ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಧ್ಯಾನಿಸಿ ನೋಡಬೇಕು ‘ರಕ್ಕಸ’

ರಿಷಭ್‌ ಶೆಟ್ಟಿಯವರ ಮೊದಲನೇ ಕಾಂತಾರದಲ್ಲಿ ತುಳುನಾಡಿನ ವರ್ಣರಂಜಿತ ಮುಖವೊಂದರ ಅನಾವರಣ ನಡೆದಿತ್ತು. ಅಲ್ಲಿಯ ಭಾಷೆ, ಬೈಗುಳುಗಳು, ಭೂ ಸಂಬಂಧಗಳ ಸಂಕೀರ್ಣತೆ, ಭೂತಾರಾಧನೆ ಮತ್ತಿತರ ಅಂಶಗಳನ್ನು ಶೆಟ್ಟಿಯವರು ತೆರೆಯ ಮೇಲೆ ತಂದಾಗ, ಅದು ಎಲ್ಲರಿಗೂ ಇಷ್ಟವಾಯಿತು. ಅವರ ಎರಡನೇ ಕಾಂತಾರದಲ್ಲಿ ತುಳುನಾಡಿನ ಕತೆಯನ್ನು ಇನ್ನಷ್ಟು ಉಜ್ವಲೀಕರಿಸಿದಂತೆ ಮೇಲ್ನೋಟಕ್ಕೆ ತೋರುತ್ತದೆ, KGF ಥರ! ಸಂಸ್ಕೃತಿಯ ಬಗೆಗಣ ಉದಾರವಾದೀ ಧೋರಣೆಗೆ ಪ್ರೇಕ್ಷಕರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂದು ಕಾದು ನೋಡೋಣ. ಶೆಟ್ಟರಿಗೆ ಶುಭಕೋರುವೆ.

ತುಳುನಾಡನ್ನು ಉದಾರವಾದೀ ನೆಲೆಯಿಂದ ಗ್ರಹಿಸುವುದನ್ನು ಬದಿಗೆ ಸರಿಸಿ, ಅಲ್ಲಿನ ವಾಸ್ತವಗಳನ್ನು ರೂಪಕಗಳ ಮೂಲಕ ಹಿಡಿದಿಟ್ಟಾಗ ಚಿತ್ರ ಹೇಗೆ ಕಾಣುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ನಾವು ರಕ್ಕಸ ಕಿರು ಸಿನೇಮಾ ನೋಡಬೇಕು. ಕೋಮುವಾದದ ಪ್ರಯೋಗ ಶಾಲೆಯಾದ ತುಳುನಾಡಲ್ಲಿ ಮಾನವ ಸಂಬಂಧಗಳು ಹೇಗಿವೆ? ಯಕ್ಷಗಾನದ ರಕ್ಕಸ ವೇಷಗಳ ಆಳದಲ್ಲಿ ಮೋಸದ ಜಾಹೀರಾತುಗಳಿವೆಯೇ? ಹಿಂದಿನಂತೆ ಈಗಲೂ ಕರಾವಳಿಯ ಜನರು ದುಬಾಯಿಗೆ ಹೋಗಬಹುದೇ? ಜನರು ಒಟ್ಟಾದರೆ ಕೋಮು ವಿಷವನ್ನು ಶಮನ ಮಾಡಿ, ಊರನ್ನು ಮತ್ತೆ ಸೃಜನಶೀಲವಾಗಿ ಕಟ್ಟಬಹುದೇ? ಎಂಬಿತ್ಯಾದಿ ವಿಷಯಗಳನ್ನು ಅವಿನಾಶ್‌ ರೈ, ರೋಹಿತ್‌ ಬೈಕಾಡಿ, ಭುವನ್‌ ಮಣಿಪಾಲ್‌ ಮೊದಲಾದವರು ತಣ್ಣಗಿನ ಶೈಲಿಯಲ್ಲಿ ನಮ್ಮ ಮುಂದಿಡುತ್ತಾರೆ. ಈ ಕಿರು ಚಿತ್ರವನ್ನು ಜಿ ರಾಜಶೇಖರ್‌ ಅವರಿಗೆ ಅರ್ಪಿಸಲಾಗಿದೆ. ರಾಜಶೇಖರ್‌ ಮಕ್ಕಳು ಚಿತ್ರ ಕತೆ ಬರೆದು, ಚಿತ್ರ ನಿರ್ದೇಶನ ಮಾಡಿದ್ದಾರೆ. ಮನರಂಜನೆಗಿಂತ ಹೆಚ್ಚಾಗಿ ನಮ್ಮ ಬೌದ್ದಿಕತೆಯನ್ನು ಬೆಳೆಸುವ ೩೮ ನಿಮಿಷಗಳ ಈ ಕಿರು ಚಿತ್ರವನ್ನು ಧ್ಯಾನಿಸಿ ನೋಡಬೇಕು.

ಮಹಿಷಾಸುರ ವೇಷ ಹಾಕಿದವನು ರಿಕ್ಷಾ ಓಡಿಸಬೇಕು. ಆದರೆ ಮಹಿಷನ ಕೊಂಬುಗಳು ಅದಕ್ಕೆ ಅಡ್ಡಿಯಾಗಿ, ವೇಷಧಾರಿಗೆ ರಿಕ್ಷಾದ ಸೀಟಲ್ಲಿ ಕುಳಿತುಕೊಳ್ಳಲಾಗುವುದೇ ಇಲ್ಲ. ರಕ್ಕಸರ ಆಯುಧಗಳನ್ನು ಗಾಂಧೀಜಿ ಎತ್ತಿಕೊಂಡು ಓಡಿಬಿಡುತ್ತಾರೆ. ಚಂಡ ಮುಂಡರು ಟ್ಯೂಶನ್‌ ಕೊಡುತ್ತಾರೆ. ಹುಲಿವೇಷದೊಳಗೊಂದು ಸಣ್ಣ ಲವ್‌ ಕುದುರುತ್ತದೆ. ಕೊನೆಗೆ, ಬಾಡಿಗೆ ಕಟ್ಟದ ಕಾರಣಕ್ಕೆ ಮನೆ ಬಿಡಲು ಧನಿಗಳು ಹೇಳುತ್ತಾರೆ! ಆತ್ಮಾವಲೋಕನ ಎಂದರೇನು? ಎಂಬ ಪ್ರಶ್ನೆಯೂ ನಮ್ಮ ಮುಂದೆ ಬರುತ್ತದೆ.

ಒಂದು ಭ್ರಾಮಕವಾದರೆ, ಇನ್ನೊಂದು ವಾಸ್ತವ. ಪುರುಸೊತ್ತು ಮಾಡಿಕೊಂಡು ಒಮ್ಮೆ ನೋಡಬಹುದಾದ ಕಿರುಚಿತ್ರ ರಕ್ಕಸ.

‍ಲೇಖಕರು Admin

4 October, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading