ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನೈಲ್ ನದಿಯ ಮಡಿಲಲ್ಲಿ : ಕೈರೋದಲ್ಲಿ ರಾಧೆ ಮತ್ತು ಕೃಷ್ಣರ ಜಗಳ!

(ಇಲ್ಲಿಯವರೆಗೆ…)

ಸರಿಯಾಗಿ ಒಂದುಗಂಟೆ ಮೂರು ನಿಮಿಷಕ್ಕೆ ವಿಮಾನ ಭೂಸ್ಪರ್ಶಿಸಿತ್ತು. ಕ್ರಮಿಸಲು ಕರಾರುವಕ್ಕಾಗಿ ಒಂದು ಗಂಟೆ ಐವತ್ಮೂರು ನಿಮಿಷ ಸಮಯ ತೆಗೆದುಕೊಂಡರೆ ಕ್ರಮಿಸಿದ ದೂರ ಸುಮಾರು 2000 ಕಿ.ಮೀ. ಟರ್ಕಿಯ ಸಮಯಕ್ಕೂ ಕೈರೋ ಸಮಯಕ್ಕೂ ಕೇವಲ 12 ನಿಮಿಷಗಳ ಅಂತರವಿತ್ತು. ಇದುವರೆಗೆ ಟರ್ಕಿಯಲ್ಲಿನ ಮೂರೂ ದಿನಗಳ ಕೆಂಪು ಬಿಳಿ ಮೊಗದ, ಬಣ್ಣಗಳಿಂದ, ವರ್ಗಿಕರಿಸಲು ಸಾಧ್ಯವೇ ಇಲ್ಲದಂತ ಹಾಗೂ ಭಾರತೀಯರಿಗಿಂತ ಬಹಳ ಭಿನ್ನವಾದ ಸೌಂದರ್ಯ ಹೊಂದಿದ ಜನರನ್ನೇ ನೋಡಿದ್ದಾಗಿತ್ತು. ಕೈರೋ ವಿಮಾನ ನಿಲ್ದಾಣದಲ್ಲಿ ಭಾರತೀಯರಿಗಿಂತ ಎತ್ತರ ನಿಲುವಿನ ಆದರೆ, ನಮ್ಮಂಥದ್ದೆ (ಶುಭ್ರತೆ ಹೆಚ್ಚಿರುವ) ಬಣ್ಣ, ರೂಪವಿರುವ ಜನರನ್ನು ಕಂಡು `ಹೆಯ್ ನಮ್ಮಂಥವರ ಅದಾರ ನೋಡಿಲ್ಲಿ’ ಎಂದೆ. ಸರೋಜ `ಏನೋ ಒಂಥರ ಸಮಾಧಾನ ಅನಿಸ್ತೈತ್ಯಲ್ಲ’ ಎಂದಳು. ನಮ್ಮ ದೇಶದಲ್ಲಿ ಕಾಲಿಟ್ಟಂತೆ, ನಮ್ಮ ಜನರ ನಡುವೆ ಇದ್ದಂತೆ ಅನುಭವ.
ಮಿ|| ವಾಗಿ ಮಾರ್ಗದರ್ಶಿ , ಮಿ|| ಹನ್ನು ಕೋಚ್ ಡ್ರೈವರ್ ನಮ್ಮನ್ನು ಸ್ವಾಗತಿಸಿದರು. ಅದೇ ಟೂರಿಜಂ ಕೋಚಲ್ಲಿ ಕರೆದೊಯ್ಯುತ್ತಾ ಬಿಸ್ಲೇರಿ ಬಾಟಲ್ ಕೊಟ್ಟು, ಮೈಕ್ ಹಿಡಿದು ವಾಗಿ ಇಜಿಪ್ತಿನ ಪರಿಚಯ ಮಾಡಿಕೊಡತೊಡಗಿದರು. ಇವರ ಉಚ್ಛಾರಣೆಯೂ ಕೊರೈಗಿಂತ ಸ್ವಲ್ಪ ಭಿನ್ನವಾದರೂ 25% ಮಾತ್ರ ಅರ್ಥವಾಗುತ್ತಿತ್ತು. ಏಷ್ಯಾ ಅತ್ಯಂತ ದೊಡ್ಡ, ಅಪೂರ್ವವಾದ ಭೂಖಂಡವಾದರೆ ಆಫ್ರಿಕಾ ಎರಡನೆಯ ದೊಡ್ಡ ಭೂಖಂಡ. ಈ ಖಂಡದ ಉತ್ತರದಲ್ಲಿ ಮೆಡಿಟರೇನಿಯನ್ ಸಮುದ್ರ, ಪಶ್ಚಿಮದಲ್ಲಿ ಅಟ್ಲಾಂಟಿಕ್ ಸಾಗರ, ದಕ್ಷಿಣ ಮತ್ತು ಪೂರ್ವಗಳಲ್ಲಿ ಹಿಂದೂ ಮಹಾಸಾಗರ ಇವೆ. ಇವು ಈ ಖಂಡದ ಮೇರೆಗಳು. ಸೂಯೆಜ್ ಕಾಲುವೆ ಮತ್ತು ಕೆಂಪು ಸಮುದ್ರ. ಆಫ್ರಿಕಾ ಖಂಡವನ್ನು ಏಷ್ಯಾ ಖಂಡದಿಂದ ಬೇರ್ಪಡಿಸಿದರೆ, ಜಿಬ್ರಾಲ್ಟರ್ ಸಂಧಿ ಮತ್ತು ಮೆಡಿಟರೆನಿಯನ್ ಸಮುದ್ರ ಯುರೋಪ್ ಮತ್ತು ಆಫ್ರಿಕಾ ಖಂಡಗಳನ್ನು ಬೇರೆ ಮಾಡುತ್ತವೆ. ಪ್ರಧಾನ ಅಕ್ಷಾಂಶಗಳಲ್ಲಿ ಸಮಭಾಜಕ ವೃತ್ತವು ಆಫ್ರಿಕಾ ಖಂಡದ ಪ್ರಧಾನ ಮಧ್ಯ ಭಾಗದಲ್ಲಿ, ಕರ್ಕಟಕ ಸಂಕ್ರಾಂತಿ ವೃತ್ತವು ಈ ಖಂಡದ ಉತ್ತರ ಭಾಗದಲ್ಲಿ ಮತ್ತು ಮಕರ ಸಂಕ್ರಾಂತಿ ವೃತ್ತವು ದಕ್ಷಿಣ ಭಾಗದಲ್ಲಿಯೂ ಹಾದು ಹೋಗುತ್ತದೆ. ಹೀಗೆ ಮೂರೂ ವೃತ್ತಗಳು ಹಾಯ್ದು ಹೋಗುವ ಖಂಡ ಪ್ರಪಂಚದಲ್ಲಿ ಇದೊಂದೆ.
ನೈಲ್ ಇಜಿಪ್ತ್ ಜನರ ಜೀವನದಿ. ಪ್ರಪಂಚದಲ್ಲಿಯೆ ಅತೀ ಉದ್ದವಾದ ನದಿಗಳಲ್ಲೊಂದು. ದಕ್ಷಿಣದಿಂದ ಉತ್ತರಕ್ಕೆ ಸುಮಾರು 600 ಮೈಲು (970 ಕಿ.ಮೀ) ಉದ್ದವಿದೆ. ಇಜಿಪ್ತಿನಲ್ಲಿ ಮೆಂಫಿಸ್ ಪಟ್ಟಣ ಬರುತ್ತಿದ್ದಂತೆ ಕವಲೊಡೆಯುತ್ತದೆ. ಇಜಿಪ್ತ್ ನೈಲ್ ನದಿಯ ವರಪ್ರಸಾದ. ಇದು ಆಫ್ರಿಕಾದ ಈಶಾನ್ಯ ಭಾಗದಲ್ಲಿದೆ. ಭಾರತದಂತೆ ಇಜಿಪ್ತ್ ಕೂಡಾ ಪ್ರಮುಖ ಪ್ರಾಚೀನ ನಾಗರಿಕತೆಯುಳ್ಳ ದೇಶ; ಪ್ರಾಚೀನ ಸಭ್ಯತೆಯ ದೇಶ. ಮೆಡಿಟರೆನಿಯನ್ ಸಮುದ್ರ ಮತ್ತು ಕೆಂಪು ಸಮುದ್ರಗಳಿಗೆ ಮಧ್ಯ ನಿರ್ಮಿಸಲಾಗಿರುವ ಸೂಯೆಜ್ ಕಾಲುವೆ ಇಜಿಪ್ತನ್ನು ಏಷ್ಯಾಕ್ಕೆ ಜೋಡಿಸುವ ಸಂಪರ್ಕ ಕೊಂಡಿಯಾಗಿದೆ. ಕಾಲುವೆಯು ಭಾರತ ಮತ್ತು ಯುರೋಪಿಗಿರುವ ದೂರವನ್ನು 6,000 ಕಿ.ಮೀ ಗಳಷ್ಟು ಕಡಿಮೆ ಮಾಡಿದೆ. ಈ ದೇಶ ಹಳೆಯ ಪ್ರಪಂಚದ ಹೆದ್ದಾರಿಗಳ ಕೇಂದ್ರದಲ್ಲಿದೆ.
ಕೈರೋ ಇಜಿಪ್ತ್ ದೇಶದ ರಾಜಧಾನಿ. ಇಜಿಪ್ತ 23 ಜುಲೈ 1952ರಲ್ಲಿ ಗಣತಂತ್ರ ದೇಶವಾಯಿತು. (ಅರಬ್ ಗಣರಾಜ್ಯದ ರಾಜಧಾನಿಯೂ ಇದೇ ಆಗಿತ್ತು.) ಇದು ಆಫ್ರಿಕಾ ಖಂಡದ ಅತಿದೊಡ್ಡ ನಗರ. ಮಧ್ಯ ಪ್ರಾಚ್ಯದ ಪ್ರಮುಖವಾದ ಕೇಂದ್ರ. ಒಂದು ಕಡೆ ಪ್ರಪಂಚದ ಪ್ರಸಿದ್ಧ ನದಿಗಳಲ್ಲೊಂದಾದ ನೈಲ್, ಮತ್ತೊಂದು ಕಡೆ ಏನೂ ಬೆಳೆಯದ ಲಿಬಿಯಾ ಮರುಭೂಮಿ; ಮಧ್ಯದಲ್ಲಿ ಹಳತು-ಹೊಸತುಗಳು ಸಂಧಿಸುವ ನಗರ ಕೈರೋ. ಇಲ್ಲಿ ಪೂರ್ವ ಪಶ್ಚಿಮಗಳ ಸಂಗಮವಾಗಿದೆ. ಇದರ ವಿಸ್ತೀರ್ಣ 217 ಚ.ಕಿ.ಮೀ, ಜನಸಂಖ್ಯೆ ಸುಮಾರು 30 ಲಕ್ಷ. ಅದರಲ್ಲಿ 60% ಮುಸ್ಲಿಂರು, 10% ಯಹೂದಿಗಳು, 30% ಕ್ರಿಶ್ಚಿಯನ್ನರು. ಇಲ್ಲಿ ಅರಬ್ಬಿ, ಫ್ರೆಂಚ್ ಮತ್ತು ಇಂಗ್ಲೀಷ್ ಭಾಷೆಗಳನ್ನು ಬಳಸುತ್ತಾರೆ.
ಕೈರೋ ಸಂಸ್ಕೃತಿ, ಕಲೆಗಳಿಗೆ ಬೀಡು. ಗ್ರಂಥಾಲಯ, ವಸ್ತು ಸಂಗ್ರಹಾಲಯ ಮತ್ತು ಮಸೀದಿಗಳ ನಗರ. ಪ್ರಪಂಚದ ಪುರಾತನ ಏಳು ಅದ್ಭುತಗಳಲ್ಲಿ ಒಂದಾದ ಪಿರ್ಯಾಮಿಡ್ಡುಗಳಿರುವುದು, ಅರ್ಧ ಮಾನವ, ಅರ್ಧ ಸಿಂಹದ ದೇಹ ಹೊಂದಿರುವ ವಿಚಿತ್ರ ಸ್ಪಿಂಕ್ಸ್ ವಿಗ್ರಹ ಇರುವುದು ಇಲ್ಲಿಯೆ. ಹಳೆಯ ನಗರದಲ್ಲಿ ಸುಮಾರು 365 ಪ್ರಾಚೀನ ಮಸೀದಿಗಳಿವೆ. ಇದಲ್ಲದೆ ಇತಿಹಾಸ ಪ್ರಸಿದ್ಧವಾದ ಹಲವಾರು ಕಟ್ಟಡಗಳಿವೆ. ಕೈರೋದಲ್ಲಿ ನಾಲ್ಕು ವಿಶ್ವವಿದ್ಯಾಲಯಗಳಿದ್ದು, ಅವುಗಳಲ್ಲಿ ಅಲ್ ಅಝರ್ ಹತ್ತನೆಯ ಶತಮಾನದಲ್ಲಿಯೆ ಸ್ಥಾಪಿತವಾದ ಪ್ರಪಂಚದ ಅತ್ಯಂತ ಪ್ರಾಚೀನ ಮತ್ತು ಪ್ರಖ್ಯಾತ ವಿಶ್ವ ವಿದ್ಯಾಲಯ. ಅಲೆಗ್ಸಾಂಡ್ರಿಯಾ ಇಜಿಪ್ತಿನ 2ನೇ ದೊಡ್ಡ ನಗರ ಮತ್ತು ದೊಡ್ಡ ವ್ಯಾಪಾರ ಕೇಂದ್ರ ಹಾಗೂ ಬಂದರು. ದೇಶದ ಆಮದು ರಪ್ತು ನಡೆಯುವುದು ಈ ಬಂದರಿನ ಮೂಲಕವೇ. ಇಜಿಪ್ತಿನಲ್ಲಿ ದೊರಕುವಷ್ಟು ಅವಶೇಷಗಳು ಇನ್ನೆಲ್ಲಿಯೂ ದೊರಕುವುದಿಲ್ಲ.
ನಮ್ಮ ಕೋಚ್, ಹೋಟೆಲ್ `ಗ್ರೇಟ್ ಪಿರ್ಯಾಮಿಡ್’ ಇರುವ ಕಡೆಗೆ ಬಲಕ್ಕೆ ತಿರುಗಿದ್ದೆ ತಡ ಮತ್ತೊಮ್ಮೆ ಕಣ್ಣುಗಳು ತಟಸ್ಥವಾದವು. ಅದು ಆಕಾಶದೆತ್ತರಕ್ಕೆ ಚಾಚಿನಿಂತ, ಪ್ರಾಚೀನ ಜಗತ್ತಿನ ಏಳು ಅದ್ಭುತಗಳಲ್ಲಿ ಒಂದಾದ ಪಿರ್ಯಾಮಿಡ್! ಈ ಪಿರ್ಯಾಮಿಡ್ಗಳಿಗೆ ಎದುರಾಗಿರುವ, ಭಾರತೀಯ ಊಟ ಸಿಗುವ `ಗ್ರೇಟ್ ಪಿರ್ಯಾಮಿಡ್’ ಹೋಟೆಲಿಗೆ ಬಂದೆವು. ಅಲ್ಲಿ ಸಾಲಾಗಿ 5 ಹೋಟೆಲುಗಳು. ಅವುಗಳ ಮುಂದಿನ ಇಪ್ಪತ್ತು ಅಡಿ ಉದ್ದದ ಜಾಗಕ್ಕೆ ಸುತ್ತಲೂ ಅರ್ಧ ಅಡಿ ಅಗಲದ ಹರಿವು, ಮಧ್ಯದಲ್ಲಿ ಸುಮಾರು 10 ಒಂಟೆಗಳನ್ನು ಕಟ್ಟಲಾಗಿತ್ತು. ಹಳೆಯ ಕಟ್ಟಡ, ನವೀಕರಣದ ಭರಾಟೆಯಲ್ಲಿ ಏನೋ ಆಗಿತ್ತು. ಅಲ್ಲಿ ಎಲ್ಲರೂ ಮುಸ್ಲಿಂ ಜನರೇ. ನಮ್ಮನ್ನು ಕರೆದೊಯ್ಯಲು ಇಬ್ಬರು ತಲೆಮುಚ್ಚುವಂತೆ ಬಟ್ಟೆ ಕಟ್ಟಿಕೊಂಡ ಹುಡುಗಿಯರು ಬಂದರು. ಕೈಯಲ್ಲಿ ಟೊವೆಲ್ ಹಿಡಿದಿದ್ದರು. ಬಾತ್ರೂಂ ಬಹಳ ಗಲಿಜು. ಸಿಂಕ್ನ ನಳ ತಿರುಗಿಸಿದರೆ ಸ್ಪ್ರಿಂಕ್ಲರ್ನಂತೆ ನೀರು ಮೈ ಮೇಲೆ ಚಿಮ್ಮತೊಡಗಿತು. ಟಾಯ್ಲೆಟ್ ಒಳಗೆ ಹೋದರೆ ಗಾಬರಿ! ಗೋಡೆಗೆ ಅಡಿಯಿಂದ ಮುಡಿಯವರೆಗೂ ಉದ್ದ ಕನ್ನಡಿ. ಭಾರತೀಯ ರೀತಿಯಲ್ಲೆ ಟಾಯ್ಲೆಟ್ಗಳಿದ್ದರೂ ಇದೊಂದು ಏನ್ ಹೊಸ ಬಗೆನೋ ಏನೋ? ಎನ್ನುತ್ತಾ ಡೈನಿಂಗ್ ಹಾಲಿಗೆ ಹೋದರೆ ಅದೊಂದು ಬಗೆಯ ಇಕ್ಕಟ್ಟು. ಹೋದವರೆಲ್ಲಾ ಸಣ್ಣ-ಸಣ್ಣವರೇ.
ಹಳೆ ಕಾಲದ ಕಟ್ಟಿಗೆ ಖುರ್ಚಿ ಟೇಬಲ್ಗಳನ್ನು ಆಚೀಚೆ ಎಳೆದು ಜಾಗ ಮಾಡಿಕೊಟ್ಟರು. ಸ್ವಸಹಾಯ ಪದ್ಧತಿ. ಎಲ್ಲವನ್ನು ತಟ್ಟೆಗೆ ಹಾಕಿಕೊಂಡು ಬಂದು ಕುಳಿತರಾಯಿತೆಂದು ಹೋದೆ. ಮೊಸರು ಎರಡು ಥರದ್ದು, ಒಂದು ಬಿಳಿ ಹಾಲಿನಂಥದ್ದು, ಇನ್ನೊಂದು ಬೂದು ಬಣ್ಣ. ಕೋಸಂಬರಿ, ಬದನೆಕಾಯಿ ಬರ್ತ ; ಬೆಬಿಕಾರ್ನ್ , ಬದನೆಕಾಯಿ, ದೊಡ್ಡ ಮೆಣಸಿನ ಕಾಯಿಗಳ ಪಲ್ಯ! ನೋಡಲು ಶ್ರೀಖಂಡದ ಹಾಗೇನೆ ಏನೋ ಒಂದಿತ್ತು. ರುಚಿ ಮಾತ್ರ ಉಪ್ಪುಪ್ಪು. ಮಜ್ಜಿಗೆ; ಚಿಕನ್, ಫಿಶ್ ಕರಿ, ಅಲ್ಲಿಯ ಪರೋಟಾ ನಮ್ಮ ರೊಟ್ಟಿಯ ಹಾಗೆ ಇದ್ದರೂ ಬ್ರೆಡ್ಡಿನಷ್ಟು ದಪ್ಪ. ಅದು ಗೋದಿಯಿಂದ ತಯಾರಾದುದು. ಕಲ್ಲಂಗಡಿ, ಖರಭುಜ, ಕಪ್ಪು ಹಸಿರು ದ್ರಾಕ್ಷಿ, ಸೇಬು ಹಣ್ಣಿನ ಹೋಳುಗಳು; ಕೆಂಪು ಹಳದಿ ಬಣ್ಣಗಳ ಗಟ್ಟಿ ಜಾಮ್ನಂಥ ಸಿಹಿ ತಿಂಡಿ, ಅಂತೂ ನಮ್ಮ ಊಟಕ್ಕೆ ಸ್ವಲ್ಪವಾದರೂ ಹತ್ತಿರವಿದೆಯಲ್ಲ ಎಂದು ನೆನೆಸುತ್ತಾ ತಟ್ಟೆಗೆ ಹಾಕಿಕೊಂಡು ಬಂದು ಕುಳಿತೆ. ಎದುರಿಗೆ ಗಾಜಿನ ಕಿಟಕಿ.

ಹೊರಗಡೆ ಎದುರಿಗೆ ಪಿರ್ಯಾಮಿಡ್! ಪಕ್ಕನೆ ಕ್ಯಾಮೆರಾ ತೆಗೆದು ಕ್ಲಿಕ್ ಮಾಡಿದೆ. ಅದನ್ನೇ ನೋಡುತ್ತಾ… ಊಟದ ವಿಮರ್ಶೆ ನಡೆಯಿತು. `ಬೂದು ಬಣ್ಣದ ಮೊಸರು ಒಂಟೆಯದ್ದು’ ಎಂದರು ಮಂಗಲಾ ಮೆಟಗುಡ್ಡ. ಅದರ ರುಚಿಯೂ ಒಂಥರಾ, ತಿನ್ನಲಾಗಲೆ ಇಲ್ಲ. ಬದನೆಕಾಯಿ ಭರ್ತ ಚೆನ್ನಾಗಿತ್ತು. ಅದನ್ನಷ್ಟು ಹಚ್ಚಿಕೊಂಡು ಪರೋಟಾ ತಿಂದೆವು. ಅನ್ನಕ್ಕೆ ಸಾಂಬಾರ ಇರಲೇ ಇಲ್ಲ. ಕೋಸಂಬರಿ ಕಲಸಿ ತಿಂದು ಮಜ್ಜಿಗೆ ಕುಡಿದೆವು. ಹಣ್ಣು ತಿಂದೆವು. ಹೊಟ್ಟೆ ಸ್ವಲ್ಪ ತುಂಬಿಂದಂತಾಯಿತು. ನೇರವಾಗಿ ಥಿಬಾ(TIBA) ಪಂಚತಾರಾ ಹೋಟೆಲ್ ಗೆ ಕರೆದೊಯ್ದರು. ಅಲ್ಲಿ ಚೆಕ್ಪೋಸ್ಟ್ ಗನ್ಮ್ಯಾನ್ಗಳನ್ನು ಎದುರಿಸಿಯೇ ಒಳಹೋಗಬೇಕಾಯಿತು. ರೂಂ ನಂ. 19 ಹುಡುಕಲು ಕಷ್ಟಪಡಬೇಕಾಯಿತು. ಒಂದು ರೀತಿ ಗುಹಾಂತರ ದೇವಾಲಯದಂತೆ. ಎದುರು ಬದುರು ಎರಡೆರಡು ರೂಮುಗಳು, ಮಧ್ಯದಲ್ಲಿ ದಾರಿ. ಒಳಗೆ ಈಚೆ ಹೋದರೆ ಅಲ್ಲೆರಡು ರೂಂ, ಒಳದಾರಿ; ಆಚೆ ಹೋದರೆ ಅಲ್ಲೆರಡು ರೂಂ ಅಲ್ಲೊಂದು ದಾರಿ; ಅಂತೂ ರೂಂ ಸಿಕ್ಕಿತು. ಅಲ್ಲಿಯೂ Swiping ಕಾರ್ಡ ಮೂಲಕವೇ ಬಾಗಿಲು ತೆರೆಯಬೇಕು. ನಮ್ಮ ಬ್ಯಾಗುಗಳು ಮೇಲೆ ಬಂದವು. ಟಿ.ವಿ, ಫ್ಯಾನ್ ಹಚ್ಚಿಟ್ಟು ಹೋದ ಪರಿಚಾರಕ. ಡ್ರೆಸ್ಸಿಂಗ್ ಟೇಬಲ್ ಮೇಲೊಂದು ಫೈಲ್. ಒಂದು ಮೂಲೆಯ ಎರಡೂ ಬದಿಗೂ ಕಿಟಕಿಗಳು; ಪಕ್ಕದಲ್ಲಿ 6 ಅಡಿ ಎತ್ತರದ ಬೆಡ್ಲ್ಯಾಂಪ್ ಸ್ಟ್ಯಾಂಡ; ಕಿಟಕಿಗಳಿಗೆ ದಪ್ಪನೆಯ ಪರದೆಗಳು; ಅವನ್ನು ಸರಿಸಿದರೆ ಬಿಳಿಯ ತೆಳು ಬಟ್ಟೆಯ ಪರದೆಗಳು, ಅವನ್ನು ಸರಿಸಿದಾಗ ಎದುರಿಗೆ ಕಾಣುತ್ತಿತ್ತು. ಬೃಹತ್ ಪಿರ್ಯಾಮಿಡ್.
ಶೆಖೆ ಸುರಿಯುತ್ತಿತ್ತು. ಜೀವ ನೀರಡಿಸಿತ್ತು. ಧೂಳು ಬೇರೆ. 5 ಗಂಟೆಗೆ ಸಮಾರೋಪ ಕಾರ್ಯಕ್ರಮವಿತ್ತು. ಸ್ನಾನ ಮಾಡಲು ಹೋದರೆ ಅಲ್ಲಿಯೂ ಟಬ್ ಬಾತ್. ಒಂದು ಪ್ಲಾಸ್ಟಿಕ್ ಬುಟ್ಟಿಯಲ್ಲಿ ಎರಡು ಸೋಪು, ಎರಡು ಶ್ಯಾಂಪೂ ಬಾಟಲ್, ಹೆರ್ಪಿನ್ಗಳು ಶುಭ್ರವಾದ ಎರಡು ಹ್ಯಾಂಕಿಗಳು, 2 ಬಾತ್ ಟೊವೆಲ್ಗಳು. ಗೀಝರ್ ಹಚ್ಚಿ ಸ್ನಾನದ ಸರ್ಕಸ್ ಮುಗಿಸಿ ಪೂರ್ವ ಯೋಜನೆಯಂತೆ ಹಸಿರು ಇಳಕಲ್ ರೇಷ್ಮೆ ಸೀರೆಯುಟ್ಟೆ. 5 ಗಂಟೆಗೆ ಕೆಳಗೆ ಬಂದರೆ 8 ಜನ ಇಳಕಲ್ ಸೀರೆ, 4 ಜನ ಮೈಸೂರು ರೇಷ್ಮೆ, ಉಳಿದ ರಾಜ್ಯದವರೂ ಬರ್ಝರಿ ಸಿದ್ಧರಾಗಿದ್ದರು. ಅಭಿನಂದನ ಕಾರ್ಯಕ್ರಮಕ್ಕೆ ಕೈರೋ ರಾಯಬಾರಿ ಸ್ವಾಮಿನಾಥನ್ ಅತಿಥಿಯಾಗಿದ್ದರು. ಅವರಿಗೆ ಕೊಟ್ಟ ಸಮಯ 4 ಗಂಟೆ. ನಮ್ಮ ವಿಮಾನ ಅರ್ಧ ಗಂಟೆ ತಡವಾದುದ್ದಕ್ಕೆ ಮುಂದಿನ ಕಾರ್ಯಕ್ರಮಗಳೂ ಅರ್ಧ ಗಂಟೆ ಮುಂದೆ ಹೋದವು. 5 ಗಂಟೆಗೆ ಮತ್ತೊಂದು ಕಾರ್ಯಕ್ರಮ ಗೊತ್ತು ಮಾಡಿಕೊಂಡಿದ್ದಂತೆ ಅವರು ಬೇರೆಡೆಗೆ ಹೋಗಿ ಬಿಟ್ಟಿದ್ದರು. ಹೋಟೆಲ್ ಥೀಬಾ ಭಾರಿ ದೊಡ್ಡದು. ಮೇಲೆ 3 ಮಹಡಿ, ಕೆಳಗೆ 2 ನೆಲಮಹಡಿ. ನೆಲಮಹಡಿಯ ದೊಡ್ಡ ಹಾಲ್ನಲ್ಲಿ ನಮ್ಮ ಕಾರ್ಯಕ್ರಮ, ಎಲ್ಲರೂ ಸೇರಿದೆವು.
ಹೋಟೆಲ್ ಮ್ಯಾನೆಜರ್ ಹಾಗೂ ಪ್ರಭಾ ನೀರಲಗಿ ಅತಿಥಿಗಳಾದರು. ಹೋಟೆಲಿಗೆ ಬಂದಿದ್ದ ಕೈರೋದ ಸ್ಥಳೀಯರು ಮತ್ತು ಸಿಬ್ಬಂದಿ ಜನ ಪ್ರೇಕ್ಷಕರಾದರು. ಅಲ್ಲಿಯೂ ಕವಿಗೋಷ್ಠಿ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ಮ್ಯಾನೇಜರ್ ಭಾರತೀಯ ವೇಷ, ಭಾಷೆ, ಸಂಸ್ಕೃತಿ ವೈವಿಧ್ಯ ಕೇಳಿ, ಕಂಡು ಸಿಬ್ಬಂದಿಯೊಂದಿಗೆ ಕೃತಜ್ಞತೆ ಸಲ್ಲಿಸಿದರು. ಅಲ್ಲಿ ಟಿಫಿನ್ ವ್ಯವಸ್ಥೆ ಇತ್ತು. ಜೀವ ನೀರು ಬೇಡುತ್ತಿತ್ತು. ಗಾಜಿನ ಪ್ಲಾಸ್ಕ್ನಲ್ಲಿದ್ದ ಜ್ಯೂಸನ್ನೆ ಹಾಕಿಕೊಂಡು ಗಟಗಟನೆ ಕುಡಿದೆ. ಎಲ್ಲರೂ ಇಷ್ಟವಾದದ್ದನ್ನೂ ಇಷ್ಟವಾದಷ್ಟನ್ನೂ ತಿಂದರು. ಇಲ್ಲಿರುವ ಒಂದು ಬದಲಾವಣೆ ಎಂದರೆ ಡಿಪ್ ಟೀ, ಡೀಪ್ ಕಾಫಿ ಹಾಗೂ ಬರ್ಪಿಯಂತಹ ಸಿಹಿತಿಂಡಿ. ಹುರುಳಿಲ್ಲ, ತಿರುಳಿಲ್ಲ. ಅಷ್ಟರಲ್ಲಿ ದೂರದಲ್ಲಿರುವ ಕೌಂಟರ್ನಲ್ಲಿದ್ದ ಸಿಬ್ಬಂದಿ ಸ್ಪೆಷಲ್ ಟೀ ಬೇಕಾ? ಅಂದ. ಸರೋಜಾ ತೆಗೆದುಕೊಂಡಳು. `ಮಸ್ತ್ ಐತಿ’ ಅಂದಳು ನಾನು `ಕಾಫಿ’ ಅಂದೆ. ಆತ ತಿರುಗಿ ಹೋಗಿ ಇನ್ಸ್ಟಂಟ್ ಕಾಫಿ ತಂದು ಅದೇ ಗಟ್ಟಿ ಹಾಲಿನಲ್ಲಿ ಕಾಫಿ ಮಾಡಿಕೊಟ್ಟ. ಇಬ್ಬರೂ ಕೃತಜ್ಞತೆ ಹೇಳಿ ದುಡ್ಡು ಕೇಳಿದರೆ ಇದು `ಚಾರ್ಜೆಬಲ್ ಅಲ್ಲ’ ಎಂದ. ಈಚೆ ಬಂದು ಉಳಿದವರಿಗೂ ಹೇಳಿದೆವು. ಅಷ್ಟರಲ್ಲಿ ರಾಧೆ ಕೃಷ್ಣ (ಇಂದುಮತಿ, ಸರಸ್ವತಿ ಚಿಮ್ಮಲಗಿಯವರಿಗೆ) ರಿಗೇಕೋ ಜಗಳ ಬಂದಿತ್ತು. ಎಲ್ಲರೂ ಸೇರಿ ಬಗೆಹರಿಸಹೋದರೆ ರಾಧೆ ಜಗ್ಗಲಿಲ್ಲ. ಅದು ಬಗೆ ಹರೆಯದೆ ಲಾರಿ ಸರ್ವರೆಗೂ ಹೋಯಿತು.
ಅವರೊಂದೆ ಮಾತು ಹೇಳಿದರು. `ಭಾರತದಿಂದ ಇಲ್ಲಿಯವರೆಗೂ ಬಂದದ್ದು ನಾವು ನೆಲ, ಜಲ, ಸಂಸ್ಕೃತಿ, ವೇಷ ಭೂಷಣ, ಇತಿಹಾಸ ತಿಳಿದುಕೊಳ್ಳಲಿಕ್ಕೆ. ಅದು ಎಐಪಿಸಿಯ ಉದ್ದೇಶ. ಅದನ್ನು ಬಿಟ್ಟು ಬೇರೆ ಏನನ್ನಾದರೂ, ಮಾಡ್ತೀನಿ ಅನ್ನೋರು ಎ.ಐ.ಪಿ.ಸಿ ಬಿಟ್ಟು ನಿಮ್ಮ ದಾರಿ ನೀವು ನೋಡ್ಕೊಬಹುದು ಎಂದರು. ಆಗ ಅದು ಅಷ್ಟರ ಮಟ್ಟಿಗೆ ನಿಂತಂತಾಯಿತು. ಅದೇ ಹಾಲಿನಲ್ಲಿ ಎಲ್ಲರನ್ನೂ ಒಂದೆಡೆ ಕೂಡಿಸಿ ಲಾರಿ ಸರ್ ಹಾಗೂ ಮಾರ್ಗದರ್ಶಿ , ಕೈರೋ ಕುರಿತು ಹೆಚ್ಚಿನ ಮಾಹಿತಿ ನೀಡಿದರು. ಮನು ಮಾರ್ಗದರ್ಶಿ `ವಾಗಿ’ಗೆ ಔಪಚಾರಿಕ ಸ್ವಾಗತ ಕೋರಿದಾಗ ಪ್ರತಿಯಾಗಿ `ಶುಕ್ರನ್’ ಎಂದು ಹೇಳಿದರು. ಅಂದರೆ ಅರಬ್ಬಿಯಲ್ಲಿ `ಧನ್ಯವಾದಗಳು.’ ಅಲ್ಲಿ ಬಳಸುವ ಸ್ಥಳೀಯ ಭಾಷೆ ಅರಬ್ಬಿ ಭಾಷೆ. ಅದೇ ರೀತಿ ಸ್ಥಳ, ವೃತ್ತಿನಾಮಗಳಿಗೆ ಗೌರವ ಸೂಚಕವಾಗಿ ಇಂಗ್ಲೀಷಿನಲ್ಲಿ ‘The’ ಯನ್ನು ಪೂರ್ವಪದವಾಗಿ ಬಳಸುವಂತೆ, ಅರಬ್ಬಿಯಲ್ಲಿಯೂ ಹೀಗೆ ಗೌರವಾರ್ಥ ಪೂರ್ವಪದವಾಗಿ `ಅಲ್’ ಬಳಸುತ್ತಾರೆ. ಉದಾಹರಣೆಗೆ ಅಲ್ಲಕ್ಜರ್, ಅಲ್ಗೀಝ’ ಮಾರ್ಗದರ್ಶಿ ತನ್ನದೇ ಆದ ಭಾಷಾ ವೈಶಿಷ್ಟ್ಯಗಳನ್ನು ಸೇರಿಸಿ ಇಂಗ್ಲೀಷಿನಲ್ಲಿ ಹೇಳುತ್ತಿದ್ದರು. ಈ ಮಾರ್ಗದರ್ಶಿ ಅಂಥ ಪಳಗಿದವನಾಗಿರಲಿಲ್ಲ. ಸರ್ ಕೂಡ ನಡುನಡುವೆ ಹಿಂದಿಯಲ್ಲಿ ಸ್ಪಷ್ಟನೆ ನೀಡುತ್ತಿದ್ದರು.
ನಾವೀಗ ಇದ್ದ ಸ್ಥಳದ ಹೆಸರು ಗೀಝಾ. ಈಗ ಗೀಝಾದಲ್ಲಿ ಇರುವುದು ಕೇವಲ ಮೂರು ದೊಡ್ಡ ಪಿರ್ಯಾಮಿಡ್ಗಳು. ಒಂದು-ಖೂಪು (Cheops), ಎರಡು-ಖೆಫರ್ನ್ (Chephern) (ಖುಫುವಿನ ಮಗ), ಮೂರು-ಮೆಖೆರೊನಸ್ (Mecheronus) ಫೇರೋಗಳದ್ದು. ಇದರಲ್ಲಿ ಖೂಪುವಿನ ಪಿರ್ಯಾಮಿಡ್ ಬೃಹದಾಕಾರದಲ್ಲಿದೆ. ಪ್ರಾಚೀನ ಫೇರೊ (ರಾಜ)ಗಳಲ್ಲಿರುವ ಗಾಢ ನಂಬಿಕೆ ಎಂದರೆ ಬಟ್ಟೆಯ ಪಟ್ಟಿಯಿಂದ ಸುತ್ತಲ್ಪಟ್ಟ ಅವರ ನಿರ್ಜೀವ ದೇಹಗಳು, ಸುಂದರ ಶವದಾನಿ (ಪೆಟ್ಟಿಗೆ)ಗಳಲ್ಲಿ ದೀರ್ಘಕಾಲ ವಿಶ್ರಮಿಸುತ್ತವೆ ಎಂಬುದು. ದೇಹ ಹೀಗಿದ್ದು, ಜೀವಮಾತ್ರ ಈ ಐಹಿಕ ಪರಿಧಿಗಳಿಂದ ಬಿಡುಗಡೆ ಹೊಂದಿ ಆಕಾಶಕ್ಕೇರುತ್ತದೆ. ಅಲ್ಲಿ ಸೂರ್ಯದೇವನಿಂದ ನಡೆಸಲ್ಪಡುವ ಸೂರ್ಯನೌಕೆಯನ್ನೇರಿ ಮೇಲಿನ ಲೋಕಗಳಿಗೆ ಪಯಣಿಸುತ್ತವೆ ಎಂದೂ ನಂಬಿದ್ದರು. ಒಂದು ವೇಳೆ ಹೀಗಾಗದಿದ್ದರೂ ಮಿನುಗುವ ತಾರೆಗಳಾಗುತ್ತವೆ ಎನ್ನಲಾಗುತ್ತಿತ್ತು. ಹೀಗೆ ಎತ್ತರದ ಸೂರ್ಯ ನೌಕೆಯನ್ನೇರುವ ಸಂಕೇತವಾಗಿ ಎತ್ತರದ ಪಿರ್ಯಾಮಿಡ್ಡುಗಳ ನಿರ್ಮಾಣವಾಗಿರಬೇಕು ಎಂಬುದು ಇತಿಹಾಸಕಾರರ ಅಭಿಪ್ರಾಯ.
ನೈಲ್ ನದಿ ದಕ್ಷಿಣದಿಂದ ತರುವ ಹೂಳಿನಿಂದ ಇದರ ಇಕ್ಕೆಲಗಳಲ್ಲಿ ಚಿನ್ನದಂತಹ ಫಲವತ್ತಾದ ಕೃಷಿ ಭೂಮಿ ರೂಪಗೊಂಡಿದೆ. ಸಮೃದ್ಧವಾದ ನೀರಿನ ಸೆಲೆಯಿಂದಾಗಿ ಈ ನದಿ ಸದಾ ತುಂಬಿಯೇ ಇರುತ್ತದೆ. ಆದುದರಿಂದ ಇತಿಹಾಸ ಪೂರ್ವದಲ್ಲಿ ಹೊರಗಿನ ಜನ ಇಲ್ಲಿ ಬಂದು ನೆಲೆಸುವಂತಾಯಿತು. ಎರಡೂ ಕಡೆ ಹರಡಿರುವ ಬಂಜರು ಭೂಮಿ ವೈರಿಗಳನ್ನು ದೂರ ಇಟ್ಟರೆ, ಮೆಡಿಟರೇನಿಯನ್ ಸಮುದ್ರ ಸಹಜ ರಕ್ಷಣೆ ನೀಡಿತ್ತು. ಆಗ ಅನೇಕ ರಾಜಮನೆತನಗಳು ಹುಟ್ಟಿಕೊಂಡು ಸಣ್ಣ ಸಣ್ಣ ಭಾಗಗಳನ್ನು ಆಳತೊಡಗಿದ್ದರು. ಸುಮಾರು ಕ್ರಿ.ಪೂ 3100 ರಷ್ಟೊತ್ತಿಗೆ ದಕ್ಷಿಣದಿಂದ `ನಾರ್ಮಾರ್’ ಎಂಬ ಚಿಕ್ಕರಾಜ ಉತ್ತರಕ್ಕೆ ದಂಡಯಾತ್ರೆ ಹೊರಟು ಉಳಿದ ಅರಸರನ್ನು ಜಯಿಸಿ ಇಜಿಪ್ತನ್ನು ತನ್ನ ಆಳ್ವಿಕೆಗೆ ಒಳಪಡಿಸಿಕೊಂಡು ಇಜಿಪ್ತಿನ ಪ್ರಥಮ ಸಾರ್ವಭೌಮ (ಫೇರೊ) ನಾದನಂತೆ.
ಪ್ರಾಚೀನ ಇಜಿಪ್ತಿನಲ್ಲಿ ಫೇರೊ ಅತ್ಯಂತ ಪ್ರಭಾವಶಾಲೀ ವ್ಯಕ್ತಿಯಾಗಿದ್ದ. ಸೈನ್ಯದ ಮಹಾದಂಡನಾಯಕ, ಸಾರ್ವಜನಿಕ ಸೇವಾ ವಿಭಾಗದ ಮುಖ್ಯಸ್ಥ ಹಾಗೂ ದೇಗುಲಗಳ ಮಹಾ ಅರ್ಚಕನೂ ಆಗಿರುತ್ತಿದ್ದ. ಜನರು ಈತ ಜೀವಂತವಿರಬೇಕಾದರೇನೆ ದೇವಾಂಶ ಸಂಭೂತನೆಂದು ತಿಳಿದು ದೇಹಾಂತ್ಯದ ಅನಂತರ ಇವನನ್ನು ಪರಿಪೂರ್ಣ ದೈವತ್ವ ಪಡೆದವನೆಂದು, ಸಾಕ್ಷಾತ್ ದೇವರೆಂದು ತಿಳಿದು ಇವನನ್ನು ಪೂಜೆ ಕೂಡ ಮಾಡುತ್ತಿದ್ದರು. ನಾರ್ಮಾರ್ನಿಂದ ಕ್ರಿ.ಪೂ ಮೂರು ಸಾವಿರದಲ್ಲಿ ಆರಂಭಗೊಂಡ ಈ ವಂಶದಲ್ಲಿ 3000 ವರ್ಷಗಳಲ್ಲಿ ಬಹಳಷ್ಟು ಫೇರೋಗಳು ಜನಿಸಿ ಇಜಿಪ್ತ್ ಆಳಿ ಹೋದರು. ಅವರ ಆಳ್ವಿಕೆಯ ಕಾಲಮಾನವನ್ನು ಅನುಸರಿಸಿ ಪ್ರಾಚೀನ, ಮಧ್ಯಕಾಲೀನ ಮತ್ತು ಹೊಸ ರಾಜವಂಶಗಳೆಂದು ವಿಂಗಡಿಸಿದ್ದಾರೆ. ಕ್ರಿ.ಪೂ. 3000ದಲ್ಲಿ ಆರಂಭಗೊಂಡ ಈ ವಂಶಗಳು ಸಾಮಾಜ್ಞಿ ಕ್ಲಿಯೋಪಾತ್ರಾಳ ಸಾವಿನೊಂದಿಗೆ (ಕ್ರಿ.ಪೂ. 30) ಕೊನೆಗೊಂಡವು. ಮುಂದೆ ಇವು ರೋಮನ್ನರ ಆಳ್ವಿಕೆಗೆ ಒಳಪಟ್ಟವು.
ಇವರ ನಂಬಿಕೆಯ ಪ್ರಕಾರ ಇಜಿಪ್ತ್ ಜಗತ್ತಿನಲ್ಲಿಯೇ ಅತ್ಯಂತ ಪ್ರಶಸ್ತವಾದ ದೇಶ. ಇಕ್ಕೆಲಗಳಲ್ಲಿ ಫಲವತ್ತಾದ ಕಪ್ಪು ಮಣ್ಣಿನಿಂದ ತುಂಬಿದ ಕೃಷಿಭೂಮಿ, ಸಮೃದ್ಧ ನೀರು, ಮೀನು, ಮೂರು ದಿಕ್ಕುಗಳಿಂದ ನೈಸರ್ಗಿಕ ರಕ್ಷಣೆ ಹಾಗೂ ಸಮರ್ಥ ಆಡಳಿತ; ಮರುಭೂಮಿಯಲ್ಲಿ ಚಿನ್ನದ ನಿಕ್ಷೇಪ, ಲಾಫಿಸ್, ಲಾಜುರಿ ಅಥವಾ ನೀಲೋಪಲ, ಹಸಿ ರು-ನೀಲಿ ಮಿಶ್ರಿತ ವೈಡೂರ್ಯ ಅಥವಾ ಟರ್ಕ್ವೈಸ್, ಉಜ್ವಲ ಮೆರಗಿನ ಮ್ಯಾಕ್ಕೈನಂಥ ಅದ್ಭುತ ಹರಳುಗಳು ಲಭಿಸುತ್ತಿದ್ದವು. ಹಾಗಾಗಿ ಶ್ರೀಮಂತ ದೇಶ ಹಾಗೂ ನಾಗರಿಕತೆಗಳಲ್ಲಿ ಒಂದೆಂದು ಪರಿಗಣಿಸಲಾಗಿತ್ತು. ಜನಸಂಖ್ಯೆಯ ಶೇ. 10 ರಷ್ಟು ಮಂದಿ ಮಾತ್ರ ಓದಿ ಬರಹಬಲ್ಲವರಾಗಿದ್ದು ಉಳಿದ ಬಹುದೊಡ್ಡ ಭಾಗ ಕೃಷಿಕರ ಸಮುದಾಯವಾಗಿತ್ತು. ಇವರು ಶ್ರೀಮಂತರ ಕೃಷಿ ಭೂಮಿಯಲ್ಲಿ ಕೆಲಸ ಮಾಡುತ್ತಿದ್ದರು. ಮಹಿಳೆಯರಿಗೆ ಓದು, ಬರಹ, ಕಲಿಯುವ ಹಕ್ಕಿರಲಿಲ್ಲ. ವಿದ್ಯಾವಂತರು ಆಡಳಿತದಲ್ಲಿ ರಾಜನಿಗೆ ಸಹಕರಿಸಿ ರಾಜಕೃಪೆಗೆ ಪಾತ್ರರಾಗುತ್ತಿದ್ದರು. ಧನಿಕರಾಗುತ್ತಿದ್ದರು. ಇಂಥ ಪ್ರಾಚೀನ ಇಜಿಪ್ತ್ದಲ್ಲಿ `ಬದುಕಿನ ಅತೀತದಲ್ಲಿಯೂ ಬದುಕಿದೆ’ ಎಂಬ ನಂಬಿಕೆ ಇಟ್ಟಿದ್ದರು. ಉಳ್ಳವರೂ, ರಾಜರೂ ಮರಣಾ ನಂತರದ ಬದುಕಿಗಾಗಿ ಜೀವಿತಕಾಲದಲ್ಲಿಯೇ ನಿರ್ಮಿಸಿದ ಗೋರಿಗಳು ಇಂದಿಗೂ ಬಹುಪಾಲು ಸುಸ್ಥಿತಿಯಲ್ಲಿವೆ. ಇಂದು ಇಜಿಪ್ತ ದೇಶಕ್ಕೆ ಪ್ರಧಾನ ಆದಾಯ ತರುವ ಹೊನ್ನ ನಿಕ್ಷೇಪಗಳೂ ಇವೇ ಆಗಿವೆ.
ಪುರಾಣ ಕಥೆಗಳ ಪ್ರಕಾರ ಬದುಕಿನ ಅನಂತರದ ಬದುಕಿನಲ್ಲೂ ನಂಬಿಕೆ ಉಂಟಾಗಲು ಮೂಲ ಕಾರಣ `ಓಸಿರೀಸ್’ ಎಂಬ ಚಕ್ರವರ್ತಿ. ದೇವಾಂಶ ಸಂಭೂತನಾದ ಚಕ್ರವರ್ತಿಯ ಪತ್ನಿ `ದೇವತೆ ಈಸಿಸ್.’ ಈತನ ಆಳ್ವಿಕೆಯಲ್ಲಿ ದೇಶ ಅತ್ಯಂತ ಸಮೃದ್ಧವಾಗಿದ್ದು ನ್ಯಾಯ ಧರ್ಮಗಳು ನೆಲೆಸಿದ್ದವು. ಪ್ರಜೆಗಳು ತೃಪ್ತಿಯಿಂದ ಇದ್ದರು. ಆದರೆ ಓಸಿರೀಸ್ನ ತಮ್ಮನೊಬ್ಬ ಮಾತ್ಸರ್ಯದಿಂದ ಕುದಿಯುತ್ತಿದ್ದ. ಆತನೇ ಬುದ್ಧಿವಂತ ದುಷ್ಟ ಸೆತ್ತ್. ಹೇಗಾದರೂ ಮಾಡಿ ಸಿಂಹಾಸನ ಆಕ್ರಮಿಸಬೇಕೆಂದು ಬಲುಜಾಗರೂಕತೆಯಿಂದ ಯೋಜನೆಯೊಂದನ್ನು ರೂಪಿಸಿ, ಔತಣಕೂಟವೊಂದನ್ನೇರ್ಪಡಿಸಿ ಗಣ್ಯರನ್ನೆಲ್ಲ ಆಹ್ವಾನಿಸಿದನಂತೆ. ಗೌರವ ಅತಿಥಿಯಾಗಿ ಸ್ವತಃ ಚಕ್ರವರ್ತಿಯನ್ನೇ ಬರಮಾಡಿದ್ದ. ಕುಡಿದು ಮತ್ತರಾದ ಅತಿಥಿಗಳಿಗೆ ನಾನಾ ರೀತಿಯ ಆಟಗಳ ಏರ್ಪಾಟಾಗಿತ್ತು. ಅದರಲ್ಲಿ ಒಂದು ಆಟವೆಂದರೆ `ಸುಂದರವಾಗಿ ಚಿನ್ನದಿಂದ ಅಲಂಕರಿಸಲ್ಪಟ್ಟ ಬಹು ಅಮೂಲ್ಯವಾದ ಮರದ ಪೆಟ್ಟಿಗೆಯಲ್ಲಿ ಸರಿಯಾಗಿ ಯಾರು ಹೊಂದುತ್ತಾರೋ ಅವರಿಗೆ ಆ ಪೆಟ್ಟಿಗೆಯನ್ನು ಉಡುಗೊರೆಯಾಗಿ ನೀಡಲಾಗುವುದು’ ಎಂದು ಘೋಷಿಸಲಾಯಿತು. ಸತ್ಯವೆಂದರೆ ಪೆಟ್ಟಿಗೆಯನ್ನು ಚಕ್ರವರ್ತಿಯ ಅಳತೆಗೆ ಹೊಂದುವಂತೆಯೇ ತಯಾರಿಸಲಾಗಿತ್ತು. ಏಕೆಂದರೆ ಇದು ಚಕ್ರವರ್ತಿಗೆ ಸಾವು ತರುವ ಆಟವಾಗಿತ್ತು. ಓಸಿರೀಸ್ ಒಳಗೆ ಹೋದ ಕೂಡಲೇ ಅದರ ಮುಚ್ಚಳ ಮುಚ್ಚಿ ಬೀಗ ಜಡಿಯಲಾಯಿತು. ಈ ಹುನ್ನಾರ ಎಲ್ಲರಿಗೂ ಅರ್ಥವಾಗುವ ಮೊದಲೆ ಪೆಟ್ಟಿಗೆಯನ್ನು ನೈಲ್ ನದಿಯಲ್ಲಿ ಎಸೆದರು. ಸೆತ್ತ್ ರಾಜದಂಡವನ್ನು ವಶಪಡಿಸಿಕೊಂಡು ಅವಸರವಸರದಲ್ಲಿ ಸಿಂಹಾಸನವನ್ನೇರಿ ರಾಜನೆಂದು ಘೋಷಿಸಿಕೊಂಡ ಹಾಗೂ ರಾಜನ ಹಠಾತ್ ಕಣ್ಮರೆಯೇ ಇದಕ್ಕೆ ಕಾರಣ ಎಂದು ಸುದ್ದಿ ಹಬ್ಬಿಸಿದ. ಇತ್ತ ಈಸೀಸ್ಳಿಗೆ ಇದೊಂದು ಒಗಟಾಗಿ, ಕಾಣದಾದ ಪತಿಗಾಗಿ ದೇಶದ ಉದ್ದಗಲಕ್ಕೂ ಹುಡುಕಿಸಿದಳು. ಕೆಲ ವರ್ಷಗಳ ನಂತರ ಬೆಬಿಲೊಸ್ (ಈಗ ಇದು ಲೆಬನಾನ್ ದೇಶದಲ್ಲಿದೆ) ಎನ್ನುವಲ್ಲಿ ಒಂದು ಸುಂದರ ಪೆಟ್ಟಿಗೆ ಬಂದಿದೆ ಎಂಬ ಸುದ್ದಿ ಕೇಳಿ ಅಲ್ಲಿಗೆ ಹೋಗಿ ಬೀಗ ಒಡೆದು ನೋಡಿದಾಗ ಮಡಿದ ಓಸಿರೀಸ್ನ ದೇಹ ಕೊಳೆಯದೆ ಯಥಾ ಸ್ಥಿತಿಯಲ್ಲಿತ್ತು. ರಾಜೋಚಿತ ಅಂತ್ಯಕ್ರಿಯೆಗಾಗಿ ತಾಯ್ನಾಡಿಗೆ ತಂದಳು. ಈ ಸುದ್ದಿ ತಿಳಿದ ಸೆತ್ತ್, ಅಡಗಿಸಿಟ್ಟ ಪೆಟಾರಿಯನ್ನು ಕಂಡು ಹಿಡಿದು, ರಾಜನ ದೇಹವನ್ನು 14 ತುಂಡುಗಳಾಗಿ ಕತ್ತರಿಸಿ ದೇಶದ ಹದಿನಾಲ್ಕು ಭಾಗಗಳಲ್ಲಿ ಬಿಸಾಡಿದ. ಛಲ ಬಿಡದ ಈಸೀಸ್ ದೇಹದ ಹದಿನಾಲ್ಕು ತುಂಡು ಹುಡುಕಿ ತೆಗೆದು ಕ್ರಮಬದ್ಧವಾಗಿ ಜೋಡಿಸಿ ಅನೂಬಿಸ್ನ ಸಹಾಯದಿಂದ ಹತ್ತಿಯ ಬಟ್ಟೆಯಿಂದ ಸುತ್ತಿ, ಸ್ವತಃ ಮಂತ್ರವಾದಿನಿ ವಿದ್ಯೆ ಅರಿತಿದ್ದ ಅವಳು ಅದಕ್ಕೆ ಜೀವ ತುಂಬಿದಳು. ಓಸಿರೀಸ್ ಜೀವಂತವಾಗಿ ಎದ್ದು ನಿಂತ. ಆದರೆ ಕತ್ತರಿಸಿ ಹೋದ ಆತನ ದೇಹ, ಬಟ್ಟೆಯ ಪಟ್ಟಿಗಳ ಆಧಾರವಿಲ್ಲದಿದ್ದರೆ ಮತ್ತೆ ತುಂಡುಗಳಾಗಿ ಕಳಚಿ ಬೀಳುತ್ತಿತ್ತು. ಹೀಗಾಗಿ ಓಸಿರೀಸ್ ಇಜಿಪ್ತಿನ ಚಕ್ರವರ್ತಿಯಾಗಲು ಅನರ್ಹನಾದ್ದರಿಂದ ಇಜಿಪ್ತನ್ನು ತೊರೆದು ಸತ್ತವರ ಲೋಕದ ರಾಜನಾಗಿ ಹೊರಟು ಹೋದನಂತೆ. ಅಂದಿನಿಂದ ಸತ್ತವರ ದೇಹವನ್ನು ಔಷಧಿಗಳನ್ನು ಲೇಪಿಸಿ ಬಿಳಿ ಬಟ್ಟೆಯ ಪಟ್ಟಿಗಳಲ್ಲಿ ಸುತ್ತಿ, ದೇಹಾಕಾರದ ಪೆಟ್ಟಿಗೆಯಲ್ಲಿಟ್ಟು ಕಾಯ್ದಿರಿಸುವ ಸಂಪ್ರದಾಯ ಜಾರಿಯಾಯಿತೆಂದು ಹೇಳುತ್ತದೆ ಪ್ರಾಚೀನ ಇಜಿಪ್ತಿನ ಕಥೆ. ಅದನ್ನೇ ಇಂದು `ಮಮ್ಮಿ’ ಎಂದು ಕರೆಯುತ್ತಾರೆ. ಇಂದಿಗೂ ಓಸಿರೀಸ್ನನ್ನು ಹೀಗೆ ಪಟ್ಟಿಗಳಿಂದ ಸುತ್ತಲ್ಪಟ್ಟ ಮಮ್ಮಿಯಾಗಿಯೇ ತೋರಿಸಲಾಗುತ್ತದೆ. ಆದರೆ ಮುಖದ ಮೇಲಿನ ನೀಳವಾದ ಗಡ್ಡ ಮತ್ತು ತಲೆಯ ಮೇಲಿನ ಕಿರೀಟವಿರುವ ಮುಖವಾಡಗಳು ಒಂದು ಕಾಲದಲ್ಲಿ ಇದ್ದಿರಬಹುದಾದ ಚಕ್ರವರ್ತಿಯನ್ನು ನೆನಪಿಸುತ್ತವೆ.
ಇನ್ನು `ಈಸೀಸ್’ ಧರ್ಮದ (ಸತಿ ಸಾವಿತ್ರಿಯಂತೆ) ಹಾಗೂ ಮಾತೃತ್ವದ ಪರಮೋಚ್ಚ ಸಂಕೇತವಾಗಿದ್ದಾಳೆ. ಪತಿಯನ್ನು ಹತ್ತಾರು ವರ್ಷಗಳ ನಂತರ ಹುಡುಕಿ ಜೀವ ತುಂಬಿದ ಪರಿ ಪ್ರಶಂಸನೀಯ. ಇವಳ ಕಥೆ ಇಷ್ಟಕ್ಕೆ ನಿಲ್ಲುವುದಿಲ್ಲ. ಸೋಲೊಪ್ಪದ ಇವಳು, ಓಸಿರೀಸ್ನ ಮರುಜನ್ಮ ಪಡೆದ ಶರೀರದಿಂದ `ಹೋರಸ್’ ಎಂಬ ಮಗನನ್ನು ಪಡೆದು ಅವನನ್ನ ಯುದ್ಧ ತಂತ್ರಪಾರಂಗತನನ್ನಾಗಿ ಬೆಳೆಸಿ, ತನ್ನ ಚಿಕ್ಕಪ್ಪ ಸೆತ್ತ್ನನ್ನು ಸೋಲಿಸಿ, ಇಜಿಪ್ತಿನ ಚಕ್ರವರ್ತಿಯಾಗುವಂತೆ ಮಾಡಿದಳಂತೆ. ಇವಳ ಪ್ರತಿಮೆ ಅಥವಾ ಚಿತ್ರಗಳಲ್ಲಿ ಕಿರೀಟದ ಮೇಲೆ ಹಾವಿನ ಚಿಹ್ನೆ ಇದ್ದು, ಅದು ಸೇಡಿನ ಸಂಕೇತವಾಗಿದೆ. ತೊಡೆಯ ಮೇಲಿನ ಶಿಶು ಹೋರಸ್ನಿಗೆ ಹಾಲೂಡುತ್ತಿರುವಂತಿದೆ.

ಮಾರ್ಗದರ್ಶಿ ವಾಗಿ ತೋರಿಸಿದ ಕೆಲವು ಚಿತ್ರಗಳನ್ನು ನೋಡುತ್ತ ಕೇಳಿದ ಕಥೆ ರೋಮಾಂಚನಕಾರಿಯಾಗಿತ್ತು.
ಮನಸ್ಸಿನೊಳಗೇನೋ ತಲ್ಲಣ! ಈ ಶವ, ಅದರೊಂದಿಗಿನ ಒಡನಾಟ ಕೇಳಿಯೇ ಮೈ ಜುಂ ಎನ್ನುತ್ತಿತ್ತು. ಸಮಯ 8.30 ಆದ್ದರಿಂದ ಎಲ್ಲರೂ ಊಟ ಮಾಡುವಂತೆ ಮನು ಎಲ್ಲರನ್ನೂ ಎಬ್ಬಿಸತೊಡಗಿದರು. ಭಾರವಾದ ಮನಸ್ಸಿನಿಂದ ಎದ್ದು ಊಟಕ್ಕೆ ಹೊರಟೆವು. `ದಿ ಗ್ರೇಟ್ ಅಶೋಕ’ ಹೋಟೆಲಲ್ಲಿ ಊಟ; ಭಾರತದ ಚಕ್ರವರ್ತಿಯಾಗಿದ್ದವನ ಹೆಸರು ನೋಡಿ ಖುಷಿ ಆಗಿತ್ತು. ಲಾರಿಸರ್ ಹೇಳಿದರು, ಜಗತ್ತಿನಾದ್ಯಂತ ಜಾಲ ಹೊಂದಿರುವ `ಅಶೋಕಾ ಗ್ರೂಪ್ಸ್’ನವರಿಂದ ನಡೆಯುತ್ತಿರುವ ಹೋಟೆಲೆಂದು. ಸರಿ ಊಟ ಮಾಡುತ್ತಾ, ಲಾರಿ ಸರ್ಗೆ ಕೇಳಿದೆ – `ಈ ಪಿರ್ಯಾಮಿಡ್ಗಳು ಪತ್ತೆಯಾದಾಗ ಅದರಿಂದ ತೆಗೆದ ಹೆಣವನ್ನು ಕತ್ತರಿಸಿ ನೋಡಿದರೆ ರಕ್ತ ಹರಿಯುತ್ತಿತ್ತಂತೆ’ ಎಂದು (ಹಿಂದಿಯಲ್ಲಿ), ಸರ್ ಊಟ ಮಾಡುತ್ತಲೇ ಹೇಳಿದರು- `ಈ ಎಲ್ಲದಕ್ಕೂ ನಂಬಿಕೆಯೇ ಮೂಲ. ವ್ಯಕ್ತಿಯ ಮರಣಾನಂತರ ದೇಹವನ್ನು ಕೊಳೆಯದಂತೆ ಸುರಕ್ಷಿತವಾಗಿಟ್ಟರೆ ಅದರಲ್ಲಿದ್ದ ಜೀವಾತ್ಮ ಚೈತನ್ಯಗಳು ಅನಂತ ಕಾಲದವರೆಗೂ ಜೀವಂತವಾಗಿರುತ್ತವೆ ಎಂಬ ನಂಬಿಕೆಯೇ ಈ ವೈಜ್ಞಾನಿಕ ಆವಿಷ್ಕಾರಕ್ಕೆ ಮೂಲ. ಸಾಮಾನ್ಯವಾಗಿ ನೆಲದಲ್ಲಿ ಹೂತ ಶವ ಕೊಳೆತು ಹೋಗುತ್ತದೆ. ಅಸ್ಥಿ ಪಂಜರ ಮಾತ್ರ ಉಳಿಯುತ್ತದೆ. ಇದು ಕೊಳೆಯದಂತೆ ಕೆಲವು ರಸಾಯನ ಬಳಸಿ ಪೆಟ್ಟಿಗೆಗಳಲ್ಲಿ ಕಾಯ್ದಿರಿಸುತ್ತಿದ್ದರು’ ಎಂದರು. ತಲೆಯಲ್ಲಿ ಗುಂಗಿ ಹುಳ ಕೊರೆಯುತ್ತಿತ್ತು. ಹಾಗಾದರೆ ದೇಶದ ಎಲ್ಲ ಜನರೂ ಹೀಗೆ ಮಾಡುತ್ತಿದ್ದರೆ? ಆ ಸಂಸ್ಕರಣದ ಪ್ರಕ್ರಿಯೆ ಹೇಗಿತ್ತು? ಎಂದೆ. ನನ್ನ ಪ್ರಶ್ನೆಗಳನ್ನು ಕೇಳುತ್ತಿದ್ದ ವಾಗಿ ಒಂದು ಇಂಗ್ಲೀಷ್ ಪುಸ್ತಕ ತೆಗೆದುಕೊಟ್ಟು `ಇದನ್ನು ಓದಿ’ ಉಳಿದದ್ದನ್ನು ನಾಳೆ ನೀವೇ ನೋಡುವಿರಂತೆ’ ಎಂದರು.
`ಥಿಬಾ’ ಬಂದದ್ದೇ ತಡ ಪ್ರವೇಶದ ಎಡಬದಿಗೆ ಎಲ್ಲರೂ ಹೋದರು. ಏಕೆಂದು ನೋಡಿದರೆ ಅಲ್ಲಿ ಸೇಂಟ್, ಕಲ್ಲು ಕೊರೆದು ಮಾಡಿದ ಆಭರಣಗಳ, ಬಂಗಾರದ ಆಭರಣಗಳ ಅಂಗಡಿಗಳಿದ್ದವು. ಬಹುಪಾಲು ಜನ ಅಲ್ಲಿ ಸೇರಿಕೊಂಡರು. ನಾನು ನೇರವಾಗಿ ರೂಮಿಗೆ ಹೋಗಿ ಬಟ್ಟೆ ಬದಲಿಸಿ ಪುಸ್ತಕ ತೆರೆದೆ. `ಮಮ್ಮಿ’ ಎಂಬ ಶವ ಸಂಸ್ಕರಣ ಕ್ರಮ ತೆಗೆದು ಓದಲಾರಂಭಿಸಿದೆ. ಅದರ ಸಾರ ಹೀಗಿತ್ತು. ಈ ಸಂಸ್ಕರಣ ಯಾವ ರೀತಿ ನಡೆಯುತ್ತಿತ್ತು? ಏನೇನನ್ನು ಬಳಸುತ್ತಿದ್ದರು? ಎಂಬ ಪ್ರಶ್ನೆಗಳಿಗೆ ನಿಖರ ಉತ್ತರ ಸಿಗದಿದ್ದರೂ, `ಸಂಸ್ಕರಣದ’ ಬಗೆಗೆ ದೇಗುಲಗಳ ಗೋಡೆಗಳ ಮೇಲೆ ಬರೆದಿರುವ ಚಿತ್ರಲಿಪಿಗಳಿಂದ ಚರಿತ್ರಕಾರರು ತಾವು ಕಂಡುಕೊಂಡ ಬಹುತೇಕ ನಿಖರ ಎನ್ನಬಹುದಾದ ಒಂದು ಅಭಿಪ್ರಾಯಕ್ಕೆ ಬಂದಿರುವುದು ತಿಳಿದುಬರುತ್ತದೆ. ಶವ ಸಂಸ್ಕರಣ ಎನ್ನುವುದು ಒಂದು ರೀತಿಯ ಪವಿತ್ರ ಕಾರ್ಯ ಎಂಬ ಭಾವನೆಯಿಂದ, ದೇವಸ್ಥಾನ ಸಮುಚ್ಛಯಗಳಲ್ಲಿ ಇದಕ್ಕೆಂದೇ ಒಂದು ಪ್ರತ್ಯೇಕ ವಿಭಾಗ ಇರುತ್ತಿತ್ತು. ಪ್ರಾಣ ಹೋದ ಕೂಡಲೇ ಶವವನ್ನು ಆ ದೇಗುಲಕ್ಕೆ ಸ್ಥಳಾಂತರಿಸುತ್ತಿದ್ದರು. ಶವ ಸಂಸ್ಕರಣದ ಮೊದಲ ಹಂತ ಸ್ನಾನ; ಶುದ್ಧ ನೀರಿನಿಂದ ತಲೆ ಮೈಗಳನ್ನು ತೊಳೆದು, ತಕ್ಷಣವೇ ಕೊಳೆಯುವ ದೇಹದ ಒಳಭಾಗಗಳನ್ನು ಹೊರಗೆಳೆಯಲಾಗುತ್ತಿತ್ತು. ಮನುಷ್ಯ ದೇಹದಲ್ಲಿ ಭಾವನೆ ಚಿಂತನೆಗಳು ಹೃದಯದ ಮೂಲಕ ನಡೆಯುತ್ತವೆ ಎಂಬ ನಂಬಿಕೆ ಇದ್ದುದರಿಂದ, ಹೃದಯವನ್ನು ಮುಟ್ಟುತ್ತಿರಲಿಲ್ಲ! ಉದ್ದನೆಯ ತೆಳು ಸಲಾಕೆಯನ್ನು ಮೂಗಿನ ಹೊರಳೆಗಳ ಮೂಲಕ ಒಳಗೆ ಹಾಕಿ ಮಿದುಳನ್ನು ಹೊರಗೆಳೆಯುತ್ತಿದ್ದರು. ಮಹತ್ವವಿಲ್ಲದ, ಮುಂದಿನ ಬದುಕಿನಲ್ಲಿ ಅಗತ್ಯ ಇಲ್ಲದ ಭಾಗ ಎಂದು ತೆಗೆದು ಬಿಡಲಾಗುತ್ತಿತ್ತು! ಮುಂದಿನ ಹಂತದಲ್ಲಿ ಹರಿತವಾದ ಚಾಕುವಿನಿಂದ ಹೊಟ್ಟೆಯ ಎಡಭಾಗದಲ್ಲಿ ಸೀಳು ಮಾಡಿ, ಜಠರ, ಶ್ವಾಸಕೋಶ, ಕರುಳು, ಯಕೃತ್ತುಗಳನ್ನು ಜಾಗರೂಕತೆಯಿಂದ ಹೊರತೆಗೆಯುತ್ತಿದ್ದರು. ಇವುಗಳನ್ನು `ನೇಟ್ರಾನ್’ ಎಂಬ ವಿಶೇಷ ಗುಣಗಳಿಂದ ಕೂಡಿದ ಉಪ್ಪು ತುಂಬಿದ ಪೊಟ್ಟಣದಲ್ಲಿ ಇಡುತ್ತಿದ್ದರು. ಅಥವಾ ಇವುಗಳಿಗೆಂದೇ ವಿಶೇಷ ರೀತಿಯಿಂದ ತಯಾರಾದ ಭರಣಿ (ಕೇನೊಪಿಕ್ ಜಾರ್ಸ್) ಗಳಲ್ಲಿಡುತ್ತಿದ್ದರು. (ಬಹುಶಃ ಜೀವಂತವಿದ್ದಾಗಿನಿಂದಲೂ ಕಲ್ಮಶ ಶೇಖರಿಸುವ ಭಾಗಗಳೆಂದೋ, ಬೇಗ ಕೊಳೆಯುತ್ತವೆ ಎಂದೋ ಹೀಗೆ ಮಾಡುತ್ತಿರಬಹುದು) ಈ ಭರಣಿಗಳನ್ನು ಮತ್ತೆ ಕುಸುರಿ ಕೆಲಸ ಮಾಡಿದ ಅಥವಾ ಚಿನ್ನದ ಹಾಳೆ ಹೊದಿಸಿದ ಮರದ ಪೆಟ್ಟಿಗೆಗಳಲ್ಲಿಟ್ಟು ಶವದ ಪೆಟ್ಟಿಗೆ ಇಡುವ ಕೋಣೆಯಲ್ಲಿ ಇಡುತ್ತಿದ್ದರು. ನಂತರದ ಹಂತದಲ್ಲಿ-ಅಂಗಾಂಗವಿಲ್ಲದ ದೇಹದ ಟೊಳ್ಳು ಭಾಗಗಳಲ್ಲಿ ಅದೇ `ನೇಟ್ರಾನ್’ ಉಪ್ಪನ್ನು ತುಂಬಿಸಿ, ಮರುಭೂಮಿಯ ಬಿಸಿಲಿನಲ್ಲಿ ನಲವತ್ತು ದಿನಗಳ ಕಾಲ ಒಣಗಲು ಬಿಡುತ್ತಿದ್ದರು. ಈ ಹಂತದಲ್ಲಿ ಕೈಕಾಲುಗಳ ಉಗುರುಗಳು ದೇಹ ಒಣಗುವಾಗ ಸಡಿಲಗೊಂಡು ಉದುರಿಹೋಗದಿರಲೆಂದು ಉಗುರುಗಳನ್ನು ನಾರಿನಿಂದ ಕಟ್ಟಲಾಗುತ್ತಿತ್ತು. ಮೇಲೆಯೂ ಉಪ್ಪು ಸವರಲಾಗುತ್ತಿತ್ತು.
ಮುಂದಿನ ಹಂತ; ನಲವತ್ತು ದಿನಗಳ ಬಳಿಕ ಮತ್ತೆ ಸ್ನಾನ ಮಾಡಿಸಿ, ಶುಭ್ರವಾಗಿಸಿ, ಗಿಡಮೂಲಿಕೆಗಳ ಸಾರದಿಂದ ಸಮೃದ್ಧವಾದ ಔಷಧಿಯ ಗುಣಗಳಿಂದ ಕೂಡಿದ ಎಣ್ಣೆ ಸವರುತ್ತಿದ್ದರು. ಮುಂದಿನ ಹಂತದಲ್ಲಿ ಪಫಿರಸ್ನ ಪಟ್ಟಿಗಳನ್ನು ಶವದ ಮೇಲೆ ಕ್ರಮಬದ್ಧವಾಗಿ ಒಂದು ಬಾರಿ ಸುತ್ತಿ ಮುಗಿದ ನಂತರ, ಚಿನ್ನದ, ಅಮೂಲ್ಯ ಹರಳುಗಳನ್ನೊಳಗೊಂಡ ರಕ್ಷಾಯಂತ್ರಗಳನ್ನಿಡಲಾಗುತ್ತಿತ್ತು. ಮತ್ತೆ ಶುಭ್ರವಾದ ಪಫಿರಸ್ನ ಇಲ್ಲವೆ ಹತ್ತಿಯ ಪಟ್ಟಿಗಳಿಂದ ಸುತ್ತಿ, ಕೊನೆಗೆ ಇದು ಪ್ರಾಚೀನ ದೇವತೆ ಓಸಿರಿಸ್ನ ಮಮ್ಮಿಯಂತೆ ಕಾಣುವಂತಿರಬೇಕು! ಏಕೆಂದರೆ ಅವನೊಬ್ಬನೆ ಮಾದರಿ, ಅದರಲ್ಲೆ ಜೀವನ ಧನ್ಯತೆಯನ್ನು ಪಡೆಯುತ್ತಿದ್ದರು. ಕೆಲವು ಬಾರಿ ವ್ಯಕ್ತಿ ಜೀವಂತವಿದ್ದಾಗ ಉಪಯೋಗಿಸುತ್ತಿದ್ದ ಆಭರಣಗಳನ್ನು ಪಟ್ಟಿಗಳ ಒಳಗೆ ಇರಿಸಲಾಗುತ್ತಿತ್ತು. ಆಗ ಸ್ತ್ರೀ-ಪುರುಷರಿಬ್ಬರೂ ಆಭರಣ ತೊಡುವುದಿತ್ತು. ಚಿನ್ನದ ತಗಡಿನ ಮೇಲೆ ಅಮೂಲ್ಯ ರತ್ನಗಳನ್ನು ಅಳವಡಿಸಿದ ಹಾರ, ಬಳೆ, ಉಗುರು ರಕ್ಷಕಗಳು, ಕಾಲಗೆಜ್ಜೆಗಳು, ಉಂಗುರುಗಳು, ಶಿರ ಆಭರಣಗಳು ಜನಪ್ರಿಯವಾಗಿದ್ದವು. ಪಾದರಕ್ಷೆಗಳೂ ಕೂಡಾ ಬೆಳ್ಳಿ ಬಂಗಾರದವಾಗಿರುತ್ತಿದ್ದವು. ಈ ಎಲ್ಲ ಪ್ರಕ್ರಿಯೆ ಮುಗಿದು ಸಂಸ್ಕರಣಗೊಂಡ ಹೆಣವನ್ನು ಮರದ ಪೆಟ್ಟಿಗೆ (ಶವದಾನಿ)ಗಳಲ್ಲಿ ಇಡಲಾಗುತ್ತಿತ್ತು. ಈ ಹೆಣವನ್ನು ಪಟ್ಟಿಗಳಿಂದ ಸುತ್ತುವುದರಲ್ಲಿಯೂ ಒಂದು ಕ್ರಮವಿತ್ತು. ದೇಹದೊಳಗಿನ ಅಂಗಾಂಗಗಳನ್ನು ತೆಗೆದು, ಉಪ್ಪು ತುಂಬಿಸಿ, ಒಣಗಿಸಿದ ನಂತರ ಔಷಧೀ ದ್ರವ್ಯದಲ್ಲಿ ಅದ್ದಿದ ಪಟ್ಟಿಗಳನ್ನು ಎರಡು ಕೈ, ಎರಡು ಕಾಲುಗಳಿಗೆ ಮೊಳಕೈ, ಮೊಳಕಾಲುಗಂಟುಗಳವರೆಗೆ ಸುತ್ತುತ್ತಿದ್ದರು. ಎರಡು ಕೈಗಳನ್ನು ಎದೆಯ ಮೇಲಿರಿಸಿ, ಇಡೀ ದೇಹಕ್ಕೆ ಅಡ್ಡಡ್ಡವಾಗಿ ಪಟ್ಟಿಯನ್ನು ಸುತ್ತಿ ನಂತರ ಆಭರಣ ಅಥವಾ ಮಂತ್ರಗಳನ್ನು ಬರೆದ ರಕ್ಷಾ ಕವಚ, ಪವಿತ್ರ ವಸ್ತುಗಳನ್ನು ಎದೆಯ ಅಥವಾ ಸೂಕ್ತ ಜಾಗದಲ್ಲಿರಿಸುತ್ತಿದ್ದರು. ಅನಂತರ ದೊಡ್ಡ ಶವವಸ್ತ್ರದಲ್ಲಿ ಸುತ್ತಿ, ಉದ್ದಕ್ಕೊಂದು, ಅಗಲಕ್ಕೆ ಕೆಲವು ಪಟ್ಟಿ ಸುತ್ತುತ್ತಿದ್ದರು. ಅದರ ಮೇಲೆ ಮೃತ ವ್ಯಕ್ತಿಯ (ಇದು ಬಂಗಾರದ್ದು) ಮುಖವಾಡ ಇಡಲಾಗುತ್ತಿತ್ತು. ಅನಂತರ ಮುಖಭಾಗವನ್ನುಳಿದು ಎಲ್ಲವನ್ನು ಕುಸುರಿ ಕೆಲಸದ ಅಂಚಿರುವ ಬಟ್ಟೆಯಿಂದ ದೇಹ ತಲೆಗಳನ್ನು ಮುಚ್ಚಿ ಶವವನ್ನು ಪೆಟ್ಟಿಗೆಯೊಳಗೆ ಇಡಲು ಸಿದ್ದಪಡಿಸುತ್ತಿದ್ದರು. ಮುಖವಾಡ ತಯಾರಿಕೆಯೂ ಒಂದು ಬಹುಮಾನ್ಯತೆ ಪಡೆದ ಕುಶಲಕಲೆ ಎಂದು ಪರಿಗಣಿಸಲಾಗಿತ್ತು.
ಇಷ್ಟೆಲ್ಲಾ ಸಿದ್ಧಗೊಂಡು ಶವದಾನಿಗಳಲ್ಲಿ ಬೆಚ್ಚಗೆ (ತಣ್ಣಗೆ?) ಮಲಗಿದ ಶವಗಳ ಪಯಣವೀಗ ನೈಲ್ನದಿಯ ಪಶ್ಚಿಮ ದಡದತ್ತ ಸಾಗುತ್ತಿತ್ತು. ಸೂರ್ಯ ಮುಳುಗುವ ನಾಡಿದು (ದಿಕ್ಕು). ಇಲ್ಲಿಂದ ಪರಲೋಕದ ಪಯಣ ಆರಂಭವಾಗುವುದು ಎಂಬ ನಂಬಿಕೆ. ಪ್ರತಿಯೊಬ್ಬರು ತಮ್ಮ ಜೀವಿತದ ಕಾಲದಲ್ಲಿಯೇ ಮರಣಾನಂತರದ ವಿಶ್ರಾಂತಿ ಸ್ಥಳವನ್ನು ನಿಗದಿ ಮಾಡುತ್ತಿದ್ದರು. ಶವಯಾತ್ರೆ ಸಮಾಧಿಯ ದ್ವಾರಕ್ಕೆ ಬಂದಾಗ ಮುಖ್ಯ ಅರ್ಚಕರು ಅನೇಕ ಸಾಂಪ್ರದಾಯಿಕ ವಿಧಿ ವಿಧಾನಗಳನ್ನು ನಡೆಸಿ ಶವದ ಮುಖ ಮೈಗಳನ್ನು ಮಂತ್ರದಂಡದಿಂದ ಸ್ಪರ್ಶಿಸುತ್ತಾ ಮಂತ್ರ ಪಠನ ಮಾಡುತ್ತಿದ್ದರು. ಇದರಲ್ಲಿ `ಬಾಯಿ ತೆರೆಸುವ’ ಕ್ರಿಯೆ ಮುಖ್ಯವಾದುದು. ಪವಿತ್ರ ವಸ್ತುಗಳಿಂದ ಶವದ ಮುಖ ಸ್ಪರ್ಶ ಮಾಡುವುದರಿಂದ, ದೇಹದಲ್ಲಿ ಅಲ್ಲಿಯವರೆಗೂ ಸುಪ್ತ ಸ್ಥಿತಿಯಲ್ಲಿರುವ ಜೀವ, ಚೈತನ್ಯ ಸ್ಥಿತಿಗೆ ಬಂದು ಪರಲೋಕ ಪಯಣಕ್ಕೆ ಸಹಾಯವಾಗುತ್ತದೆ ಎಂಬ ನಂಬಿಕೆ ಇತ್ತು.
ಶವಪ್ರಯಾಣದ ಬಗೆಗೆ ಓದು ಆರಂಭವಾಗುವಷ್ಟರಲ್ಲೇ ಸರೋಜಾ ಬಂದಳು. `ಏನ್ ಓದ್ತಿ ಬಿಡ್ಲೆ, ನಾಳೆ ನೋಡೋದ ಐತಿ ಮಲ್ಕೋ’ ಎಂದಳು’ ಮುಗಿದ ಬಿಡ್ತ ತಡಿ, ನೀ ಮಲ್ಕೊ’ ಎಂದೆ. ಮತ್ತೆ ಓದತೊಡಗಿದೆ.ಅಂತೂ ಕೊನೆ ಹಂತಕ್ಕೆ ಬಂದು ಸಿದ್ಧವಾಗಿ ಕೂತ ಶವಪೆಟ್ಟಿಗೆಯನ್ನು ಅಂತಿಮ ವಿಶ್ರಾಂತಿ ಸ್ಥಳವಾದ, ಶಿಲೆಯಿಂದ ರಚಿಸಿದ ಶವದಾನಿಯಲ್ಲಿಟ್ಟು, ಕೆತ್ತನೆ ಕೆಲಸದ ಭಾರವಾದ ಮುಚ್ಚಳದಿಂದ ಮುಚ್ಚಿಬಿಡಲಾಗುತ್ತಿತ್ತು. ಅದಿರುವ ಕೋಣೆಯ ದೀಪಗಳನ್ನು ನಂದಿಸಿ, ಸಮಾಧಿ ಕೋಣೆಯ ಮುಖ್ಯ ಬಾಗಿಲು, ಅನಂತರ ಎರಡನೆ ಬಾಗಿಲು, ಕೊನೆಯದಾಗಿ ಮುಖ್ಯದ್ವಾರಗಳನ್ನು ದೊಡ್ಡ ಕಲ್ಲು ಚಪ್ಪಡಿಯಿಂದ `ಸೀಲ್’ ಮಾಡಲಾಗುತ್ತಿತ್ತು. ಮುಖ್ಯದ್ವಾರ ಅತ್ಯಂತ ಮಜಬೂತಾದ, ಚೌಕಾಕಾರದ ಶಿಲೆ, ಒಂದು ಸನ್ನೆಯ ಸಹಾಯದಿಂದ ಚೌಕಟ್ಟಿಗೆ ಸಮನಾಗಿ ನಿಲ್ಲುವಂತೆ ಮಾಡಿ ಒತ್ತಿ ಬಿಡುತ್ತಿದ್ದರು. ಕೊನೆಯ ಪಯಣಕ್ಕೆ ಬೀಳ್ಕೊಡಲು ಬಂದವರಿಗೆ ಭೋಜನ ವ್ಯವಸ್ಥೆ ಮಾಡಿ, ಕತ್ತಲಾವರಿಸುತ್ತಿದ್ದಂತೆ ಅವರನ್ನು ಮರಳಿ ಮನೆಗೆ ಬೀಳ್ಕೊಡುತ್ತಿದ್ದರು.
ಈಗ ಮೃತ ವ್ಯಕ್ತಿಯ ಚೈತನ್ಯ ತನ್ನ ಅಂತಿಮ ಪಯಣಕ್ಕೆ ಆಣಿಗೊಳ್ಳುತ್ತಿತ್ತು. ಮುಂದೆ ಓಸಿರೀಸ್ನ, ಮೃತರ ಲೋಕದ ಚಕ್ರವರ್ತಿಯ ಪ್ರಜೆ ಆಗುವುದೆಂದರೇನು ಸರಳವೆ? ಹೀಗೆ ಪ್ರಜೆಯಾಗಲಿಕ್ಕೆ ಒಂದು ಕ್ರಮವಿದೆಯಂತೆ, ನನ್ನ ಕಣ್ಣುಗಳು ಜೋಲುತ್ತಿದ್ದವು. ಅಬ್ಬಾ! ಸತ್ತ ಮೇಲೂ ಏನಪ್ಪಾ ಇದು ಏಳು ಸುತ್ತಿನ ಕೋಟೆ! ಬ್ಯಾಡಪ್ಪಾ ಈ ಸಾವು ಅನಿಸಿದರೂ, ಓದುವುದನ್ನು ಬಿಡಲಾಗಲಿಲ್ಲ. ಮತ್ತೇ ಸ್ವಲ್ಪವೇ ಇದೆ. ನಾಳೆ ಓದಕ್ಕಾಗಲ್ಲ ಅನಿಸಿ ಓದಲಾರಂಭಿಸಿದೆ.
ಈ ಚೈತನ್ಯವು ಓಸಿರೀಸ್ನ ಲೋಕಕ್ಕೆ ಪಯಣಿಸುವುದು ಒಂದು ಕುತೂಹಲಕಾರಿ ವಿಷಯವೆ. ಈ ಪಯಣ ಅತ್ಯಂತ ಸುದೀರ್ಘ ಮತ್ತು ದುರ್ಗಮ. ಅವಿಶ್ರಾಂತವಾಗಿ ತಿರುಗಿ ಮುಳುಗುತ್ತಿರುವ ನೇಸರನನ್ನು ಹಿಂಬಾಲಿಸಿ ಪಶ್ಚಿಮದತ್ತ ಪಯಣಿಸಿ, ಮೃತ್ಯುಲೋಕದ ಚಕ್ರವರ್ತಿ ಓಸಿರೀಸ್ ಇದರ ಪಾಪ ಮತ್ತು ಪುಣ್ಯ ತುಲನೆ ಮಾಡುವವರೆಗೂ ಈ ಪಯಣ ಸಾಗಬೇಕು. ಇದು ಕಡಿದಾದ ದಾರಿ. ಒಂದೊಂದು ತಿರುವಿನಲ್ಲೂ ಓಸಿರೀಸ್ನ ಭಟರು ನಿಂತಿದ್ದು ಅವರು ಕೇಳುವ ಬಿಡಿಸಲಾಗದ ಪ್ರಶ್ನೆಗಳಿಗೆ ಉತ್ತರಿಸುತ್ತಾ ಮುಂದೆ ಸಾಗಬೇಕು. ಶವವನ್ನು ಹೂಳುವಾಗ (ತುಂಬುವಾಗ) ಅದರೊಂದಿಗೆ `ಸತ್ತವರ ಗ್ರಂಥ’ (Book of Dead) ಎಂಬ ಗ್ರಂಥವನ್ನು ಇಟ್ಟಿರುತ್ತಾರೆ. ಇದು ಓಸಿರೀಸ್ನ ಭಟರಿಗೆ ಉತ್ತರಿಸುವಾಗ ಸಹಾಯಕ್ಕೆ ಬರುವುದಂತೆ. ಹೀಗೆ ಹಲವಾರು ಘಟ್ಟಗಳನ್ನು ದಾಟಿ, ಭಟರನ್ನು ತೃಪ್ತಗೊಳಿಸಿ ಅಂತಿಮವಾಗಿ ಈ ಚೈತನ್ಯ ದೊಡ್ಡ ಕೋಣೆ ಪ್ರವೇಶಿಸುತ್ತದೆ. ಚಕ್ರವರ್ತಿ ಓಸಿರೀಸ್ನ ಸನ್ನಿಧಿಯಲ್ಲಿ ಚೈತನ್ಯ ತಾನು ಮಾಡಿದ ಪಾಪಗಳ ಬಗ್ಗೆ ಸತ್ಯ ಹೇಳಿ, ತಪ್ಪೊಪ್ಪಿಕೊಳ್ಳಬೇಕು.
ಇಲ್ಲಿ ತೋಳದ ಮುಖದ ದೇವತೆ `ಅನೋಬಿಸ್’ನ (ದೇಹವನ್ನು ಮರಣೋತ್ತರ ವಿಧಿಗೆ ಅನುವುಗೊಳಿಸುವವರ ತಂಡದ ನಾಯಕ) ಮುಂದೆ ತಕ್ಕಡಿಯ ಒಂದು ತಟ್ಟೆಯಲ್ಲಿ ಹಕ್ಕಿಯ ಗರಿ, ಇನ್ನೊಂದರಲ್ಲಿ ಚೈತನ್ಯದ ಹೃದಯ ಇಟ್ಟು, `ಟೂಥ್’ ಎಂಬ ಹೆಸರಿನ ಕೊಕ್ಕರೆ ಮುಖದ ದೇವತೆ ಅಂತಿಮ ತೀರ್ಪು ಕೊಡುತ್ತಾಳೆ ಹಾಗೂ ಅದನ್ನು ದಾಖಲಿಸುತ್ತಾಳೆ. ಹೃದಯ ಗರಿಗಿಂತ ಹಗುರವಾಗಿ ಮೇಲೆದ್ದರೆ, ಆ ಚೈತನ್ಯ ಒಸಿರೀಸ್ನ ಸಾಮ್ರಾಜ್ಯಕ್ಕೆ ಸೇರಲು ಮೆಚ್ಚುಗೆಯಾಯಿತೆಂದು ಅರ್ಥ. ಆ ಸಾಮ್ರಾಜ್ಯವು ಇಜಿಪ್ತನಂತೆ ಸುಖ ಸಮೃದ್ಧಿಗಳಿಂದ ಕೂಡಿರುತ್ತದೆ. ಒಂದು ವೇಳೆ ಹೃದಯ ಅಸತ್ಯದಿಂದ ಭಾರವಾಗಿದ್ದರೆ ಚೈತನ್ಯ ಪರೀಕ್ಷೆಯಲ್ಲಿ ಸೋತಿತು ಎಂದರ್ಥ. ಅಂಥ ಹೃದಯವನ್ನು ಮತ್ತು ಚೈತನ್ಯವನ್ನು `ಅಮ್ಮಿತ್’ ಎನ್ನುವ ಭೀಕರ ರೂಪದ ದೈತ್ಯ, ಕಚ್ಚಿ ತಿಂದು ಹಾಕುತ್ತಾನೆ. ಈ ದೈತ್ಯನಿಗೆ ಸಿಂಹದ ಮುಂಡ, ಮೊಸಳೆಯ ರುಂಡ, ಘೇಂಡಾದ ಕಾಲುಗಳ ಮಿಶ್ರಣವಿರುವ ದೇಹ. ಈಗ ಚೈತನ್ಯಕ್ಕೆ ದೇಹಾಂತ್ಯ ನಂತರದ ಬದುಕಿನ ಆಸೆ ಅಳಿದು ಹೋಗುತ್ತದಂತೆ. ಇದಲ್ಲದೆ ಸಂಸ್ಕರಣಗೊಂಡ ರೂಪದಲ್ಲಿರುವ ದೇಹ ನಾಶಗೊಂಡರೂ ಚೈತನ್ಯಕ್ಕೆ ನೆಲೆ ಇಲ್ಲದಂತಾಗಿ ಅದು ತನ್ನಿಂದ ತಾನೆ ನಾಶಗೊಳ್ಳುತ್ತದೆ ಎಂದೂ ನಂಬಿದ್ದರು. ಒಂದೊಮ್ಮೆ ಚೈತನ್ಯರೂಪದ ದೇಹ ಓಸಿರಿಸ್ನ ಸಾಮ್ರಾಜ್ಯದಲ್ಲಿ ಸತ್ಯ ಹೇಳಿಕೆಗಳಿಂದ ಸ್ಥಾನ ಗಿಟ್ಟಿಸಿಕೊಂಡರೆ ಅದಕ್ಕೆ ಎರಡನೆಯ ಬದುಕು ಸಿಕ್ಕಂತಾಯಿತು. ಹಾಗಾಗಿ ಎರಡನೆಯ ಸಾವೂ ಇದೆ ಎಂಬ ನಂಬಿಕೆ ಇಟ್ಟಿದ್ದಾರಂತೆ ಇಜಿಪ್ಶಿಯನ್ನರು. ಇವರ ಬದುಕು, ಎಷ್ಟು ದೀರ್ಘಕಾಲದ್ದೊ? ಎನಿಸಿತು. ಹಾಗಾದರೆ ಎರಡನೆಯ ಸಾವು ಹೇಗೆ? ಚೈತನ್ಯಗಳು ವಿಗ್ರಹಗಳಲ್ಲೂ ಜೀವಿಸಬಹುದು ಅಥವಾ ತಾತ್ಕಾಲಿಕವಾಗಿ ಆಸರೆ ಪಡೆಯಬಹುದಾಗಿದೆ. ಮಾತ್ರವಲ್ಲ ಚಿತ್ರ, ದಾಖಲಿಸಿದ ಹೆಸರು, ಕೊನೆ ಪಕ್ಷ ಮಾನವರ ನೆನಪಿನಲ್ಲಾದರೂ ಅವರು ಆಸರೆ ಪಡೆಯಬಹುದಿತ್ತು. ಯಾವಾಗ ಇವುಗಳೆಲ್ಲದರಿಂದ ಅವರು ಕಣ್ಮರೆಯಾಗುತ್ತಾರೋ ಆಗ ಅವರು ಶಾಶ್ವತವಾಗಿ ಸಾಯುತ್ತಿದ್ದರು. ಅದು ಎರಡನೆಯ ಮತ್ತು ಶಾಶ್ವತ ಸಾವು. ಆದುದರಿಂದ ಅಕ್ಷಮ್ಯ ಅಪರಾಧ ಮಾಡಿದವರ ಹೆಸರುಗಳನ್ನು ಕಣ್ಮರೆಯಾಗುವಂತೆ ಸಂಪೂರ್ಣ ಅಳಿಸಿ ಹಾಕುವ, ಪರಮೋಚ್ಛ ಶಿಕ್ಷೆ ವಿಧಿಸುವ ಪರಿಪಾಠವೂ ಜಾರಿಯಲ್ಲಿತ್ತು.
ಹೀಗೆ ಎರಡೆರಡು ಜನ್ಮಾಂತರಗಳ ಇಜಿಪ್ಶಿಯನ್ನರ ಪಯಣ ಬಿಡದೆ ಓದಿಸಿಕೊಂಡು ಹೋಯಿತು. ಉಳಿದುದನ್ನು ನಾಳೆ ನೋಡಿದರಾಯಿತೆಂದು ದೀಪ ಆರಿಸಿ, ರಾತ್ರಿ ತಿಳಿ ಬೆಳದಿಂಗಳಲ್ಲಿ ಪಿರ್ಯಾಮಿಡ್ ನೋಡೋಣವೆಂದು ಕಿಟಕಿಗೆ ಬಂದು ನಿಂತೆ. ಡುಮ್ಮ ಚಂದ್ರ ನನ್ನ ದಾರಿಯನ್ನೆ ಕಾಯುತ್ತಿರುವಂತೆ ಎದುರಲ್ಲೇ ನಿಂತಿದ್ದ. ಕತ್ತಲಲ್ಲಿ ಪಿರ್ಯಾಮಿಡ್ ಸ್ಪಷ್ಟವಾಗಿ ಕಾಣಲಿಲ್ಲ. ಬಂದು ಮಲಗಿದೆ. ಒಂದು ಸಲ ಇಜಿಪ್ತ್ ಸ್ಮೃತಿ ಪಟಲದಲ್ಲಿ ಹಾಯ್ದು ಹೋಯಿತು. ಕೈರೋ ಇಸ್ತಾಂಬುಲ್ನಷ್ಟು ಶ್ರೀಮಂತವಲ್ಲ. ಒಂದು ರೀತಿ ಬಿಜಾಪುರನಗರ ಕಂಡಂತೆ, ಬಿಳಿ ಧೂಳು, ಕಣ್ಣು ಕುಕ್ಕಿಸುವ ಬಿಸಿಲು, ಮೇಲ್ಮುದ್ದೆಯಂಥ ಮನೆಗಳು, ಇತ್ತೀಚಿನ ಸಿಮೆಂಟ್ ಕಟ್ಟಡಗಳು, ಒಂದಿಷ್ಟು ನಗರೀಕರಣ, ಒಂದಿಷ್ಟು ಆಧುನೀಕರಣ, ಪುರುಷ ಪ್ರಧಾನ ಸಂಸ್ಕೃತಿ, ಕುತ್ತಿಗೆಯಿಂದ ಕಾಲ್ತುದಿಯವರೆಗೆ ಇಳಿಬಿದ್ದ ಸನ್ಯಾಸಿ ಭಗವಾದಂತ ಸಾಂಪ್ರದಾಯಿಕ ಉಡುಗೆ. ನಾನು ಸಂಕೇಶ್ವರದಿಂದ ಧಾರವಾಡಕ್ಕೆ ಸ್ನಾತಕ ಪದವಿ ಓದಲು ಬಂದಾಗ ಪ್ಲಾಸ್ಟಿಕ್ ಕವರ್ನಲ್ಲಿ ಪ್ಯಾಕ್ ಮಾಡಿ, ಗಾಜಿನ ಪೆಟ್ಟಿಗೆಯೊಳಗಿಟ್ಟು ರೊಟ್ಟಿ ಮಾರುವುದನ್ನು 22 ವರ್ಷಗಳ ಹಿಂದೆ ನೋಡಿದ್ದೆ. ಆದರಿಲ್ಲಿ ವಿಚಿತ್ರ ವೈಶಿಷ್ಟ್ಯವೆಂದರೆ ದಾರಿಯ ಪಕ್ಕದಲ್ಲಿ, ಫುಟ್ಪಾತ್ ಮತ್ತು ತಳ್ಳುವ ಗಾಡಿ ಮೇಲೆ ಬ್ರೆಡ್ನಷ್ಟು ದಪ್ಪ, ನಮ್ಮ ರೊಟ್ಟಿಯಷ್ಟು ದೊಡ್ಡವಿರುವ ರೊಟ್ಟಿಗಳನ್ನು ತೆರೆದಿಟ್ಟೇ ಮಾರುತ್ತಿದ್ದರು. ಮನಸ್ಸಿನಲ್ಲೇನೋ ಕಸಿವಿಸಿ. ಹಾಗೇ ಮಾರುವ ಮತ್ತು ಕೊಳ್ಳುವ ಜನರ ಜೀವನ ಹೇಗಿರಬಹುದು? ಎನಿಸಿತು. ಮರುಭೂಮಿಗಳಲ್ಲಿ ಒಂದು ಮಾತಿದೆಯಂತೆ `ತಾಳೆ ಮರದಡಿ ಮಾತ್ರ ನೆರಳು’ ಎಂದು. ದಾರಿಯುದ್ದಕ್ಕೂ ನಮಗೆ ಖರ್ಜೂರ ಮರಗಳನ್ನು ಬಿಟ್ಟರೆ ಹತ್ತಿ, ಕಬ್ಬು, ಗೋವಿನ ಜೋಳ, ಗೋಧಿ ಮತ್ತು ಭತ್ತಗಳು ಕಾಣ ಸಿಕ್ಕಿದ್ದವು. ಖರ್ಜೂರ, ಉತ್ತತ್ತಿ ಮರಗಳನ್ನು ಸಮೀಪದಿಂದ ನೋಡಬೇಕೆಂದು ನೆನೆಸಿಕೊಳ್ಳುತ್ತಾ ನಿದ್ದೆ ಹೋದೆ. 19-7-2010 ಕೈರೋದಲ್ಲಿ ಮೊದಲ ದಿನದ ರಾತ್ರಿ ಕಳೆದು ಹೋಯಿತು.
 
(ಮುಂದುವರಿಯುವುದು…)

‍ಲೇಖಕರು avadhi

12 March, 2014

ನಿಮಗೆ ಇವೂ ಇಷ್ಟವಾಗಬಹುದು…

ರಾಜಸ್ಥಾನವೆಂಬ ಸ್ವರ್ಗದ ತುಣುಕು : ಖ್ವಾಜಾ ಮೊಯಿನುದ್ದೀನ್ ಚಿಸ್ತಿ ಸನ್ನಿಧಿಯಲ್ಲಿ

ರಾಜಸ್ಥಾನವೆಂಬ ಸ್ವರ್ಗದ ತುಣುಕು : ಮತ್ತೆ ಮತ್ತೆ ಅದೇ ಜಾಗದಲ್ಲಿ ನಿಲ್ಲುತ್ತಿತ್ತು ಖಾಲಿ ಬೈಕ್

0 Comments

Trackbacks/Pingbacks

  1. ನೈಲ್ ನದಿಯ ಮಡಿಲಲ್ಲಿ : ದುಡ್ಡು ಹೋಗಿ ಒಂಟೆ ಬಂತು ಡುಂ ಡುಂ ಡುಂ « ಅವಧಿ / Avadhi - [...] ನೈಲ್ ನದಿಯ ಮಡಿಲಲ್ಲಿ : ದುಡ್ಡು ಹೋಗಿ ಒಂಟೆ ಬಂತು ಡುಂ ಡುಂ ಡುಂ March 13, 2014 by avadhinew (ಇಲ್ಲಿಯವರೆಗೆ…) [...]

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading