ಕನ್ನಡ ಜಾಗೃತಿಗೆ ಅಲಾಸೆಯವರ ಬತ್ತದ ಆಸೆ
ಎಂ.ಡಿ.ಅಲಾಸೆ
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶೇಡಬಾಳ ಗ್ರಾಮದ ಎಂ.ಡಿ.ಅಲಾಸೆಯವರದ್ದು ಕನ್ನಡ ನಾಡು,ನುಡಿಗಳ ರಕ್ಷಣೆಗೆ, ಜಾಗೃತಿ ಮೂಡಿಸುವ ವಿಭಿನ್ನ ಅವಿರತ ಪ್ರಯತ್ಮ. ‘ಕನ್ನಡದ ಹುಚ್ಚುರಾಯ’ ಇವರ ಕಾವ್ಯನಾಮ. ‘ಸಿರಿಗನ್ನಡಂ ಗೆಲ್ಗೆ’ ಇವರ ಮನೆಯ ಹೆಸರು. ಮೂಲತಃ ಗ್ರಂಥ ಪಾಲಕರ ವೃತ್ತಿಯಿಂದ 2004ರಲ್ಲಿ ನಿವೃತ್ತಿ. ಕನ್ನಡಪರ ಇವರ ಪ್ರವೃತ್ತಿ.1993 ರಿಂದ ನಿರಂತರವಾಗಿ ರಾಜ್ಯದ ಮಂಗಳೂರು ತಳದಿಂದ ಬೀದರ್ ತುದಿವರೆಗೆ ಕನ್ನಡ ಜಾಗೃತಿ ಮೂಡಿಸುವ ಕೆಲಸದಲ್ಲಿ ಮಗ್ನರಾಗಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ‘ಗಡಿನಾಡಿನಲ್ಲಿ ಕನ್ನಡ ಜಾಗೃತಿ’ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ್ದಾರೆ. ಐನಾಪುರ, ಸೇಡಬಾಳ, ಬೆಳಗಾವಿ, ಹಡಕಲಾಟ, ಇನ್ನೂ ಹಲವೆಡೆ ಸಾರ್ವಜನಿಕ ಉಪನ್ಯಾಸ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಕೇಸ್ತಿ, ಸೌತ್ತಿ, ರಾಯಬಾಗ,ಮುಂತಾದೆಡೆ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಕನ್ನಡದ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ.ರಾಜ್ಯದ ಹಲವಾರು ಮಾದ್ಯಮಗಳು ತಮ್ಮನ್ನು ಗುರುತಿಸಿರುವುದಕ್ಕೆ ಇವರಿಗೆ ಎಲ್ಲಿಲ್ಲದ ಹಿಗ್ಗು.
ಆಕಾಶವಾಣಿ ಧಾರವಾಡ ಕೇಂದ್ರದಲ್ಲಿ ನಡೆಸಿಕೊಟ್ಟ ‘ಬಾಳಬುತ್ತಿ’ ಕಾರ್ಯಕ್ರಮದಲ್ಲಿ, ‘ಕನ್ನಡ ಕ್ರಿಯಾಶೀಲ ಚಟುವಟಿಕೆ ವೃದ್ಧಾಪ್ಯಕ್ಕೆ ಒಂದು ಮದ್ದು’ ಕಾರ್ಯಕ್ರಮ ಇವರ ನೆನಪಿನಲ್ಲಿ ಇನ್ನೂ ಹಸಿರು. 67ರ ಇಳಿ ಪ್ರಾಯದಲ್ಲೂ ‘ನಾಡಿನಾದ್ಯಂತ ಸಂಚರಿಸಿ ಕನ್ನಡದ ಜಾಗೃತಿ ಮೂಡಿಸುವ ಕೆಲಸದಲ್ಲಿ ನಂಗೆ ದಣಿವೇ ಕಾಣೊಲ್ಲ’ ಎಂದು ಹೆಮ್ಮೆಯಿಂದ ಹೇಳುವ ಇವರಿಗೆ ನಾನು, ಈ ರೀತಿ ಕನ್ನಡ ಜಾಗೃತಿ ಮೂಡಿಸುವ ಆಲೋಚನೆ ಯಾಕೆ ಬಂತು ಸಾರ್? ಎಂದು ಕೇಳಿದರೆ, ನನ್ನ ಗ್ರಾಮ ಮತ್ತು ಅದರ ಸುತ್ತ ಮುತ್ತಲಿನ, ಮಂಗನೋಳಿ, ಲೂಕೂರು, ಕಾಗವಾಡ, ನಿಪ್ಪಾಣಿ, ಹಾಡಿ, ಬೆನಾಡಿ,ಸಂಕೀಶ್ವರ, ಈ ಎಲ್ಲಾ ಗ್ರಾಮಗಳು ಗಡಿನಾಡಿನವು. ಇಲ್ಲಿ ಕನ್ನಡದ ಜಾಗೃತಿಗೆ ಕನ್ನಡಿಗನಾಗಿ ನಾವೇ ಟೊಂಕ ಕಟ್ಟಿ ನಿಲ್ಲದಿದ್ದರೆ, ನಮ್ಮ ನಾಡು, ನುಡಿ, ಕಲೆ, ಸಂಸ್ಕೃತಿ, ಬಾಷೆ, ಇವನ್ನೆಲ್ಲಾ ಮುಂದಿನ ಪೀಳಿಗೆಗೆ, ಉಳಿಸಿ ಬೆಳೆಸೋರು ಯಾರು ? ಅದಕ್ಕೇ ನಾನು ಈ ಕೆಲಸವನ್ನು ಕೈಗೆತ್ತಿಕೊಂಡೆ ಎನ್ನುತ್ತಾರವರು. ಮಿರ್ಜಾ ಅನ್ನಾರಾಯರ, ನಿಸರ್ಗ, ಚಾವುಂಡರಾಯ, ಅಶೋಕಚಕ್ರ, ಜೈನಧರ್ಮ,ಹದಗೆಟ್ಟ ಹಳ್ಳಿ,ರಾಮಾಣ್ಣ ಮಾಸ್ತಾರ,ಮಾಸ್ತಿಯವರ,ಚಿಕ್ಕವೀರ ರಾಜೇಂದ್ರ,ಕಾರಂತರ-ಹಡೆದಮೇಲೆ, ಕುವೆಂಪುರವರ ಬೆರಳಿಗೆ ಕೊರಳು, ಇವರ ಇಷ್ಟದ ಕೃತಿಗಳು.
ಈ ವಿಜಾಪುರ ಸಾಹಿತ್ಯ ಸಮ್ಮೇಳನದ ಕುರಿತು ನಿಮ್ಮ ಅನಿಸಿಕೆ ಏನು ? ಎಂದು ಕೇಳಿದಾಗ ‘ನೋಡ್ರಿ, ನಾನೂ 8 ಸಾಹಿತ್ಯ ಸಮ್ಮೇಳನಗಳಿಗ್ಯ ಹೋಗೀನಿ, ಇದನ್ನ ಬರಗಾಲದ ನಾಡು ಅನ್ನಬಾರ್ದು. 8 ಸಮ್ಮೇಳನಕ್ಕಿಂತ್ಲೂ ಇಲ್ಲ ಜೋರು ನಡೀತು. ಆದ್ರ ಊಟದ ಬಗ್ಗೆ,, ಹೇಳಬೇಕಂದ್ರ, ಪ್ರತಿನಿಧಿಗಳಿಗ್ಯ ಬ್ಯಾರ್ಯಾ ವ್ಯವಸ್ಥಿ ಮಾಡಾಕ್ಕಿತ್ತು, ದೂರದ ಮಂದಿಗ್ಯ ತ್ರಾಸು ಆಗದಂಗ ನೊಡ್ಕಣಕಂದ್ರ, ಮುಕ್ತ ಪ್ರವೇಶ ನೋಡಿ ನೀಡಬೇಕಿತ್ತು, ಸಂಸ್ಕೃತಿ ದಿಬ್ಬಣ, ಕಿತ್ತೂರು ಉತ್ಸವಕ್ಕ ಮೂರು ಬಾರಿ ಹೋಗೀನಿ ಅಲ್ಲಿ ವ್ಯವಸ್ಥಿನೂ ಸ್ವಲ್ಪ ನೆಪ್ಪಾತು ಇಲ್ಲಿ. ಎಂದು ಹಲವು ಉತ್ಸವಗಳನ್ನು ನೆನಪಿಗೆ ತಂದುಕೊಂಡು ಕಾರ್ಯಕ್ರಮ ನಡೆಯುವ ಮುಖ್ಯ ವೇದಿಕೆಯತ್ತ ಹೆಜ್ಜೆ ಹಾಕಿದರು…….







0 Comments