ಪಂಡಿತ್ ರವಿಶಂಕರ್ ಅವರಿಗೆ ಸರೋದ್ ಮಾಂತ್ರಿಕ ರಾಜೀವ್ ತಾರಾನಾಥ್ ಹೇಳಿದ ವಿದಾಯ..
ಇದನ್ನು ಅವಧಿಗೆ ಕಳುಹಿಸಿದವರು ಕಿರಣ್ ಕುಮಾರ್
ನಾನು ಅನಾಥನಾಗಿಬಿಟ್ಟೆ …..
’ನೀನು ತುಂಬಾ ಆಪ್ತವಾಗಿ ನುಡಿಸುತ್ತೀಯಾ… ಮಾರ್ಚ್ ತಿಂಗಳಿನಲ್ಲಿ ಬರುತ್ತೇನೆ. ದೆಹಲಿಯಲ್ಲಿ ಭೇಟಿಯಾಗೋಣ .. ತಾಲೀಮಿಗೆ ಸಿದ್ಧವಾಗಿರು ಎಂದಿದ್ದರು. ಅದಕ್ಕಾಗಿಯೇ ನಾನು ಮುಂಜಾನೆಯೇ ಎದ್ದು ನನ್ನ ಈ ವಯಸ್ಸಿನಲ್ಲಿಯೂ ಬೆರಳುಗಳನ್ನು ಚುರುಕಾಗಿಸಲು ನಿತ್ಯವೂ ಅಭ್ಯಾಸ ಮಾಡಿಕೊಳ್ಳುತ್ತಿದ್ದೆ. ಇನ್ನೆಲ್ಲಿ ಬರುತ್ತೆ ಆ ಮಾರ್ಚ್? ನನ್ನ ತಂದೆಯಂತಹ ತಂದೆ ಹೊರಟು ಹೋದರು. ಎಲ್ಲಿ ಆ ತಾಲೀಮು ! ನನ್ನ ದಾರಿಯಲ್ಲಿ ನಾನೇ ದೀಪ ಹಿಡಿಯಬೇಕಿದೆ. ನಾನು ಅನಾಥನಾಗಿಬಿಟ್ಟೆ.’
ನೋವು ತುಂಬಿದ ದನಿಯಲ್ಲಿ, ಕಣ್ಣಂಚಿನಲ್ಲಿ ಜಿನುಗುತ್ತಿದ್ದ ಕಣ್ಣೀರ ನಡುವೆಯೇ ತಮ್ಮ ಗುರು ಇಹಲೋಕ ತ್ಯಜಿಸಿದ ಖ್ಯಾತ ಸಿತಾರ್ವಾದಕ ಪಂಡಿತ್ ರವಿಶಂಕರ್ ನೆನಪುಗಳನ್ನು ಕಣ್ಮುಂದೆ ತಂದುಕೊಂಡರು ಅವರ ಪ್ರೀತಿಯ ಶಿಷ್ಯ ಅಂತರಾಷ್ಟ್ರೀಯ ಖ್ಯಾತಿಯ ಸರೋದ್ ವಾದಕ ಪಂಡಿತ್ ರಾಜೀವ್ ತಾರಾನಾಥ್.
ಅವರ ನಿಧನ ಸುದ್ದಿ ತಿಳಿಯುತ್ತಿದ್ದಂತೆಯೇ ಮೈಸೂರಿನ ಸರಸ್ವತಿಪುರಂನಲ್ಲಿರುವ ಅವರ ಮನೆಗೆ ಹೋಗಿ ಮಾತನಾಡಿಸಿದಾಗ ತಮ್ಮ ಮತ್ತೊಬ್ಬ ಗುರು ಅಲಿ ಅಕ್ಬರ್ ಖಾನ್ ಅವರ ಭಾವಚಿತ್ರಕ್ಕೆ ಹೂಮಾಲೆ ಹಾಕಿ ಮನದಲ್ಲೇ ಶೋಕಿಸುತ್ತಿದ್ದರು.
ಅವರನ್ನು ಮಾತಿಗೆಳೆದಾಗ ’ಏನು ಹೇಳೋದು… ನನಗೆ ಮಾತೇ ಹೊರಡುತ್ತಿಲ್ಲ. ಪಂಡಿತ್ ರವಿಶಂಕರ್ ನನ್ನ ನೇರ ಗುರು ಅಲ್ಲ. ಆದರೆ ಅವರು ಗುರು ಜನರಲ್ಲಿ ಒಬ್ಬರು. ಭಾರತದ 20 ನೇ ಶತಮಾನದ ಹೆಸರಾಂತ ಸಂಗೀತ ಗುರು ಅಲ್ಲಾವುದ್ದೀನ್ ಖಾನ್ ಅವರ ಮಗ ಅಲಿ ಅಕ್ಬರ್ ಖಾನ್ ನನ್ನ ಗುರು. ಅವರ ಸಹೋದರಿ ಅನ್ನಪೂರ್ಣದೇವಿ ಕೂಡ ನನಗೆ ಗುರುಸಮಾನರು. ಅಲ್ಲಾವುದ್ದೀನ್ ಖಾನ್ ಅವರ ಶಿಷ್ಯರಾಗಿದ್ದ ರವಿಶಂಕರ್ ತಮ್ಮ ಗುರುಪುತ್ರಿಯನ್ನೇ ವಿವಾಹವಾದರು. ಇವರೆಲ್ಲರೂ ನನ್ನನ್ನು ತಿದ್ದಿ ತೀಡಿದವರು. ನಾನು ನಿಮ್ಮ ಮುಂದೆ ಈ ರೀತಿ ಮಾತನಾಡಲು ಸಾಧ್ಯವಾಗಿರುವುದೇ ಪಂ.ರವಿಶಂಕರ್ ಅವರಿಂದ. ನನ್ನ ಗುರು ಅಕ್ಬರ್ ಖಾನ್ ನನಗೆ ತಾಯಿಯಿದ್ದಂತೆ. ಕೇಳದೆಯೇ ಎಲ್ಲವನ್ನು ಕೊಟ್ಟರು. ಅವರದು ಅಕ್ಕರೆಯ ಪ್ರೀತಿ. ಆದರೆ ನಾನೇನು ಕಲಿತಿದ್ದೇನೆ ಏನು ಸಾಧನೆ ಮಾಡಿದ್ದೇನೆ ಎಲ್ಲದರ ಲೆಕ್ಕ ಕೇಳಿ ನನ್ನ ಬದುಕು ರೂಪಿಸಿದವರು ಪಂಡಿತ್ಜೀ. ಅವರು ನನಗೆ ತಂದೆಯಂತೆ. ತಂದೆ ಎಂದರೆ ಶಿಸ್ತಿನ ತಂದೆ. ನಾನು ಖಾನ್ ಅವರ ಬಳಿ 6 ವರ್ಷ ಕಲಿತ ಮೇಲೆ ಸರೋದ್ ವಾದನವನ್ನೇ ವೃತ್ತಿಯಾಗಿ ತೆಗೆದುಕೊಂಡಿರಲಿಲ್ಲ. ಹೈದರಾಬಾದ್ ವಿವಿಯಲ್ಲಿ ಇಂಗ್ಲೀಷ್ ಪ್ರೊಫೆಸರ್ ಆಗಿದ್ದೆ. ಒಳ್ಳೆಯ ಸಂಬಳ, ಕ್ವಾರ್ಟಸ್ ಎಲ್ಲ ಇತ್ತು. ನನಗೆ ಅವರು 1949 ರಲ್ಲಿಯೇ ಪರಿಚಯವಾಗಿದ್ದರೂ ಮುಖತಃ ಭೇಟಿಯಾಗಿದ್ದು 1955 ರಲ್ಲಿ ನನ್ನ ಗುರುಮನೆಯಲ್ಲಿ. ಆಗಲೇ ಅವರಿಂದ ಸಮ್ಮೋಹಿತನಾಗಿದ್ದೆ. ದಕ್ಷಿಣ ಭಾರತದವರು ಎಂದು ಹೆಚ್ಚು ಅಕ್ಕರೆ ತೋರಿದರು. ಹೆಚ್ಚು ಹುರುದುಂಬಿಸೋರು. 1990 ರಿಂದ ಅವರನ್ನು ಭೇಟಿ ಮಾಡಲು ಹೆಚ್ಚು ಅವಕಾಶ ದೊರೆಯಿತು. ಅವರನ್ನೊಮ್ಮೆ ಸಂದರ್ಶನ ಮಾಡಲು ಹೋಗಿದ್ದೆ. ಮಾತು ಮುಗಿಯಿತು. ಎಲ್ಲಿ ಸಿತಾರ್ ತಾ, ಎಂದು ಪಾಠ ಆರಂಭಿಸಿದರು. ಸತತ ಮೂರು ಘಂಟೆ ಪಾಠ ಅದು. ಶುಕ್ಲಬಿಲಾಲ್, ಪೂರ್ವಿ ಸೇರಿದಂತೆ ಹತ್ತಿರದ ಎಲ್ಲ ರಾಗಗಳ ದೊಡ್ಡ ಗುಚ್ಚವನ್ನೇ ನನಗೆ ನೀಡಿದರು. ಸರೋದ್ ,ಸಿತಾರ್ ನಡುವೆ ಅವರಿಗೆ ಒಳ್ಳೆ ಮೂಡ್ ಬಂದಿತು, ಹಾಡಲು ಆರಂಭಿಸಿಯೇ ಬಿಟ್ಟರು. ಇಬ್ಬರು ಹಾಡಿದೆವು. ಹೊತ್ತು ಹೋದದ್ದೇ ತಿಳಿಯಲಿಲ್ಲ.
ಮತ್ತೊಂದು ದಿನ ಮುಂಜಾನೆಯೇ ನನ್ನ ಮನೆಬಾಗಿನಲ್ಲಿಯೇ ನಿಂತಿದ್ದರು. ಅವರ ಕಾಲಿಗೆ ಬಿದ್ದು ಒಳಗೆ ಕುಳ್ಳಿರಿಸಿದೆ. ನೀನಿನ್ನು ಪ್ರಾಕ್ಟೀಸ್ ಮಾಡಿಲ್ಲ ಎಂದು ಕಾಣಿಸುತ್ತೆ. ಬಾ ಎಂದು ಸರೋದ್ ನುಡಿಸಲಾರಂಭಿಸಿದರು. ಒಂದೂವರೆ ಘಂಟೆ ನಿರಂತರ ವಾದನ. ಸಾವಿರ ಜನ್ಮ ಎತ್ತಿಬರಬೇಕು ಅದನ್ನು ಕೇಳಲು. ಪುಣ್ಯ ಮಾಡಿರಬೇಕು ಅಂತಹ ಪ್ರೀತಿ ಪಡೆಯಲು. ನಮ್ಮ ಏಳ್ಗೆ ಬಯಸುವವರು ಕಹಿ ಸೇರಿಸಿ ಹೇಳುತ್ತಾರೆ. ಅದು ನಮ್ಮದೇ ಒಳ್ಳೆಯದಕ್ಕೆ. ಆಗ ನನಗೆ 51 ವರ್ಷ. ಪ್ರೊಫೆಸರ್ ಆಗಿದ್ದೆ. ಚೆನ್ನಾಗಿ ಬಯ್ದರು. ನನ್ನ ಸಹೋದರನಿಂದ (ಅಕ್ಬರ್ ಖಾನ್) ಕಲಿತದ್ದು ಏನು ಪ್ರಯೋಜನವಾಯಿತು? ಇದು ಯಾವ ನ್ಯಾಯ ? ನಿನ್ನ ಗುರುಮನೆಗೆ ಏನು ಕೊಟ್ಟೆ ಎಂದು ಪಂಡಿತ್ ಜೀ ಖಾರವಾಗಿಯೆ ಪ್ರಶ್ನೆ ಮಾಡಿದರು. ಏನು ಮಾಡಬೇಕು ಹೇಳಿ ಎಂದೆ. ಚೆನ್ನಾಗಿ ನುಡಿಸು. ಈ ಕೆಲಸ ಬಿಡು. ಬೆಂಗಳೂರಿನಲ್ಲಿರುವ ನಿನ್ನ ಮನೆಗೆ ಹೋಗು. ಅಲ್ಲಿ ಬಾಡಿಗೆ ಕೊಡುವ ಉಸಾಬರಿಯಿಲ್ಲ. ಅದಕ್ಕೆ ವೈಟ್ವಾಷ್ ಮಾಡಿಸು. ಮೊದಲು ನಿನಗೆ ಹಣಕಾಸಿನ ತೊಂದರೆಯಾಗಬಹುದು. ಕ್ರಮೇಣ ಎಲ್ಲವೂ ಸರಿಹೋಗುತ್ತದೆ ಎಂದರು. ತಾಲೀಮು ಆರಂಭವಾಯಿತು. ಮೊದಲ ಕಛೇರಿ ಗಂಗೂಬಾಯಿ ಹಾನಗಲ್ ಅವರೊಂದಿಗೆ ಕುಂದಗೋಳದಲ್ಲಿ. ಎಷ್ಟು ಕೊಡುತ್ತೀರಿ ಎಂದೆ. ಭೀಮಣ್ಣನಿಗೆ( ಭೀಮಸೇನಜೋಷಿ) ಇನ್ನೂರು ಕೊಡುತ್ತೀನಿ. ನಿನಗೆ ನೂರು ಎಂದರು ಗಂಗಕ್ಕ. ಹಾಗೆ ನನ್ನ ಸರೋದ್ ವೃತ್ತಿ ಆರಂಭವಾಯಿತು. ಈಗ ನೋಡಿ ನೀವು ಸಂದರ್ಶನ ಮಾಡುವ ಹಾಗಾಯಿತು. ಇಲ್ಲದೇ ಹೋದರೆ ನಾನು ಯಾವುದೇ ವಿವಿಯ ಕುಲಪತಿಯಾಗಿ ನಿವೃತ್ತಿಯಾಗಿ ಮರೆಯಾಗಿ ಬಿಡುತ್ತಿದೆ. ಈ ಮಟ್ಟಕ್ಕೆ ಬರಲು ಅವರೇ ಕಾರಣ. ಇತ್ತೀಚೆಗೆ ಅ.28-29 ರಂದು ಸ್ಯಾನ್ಪ್ರಾನ್ಸಿಕೋದಲ್ಲಿ ನನ್ನ ಕಛೇರಿಯಿತ್ತು ಅದಕ್ಕೆ ಒಂದು ಬ್ರೋಷರ್ ರಚಿಸಲಾಗಿತ್ತು. ಅದರ ಮೇಲೆ ಅವರು ಬರೆದಿದ್ದರು. ಖುಷಿಯಾಯಿತು. ಅವರನ್ನು ಸಂಪರ್ಕಿಸಲು ಯತ್ನಿಸಿದೆ.ಸಿಗಲಿಲ್ಲ. ಕೊನೆಗೆ ಅವರೇ ಕರೆ ಮಾಡಿ ಅದೇ ರೀತಿ ಆಶೀರ್ವಾದ ಮಾಡಿ ಹರಸಿದರು. ಮಾರ್ಚನಲ್ಲಿ ದೆಹಲಿಗೆ ಬರುತ್ತೇನೆ ಬಂದು ಬಿಡು ಎಂದರು. ಇನ್ನೆಲ್ಲಿ ಮಾರ್ಚ್… ? ತಂದೆ ತಾಯಿ ಇಬ್ಬರೂ ಹೊರಟುಹೋದರು. ಏನು ಮಾಡಲಿ? ನಾನು ಅನಾಥನಾಗಿಬಿಟ್ಟೆ…’
( ಅವರ ದನಿ ಗದ್ಗದಿತ.ಮೌನವಾಗಿಬಿಟ್ಟರು. ಅಲ್ಲಿ ರವಿಶಂಕರ್ ಸಿತಾರ್ ವಾದನ ಅನುರಣಿಸುತ್ತಿತ್ತು)







0 Comments