ನ್ಯಾಯಮೂರ್ತಿ ಎಚ್ ಎನ್ ನಾಗಮೋಹನ ದಾಸ್ ಅವರ ಪುಸ್ತಕ
‘ಅರಿವು ಬೆಳಕು’ ಬಿಡುಗಡೆ ಆಗುತ್ತಿದೆ

ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಶ್ರೀ ಎಚ್ ಎನ್ ನಾಗಮೋಹನದಾಸ್ ಅವರ ಹೊಸ ಕೃತಿ ‘ಅರಿವು ಬೆಳಕು’ ಜುಲೈ ೫, ಶುಕ್ರವಾರದಂದು ಸಂಜೆ ೫ಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ಲೋಕಾರ್ಪಣೆಗೊಳ್ಳಲಿದೆ. ಭಾರತದ ಸರ್ವೋಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿಗಳಾದ ಎಂ ಎನ್ ವೆಂಕಟಾಚಲಯ್ಯ ಅವರು ಈ ಕೃತಿಯನ್ನು ಅರ್ಪಿಸಲಿದ್ದಾರೆ, ಜ್ಞಾನಪೀಠ ಪ್ರಶಸ್ತಿ ವಿಜೇತ ಹಿರಿಯರಾದ ಡಾ ಚಂದ್ರಶೇಖರ ಕಂಬಾರ ಅವರು ಅಧ್ಯಕ್ಷತೆ ವಹಿಸಲಿದ್ದು ಕರ್ನಾಟಕ ಲೇಖಕಿಯರ ಸಂಘದ ಈ ಹಿಂದಿನ ಅಧ್ಯಕ್ಷರಾದ ಡಾ ಸಂಧ್ಯಾರೆಡ್ಡಿ ಅವರು ಕೃತಿ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಲಿದ್ದಾರೆ.
ಎಚ್ ಎನ್ ನಾಗಮೋಹನ ದಾಸ್ ಅವರು ನ್ಯಾಯಾಂಗದ ಬಗ್ಗೆ ಹಂಚಿಕೊಂಡಿರುವ ನೋಟಗಳನ್ನು ‘ಅರಿವು ಬೆಳಕು’ ಒಳಗೊಂಡಿದೆ. ನ್ಯಾಯಾಂಗ ಹೇಗೆ ಜನರ ಒಳಿತನ್ನು ಬಯಸುತ್ತದೆ, ನ್ಯಾಯಾಂಗ ಹೇಗೆ ಕಟ್ಟಕಡೆಯ ಮನುಷ್ಯನ ಬಗ್ಗೆ ಚಿಂತಿಸುತ್ತದೆ ಎನ್ನುವುದು ಕೃತಿಯ ಸಾರ. ಸಂವಿಧಾನ ಹಾಗೂ ನ್ಯಾಯಾಂಗಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಲವು ಕೃತಿಗಳನ್ನು ರಚಿಸಿರುವ ನಾಗಮೋಹನದಾಸ್ ಅವರು ಈ ಕೃತಿಯಲ್ಲಿ ಅರಿವು ಹೇಗೆ ಬೆಳಕಾಗುತ್ತದೆ ಎನ್ನುವುದರ ಬಗ್ಗೆ ನಾನಾ ಕಡೆ ನೀಡಿದ ಉಪನ್ಯಾಸ ಲೇಖನಗಳನ್ನು ಒಂದೆಡೆ ತಂದಿದ್ದಾರೆ. ಬೆಂಗಳೂರಿನ ಸ್ಫೂರ್ತಿ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ.
‘ನಾಗಮೋಹನದಾಸ್ ಅವರ ಲೇಖನಗಳಲ್ಲಿ ಒಮ್ಮೆ ಅಂತರ್ಗಾಮಿಯಾಗಿ, ಇನ್ನೊಮ್ಮೆ ಮೇಲ್ದನಿಯಾಗಿ ಮನವರಿಕೆಯಾಗುವ ಅಂಶವೆಂದರೆ ಅವರಿಗಿರುವ ಸಮಾನತೆ ಹಾಗೂ ನೈತಿಕತೆಯ ಕಾಳಜಿ. ಸಮತೋಲನವನ್ನು ಕಾಪಾಡಿಕೊಂಡೇ ನಾಗಮೋಹನ ದಾಸ್ ವಸ್ತುಸ್ಥಿತಿಯನ್ನು ಹೇಳುತ್ತಾರೆ’ ಎಂದು ಕೃತಿಯ ಬೆನ್ನುಡಿಯಲ್ಲಿ ಬರಗೂರು ರಾಮಚಂದ್ರಪ್ಪನವರು ಅಭಿಪ್ರಾಯ ಪಡುತ್ತಾರೆ.
ಪುಸ್ತಕದ ಮುಖಪುಟ ಇಲ್ಲಿದೆ :






0 Comments