ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನೈಲ್ ನದಿಯ ಮಡಿಲಲ್ಲಿ : ಮರಳಿ ಮನೆಗೆ, ರೊಟ್ಟಿ ಊಟಕ್ಕೆ

(ಇಲ್ಲಿಯವರೆಗೆ…)

ಜುಲೈ 27ರ ಬೆಳಗು. ಅನಿರೀಕ್ಷಿತವಾಗಿ ಒಂದು ದಿನ, ಅಧಿಕೃತವಾಗಿ ಯಾವ ದೇಶದವರೂ ಆಗಿರದೆ ಅತಾತುರ್ಕ ವಿಮಾನ ನಿಲ್ದಾಣದೊಳಗೆ ಉಳಿಯಬೇಕಾಯಿತು. ವೀಸಾ ಲಭಿಸಿದ್ದರೆ ಅಧಿಕೃತವಾಗಿ, ಅನುಮತಿಯೊಂದಿಗೆ ಇಸ್ಥಾಂಬುಲ್ ನಗರದಲ್ಲಿ ಇನ್ನೂ ಕೆಲವು ಪ್ರೇಕ್ಷಣೀಯ ಸ್ಥಳಗಳನ್ನ ನೋಡಬಹುದಿತ್ತು, ನಗರದೊಳಗೆ ಖರೀದಿಯನ್ನೂ ಮಾಡಬಹುದಿತ್ತು.
ಬೆಳಿಗ್ಗೆ ಏಳುಗಂಟೆಗೆ ವೆಕ್ಅಪ್ ಕಾಲ್. ಎದ್ದು ಬಾಥ್ ರೂಮಿಗೆ ಬಂದರೆ ಹಲ್ಲುಜ್ಜಲು ಬ್ರಶ್ ಇತ್ತು, ಪೇಸ್ಟ್ ಇರಲಿಲ್ಲ. ಬೆರಳನ್ನೆ ಬ್ರಶ್ ಮಾಡಿ, ಎಂಜಲನ್ನೆ ಪೆಸ್ಟ್ ಮಾಡಿ ಹಲ್ಲುಜ್ಜು ರಾಗ ಹಾಡಿದ್ದಾಯಿತು. ಎಲ್ಲಿ ನೋಡಿದಲ್ಲೆಲ್ಲ ಶುಭ್ರವಾದ ಬಾಥ್ ರೂಮಿನೊಳಗೆ ಬಿಳಿ ಪ್ರತಿಬಿಂಬಿಸಿ ನೀರೂ ಬಿಳಿಯಾಗೆ ಕಾಣುತ್ತಿತ್ತು. ಅಂಥ ನೀರಿನಲ್ಲಿ ಶುಭ್ರವಾಗಿ ಸ್ನಾನ ಮಾಡಿ ತಿರುಗಿ ಅದೇ ಬಟ್ಟೆಗಳನ್ನೇ ತೊಟ್ಟುಕೊಂಡೆವು. `ಫ್ರೆಶ್ ಬಾಡಿ ಇನ್ ಡರ್ಟಿ ಕ್ಲಾಥ್ಸ್’ ಎಂದು ಹಾಸ್ಯ ಮಾಡುತ್ತ ಹೊರಬಂದೆವು. ಆಗಲೆ ಸಿದ್ಧರಾಗಿ ಕುಳಿತಿದ್ದ ಲಾಂಸರ್ `ರೆಡಿ ಹೋಗಯೇ’ ಎಂದರು. `ಹಾಂ ಹೋಗಯೇ’ ಎಂದೆ. ‘ನಿಮಗೆ ಬೇಕಾದರೆ ಪೆಸ್ಟ್, ಬ್ರಶ್, ಬಾಚಣಿಕೆ, ಸ್ಯಾನಿಟರಿ ಸಾಧನಗಳು, ಕ್ಷೌರದ ಸೆಟ್ ಎಲ್ಲವುಗಳು ಸಿಗ್ತವೆ. ಅಲ್ಲಿ ಕೌಂಟರ್ನಲ್ಲಿ ಕೇಳಿ ಪಡೆದುಕೊಳ್ಳಬಹುದು’ ಎಂದರು.
ಮೊದಲು ಪೆಸ್ಟ್ ಬ್ರಶ್ ಕೇಳಿ ಪಡೆದು, ರೂಮಿಗೆ ಹೋಗಿ ಹಲ್ಲುಜ್ಜಿದೆವು. ಅಲ್ಲಿನ ಡ್ರಾವರ್ದಲ್ಲಿ ಕಾರ್ಡ್ ಸೀಟ್ ನ ಚಿಕ್ಕ ಚೌಕದ ತುದಿಗೆ ಬಿಳಿ, ಕಪ್ಪು, ಹಳದಿ ಮತ್ತು ಕಂದು ಬಣ್ಣದ 2 ಮೀಟರ್ ದಾರ ಸುತ್ತಿಡಲಾಗಿತ್ತು. ಅದರೊಂದಿಗೆ ಸೂಜಿ, 2 ಬಟನ್ ಗಳಿದ್ದವು. ಅದು Sewingset ಬಂದು ಬಾಚಣಿಕೆ ಕೇಳಿದರೆ ಅದರೊಂದಿಗೆ ನೆಲ್ಶೆಪರ್ ಕೂಡ ಕೊಟ್ಟಳು ಅಲ್ಲಿದ್ದ ಯುವತಿ. `ಏನೇ ತೆಗೆದುಕೊಳ್ಳಿ ಎಲ್ಲ ಬಿಳಿ ಬಣ್ಣದವೆ.’ ಇನ್ನೂ ಕೆಲವರು ಬರಬೇಕಿದ್ದುದರಿಂದ ಲಾರಿಸರ ಜೊತೆ ಮಾತನಾಡುತ್ತ ಅಲ್ಲಿದ್ದ ಚೇರ್ ಟೇಬಲ್ ಗಳಲ್ಲಿ ಕುಳಿತೆವು. ಆಗ ಸರ್ ಹೇಳಿದರು, `ಇಲ್ಲಿ ನೈಟ್ ಡ್ರೆಸ್ ಕೂಡ ಕೊಡುತ್ತಾರಂತೆ. ಏಕೆಂದರೆ ಇದು ಇರುವುದೇ ತುರ್ತು ಕಾಲದ ಉಪಯೋಗಕ್ಕಾಗಿ. ಆದರೆ ನಾವು ಬಹಳ ಜನ ಇದ್ದುದರಿಂದ ಒದಗಿಸಿಲ್ಲ’ ಎಂದರು.
ಕೌಂಟರಿನ ಎದುರಿಗೆ ಕುಳಿತಿದ್ದೆ. ಆ ಕೌಂಟರ್ ನ ಹಿಂದಿನ ಗೋಡೆಗೆ 5 ದೇಶಗಳ ಸಮಯ ತೋರಿಸುವ ಐದು ಗೋಡೆ ಗಡಿಯಾರಗಳಿದ್ದವು. ಇಸ್ಥಾಂಬುಲ್ ನಲ್ಲಿ 8.6, ಜುರಿಕ್ ನಲ್ಲಿ 8.37, ಲಂಡನ್ ನಲ್ಲಿ 6.38, ನ್ಯೂಯಾರ್ಕ್ ನಲ್ಲಿ 1.38, ಟೊಕಿಯೋದಲ್ಲಿ 2.38 ಆಗಿತ್ತು. ಅಲ್ಲಿಂದ ‘ಗ್ಲೋರಿಯಾ ಜೀನ್ಸ ಕಾಫಿಸ್’ಗೆ ಹೋದೆವು. ಅಲ್ಲಿ ಮತ್ತೊಂದು ರೀತಿಯ ಚೀಸ್ ಮತ್ತು ಪಾಸ್ತಾ ಹಾಗೂ ಪಾನೀಯಗಳು. ನೀರು ಮಾತ್ರ ಸಿಗಲಾರದು. ತುತ್ತು ಗಂಟಲೊಳಗಿಳಿಯದಾಗಿ 200 ಮಿಲಿಯ ಒಂದು ಬಿಸ್ಲೆರಿ ಬಾಟಲ್ ನ್ನ ಒಂದುವರೆ ಯೂರೋ (90 ರೂ) ಕೊಟ್ಟು ಖರೀದಿಸಿದೆವು. ಈ ನೀರಿಗೆ ಇಷ್ಟಿರಬೇಕಾದರೆ ತಿಂಡಿಗೆ ಎಷ್ಟಾಗಬಹುದು? ಎಂದು ದರ ಕೇಳಿದರೆ ಸುಮಾರು 700 ರೂಪಾಯಿಗಳು. ಕೊಂಡು ತಿನ್ನುವುದಾಗಿದ್ದರೆ ನಮ್ಮ ಗತಿ ದೇವರೇ ಗತಿ. ತಿಂಡಿ ತಿಂದು ಡ್ಯುಟಿಪ್ರೀ ಅಂಗಡಿಗಳಿಗೆ ನೋಡಲು ಹೋದೆವು. ಅಲ್ಲಿ ಯಾವುದೂ ಇಲ್ಲ ಅಂತಿಲ್ಲ. ಎಲ್ಲವೂ ದೊರೆಯುತ್ತಿತ್ತು. ಹೇಳೋಕೆ ಡ್ಯೂಟಿಫ್ರೀ ಹೆಸರು. ರೇಟ್ ಮಾತ್ರ ಹನುಮಪ್ಪನ ಬಾಲ. ನಗರದಲ್ಲಿದ್ದದ್ದಕ್ಕಿಂತ ಎರಡರಿಂದ 3 ಪಟ್ಟು ಹೆಚ್ಚು. ಅಲ್ಲೊಂದಿಷ್ಟು ಟರ್ಕಿ ಚಾಕಲೆಟ್ ಕೊಂಡುಕೊಂಡೆ. ಎಲ್ಲರೂ ತಮಗೆ ಇಷ್ಟವಾದದ್ದನ್ನು ಕೊಂಡುಕೊಂಡರು.
ಅಲ್ಲಿದ್ದ ಚಿನ್ನಾಭರಣಗಳ ಅಂಗಡಿಯಲ್ಲಿನ ಆಭರಣಗಳ ಕುಸುರಿ ಕಲೆ ಅಪ್ರತಿಮವಾಗಿತ್ತು. ಇಲ್ಲಿಯ ಏರ್ಪೋರ್ಟ್ ನಲ್ಲಿಯ ವಿಶೇಷವೆಂದರೆ ಅಲ್ಲಲ್ಲಿ ನಮಾಜ ಮಾಡಲು ಪ್ರತ್ಯೇಕ ರೂಮಿನ ವ್ಯವಸ್ಥೆ ಇದೆ. ಆ ರೂಮುಗಳಿಗೆ ಹೋಗಲು ಬಾಣದ ಗುರುತುಗಳು ದಾರಿ ತೋರುತ್ತವೆ. ಅರಬ್ ಕಂಟ್ರಿಯಾದ್ದರಿಂದ ಅದು ಅಲ್ಲೆಲ್ಲ ಸಾಮಾನ್ಯ. ಕೈರೋದಲ್ಲೂ ಹಾಗೆ ಇತ್ತು. ಇಡೀ ಏರ್ಪೋರ್ಟ್ ನೋಡಿದೆವು. ನಮ್ಮ ಪಾಲಿಗೆ ಉಳಿದದ್ದು ಅದೊಂದೆ. ಹೊರಗೆ ಹೋಗುವ ಹಾಗಿಲ್ಲ, ಖರೀದಿ ಮಾಡುವ ಹಾಗಿಲ್ಲ. ಒಂದು ಗಂಟೆಗೆ ಊಟ. ಚೀಸ್ ವಿತ್ ವೆಜಿಟೆಬಲ್ ಆಂಡ್ ಫ್ರೂಟ್ಸ್ ಹಾಗೂ ಕೋಲಾ. ಊಟ ಮುಗಿಸಿ ಮಾಡುವುದೇನೂ ಇರಲಿಲ್ಲ. ನಾನು ರಾಜನಂದಾ ಹೋಗಿ ಮತ್ತೆ ಮಲಗಿಕೊಂಡೆವು. 5 ಗಂಟೆಗೆ ಎದ್ದು ಸಿದ್ಧರಾಗಿ ಹೋಟೆಲ್ ಹೊರಗಡೆ ಅಲ್ಲಿ ಇಲ್ಲಿ ನಿಂತು ಪೋಸ್ ಕೊಟ್ಟು, 5.45ಕ್ಕೆ ಚೆಕ್ ಇನ್ ಮಾಡುವಾಗ ನಮ್ಮನ್ನೆಲ್ಲಾ ಚೆಕ್ ಮಾಡಿಸಿಕೊಂಡು ನಂತರ ಹ್ಯಾಂಡ್ ಬ್ಯಾಗುಗಳನ್ನು ಚಲಿಸುವ ಪಟ್ಟಿ ಮೇಲಿಟ್ಟು ಮುಂದೆ ಹೋದೆವು. ಬ್ಯಾಗ್ ಗಳು ಚೆಕ್ ಆಗಿ ಬರುತ್ತಿದ್ದವು. ನಮ್ಮ ನಮ್ಮ ಬ್ಯಾಗುಗಳನ್ನು ತೆಗೆದುಕೊಂಡು ಒಟ್ಟೊಟ್ಟಿಗೆ ಸರಿದು ನಿಂತೆವು.
ಅಷ್ಟರಲ್ಲೇ ಕಂಪ್ಯೂಟರ್ ಮುಂದೆ ಕುಳಿತ ವ್ಯಕ್ತಿ ಥಟ್ಟನೆ ಎದ್ದು ಬಂದು ಒಂದು ಬ್ಯಾಗ ಹಿಡಿದುಬಿಟ್ಟ. `ಹೂಜ್ ದಿಸ್ ಬ್ಯಾಗ್, ಒಪನ್ ಇಟ್’ ಎಂದು ತನ್ನದೆ ದಾಟಿಯಲ್ಲಿ ಗಡುಸಾಗಿ ಕೂಗತೊಡಗಿದ. ನಮಗೆಲ್ಲ ಗಾಬರಿ. ಮನು ಬಂದು ವಿಚಾರಿಸಿದರು. ಆತ ಆ ಬ್ಯಾಗಲ್ಲಿ ಏನೋ ಕಬ್ಬಿಣ ವಸ್ತು ಇದೆ. ಒಪನ್ ಮಾಡಿ ಎಂದ. ಆ ಬ್ಯಾಗ್ ನಮ್ಮ ಸಹಚರಿ ಒಬ್ಬರದಾಗಿತ್ತು. ‘ಅದರೊಳಗೇನೂ ಇಟ್ಟಿಲ್ಲ, ಏನೂ ಇಲ್ಲ’ ಎನ್ನುತ್ತಿರಬೇಕಾದರೆ ಭದ್ರತಾ ಸಿಬ್ಬಂದಿ ಪಕ್ಕಕ್ಕೆ ಆ ಬ್ಯಾಗನ್ನೊಯ್ದು ತೆಗೆಯುವಂತೆ ಹೇಳಿದ. ಅದರಲ್ಲಿ ಇದ್ದಬಿದ್ದುದನ್ನೆಲ್ಲಾ ಕಿತ್ತು ಹಾಕಿದಳು. ಏನು ಇಲ್ಲ ಎಂದಳು. ಆತ ನೇರ ಕರೆದೊಯ್ದು ಕಂಪ್ಯೂಟರ್ ಮುಂದೆ ನಿಲ್ಲಿಸಿದ. ಸ್ಕ್ರೀನ್ ಮೇಲೆ ಬ್ಯಾಗಿನ ನೆಗೆಟಿವ್ ಚಿತ್ರ ಇತ್ತು. ಎಲ್ಲವೂ ಪಾರದರ್ಶಕಗಳ ನಡುವೆ ಒಂದು ಚಾಕುವಿನಂತಹ ಆಕಾರ ಇತ್ತು. `ಅಲ್ಲಿ ನೋಡಿ ಅದು ಅ ಬ್ಯಾಗಿನಲ್ಲಿದೆ. ತೆಗೆದುಕೊಡಿ ಇಲ್ಲ ಬ್ಯಾಗ್ ಇಲ್ಲೆ ಬಿಟ್ಟು ಹೋಗಿ’ ಎಂದ. ಅವಳು ಗಡಬಡಿಸಿ ಮತ್ತೊಮ್ಮೆ ಕಿತ್ತು ಹಾಕಿ ಬಟ್ಟೆಯ ಸುತ್ತಿನ ನಡುವೆ ಇದ್ದ ಜಾಮ್ ಹಚ್ಚುವ ಚಮಚ ಹೊರ ತೆಗೆದುಕೊಟ್ಟಳು. `ಇದು ಇಲ್ಲಿ ಹೆಂಗ ಬಂತು ನಂಗ ಗೊತ್ತ ಇಲ್ಲ’ ಎನ್ನುತ್ತಿದ್ದಂತೆ ಭದ್ರತಾ ಸಿಬ್ಬಂದಿ ಅದನ್ನು ತೆಗೆದುಕೊಂಡು `ಪ್ಲೀಸ್ ಗೋ’ ಎಂದ.
ಎಲ್ಲರೂ ನಿರಾಳ ಉಸಿರುಬಿಟ್ಟು ಕಣ್ಣಲ್ಲೇ ಪರಸ್ಪರ ಮಾತನಾಡಿಕೊಳ್ಳುತ್ತ ಗ್ಲಾಸ್ ಹೌಸ್ ನಲ್ಲಿ ಬಂದು ಕುಳಿತೆವು. ಇನ್ನೂ ನಲವತ್ತೈದು ನಿಮಿಷ. ಏನು ಮಾಡೋದು? ಅನುಸೂಯ ಎಲ್ಲರೂ ನಡೆಯುವ, ಮಾತನಾಡುವ ರೀತಿಯನ್ನು ಅನುಕರಣೆ ಮಾಡಿ ತೋರಿಸಿದರು. ಅದರಲ್ಲೂ ಸರಸ್ವತಿ, ಸರೋಜಾ ಮತ್ತು ಲಾರಿಸರ್ ಅನುಕರಣೆಗಳು ಒಂಚೂರು ತಪ್ಪದಂಗೆ ಮಾಡಿದ್ದನ್ನು ನೋಡಿ ಎಲ್ಲರೂ ಹೊಟ್ಟೆ ಹುಣ್ಣಾಗುವಂತೆ ನಕ್ಕೆವು. ನಮ್ಮಂತೆಯೇ ಅಲ್ಲಿದ್ದ ಇತರ ಪ್ರಯಾಣಿಕರೂ ಕೂಡ ನಮ್ಮೊಂದಿಗೆ ನಕ್ಕರು. ನಮ್ಮ ವಿಮಾನ ಬರುವುದು ತಡವಾಯಿತು. ಏಳು ಗಂಟೆಗೆ ನಾನು ಎದ್ದು ಹೋಗಿ ಗಾಜಿಗೆ ಮುಖ ತಾಗಿಸಿ ಹೊರಗೆೆ ನೋಡುತ್ತ ನಿಂತೆ. ಮುಗಿಲ ತುಂಬ ಮೋಡ ಕವಿದಿತ್ತು. ಹಾಗಾಗಿ ಚಂದ್ರನೆಲ್ಲೋ ಅಡಗಿ ಕುಳಿತಿದ್ದ. ನಸುಗತ್ತಲಾಗುತ್ತಿತ್ತು. ಆ ಕತ್ತಲಲ್ಲಿ ಬೇರೆ-ಬೇರೆ ದಿಕ್ಕಿನಿಂದ ಬರ್ರನೇ ಏರುವ, ಇಳಿಯುವ ಮಿಂಚುಹುಳ (ವಿಮಾನ)ಗಳನ್ನು ನೋಡುತ್ತಲಿದ್ದೆ. ಸುಮಾರು 10-15 ನಿಮಿಷದ ಅವಧಿಯಲ್ಲಿ ಸುಮಾರು 20 ವಿಮಾನ ಭೂಸ್ಪರ್ಶಿಸಿದ್ದವು. ಅಷ್ಟರಲ್ಲೇ ಬಾನಿನಿಂದ ಭೂಮಿಯವರೆಗೆ ಒಂದು ಬೆಳ್ಳಿಯ ಛಡಿ ಛಕ್ಕನೇ ಮಿಂಚಿ, ಟಿಸಿಲೊಡೆದು ಮಾಯವಾಯಿತು. ಅದರ ಹಿಂದೆಯೇ ಜೋರಾಗಿ ಗುಡುಗು ಸಿಡಿಲುಗಳಿಂದ ಕೂಡಿದ ಮಳೆ ರಭಸವಾಗಿ ಸುರಿಯತೊಡಗಿತು.

ಅಸಾಧ್ಯ ಮಳೆ ನೋಡುತ್ತ ನಿಂತಿರಬೇಕಾದರೆ ಧ್ವನಿ ಬಿತ್ತರಗೊಳ್ಳತೊಡಗಿತು – `ಟರ್ಕಿಷ್ ಎರ್ ಲೈನ್ಸ್ T.K.716 ಬಂದು ನಿಂತಿದೆ. ಪ್ರಯಾಣಿಕರು. ಗಮನಿಸಬೇಕು’ ಎಂದು. ಸರಿ ಎಲ್ಲರೂ ವಿಮಾನದತ್ತ ಹೋಗುವಾಗ ವಿಮಾನ ಪ್ರವೇಶಿಸುವ ದಾರಿಯಲ್ಲಿ ನೀರಿನ ಜರಿಯೊಂದು ಓಡೋಡಿ ಬರುತ್ತಿತ್ತು. ಸಣ್ಣದಾದ ಉದ್ದನೆಯ ಹಾವಿನ ಹಾಗೆ ಇಳಿಜಾರಿನಲ್ಲಿ ಓಡಿ ಮತ್ತೆಲ್ಲೊ ಸಂಧಿಯೊಳಗೆ ತೂರಿ ಹೋಯಿತು. ಎಷ್ಟೇ ವಾಟರ್ ಟೈಟ್ ಎಂದರೂ ಹೀಗೂ ನೀರು ಒಳಬರುತ್ತಿದೆ ಉಗ್ರವಾದಿಗಳ ಹಾಗೆ ಎಂದುಕೊಂಡೆ ಮನಸ್ಸಿನಲ್ಲಿ. ನಿನ್ನೆಯ ಟಿಕೇಟ್ ಗಳಿಗೆ, ಇಂದು ಸೀಟ್ ಹೊಂದಾಣಿಕೆ ಮಾಡಿಕೊಟ್ಟಿದ್ದರಿಂದ ಎಲ್ಲರೂ ಎಲ್ಲೆಂದರಲ್ಲಿ ಹಂಚಿ ಹೋಗಿದ್ದೆವು. ನನ್ನ ಸೀಟ್ ನಂ.15 ‘A’ ‘ ಮುಂದೆಯೇ ಇತ್ತು. 39ನೇ ಸಾಲಿನವರೆಗೆ ಎಲ್ಲರೂ ಹರಡಿ ಹೋಗಿದ್ದರು. ಹೆಚ್ಚಾಗಿ ಎಲ್ಲರಿಗೂ ಕಿಟಕಿಗಳುಳ್ಳ ಸೀಟುಗಳೇ ಸಿಕ್ಕಿದ್ದವು. ನನ್ನ ಪಕ್ಕ ಒಬ್ಬ ಯುವಕನಿದ್ದ. ಆಚೆ ಸೀಟಲ್ಲಿ ಅನುಸೂಯ ಒಬ್ಬರೇ ಇದ್ದುದರಿಂದ ಆ ಯುವಕನಿಗೆ ವಿನಂತಿಸಿಕೊಂಡರು. ಆತ ಸಿಟು ಬಿಟ್ಟುಕೊಟ್ಟು ಅವರ ಸೀಟಿಗೆ ಹೋದ. ಸರಿಯಾಗಿ ಏಳು ಮೂವತ್ತೇಳಕ್ಕೆ ವಿಮಾನ ಹಿಂದೆ ಚಲಿಸಿ ತಿರುಗಿ ನಿಂತಿತು. ನನ್ನ ಸೀಟ್, ಮುಂದಿನ ರೆಕ್ಕೆಯ ಪಕ್ಕದಲ್ಲಿಯೇ ಇತ್ತು. ಮಳೆ ನಿಂತಿತ್ತು. ಮಳೆಯಲ್ಲಿ ನೆನೆದ ಸೂರ್ಯ ಮೆಲ್ಲನೇ ಮುಳುಗುತ್ತಿದ್ದ. ಆಕಾಶವೆಲ್ಲ ಸ್ವಲ್ಪ ಕೆಂಪಡರಿತ್ತು, ಬಹುಪಾಲು ಕಪ್ಪಾಗಿತ್ತು. ವಿಮಾನ ಸರಿಯುತ್ತ ಮುಂದೆ ಓಡಿ 7.58ಕ್ಕೆ ನೆಲ ತಳ್ಳಿ ಮೇಲಕ್ಕೆ ಹಾರಿತು.
ಅಂತೂ ಇಪ್ಪತ್ನಾಲ್ಕು ಗಂಟೆ ಇಪ್ಪತ್ತೆಂಟು ನಿಮಿಷ ಯಾವ ದೇಶಗಳ ಅನುಮತಿಯೂ ಇಲ್ಲದೇ, ವಿಮಾನ ನಿಲ್ದಾಣದ ಬಂಧನದಲ್ಲಿ ಕಳೆದು ಹೋಗಿತ್ತು. 11887 ಮೀ ಗರಿಷ್ಟ ಎತ್ತರದಲ್ಲಿರುವಾಗ ಮುಂದೆಲ್ಲ ಕಗ್ಗತ್ತಲು, ಹಿಂದೆ ಮುಗಿಲಂಚಿಗೆ ಕೆಂಡದ ಬೆಳಕು. ಅದರ ಮೇಲೆ ಬಂಗಾರದ ಬೆಳಕು. ಅದರ ಮೇಲೆ ನೀಲಾಕಾಶ! ಒಮ್ಮೆ ಹಿಂದೆ ಒಮ್ಮೆ ಮುಂದೆ ನೋಡುತ್ತಿದ್ದೆ. ಕೆಳ ನೋಡಿದರೆ ನಕ್ಷತ್ರಗಳು ವಲಸೆ ಬಂದಂತೆ, ನಕ್ಷತ್ರಗಳ ಜಾತ್ರೆ ನೆರೆದಂತೆ, ಮಿಂಚು ಚೆಲ್ಲಾಡಿದಂತೆ ದೀಪಗಳು ಲಕಲಕನೆ, ಫಳಫಳನೇ ಹೊಳೆಯುತ್ತಿದ್ದವು. ಒಂದು ಗಂಟೆಯ ನಂತರ ನೋಡಿದರೆ ನಕ್ಷತ್ರಗಳು ಆಕಾಶದಲ್ಲಿ ಹೊಳೆಯುತ್ತಿದ್ದವು. ಅಲ್ಲಿ ಮಳೆ ಇರಲಿಲ್ಲ. ಕತ್ತಲೆಯ ಸಾಮ್ರಾಜ್ಯಕ್ಕೆ ಚಂದ್ರಮನೇ ಚಕ್ರವರ್ತಿಯಾಗಿದ್ದ. ಅವನ ನೆರಳಲ್ಲಿ ನಕ್ಷತ್ರಗಳೂ ಮಿಣುಕುತ್ತಿದ್ದವು. ಅಂತೂ ನಮ್ಮ ದೇಶದೆಡೆಗೆ ಮುಖ ಮಾಡಿ ಪ್ರಯಾಣ ಸಾಗಿತ್ತು. ಕಣ್ಣುರೆಪ್ಪೆಗಳು ತೂಗತೊಡಗಿದವು. ಕಣ್ಣು ಮುಚ್ಚಿದೆ. ಈವರೆಗೆ ಕಳೆದ 12 ದಿನಗಳ ಅವಿಶ್ರಾಂತ ಪ್ರಯಾಣದ ಒಂದೊಂದು ದಿನಗಳೂ ಸ್ಮೃತಿ ಪಟಲದಲ್ಲಿ ಹಾಯ್ದು ಹೋದವು. ಭಾರತ ಸಮೀಪಿಸುತ್ತಿದ್ದಂತೆ ಮಾಹಿತಿ ಬಿತ್ತರಗೊಳ್ಳತೊಡಗಿತು.
ಕಣ್ಣು ಬಿಟ್ಟು ನೋಡಿದರೆ ಎದುರಿಗಿನ ಟಿ.ವಿ.ಯಲ್ಲಿ ಭಾರತೀಯ ಸಮಯ ಬೆಳಗಿನ 3.11 ನಿಮಿಷ. ಈಗ ಟೈಮ್ ಎಟ್ ಓರಿಜಿನ್ 12.41 ತೋರಿಸುತ್ತಿತ್ತು. ತಲುಪಲು ಅಂದಾಜು ಸಮಯ 1.10 ನಿಮಿಷ ಬೇಕಿತ್ತು. ಒಬ್ಬೊಬ್ಬರೇ ಏಳತೊಡಗಿದರು. ಸಣ್ಣಗೆ ಗಲಿಬಿಲಿ ಆರಂಭವಾಯಿತು. ನಂತರ ಹೊಸದಿಲ್ಲಿ (ಟರ್ಕಿಶ್ ನಲ್ಲಿ Yenidelhi) ಸಮೀಪಿಸುತ್ತಿರುವ ಮಾಹಿತಿ ಬಿತ್ತರವಾಯಿತು. ಎಲ್ಲರೂ ಬೆಲ್ಟ್ ಹಾಕಿಕೊಂಡು ಸಿದ್ಧರಾದರು. ಸರಿಯಾಗಿ 4.1 ನಿಮಿಷಕ್ಕೆ ಭೂ ಸ್ಪರ್ಶಿಸಿತು. ವಿಮಾನ ಪೂರ್ಣ ನಿಂತಾಗ 4.15 ನಿಮಿಷ. ಆಗ ಇಸ್ಥಾಂಬುಲ್ ನಲ್ಲಿ ಸಮಯ 10.45. ಲಗೇಜ್ ಬರುವ ಸ್ಥಳಕ್ಕೆ ಬಂದು ಟ್ರೋಲಿಯಲ್ಲಿ ಲಗೇಜ್ ತೆಗೆದುಕೊಂಡು ನಿಂತೆವು. ನನ್ನ ಬ್ಯಾಗೇಜ್ ಪೂರ್ಣ ತೊಯ್ದಿತ್ತು. ಮುಟ್ಟಿ ನೋಡಿದರೆ ಹಸಿ ಹಸಿ. ಲಾರಿಸರ್ ದೊಡ್ಡ V.I.P. ಸೂಟ್ಕೇಸ್ ನೊಳಗಿನಿಂದ ಹನಿ ಹನಿ ನೀರು ತೊಟ್ಟಿಕ್ಕಿ ಸಣ್ಣಗೆ ಹರಿಯತೊಡಗಿತು. ಒಳಗಿನ ಸಾಮಾನುಗಳೆಲ್ಲ ಏನೇನಾಗಿದ್ದವೋ ಅವುಗಳಿಗೆ ಗೊತ್ತು. ನನ್ನ ಸೂಟ್ಕೇಸ್ ನಲ್ಲಿ ನೀರು ಇಂಗಿತ್ತು ವಾಟರ್ ಟೈಟ್ ವಿಮಾನದೊಳಗೆ ನೀರು ಎಲ್ಲಿಂದ ಬಂದಿತ್ತೋ? ಸರಿ ಎಲ್ಲರೂ ಮತ್ತೆ ಹಣ ವಿನಿಮಯ ಮಾಡಿಕೊಂಡೆವು. ಕೊನೆಗೆ ನನಗೆ ತಿರುಗಿ ಬಂದ ಭಾರತೀಯ ಹಣ, ಸಾವಿರದಾ ಎರಡ್ನೂರಾ ಇಪ್ಪತ್ತೈದು ರೂಪಾಯಿಗಳು. ಮೊಬೈಲಿಗೆ ಜೀವ ತುಂಬಿ ಅಲ್ಲಿಂದ 6 ಗಂಟೆಗೆ ಸಂಗಾತಿಗೆ ಫೋನ್ ಮಾಡಿದೆ.
ಮಳೆರಾಯನ ಸ್ವಾಗತ
ಈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನಾವು ಹೋಗಬೇಕಾಗಿದ್ದು ನಿಜಾಮುದ್ದಿನ್ ರೈಲು ನಿಲ್ದಾಣಕ್ಕೆ. ಯಾರನ್ಯಾರೂ ಬಿಳ್ಕೊಡುವ ಮನಸ್ಥಿತಿಯಲ್ಲಿ ಇರಲಿಲ್ಲ. ಅಲ್ಲಿಂದ 2 ಟ್ಯಾಕ್ಸಿ ಮಾಡಿಕೊಂಡು ಏಳು ಜನ ನೇರವಾಗಿ ರೈಲು ನಿಲ್ದಾಣಕ್ಕೆ ಬಂದೆವು. ಆಗ 7.45. ನಮ್ಮ ರೈಲು 9 ಗಂಟೆಗಿತ್ತು. ಕೂಲಿಗಳನ್ನು ಗೊತ್ತುಮಾಡಿ ಪ್ಲಾಟ್ಫಾರ್ಮ ಹುಡುಕಿಕೊಂಡು ಬಂದು ನಿಂತೆವು. ಆಗ ದೆಹಲಿಯಲ್ಲಿ ಸಣ್ಣಗೆ ಮಳೆ. ತಂಪಿನ ಅನುಭೂತಿಯಾಗತೊಡಗಿತು. ಮೆಲ್ಲನೇ ಶಾಲ್, ಸ್ವೆಟರ್ಗಳೆಲ್ಲ ಹೊರ ಬಂದವು. ಆಗ ಮಹಾರಾಷ್ಟ್ರದಲ್ಲಿ ಭಾರಿ ಮಳೆಯಾಗಿ ಬಹುಪಾಲು ರೈಲುಗಳ ಹಾದಿ ಬದಲಿಸಿದ್ದರು. ‘ಪಾಪಿ ಸಮುದ್ರಕ್ಕೆ ಹೋದರು, ನೀರು ಮೊಳಕಾಲವರೆಗೂ’ ಎನ್ನುವಂತೆ ಕುಳಿತು ಅಳೋಣವೆನಿಸಿ ಬಿಟ್ಟಿತು. ಜನರೆಲ್ಲ ಗಡಿಬಿಡಿ ಚಿಲಿಪಿಲಿ ನಡೆಸಿದ್ದರು. ನಮ್ಮ ರೈಲು ಲೇಟ್ ಆಗುತ್ತಂತೆ; ರೂಟ್ ಚೆಂಜ್ ಆಗಿದೆಯಂತೆ. ಅಂತೆ ಕಂತೆಗಳ ಕೇಳಿ ತಲೆ ‘ಗಿರ್ರ್’ ಎಂದಿತು.
`ಮಂಗಲ ಲಕ್ಷದ್ವೀಪ ಎಕ್ಸ್ಪ್ರೆಸ್’ ರೈಲಿನ ಕತೆ ಸರಿಯಾಗಿ ತಿಳಿಯದಾಯಿತು. ಕಾರ್ಯಾಲಯಕ್ಕೆ ಹೋಗಿ ವಿಚಾರಿಸೋಣವೆಂದರೆ ಅಲ್ಲಿನ ಜನದಟ್ಟಣೆ ಹೆದರಿಕೆ ಬರುವಂತಿತ್ತು. ಚಿಟಿಪಿಟಿ ಮಳೆ ಬೇರೆ. ಹೆಂಗ್ಹೆಂಗೋ ಹೋಗಿ ಕೇಳಿದರೆ `ಮಂಗಲ ಲಕ್ಷದ್ವೀಪ ರೈಲು ರೀಶ್ಯೆಡುಲ್ ಆಗಿದೆ, ಅಲ್ಲಿ ನೋಡಿ’ ಎಂದು ಗೋಡೆ ಮೇಲಿನ ಪಟ್ಟಿ ತೋರಿಸಿದ. ಅಬ್ಬಾ! ಸತ್ವಪರೀಕ್ಷೆ ಎಂದರೆ ಇದೇ ಏನೋ? ಈ ಒಂದೇ ರೈಲು ರಿಶ್ಯೆಡುಲ್ ಆಗಿದೆ ಮಧ್ಯಾಹ್ನ 1 ಗಂಟೆಗೆ. ಒಂದು ಕ್ಷಣ ಎಲ್ಲರ ವಿಚಾರ ಶಕ್ತಿಯು ನಿಂತು ಹೋದಂತಾಯಿತು. ಕಿಚಿಪಿಚಿ ಎನ್ನುವ ನಿಲ್ದಾಣ. ಸ್ನಾನ ಮಾಡಿ ಬಟ್ಟೆ ಬದಲಿಸಿ ಮೂರು ದಿನವಾಗಿತ್ತು. ಇಂದು ನಾಲ್ಕನೆಯ ದಿನ. ಲೇಡಿಸ್ ರೂಮಿಗೆ ಹೋಗಿ ಸ್ನಾನ ಮಾಡೋಣವೆಂದುಕೊಂಡು ನಾಲ್ಕು ಜನ ಬಟ್ಟೆ, ಬ್ರಶ್ ಪೆಸ್ಟ ತೆಗೆದುಕೊಂಡು, ಮತ್ತೊಮ್ಮೆ ಏರಿ, ಇಳಿದು ಹೋಗಿ ಒಳಗೆ ನೋಡಿದರೆ ಅದು ರಣರಂಗ! ಹೊಲಸು ಹಸನುಗಳಿಗೆ ಅಂತರವೇ ಇಲ್ಲದಂತೆ ಜನ ಅದನ್ನು ಬಳಸುತ್ತಿದ್ದರು. `ಇಲ್ಲಿ ಬೇಡ ಮೇಲೊಂದು ಅದ ಚಲೋ ಇರ್ತದ’ ಎಂದರು. ಮೇಲೆ ಹೋದೆವು. ಅದೋ ಕರ್ಮಕಾಂಡ. ಹೇಳಿದರೆ ಶಬ್ಧಗಳೂ ಹೊಲಸಾಗುತ್ತವೆ. ಅಲ್ಲಿ ಇಡೀ ಬಾಥ್ರೂಮೇ ಟಾಯ್ಲೆಟ್ ಆಗಿತ್ತು.
ಹೊರಗಿದ್ದ ಸಿಂಕನಲ್ಲಿ ಹಲ್ಲುಜ್ಜಿ ಹೊರಬಂದೆವು. ಕೆಳಗಿಳಿದು ಇಡ್ಲಿ ತಿಂದೆವು. ಸರೋಜ, ಸುಮನ್, ಮತ್ತು ಸುನಂದಾ ಅವರುಗಳಿಗೆ ಪ್ಯಾಕ್ ಮಾಡಿಸಿಕೊಂಡು ಬಂದೆವು. ಅಲ್ಲಿ ಎಲ್ಲರ ಹೊರಲಾರದ ಒಂದೋ ಎರಡೋ ಲಗೇಜ್ಗಳು, ಅಲ್ಲಿಯೇ ಕುಳಿತುಕೊಳ್ಳೋಣವೆಂದು ಪೇಪರ್ ಹಾಕಿ ಕುಳಿತೆವು. ನಿಜಾಮುದ್ದಿನ್ ರೈಲು ನಿಲ್ದಾಣದಲ್ಲಿ ನೊಣಗಳದ್ದೇ ಸಾಮ್ರಾಜ್ಯ, ಭಿಕ್ಷುಕರದ್ದೇ ಕಾರುಬಾರು. ಎಲ್ಲಿ ನೋಡಿದರೂ ಕಿಚಿಪಿಚಿ. ಅಲ್ಲಿ ಕುಳಿತು ಯಾರೂ ತಿನ್ನಲಿಲ್ಲ. ಬಿಸ್ಕಿಟ್ ತಿಂದು ನೀರು ಕುಡಿದೆವು ಮತ್ತು ಅಲ್ಲಿಯೇ ಮಾರ್ಕೆಟ್ಟಿಗೆ ಹೋಗಿ ಹೆಣ್ಣುಮಕ್ಕಳಿಗೆ ಬಟ್ಟೆ ಖರೀದಿಸಿದೆ. ಒಂದು ಗಂಟೆಗೆ ಸರಿಯಾಗಿ ಮರಳಿ ಬಂದರೆ ಮತ್ತೊಂದು ಆಘಾತ. ರೈಲು ಒಂದು ಗಂಟೆಗೆ ಬರುವ ಬದಲು ಮೂರು ಗಂಟೆಗೆ ಬರುವುದಾಗಿತ್ತು. ಎಲ್ಲರೂ ತಲೆಯ ಮೇಲೆ ಕೈ ಹೊತ್ತು ಕುಳಿತೆವು. ಅಲ್ಲೆಲ್ಲ ಅಡ್ಡಾಡಿ ಅನುಭವವಿದ್ದ ಅನುಸೂಯಾ `ನಾ ಊಟ ಕಟ್ಟಿಸಿಕೊಂಡು ಬರ್ತೀನಿ’ ಎಂದು ಸರೋಜನ್ನ ಕರೆದುಕೊಂಡು ಪ್ರವೇಶ ದ್ವಾರದ ಕಡೆ ಹೋಗಿ, ಬಿಸಿ ಬಿಸಿ ಅನ್ನ ಸಾರು ಮಾಡಿಸಿಕೊಂಡು, ಪ್ಯಾಕ್ ಮಾಡಿಸಿ ತಂದರು.

ಮೂರು ಗಂಟೆ ಆಗುತ್ತಿತ್ತು. ನಾವೆಲ್ಲರು ಸಿದ್ಧರಾದೆವು. ಆದರೆ ರೈಲು ಬಂದದ್ದು 4 ಗಂಟೆಗೆ. ಅಂತೂ ರೈಲು ಏರಿದೆವು. ಐದುವರೆಗೆ ಅನ್ನ ಹೊಟ್ಟೆ ಸೇರಿತು. ಈ ರೈಲು ಅತಿ ಉದ್ದದ ದಾರಿ ಚಲಿಸುವ ಮತ್ತು ಅತಿ ವೇಗದ ರೈಲು. ಈ ಮೂಲಕ ನಾವು ಗೋವಾಕ್ಕೆ ಹೋಗಿ ಅಲ್ಲಿಂದ ಟ್ಯಾಕ್ಸಿ ಮೂಲಕ ಧಾರವಾಡಕ್ಕೆ ಹೋಗುವ ಯೋಜನೆ ಹಾಕಿ ಈ ರೈಲಿನ ಟಿಕೆಟ್ ಕಾಯ್ದಿರಿಸಿದ್ದೆವು. ದೆಹಲಿಯಿಂದ ಗೋವಾ ತಲುಪಲು 18 ಗಂಟೆಗಳು ಸಾಕಂತೆ. 28 ರ ಬೆಳಿಗ್ಗೆ 9ರಿಂದ 29ರ ಬೆಳಗಿನ 3 ಗಂಟೆಗೆ ಗೋವಾ, ಅಲ್ಲಿಂದ ಟ್ಯಾಕ್ಸಿ ಹಿಡಿದು ಹೋದರೆ ಎಷ್ಟೇ ಲೇಟೆಂದರೂ 29ರ ಬೆಳಿಗ್ಗೆ 12 ಗಂಟೆಗೆ ಧಾರವಾಡದಲ್ಲಿರ್ತೀವಿ ಎಂಬುದು ನಮ್ಮ ಅಂದಾಜಾಗಿತ್ತು. ಇಲ್ಲಿ ಅದ್ಯಾವುದೂ ಆಗಿರಲ್ಲ. ಮಹಾರಾಷ್ಟ್ರದ ರತ್ನಾಗಿರಿಯಲ್ಲಿ ಅತೀ ಮಳೆಯಿಂದ ಹಳಿಗಳು ಕಿತ್ತು ಹೋಗಿ ಅಲ್ಲಿಂದ ಮಿರಜ ಬೆಳಗಾವಿ ಮಾರ್ಗದಿಂದ ಹೋಗುವುದಾಗಿ ಗುಲ್ಲೆದ್ದಿತು. ಪನವೆಲ್ ವರೆಗೆ ಹೇಗೆ ಬಂತೋ? ಅಲ್ಲಿಂದ ಮಿರಜವರೆಗೆ ಹೇಗೆ ಬಂತೋ? ದಾರಿಗಳು ಒಂದೂ ಗೊತ್ತಾಗಲಿಲ್ಲ. ಮಳೆಯ ರಾತ್ರಿ ಬೇರೆ! ಕ್ರಾಸಿಂಗ್ ಗಳು ಇದ್ದಲ್ಲಿ ಗಂಟೆ ಗಟ್ಟಲೆ ರೈಲು ನಿಂತಿರುತ್ತಿತ್ತು. ಅಂತೂ ಬೆಳಗಾವಿ ಮಾರ್ಗವಾಗಿ ಹೋಗುವುದಾದರೆ ಬೆಳಗಾವಿಗೆ ಇಳಿದರಾಯಿತು ಎಂದು ನಿರ್ಧರಿಸಿ ಎಲ್ಲರೂ ಬೆಳಗಾವಿ ನಿಲ್ದಾಣದಲ್ಲಿ ಇಳಿದಾಗ 30 ರ ಬೆಳಗಿನ 8 ಗಂಟೆ! 18 ತಾಸಿನಲ್ಲಿ ಗೋವಾ ತಲುಪಬೇಕಾದ ರೈಲು ಬೆಳಗಾವಿ ತಲುಪಲು 40 ತಾಸು ತೆಗೆದುಕೊಂಡಿತ್ತು. ಧಾರವಾಡ ಹುಬ್ಬಳ್ಳಿಗೆ ಬರುವ ಐದು ಜನ ಟ್ಯಾಕ್ಸಿ ಹಿಡಿದು, ಲಗೇಜ್ ಏರಿಸಿ, ಇಳಿಸಿ ಬೆಳಗಾವಿಯ ಮುಖ್ಯ ಬಸ್ ನಿಲ್ದಾಣಕ್ಕೆ ಬಂದು ಲಗೇಜ್ ಒಂದೆಡೆ ಇರಿಸಿ ಲಘು ಉಪಹಾರ ಮಾಡಿ ಮತ್ತೆ, ಮಣಭಾರ ಎಳೆದು, ಏರಿಸಿ ಬಸ್ ಮೂಲಕ ಧಾರವಾಡ ತಲುಪಿದಾಗ ಜುಲೈ 30ರ ಸಂಜೆ 3 ಗಂಟೆಯಾಗಿತ್ತು.
ಮನೆ ಮುಟ್ಟುತ್ತೇವೆಯೋ ಇಲ್ವೋ? ಎಂಬ ಆತಂಕ ಟರ್ಕಿ, ಇಜಿಪ್ತಗಳ ನೆನಪನ್ನು ಮರೆಯಿಸಿಬಿಟ್ಟಿತ್ತು. ಉದ್ದೇಶಿತವಾದ ಪ್ರಯಾಣ, ಅನುದ್ದೇಶಿತ ಪಯಣದಲ್ಲಿ ವಿಲೀನವಾಗಿ ಸರಿಯಾಗಿ ಹದಿನೈದು ದಿನದ ಬಳಿಕ ಮನೆ ಸೇರಿ 24 ರಂದು ಹಾಕಿದ ಬಟ್ಟೆಯನ್ನು 30ರ ಸಂಜೆ ಕಳಚಿ ನೆನೆಯಲ್ಲಿಟ್ಟು, ಅಷ್ಟೂ ಗಲೀಜು ತೊಳೆಯಲು ಅಡಿಯಿಂದ ಮುಡಿಯವರೆಗೆ ತಿಕ್ಕಿ ತಿಕ್ಕಿ ಸ್ನಾನ ಮಾಡಿ ಮೊದಲು ಹೊಟ್ಟೆ ತುಂಬಾ ರೊಟ್ಟಿ ತಿಂದೆ. ಈ ಹದಿನೈದು ದಿನಗಳ ಸುದೀರ್ಘ ಮತ್ತು ವೈವಿಧ್ಯಮಯ ಪ್ರಯಾಣದಲ್ಲಿ ಆದ ಒಂದು ಮಹತ್ತರ ಬದಲಾವಣೆ ಎಂದರೆ ನಂದಂತೂ 5 ಕಿಲೋ ತೂಕ ಕಡಿಮೆಯಾಗಿತ್ತು.

‍ಲೇಖಕರು avadhi

24 March, 2014

ನಿಮಗೆ ಇವೂ ಇಷ್ಟವಾಗಬಹುದು…

ರಾಜಸ್ಥಾನವೆಂಬ ಸ್ವರ್ಗದ ತುಣುಕು : ಖ್ವಾಜಾ ಮೊಯಿನುದ್ದೀನ್ ಚಿಸ್ತಿ ಸನ್ನಿಧಿಯಲ್ಲಿ

ರಾಜಸ್ಥಾನವೆಂಬ ಸ್ವರ್ಗದ ತುಣುಕು : ಮತ್ತೆ ಮತ್ತೆ ಅದೇ ಜಾಗದಲ್ಲಿ ನಿಲ್ಲುತ್ತಿತ್ತು ಖಾಲಿ ಬೈಕ್

1 Comment

  1. Rakshith Gowda

    Nimma Pravasa Kathana bahala sogasagittu!! Samkshipthavada vivarane mattu saravada sahitya;

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading