ನೋವು ಕಡಲ ತೆರೆಯಲ್ಲ, ಹೊಳೆಯ ಹೊಕ್ಕುಳು..

ಹೊಳೆಯ ಹೊಕ್ಕುಳು

ಸುಪ್ತದೀಪ್ತಿ

 

sea waves1          “ನೋವು ಕಡಲ ತೆರೆಯಲ್ಲ, ಹೊಳೆಯ ಹೊಕ್ಕುಳು”, ಅವಳ ಮಾತು ನನ್ನ ಒಳಗೆ ಪೂರ್ತಿ ಇಳಿಯುವ ಮೊದಲೇ ಮುಂದುವರೆಸಿದಳು: “ನೀವೇನೇ ಹೇಳಿ ಮೇಡಂ, ಹೆಣ್ಣಾಗಿ ಹುಟ್ಟಬಾರದು. ಅಮ್ಮ ಯಾವಾಗಲೂ ಹೀಗೆ ಬಯ್ಕೊಳ್ತಾ ಇದ್ದಾಗ ಅರ್ಥ ಆಗಿರ್ಲಿಲ್ಲ. ಈಗ ಒಮ್ಮೊಮ್ಮೆ ಅಮ್ಮನ ಮೇಲೇ ಕೋಪ ಬರ್ತದೆ; ತಾನು ಹೆಣ್ಣಾಗಿ ಹುಟ್ಟಬಾರ್ದಿತ್ತು ಅಂತ ಪರಿತಪಿಸಿದವ್ಳು ನನ್ನನ್ನು ಹೀಗೆ, ಈ ಬಾಳು ಸಾಗಿಸ್ಲಿಕ್ಕೆ ಒಂಟಿಯಾಗಿ ಬಿಟ್ಟದ್ಯಾಕೆ? ಉತ್ರ ಹೇಳ್ಳಿಕ್ಕೆ ಅವಳಿಲ್ಲ ಈಗ, ಅದೇ ಕಷ್ಟ. ಬಿಟ್ಟು ಎದ್ದು ಹೋದ್ಳು…” ಕಿಟಕಿಯಿಂದ ಓರೆಯಾಗಿ ಬಂದು ಗೋಡೆ ಮೇಲೆ ಬೀಳುತ್ತಿದ್ದ ಸಂಜೆ ಬಿಸಿಲಿನ ಗೆರೆಗಳನ್ನೇ ನೋಡುತ್ತಾ ಹೇಳುತ್ತಿದ್ದವಳ ಮುಖ ನಿರ್ವಿಣ್ಣ ನಿರ್ಭಾವುಕ ಬಿಳುಪು. ಸಂಜೆಯ ಹೊಂಬಣ್ಣವೂ ಹೊಳೆಯಿಸಲಾರದ ಬಿಳುಪು.

ಥೆರಪಿಸ್ಟ್ ಆಗಿ ಕೆಲಸ ಶುರು ಮಾಡಿದಾಗಿಂದ ಇಲ್ಲೀವರೆಗೆ ಎಷ್ಟೆಷ್ಟೋ ಜನರನ್ನು ನೋಡಿದೆ. ಎಲ್ಲರ ನೋವುಗಳಿಗೆ, ತೊಂದರೆ-ಗೊಂದಲಗಳಿಗೆ ಕಿವಿಯಾದೆ. ಕೆಲವಾರು ಕಣ್ಣೀರಿನ ಹರಿವುಗಳಿಗೆ ಬೆರಳತಡೆಯೊಡ್ಡದೆ ಹೆಗಲಾಸರೆಯಾಗದೆ, ಸುಮ್ಮನೇ ಟಿಶ್ಯೂ ತೆಗೆದು ಕೊಟ್ಟು ಮೂಕ ಪ್ರೇಕ್ಷಕಿಯಾಗಿದ್ದೆ. ಒಳಗಿನ ನೋವು ತಂತಾನೇ ಹರಿದಾಗ ಅದೇ ಒಂದು ಸಮಾಧಾನ ಸ್ಥಿತಿ ಕಂಡುಕೊಳ್ಳುತ್ತದೆ, ಇದು ನಾನು ಕಂಡ ಅನುಭವಸತ್ಯ. ನಂತರದ ಹೀಲಿಂಗ್ ನನ್ನ ಪಾತ್ರ. ಎಲ್ಲರ ಹೀಲಿಂಗ್ ಒಂದೇ ತೆರನಲ್ಲ ಅನ್ನುವುದೂ ಅಷ್ಟೇ ನಿಚ್ಚಳ. ಒಬ್ಬೊಬ್ಬರದೂ ಒಂದೊಂದು ಹಾದಿ.

ಎಲ್ಲೋ ನೋಡುತ್ತಿದ್ದವಳು ಬಿಸಿಲ ಕೋಲು ಓರೆಯಾಗುವ ಪರಿಯನ್ನೊಮ್ಮೆ ದಿಟ್ಟಿಸಿ ನನ್ನತ್ತ ನೋಡಿದಳು. ವಯಸ್ಸು ಮೂವತ್ತೈದು; ನಲ್ವತ್ತೈದರಂತೆ ಕಾಣುತ್ತಾಳೆ, ಅಂದುಕೊಂಡೆ. ತುಟಿಗಳನ್ನೊಮ್ಮೆ ಒದ್ದೆ ನಾಲಗೆಯಿಂದ ಸವರಿಕೊಂಡು, “ನೀವೇ ಹೇಳಿ ಮೇಡಂ, ಕ್ಷಮಯಾ ಧರಿತ್ರಿ ಅಂತ ಪಟ್ಟ ಏರಿ ಬರೇ ಕ್ಷಮಿಸ್ತಾ ಜೀವನ ಮಾಡ್ಲಿಕ್ಕೆ ಆಗ್ತದಾ? ಅದೂ ಒಂದು ಬಾಳಾ? ನನಗೆ ಉಸಿರು ಕಟ್ಟುವಾಗಲೂ ಇನ್ನೊಬ್ಬರಿಗೆ ಉಸಿರು ಕೊಡ್ಲಿಕ್ಕೆ ಆಗ್ತದಾ? ಸಾಧ್ಯ ಇಲ್ಲ, ನನ್ನಿಂದ ಇನ್ನು ಸಾಧ್ಯವೇ ಇಲ್ಲ.” ತಾನೇ ಒಳಗೊಳಗೆ ನಿರ್ಧರಿಸಿದ್ದನ್ನು ನನ್ನ ಮುಂದೆ ಉದುರಿಸಿ, ಕಟ್ಟಿಕೊಂಡ ತಡೆಗೋಡೆ ಕಳಚಿ, ಬಿಡುಗಡೆಯಲ್ಲಿ ಉಸಿರೆಳೆದುಕೊಂಡು ಕಣ್ಣು ಮುಚ್ಚಿದಳು. ಅದೆಂಥಾ ಕಷ್ಟವಿರಬಹುದು? ಏನಾಗಿರಬಹುದು? ಪ್ರಶ್ನೆ ಹೊರಬೀಳಲಿಲ್ಲ, ಅವಳ ಉತ್ತರವನ್ನೇ ನಿರೀಕ್ಷಿಸಿದೆ.

ಹುಸಿಯಾಗಲಿಲ್ಲ. ಮತ್ತೆ ಒದ್ದೆ ನಾಲಗೆ ತುಟಿಗಳನ್ನು ಹಸಿಮಾಡಿತು. ಗಂಟಲಿನ ಗಂಟು ಎದೆಗಿಳಿಯಿತು. ಮತ್ತೊಂದು ದೀರ್ಘ ಉಸಿರು ಕೋಣೆಯನ್ನು ಒಂದಿಷ್ಟು ಬೆಚ್ಚಗಾಗಿಸಿತು. ಒಂದು ಟಿಶ್ಯೂ ತೆಗೆದು ಅವಳ ಕೈಗಿತ್ತದ್ದೇ ಕಣ್ಣುಗಳು ಕರಗಲು ಅಣಿಯಾದವು. ತುಟಿಗಳು ತೆರೆದವು, “ಎಲ್ಲಿಂದ ಶುರು ಮಾಡ್ಲಿ?” “ನಿನ್ಗೆ ಹೇಗೆ ಅನ್ನಿಸ್ತದೋ ಹಾಗೆ. ಎಲ್ಲಿಂದ ಶುರು ಮಾಡ್ಬೇಕು ಅಂತ ನಿನ್ನೊಳಗೆ ತುಡಿತ ಉಂಟೋ ಅಲ್ಲಿಂದ. ಯಾವುದು ಹೆಚ್ಚು ಭಾರವೋ ಅದನ್ನು ಮೊದ್ಲು ಹೊರಹಾಕು. ನಂತರ ಎಲ್ಲವೂ ಹಗುರಾಗ್ತಾ ಹೋಗ್ತದೆ” ಅಂದೆ. ಮತ್ತೊಂದು ಕ್ಷಣ ಇನ್ನೂ ಓರೆಯಾದ ಬಿಸಿಲಕೋಲನ್ನು ದಿಟ್ಟಿಸಿದಳು. ನಾನು ಟಿಪ್ಪಣಿ ಬರೆಯದೆ ಎಲ್ಲವನ್ನೂ ರೆಕಾರ್ಡ್ ಮಾಡಲು ಸಜ್ಜಾದೆ…

“…ನನ್ನಮ್ಮನೇ ನನ್ನ ಪ್ರಪಂಚ ಆಗಿದ್ದ ದಿನಗಳನ್ನೇ ನಾನು ಕಷ್ಟ ಅಂತ ಅಂದುಕೊಳ್ತಿದ್ದೆ. ಅಪ್ಪ ಬೇಕಾಬಿಟ್ಟಿ ಬರ್ತಿದ್ದ, ಹೋಗ್ತಿದ್ದ. ಅಮ್ಮನ ಟೈಲರಂಗಡಿ ದುಡಿಮೆ ನಮ್ಮಿಬ್ಬರ ಹೊಟ್ಟೆಗೆ, ನನ್ನ ವಿದ್ಯೆಗೆ; ಮತ್ತೆ ಬಂದಾಗೆಲ್ಲ ಅಪ್ಪನ ಕುಡಿತದ ಗುಡಾಣಕ್ಕೆ. ಅವನಿಗೆ ಒದೀಬೇಕು, ಕ್ಯಾಕರಿಸಿ ಉಗುಳಿ ಹೊರಗೆ ದೂಡ್ಬೇಕು ಅಂತೆಲ್ಲ ಆಗ ನನಗೆ ಅನ್ನಿಸ್ತಿತ್ತು. ಮಾಡ್ತಿರಲಿಲ್ಲ, ಅಮ್ಮನಿಗೆ ಬೇಜಾರಾಗ್ತದೆ ಅಂತ ಯಾವುದೋ ಮೂಲೆ ಹೇಳ್ತಿತ್ತು. ತನ್ನ ಕಾಲ ಮೇಲೆಯೇ ನಿಂತಿದ್ದ ಅಮ್ಮನೂ ಅವನಿಗೆ ಯಾಕೆ ಅಷ್ಟು ಹೆದರ್ಬೇಕೋ ಅರ್ಥವೇ ಆಗ್ತಿರಲಿಲ್ಲ. ಅದೊಂದಿನ, ಅಪ್ಪನ ಅಕ್ಕ, ಸಂಸಾರ ಸಮೇತ ನಮ್ಮಲ್ಲಿಗೆ ಬಂದ ದಿನ ನಿಜವಾಗಿಯೂ ನೋವು ಅವಮಾನ ಅಂದ್ರೇನು ಅಂತ ಗೊತ್ತಾದದ್ದು.

ನನಗಿನ್ನೂ ಎಂಟು ವರ್ಷ. ಅತ್ತೆಯ ಮಕ್ಕಳು ನನಗಿಂತ ದೊಡ್ಡವರು, ಹನ್ನೆರಡು ವರ್ಷದ ಬೊಡ್ಡಿ, ಹತ್ತು ವರ್ಷದ ಬಡ್ಡ. ಹೌದು, ಹಾಗಲ್ಲದೆ ಬೇರೇನು ಕರೀಲಿಕ್ಕೂ ನನ್ನ ಮನಸ್ಸು ಒಪ್ಪುದಿಲ್ಲ. ನಮ್ಮ ಸಣ್ಣ ಮನೆಯ ಒಳಕೋಣೆಯಲ್ಲಿ, ಒಂದು ಅಪರಬೆಳಗು, ನಾವು ಮಕ್ಕಳು ಏನೋ ಮಾಡ್ತಿದ್ದೆವು. ಹೊರಗೆ ಅಮ್ಮ-ಅತ್ತೆ-ಅಪ್ಪ ಜೋರು ಜೋರು ಮಾತಾಡುದು ಕೇಳ್ತಿತ್ತು. ಅದ್ಯಾವುದೋ ಘಳಿಗೆಯಲ್ಲಿ ಅಮ್ಮನನ್ನು ಅತ್ತೆ ‘ಸೂಳೆ’ ಅಂದಳು. ಅಷ್ಟೂ ಹೊತ್ತು ವಾದ ಮಾಡ್ತಿದ್ದ ಅಮ್ಮ ತಣ್ಣಗಾದ್ಳು. ಅಪ್ಪ ಏನೋ ಒಪ್ಪಂದದ ಮಾತಾಡಿದ. ನನ್ನನ್ನು ಹೊರಗೆ ಕರೆದು ನನ್ನ ತಲೆಮೇಲೆ ಕೈಯಿಟ್ಟು ಅಮ್ಮ ‘ನಾನು ಶುದ್ಧ ಗರತಿ’ ಅಂತ ಆಣೆ ಮಾಡಿದ ಮೇಲೆ, ಅಮ್ಮನೇ ಮಾಡಿದ ಚಾ ಎಲ್ಲರೂ ಕುಡಿದರು, ಅವಳೇ ಕೆಂಪುಕಟ್ಟಿ ಬಾತುಹೋದ ಕಣ್ಣಲ್ಲಿ ನೀರು ಸುರಿಸುತ್ತಾ ಮೂಗು ಒರೆಸುತ್ತಾ ಮಾಡಿದ ಅಡುಗೆ ಊಟ ಮಾಡಿದೆವು.

woman by the seaದೊಡ್ಡವರು ಅಲ್ಲೇ ಅಡ್ಡಾದರು, ನಾವು ಮತ್ತೊಮ್ಮೆ ಏನೇನೋ ಆಟಕ್ಕೆ ಹಚ್ಚಿಕೊಂಡೆವು. ಅಕ್ಕ-ತಮ್ಮ ಒಂದು ಕಡೆ, ನಾನೊಬ್ಬಳೇ ಒಂದು ಕಡೆ. ಒಂಟಿ ಅಂತನ್ನಿಸಿದ್ದೇ ಆಗ, ಅಮ್ಮನ ಪ್ರಮಾಣದ ನಂತರ. ಇವರೆಲ್ಲ ಯಾರೋ ಬೇರೆ ಅಂತ ಅನ್ನಿಸ್ತಿತ್ತು. ನಾಲ್ಕು ಕವಡೆಗಳ ದಚ್ಚೆಯಾಟ. ನಾನು ಒಂಟಿಯಾಗಿದ್ದಕ್ಕೆ ನನಗೆ ಎರಡೂ ಕೈಸೇರಿಸಿ ದಚ್ಚೆ ಬಾಚುವ ಅವಕಾಶ ಕೊಟ್ಟಿದ್ಳು. ಗೆಲ್ಲುತ್ತಿದ್ದೆ. ಇದ್ದಕ್ಕಿದ್ದ ಹಾಗೆ ಬಡ್ಡ ಎದ್ದು ನಿಂತ, ನನ್ನ ಮುಂದೆ ಬಂದ. ತನ್ನ ಚಡ್ಡಿ ಜಾರಿಸಿ ಶಿಶ್ನವನ್ನು ಸವರುತ್ತಾ, ‘ಸೂಳೆಯ ಮಗಳೂ ಸೂಳೆ. ಚೀಪು ಇದನ್ನು, ಹ್ಮ್… ಚೀಪು…’ ಅಂತ ನನ್ನ ಮುಖದ ಮೇಲೆ ಬಾಯಿಯ ಹತ್ತಿರ ತಂದ. ಕೆಟ್ಟ ವಾಸನೆ. ವಾಂತಿ ಬರುವಂಥ ವಾಸನೆ. ವಾಂತಿ ಬಂದು ಬಾಯಿ ತೆರೆದರೂ ಇವನೆಲ್ಲಿ ಅದನ್ನು ನನ್ನ ಬಾಯೊಳಗೆ ತುಂಬಿಸ್ತಾನೋ ಅಂತ ದಿಗಿಲಾಗಿದ್ದೆ. ಕೈಕಾಲೇ ಆಡ್ತಿರಲಿಲ್ಲ. ಬೊಡ್ಡಿ ಕಿಸಿಕಿಸಿ ನಗ್ತಿದ್ಳು. ‘ಹಾಗೇ ಆಗ್ಬೇಕು ನಿಂಗೆ’ ಅಂತಿದ್ಳು. ಅದು ಹೇಗೋ ಅವನನ್ನು ದೂಡಿ ಆ ಕೋಣೆಯಿಂದ ಹೊರಗೆ ಬಂದು ಬಾಗಿಲು ತೆರೆದು ಅಂಗಳಕ್ಕೆ ಬಂದು ನಿಂತೆ. ಅಪರಾಹ್ನದ ಸೂರ್ಯನೂ ಹಿಮಸುರೀತಿದ್ದನೇನೋ, ನಾನು ನಡುಗ್ತಿದ್ದೆ. ಅದೇ ಸಂಜೆ ಅವರೆಲ್ಲ ಹೊರಟ ಮೇಲೆಯೇ ನಾನು ಮನೆಯೊಳಗೆ ಬಂದದ್ದು. ಅಮ್ಮನಿಗೂ ನನಗೂ ಒಂದೇ ದಿನ ಅವಮಾನವಾಗಿತ್ತು. ಆದರೆ ನನ್ನ ನೋವಿನ ಅರಿವು ಅಮ್ಮನಿಗಿರಲಿಲ್ಲ.

ಇದೆಲ್ಲ ಅಮ್ಮನ ಹತ್ರ ಹೇಳಲೇ ಇಲ್ಲ. ಆಗೆಲ್ಲ, ಅಮ್ಮ ಬಯ್ತಾಳೆ ಅಂತಲೇ ಹೆದ್ರಿಕೆ. ಬಯ್ಯುವವಳೇ ಅವಳು, ವಿನಾಕಾರಣ ಬಯ್ಯುವವಳು. ಶಾಲೆಯಿಂದ ಬರುವಾಗ ಐದು ನಿಮಿಷ ತಡವಾದರೂ ಮೊದಲು ಬೆನ್ನಿಗೊಂದು ಗುದ್ದಿ ನಂತರ ‘ಯಾಕೆ ತಡ?’ ಕೇಳ್ತಿದ್ದವಳು. ಇನ್ನು ಇದನ್ನು ಹೇಳಿದರೆ, ‘ನೀನು ಯಾಕೆ ಅವನೊಟ್ಟಿಗೆ ಇದ್ದದ್ದು?’ ಅಂತಲೇ ಕೇಳುವವಳು. ಒಳಗೊಳಗೆ ಒಂಟಿಯಾಗುತ್ತ ಕೆಟ್ಟ ಹಠ ಬೆಳೆಸಿಕೊಂಡೆ. ಯಾರಿಗೂ ಬಗ್ಗದ ಛಲದಲ್ಲಿ ಓದಿದೆ. ಶಾಲೆಯ ಮೇಷ್ಟ್ರುಗಳ ಸಹಾಯದಿಂದ ಸ್ಕಾಲರ್’ಶಿಪ್ ಸಿಗ್ತಿತ್ತು. ಎಂಜಿನಿಯರಿಂಗ್ ಸೇರಿದೆ. ಮೆಡಿಕಲ್ ಓದುವ ಅರ್ಹತೆ ಇದ್ದರೂ ಮತ್ತಷ್ಟು ದಿನ ಓದಬೇಕಲ್ಲ ಅನ್ನುವ ಒಂದೇ ಕಾರಣಕ್ಕೆ ಇಂಜಿನಿಯರ್ ಆದೆ. ಎರಡು ವರ್ಷ ಕೆಲಸ ಮಾಡಿ ಬ್ಯಾಂಕ್ ಬ್ಯಾಲೆನ್ಸ್ ಕೂಡಿಸಿ ಮತ್ತೆ ಸಾಲ ಮಾಡಿ ದೊಡ್ಡ ಮೊತ್ತ ಬ್ಯಾಂಕಲ್ಲಿ ಸೇರಿಸಿಟ್ಟೆ. ವ್ಯಾಂಕೂವರಿಗೆ ಮುಂದೆ ಓದುವುದಕ್ಕೆ ಹೊರಟೆ. ಅಪ್ಪ ಎಲ್ಲೋ ಚರಂಡಿಯಲ್ಲಿ ಬಿದ್ದು ಸತ್ತು ನಾಲ್ಕು ವರ್ಷ ಆಗಿತ್ತು. ಅಮ್ಮನಿಗೆ ಒಂಟಿಯಾಗಿದ್ದು ಅಬ್ಯಾಸ ಆಗಿತ್ತು. ಅವಳ ಮಾತೂ ಕೇಳದೆ ವ್ಯಾಂಕೂವರಿಗೆ ಬಂದಿಳಿದೆ.

ಸ್ವಾತಂತ್ರ್ಯ ಅಂದ್ರೆ ಏನೂಂತ ಆಗ ಗೊತ್ತಾಯ್ತು. ಸ್ವಂತಿಕೆಯ ಮುಖ ಅರಿವಾಯ್ತು. ನನ್ನ ಕಾಲಿನ ಶಕ್ತಿಯ ಪರಿಚಯ, ನನ್ನೊಳಗಿನ ಛಲದ ಸ್ವರೂಪ; ಅಸ್ಮಿತೆ ಅನ್ನುವುದರ ಜೀವಂತ ಪ್ರತಿಮೆ ನಾನು ಅಂತನ್ನಿಸ್ತಿತ್ತು. ಒಬ್ಬಳೇ ಇರುವುದನ್ನು ಪ್ರೀತಿಸ್ತಲೇ ಒಂದಷ್ಟು ಸ್ನೇಹಿತರ ದಂಡೂ ಸೇರಿಕೊಂಡೆ. ಎಲ್ಲರೂ ನನ್ನ ಹಾಗೇ ಒಂಟಿ ಇಲ್ಲಿ. ಜೀವನ ಪ್ರೀತಿಯ ಹೊಸ ಅಧ್ಯಾಯ. ಮೊದಲ ಸಲ ನನ್ನ ಛಲವನ್ನೂ ಹೊರತಾಗಿ ನನ್ನನ್ನು ನಾನು ಪ್ರೀತಿಸ್ಲಿಕ್ಕೆ ಕಲ್ತೆ.

ಒಂದು ಸೋಮಾರಿ ಶನಿವಾರ ಸ್ನಾನಕ್ಕಿಳಿದಿದ್ದೆ. ಪಕ್ಕದ ಮನೆಯ ಬಾತ್ರೂಂ ನನ್ನ ಬಾತ್ರೂಂ ಒಂದೇ ಗೋಡೆಯ ಆಚೆ ಈಚೆ. ಅಲ್ಲಿಂದ ಬಾಗಿಲು ಬಡಿದಂಥ ಟಕಟಕ ಶಬ್ದ. ನೀರು ನಿಲ್ಲಿಸಿ ಕಿವಿಯಾದೆ. ಮತ್ತೆ ಟಕಟಕ. ಉದ್ದೇಶಪೂರ್ವಕ ಈ ಶಬ್ದ ಅನ್ನುವುದು ಅರಿವಿಗೆ ಬಂತಾದರೂ ಮತ್ತೆ ನೀರು ಹರಿಸಿ, ಸ್ನಾನ ಮುಗಿಸಿ ಹೊರಗೆ ಬಂದೆ. ಶಬ್ದವೂ ಸುಮ್ಮನಾಯ್ತು. ಸಂಜೆ ನಾನು ಹೊರಗೆ ಹೋಗಿದ್ದವಳು ಒಳ ಬಂದಾಗಲೇ ಎದುರಿನ ಬಾಗಿಲು ತೆರೆದು ಮುಚ್ಚಿಕೊಂಡದ್ದು ಅರಿವಾಯ್ತು. ಮರುದಿನವೂ ಇದೇ ಪುನರಾವರ್ತನೆ. ಸ್ನಾನದ ಕೋಣೆಯ ಗೋಡೆ ಮತ್ತು ಎದುರು ಮನೆಯ ಬಾಗಿಲುಗಳು ನನ್ನನ್ನು ಅನುಸರಿಸಿದವು. ಕುತೂಹಲ, ಭಯ ಎರಡರ ತಾಕಲಾಟದಲ್ಲಿ ಮುಂಜಾಗ್ರತೆಯ ಕವಚವನ್ನೂ ಹೊದ್ದ ಕುತೂಹಲ ಗೆದ್ದಿತು. ಮರುದಿನ ನನ್ನ ಬಾತ್ರೂಂ ಗೋಡೆಯೂ ಟಕಟಕಿಸಿತು. ಮತ್ತೆಲ್ಲ ಮೌನ. ಸೋಜಿಗಪಟ್ಟೆ.

ನಾನು ಕಾಲೇಜಿಗೆ ಹೊರಡುವಾಗ ಎದುರು ಬಾಗಿಲೂ ಬಾಯ್ತೆರೆದು ಚಂದದ ಹುಡುಗನನ್ನು ಹೊರಗೆ ಹಾಕಿತು. ಬೇಡವೆಂದರೂ ಕಣ್ಣು ಉತ್ತರ ಹುಡುಕಿತು. ಬಾಯಿ ಪ್ರಶ್ನೆಯೇ ಇಟ್ಟಿತು, ‘ವೈ ಡು ಯೂ ನಾಕ್ ಆನ್ ದ ವಾಲ್?’ ‘ನಿಮ್ಮ ಜೊತೆ ಮಾತಾಡ್ಬೇಕು’ ಕನ್ನಡ ಕೇಳಿ ದಿಗಿಲು, ಖುಷಿ. ಯಾಕೆ? ಏನಂತ? ಇಲ್ಲಿ ಏನ್ ಮಾಡ್ತಿದ್ದೀರಿ? ಎಷ್ಟು ವರ್ಷದಿಂದ ಇಲ್ಲಿ? ಪರಸ್ಪರ ಅವವೇ ಪ್ರಶ್ನೆಗಳು, ಉತ್ತರಗಳು. ನಾನು ಫೋನಲ್ಲಿ ಕನ್ನಡ ಮಾತಾಡುವಾಗ ಕೇಳಿದ್ದನಂತೆ. ಒಂದು ತಿಂಗಳಿಂದ ನನ್ನನ್ನು ಗಮನಿಸ್ತಿದ್ದನಂತೆ. ಸ್ನೇಹ ಮೆಲ್ಲಗೇ ಚಾಚುಬಳ್ಳಿ ಚಾಚಿತು. ಸಂಜೆಗಳಲ್ಲು ಜೊತೆ ಸಿಕ್ಕಿತು. ಎಷ್ಟೋ ತಿಂಗಳು ಕಳೆದು ರಾತ್ರೆ ಮಲಗಲು ಮಾತ್ರ ಬೇರೆಬೇರೆಯಾಗುವ ಮಟ್ಟ ಮುಟ್ಟಿದೆವು. ಅವನಿಗೂ ಬೇರೆ ಯಾರೂ ಇರಲಿಲ್ಲ. ಎಮ್.ಎಸ್. ಮುಗಿಸಿ ಇಬ್ಬರೂ ಊರಿಗೇ ಹೋಗಿ ಮದುವೆಯಾಗುವ ನಿರ್ಧಾರ ಮಾಡಿದ್ದೂ ಆಯ್ತು. ಎಲ್ಲವೂ ಸರಿಯಿತ್ತು.

ಇಬ್ಬರೂ ಜೊತೆಯಾಗಿ ಎಮ್.ಎಸ್. ಮುಗಿಸಿ ಗ್ರಾಜುಯೇಷನ್ ಸರ್ಟಿಫಿಕೇಟ್ ಪಡೆದು, ಸಾಲ ತೀರಿಸಲು ಊರಲ್ಲೇ ಕೆಲಸ ಮಾಡುವುದೆಂದೇ ನಿರ್ಧರಿಸಿ ವೀಸಾ ಮುಗಿಯುವ ಮೊದಲೇ ಊರಿಗೆ ಬಂದುಬಿಟ್ಟೆವು. ಬಂದ ತಿಂಗಳಲ್ಲೇ ನನ್ನ ಹಳೇ ಕಂಪೆನಿ ಕರೆದು ಕೆಲಸ ಕೊಟ್ಟಿತು, ಬೆಂಗಳೂರಲ್ಲಿ. ಊರಿಂದ ಅಮ್ಮನನ್ನೂ ಕರೆಸಿ, ಮನೆ ಮಾಡಿ, ದೇವಸ್ಥಾನದಲ್ಲಿ ಮದುವೆಯೂ ಆದೆವು. ಅವನಿಗಿನ್ನೂ ಸರಿಯಾದ ಕೆಲಸ ಸಿಕ್ಕಿರ್ಲಿಲ್ಲ. ಮದುವೆಯಾಗಿ ಒಂದು ವಾರಕ್ಕೇ ಅಮ್ಮ ಅಪಶ್ರುತಿ ಹಿಡಿದಳು, ‘ನೀನೂ ನನ್ನ ಹಾಗೇ ಒಂಟಿ ನೊಗಕ್ಕೆ ಹೆಗಲು ಕೊಟ್ಟಿದ್ದೀ. ಅವನಿಗೇನೂ ಕೆಲ್ಸ ಮಾಡುವ ಮನಸ್ಸಿದ್ದ ಹಾಗೆ ಕಾಣುದಿಲ್ಲ. ನೀನು ತಂದು ಹಾಕಿದ್ದನ್ನು ತಿಂದುಕೊಂಡು ದಿಲ್ದಾರ್ ಇದ್ದಾನೆ ನೋಡು!’ ಅದವನ ಕಿವಿಗೂ ಬಿದ್ದಿರಬೇಕು. ಮೊದಲ ಸಲ ನಮ್ಮಿಬ್ಬರಲ್ಲಿ ಅಸಮಾಧಾನದ ಹೊಗೆ. ರಾತ್ರೆ ಮುಖಗಳು ಗೋಡೆ ನೋಡಿದ್ದು ಅಂದೇ.

ಅದಾಗಿ ಒಂದು ತಿಂಗಳಲ್ಲೇ ಅವನಿಗೂ ಒಳ್ಳೇ ಕೆಲಸವೇ ಸಿಕ್ಕಿತು. ಆದರೂ ಬೆಂಗಳೂರಿನ ಜೀವನ, ನಮ್ಮಿಬ್ಬರಿಗೂ ಉಸಿರು ಕಟ್ಟಿಸುತ್ತಿತ್ತು. ಸಂಜೆಗಾದರೂ ಜೊತೆಯಾಗಿರುತ್ತೇವೆಂದರೆ ಅದೂ ಸಾಧ್ಯವಿರಲಿಲ್ಲ. ಮನೆ ತಲುಪುವಷ್ಟರಲ್ಲಿ ಮರುದಿನಕ್ಕೆ ಗಡಿಯಾರ ತಿರುಗಲು ಎರಡು ಸುತ್ತು ಬಾಕಿಯಿರುತ್ತಿತ್ತು. ಅಮ್ಮನ ಆರೋಗ್ಯ ಹದಗೆಡುತ್ತಿತ್ತು. ಅದರಲ್ಲೂ ಮಗು ಬೇಕೆನ್ನುವ ಹಂಬಲ ಅವಳದು. ನಾನೇನೋ ಸಮಾಧಾನ ಹೇಳಿದರೆ ಸಾಲದೂಂತ ಅವನಲ್ಲೂ ಮಗುವಿನ ಮಾತೆತ್ತಿ ದುಸುಮುಸು ಮಾಡುತ್ತಿದ್ದಳು. ಅವನಿಗದೇ ಸಾಕಾಗುತ್ತಿತ್ತು ಒಳಗೊಳಗೇ ಉರಿದುಕೊಂಡು ಹೊಗೆ ಕಾರುತ್ತಿದ್ದ. ಪರಸ್ಪರ ಪರಿಚಯ ಆಗಿ ಒಂದೂವರೆ ವರ್ಷ, ಮದುವೆ ಆಗಿ ಏಳು ತಿಂಗಳು, ನಮ್ಮ ನಡುವಿನ ಬಿರುಕಿನಲ್ಲಿ ಅಮ್ಮನ ಉಸಿರು. ಯಾರನ್ನು ಬಿಡುದು? ಯಾರನ್ನು ಹೇಗೆ ಸಮಾಧಾನಿಸುದು? ಇಬ್ಬರ ದುಡಿಮೆ ಇಲ್ಲದೆ ನಮ್ಮಿಬ್ಬರ ಸಾಲ ತೀರಿಸಲು ಸಾಧ್ಯವೇ ಇರಲಿಲ್ಲ. ಅವನ ಸಂಬಳ ಪೂರ್ತಿ ಅದಕ್ಕೇ ಮೀಸಲಿಟ್ಟಿದ್ದೆವು. ಅಮ್ಮನೇ ನನ್ನ ಬಾಳಿಗೆ ಒಳಗೊಳಗೇ ಚುಚ್ಚುವ ಮುಳ್ಳಾದಾಳು ಅನ್ನುವ ಕಲ್ಪನೆಯೂ ಇರಲಿಲ್ಲ. ಹಾಗಂತ ಅಮ್ಮನನ್ನು ಎಲ್ಲೋ ಬಿಡುವ ಯೋಚನೆಯೂ ಇಲ್ಲ, ಬಿಡುವ ಹಾಗೂ ಇರಲಿಲ್ಲ. ಅವಳಿಗೆ ನಾನಲ್ಲದೆ ಬೇರೆ ಯಾರೂ ಇಲ್ಲ. ಇಂಥ ಸಂದಿಗ್ಧದಲ್ಲೇ ವರ್ಷ ಕಳೆಯುವ ಹೊತ್ತಿಗೆ ಅಮ್ಮನ ಆರೋಗ್ಯ ತೀರಾ ಹದಗೆಟ್ಟು ಆಸ್ಪತ್ರೆಗೆ ಸೇರಿಸಿದ್ದಾಯ್ತು. ನಾಲ್ಕೈದು ದಿನ ರಜೆ ಹಾಕಿ ಸುಧಾರಿಸಿದೆ. ಆಫೀಸ್ ಕೆಲಸ ಬೆನ್ನು ಬಿಡಲಿಲ್ಲ, ಅಮ್ಮ ಹುಶಾರಾಗಲಿಲ್ಲ. ಮುಂದಿನ ವಾರ ರಜೆ ಹಾಕು ಅಂದ್ರೆ ಇವನು ಕೇಳಲೇ ಇಲ್ಲ. ಬೆಳಗ್ಗೆ ನಾನು ಆಸ್ಪತ್ರೆಗೆ ಹೋಗಿ ಆಫೀಸಿಗೆ ಹೋಗ್ತಿದ್ದೆ, ಸಂಜೆಗೆ ಅವನೊಮ್ಮೆ ಹೋಗಿ ಬರುದು ಅಂತ ಒಪ್ಪಿಸಿದ್ದೆ. ಹಾಗೇ ಮತ್ತೊಂದು ವಾರ ನಡೀತು. ಅಮ್ಮ ಉಸಿರಾಟದ ತೊಂದರೆಯಿಂದ ವೆಂಟಿಲೇಟರ್ ಮೇಲಿದ್ದಳು. ಐ.ಸಿ.ಯು. ಒಳಗೆ ನಾವು ಹೋಗಿ ಇರುವ ಹಾಗೂ ಇಲ್ಲ.

ಒಂದು ಮಂಗಳವಾರ ಬೆಳಗ್ಗೆ ನಾನು ಹೋಗಿದ್ದಾಗ ಡಾಕ್ಟರ್ ನನ್ನನ್ನು ಛೇಂಬರಿಗೆ ಕರೆದು, ‘ಪರಿಸ್ಥಿತಿ ಕಷ್ಟ. ಇನ್ನೂ ಎಷ್ಟು ದಿನ ಹೀಗೇ ಇರ್ತಾರೋ ಹೇಳ್ಳಿಕ್ಕೆ ಆಗುದಿಲ್ಲ…’ ಅಂದ್ರು. ‘ಅಂದ್ರೇನು ಮಾಡ್ಬೇಕು…’ ಏನೂ ತೋಚದೆ ಕೇಳಿದ್ದೆ. ‘ನೀವೇ ಯೋಚಿಸಿ. ನಾನೇನೂ ಹೇಳುದಿಲ್ಲ.’ ಅಂದ್ರು. ತಲೆ-ಎದೆ ಭಾರ ಹೊತ್ತು ಹೇಗೋ ಆಫೀಸು ಮುಗಿಸಿ ಮನೆಗೆ ಬಂದೆ. ರಾತ್ರೆ ಇವನ ಹತ್ರ ಮಾತಾಡ್ಬೇಕು ಅಂತ ಹವಣಿಸುವಾಗ ಅವ ಮಲಗಿಯೇ ಬಿಟ್ಟಿದ್ದ. ಸಿಟ್ಟು ಎಲ್ಲಿಂದ ನೆತ್ತಿಗೇರಿತ್ತೋ, ಗೊತ್ತಿಲ್ಲ. ಮಲಗಿದವನ ಮುಸುಕೆಳೆದು ಕೂಗಾಡಿದ್ದೆ, ‘ಅಮ್ಮ ಅಲ್ಲಿ ಸಾಯ್ತಾ ಬಿದ್ದಿರುವಾಗ ನೀನು ಅದು ಹೇಗೆ ಇಷ್ಟು ಆರಾಮಾಗಿ ನಿದ್ದೆ ಮಾಡ್ತೀ? ಮನುಷ್ಯನೋ ಮೃಗವೋ ನೀನು? ಮಾನವೀಯತೆ ಅನ್ನುದು ಉಂಟಾ ನಿಂಗೆ?’…

ನನ್ನ ಸ್ವರ ತಾರಕಕ್ಕೇರುತ್ತಿತ್ತು. ಅವನ ತಣ್ಣಗಿನ ಮೌನ ನನ್ನ ಕೋಪಕ್ಕೆ ಬಿಸಿತುಪ್ಪವೇ ಸುರೀತಿತ್ತು. ನನ್ನ ಹಾರಾಟವನ್ನು ಹಾಗೇ ಸಹಿಸುತ್ತಿದ್ದವ ನನ್ನನ್ನೆಳೆದು ಹಿಡಿದಿಟ್ಟಿದ್ದರೆ ಕರಗುತ್ತಿದ್ದೆ, ನೀರಾಗುತ್ತಿದ್ದೆ. ಹೊಳೆಯಾಗುತ್ತಿದ್ದೆ. ಬೆಂಕಿ ಆರುತ್ತಿತ್ತು. ಹಾಗಾಗಲಿಲ್ಲ. ನಾನೇ ಉರಿದುರಿದು ಅವನನ್ನೊಮ್ಮೆ ದುರುದುರು ದಿಟ್ಟಿಸಿ, ಹೊರಗೆ ಸೋಫಾಕ್ಕೆ ಬಂದು ಮಲಗಿದೆ. ತಡೆಯಲಿಲ್ಲ. ಮತ್ತೆ ಕೋಣೆಗೆ ಹೋಗಿ, ಬಟ್ಟೆ ಬದಲಾಯಿಸಿ ಅವನಿಗೊಂದು ಚೀಟಿ ಬರೆದಿಟ್ಟು ಹೇಳದೇ ಆ ಅಪರಾತ್ರಿಯಲ್ಲಿ ಒಂದು ಕಿ.ಮೀ. ದೂರದ ಆಸ್ಪತ್ರೆಗೆ ನಡೆದೇ ಹೋದೆ. ಐ.ಸಿ.ಯು. ಒಳಗೊಮ್ಮೆ ಇಣುಕಿ ನೋಡಿದೆ. ಅಮ್ಮ ಉಸಿರಾಡುತ್ತಿದ್ದಳೋ ಇಲ್ಲವೋ ಗೊತ್ತಿಲ್ಲ. ಮಾನಿಟರ್ ಕಾಣುತ್ತಿರಲಿಲ್ಲ. ನರ್ಸ್ ಯಾರೂ ಸುತ್ತ ಇರಲಿಲ್ಲ. ಒಳಗೆ ಹೋಗುವುದೋ ಬೇಡವೋ ಗೊಂದಲದಲ್ಲಿ ಅಲ್ಲೇ ಕುರ್ಚಿಯಲ್ಲಿ ಕುಸಿದೆ. ಅರೆನಿದ್ದೆ, ಮಂಪರು, ಅರೆಗನಸು, ದಿಗಿಲು…

ಬೆಳಗಾಗುವ ಮೊದಲೇ ಮತ್ತೆ ಐ.ಸಿ.ಯು. ಒಳಗೆ ಕಣ್ಣು ಹಾಯಿಸುವಾಗ ನರ್ಸ್ ಅಮ್ಮನ ಹತ್ತಿರವೇ ಕೂತದ್ದು ಕಂಡಿತು. ಒಳನುಗ್ಗಿದೆ, ಅಮ್ಮನ ಬದಿಗೆ. ‘ಅವರ ಉಸಿರಾಟ ಸ್ಥಿಮಿತಕ್ಕೆ ಬರ್ತಿದೆ. ನಾಳೆಯೊಳಗೆ ವಾರ್ಡಿಗೆ ಹಾಕಬಹುದೇನೋ’ ನನ್ನ ಗುರುತು ಹಿಡಿದ ನರ್ಸ್ ಉಸುರಿದಳು. ಆಗಲೇ ಅಮ್ಮನೂ ಕಣ್ಣು ತೆರೆದು ನನ್ನನ್ನೊಮ್ಮೆ ನೋಡಿ ಕೈಯೆತ್ತಿದರು. ಅಂಗೈ ಹಿಡಿದು ಮೃದುವಾಗಿ ನನ್ನ ಅಂಗೈಗಳಲ್ಲಿ ತಬ್ಬಿಕೊಂಡೆ. ಕೆಲವು ಕ್ಷಣ ಕಳೆದು, ಸಂಜೆ ಬರುತ್ತೇನೆಂದು ಹೇಳಿ ಹೊರಟೆ. ನನ್ನೊಳಗೆ ಹೊಸ ಹುರುಪು. ಮತ್ತೆ ಓಡುನಡಿಗೆಯಲ್ಲೇ ಮನೆ ಸೇರಿದೆ. ಇವನಿನ್ನೂ ಎದ್ದಿರಲಿಲ್ಲ. ಸ್ನಾನ ಅಡುಗೆ ಮುಗಿಸಿ ಇಬ್ಬರಿಗೂ ಬುತ್ತಿ ಕಟ್ಟುವ ಹೊತ್ತಿಗೆ ಎದ್ದ, ‘ಸ್ಸಾರಿ’ ಅನ್ನುತ್ತಾ ಬೆನ್ನ ಹಿಂದೆ ನಿಂತ. ಅಮ್ಮನ ಆರೋಗ್ಯದ ಹೊಸ ದಿಕ್ಕಿನಲ್ಲಿ ನಾನೂ ನಿನ್ನೆಯನ್ನು ಬದಿಗಿಟ್ಟೆ, ‘ಆಯ್ತು ಬಿಡು’ ಅಂದೆ. ನಮ್ಮಲ್ಲಿ ಮೊದಲ ಸಲ ಅಂಥಾ ಜಗಳ ಆಗಿ ರಾಜಿಯಾಗಿದ್ದು. ಇಬ್ಬರೂ ಸಂಜೆ ಒಟ್ಟಿಗೇ ಆಸ್ಪತ್ರೆಗೆ ಹೋಗುವಾ ಅಂದೆ. ತಲೆಯಾಡಿಸಿದ. ಒಟ್ಟಿಗೇ ಆಫೀಸಿಗೆ ಹೊರಟೆವು.

couple sculptureಮಧ್ಯಾಹ್ನ ಒಂದು ಮೀಟಿಂಗ್ ಇತ್ತು. ತಯಾರಾಗ್ತಿದ್ದೆ. ಆಸ್ಪತ್ರೆಯಿಂದ ಕಾಲ್. ಯಾಕೋ ಒಮ್ಮೆಗೇ ಕೈಕಾಲು ತಣ್ಣಗಾಯ್ತು, ಎದೆ ಹೊಡ್ಕೊಂಡಿತು. ಕಾಲ್ ತಗೊಂಡೆ, ನರ್ಸ್ ಮಾತಾಡಿ, ಆಸ್ಪತ್ರೆಗೆ ಬನ್ನಿ ಅಂದ್ಳು. ಅಮ್ಮ ಹೇಗಿದ್ದಾರೇಂತ ಕೇಳಿದ್ರೆ ಒಂದು ಕ್ಷಣ ಮೌನದ ನಂತ್ರ ಬನ್ನಿ ಅಂದ್ಳು. ಅವ್ಳು ಹೇಳದೇ ಇದ್ದದ್ದು ನನಗೆ ಗೊತ್ತಾಯ್ತು. ಅವನಿಗೆ ಕಾಲ್ ಮಾಡಿದೆ. ತಕ್ಷಣ ಹೊರಡ್ತೇನೆ ಅಂದ. ನಾನೂ ಮೀಟಿಂಗ್ ಕ್ಯಾನ್ಸಲ್ ಮಾಡಿ ಹೊರಟೆ. ಅಮ್ಮನ ಮುಖದ ಮೇಲೆ ಬಿಳಿ ಶೀಟ್ ಹೊದಿಸಿದ್ರು. ಅಳು ಬರಲೇ ಇಲ್ಲ. ಅಮ್ಮನನ್ನು ಅತ್ತೆ ಸೂಳೆ ಅಂದ ದಿನ ಅಮ್ಮ ಪ್ರಮಾಣ ಮಾಡಿದ್ದು, ಆ ಅತ್ತೆ ಮಗ ನನಗೆ ಅನ್ಯಾಯ ಮಾಡಿದ್ದು, ಅಮ್ಮನಿಗೂ ನನ್ಗೂ ಅಂದು ಹೀನಾಯವಾಗಿದ್ದು… ಇದೇ ನೆನಪುಗಳ ಚಿತ್ರಮಾಲೆ ತಲೆಯಲ್ಲಿ. ಅಮ್ಮನಿಗೆ ಇದನ್ನು ಹೇಳದೇ ಇದ್ರೂ, ಈಗ ಅಮ್ಮನ ಸಾವಿನೆದುರಲ್ಲಿ ಅದು ಹೀಗೆ ಯಾಕೆ ನೆನಪಾಯ್ತು? ಅಮ್ಮನಿಗೂ ಈಗ ಇದರ ಅರಿವಾಗಬಹುದಾ? ಬರೀ ಇಂಥ ಗೊಂದಲಗಳ ಒಳಗಿಂದ ಏನೇನು ಮಾಡಿದೆನೋ, ಏನು ಮಾತಾಡಿದೆನೋ… ಅರಿವಿಲ್ಲ.

ರಾತ್ರೆ ಎಲ್ಲ ಮುಗಿಸಿ ಮನೆಗೆ ಬಂದಾಗ ಯಾವತ್ತೂ ಇಲ್ಲದ ಒಂಟಿತನ; ಇವನ ಜೊತೆ ಇದ್ದೂ ಒಂಟಿತನ. ಅಮ್ಮ ತನಗಾಗಿ ಏನನ್ನು ಮಾಡಬೇಕೆಂದಾಗಲಿ ಮಾಡಕೂಡದೆಂದಾಗಲಿ ಹೇಳಿರಲಿಲ್ಲ. ಅಪ್ಪನ ತಿಥಿ ಅಂತ ಅಮ್ಮ ಯಾವತ್ತೂ ಒಂದು ದಿನ ನೆನಪಿಸಿಕೊಂಡದ್ದು ನನಗರಿವಿಲ್ಲ. ಈಗ ಅಮ್ಮನ ತಿಥಿ ಮಾಡ್ಬೇಕೋ ಬೇಡವೋ… ಮತ್ತೊಂದು ಗೊಂದಲ. ಇವನ ಅಪ್ಪ-ಅಮ್ಮ? ಅವರ ಬಗ್ಗೆ ಇವನು ಯಾವತ್ತೂ ಏನೂ ಮಾಡಿದ್ದು ಗೊತ್ತಿಲ್ಲ, ಈ ಎರಡು ವರ್ಷಗಳಲ್ಲಿ. ನಿದ್ದೆಯಿಲ್ಲದ ರಾತ್ರಿ. ಒಂದೇ ಒಂದು ಮಾತಾಡದೆ ತಾನೂ ನಿದ್ದೆಯಿಲ್ಲದೆ ಹೊರಳುತ್ತಿದ್ದವನ ಮೇಲೆ ಮತ್ತೊಮ್ಮೆ ಎಲ್ಲಿಲ್ಲದ ಕೋಪ ಉಕ್ಕಿ ಬಂತು. ಏನಾದ್ರೂ ಮಾತಾಡು ಅಂತ ಒಳಗೊಳಗೇ ಬೇಡಿಕೊಳ್ತಾ ಮೇಲಿಂದ ಗುಮ್ಮನ ಹಾಗೆ ದುರುಗುಟ್ಟಿದೆ. ಛಕ್ಕನೆ ಎದ್ದು ಬಂದು ಬದಿಯಲ್ಲಿ ಕೂತು ಹೆಗಲಿಗೆ ಕೈ ಹಾಕಿದ, ಅಷ್ಟೇ. ಅದೆಲ್ಲಿತ್ತೋ ಬಿಕ್ಕಳಿಕೆ, ಬಡಬಡಿಕೆ, ದುಃಖ, ಕಣ್ಣೀರು… ಇಪ್ಪತ್ತು ವರ್ಷಗಳಲ್ಲಿ, ಅತ್ತೆ ಮಗ ಮಾಡಿದ ಅವಮಾನದ ನೋವಿನಿಂದ ಹಿಡಿದು ಅಮ್ಮನ ಸಾವಿನ ತನಕದ ಎಲ್ಲ ನೋವು-ನಲಿವಿನ ಕ್ಷಣಗಳಲ್ಲಿ ಹೊರಗೆ ಬಾರದಿದ್ದ ಎಳೆಯೆಳೆಗಳೆಲ್ಲ ಅದು ಹೇಗೆ ಹೊರಗೆ ಬಂದವೋ ಗೊತ್ತಿಲ್ಲ.
ಇಷ್ಟಾದರೂ, ತಾನೇ ಮುಂದೆ ಬಂದು ಮಾತಾಡಿಸಿ, ನನ್ನನ್ನು ಒಪ್ಪಿಸಿ ಮದುವೆಯಾದವ ಈ ಎರಡು ದಿನಗಳಲ್ಲಿ ಮೌನಾವತಾರ ತಾಳಿದ್ದು ನನಗೊಂದು ದೊಡ್ಡ ಪ್ರಶ್ನಾರ್ಥಕ ಚಿಹ್ನೆಯಾಗಿತ್ತು. ಆದ್ರೆ ಅದ್ರ ಅರಿವಾಗಲು ಮತ್ತೊಂದು ದಿನ ಹಿಡಿದಿತ್ತು. ಮನೆಯಲ್ಲಿ ಅಮ್ಮನ ವಸ್ತುಗಳನ್ನೆಲ್ಲ ಎತ್ತಿಟ್ಟು ಅವಳ ಕೋಣೆ ಕ್ಲೀನ್ ಮಾಡುತ್ತಿದ್ದೆ. ಎಲ್ಲ ಬಟ್ಟೆಬರೆ ಅನಾಥಾಶ್ರಮಕ್ಕೆ ಕೊಡುವ ನಿರ್ಧಾರ ಮಾಡಿದ್ದೆ. ಅದು ಬಿಟ್ಟು ಅಮ್ಮನದಾಗಿ ಉಳಿದದ್ದು ಹೊಲಿಗೆ ಮೆಶೀನ್. ನನಗಂತೂ ನೇರ ಒಂದು ಸಾಲು ಗೆರೆ ಎಳೆಯಲೂ ಬರುದಿಲ್ಲ, ಹೊಲಿಗೆ ಎಲ್ಲಿಂದ? ಅದನ್ನೂ ಅನಾಥಾಶ್ರಮಕ್ಕೇ ಕೊಡುವ ಯೋಚನೆ ಮಾಡುತ್ತಿದ್ದೆ. ಆಗ ಅವನ ಮೌನ ನನ್ನ ಗಮನಕ್ಕೆ ಬಂತು. ಇವತ್ತಿಗೆ ಅಮ್ಮ ಹೋಗಿ ಮೂರು ದಿನ, ಅವನ ಮೌನಕ್ಕೂ. ಯಾಕೆ ಮಾತಾಡಿಲ್ಲ? ಆದಿನ ಬೆಳಗ್ಗೆ ‘ಸ್ಸಾರಿ’ ಅಂತ ಹೇಳಿದ್ದು ಬಿಟ್ಟರೆ ಬೇರೆ ಮಾತೇ ಆಡ್ಲಿಲ್ಲ ಅವನು. ಎಲ್ಲ ನನ್ನದೇ ಮೊನೊಲಾಗ್. ಏನಾಗಿದೆ ಅವನಿಗೆ? ಈಗ ನಮ್ಮಿಬ್ಬರಿಗೂ ಬೇರೆ ಯಾರಿಲ್ಲ. ಅವನಿಗೆ ನಾನು ನನಗವನು. ನಮ್ಮಲ್ಲೇ ಈಗಲೇ ಹೀಗಾದರೆ ಮುಂದೆ ಹೇಗೆ? ಇಲ್ಲಿಂದ ತಪ್ಪಿಸಿಕೊಂಡು ಎಲ್ಲಾದರೂ ಹೋಗಬೇಕೆನಿಸಿತು. ಎಲ್ಲಿಗೆ? ಹೊಳೆಯಲಿಲ್ಲ.

ರಾತ್ರೆ ಬಂದವನ ಮುಂದೆ ನನ್ನೆಲ್ಲ ಪ್ರಶ್ನೆಗಳನ್ನೂ ಉದುರಿಸಿದೆ, ತಡೆಯಲಾಗಲೇ ಇಲ್ಲ. ಮೌನವಾಗಿಯೇ ಎಲ್ಲ ಕೇಳಿದ. ‘ಎರಡು ದಿನ ನಮ್ಮೂರಿಗೆ ಹೋಗಿ ಬರುವನಾ?’ ಅಂದ. ಮೊದಲ ಸಲ ಅವನೂರಿನ ಬಗ್ಗೆ ಮಾತಾಡಿದ್ದ. ಅವನಿಗೂ ಅಸ್ಮಿತೆ ಕಾಡಿತ್ತಾ? ಬೇರು ಬೇಕೆನಿಸಿತ್ತಾ? ಹೊರಟೆವು. ಹೊಳೆಬದಿಯ ಹಸುರು ಹೊಲದ ಸಣ್ಣ ಊರು. ಎರಡು ದಿನ ಅಲ್ಲೆಲ್ಲ ಅಡ್ಡಾಡಿದೆವು. ಅಪ್ಪನ ದಾಯಾದಿಗಳ ಕೈಸೇರಿದ ಅವನ ಬಾಲ್ಯದ ನೆನಪಿನ ತುಕುಡಿಗಳನ್ನು ಬಣ್ಣದ ಹಚ್ಚಡ ಮಾಡಿ ನಮ್ಮಿಬ್ಬರ ಮನಸ್ಸುಗಳು ಹೊದ್ದವು. ಊರಲ್ಲಿ ಯಾರೂ ಅವನ ಗುರುತು ಹಿಡಿಯಲೇ ಇಲ್ಲ. ನಾನು ಅಚ್ಚರಿಪಟ್ಟಿದ್ದಕ್ಕೆ ಹೇಳಿದ, ಅವ ಊರು ಬಿಟ್ಟಾಗ ಹತ್ತು ವರ್ಷದವನಂತೆ. ಅವನೂ ಯಾರನ್ನೂ ಮಾತಾಡಿಸಲಿಲ್ಲ, ಯಾರ ಉಸಾಬರಿಯೂ ಬೇಡ ಅಂದ. ಊರಿನಲ್ಲಿದ್ದ ನಾಲ್ಕೈದು ದಿನಗಳೂ ಅವನದು ಬಹುತೇಕ ಮೌನವೇ. ನನ್ನ ಪ್ರಶ್ನೆಗಳಿಗೆ ಅವನುತ್ತರ, ಅಷ್ಟೇ. ಹಾಗೇ ನೆನಪಿಸಿಕೊಂಡರೆ ವ್ಯಾಂಕೂವರ್ ದಿನಗಳಿಂದಲೂ ಅವನೊಂದಿಷ್ಟು ಮೌನಿಯೇ. ನನ್ನ ಮಾತುಗಾರಿಕೆಯಲ್ಲಿ ಅವನ ಮೌನ ನನಗರಿವಾಗಿರಲಿಲ್ಲ. ಅಮ್ಮನ ಅನಾರೋಗ್ಯ, ಹಿಂಸೆ, ಒತ್ತಡಗಳ ನೆಲೆಯಲ್ಲಿ ಅವನ ಮೌನ ಭೂತಾಕಾರ ತಾಳಿತ್ತು ಎನ್ನುವ ತಿಳಿವು ಮೂಡಿತು. ಒಂದಿಷ್ಟು ಹಗುರಾಗಿ ಬೆಂಗಳೂರು ಸೇರಿ ಮತ್ತೆ ಯಾಂತ್ರಿಕತೆಗೆ ಒಡ್ಡಿಕೊಂಡೆವು.

ಅದೇ ಯಾಂತ್ರಿಕತೆಯಲ್ಲಿ ವರ್ಷಗಳೇ ಕಳೆದವು. ಅದೇ ಏಕತಾನದಲ್ಲೇ ನಮ್ಮನ್ನು ನಾವೇ ಕಳೆದುಕೊಂಡೆವು. ಮಕ್ಕಳಾಗಲಿಲ್ಲ. ಅದಕ್ಕಾಗಿ ತುಡಿತವೂ ಕಾಡದಷ್ಟು ಕೆಲಸಗಳು ಬೆನ್ನಿಗಿದ್ದವು. ಆಫೀಸು, ಮನೆ, ಎರಡನ್ನೂ ನಾನೇ ಸಂಭಾಳಿಸುತ್ತ ಸೋಲುತ್ತಿದ್ದೆ. ಇವನೋ, ತಾನು ಏನೂ ಮಾಡಲಾರ, ಕೊಂಕು ಹೇಳದೆ ಇರಲಾರ. ಅಡುಗೆಯ ಬಗ್ಗೆ, ಮನೆಯ ಬಗ್ಗೆ ಅವನು ಕೊಂಕು ತೆಗೆದಾಗೆಲ್ಲ ನಾನು ಉರಿದೇಳುವುದೂ ಸಹಜವಾಗುತ್ತಿತ್ತು. ಏನೋ ಒಂದು ಕೆಲಸ ಅವ ಮಾಡಿದರೂ ಅದರಲ್ಲಿ ಅಧ್ವಾನ, ನಂತರ ಸಣ್ಣ ಸ್ವರದ ‘ಸ್ಸಾರೀ…’ ಕ್ಷಮಿಸಿ ಮರೆತು ಮುಂದೆ ಸಾಗುತ್ತಿದ್ದೆ. ಮತ್ತೆ ಮತ್ತೆ ಅವವೇ ತಪ್ಪುಗಳು, ಅವವೇ ಸ್ಸಾರೀಗಳು ದಾರಿಗಟ್ಟೆಗಳಾದಾಗ ರೋಸಿಹೋಗುತ್ತಿದ್ದೆ. ನಮ್ಮಿಬ್ಬರಲ್ಲಿ ಹೊಂದಾಣಿಕೆಯೇ ಇಲ್ಲವೇನೋ ಅನ್ನುವಷ್ಟು ದೂರದೂರ ಸರಿಯುತ್ತಿದ್ದೆವು. ಮಾಡಿದ್ದ ಸಾಲ ತೀರಿಸಿಕೊಂಡಿದ್ದರೂ ಸ್ವಂತ ಮನೆಗಾಗಿ ಹಣ ಜೋಡಿಸಿಕೊಳ್ಳುವ ದರ್ದಿನಲ್ಲಿ ಇಬ್ಬರೂ ಯಂತ್ರಗಳಾಗಿದ್ದೆವು. ಒಟ್ಟಿಗೇ ರಜೆ ಹಾಕಿ ಎಲ್ಲಾದರೂ ಹೋಗೋಣ ಅನ್ನುವುದಕ್ಕೂ ಒಮ್ಮನಸು ಇಲ್ಲವಾಗುವ ದಿನಗಳು ಬಂದಾಗ ಯಥಾಪ್ರಕಾರ ನಾನು ಸಿಡಿದೇಳುತ್ತಿದ್ದೆ, ಅವನು ಹಿಮವಾಗುತ್ತಿದ್ದ. ಹಿಮಹೊದ್ದ ಜ್ವಾಲಾಮುಖಿಯೂ ಒಮ್ಮೊಮ್ಮೆ ಸ್ಫೋಟಿಸಿ ಬೆಂಕಿ ಉಗುಳುತ್ತದಲ್ಲ. ನಾನು ಎಷ್ಟೇ ತಾಳ್ಮೆ ತಂದುಕೊಂಡರೂ ಹಾಗೇ ಆಗುತ್ತಿತ್ತು. ಇವನದು ಮಾತ್ರ ಸದಾ ನೀರ್ಗಲ್ಲ ಮೌನ. ಕೊರೆಯುವ ಮೌನ. ಎಲ್ಲವನ್ನೂ ನಿರ್ಲಿಪ್ತವಾಗಿ ಕಳಚಿನಿಂತು ನೋಡುವ ಮೌನ. ಆ ಅಸಾಧಾರಣ ನಿಯಂತ್ರಣ ನನಗಂತೂ ಅಸಹನೀಯ.

ಒಂದು ದಿನ ಕೇಳಿಯೇಬಿಟ್ಟೆ, ‘ನಿನ್ನ ಈ ತಣ್ಣಗಿನ ಒಂಟಿತನಕ್ಕೆ ಮದುವೆ ಬೇರೆ ಕೇಡು. ಯಾಕೆ ಮದುವೆ ಆದದ್ದು ನನ್ನನ್ನು?’ ಅವನ ಉತ್ತರ ನನ್ನನ್ನು ಇನ್ನಷ್ಟು ಸಿಡಿಸಿತ್ತು, ‘ಆ ದಿನಗಳಲ್ಲಿ ಒಂಟಿಯಾಗಿದ್ದ ನೀನು ಒಳಗೊಳಗೇ ಕೊರೀತಿದ್ದಿ ಅಂತ ನನಗನ್ನಿಸಿತ್ತು. ನಿನಗೆ ಜೊತೆಯಾಗುವ ಅಂತ ಸ್ನೇಹಿತನಾದೆ. ನೀನು ಮದುವೆ ಅಂದೆ, ನಾನು ಮದುವೆಯಾದೆ.’ ಅಬ್ಬಾ, ಧಾರ್ಷ್ಟ್ಯವೆ!

‘ಮದುವೆ ಇಷ್ಟ ಇಲ್ಲ, ಬರೇ ಸ್ನೇಹ ಅಂತ ಆವತ್ತೇ ಹೇಳಿದ್ದಿದ್ರೆ ನಾನು ನನ್ನ ಪಾಡಿಗೆ ಇದ್ದುಬಿಡ್ತಿದ್ದೆ. ನಿಂಗೆ ಸ್ನೇಹ ಬೇಕಾಗಿತ್ತು, ಜೊತೆ ಬೇಕಾಗಿತ್ತು. ಅದಕ್ಕೆ ನನ್ನನ್ನು ಎಳೆದೆ. ನಾನಲ್ಲದೆ ಬೇರೆ ಗೆಳೆಯರೂ ನಿನಗಿದ್ದರಲ್ಲ. ಆಗ ನೀನೂ ಒಂಟಿಯಾಗಿರಲಿಲ್ಲ. ನೀನು ಅಂದುಕೊಂಡ ಹಾಗೆ ನಾನೂ ಒಂಟಿ ಆಗಿರಲಿಲ್ಲ, ಸ್ನೇಹಿತರಿದ್ರು. ನನ್ನಂಥ ಒಂಟಿ ಹೆಣ್ಣಿನ ಜೊತೆ ಆಡಬಹುದು ಅಂದುಕೊಂಡಿದ್ಯಾ? ಸೋ ಚೀಪ್!’ ನಾನು ಕಿರುಚುತ್ತಿದ್ದೆ. ‘ನೀವು ಗಂಡಸರಿಗೆ ಹೆಂಗಸರ ಜೊತೆಯಿಲ್ಲದೆ ಬದುಕೋಕೆ ಗೊತ್ತೇ ಇಲ್ಲ.’ ನನ್ನ ಕೋಪದ ಹಾರಾಟದಲ್ಲಿ, ನನಗರಿವಿಲ್ಲದೆಯೇ, ಎಲ್ಲ ಗಂಡಸರನ್ನೂ ಸೇರಿಸಿಕೊಂಡಿದ್ದೆ. ನಾನು ಕಂಡಿದ್ದ ನನ್ನಪ್ಪ, ನಮ್ಮ ಸುತ್ತಮುತ್ತ ಆ ಕಾಲದಲ್ಲಿದ್ದ ಗಂಡಸರು, ಅತ್ತೆ ಮಗ ಆ ಬಡ್ಡ, ಈ ಇವನು… ನನ್ನ ಬಾಳಲ್ಲಿ ಕೈಯಿಟ್ಟು ಆಟ ಆಡಿದವರನ್ನೆಲ್ಲ ಝಾಡಿಸ್ತಿದ್ದೆ. ‘ನಿಮಗೆ ಉಪಚಾರ ಮಾಡ್ಲಿಕ್ಕೆ ಹೆಣ್ಣು ಬೇಕು. ಸೇವೆ ಮಾಡ್ಲಿಕ್ಕೆ ಹೆಣ್ಣು ಬೇಕು. ನಿಮ್ಮ ಮನೆ-ಮಕ್ಕಳ ಕೆಲಸಕ್ಕೆ ಹೆಣ್ಣು ಬೇಕು. ನಿಮ್ಮ ಕೈಯಲ್ಲಿ ಅನ್ನಿಸ್ಕೊಳ್ಳಿಕ್ಕೆ ಹೆಣ್ಣು ಬೇಕು. ನಿಮ್ಮ ಪೌರುಷದ ತೀಟೆಗೆ ಹೆಣ್ಣು ಬೇಕು. ಹೆಣ್ಣಿಲ್ಲದೆ ಬದುಕ್ಲಿಕ್ಕೆ ನಿಮ್ಗೆ ಸಾಧ್ಯವೇ ಇಲ್ಲ. ಹಾಗಂತ ಅವ್ಳ ಜೊತೆ ಹೊಂದಿಕೊಂಡು ಬದುಕ್ಲಿಕ್ಕೂ ನಿಮ್ಗೆ ಗೊತ್ತಿಲ್ಲ. ನೀನು… ನೀ ಹೋಗ್, ಸಾಯಿ ಎಲ್ಲಾದ್ರೂ. ನಾನಿನ್ನು ನಿನ್ನೊಟ್ಟಿಗೆ ಬಾಳ್ವೆ ಮಾಡೋದಿಲ್ಲ…’ ಎದ್ದು ಕೋಣೆಗೆ ಹೋಗಿ ಚೀಲಕ್ಕೆ ಒಂದಷ್ಟು ಬಟ್ಟೆ ತುಂಬಿಸಿ ರಾತ್ರೆ ಎಂಟು ಗಂಟೆ ಅನ್ನುದನ್ನೂ ಗಮನಿಸದೆ ಬೀದಿಗಿಳಿದಿದ್ದೆ, ನಂತರ ಯೋಚನೆ ಮಾಡಿ ಹತ್ತಿರದ ಒಂದು ಹೋಟೆಲ್ ಹೊಕ್ಕು ರೂಂ ಮಾಡಿದೆ.

wavesಇಷ್ಟೆಲ್ಲ ಆಗಿ ಈಗ ಒಂದು ವಾರ ಆಗಿದೆ. ಹೇಳಿ ಮೇಡಂ… ನಾನು ಬಿಟ್ಟು ಬಂದು ತಪ್ಪು ಮಾಡಿದ್ನಾ? ಒಬ್ಬ ಮನುಷ್ಯನ್ನ ಅರ್ಥ ಮಾಡ್ಕೊಂಡೆ ಅಂದುಕೊಂಡಾಗ ಅವ ಮತ್ತೆ ನಿಗೂಢ ಆಗ್ತಾನಲ್ಲ. ಆಗೇನ್ ಮಾಡುದು? ಹೊಂದಾಣಿಕೆಗೆ ಎಷ್ಟು ಕಾಲ ಬೇಕು? ಹನ್ನೊಂದು ವರ್ಷ ಜೊತೆಗಿದ್ದೂ ಪರಸ್ಪರ ಅರ್ಥ ಆಗ್ಲಿಲ್ಲ, ಹೊಂದಾಣಿಕೆ ಹುಟ್ಲಿಲ್ಲ ಅಂದ್ರೆ ಇನ್ನು ಹುಟ್ತದಾ? ಕ್ಷಮಿಸ್ತಾ ಕ್ಷಮಿಸ್ತಾ, ಬಾಳಿನುದ್ದಕ್ಕೂ ಇನ್ನೊಬ್ರನ್ನು ಕ್ಷಮಿಸ್ತಾ ನಡಿಯುದು ಜೀವನ ಆಗ್ತದಾ? ಇವತ್ತು ಸರಿಯಾದಾನು, ನಾಳೆ ಸರಿಯಾದಾನು ಅಂತ ನಿರೀಕ್ಷೆ ಮಾಡುದೇ ಜೀವನವಾ? ಸದಾ ಇದೇ ಸುಳಿಯೊಳಗೇ ಉಸಿರಾಡ್ಲಿಕ್ಕೆ ಆಗ್ತದಾ? ನನ್ನ ಜೀವನದಲ್ಲಿ ನೋವು ಎದ್ದೆದ್ದು ಬರುವ ಕಡಲ ತೆರೆಯಲ್ಲ, ಒಳಗೇ ಎಳೆದುಕೊಳ್ಳುವ ಮುಳುಗಿಸುವ ಹೊಳೆಯ ಸುಳಿಹೊಕ್ಕುಳು ಅಂತ ಅದಕ್ಕೇ ಹೇಳಿದ್ದು. ಇದರಿಂದ ಹೊರದಾರಿ ಹೇಗೆ? ನೀವೇ ಹೇಳಿ…”

ಅವಳತ್ತ ನೀರಿನ ಬಾಟಲ್ ಸರಿಸಿದೆ. ಒಂದೇ ಸರ್ತಿಗೆ ನೀರನ್ನೆಲ್ಲ ಗಟಗಟ ಗಂಟಲಿಗೆ ಸುರಿದುಕೊಂಡಳು. ನಿಟ್ಟುಸಿರು ಬಿಟ್ಟು ಕುರ್ಚಿಯಲ್ಲಿ ಸರಿದು ಕೂತು ಬೆನ್ನು ಒರಗಿಸಿಕೊಂಡಳು. ಹಗುರಾದಳೆನ್ನಿಸಿತು. ‘ನೀನೇ ಹೇಳು, ಒಬ್ಬ ಮನುಷ್ಯನನ್ನ ಅರ್ಥ ಮಾಡಿಕೊಳ್ಳಿಕ್ಕೆ ಆಗ್ತದಾ? ಬೇರೆ ವ್ಯಕ್ತಿಯನ್ನು ಅರ್ಥ ಮಾಡಿಕೊಳ್ಳುದು ಅಂದ್ರೆ ಏನು? ಮೊದಲಿಗೆ, ನಿನ್ನನ್ನ ನೀನು ಅರ್ಥ ಮಾಡ್ಕೊಂಡಿದ್ದೀಯಾ? ನಿನ್ನಮ್ಮ ನಿನಗೆ ಅರ್ಥ ಆಗಿದ್ಲಾ? ಹಳ್ಳಿ ಬಿಟ್ಟು ಬೆಂಗಳೂರಿಗೆ ಬಂದಾಗಿನ ನಿನ್ನಮ್ಮನ ಗೊಂದಲ, ಗಲಿಬಿಲಿ; ಆ ಕಾರಣಗಳಿಂದಾಗಿ ಅವಳಲ್ಲಾದ ನಡವಳಿಕೆಯ ವ್ಯತ್ಯಾಸಗಳು… ಎಲ್ಲ ನೀನೇ ನೋಡಿದ್ದೀ, ಅರ್ಥ ಮಾಡಿಕೊಂಡಿರಲಿಲ್ಲ. ಈಗೊಮ್ಮೆ ಯೋಚಿಸು. ನೀನೂ ಅದೇ ಅಮ್ಮನ ಹಾಗಾಗಬಾರದೆನ್ನುವ ಒಳತುಡಿತದಲ್ಲಿ ಓವರ್ ರಿಯಾಕ್ಟ್ ಮಾಡ್ತಿದ್ದೀಯಾ? ನಿನ್ನನ್ನು ನೀನು ಗಮನಿಸಿಕೋ.’ ಅಂದೆ.

ನನ್ನ ಕಣ್ಣುಗಳನ್ನೇ ದಿಟ್ಟಿಸಿದಳು. ಕಂಪ್ಯೂಟರ್ ಸಯನ್ಸ್ ಎಮ್.ಎಸ್. ಮಾಡಿ ಜೀವನದಲ್ಲಿ ಎಡವುತ್ತಾ ಹತ್ತು ವರ್ಷ ಸಂಸಾರ ಮಾಡಿ ಈಗ ಎಲ್ಲ ಒದ್ದು ನನ್ನ ಮುಂದೆ ನಿಂತವಳು ಪೆದ್ದಿಯೇನಲ್ಲ. ನನ್ನ ಪ್ರಶ್ನೆಗೆ ಉತ್ತರ ಅವಳೊಳಗೇ ಉಂಟೆಂಬುದು ನನಗೂ ಗೊತ್ತು. ಅದಕ್ಕೊಂದು ಊರುಗೋಲು ನಾನಾಗಬೇಕು, ಅಷ್ಟೇ. ಕೆಲವು ಕ್ಷಣ ಸುಮ್ಮನಿದ್ದವಳು, ‘ಮುಂದಿನ ವಾರಕ್ಕೆ ಅಪಾಯಿಂಟ್’ಮೆಂಟ್ ಕೊಡಿ ಮೇಡಂ. ಇವತ್ತು ನನಗೇನೂ ಹೊಳೀತಿಲ್ಲ, ನನ್ನ ತಲೆ ನೆಟ್ಟಗಿಲ್ಲ.’ ಅಂದಳು. ಕೆಲವೊಂದು ರಿಲ್ಯಾಕ್ಸೇಷನ್ ಟೆಕ್ನಿಕ್ ಕಲಿಸಿ, ತನ್ನನ್ನು ತಾನು ಶಾಂತವಾಗಿಸುವ ಕೆಲವು ಸೂತ್ರಗಳನ್ನು ತಿಳಿಸಿ, ಮುಂದಿನ ಭೇಟಿ ನಿಗದಿಗೊಳಿಸಿದೆ. ‘ಈ ಒಂದು ವಾರ ಅವನೊಂದಿಗೇ ಇದ್ದು ನೋಡು. ಬೇರೆಯಾಗುವ ಬಗ್ಗೆ ಮುಂದಿನ ಭೇಟಿಯ ನಂತರ ನಿರ್ಧರಿಸು’ ಅಂತಂದು, ಅವನ ಮೌನದ ಬಗೆಗಿನ ಮಾತನ್ನು ಮುಂದಿನ ಭೇಟಿಗೆ ಮೀಸಲಿಟ್ಟು, ಬೀಳ್ಕೊಟ್ಟೆ. ಈ ವಾರ ಶಾಂತವಾಗಿ ಸರಿದರೆ, ಮುಂದೆಂದೂ ಅವರು ಬೇರೆಯಾಗಲಾರರು ಅನ್ನುವುದು ನನ್ನ ಅನುಭವದ ನಂಬಿಕೆ. ಕೋ-ಎಕ್ಸಿಸ್ಟೆನ್ಸ್ ಮನುಷ್ಯರಿಗೆ ಸಾಧ್ಯವಿದೆ. ಸಾಧ್ಯವಾಗಿಸಿಕೊಳ್ಳುತ್ತೇವೆ.

‍ಲೇಖಕರು admin

March 6, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. ಆನಂದ್ ಋಗ್ವೇದಿ

    ನಿಜ ಸಹಬಾಳ್ವೆಯೇ ಸತ್ಯ. ಛಂದದ ನಿರೂಪಣೆ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: