೊದಲ ಚಲನಚಿತ್ರ ‘ಗುಬ್ಬಚ್ಚಿಗಳು’. ೨೦೦೮ ರಲ್ಲಿ ಆರಂಭವಾದ ಇವರ ಚಿತ್ರ ಪಯಣಕ್ಕೆ ಈಗ ದಶಕದ ವಸಂತ.

ಕಡಲ ಅಲೆಗಳ ಅಬ್ಬರವನ್ನು ಆಲಿಸುತ್ತಲೇ ಬೆಳೆದ ಹುಡುಗನಿಗೆ ಮನಸ್ಸು ಮತ್ತೆ ಮತ್ತೆ ಅತ್ತಲೇ ಎಳೆದದ್ದು ಆಕಸ್ಮಿಕವಲ್ಲ. ತಾನು ಬಾಲ್ಯದಿಂದಲೂ ಕಂಡ ಸಮುದ್ರ, ಮೀನುಗಾರರು, ದೋಣಿ, ಬಲೆ, ಹಡಗು ಎಲ್ಲವನ್ನೂ ಸೇರಿಸಿ ಕಟ್ಟಿದ ಚಿತ್ರವೇ ‘ಪಡ್ಡಾಯಿ’.

ತುಳು ಭಾಷೆಯ ಈ ಸಿನೆಮಾ ಕೇವಲ ಭಾಷೆಯ ಕಾರಣಕ್ಕಾಗಿ ಮಾತ್ರ ನೋಡುಗರನ್ನು ಕಾಡಲಿಲ್ಲ. ಬದಲಿಗೆ ಇದು ಯಶಸ್ವಿಯಾಗಿ ತುಳು ನೆಲದ ಸಂಸ್ಕೃತಿಯನ್ನು ಕಟ್ಟಿಕೊಟ್ಟ ಚಿತ್ರ. ಈ ಚಿತ್ರಕ್ಕೆ ಮತ್ತೆ ರಾಷ್ಟ್ರ ಪ್ರಶಸ್ತಿ ಇವರನ್ನು ಹುಡುಕಿಕೊಂಡು ಬಂದಿತು.

ಅಭಯ ಸಿಂಹ ಹೇಗೆ ತಮ್ಮ ಸಿನೆಮಾವನ್ನು ಕಟ್ಟುತ್ತಾರೆ ಎನ್ನುವ ಕುತೂಹಲ ಎಲ್ಲರಿಗೂ ಇದೆ. ಈ ಪ್ರಶ್ನೆಯನ್ನು ನಾವೂ ಕೇಳಬೇಕು ಎಂದುಕೊಂಡಿದ್ದಾಗಲೇ ಅಭಯ ಸಿಂಹ ‘ಅಕ್ಷರ ಪ್ರಕಾಶನ’ದ ಮೂಲಕ ‘ಪಡ್ಡಾಯಿ’ ಕಟ್ಟಿದ ಕಥೆಯ ಕೃತಿಯನ್ನು ಹಿಡಿದು ಬಂದರು.

ಕನ್ನಡದಲ್ಲಿ ಸಿನೆಮಾ ಕುರಿತ ಕೃತಿಗಳು ಬೆರಳೆಣಿಕೆಯಷ್ಟು. ಇಂತಹ ಸಂದರ್ಭದಲ್ಲಿ ಚಿತ್ರಕಥೆಯ ಸಮೇತ ಅಭಯ ಸಿಂಹ ಪಡ್ಡಾಯಿ ಕಟ್ಟಿದ ಕಥೆಯನ್ನು ಹೇಳಿದ್ದಾರೆ. ಓದಿ-

ಈ ಕೃತಿ ಕೊಳ್ಳುವ ಆಸಕ್ತಿ ಇದ್ದಲ್ಲಿ  ಇಲ್ಲಿ ಒತ್ತಿ 

| ನಿನ್ನೆಯಿಂದ |

3

ಮೂಲ ಮ್ಯಾಕ್ಬೆತ್‌ನಲ್ಲಿ, ಕೊಲೆಯ ಸಂದರ್ಭದಲ್ಲಿ, ಅಪಶಕುನವಾಗಿ ಗೂಬೆ ಕೂಗುವ ಶಬ್ದ ಕೇಳಿಸಿಬರುತ್ತದೆ. ಇದು ಸಿನಿಮಾ ಮಾಧ್ಯಮಕ್ಕೆ ನೇರವಾಗಿಯೇ ದಕ್ಕುವ ರೂಪಕ.

ಈ ಶಕುನಗಳನ್ನು, ವಿವಿಧ ಪ್ರದೇಶಗಳಲ್ಲಿ ವಿವಿಧ ರೀತಿಯಲ್ಲಿ ಗಮನಿಸಲಾಗುತ್ತದೆ. ಹಾಗಾಗಿ, ನಮ್ಮಲ್ಲಿ ಗೂಬೆ ಕೂಗುವುದರಿಂದ ಶಕುನದ ಮಾತು ಆಡುವುದು ಎಷ್ಟು ಔಚಿತ್ಯಪೂರ್ಣ ಎನ್ನುವುದನ್ನು ಸಾಕಷ್ಟು ಚರ್ಚಿಸಬೇಕಾಯಿತು.

ಮುಂದೆ ಅದನ್ನು ಅಳವಡಿಸಿ, ಧ್ವನಿಯನ್ನು ಜೋಡಿಸುವ ಸಂದರ್ಭದಲ್ಲಿ, ಗೂಬೆಯ ಧ್ವನಿ ಕೇಳಿಸಿದರೂ, ಅದು ವಾಸ್ತವಕ್ಕೆ ಬದ್ಧವಾಗಿರಬೇಕು ಎನ್ನುವ ಕಾರಣಕ್ಕೆ, ಮೂಡಬಿದ್ರೆಯ ಪಕ್ಷಿ ತಜ್ಞ ಡಾ. ಕೃಷ್ಣ ಮೋಹನ್ ಪ್ರಭು ಅವರನ್ನು ವಿಚಾರಿಸಿದೆ. ಅವರು ಮಲ್ಪೆ – ಉಡುಪಿ ವಲಯದಲ್ಲಿ ಇರುವ, ಸಾಕಷ್ಟು ಆಳವಾಗಿ ಧ್ವನಿ ಮೂಡಿಸುವ ಫಿಶಿಂಗ್ ಔಲ್ ಧ್ವನಿಯನ್ನು ಬಳಸಬಹುದು ಎಂದು ಸೂಚಿಸಿದರು. ಒಂದು ವಾಸ್ತವವಾಗಿ ಕೇಳಿಸುವ ಧ್ವನಿ, ಮನಸ್ಸಿನ ವಿಕಾರಗಳಿಂದಾಗಿ ಧ್ವನ್ಯರ್ಥ ಪಡೆಯುವುದು, ಸಿನೆಮಾ ಮಾಧ್ಯಮದ ಸಾಧ್ಯತೆಗೆ ಒಂದು ಅದ್ಭುತ ನಿದರ್ಶನ.

 

ಇಂಥದ್ದೇ ಇನ್ನೊಂದು ಸಂದರ್ಭ, ಯಕ್ಷಗಾನವನ್ನು ನಮ್ಮ ಸಿನಿಮಾಕ್ಕೆ ಅಳವಡಿಸಿಕೊಳ್ಳುವ ಸಾಧ್ಯತೆಯಲ್ಲಿ. ಅದ್ಭುತ ಕಥಾನಗಳಲ್ಲಿ ಅಭಿವ್ಯಕ್ತಿ ವ್ಯತ್ಯಾಸಗಳಿದ್ದರೂ, ಆಂತರ್ಯದಲ್ಲಿ, ಭಾವಗಳು ಒಂದೇ ಆಗಿರುತ್ತವೆ.

ಮ್ಯಾಕ್ಬೆತ್ ಒಳಗಿನ ಹೋರಾಟಗಳನ್ನು ಗಮನಿಸಿದಾಗ, ನನಗೆ ಕಾಣಿಸಿದ್ದು, ಮಹಾಭಾರತದ ಅರ್ಜುನನ ಹೊಯ್ದಾಟ. ಇದಕ್ಕೆ ಸರಿಯಾದ ಪ್ರಸಂಗ ಸಂದರ್ಭವನ್ನು ನನ್ನ ತಂದೆ ಅಶೋಕವರ್ಧನ, ಗುರು ಸಂಜೀವ ಸುವರ್ಣರು ಹಾಗೂ ಪ್ರಥ್ವಿರಾಜ್ ಕವತ್ತಾರ್ ಪ್ರೀತಿಯಿಂದ ಒದಗಿಸಿದರು. (ಗುರು ಸಂಜೀವ ಸುವರ್ಣರನ್ನು ಈ ಕುರಿತು ಮಾತನಾಡಿಸಿದಾಗ, ಅವರು, ಅನೇಕ ವರ್ಷಗಳ ಹಿಂದೆ, ನಾಟಕರಂಗದ ದೈತ್ಯ, ಗುರುಗಳಾದ ಬಿ.ವಿ.ಕಾರಂತರು ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದಲ್ಲಿ ಮ್ಯಾಕ್‌ಬೆತ್ ಪ್ರಯೋಗ ಮಾಡಿದ್ದನ್ನು ನೆನಪಿಸಿಕೊಂಡರು. ಅದಕ್ಕೆ ಯಕ್ಷಗಾನವನ್ನು ಬಳಸಿಕೊಂಡದ್ದು, ಅದರ ನಡೆಗಳನ್ನು ಹೇಳಿಕೊಡಲು, ಸಂಜೀವರು ದೆಹಲಿಗೆ ಹೋದದ್ದನ್ನು ನೆನೆಸಿಕೊಂಡರು.)

 

ನಮ್ಮ ಸಿನಿಮಾದ ಮಾಧವ, ತನಗೊಂದು ಜೀವನ ಕಟ್ಟಿಕೊಟ್ಟ ದಿನೇಶಣ್ಣನನ್ನು, ನನ್ನದೇ ಮನೆಯಲ್ಲಿ ಕೊಲ್ಲಲಾರೆ ಎಂದು ತೊಳಲಾಡುವ ಸಂದರ್ಭದಲ್ಲಿ, ಗೀತೋಪದೇಶದ ಯಕ್ಷಗಾನೀಯ ಸಂದರ್ಭವನ್ನು ಇಂಟರ್-ಕಟ್ ಮಾಡುವ ನಿರ್ಧಾರ ಮಾಡಿದೆವು.

ಕೊಲ್ಲುವವನು ನೀನಾದರೂ, ನೀನು, ನಿಮಿತ್ತ ಮಾತ್ರ, ನಿಜವಾಗಿಯೂ ಈ ಕೆಲಸ ಮಾಡಿಸುವವನು ನಾನು, ಎಂದು ಕೃಷ್ಣ ಹೇಳುತ್ತಾನೆ. ಇದು, ನಮ್ಮ ಸಿನಿಮಾದಲ್ಲಿ ಸುಗಂಧಿ, ತಮ್ಮೆಲ್ಲಾ ತಪ್ಪುಗಳನ್ನು ದೈವದ ಮೇಲೆ ಆರೋಪಿಸುವಂತೆಯೇ ಆಗುತ್ತದೆ. ಈ ರೀತಿಯಾಗಿ ಒಂದಷ್ಟು ಮನುಷ್ಯನ ಸಾರ್ವಕಾಲಿಕ ತುಡಿತಗಳನ್ನು, ಸ್ಥಳೀಯ ಅಭಿವ್ಯಕ್ತಿಯಾಗಿ ಮಾಡುವ ಕೆಲಸ ನಮ್ಮ ಚಿತ್ರಕಥೆಯ ಸಂದರ್ಭದಲ್ಲಿ ಮಾಡಲಾಯಿತು.

ಸಾಮಾನ್ಯವಾಗಿ ಚಿತ್ರಕಥೆಯ ಓಟದ ನಿರ್ವಹಣೆಗೆ ಒಂದು ಸೂತ್ರವನ್ನು ಬಳಸಲಾಗುತ್ತದೆ. ಮೊದಲು ಕಥೆಯ ನಾಯಕ (ಅಥವಾ ನಾಯಕಿ) ಆಯ್ಕೆ ಮಾಡಿಕೊಳ್ಳುವುದು. ಅವರ ಗುಣ-ಅವಗುಣಗಳ ಪರಿಚಯ ಮಾಡುವುದು (ಮೊದಲ ಆಕ್ಟ್). ಅವರ ಗುರಿ ನಿರ್ಧರಿಸುವುದು (ಕೊನೆಯ ಆಕ್ಟ್). ಗುರಿಯ ಕಡೆಗೆ ಪ್ರಯಾಣದಲ್ಲಿ ಉಂಟಾಗುವ ಅಡೆ-ತಡೆಗಳು (ಎರಡನೇ ಆಕ್ಟ್).

ನಾವು ಮೊದಲ ಆಕ್ಟ್ ಸಂದರ್ಭದಲ್ಲಿ ಮಾಡುವ ಆಯ್ಕೆಗಳು, ಚಿತ್ರಕಥೆಯ ಮುಂದಿನ ಭಾಗವನ್ನು ನಿರ್ದೇಶಿಸುತ್ತಿರುತ್ತವೆ. ಹೀಗಾಗಿ, ನಮ್ಮ ಚಿತ್ರಕಥೆಯ ಎರಡನೇ ಹಾಗೂ ಕೊನೆಯ ಹಂತಗಳಲ್ಲಿ ಮೂಲ ಮ್ಯಾಕ್ಬೆತ್ ಕಥೆಯಿಂದ ತುಸು ದೂರ ಹೋಗಿರುವ ವಿವರಣೆ ಇಲ್ಲಿ ನೀಡಬೇಕು.

ಮೂಲ ಮ್ಯಾಕ್‌ಬೆತ್ ನಾಟಕದಲ್ಲಿ, ಮ್ಯಾಕ್‌ಬೆತ್, ಮಾಟಗಾತಿಯರ ಮಾತನ್ನು ನಂಬಿ, ತನ್ನೊಳಗಿನ ಅಧಿಕಾರದ ದಾಹಕ್ಕೆ ಬುದ್ಧಿಯನ್ನು ಕೊಡುತ್ತಾನೆ. ಆತ ಕೊಲೆಯ ಮೇಲೆ ಕೊಲೆ ಮಾಡುತ್ತಾ ಸಾಗುತ್ತಾನೆ. ಕೊನೆಗೆ ತನ್ನ ಸಾವನ್ನು ತಪ್ಪಿಸಲು ಮತ್ತೆ ಮಾಟಗಾತಿಯರ ಬಳಿಗೆ ಹೋಗುತ್ತಾನೆ. ಆಗ ಸಾಧ್ಯವೇ ಇಲ್ಲ ಎನ್ನುವಂಥಾ ಒಂದು ಸಂದರ್ಭದಲ್ಲಿ ಮಾತ್ರ ನಿನಗೆ ಅಪಜಯ ಎಂದು ಆ ಮಾಟಗಾತಿಯರು ಹೇಳುತ್ತಾರೆ.

ಅದನ್ನು ನಂಬಿ ಮ್ಯಾಕ್‌ಬೆತ್ ತನಗೆ ಸಾವೇ ಇಲ್ಲ ಎಂದು ಬೀಗುತ್ತಿರುತ್ತಾನೆ. ಆಗ, ಅಂಥಾ ಸಂದರ್ಭ ಏರ್ಪಡುತ್ತದೆ (ಕನಿಷ್ಟ ಮ್ಯಾಕ್‌ಬೆತ್ ಹಾಗೆ ನಂಬುವಂತಾಗುತ್ತದೆ). ಇಲ್ಲಿ ಸ್ಥೆರ್ಯ ಕಳೆದುಕೊಳ್ಳುವ ಮ್ಯಾಕ್‌ಬೆತ್, ಹೋರಾಡುತ್ತಲೇ ಅಸು ನೀಗುತ್ತಾನೆ. ಆದರೆ, ನಮ್ಮಲ್ಲಿ ಮಾಧವ, ಮೊದಲಿನಿಂದಲೂ, ತನ್ನ ಅಸ್ತಿತ್ವವನ್ನೆ ಸ್ಥಾಪಿಸಲಾಗದೇ ಒದ್ದಾಡುವವನು. ಅವನ ತಳಮಳದ ಉತ್ತುಂಗದಲ್ಲಿ, ಅವನಿಂದ ಕೊಲೆಗಳಾಗುತ್ತವೆ. ಆದರೆ, ಕೂಡಲೇ ಪಶ್ಚಾತ್ತಾಪದ ಸುಳಿಯಲ್ಲಿ ಅವನು ಸಿಕ್ಕಿಹಾಕಿಕೊಳ್ಳುತ್ತಾನೆ.

 

ಹೀಗಾಗಿ ನಮ್ಮ ಕಥೆಯಲ್ಲಿ, ಮಾಧವ ಎರಡನೇ ಬಾರಿ ದೈವದ ಮೊರೆಹೋಗುವುದು, ತನಗೆ ಬಿಡುಗಡೆ ಕೋರಲು. ಇಲ್ಲಿ ತನ್ನ ಪಾಪ ಕೃತ್ಯಗಳಿಗೆಲ್ಲವೂ, ದೈವವೇ ಕಾರಣ ಎಂದು ಆತ ಆರೋಪಿಸುತ್ತಾನೆ. ಇಲ್ಲಿಯೇ ಅವನು ತನ್ನನ್ನು ರಕ್ಷಿಸಿಕೊಳ್ಳುವ ಕೊನೆಯ ಪ್ರಯತ್ನ ಮಾಡುವುದು. ಆದರೆ ದೈವ, ಇಂಥಾ ಹೇಯ ಕೃತ್ಯ ಮಾಡಲು ನಾನು ಎಂದೂ ನಿನಗೆ ಆದೇಶಿಸಿರಲಿಲ್ಲ. ನಿನಗೆ ಒಳ್ಳೆಯದಾಗುತ್ತದೆ ಎಂದಷ್ಟೇ ತಾನು ಹೇಳಿದ್ದು ಎಂದು ಗದರಿಸುತ್ತದೆ.

ಮಾಧವ, ಸೋತು, ಶರಣಾಗುತ್ತಾನೆ. ಈ ಜೀವನದಿಂದ ತನಗೆ ಬಿಡುಗಡೆ, ಸಾವು ಬಯಸುತ್ತಾನೆ. ಆದರೆ ದೈವ, ಈ ಬದುಕೇ ನಿನಗೆ ಪ್ರಾಯಶ್ಚಿತ. ಸಾವು ಬಂದರೆ ಅದು ಬಿಡುಗಡೆ. ಹಾಗಾಗಿ, ನಿನಗೆ ಸಾವು ಅಷ್ಟು ಸುಲಭವಾಗಿ ದಕ್ಕುವುದಿಲ್ಲ ಎಂದು ಎಚ್ಚರಿಕೆ ನೀಡುತ್ತದೆ. ಮಾಧವ ಇಲ್ಲೇ ಸತ್ತಂತಾಗುತ್ತಾನೆ.

ಸಿನಿಮಾದಲ್ಲಿ ಮುಂದೆ ನಾವು ಕಾಣುವುದು, ಸೋತು ಹೋಗಿ, ಸಾವಿಗಾಗಿ ಕಾಯುತ್ತಿರುವ ಮಾಧವನನ್ನು. ಇನ್ನೊಂದೆಡೆ, ಸುಗಂಧಿ ನಿಜವಾಗಿಯೂ ಸತ್ತಿದ್ದಾಳೋ, ಅಥವಾ ಆಕೆಯ ಕಲ್ಪನೆಯಲ್ಲಿ ರಕ್ತದ ಮಡುವಿನೊಳಗೆ ಮಲಗಿದ್ದಾಳೋ ತಿಳಿಯದ ಪರಿಸ್ಥಿತಿಯಲ್ಲಿ ಕಾಣುತ್ತೇವೆ. ಹೀಗಾಗಿ, ಈ ಎರಡೂ ಪಾತ್ರಗಳು, ಇದ್ದೂ ಇಲ್ಲದ ಪರಿಸ್ಥಿತಿಗೆ ಹೋಗುತ್ತವೆ.

ಅಳವಡಿಕೆಯ ಇನ್ನೊಂದು ಪ್ರಮುಖ ಭಾಗ, ಚಿತ್ರದಲ್ಲಿ ಬಳಸುವ ಭಾಷೆ. ‘ಪಡ್ಡಾಯಿ’ಯನ್ನು ಮಲ್ಪೆಯಲ್ಲಿ, ಮೀನುಗಾರಿಕೆಯ ಪರಿಸರದಲ್ಲಿ ಚಿತ್ರೀಕರಿಸುವುದು ಎಂದು ನಿರ್ಧರಿಸುವುದರೊಂದಿಗೆ, ಅದನ್ನು ತುಳು ಭಾಷೆಯಲ್ಲಿ ಮಾಡಬೇಕು ಎನ್ನುವುದೂ ನಿರ್ಧಾರವಾಯಿತು.

ಬೇರೆ ಭಾಷೆಯಲ್ಲಿ ಮಾಡಿದರೆ, ಅದು ಆ ಪರಿಸರಕ್ಕೆ ಅಸಹಜ. ಚಿತ್ರಕಥೆ ಬರೆಯುವ ಸಮಯದಲ್ಲಿ, ನಾನು ಬರೆಯುವುದು, ನನಗೆ ಸಹಜವಾದ ಕನ್ನಡದಲ್ಲಿ. ಆಮೇಲೆ, ಸಂಭಾಷಣೆಗಳನ್ನು ಅಗತ್ಯ ಭಾಷೆಗೆ ಭಾಷಾಂತರಿಸಿಕೊಳ್ಳುತ್ತೇನೆ. ಆದರೆ, ಇಲ್ಲಿ ಭಾಷಾಂತರ ಮಾತ್ರ ಸಾಕಾಗುವುದಿಲ್ಲ. ಆಯಾ ಭಾಷೆಯ ಜಾಯಮಾನಕ್ಕೆ ತಕ್ಕಂತೆ ಮಾರ್ಪಾಡುಗಳನ್ನು ಮಾಡಿಕೊಳ್ಳಬೇಕಾಗುತ್ತದೆ.

ನಿತ್ಯ ಜೀವನದಲ್ಲಿ ನಾವು ಸಂವಹನಕ್ಕಾಗಿ ತುಂಬಾ ಮಾತನಾಡುತ್ತೇವೆ ಅಂದುಕೊಂಡರೂ, ಅನೇಕ ವಿಷಯಗಳು ನಿಜವಾಗಿಯೂ, ಹಾವ ಭಾವಗಳಲ್ಲಿ, ನಮಗೆ ವಿಚಾರದ ಕುರಿತಾಗಿ ಇರುವ ಪೂರ್ವಾಗ್ರಹಗಳಿಂದಾಗಿ, ಸನ್ನೆಗಳಲ್ಲಿಯೇ ನಡೆಯುತ್ತಿರುತ್ತದೆ. ಮಾತನಾಡಿದಾಗಲೂ, ಬಳಸುವ ಪದಗಳು, ವಾಕ್ಯರಚನೆ ಇವೆಲ್ಲವೂ ಅತಿ ಕನಿಷ್ಟವಾಗಿರಲು ಪ್ರಯತ್ನಿಸುತ್ತಿರುತ್ತದೆ. ಇದನ್ನು ಸಿನಿಮಾದಲ್ಲೂ ಮಾಡಬೇಕು. ಆಗಲೇ ಅದು ಸಹಜ ಅನಿಸುವುದು.

ಆದರೆ, ನಮ್ಮಲ್ಲಿ ಹೆಚ್ಚಿನ ಬಾರಿ, ವಾಚಾಳಿತನಕ್ಕೆ ಶರಣಾಗುವುದೇ ಆಗುತ್ತದೆ. ಪಡ್ಡಾಯಿ ಚಿತ್ರಕಥೆ ಬರೆದ ಮೇಲೆ, ಪ್ರತಿಯೊಂದು ಸಂಭಾಷಣೆಗಳನ್ನು ವಿಮರ್ಶೆ ಮಾಡುತ್ತಾ ಸಾಗಿದೆವು. ಆಗ ಎಷ್ಟೊ ಸಂಭಾಷಣೆಗಳು ಬೇಡ ಅನಿಸಿ, ಅವುಗಳನ್ನು ತೆಗೆದೆ.

ಸಿನಿಮಾದ ಕೊನೆಗೆ ಬರುವ ಒಂದು ಜಗಳದ ಸಂದರ್ಭದಲ್ಲಿ (ಸಂಜೀವ ಹಾಗೂ ಮಂಜೇಶ ಮುಂಬೈನಿಂದ ಬಂದು, ಮಾಧವನೊಂದಿಗೆ ಜಗಳವಾಡುವ ದೃಶ್ಯ) ಒಂದಿಷ್ಟು ಸಂಭಾಷಣೆಗಳಿದ್ದವು. ಯಾಕೆ ನಮ್ಮಿಬ್ಬರ ತಂದೆಯಂದಿರನ್ನು ಕೊಂದೆ, ಅವರು ನಿನಗಾಗಿ ಎಷ್ಟೆಲ್ಲಾ ಒಳಿತನ್ನು ಮಾಡಿದ್ದರು ಎಂದು ಮಾಧವನನ್ನು ಪ್ರಶ್ನಿಸುವ ಸಂಭಾಷಣೆಗಳಿದ್ದವು. ಆ ಸಂಭಾಷಣೆಗಳನ್ನು ಕೊನೆಗೆ ಸಂಕಲನದ ವೇಳೆಗೆ ಕತ್ತರಿಸಿದೆವು. ಈ ಪ್ರಕ್ರಿಯೆಯಲ್ಲಿ, ಸಂವಹನ ಕನಿಷ್ಟದಲ್ಲೆ ಹೆಚ್ಚಿನದ್ದನ್ನು ಹೇಳುವ ಮೂಲಕ, ವಾಸ್ತವಕ್ಕೆ ಹೆಚ್ಚು ಹತ್ತಿರವಾಗುತ್ತದೆ.

ಪಡ್ಡಾಯಿಯ ಸಂದರ್ಭದಲ್ಲಿ ಸ್ಥಳೀಯ ಭಾಷೆಯ ಸೊಗಡನ್ನು ಸಿನಿಮಾಕ್ಕೆ ತರಬೇಕೆಂದು ಸಂಭಾಷಣೆ ಬರೆಯುವ ಸಂದರ್ಭದಲ್ಲೆ ಯೋಚಿಸಿದ್ದೆ. ‘ಪಡ್ಡಾಯಿ’ ಚಿತ್ರದ ಸಂಭಾಷಣೆಗಳನ್ನು ನಾನು ಮೂಲತಃ ಕನ್ನಡದಲ್ಲೆ ಬರೆದುಕೊಂಡಿದ್ದೆ. ಅದನ್ನು ಉಡುಪಿಯಲ್ಲಿ ಇಂಗ್ಲೀಷ್ ಪ್ರಾಧ್ಯಾಪಕರಾಗಿರುವ ಯಾದವ್ ಅವರು ತುಳುವಿಗೆ ಭಾಷಾಂತರಿಸಿದರು.

ಈ ಭಾಷಾಂತರ ಸಾಕಷ್ಟು ಚೆನ್ನಾಗಿದ್ದು, ಸ್ವಚ್ಛ ಮೊಗವೀರ ತುಳುವಿನಲ್ಲಿತ್ತು. ನಮ್ಮ ಅಡಿಪಾಯ ಗಟ್ಟಿಯಾಗಿತ್ತು. ಆಮೇಲೆ ಈ ಭಾಷಾಂತರವನ್ನು ಇಟ್ಟುಕೊಂಡು, ಸ್ಥಳೀಯರೊಂದಿಗೆ ಮಾತನಾಡುತ್ತಾ, ಅವರ ಅನುಭವಗಳನ್ನು, ಅಭಿವ್ಯಕ್ತಿಗಳನ್ನು ಸಂಭಾಷಣೆಯಲ್ಲಿ, ಸಿನೆಮಾದ ಒಟ್ಟಂದದಲ್ಲಿ ಸೇರಿಸಿಕೊಳ್ಳುತ್ತಾ ಸಾಗಿದೆವು. ಹೀಗಾಗಿ ಮಾತು ಬದಲಾಗುತ್ತಾ, ಬೆಳೆಯುತ್ತಾ, ಕೆಲವೆಡೆ ಕಡಿತಗೊಳ್ಳುತ್ತಾ ಸಾಗಿತು.

ಸ್ಥಳೀಯವಾಗಿ ಸಿಕ್ಕಿದ್ದ ಗೆಳೆಯ ಪ್ರವೀಣ್ ಹಾಗೂ ನಮ್ಮ ಚಿತ್ರ ತಂಡದಲ್ಲೆ ಇದ್ದ, ಚಂದ್ರಹಾಸ್ ಉಳ್ಳಾಲರು ಈ ಸಂಭಾಷಣೆಗಳ ಹದವನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡಿದರು. ಪ್ರತಿಯೊಂದು ಪದದ ಆಯ್ಕೆಯೂ ಇಲ್ಲಿ ಮಹತ್ತರವಾಗಿತ್ತು. ಹೀಗೆ ಸಿದ್ಧಗೊಂಡ ಸಂಭಾಷಣೆಯನ್ನು ಪ್ರತಿಯೊಬ್ಬ ಕಲಾವಿದರೂ, ಹೇಳಿ, ಅವರ ಅನುಕೂಲಕ್ಕೆ ತಕ್ಕಂತೆ ಕೆಲವು ಕಡೆ, ಹೊಸ ಪದಗಳನ್ನೂ ಆಯ್ಕೆ ಮಾಡಬೇಕಾಯಿತು. ನಟ, ಸಂಭಾಷಣೆಯೊಂದನ್ನು ಸಂಪೂರ್ಣ ತನ್ನದಾಗಿಸಿಕೊಂಡು ಹೇಳಿದಾಗ, ಅದರ ಪರಿಣಾಮವೇ ಬೇರೆಯಾಗಿರುತ್ತದೆ. ಹೀಗೆ, ಸಂಭಾಷಣೆ, ನಿಧಾನಕ್ಕೆ ಕಲಾವಿದರೊಳಗೆ ಇಳಿಯುತ್ತಾ ಸಾಗಿತು.

ಈ ಪ್ರಯೋಗದ ಮುಂದುವರೆದ ಭಾಗವಾಗಿ, ನಟರು ಸುಮಾರು ಹದಿನೈದು ದಿನಗಳ ಕಾಲ, ಮಲ್ಪೆಯಲ್ಲೆ ಇದ್ದು, ದಿನವೂ ಬಂದರಿಗೆ ಹೋಗಿ, ಅಲ್ಲಿ ಮೀನುಗಾರರೊಂದಿಗೆ ಕೆಲಸ ಮಾಡಿ, ಅವರನ್ನು ಮಾತನಾಡಿಸಿ, ಅವರ ಮಾತಿನ ಶೈಲಿ, ದೇಹಭಾಷೆ ಇವೆಲ್ಲವನ್ನೂ ಒಗ್ಗಿಸಿಕೊಳ್ಳುತ್ತಾ ಸಾಗಿದರು. ಬಿಂದು ರಕ್ಷಿದಿ, ಮೀನು ಮಾರುಕಟ್ಟೆಯಲ್ಲಿ ಕೂರುವ ಹೆಂಗಸರೊಂದಿಗೆ ಮಾತನಾಡುತ್ತಾ, ಅವರಲ್ಲಿ ಒಬ್ಬಳಾಗಿ ಬಿಟ್ಟಿದ್ದಳು.

ಅಲ್ಲಿ ಇದ್ದ ಬೇಬಿಯಮ್ಮ ಎನ್ನುವ ಹೆಂಗಸಂತೂ, ಬಿಂದು ನನ್ನ ಮಗಳು ಎಂದೇ ಎಲ್ಲರಿಗೂ ಪರಿಚಯಿಸುತ್ತಿದ್ದರು. ಈ ಅಭ್ಯಾಸ, ನನಗೂ ಸಹಕಾರಿಯಾಗಿತ್ತು. ಜನರ ನಡುವಿನ ಮಾತಿನಲ್ಲಿ ಬರುವ ಪೋಲಿ ಮಾತುಗಳು, ಗುಸುಗುಸು ಸುದ್ದಿ ಪ್ರಸಾರವಾಗುವ ಶೈಲಿ ಇವೆಲ್ಲವನ್ನು ಗಮನಿಸಲು ನನಗೆ ಸಾಧ್ಯವಾಯಿತು. ಅವುಗಳಲ್ಲಿ ಅನೇಕ ವಿಷಯಗಳು ಚಿತ್ರಕಥೆಯೊಳಗೂ ಬಂದವು.

ಮೀನು ಮಾರುಕಟ್ಟೆಯಲ್ಲಿ, ಸುಗಂಧಿ ತನ್ನ ಗೆಳತಿಯೊಂದಿಗೆ ಮಾತನಾಡುತ್ತಾ, ತನ್ನ ಗಂಡನೊಂದಿಗಿನ ದೈಹಿಕ ಮಿಲನದ ವಿಚಾರವನ್ನು ರಸವತ್ತಾಗಿ ವರ್ಣಿಸುವುದು ಇತ್ಯಾದಿ ಸಂದರ್ಭಗಳನ್ನು ನಾನು ನೇರವಾಗಿ ವಾಸ್ತವದಿಂದಲೇ ಹೆಕ್ಕಿ ತೆಗೆದುಕೊಳ್ಳಲು ಸಾಧ್ಯವಾಯಿತು. ಇದು ಮೂಲದಿಂದ, ನಮ್ಮ ಜಾಯಮಾನಕ್ಕೆ ಅಳವಡಿಕೆ ಮಾಡಿಕೊಳ್ಳುವ ಕಾರ್ಯ ಪೂರ್ಣವಾಗಲು ಸಹಕಾರಿಯಾಯಿತು.

ಹೀಗೆ ಮೂಲ ಕಥೆಗೆ ಸಾಕಷ್ಟು ಹತ್ತಿರವೇ ಇದ್ದರೂ, ಅದರ ಪ್ರಸ್ತುತಿಯಲ್ಲಿ, ಅಳವಡಿಕೆಯ ಬೇಡಿಕೆಗಳಿಗೆ ಮಣಿಯುತ್ತಾ ಭಿನ್ನತೆಯನ್ನು ನಮ್ಮ ಚಿತ್ರಕಥೆ ಪಡೆಯುತ್ತಲೇ ಸಾಗಿತು. ಅಳವಡಿಕೆಯ ಅನುಭವ ನನಗೆ ಪ್ರಥಮ. ಅದರ ಸವಾಲುಗಳು ವಿವಿಧ. ಇದು ಸಾಕಷ್ಟು ಪ್ರಯೋಗಕ್ಕೆ, ಕಲಿಕೆಗೆ ಅವಕಾಶ ಕೊಟ್ಟಿತು.

। ಇನ್ನುಳಿದದ್ದು ನಾಳೆಗೆ ।

ಅಮೆಜಾನ್ ಪ್ರೈಮ್ ನಲ್ಲಿ ಪಡ್ಡಾಯಿ ಸಿನಿಮಾ ಇದೆ. 
Link to audience in UK:
Link to audience in USA:
Link to audience in India:

‍ಲೇಖಕರು avadhi

October 4, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: