ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನೈಲ್ ನದಿಯ ಮಡಿಲಲ್ಲಿ : ಹಾಸಿಗೆ ಮೇಲೆರಡು ಬಾತುಕೋಳಿಗಳು!

(ಇಲ್ಲಿಯವರೆಗೆ…)

ಬೆಳಗಾದೊಡನೆ ದೋಣಿ ಚಲಿಸತೊಡಗಿತು. ಬೆಳ್ಳಿಗೆ 5.30ಕ್ಕೆ ವೇಕ್ ಆಪ್ ಕಾಲ್. 6.30ಕ್ಕೆ ಟಿಫಿನ್. ಸಾಮಾನ್ಯವಾಗಿ, ಮಾಡುವ ಊಟ ಟಿಫಿನ್ ಗಳೆಲ್ಲ ಅದೇ ಡೈನಿಂಗ್ ಹಾಲ್ಲ್ಲೇ ನಡೆಯುತ್ತಿದ್ದವು. ಅಲ್ಲಿ ಬಳಸುವ ಚಮಚ, ಪೋರ್ಕ್ಗಳೆಲ್ಲ ಭಾರಿ ಭಾರ. ಎರಡು ಮೂರು ಸೇರಿಸಿ ಹಿಡಿದರೆ ಕಾಲು ಕೆಜಿಯಷ್ಟು ಭಾರ ಇರಬಹುದೇನೋ? ಅಲ್ಲಿನ ಊಟ, ಹಣ್ಣು ಹಂಪಲು ತುಂಬಾ ತಾಜಾ ಇದ್ದವು. ಎಲ್ಲೆಲ್ಲಿ ಅವರ ನಿಲ್ಲುವ ಹಂತಗಳಿವೆಯೋ ಅಲ್ಲಲ್ಲಿ ಆಹಾರ, ಹಣ್ಣುಗಳ ಸರಬರಾಜು ನಡೆಯುತ್ತದಂತೆ. ಹಾಗಾಗಿ ನಮಗೆ ತಾಜಾ ಆಹಾರ ಲಭಿಸಿತು.
ಸರೋಜಾ ಬಂದು `ನಿಂಗೇನೊ ತೋರಿಸ್ತಿನಿ ಬಾ ಇಲ್ಲಿ’ ಎಂದು ಪರದೆ ಮುಚ್ಚಿದ ಪಾರದರ್ಶಕ ಕಿಟಕಿ ಹತ್ತಿರ ಕರೆದೊಯ್ದು, ನಿಲ್ಲಿಸಿ, ಪರದೆ ಸರಿಸಿದಳು. ಪಕ್ಕನೆ ಹಿಂಜರಿದೆ. ಕತ್ತು ಕೊರೆದುಕೊಂಡು ಹೋಗಿ ಬಿಡುತ್ತದೇನೋ ಅನ್ನುವಷ್ಟು ಹರಿತವಾದ ಖಡ್ಗ ಧಾರೆಯಂತಿತ್ತು, ಜಲಧಾರೆ. ಡೈನಿಂಗ್ ಹಾಲ್ ಇದ್ದದ್ದು ನೆಲಮಹಡಿಯಲ್ಲಿ. ಅದೇ ಕೊನೆಯದಾದ್ದರಿಂದ ಹಡಗಿನ ಸ್ವಲ್ಪ ಕೆಳಭಾಗ ನೀರಲ್ಲಿ ಮುಳುಗಿರುತ್ತದೆ. ನಾವೀಗ ನಿಂತಿರುವುದು ಅದೇ ಹಂತದಲ್ಲಿಯಾಗಿತ್ತು. ದೋಣಿ ಒಳಗಿದ್ದಾಗ ಕತ್ತಿನವರೆಗೂ ನೀರಲ್ಲಿದ್ದುದು ಅನುಭವಕ್ಕೆ ಬರುವುದಿಲ್ಲ. ಹಡಗು ಮುಂದೆ ಚಲಿಸುವಾಗ ಕಿಟಕಿಯ ಹತ್ತಿರ ಹೋಗಿ ನೋಡಿದರೆ, ವೇಗವಾಗಿ ಹಿಂದೆ ಸರಿಯುವ ನೀರು, ಕತ್ತನ್ನು ಕೊಯ್ದು ಹೋಗುವಂತೆ ಭಾಸವಾಗುತ್ತದೆ. ನಾನೀಗ ಇಷ್ಟುದ್ದ ಆಳ ನೀರಿನಲ್ಲಿದ್ದೆನೆಂಬುದ ನೆನೆದು ಮೈ ಜುಂ ಎಂದಿತು. ಅಲ್ಲಿಯ ಪರಿಚಾರಕ ಓಡಿ ಬಂದು `ಹಾಗೆ ತೆಗೆಯ ಬೇಡಿ’ ಎಂದು ಕೈ ಮಾಡುತ್ತಾ ತನ್ನದೆ ಭಾಷೆಯಲ್ಲಿ ಹೇಳಿದ. ಅದು ಗೊತ್ತಾಗಿ ಎಲ್ಲರೂ ಹಿಂಜರಿದು ಈಚೆ ಬಂದೆವು.
ಸ್ವಲ್ಪ ಹೊತ್ತು ಚಲಿಸಿ ಹಡಗು ನಿಂತಿತ್ತು. ಎಲ್ಲರೂ ಬಲದಂಡೆಯ ಮೇಲೆ ಇಳಿದೆವು. ನಾನು ಸರೋಜ, ಸರಸ್ವತಿ ಚಿಮ್ಮಲಗಿ 7.10ಕ್ಕೆ `ಮರಡೋನಾ’ ಟಾಂಗಾ ಸವಾರಿಯಲ್ಲಿ ಕುಳಿತೆವು. ಒಟ್ಟು 8 ಟಾಂಗಾಗಳು ಟಕ್ ಟಕ್ ಟಕ್ ಕುದುರೆ ಲಾಳದ ಸದ್ದಿನೊಂದಿಗೆ ಎಡುಫು ದೇವಾಲಯದತ್ತ ಹೊರಟೆವು. ನಾನೊಮ್ಮೆ, ಸರೋಜಾ ಒಮ್ಮೆ ಸವಾರಿ ಮಾಡಿ ಫೋಸುಕೊಟ್ಟೆವು. ಅಲ್ಲಿ ಭೇಟಿಯಾದ ಹುಸೇನ್ ಮಾರ್ಗದರ್ಶಿಗೆ `ಗುಡ್ ಮಾರ್ನಿಂಗ್, ಸುಪ್ರಭಾತ.’ ಎಂದು ಹೇಳಿದಾಗ ಆತ `ಸಭಾ ಅಲ್ ಖೈರ್’ ಎಂದು ಪ್ರತಿಯಾಗಿ `ಸುಪ್ರಭಾತ’ ಹೇಳಿದ. ಹೊಸ ಪದವೊಂದು ಖುಷಿಕೊಟ್ಟಿತ್ತು.
ಎಡ್ಫು ದೇವಾಲಯದ ಮುಂದೆ ದೊಡ್ಡ ಪ್ರಾಂಗಣ. ಅದರೊಳಗೆ ಪ್ರವೇಶಿಸಿದರೆ ಬೃಹತ್ ಪ್ರಾಂಗಣದಲ್ಲಿ ಬೆಕ್ಕುಗಳು ಓಡಾಡುತ್ತಿದ್ದವು. ಆ ಪ್ರಾಂಗಣ ಹಾಯ್ದು ಪ್ರವೇಶ ದ್ವಾರಕ್ಕೆ ಬಂದರೆ ಆಚೆ ಈಚೆ ಎರಡು ಗಿಡುಗಗಳು ದ್ವಾರಪಾಲಕರಾಗಿ ನಿಂತಿವೆ. ಉಸುಕುಗಲ್ಲಿನಲ್ಲಿ ಕಡೆದ ದೇವಾಲಯ. ಇದು ದೇವ ಹೊರೇಸ್ ನಗೆ ಸಮರ್ಪಿತವಾದ ದೇವಾಲಯ. ಗಿಡುಗನ ಮುಖವಿರುವ ಇವನ ತಲೆಯ ಮೇಲೆ ಎರಡು ಕಿರೀಟ ಧರಿಸಿರುತ್ತಾನೆ. ಓಸೆರೀಸ್ ಮತ್ತು ಈಸೀಸ್ ಳ ಮಗ ಇವನು. ಪ್ರಾಚೀನ ಕಾಲದಲ್ಲಿ ರಾಷ್ಟ್ರ ಮಾನ್ಯ ದೇವತೆ ಇವನು. ಇವನಿಗೆ ಅರ್ಪಿತ ದೇವಾಲಯವಿದು. ಹಾಗಾಗಿ ದೇವಸ್ಥಾನ ಮಹಾದ್ವಾರದ(Pylon)ದ್ವಾರ ಪಾಲಕರಾಗಿ ಗಿಡುಗಗಳಿವೆ. ಸುಮಾರು 12 ಅಡಿ ಎತ್ತರದ ಮೂರ್ತಿಗಳಿವು. ಇಲ್ಲಿನ ಪ್ರಾಂಗಣದ ಗೋಡೆಗಳು, ಬೃಹತ್ ಶಿಲಾಸ್ತಂಭಗಳು ಹಾಗೂ ಗರ್ಭ ಗುಡಿ ತುಂಬೆಲ್ಲ ಮನೋಹರವಾಗಿ, ಸೊಗಸಾಗಿ ಉಬ್ಬು ಚಿತ್ರಗಳಲ್ಲಿ ಧಾರ್ಮಿಕ ಮತ್ತು ಪೌರಾಣಿಕ (ದಂತ ಕಥೆಗಳ) ಪ್ರಸಂಗಗಳನ್ನು ಕೆತ್ತುವ ಮೂಲಕ ಬಣ್ಣಿಸಲಾಗಿದೆ. ಅಲ್ಲಿ ದಿನನಿತ್ಯದ ಬದುಕಿನ ಜೀವನಗಾಥೆ ಕೂಡ ಇದೆ. ಈಸೀಸ್ ಗರ್ಭಿಣಿಯಾಗಿದ್ದಾಗ ಪಾಲಿಸಿದ ಪರಿ, ಅವಳ ಪ್ರಸವ, ಮಗುವಿಗೆ ಹಾಲುಣಿಸುವ, ಲಾಲನೆ ಪಾಲನೆ ಮಾಡುವ ಎಲ್ಲವನ್ನೂ ಕುರಿತು ಕಲ್ಲುಗಳು ಕತೆ ಹೇಳುತ್ತವೆ. ಭಾರತೀಯ ಶಾಸನಗಳಲ್ಲೂ ಪ್ರಸವಸಮಯದ ಚಿತ್ರಗಳಿವೆ. ಇದು ಅವೆಲ್ಲಕ್ಕಿಂತಲೂ ಭಿನ್ನವಾಗಿತ್ತು. ಅದನ್ನು ಕ್ಯಾಮರಾದಲ್ಲಿ ಕ್ಲಿಕ್ಕಿಸಿದೆ. ಇಜಿಪ್ತಿನ ಪ್ರಾಚ್ಯವಸ್ತು ಇಲಾಖೆಯವರು ಚೆನ್ನಾಗಿ ಕಾಪಾಡಿಕೊಂಡು ಬಂದಿರುವ ಸುಂದರ ದೇವಾಲಯವಿದು. ಆದರೆ ಗರ್ಭಗುಡಿಯಲ್ಲಿ ದೇವರ ಮೂರ್ತಿ ಇರಲಿಲ್ಲ. ದೇವಾಲಯದ ಹೊರಾಂಗಣದಲ್ಲಿ ಚಿಕ್ಕ ಚಿಕ್ಕ ಹಾಲು ಬಣ್ಣದ ಕಲ್ಲುಗಳ ಹಾಸಿಗೆಯೇ ಇದೆ. ಅವು ದೊಡ್ಡ ಮುತ್ತುಗಳಂತೆ ಕಾಣುತ್ತಿದ್ದವು. ತೀರ ಚಿಕ್ಕವಿರುವವನ್ನಾಯ್ದು ಪೋಣಿಸಿದರೆ ಸುಂದರ ಹಾರವೇ ಆಗುತ್ತಿತ್ತು. ನಾಲ್ಕಾರು ಕಲ್ಲುಗಳನ್ನಾಯ್ದುಕೊಂಡೆ.
ಮರಳಿ ಬರುವಾಗ ಹುಸೇನ್ ಇಜಿಪ್ತಿನ ಪೌರಾಣಿಕ ಕತೆಗಳನ್ನು ಅಷ್ಟು ಇಷ್ಟು ಹೇಳುವಾಗ ತಿಳಿಯುತ್ತಿದ್ದರೂ ಗದ್ ರಾ ಎಂದು ಏನೋ ಹೇಳುತ್ತಿದ್ದ. `ಹುಸೇನ್ ಬಾಯ್ ಗದ್ ರಾ ಕ್ಯಾ ಹೈ’ ಅಂದೆ. ಅವನು ಕೈ ಮುಗಿದು ತೋರಿಸುತ್ತಾ `ರಾ’ ಎಂದ, ಆಗ ಅರ್ಥವಾಗಿತ್ತು. ಅದು `ಗಾಡ್ ರಾ’ ಎಂದು. ಅರೆಬಿಕ್ ನಲ್ಲಿ `ಡ’ ಅಕ್ಷರ ಉಚ್ಛಾರ ಇಲ್ಲವಂತೆ. ಹಾಗಾಗಿ `ಗದ್ ರಾ ‘ ಆಗಿತ್ತು. `ಆಪಕೊ ಕೂಂಪೂಜಿನ್ ಹೋಗಯಾ’ ಅಂದ. ಇಲ್ಲಿ ಕೂಂಪೂಜಿನ್ ಆಗಿತ್ತು. ಅದನ್ನು ಕೇಳಿಸಿಕೊಂಡವರೆಲ್ಲ ಹಾಗೆಯೇ ಉಚ್ಛರಿಸುತ್ತಾ ನಕ್ಕರು. ಆತನೂ ನಕ್ಕ. `ನಾವು ಮಾತನಾಡಿದ್ದು ತಿಳಿಯುತ್ತಾ?’ ಅಂದೆ. ಅದಕ್ಕೆ ಪ್ರತಿಯಾಗಿ `ಕುಂಚ ಕುಂಚ’ ಎಂದು ಪ್ರತಿಕ್ರಿಯಿಸಿದ. ನನಗಂತೂ ಘನ ಆಶ್ಚರ್ಯ. ಎತ್ತನಿಂದೆತ್ತ ಸಂಬಂಧ? `ಕೊಂಚ ಕೊಂಚ’ ಸಂಸ್ಕೃತದಲ್ಲಿ ಬಳಸುವ ಪದ. ಹಾಗಾದರೆ ಈ ಎಲ್ಲ ಭಾಷೆಗಳ ಮೂಲ ಒಂದೇನಾ? `ಕುಚ್ಛ ಕುಚ್ಛ ಹಿಂದೀಯಲ್ಲಿ ಬಳಸುವ ಪದ ನಮ್ಮೆಲ್ಲರೊಳಗೆ ಹರಿಯುವ ರಕ್ತದ ಮೂಲವೂ ಒಂದೇ. ಹಾಗಾದರೆ ಇವೆಲ್ಲ ಹೀಗೆ ಹರಿದು ಹರಡಿ ಹಂಚಿ ಹೋದದ್ದು ಹೇಗೆ, ಎಲ್ಲಿ, ಯಾವಾಗ…??? ಏನಿದು ಸೃಷ್ಟಿಯ ವೈಚಿತ್ರ್ಯ! ಒಳಗೊಳಗೆ ಪ್ರಶ್ನೆ ತರಂಗಿತವಾಗತೊಡಗಿದವು. ದೇವಸ್ಥಾನದ ಆವರಣ ಗೋಡೆಯ ಹತ್ತಿರ ನಿಂತರೆ ನೈಲ್ ನದಿಯ ಸುಂದರ ದೃಶ್ಯ ಕಣ್ತುಂಬಿಕೊಳ್ಳಬಹುದು.
ಅಲ್ಲಿಯೂ ಒಂದಿಷ್ಟು ಅಂಗಡಿಗಳಿದ್ದವು. ಚಿಲ್ಲರೆ ವ್ಯಾಪಾರಿಗಳಿದ್ದರು. ಕೆಲವು ವಸ್ತುಗಳ ಖರೀದಿಯಲ್ಲಿ ಅಲ್ಲಿಯೂ ಮೋಸವಾಯಿತು. ಅಲ್ಲಿಂದ ತಿರುಗಿ ಅದೇ ಟಾಂಗಾಗಳಲ್ಲಿ ಹಡಗಿನವರೆಗೆ ಬಂದು ಮತ್ತೆ ಹಡಗು ಏರಿದೆವು. ಅಲ್ಲಿ ಖರೀದಿಸಿದ ಚಿಕ್ಕ ಪುಟ್ಟ ವಸ್ತುಗಳನ್ನು ರೂಮಿಗೆ ಇಟ್ಟು ಹೋಗೋಣವೆಂದು ಬಾಗಿಲು ತೆರೆದರೆ, ಹಾಸಿಗೆ ಮೇಲೆರಡು ಬಾತುಕೋಳಿಗಳು ಕೊಕ್ಕಿಗೆ ಕೊಕ್ಕು ಜೋಡಿಸಿ ಕುಳಿತಿದ್ದವು. ಎಂಥ ಖುಷಿ, ಆಶ್ಚರ್ಯ! ಅವು ದೊಡ್ಡ ಬಿಳಿಯ ಟರ್ಕಿ ಟವೆಲ್ ನಿಂದ ಮಾಡಿದವುಗಳು. ನನಗೆ ಪಕ್ಕನೆ ನೆನಪಾದದ್ದು ನಮ್ಮ ಇಲಾಖೆಯ ಚೈತನ್ಯ ತರಬೇತಿಯ ಅಲ್ಪ ವೆಚ್ಚ, ವೆಚ್ಚ ರಹಿತ ಬೋಧನೋಪಕರಣಗಳು. ಎಂಥಾ ಸುಂದರ ಸರಳ ಕಲಾಕೃತಿ ಎಂದರೆ ನಂಬಲಸಾಧ್ಯ. ರೂಂ ಶುಚಿಗೊಳಿಸಿ ಹೋಗುವಾಗ ಪರಿಚಾರಕರು ಮಾಡಿಟ್ಟು ಹೋಗಿರಬಹುದು ಎನಿಸಿತು. ಪಕ್ಕದ ರೂಮಿಗೆ ಹೋದರೆ ಮತ್ತೊಂದು ಟವೆಲ್ ಮಗುವಾಗಿ ಮಲಗಿತ್ತು. ಅದ್ಭುತ!
ಪರಿಚಾರಕರನ್ನು ಕರೆಯಿಸಿ ಎರಡು ಮೂರು ಬಾರಿ ಮಾಡಿಸಿ ನೋಡಿದೆವು. ಅತ್ಯಂತ ಸರಳವಾಗಿತ್ತು. ಪರಿಚಾರಕರನ್ನು ಪ್ರಶಂಶಿಸಿದಾಗ ಆತ ಬಹಳೇ ಖುಷಿ ಪಟ್ಟ. ಇಷ್ಟೆಲ್ಲಾ ಆದರೂ ಇಲ್ಲಿ ಆತನಿಗೆ ನಮ್ಮ ಭಾಷೆ, ನಮಗೆ ಅವನ ಭಾಷೆಗಳು ಅರ್ಥವಾಗುತ್ತಿರಲಿಲ್ಲ. ಭಾವನೆಗಳನ್ನು ಅರ್ಥೈಸಿಕೊಳ್ಳಲಿಕ್ಕೆ ಭಾಷೆ ಏಕೆ ಬೇಕು? ಅದಿಲ್ಲದಿದ್ದರೂ ನಾವು, ನಮ್ಮ ಸಂದೇಶಗಳು ಮುಟ್ಟೆ ಮುಟ್ಟುತ್ತವೆ. ಹೃದಯ ತಟ್ಟಿಯೇ ತಟ್ಟುತ್ತವೆ. ನಿನ್ನೆಯಿಂದ ಹಡಗಿನಲ್ಲಿದ್ದ ಅಂಗಡಿಗಳನ್ನು ಸುಮ್ಮನೆ ನೋಡಿ ನೋಡಿ ಹೋಗುವುದಾಗಿತ್ತು. ಈಗ ಎಲ್ಲವನ್ನೂ ನಿಖರವಾಗಿ ನೋಡುತ್ತಾ ಹೋದೆವು. ಬಣ್ಣ-ಬಣ್ಣದ, ಕಸೂತಿಯಿರುವ ನಿಲುವಂಗಿಗಳು, ಅಲ್ಲಿಯ ಕಸೂತಿ ಮಾತ್ರ ಕೇಳುವ ಹಾಗೆ ಇಲ್ಲ. ಅಷ್ಟು ಚೆನ್ನಾಗಿ ಮಾಡಿರುವ ಕರಕುಶಲತೆ, ಎಲ್ಲ ಸ್ಥಳೀಯ ದೇವ-ದೇವತೆಗಳ ಮೂರ್ತಿಗಳು. ಒಂದು ಬಂಗಾರದ ಅಂಗಡಿ ಕೂಡ ಅಲ್ಲಿತ್ತು. ಅಂಥ-ಇಂಥದನ್ನು ಖರೀದಿಸುವುದಕ್ಕಿಂತಲೂ ಒಂದು ಶಾಶ್ವತ ನೆನಪಿರುವಂಥದ್ದೆನಾದರೊಂದು ಖರೀದಿಸೋಣ ಎನಿಸಿತು. ಇಂದುಮತಿ ಅಂಗಡಿ ಹೊಕ್ಕವರು ಒಂದೆರಡು ಲಾಕೆಟ್ ಆರಿಸಿಟ್ಟರು. ರೇಟ್ ಹೊಂದಿಸಲು ನನ್ನನ್ನು ಕರೆದೊಯ್ದರು.
ಸರೋಜಾ ನಾನು ಸೇರಿ ಬೆಲೆ ನಿಗದಿ ಮಾಡಿದೆವು. ಅದಕ್ಕೂ ಒಪ್ಪದ ಇಂದುಮತಿ ಮತ್ತೂ ಕಡಿಮೆ ಕೇಳತೊಡಗಿದರು. ಹುಸೇನ್ ಬಾಯ್ ಕರ್ತುಶ್ ಮಾಡಿಸುವಂತೆ ಹೇಳುತ್ತಿದ್ದ. ಕರ್ತುಶ್ ಎಂದರೆ ಗ್ರೀಕ್ ಭಾಷೆಯಲ್ಲಿ `ಪವಿತ್ರ ಕಲ್ಲ ಕೆತ್ತನೆ’ ಎಂದರ್ಥ. ಈ ಕರ್ತುಷನಲ್ಲಿ ಪ್ರಿಯರ ಹೆಸರು ಕೆತ್ತಿಸಿ ಆಭರಣಗಳಲ್ಲಿ ಧರಿಸುತ್ತಾರೆ. ಊಟಕ್ಕೆ ಕರೆಯತೊಡಗಿದ್ದರಿಂದ ಊಟ ಮುಗಿಸಿ ಬಂದು ಮತ್ತೊಮ್ಮೆ ಬಂಗಾರದ ಅಂಗಡಿ ಹೊಕ್ಕೆವು. ಮೂರು ಗುಲಾಬಿ ಷೇಡ್, ಮೂರು ಪ್ಲಾಟಿನಂ ಷೇಡ್, ಮೂರು ಬಂಗಾರದ ಮ್ಯಾಟ್ ಪಿನಿಷಿಂಗ್ ಇರುವ, ಮತ್ತಾರು ಬಂಗಾರದವು ಹೀಗೆ ಒಟ್ಟು 15 ಪಕಳೆಗಳಿರುವ ಒಂದು ಬಂಗಾರದ ಉಂಗುರ, ಬಂದಾಗಿನಿಂದ ನನ್ನ ಗಮನ ಸೆಳೆದಿತ್ತು. ಅದರೊಂದಿಗೆ ಒಂದು ಕಮಲದ ಹೂವಿನ ಲಾಕೆಟ್ ಸೇರಿ 500 ಡಾಲರ್ ಗಳಿಗೆ ಹೊಂದಿಸಿ ಖರೀದಿ ಮಾಡಿದೆ. 425 ಡಾಲರ್ ಹಾಗೂ 50 ಯುರೋ ಕೊಟ್ಟು ಕೊಂಡು ಕೊಂಡೆ, ಅದನ್ನು ಇಟ್ಟುಕೊಳ್ಳುವುದೇ ಒಂದು ಸಮಸ್ಯೆ. ಹೆಣ್ಣು ಮಕ್ಕಳ ಆಯ್ಕೆ ವಿಚಾರಣೆಯ ಗದ್ದಲಕ್ಕೆ ಸಾಕಾಗಿ, ಹುಸೇನ್ ಅವರೇನು ಕೇಳ್ತಾರೆ, ಹೇಳಿ ಬಿಡು ಒಂದು ರೇಟು’ ಎಂದು ವ್ಯಂಗ್ಯ ಉಡಾಯಿಸಿದ್ದ ಅಂಗಡಿ ಕೆಲಸಗಾರನ ಜೊತೆಗೂಡಿ, ಖರೀದಿ ಆದ ಮೇಲೆ ಅವನನ್ನು ಕರೆದು ತೋರಿಸಿ `ನಾವು ಭಾರತೀಯ ಮಹಿಳೆಯರು ಮಾತನಾಡೋದಷ್ಟೆ ಮಾಡಲ್ಲ, ಮಾಡಿಯೂ ತೋರಿಸುತ್ತೇವೆ. ಇದೇ ನಮ್ಮ ಗುರುತು’ ಎಂದು ಹೇಳಿದೆ. ಹುಬ್ಬೇರಿಸಿ ಆತ ಸುಮ್ಮನೆ ಹೊರಟು ಹೋದ.
ಅಂಗಡಿಯ ಮಾಲಿಕ `ದೇಶದ ಬಗ್ಗೆ ತುಂಬಾ ಅಭಿಮಾನವಿದೆ. ನಾನು ನಿಮ್ಮನ್ನು ನೆನಪಿಟ್ಟುಕೊಳ್ಳುತ್ತೇನೆ. ನಿಮ್ಮ ಹೆಸರೇನು?’ ಎಂದ. `ವಿದ್ಯಾ’ ಎಂದೆ. `ಹಾಗೆಂದರೇನು?’ ಎಂದ. `ಜ್ಞಾನ ದೇವತೆ’ ಎಂದಳು ಸರೋಜ. ಆತನಿಗೆ ತುಂಬಾ ಖುಷಿಯಾಯಿತು. ತಾನು ಪಿ.ಜಿ. ಮುಗಿಸಿರುವುದನ್ನು ತನಗೆರಡು ಮಕ್ಕಳಿರೋದನ್ನು ನಮ್ಮೊಂದಿಗೆ ಹಂಚಿಕೊಂಡ. ಆತ ಪಿ.ಜಿ ಆಗಿದ್ದನ್ನು ಕೇಳಿ `ನನ್ನ ಹೆಸರನ್ನು ಬರೆದು ತೋರಿಸಿ,’ ಎಂದೆ. ತನ್ನ ಭಾಷಾ ಲಿಪಿಯಲ್ಲಿ ಬರೆಯುವಂತೆ ಕೇಳಿದೆ. FADIA ಎಂದು ಬರೆದುಕೊಟ್ಟ. ಮಾನವ ನಿರ್ಮಿತಗಳು ಎಷ್ಟು ವೈವಿಧ್ಯಮಯ, ಅಷ್ಟೆ ವೈಚಿತ್ರ್ಯಮಯವೂ ಹೌದು! ನಾನು ತಿಳಿನೀಲಿ ಬಣ್ಣದ ಕಾರ್ತೂಷ ನ್ನು (ಕೊರಳ ಚೈನಿಗೆ ಹಾಕುವ ಪದಕ) ಖರೀದಿ ಮಾಡಿದೆ ಆದರೆ ಅದರ ಮೇಲೆ ಹೆಸರು ಕೆತ್ತಿಸಲಾಗಲಿಲ್ಲ. ಎಲ್ಲರೂ ಬೇರೆ ಬೇರೆ ವಸ್ತುಗಳನ್ನು ಖರೀದಿಸಿದರು. ಆ ದೋಣಿಯಲ್ಲಿದ್ದಾಗಲೇ ಸಂಗಾತಿಗೆ ಮೂರನೆಯ ಬಾರಿ ಕರೆ ಮಾಡಿದೆ. ಸಂಜೆ ಸಮಯವಿದ್ದುದರಿಂದ ತಾರಸಿಗೆ ಹೋಗಿ ನಾನು, ಸರೋಜ ಮತ್ತು ರಾಜನಂದಾ ಈಜುಕೊಳದ ದಡದಲ್ಲಿ ನೀರಾಟ ಆಡಿದೆವು.
ಅಲ್ಲಿ ಕೆನಡಾದ ಒಂದು ಕುಟುಂಬ ಬಂದಿತ್ತು. ಗಂಡಹೆಂಡತಿ, 20 ವರ್ಷದ ಮಗಳು, ಎಲ್ಲರೂ ಈಜುಡುಗೆಯಲ್ಲಿಯೇ ಈಜುತ್ತಾ ಆನಂದಿಸುತ್ತಿದ್ದರು. ನಮಗೆ ನೀರಿಗಿಳಿಯಲು ಈಜು ಬರಬೇಕಲ್ಲ? ಹಾಗಾಗಿ ನೀರಾಟ ಆಡಿ ಶಾಲ್ ನಷ್ಟು ದೊಡ್ಡ ಟವೆಲ್ ಮೈಗೆ ಒತ್ತಿ ತೆಗೆದು ನೀಳ ಕುರ್ಚಿಯಲ್ಲಿ ಒರಗಿದರೆ ಒಂದೆರಡು ನಿಮಿಷದಲ್ಲಿ ಬಟ್ಟೆಗಳು ಹಪ್ಪಳದಂತೆ ಕುರು ಕುರು ಒಣಗಿಬಿಟ್ಟವು. ಹಡಗಿನ ಮುಂತುದಿಗೆ ಹೋಗಿ ಸುತ್ತಲೂ ಕಣ್ಣಾಡಿಸಿದರೆ ಹಸಿರೇ ಹಸಿರು. ಖರ್ಜೂರ ಗೊಂಚಲುಗಳು ಇಳಿ ಬಿದ್ದ ಮರಗಳು. ಕೆಳಗೆ ಬಗ್ಗಿ ನೋಡಿದರೆ ತಬ್ಬಿಕೊಳ್ಳಲು ಓಡೋಡಿ ಬರುವ ನೀರು, ತಳ್ಳಿ ಮುಂದೆ ಸಾಗುವ ದೋಣಿ; ಇವುಗಳ ತಳ್ಳಾಟದಲ್ಲಿ ಉಂಟಾಗುವ ಬಿಳಿ ನೊರೆ, ನೀರಿನ ಮೇಲೆ ನಿಲ್ಲದ ಚಿತ್ತಾರ ರಚಿಸಿತ್ತು. ಬಹಳ ಹೊತ್ತು ನೀರ ಮೇಲಿನ ತಂಗಾಳಿಗೆ ಮುಖ ಒಡ್ಡಿ ಅಲ್ಲೆ ನಿಂತಿದ್ದೆ. ಟೈಟಾನಿಕ್ ನ ನಾಯಕಿ ನೆನಪಾಗುತ್ತಿದ್ದಳು. ಸಂಜೆ ನಮ್ಮ ಗುಂಪಿನವರಿಂದ ಮನರಂಜನೆ; ರಾಧಾ-ಕೃಷ್ಣರ ರಾಸಲೀಲೆ, ಇಬ್ಬರ ನಡುವಿನ ವಿರಸದಿಂದಾಗಿ ರಾಧೆಯೊಂದಿಗೆ ಗೋಪಿಕೆಯರೂ ಸೇರಿಕೊಂಡರು. ನೆರಳು ಬೆಳಕಿನ ವೇದಿಕೆಯ ಮೇಲೆ ಬರ್ಝರಿ ನೃತ್ಯ ನಡೆಯಿತು. ವಿದೇಶಿರೆಲ್ಲ ನೋಡಿ ಆನಂದಿಸಿದರು. ನಂತರ ಊಟ ಮಾಡಿ ಎಲ್ಲರೂ ತಾರಸಿಗೆ ಹೋದೆವು. ಇಂದು ಇಲ್ಲಿರುವುದು ಕಡೆಯದಿನ. ಈ ತೇಲುವ ಸ್ವರ್ಗ ಎಲ್ಲಿ ಸಿಗುತ್ತೆ. ಎಂಜಾಯ್ ಮಾಡಿ ಎಂದರು ಭಗವಾನ್ ಸಿಂಗ್, ಜೊತೆಗೆ ತಮ್ಮದೇ ರಚನೆಯ ಬೋಜಪುರಿ ಜನಪದ ಗೀತೆಯನ್ನು ಹಾಡುತ್ತಾ ಹೆಜ್ಜೆ ಹಾಕಿದರು. ಇಷ್ಟ ಇದ್ದವರೆಲ್ಲ ಅನುಕರಣೆ, ಏಕ ಪಾತ್ರಾಭಿನಯ ಮಾಡಿದರು. ಹಾಡಿನ ಬಂಡಿಯಾಯಿತು.
ಇಂದು 23 ಜುಲೈ, ಇಜಿಪ್ತ ಗಣತಂತ್ರವಾದ ದಿನ. ಇದೇ ದಿನ 1952 ರಂದು ಇಜಿಪ್ತ ಗಣತಂತ್ರವಾಯಿತು. ಇಜಿಪ್ತಿನ ರಾಷ್ಟ್ರಪಿತ `ಜಮಾಲ್ ಅಬ್ದುಲ್ ಸಮೀರ್’. ಈ ದಿನ ನಾವಿಲ್ಲಿರುವುದು ಕಾಕತಾಳಿಯವಾದರೂ ಖುಷಿಕೊಟ್ಟಿತು. ಆದರೆ ಎಲ್ಲಿಯೂ ಗಣ ತಂತ್ರದ ಆಚರಣೆ ಹೇಗೆ ಮಾಡುವರೆಂಬುದನ್ನು ನೋಡಲು ಅವಕಾಶಗಳೇ ಸಿಗಲಿಲ್ಲ.
ಚಂದ್ರ ಹೆಚ್ಚು ಕಡಿಮೆ ದುಂಡಗಾಗಿದ್ದು ನಮ್ಮ ಪ್ರಯಾಣ ಮುಗಿಯುತ್ತಾ, ಯಶಸ್ವಿಯಾಗುತ್ತಾ ಬಂದಂತೆ ಆತ ಬೆಳೆಯುತ್ತಾ ಸಾಗಿದ್ದ. 23ರ ರಾತ್ರಿ ನೈಲ್ ನ ಅಲೆಯಲ್ಲಿ ಕಳೆದು ಹೋಯಿತು. ಹಡಗು ಎಸ್ ನ (ಊರು) ದಲ್ಲಿ ನಿಂತಿತ್ತು.
ಬಂಗಾರದ ಬೆಟ್ಟ ಕಣಿವೆ ಪರ್ವತಗಳಲ್ಲಿ
ಜುಲೈ 24ರ ಬೆಳಿಗ್ಗೆ ಎಂದಿನಂತೆ ದೈನಂದಿನ ಬೆಳಗಿನ ಕಾರ್ಯಕ್ರಮಗಳು ಮುಗಿದವು. ಹಡಗು ಸಾಗ ತೊಡಗಿತು. ಹಡಗಿನಲ್ಲಿದ್ದ ಎಲ್ಲ ಸಿಬ್ಬಂದಿ ಮೂರು ದಿನದಲ್ಲಿ ಆತ್ಮೀಯರಾಗಿದ್ದರು. ಭಾರತೀಯರು ಯಾರಿಗೆ ತಾನೆ ಆತ್ಮಿಯರಾಗುವುದಿಲ್ಲ? ಮೂರು ದಿನ ಬೇಕಾದಷ್ಟಾಯಿತು. ಈಗ ನಾವು ಹಡಗು ವಿಹಾರಕ್ಕೆ ಮುಕ್ತಾಯ ಹೇಳಬೇಕಿತ್ತು. ಡೈನಿಂಗ್ ಹಾಲ್ ನ ಎಲ್ಲ ಸಿಬ್ಬಂದಿಗೂ, ಅಂಗಡಿಗಳ ಮಾಲಿಕರೂ ಹಾಗೂ ಸಿಬ್ಬಂದಿಗಳಿಗೂ ಉಳಿದೆಲ್ಲ ಪರಿಚಾರಕರಿಗೂ ಧನ್ಯವಾದ ಹೇಳಿ ರೂಬಿನೈಲ್ ನಿಂದ ಹೊರಡಲು ಸಿದ್ಧರಾದೆವು. ಹಡಗು ಲಕ್ಸರ್ (Luxore) ನಗರ ತಲುಪಿತ್ತು. ಅಲ್ಲಿ Luxore Governorate (Government) ನ ಟ್ರೇವೆಲ್ಸ್ ಸಿದ್ಧವಾಗಿತ್ತು. ಇದುವರೆಗೂ ಹೊಲ, ಗದ್ದೆ, ತೋಟ, ನದಿ ತೀರದಲ್ಲಿ ಖರ್ಜೂರ ಹತ್ತು ಹಲವು ಬಣ್ಣಗಳಲ್ಲಿ, ಕಡು ಹಸಿರಿನಿಂದ ಹಿಡಿದು ಕಡುಗೆಂಪಿನವರೆಗೆ ಎಲ್ಲ ಬಣ್ಣಗಳಲ್ಲೂ ಕಂಡಿದ್ದವು. ಆದರೆ ಒಂದೂ ಮರವೂ ಸಮೀಪದ ನೋಟಕ್ಕೆ, ಕ್ಯಾಮರಾಕ್ಕೆ ಸಿಕ್ಕಿರಲಿಲ್ಲ. ಇಲ್ಲಿ ಅಂಥ ಒಂದು ಮರ ಬೃಹತ್ ಗೊಂಚಲುಗಳೊಂದಿಗೆ ಕೋಚ್ ಕಿಟಕಿಯ ಪಕ್ಕದಲ್ಲೇ ಇತ್ತು. ಕೇಳಬೇಕೆ? ಎಲ್ಲರ ಕ್ಯಾಮರಾಗಳಾ ಸೆರೆಹಿಡಿದವು. ಈಗ ನಾವು ಆಸ್ವಾನದಿಂದ ಎಡ್ಫು, ಎಸ್ನಾ ಮೂಲಕ ಲಕ್ಸರ್ ತಲುಪಿದ್ದೆವು. ಸುಮಾರು ಎರಡು ನೂರಾ ಇಪ್ಪತ್ತು ಕಿ.ಮೀ. ದೂರವನ್ನು ಎರಡುವರೆ ದಿನಗಳ ಪರ್ಯಂತ ನೈಲ್ ನದಿಯ ಅಲೆಗಳ ಮೇಲೆ ತೇಲುತ್ತಾ ಕಳೆದ ಆ ನೆನಪು… ಸುಂದರ ಕನಸಿನಂತಾಗಿತ್ತು. ತಿರುಗಿ ನೋಡಿದರೆ ರುಬಿನೈಲ್ ಬೀಳ್ಕೊಡುತ್ತಿತ್ತು.

ನಾವೀಗ ಬಂದಿದ್ದು ಲಕ್ಸರ್ ನಗರಕ್ಕೆ. ಇದರ ಮೂಲ ಹೆಸರು ಅಕ್ಸರ್. ಅಂದರೆ ಅರೆಬಿಕ್ ನಲ್ಲಿ `ಅರಮನೆಗಳು’ ಎಂದರ್ಥ. ಅರೆಬಿಯನ್ ರು ದೇವಸ್ಥಾನಗಳನ್ನು ದೇವರ ಅರಮನೆ ಎಂದು ನಂಬಿದ್ದರು. ಗೌರವ ಸಂಬೋಧನೆಗೆ ಅಲ್ ಬಳಸುವ ವಾಡಿಕೆಯಂತೆ `ಅಲ್ ಅಕ್ಸರ್’ ಎಂದು ಕರೆಯುತ್ತ ಕರೆಯುತ್ತ ಅದು ಲಕ್ಸರ್ ಎಂದಾಗಿದೆಯಂತೆ. ಕೋಚ್ ಹೊರಟ ಮಾರ್ಗದ ಆಚೆ ಈಚೆ ಬರೀ ಹೊನ್ನಿನ ಬಣ್ಣದ ಮಣ್ಣು, ಉಸುಕಿನ ಪರ್ವತಗಳು, ಅಜಂತಾ, ಎಲ್ಲೋರಾ ಗುಹಾ ದೇವಾಲಯಗಳಿರುವ ಮಹಾ ಬೆಟ್ಟಗಳಿಗಿಂತ ಎತ್ತರವಾದ ಬೆಟ್ಟಗಳು ಮತ್ತು ಕಡಿದಾದ ಕಣಿವೆಗಳು. ಎಲ್ಲಿ ಹುಡುಕಿದರೂ ಹಸಿರಿನ ಹೆಸರೇ ಇಲ್ಲ. ಉರಿ ಉರಿಯುವ ಬಿಸಿಲಿನ ಬೆಳಕಿನಲ್ಲಿ ಹೊಳೆ ಹೊಳೆಯುವ ಚಿನ್ನದ ಬಣ್ಣವೇ ಎಲ್ಲ. ದೋಣಿ ವಿಹಾರದಿಂದ ತಂಪೆರೆದಿದ್ದ ಮನಸ್ಸು, ಹೃದಯ, ದೇಹಗಳು ಕಾವೇರತೊಡಗಿದವು. ಕಣ್ಣಿಗೆ ಕರಿಯ ಗಾಜನೇರಿಸಿ ಕೋಚ್ ಇಳಿದೆವು. ರಾಜರ ಕಣಿವೆಯಲ್ಲಿ (The Vally of the Kings) ಈ ಪರ್ವತ ಶ್ರೇಣಿಗಳುಳ್ಳ ಸ್ಥಳದ ಮೂಲ ಹೆಸರು ಥೀಬ್ಸ್. ಥೀಬ್ಸ್ ಎಂದರೆ `ಸತ್ತವರ ದಿಬ್ಬ,’ (ಇಲ್ಲಿ ಪರ್ವತಗಳನ್ನು ಆಳ ಎತ್ತರಕ್ಕೆ ಅಗಿದು, ಬಗಿದು ಒಳಗೆ, ಕೆಳಗೆ, ಎತ್ತರಕ್ಕೆ ವ್ಯಕ್ತಿಗಳು ಹೋಗಬಹುದಾದಷ್ಟು ಅಗಲ ಮತ್ತು ಎತ್ತರದ ಸುದೀರ್ಘ ಸುರಂಗದಂಥ ಹಾದಿ, ಆನಂತರ ಜನರು ನಿಂತು ಪ್ರಾರ್ಥಿಸುವಷ್ಟು ಸ್ಥಳ, ಆನಂತರ ಪರಿವಾರದವರು ನಿಂತು ಪ್ರಾರ್ಥಿಸಬಹುದಾದಷ್ಟು ಜಾಗ, ಅನಂತರ ಶವದಾನಿಯನ್ನಿಡುವ (ಬೃಹದಾಕಾರದ ಕಲ್ಲಿನ ಪೆಟ್ಟಿಗೆಯನ್ನಿರಿಸುವ) ಕೋಣೆ. ಕೆಲವು ಕಡೆಯಲ್ಲಿ ಈ ಕೋಣೆಯ ಅತ್ತಿತ್ತ ಸಣ್ಣ-ಸಣ್ಣ ಕೋಣೆಗಳು. (ಸಂಸ್ಕಾರಾಧಿ ಕ್ರಿಯಾ ಕರ್ಮಗಳಿಗೆ)
ಅಲ್ಲಿ ಆರಂಭದಲ್ಲಿ ಇಡೀ ಕಣಿವೆಯ ಮಾದರಿ ಇರಿಸಲಾಗಿದೆ. ಒಟ್ಟು 62 ರಾಜರ ಗೋರಿಗಳ ಪಟ್ಟಿ ಇಲ್ಲಿದೆ. ಕಟ್ಟಡದ ಸುತ್ತಲೂ ಚಿಕ್ಕ ಪ್ರಮಾಣದಲ್ಲಿ ವಸ್ತು ಸಂಗ್ರಹಾಲಯವಿದೆ. ಅದನ್ನು ದಾಟಿ ಒಳಹೋದರೆ ಅಂಗಡಿಗಳ ಮಳಿಗೆಗಳು, ವಾಶ್ ರೂಂಗಳು. ಅಲ್ಲಿಂದ ಸುಮಾರು ಒಂದು ಕಿ.ಮೀ ಬೆಟ್ಟ ಏರಬೇಕು. ಅದಕ್ಕೆ ಟ್ರೋಲಿಗಳ ವ್ಯವಸ್ಥೆ ಮಾಡಲಾಗಿತ್ತು. ಅವು ತೆರೆದ ಟ್ರೇನ್ ಬೋಗಿಗಳಂತಿದ್ದು ಕೆಳಗೆ ಟಯರ್ ಗಾಲಿಗಳಿದ್ದವು. ಎಲ್ಲರೂ ಅದರಲ್ಲಿ ಕುಳಿತು ಒಂದು ಹಂತದವರೆಗೂ ಹೋದೆವು. ಅಲ್ಲಿ ಮತ್ತೆ ಕಟ್ಟಡಗಳನ್ನು ಕಟ್ಟಲಾಗಿದೆ. ತಂಪು ಪಾನೀಯಗಳು, ಕುಳಿತುಕೊಳ್ಳಲು ಆಸನಗಳು, ಮೇಲೆ ಫ್ಯಾನಗಳು, ಹೆಜ್ಜೆಗೊಬ್ಬ ಕಾವಲುಗಾರ, ಅಲ್ಲಲ್ಲಿ ಬಂದೂಕು ಧಾರಿಗಳು. ಆಸನಗಳಿದ್ದಲ್ಲಿ. ಅಲ್ಲಿರುವ ಗೋರಿಗಳ ಪೈಕಿ ಮುಖ್ಯವಾದ 62 ಅರಸ/ ಅರಸಿಯರ ಹೆಸರುಗಳನ್ನು ಬರೆದು ಹಾಕಲಾಗಿದೆ. ಮತ್ತು ಇಡೀ ಪರ್ವತದಲ್ಲಿರುವ ಗೋರಿಗಳನ್ನು ಅನುಕ್ರಮವಾಗಿ ಸಂಖ್ಯೆಯಿಂದ ನಕ್ಷೆಯಲ್ಲಿ ತೋರಿಸಲಾಗಿದೆ. ಇಲ್ಲಿ ಮೊಬೈಲ್ ಗಳನ್ನು ಚಾಲ್ತಿ ಸ್ಥಿತಿಯಲ್ಲಿ, ನಿಶ್ಯಬ್ಧ ಸ್ಥಿತಿಯಲ್ಲಿ ಇಡುವ ಹಾಗಿಲ್ಲ. ಬಂದ್ ಮಾಡಿ ಒಳಗೆ ಇಟ್ಟುಕೊಳ್ಳಬಹುದಿತ್ತು. ಎಲ್ಲರೂ ತಮ್ಮ ತಮ್ಮ ಜಂಭದ ಚೀಲಗಳಲ್ಲಿ, ಸೇಫ್ಟಿ ಲಾಕರ್ ಗಳಲ್ಲಿ ಇಳಿಸಿದರು. ಅಷ್ಟರಲ್ಲೇ ಇಂದುಮತಿಯವರಿಗೆ ತನ್ನೂರಿನಿಂದ ಕರೆ ಬಂದಿತು. ಇದ್ದ ಅಷ್ಟೂ ಜನರಲ್ಲಿ ಭಾರತದಿಂದ ಕರೆಯಿರುವ (ಇಂಟರ್ನ್ಯಾಷನಲ್ ರೋಮಿಂಗ್) ಫೋನ್ ಅವರದೊಂದೇ ಆಗಿತ್ತು. ಇದರಿಂದ ಉಳಿದವರಿಗೇನೂ ಅನುಕೂಲ ಆಗಿರಲಿಲ್ಲ. ಮನೆಯಿಂದ ಕರೆ ಎಂದೊಡನೆ ದೊಡ್ಡ ಧ್ವನಿಯಲ್ಲಿ ಮಾತನಾಡುತ್ತಾ ತನ್ನದೇ ಗರಕಿನಲ್ಲಿ ನಡೆದಿದ್ದರು. ಅವರದ್ದು ದೊಡ್ಡ ಧ್ವನಿ, ಲಂಬಾಣಿ ಭಾಷೆ, ಕೇಳ ಬೇಕೆ ಅದರ ಪ್ರಸಾರ!
ಒಬ್ಬ ಕಾವಲುಗಾರ ಓಡೋಡಿ ಬಂದವನೆ ಮೊಬೈಲ್ ಕಸಿದುಕೊಂಡು ಹೊರಟು ಹೋಗಿಯೇ ಬಿಟ್ಟ. ಬಾಯಿ ತೆಗೆಯುವುದರೊಳಗೆ ಮಂಗಮಾಯ. ಇಂದುಮತಿ ಮೊಸರಲ್ಲಿ ಕಲ್ಲು ಕಡಿದಂತೆ ಕಕ್ಕಾಬಿಕ್ಕಿಯಾದರು. ಲಾರಿ ಸರ್ `ಯು ಆರ್ ದ ಓನ್ಲಿ ರಿಸ್ಪಾನ್ಸಿಬಲ್ ಪಾರ್ ಇಟ್’ ಎಂದು ಮುಂದೆ ಹೊರಟೇ ಬಿಟ್ಟರು. ಫ್ಯಾನ್ ಕೆಳಗಡೆ ಸರಸ್ವತಿ, ಪ್ರಭಾ ಮತ್ತು ಸರೋಜಿನಿ ಆಂಟಿಯವರನ್ನು ಸಮಾಧಾನಪಡಿಸಿ ಕೂಡಿಸಿದೆವು. ಏಕೆಂದರೆ ಟ್ರಾಲಿ ಹತ್ತಿ ಕುಳಿತು, ಇಳಿಯುವುದೇ ಅವರಿಗೆ ಕಷ್ಟವಾಗಿತ್ತು. ಇನ್ನು ಈ Vally ಏರಲಾದೀತೆ? ಸರೋಜಿನಿ ಭದ್ರಾಪೂರ ಏರಲಾರದೆ ಮರುಗುತ್ತಿದ್ದರು. ನಾನು, ಸರೋಜಾ, ರಾಜನಂದಾ, ಸುನಂದಾ ಮುಂತಾದವರು ಒಂದು ಗುಂಪಾಗಿ ಹೊರಟೆವು. ಹಂತ ಹಂತವಾಗಿ ಹತ್ತುತ್ತಾ ಹೋಗಬೇಕು. ಮೆಟ್ಟಿಲುಗಳಿರದ ಇಳಿಜಾರಾದ ದಾರಿ ಹತ್ತಿದೆವು. ಜೀವ ನೀರು ಬೇಡುತ್ತಿತ್ತು. ಕೋಚಿನಲ್ಲಿ ನೀಡಿದ ಬಾಟಲಿಯಿಂದ ಒಂದೇ ಗುಟುಕು ಕುಡಿದು ಬ್ಯಾಗಿನೊಳಗಿಟ್ಟುಕೊಂಡೆ.
ಗತ ವ್ಯಕ್ತಿಗೆ ಪರಲೋಕದಲ್ಲಿನ ಉಪಯೋಗಕ್ಕೆಂದು, ಅವನ ಜೀವಿತ ಕಾಲದಲ್ಲಿ ಉಪಯೋಗಿಸುತ್ತಿದ್ದ ವಸ್ತುಗಳನ್ನಿರಿಸುವ ಸಲುವಾಗಿ ಈ ಒಂದೊಂದು ಹಂತಗಳು ಕೆಲವು ಕಡೆಗಳಲ್ಲಿ ತಿರುವು ಪಡೆಯುತ್ತ ಹೋಗುತ್ತವೆ. ಆರಂಭದಿಂದ ಅಂತ್ಯದವರೆಗೂ ಈ ಗೋರಿ, ಸುರಂಗಗಳು, ಛಾವಣಿ ಮೊದಲು ಮಾಡಿ ಉಬ್ಬು ಚಿತ್ರ, ಚಿತ್ರಲಿಪಿ, ವರ್ಣರಂಜಿತ ಕಲಾಕೃತಿಗಳಿಂದ ಅಲಂಕೃತಗೊಂಡಿವೆ. ಜೀವಿತಾ ನಂತರದ ಜೀವನ ಪಯಣದ ದಾರಿಯ ಮೆಟ್ಟಿಲುಗಳಲ್ಲಿ ಆತ ಎದುರಿಸಬೇಕಾದ ಪರೀಕ್ಷೆಗಳ ಸನ್ನಿವೇಶಗಳು, ದೇವತೆಗಳು… ಹೀಗೆ ಎಲ್ಲವನ್ನೂ ಕಲ್ಲುಗಳಲ್ಲೇ ಕಡೆದು ಬಣ್ಣ ಸವರಲಾಗಿದೆ. ಅಂದಿನ ಪೇಂಟಿಂಗ್ಗಳು ಇಂದಿಗೂ ಬಣ್ಣ ಕಳೆದುಕೊಳ್ಳದೆ ಅಚಲವಾಗಿ ನಿಂತಿವೆ. ಪ್ರತಿಯೊಂದು ಗೋರಿಯ ಆರಂಭದ ಹೊರಗೆ ಅದು ಯಾರದ್ದು? ಒಳಗೇನೇನಿದೆ? ಎಲ್ಲವನ್ನು ಫಲಕಗಳಲ್ಲಿ ಬರೆದು ಹಚ್ಚಿದ್ದಾರೆ. `ರಾ’ ದೇವತೆಯನ್ನು ಪೂಜಿಸೋ ರೀತಿ, ಮಮ್ಮಿ ಬಾಯಿ ತೆರೆಸುವ ಕ್ರಿಯಾ ಕರ್ಮಗಳು, ಭೂಮಿಯ ಗ್ರಂಥ, ದಿನದ ಗ್ರಂಥ, ರಾತ್ರಿಯ ಗ್ರಂಥ, ಸತ್ತವರ ಗ್ರಂಥ, ಗುಹೆಗಳ ಗ್ರಂಥ ಇವೆಲ್ಲವುಗಳನ್ನು ಅಲ್ಲಿ ಕೆತ್ತಿರುವುದಾಗಿ ಫಲಕಗಳು ಹೇಳುತ್ತವೆ. ಸಾಧ್ಯವಿದ್ದಷ್ಟು ಗರಗರ ಗೀಚಿದೆ. ಇದು ಮೂರನೇ ತುತ್ಮೋಸಿಸ್(Tutmosis) (ಕ್ರಿ.ಪೂ 1504-1450)ನ ಗೋರಿ.
1898ರಲ್ಲಿ ಫ್ರೆಂಚ್ ಪ್ರಾಚ್ಯವಸ್ತು ಶಾಸ್ತ್ರಜ್ಞನಾದ ವಿಕ್ಟರ್ ಲೊರೆಟ್ ಸಂಶೋಧಿಸಿದ್ದು. ಶಿಲೆಗಳ ಮೇಲಿರುವ ಗುಹಾ ಗೂಡಿನಲ್ಲಿ ಪ್ರವೇಶ ದ್ವಾರವಿದೆ. ಸ್ವಲ್ಪ ಸುಧಾರಿಸಿಕೊಂಡ ಮೇಲೆ ಕಬ್ಬಿಣದ ಮೆಟ್ಟಿಲುಗಳನ್ನೇರಬೇಕು. ಸುಮಾರು ಐವತ್ತು ಮೆಟ್ಟಿಲುಗಳು. ನಂತರ ನೇರ ಪರ್ವತದ ದಾರಿ, ಮತ್ತೆ ಸುಮಾರು ಐವತ್ತು ಮೆಟ್ಟಿಲು ಇರಬಹುದು, ಹತ್ತಿ ಹೋದೆವು. ಗಂಟಲಪಸೆ ಆರಿ, ಶ್ವಾಸನಾಳವಷ್ಟೂ ಒಣಗಿ ಹೋಗಿ, ಹೃದಯ ಲಬ್ಡಬ್ ಬಡಿದುಕೊಳ್ಳುತ್ತಿತ್ತು. ಒಂದೇ ಗುಟುಕು ನೀರು ಕುಡಿದೆ. ತಟ್ಟನೆ ಚುವಿಂಗ್ ಗಮ್ ನೆನಪಾಗಿ, ಬಾಯಿಗಿಟ್ಟುಕೊಂಡೆ. ಇಳಿಜಾರಾಗಿ ಕಲ್ಲಿನಲ್ಲೆ ಕೆತ್ತಿದ ಮೆಟ್ಟಿಲು ದಾರಿ; ಇಳಿದು ಎಡಕ್ಕೆ ತಿರುಗಿ, ಮತ್ತೆ ಇಳಿದು ಎಡಕ್ಕೆ ತಿರುಗಿ ಕೆಳಗಿಳಿಯಬೇಕು. ಅಲ್ಲಿ ಜನರು ನಿಂತು ಪ್ರಾರ್ಥಿಸುವ ವಿಶಾಲ ಸ್ಥಳ. ನಂತರ ಪರಿವಾರದವರಿಗೆ, ನಂತರ ಕಲ್ಲಿನ ದೊಡ್ಡ ಶವಪೆಟ್ಟಿಗೆ (Sarcophagus) ಅಲ್ಲಿತ್ತು. ಈ ಕೋಣೆ 15 x 9 ಮೀ ಇದ್ದು ಮೊಟ್ಟೆಯಾಕಾರದಲ್ಲಿ ವಿಶಾಲವಾಗಿತ್ತು. ಅಕ್ಕಪಕ್ಕದಲ್ಲಿ 4 ರೂಮುಗಳಿದ್ದವು. (ಶವಸಂಸ್ಕಾರ, ಕ್ರಿಯಾ ಕರ್ಮಾದಿಗಳ ಉಪಯೋಗಕ್ಕೆ) ಎಲ್ಲ ಕಡೆಗೂ ಗೋಡೆಗಳಲ್ಲಿ ಕೆತ್ತನೆಗಳೇ ತುಂಬಿದ್ದವು. ಹೆಚ್ಚಿನ ಭಾಗ ಸುಂದರ ವರ್ಣಮಯ ಚಿತ್ರದಿಂದ ತುಂಬಿತ್ತು. ಜನ ತಂಡೋಪತಂಡವಾಗಿ ಬರುತ್ತಿದ್ದರು. ಗೋರಿಯ ಕೊನೆಹಂತದವರೆಗೂ ಕಾವಲುಗಾರರಿದ್ದರು. ಬೇಕೆಂದರೆ ಟಾರ್ಚ್ ಕೊಡುತ್ತಾರೆ, ಬರುವಾಗ ಮರಳಿಸಬೇಕು. `ಅಪ್ಪಾ ಪುಣ್ಯಾತ್ಮ ಸತ್ತಮೇಲೂ ಇಷ್ಟು ಪರ್ವತದಾಳದೊಳಗೆ ಬಂದುಕೂಡಬೇಕಿತ್ತಾ?’ ಎಂದಳು ಸರೋಜಾ ಏದುಸಿರು ಬಿಡುತ್ತಾ. ಆ ಕಾಲದಲ್ಲಿ ಇಂಥ ಇಕ್ಕಟ್ಟಿನಲ್ಲಿ ಕಲ್ಲಿನ ಶವ ಪೆಟ್ಟಿಗೆ ಸಾಗಿಸಿದ್ಹೇಗೆ? ಎಲ್ಲವೂ ವಿಸ್ಮಯಲೋಕ.
ಮೊದಲು ಮಣ್ಣ ಇಟ್ಟಿಗೆಗಳ ಮೆಟ್ಟಿಲಿದ್ದುವಂತೆ. ಅವೆಲ್ಲ ಮಳೆ, ಪ್ರವಾಹಗಳಿಂದ ಒಡೆದು ಹೋಗಿ ರಾಶಿ ರಾಶಿಯಾಗಿ ಗುಡ್ಡೆ ಬಿದ್ದು, ಭಗ್ನಾವಶೇಷಗಳ ನಡುವೆ ಗೋರಿ ಮುಚ್ಚಿ ಹೋಗಿತ್ತಂತೆ. ನಾವು ಏರಿದ್ದು ಒಂದು ಸಾವಾದರೆ, ಇಳಿಯುವುದು ಇನ್ನೊಂದು ಸಾವು. ಇಳಿಯುವಾಗ ಕೆಳನೋಡುವ ಹಾಗಿಲ್ಲ. ಬಿದ್ದಂತಾಗುತ್ತದೆ. ಕಬ್ಬಿಣದ ಸ್ಟೇರ್ಕೇಸ್ ಹಿಡಿದು ಮುಂದೆ ನೋಡುತ್ತಾ ಇಳಿಯಬೇಕು. ಮೇಲೆ ತುದಿಯಲ್ಲಿ ನಿಂತು ನೋಡಿದರೆ ಕಣಿವೆಯ ಸುಂದರ ದೃಶ್ಯ, ಪರಂಪರೆಯ ವಿಸ್ತೃತ ದರ್ಶನವಾಗುತ್ತದೆ. ಇದೊಂದನ್ನು ನೋಡಿ ಬಿಟ್ಟರೆ ಉಳಿದೆಲ್ಲ ಗೋರಿಗಳ ಕಲ್ಪನೆ ಮೂಡುತ್ತದೆ. ಇದನ್ನು ಬಿಟ್ಟು ಮತ್ತೆ ಆರು ಗೋರಿಗಳನ್ನು ನೋಡಿದೆವು. ಅವು ಸಮತಲ ನೆಲದಿಂದ ಆಳಕ್ಕೆ, ಒಳಕ್ಕೆ ಇರುವಂಥವು. ಅಲ್ಲಿ ನೋಡುವುದು ಬರೀ ಗುಹೆಗಳನ್ನು ಮತ್ತು ವರ್ಣರಂಜಿತ ಕೆತ್ತನೆಗಳನ್ನು. ಒಂದರಿಂದ ಇನ್ನೊಂದು, ಕಾಲು, ಅರ್ಧ ಕಿ.ಮೀಗಳಷ್ಟು ದೂರ; ಕೆಲವು ಅಕ್ಕಪಕ್ಕದಲ್ಲೇ ಇವೆ. ಅವುಗಳಿಗೆ ಸಮತಟ್ಟಾದ ದಾರಿ ಮಾಡಿದ್ದಾರೆ. ಎಲ್ಲ ಗೋರಿಗಳ ಒಳಗೂ ದೀಪಗಳ ವ್ಯವಸ್ಥೆ ಇದೆ. ಇದಕ್ಕಾಗಿ ಪರ್ವತದ ತುಂಬೆಲ್ಲ ದಪ್ಪನೆಯ ವಿದ್ಯುತ್ ವಾಯರ್ ಗಳೇ ಹರಿದಾಡಿದ್ದು ದೂರದಿಂದಲೇ ಕಾಣುತ್ತಿತ್ತು. ಪರ್ವತದಲ್ಲಿ ಅಲ್ಲಲ್ಲಿ ಫೋಕಸ್ ಲೈಟ್ ಗ ಳನ್ನು ಹಾಕಿದ್ದರು. ಅಷ್ಟನ್ನು ನೋಡಿ ಸಾಕೆನಿಸಿತು. 62 ಗೋರಿಗಳಲ್ಲಿ ಮುಖ್ಯವಾದವು 32. ಕೆಲವು ಅಪೂರ್ಣವಾಗಿವೆ. ಅಷ್ಟೆಲ್ಲ ನೋಡುವುದು ಅಸಾಧ್ಯವಾಗಿತ್ತು. ಆರನ್ನಷ್ಟೇ ನೋಡಿಕೊಂಡು, ತಿರುಗಿ ಇಳಿದು ಬಂದೆವು. ಆಂಟಿಯರೆಲ್ಲ ಕೂತಲ್ಲಿಯೇ ಬಂದು ಕುಳಿತೆವು. ಮನು ಅಲ್ಲೇ ಇದ್ದರು. ಇಂದುಮತಿಯವರ ಮೊಬೈಲ್ ಕೊಡಿಸುವುದರಲ್ಲಿ ಅವರಿಗೆ ಸಾಕುಸಾಕಾಗಿ ಹೋಗಿತ್ತು. ಏನು ಮಾಡಿದರೂ ಆತ ಕೊಡೋಕೆ ಸಿದ್ಧನಾಗಿರಲಿಲ್ಲ. ಕೊನೆಗೆ 100 ಇಜಿಪ್ಟಿಯನ್ ಪೌಂಡ್ಸ್ ದಂಡ ಕೊಟ್ಟರೆ ಕೊಡುವುದಾಗಿ ಹೇಳಿದ. ಆದರೂ ಇಂದುಮತಿ ತನ್ನದನ್ನು ಬಿಡಲೇ ಇಲ್ಲ. `ಕೊಟ್ಟರ ಕೊಡ್ಲಿ ಬಿಟ್ರ ಬಿಡ್ಲಿ’ ಎನ್ನುತ್ತಲೆ ಮನುನ ಹಿಂದೆ ಹಿಂದೆ ತಿರುಗಾಡುತ್ತಿದ್ದರು. (Vally ನೋಡುವುದನ್ನು ಬಿಟ್ಟು) ದುಡ್ಡು ಕೊಟ್ಟ ಮೇಲೆ ಕಾವಲುಗಾರ ಕರಾರು ಹಾಕಿ, ಹೋಗುವಾಗ ಹಿಂದಿರುಗಿಸುವುದಾಗಿ ಹೇಳಿದ. ಇಲ್ಲಿವರೆಗೂ ಕಿಷನ್ ಕಣಯ್ಯಾ ಆಗಿದ್ದ ಮನು ಈಗ ಗೋಪಾಲ ಆಗಬೇಕಾಗಿತ್ತು. ಆತ ಬಿಸಿಲಲ್ಲಿ ಓಡಾಡಿ ಬಸವಳಿದು ಹೋಗಿದ್ದರು. ಹೀಗೇ ಎಲ್ಲರ ಮೈ ನುಜ್ಜುಗುಜ್ಜಾದ ಪರಿಸ್ಥಿತಿಯಲ್ಲಿ ಆಂಟಿಯರಿಗೆ ಹೆಗಲು ಕೊಡುವುದು ಅಸಾಧ್ಯವೆನಿಸಿ ನಮ್ಮಷ್ಟಕ್ಕೆ ನಾವು ಟ್ರಾಲಿ ಇರುವಲ್ಲಿವರೆಗೂ ನಡೆದು ಬಂದೆವು.
ನಾವು ಹೋಗಿ ನೋಡಿದ ಮತ್ತು ದೂರದಿಂದಲೇ ನೋಡುತ್ತಿರುವ ಗೋರಿಗಳು ತುತ್ಮೊಸಿಸ್ ನ ವಂಶಸ್ಥರವು. ಈತನ ನಂತರ ಸೆತ್ ನ ಹಾಗೂ ಹನ್ನೊಂದನೆಯ ರ್ಯಾಮಸೆಸ್ ನವರೆಗೂ ಇಲ್ಲಿ ಗೋರಿಗಳಿವೆ. ಇವಲ್ಲದೆ ಇನ್ನೂ ಇರುವ ಗೋರಿಗಳ ವಾರಸುದಾರರು ಯಾರು ಎಂಬುದು ತಿಳಿದು ಬಂದಿಲ್ಲ. ಇನ್ನೂ ಪರ್ವತವನ್ನು ಅಗೆಯುತ್ತಲೇ ಇದ್ದಾರೆ. ತಲೆ ಎತ್ತಿ ನೋಡಿದಲ್ಲೆಲ್ಲ ಎಲ್ಲೆಂದರಲ್ಲಿ ಒಂದೊಂದು ಕತ್ತಲು ತುಂಬಿದ ಗುಹೆಗಳು ತೂತುಗಳಂತೆ ಕಾಣುತ್ತವೆ. ಈ ಪರ್ವತಗಳು ಆಕಾಶದಿಂದ ಕಳಚಿ ಬಿದ್ದಿವೆಯೇನೋ ಅನ್ನುವಷ್ಟು ಎತ್ತರ, ವಿಶಾಲ; ಸಾಮಾನ್ಯ ಪ್ರಜೆ ಏನೂ ಹುಡುಕಿಯಾನು? ಒಂದು ಬೃಹತ್ ಪರ್ವತ ಕೊರೆದು, ಅಗಿದು ಅಲ್ಲಿ ಈ ರಾಜರುಗಳು ಎರಡನೆಯ ಬದುಕು ನಡೆಸುತ್ತಿದ್ದಾರೆ. ಆಧುನಿಕ ಮಾನವ ಅವರನ್ನು ಅಲ್ಲಿರಲು ಬಿಡದೆ ಕೆದಕಿ ಕೆದಕಿ, ಅಗಿದು ತೆಗೆದು ಎಲ್ಲರೆದುರು ತಂದು ನಿಲ್ಲಿಸಿದ್ದಾರೆ. ಪ್ರಕೃತಿ ನನಗ್ಯಾರು ಸಾಟಿ? ಎಂದರೆ ಮಾನವ ನನಗ್ಯಾರು ಸಾಟಿ? ಎಂದಂತೆ ಸ್ಪರ್ಧತ್ಮಕವಾಗಿ ನಡೆದಿವೆ ಶೋಧನಾ ಕಾರ್ಯಗಳು. ಅಂತೂ ಎರಡೆರಡು ಬಾರಿ ಕೊರೆತಕ್ಕೆ ಒಳಗಾಗಿದೆ ಈ ಪರ್ವತ.
ಈ ರಾಜರಾಣಿಯರ ಕಣಿವೆಯಲ್ಲಿ ಒಟ್ಟು 900 ಗೋರಿಗಳಿವೆಯಂತೆ. ಆ ಪೈಕಿ ಈಗ ಉತ್ಖನನವಾಗಿರುವವು ಕೇವಲ 70. ಇನ್ನೂ 90% ಶೇಕಡಾದಷ್ಟು ಭಾಗ ಬಾಕಿ ಇದೆ. ಈ ಉತ್ಖನನ ಕಾರ್ಯ ನಡೆದೇ ಇದೆ.
ಅಲ್-ದೇರ್ ಎಲ್ ಬಹಾರಿ ದೇವಾಲಯ (Al-Deir El Bahari Temple)


ರಾಜ ರಾಣಿಯರ ಕಣಿವೆಗಳನ್ನು ನೋಡಿಕೊಂಡು, ಸುಡು ಸುಡುವ ಬಿಸಿಲಲ್ಲಿ, ಸುರಿಸುರಿವ ಬೆವರ ತೀಡುತ್ತಾ ಟ್ರೋಲಿಗಳಲ್ಲಿ ಕುಳಿತು ಹಿಂದಿರುಗಿ, ಬಂದು ಕೋಚಿನಲ್ಲಿ ಕುಳಿತಾಗ `ಜೀವ ಬದುಕಿತು’ ಎನಿಸಿತು. ಅಲ್ಲಿಂದ ಸ್ವಲ್ಪ ದೂರದಲ್ಲಿರುವ ಅಲ್-ದೇರ್ ಎಲ್ ಬಹಾರಿ ದೇವಾಲಯಕ್ಕೆ ತಲುಪಿದೆವು.ಇದು ಪರ್ವತವನ್ನು ಕೊರೆಯುತ್ತ, ಹಂತ ಹಂತವಾಗಿ ಸಮತಟ್ಟುಗೊಳಿಸುತ್ತ ಮೂರು ಅಂತಸ್ತುಗಳಲ್ಲಿ ಕಟ್ಟಿದ ಬೃಹತ್ ದೇವಾಲಯ. ಈ ಒಂದೊಂದು ಹಂತಗಳನ್ನೇರಲು ಒಂದು ಕಡೆಗೆ ಇಳಿಜಾರಾದ ಪಾತಳಿಯ ರಸ್ತೆ. ಇನ್ನೊಂದೆಡೆ ಮೆಟ್ಟಿಲುಗಳಿರುವ ವಿಶಾಲ ರಸ್ತೆಗಳಿವೆ. ಮಹತ್ವಾಕಾಂಕ್ಷಿ, ಮಹಾಮೇಧಾವಿ ಹ್ಯಾಟ್ಷೆಪ್ಸೂತ್ಳು (ಕ್ರಿ.ಪೂ 1498-1483) ಕಟ್ಟಿಸಿದ ಸುಂದರ ದೇವಾಲಯ. ಇದರ ಯೋಜನೆ, ಶಿಲ್ಪಕಲೆ ಮತ್ತು ಶೃಂಗರಿಸಿದ ರೀತಿಗಳಿಂದಾಗಿ ಇಡೀ ಇಜಿಪ್ತಿನ ಉಳಿದೆಲ್ಲ ದೇವಾಲಯಗಳಿಗಿಂತ ಭಿನ್ನವಾಗಿದೆ ಮತ್ತು ಶಿಲ್ಪಕಲಾ ಜಗತ್ತಿಗೆ ಒಂದು ಅಪೂರ್ವ ಕೊಡುಗೆಯಾಗಿದೆ. ಮೂರು ಅಂತಸ್ತುಗಳ ಮುಖ್ಯ ದ್ವಾರದ ಅಕ್ಕಪಕ್ಕದಲ್ಲಿರುವ ಕಂಬಗಳಲ್ಲಿ ಪುರುಷ ರೂಪದ ಅಂದರೆ ಕೃತಕ ಗಡ್ಡ, ಗಂಡುಡುಗೆ ಧರಿಸಿದ ಹ್ಯಾಟ್ಷೆಪ್ಸೂತ್ ಳ ಮೂರ್ತಿಗಳಿವೆ. ಅವಳು ನಿಲ್ಲಿಸಿದ ಹದಿನಾರು ಮೂರ್ತಿಗಳಲ್ಲಿ ಈಗ ಹತ್ತು ಮಾತ್ರ ಇವೆ. ಇಲ್ಲಿ ಅವಳ ಆರಾದ್ಯ ದೈವಗಳಾದ ಅಮೂನ್, ಹಾಥೋರ್ ಮತ್ತು ಅನೂಬಿಸ್ರಿಗೆ ಪ್ರತ್ಯೇಕ ದೇವಾಲಯಗಳಿವೆ. ಇಲ್ಲಿಯ ಭಿತ್ತಿಗಳಲ್ಲಿ ಕೊರೆದ ಉಬ್ಬು ಚಿತ್ರಗಳು ಅವಳ ಜನ್ಮ ವೃತ್ತಾಂತ ಮತ್ತು ಜೀವನದ ಯಶೋಗಾಥೆಗಳನ್ನು ಹೇಳುತ್ತವೆ, ಅಲ್ಲದೆ ಸುಂದರ ಕಲಾತ್ಮಕ ಕುಶಲಕಲೆಗೆ ಸಾಕ್ಷಿಯಾಗುತ್ತವೆ. ದೇವಾಲಯ ಇಷ್ಟೊಂದು ಎತ್ತರ, ವಿಶಾಲ, ಸುಂದರವಾಗಿದೆಯೆಂದರೆ ಯಾವ ಮೂಲೆಗೆ ನಿಂತು ನೋಡಿದರೂ ಒಂದೊಂದು ಚಿತ್ತಾರಗಳು. ಎಲ್ಲಿ ನಿಂತು ಎಷ್ಟು ಫೋಟೋ ತೆಗೆದರೂ ಸಮಾಧಾನ ಆಗುವುದೇ ಇಲ್ಲ. ಪರ್ವತ ಕಲಾಪೀಠವಾಗಿ, ಕಲ್ಲು ಕಲೆಯಾಗುವ ಪರಿಯನ್ನು ನೋಡಬೇಕೆಂದರೆ ಈ ದೇವಾಲಯ ನೋಡಬೇಕು.
ಒಬ್ಬ ಹೆಣ್ಣು ಹಲವಾರು ದಶಕಗಳಿಂದ ಬೇರುಬಿಟ್ಟ ಶಿಲ್ಪಕಲಾ ಪರಂಪರೆಯನ್ನು ಮುರಿದು ಹೊಸತೊಂದನ್ನು ಬುನಾದಿ ಹಾಕಿದಳೆಂದು ಹೇಳುವುದಕ್ಕೆ ಯೋಗ್ಯ ದಾಖಲೆಯಾಗಿದೆ. ಅವಳನ್ನು ದ್ವೇಷಿಸುತ್ತಿದ್ದ, ಅವಳ ವಿರುದ್ಧ ಸೇಡಿನ ತಂತ್ರ ರೂಪಿಸುತ್ತಿದ್ದ ಮೂರನೆಯ ತುತ್ಮೊಸಿಸ್ ನಗೆ ಪ್ರತೀಕಾರಾರ್ಥವಾಗಿ ಮೂಡಿಸಿದ ಮಹಾರಾಣಿಯ ಹೆಜ್ಜೆಯ ಗುರುತಿದು. ಇವಳು ಹೆಣ್ಣು ಕುಲಕ್ಕೆ ಕಿರೀಟ ಪ್ರಾಯ ಏಕೆಂದರೆ ಪ್ರಪಂಚದ ಚರಿತ್ರೆಯಲ್ಲೆ ಯಶಸ್ವಿ ಪ್ರಥಮ ರಾಣಿ ಇವಳು. ಇವಳ ಒಂದೊಂದು ಸಾಧನೆಗಳನ್ನು ನೋಡುತ್ತಾ ಹೋದಂತೆ ಮೈ ರೋಮಾಂಚನವಾಗುತ್ತಿತ್ತು. ಮೇಲೇರಿ ತಿರುಗಿ ನೋಡಿದರೆ ಹೊನ್ನಿನ ಬಣ್ಣದ ಪರ್ವತಗಳಿಗೆ ಭಿನ್ನವಾಗಿ ನೈಲ್ ನ ಇಕ್ಕೆಲದ ಹಸಿರು ನಯನ ಮನೋಹರವಾಗಿ ಕಾಣುತ್ತಿತ್ತು. ಈ ರುದ್ರ ರಮಣೀಯ ತಾಣದಲ್ಲಿ ಬಿಸಿಲೆಂಬುದು ಮರೆತೇ ಹೋಗಿತ್ತು.
ಈ ದೇವಾಲಯದಿಂದ ಹೊರಬರುವಾಗ ಅಲ್ಲೊಂದು ಚಿಕ್ಕ ಊರಿತ್ತು. ಅಲ್ಲಿ ಬಣ್ಣ ಬಣ್ಣದ ಕಲ್ಲುಗಳನ್ನು ಕೊರೆದು, ಕೆತ್ತಿ ಮೂರ್ತಿಗಳನ್ನು ಮಾಡುವ ಕರಕುಶಲಕರ್ಮಿಗಳಿದ್ದಾರೆ. ಅವರಿಂದ ಒಂದು ಡೆಮೋ ಮಾಡಿಸಿ ತೋರಿಸಿದರು. ಕಲ್ಲುಗಳು ಕೈ ಚಳಕದಿಂದ ಮೂರ್ತಿಗೊಳ್ಳುತ್ತವೆ. ಬಳಪದ ಕಲ್ಲು ಬಹುಬೇಗನೆ ಆಕಾರ ಪಡೆಯುತ್ತದೆ. ಕಬ್ಬಿಣದ ಕೈ ಸಾಧನಗಳಿಂದ ಚಕಚಕನೆ ಮೇಲೆ ಆಕಾರ ಕೊಟ್ಟು, ನಂತರ ಒಳಗೆ ಕೆರೆದು, ಕೊರೆದು ಮಾಡುವ ರೀತಿ ಆಶ್ಚರ್ಯ ಹುಟ್ಟಿಸುತ್ತದೆ. ಅಲ್ಲಿ ಒಂದು ದೊಡ್ಡ ಅಂಗಡಿಯೂ ಇದೆ. ಬಣ್ಣ ಬಣ್ಣದ ಕಲ್ಲುಗಳು ಕೈಗಳಲ್ಲಿ, ಯಂತ್ರಗಳಲ್ಲಿ ಕಲೆಯಾಗಿ ಅರಳಿದ ಪರಿಯನ್ನು ಅದನ್ನು ನೋಡಿಯೇ ಮನದುಂಬಿಸಿಕೊಳ್ಳಬೇಕು. ಅಲ್ಲೊಂದು ನೀಲಿ ಮಿಶ್ರಿತ ತಿಳಿ ಹಸಿರು ಬಣ್ಣದ ಕಲ್ಲಿತ್ತು. ವಿಶೇಷತೆ ಎಂದರೆ ಆ ಕಲ್ಲನ್ನು ಅಥವಾ ಅದರಿಂದ ಮಾಡಿದ ಮೂರ್ತಿಗಳನ್ನು ಬಲ್ಬ್ ಬೆಳಕಿನ ತೀರ ಸಮೀಪಕ್ಕೆ ಒಂದು ನಿಮಿಷ ಹಿಡಿದು, ಹಿಂತೆಗೆದು, ರೂಮನ್ನು ಕತ್ತಲೆಗೊಳಿಸಿ ಬಿಟ್ಟರೆ ಅ ಕಲ್ಲಿಂದ ಅಥವಾ ಅದರ ಮೂರ್ತಿಯಿಂದ ಬೆಳಕಿನ ದೀಪ್ತಿ ಹೊಮ್ಮುತ್ತದೆ. ಕತ್ತಲಲ್ಲಿ ಅದು ಅಪ್ರತಿಮವಾಗಿ ಕಾಣುತ್ತದೆ. ಅಲ್ಲಿದ್ದ ಅಂತಹ ರಾಜ, ರಾಣಿ, ತೋಳ, ಸಗಣಿ ಹುಳ, ಆಮೆ, ಮೊಸಳೆಗಳ ಮೂರ್ತಿಗಳನ್ನು ಬಲ್ಬಿಗೆ ಹಿಡಿದು ಮತ್ತೆ ಮತ್ತೆ ಮಾಡಿ ನೋಡಿದೆವು. ಅಲ್ಲಿಯೂ ಕೋಲ್ಡ್ ಟೀ ವ್ಯವಸ್ಥೆ ಇತ್ತು.
(ಮುಂದುವರಿಯುವುದು…)

‍ಲೇಖಕರು avadhi

18 March, 2014

ನಿಮಗೆ ಇವೂ ಇಷ್ಟವಾಗಬಹುದು…

ರಾಜಸ್ಥಾನವೆಂಬ ಸ್ವರ್ಗದ ತುಣುಕು : ಖ್ವಾಜಾ ಮೊಯಿನುದ್ದೀನ್ ಚಿಸ್ತಿ ಸನ್ನಿಧಿಯಲ್ಲಿ

ರಾಜಸ್ಥಾನವೆಂಬ ಸ್ವರ್ಗದ ತುಣುಕು : ಮತ್ತೆ ಮತ್ತೆ ಅದೇ ಜಾಗದಲ್ಲಿ ನಿಲ್ಲುತ್ತಿತ್ತು ಖಾಲಿ ಬೈಕ್

1 Comment

  1. Anonymous

    Madam its really fantastic experiense … I felt very happy to read it. Nange tejaswi avara amemari andaman pravasi kathana nenapu tarisitu… Nimma baravanigeya dhati nice. Shiskshana kshetrakke nimma prabuddhate simitavagade sahitya krushigu dorakiddu namage kushi tandide. Nimage Abhinandanegalu. Hecchina krutigala nireeksheyalli…. – CHANDRU MANDYA

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading