ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನೈಲ್ ನದಿಯ ಮಡಿಲಲ್ಲಿ : 'ಎಲ್ಲರಿಗೂ ಘನ ಆಶ್ಚರ್ಯ, ಅದು ಹೆಣ್ಣಲ್ಲ ಗಂಡು!'

(ಇಲ್ಲಿಯವರೆಗೆ…)

ಕೋಚ್ ನಮಗಾಗಿ ಕಾಯುತ್ತಿತ್ತು. ಅದನ್ನೇರಿ ತಲುಪಿದ್ದು ಆಸ್ವಾನ್ ಆಣೆಕಟ್ಟು. ಅಲ್ಲಿ ಮಾರ್ಗದರ್ಶಿ ಹಸನ್ ಹಾಗೂ ಡ್ರೈವರ್ ಸಮೀರ್ ಅಲಿ. ಈ ಮಾರ್ಗದರ್ಶಿಯಂತೂ ಮತ್ತೂ ಚುರುಕಾಗಿದ್ದರು. ಅಲ್ಲದೆ ಹೇಳುವ ವಿಷಯ ಸ್ಪಷ್ಟವಾಗಿದ್ದರೂ ಸಮಸ್ಯೆ ಉಚ್ಛಾರದ್ದು. ಆಣೆ ಕಟ್ಟಿಗೆ ಹೋಗುವಾಗ ರಣರಣ ಬಿಸಿಲು. ಝಳ, ಬೆವರಿನಲ್ಲಿ ಸ್ನಾನ ಮಾಡಿಸಿತ್ತು.
ನೈಲ್ ನದಿ ಕಣಿವೆಯಲ್ಲಿ ಎರಡು ಭಾಗಗಳು. ಮೇಲು ಇಜಿಪ್ತ್ ಮತ್ತು ಕೆಳ ಇಜಿಪ್ತ. ಮೇಲು ಇಜಿಪ್ತ ಕೈರೋದಿಂದ ಸೂಡಾನ್ ವರೆಗಿದ್ದರೆ, ಕೆಳ ಇಜಿಪ್ತ ನೈಲ್ ನದಿಯ ಮುಖಜ ಭೂಮಿ. ಇದು ಕೈರೋ ಮತ್ತು ಭೂ ಮಧ್ಯ ಸಮುದ್ರಗಳ ಮಧ್ಯ ತ್ರಿಕೋನಾಕೃತಿಯಲ್ಲಿದೆ. ನಾವೀಗ ಇರುವುದು ಮೇಲು ಇಜಿಪ್ತ ಭಾಗದಲ್ಲಿ. ಆಸ್ವಾನ ಬೆಳೆಯುತ್ತಿರುವ ನಗರ. (ನಮಗೆ ಕಂಡು ಬಂದದ್ದು ಮೇಲ್ಮುದ್ದೆ ಮನೆಗಳು. ಬಹುಶಃ ಹಳೆಯ ಆಸ್ವಾನ ಇರಬಹುದು.) ನೈಲ್ ನದಿಯ ಪ್ರವಾಹದಿಂದ ದಡದ ಇಕ್ಕೆಲಗಳನ್ನು ನಾಶಮಾಡುತ್ತಿದ್ದ ಹರಿವನ್ನು ತಡೆಯಲು ಆಸ್ವಾನ್ ಎಂಬಲ್ಲಿ ಆಣೆಕಟ್ಟು ಕಟ್ಟಿ ನೀರನ್ನು ನಾಸೀರ್ ಅರಾಫತ್ ಸರೋವರಕ್ಕೆ ಬಿಡುವ ಯೋಜನೆ ಹಾಕಲಾಯಿತು. ಇದರಿಂದ ಜಲಸಮಾಧಿಯಾಗಲಿದ್ದ ಇಮ್ಮಡಿ ರ್ಯಾಮಸೆಸ್ ಮತ್ತು ಅವನ ಪತ್ನಿ ನೆಪ್ರೆಟರಿಯ 3000 ವರ್ಷಗಳಷ್ಟು ಹಳೆಯ ದೇವಸ್ಥಾನಗಳನ್ನು ಬೇರೆ ಎತ್ತರದ ಸ್ಥಳಕ್ಕೆ ಸ್ಥಳಾಂತರಿಸಲಾಯಿತು. ಈ ಡ್ಯಾಮ್ ನಿಂದಾಗಿ ಸುತ್ತಲೂ ನೀರಾವರಿ ಹೆಚ್ಚಾಗಿ, ಹಸಿರು ಹೆಚ್ಚಿ, ಇದು ಸುಮಾರು 40,000 ಎಕರೆ ಭೂಮಿಯನ್ನು ಫಲವತ್ತುಗೊಳಿಸಿದೆ. ಇದಕ್ಕೆ 180 ಗೇಟ್ ಗಳಿದ್ದು, 50 ಮೀಟರ್ ಎತ್ತರವಾಗಿದೆ. ವಿದ್ಯುತ್ ಉತ್ಪಾದನೆಗಾಗಿ 12 ಜಲಚಕ್ರಗಳಿವೆ. ಅವುಗಳಲ್ಲಿ ಮೂರು ಮಾತ್ರ ಸುಸ್ಥಿತಿಯಲ್ಲಿದ್ದು ಕಾರ್ಯ ನಿರ್ವಹಿಸುತ್ತಿದ್ದವು.
ಈ ಡ್ಯಾಮ್ ಕಟ್ಟಿದ ಮೇಲೆ ನದಿ ದಿಕ್ಕು ಬದಲಾಯಿಸಿತಂತೆ. ಹೀಗಾಗಿ ಅಲ್ಲಿದ್ದ ನೈಲ್ ಸಭ್ಯತೆ ಸರ್ವನಾಶವಾಗಿ ಹೋಯಿತಂತೆ. ಆಣೆಕಟ್ಟು, ಅದರ ಆಗಾಧತೆ ಕಣ್ಣು ತುಂಬಿದವು. ಅದರ ಪ್ರಾಚೀನ ಕತೆ ಮನ ತುಂಬಿತು. ಅಲ್ಲಿ ಕೋಚ್ ಏರಿ ಮುಂದೆ ಬಂದಾಗ ವಿದ್ಯುತ್ ಶಕ್ತಿ ಉತ್ಪಾದನಾ ಕೇಂದ್ರ ಇದೆ. ಅಲ್ಲಿಂದ ಬರುವಾಗ ಚತುಷ್ಟಥ ದಾರಿ ಎಷ್ಟು ವಿಶಾಲವಾಗಿದೆ ಎಂದರೆ ಬಸ್ಸು ಓಡಿದಂತೆನಿಸದೆ ತೇಲಿದಂತೆನಿಸುತ್ತದೆ. ಅಲ್ಲಿಂದ ಬರುವಾಗ ದೂರದಲ್ಲಿ `ನ್ಯೂಬಿಯನ್ ವಿಲ್ಲೇಜ್’ ಗಳು ಕಾಣುತ್ತಿರುವುದನ್ನು ಮಾರ್ಗದರ್ಶಿ ತೋರಿಸಿದ. `ಇಲ್ಲಿಯ ನಿಗ್ರೋಗಳು ಆಫ್ರಿಕಾದ ಮೂಲ ನಿವಾಸಿಗಳು. ನಿಗ್ರೋಗಳಿರುವ ಎಲಿಂಪ್ಟೈನ್ ದ್ವೀಪ, ಪಾಮ್ ಗಡಗಳಿಂದ ಕೂಡಿದ ಕೆಳಗಿನ ಭೂ ಪ್ರದೇಶದ ಹಳ್ಳಿಗಳಿವು. ಅಲ್ಲಿಗೆ ಹೋದರೆ ಅವರು ತಮ್ಮ ಜೀವನಕ್ಕೆ ಸಂಪನ್ಮೂಲಗಳನ್ನು ಹೇಗೆ ಸಂಪಾದಿಸುತ್ತಾರೆ? ನೆಮ್ಮದಿಯಿಂದ ಹೇಗೆ ಬದುಕುತ್ತಾರೆ? ಎಂಬುದನ್ನು ತಿಳಿಯಬಹುದು. ಫೇರೋಗಳ ಕಾಲದಲ್ಲಿ ಈ ಹಳ್ಳಿಗಳು ಸಣ್ಣ ಪ್ರಮಾಣದಲ್ಲಿ ಆದರೂ ಚಿನ್ನದ ಮೂಲಗಳಾಗಿದ್ದವಂತೆ.

ಆಫ್ರಿಕಾದ ಚರಿತ್ರೆಯಲ್ಲಿ ಇವರದು ಪ್ರಮುಖ ಪಾತ್ರ. ಸುಮಾರು ಕ್ರಿ. ಪೂ 1580 ರಲ್ಲಿದ್ದ ರಾಣಿ ನೆಪ್ರೆಟರಿ ಸೌಂದರ್ಯಕ್ಕೂ, ಸಾಮರ್ಥ್ಯಕ್ಕೂ ಹೆಸರಾಗಿದ್ದವಳು. ಆಸಕ್ತಿಕರ ಎಂದರೆ ದ್ವೀಪದ ಹಸಿರು ಹಿನ್ನೆಲೆಗೆ ಹೊಂದುವ, ಹೊಳೆಯುವ ಬಿಳಿ ಮಣ್ಣಿನ ಇವರ ಮನೆಗಳನ್ನು ಕುಂಬಾರಿಕೆಯಿಂದ ಮಾಡಿರುತ್ತಾರಂತೆ. ಇವರು ಬೇಯಿಸುವ ಒಂದು ವಿಧವಾದ ರೊಟ್ಟಿ, ರುಚಿಗಳಲ್ಲೇ ರುಚಿಯಾದುದಂತೆ. ಈ ಹಳ್ಳಿಗಳಿಗೆ ದೋಣಿ ಇಲ್ಲವೆ ನಾವೆಗಳ ಮೂಲಕ ಹೋಗಬೇಕಾಗುತ್ತದಂತೆ. ಆಣೆಕಟ್ಟು ಕಟ್ಟುವಾಗ ಈ ಆದಿವಾಸಿಗಳೂ ಬಹಳಷ್ಟು ಕಷ್ಟ ಅನುಭವಿಸಿದರಂತೆ.’ ಹಸನ್ ವಿವರಣೆ ನೀಡುತ್ತಿದ್ದ.
ಅಬೂ ಸಿಂಬೆಲ್ ದೇವಾಲಯಗಳು
ಮೂಲಭೂತ, ನೈಸರ್ಗಿಕ, ಸ್ವಾಭಾವಿಕ, ವಾಸ್ತವವಾದ, ಕೃತಕವಲ್ಲದ ಸ್ವಕಲ್ಪಿತ, ಪ್ರಕೃತಿ ಜೀವಿಗಳನ್ನೊಮ್ಮೆ ನೋಡಬೇಕು ಎನ್ನುತ್ತಿರುವಾಗಲೇ ದೇವಾಲಯ ತಲುಪಿಯಾಗಿತ್ತು. ಒಂದೆಡೆ ಇಳಿದು ಅಲ್ಲಿಂದ ಒಂದು ಚಿಕ್ಕ ನಾವೆಯೊಳಗೆ 10 ನಿಮಿಷ ತೇಲಿ ಬಂದೆವು. ಅಲ್ಲಿ ಸುತ್ತಲೂ ದೊಡ್ಡ ದೊಡ್ಡ ಸುಂದರ ಕಲ್ಲುಗಳೇ ಕಲಾಕೃತಿ ಸೃಷ್ಟಿಸಿವೆ. ಅಲ್ಲಲ್ಲಿ ಆ ಕಲ್ಲುಗಳನ್ನು ಕೆತ್ತಿ ಮಾಡಿದ ಚಿಕ್ಕ ದೇವಾಲಯಗಳಿದ್ದವು. ಕಲ್ಲುಗಳ ನಡುವೆ ಹಣಿಕಿಕ್ಕಿರುವ ಹಸಿರು. ಶಾಂತವಾಗಿ ಹರಿಯುವ ಜುಳು-ಜುಳು ನೀರು. ಸ್ವರ್ಗ ಅಂದರೆ ಹೀಗೆ ಇರಬಹುದೆ? ಎನಿಸಿತು. ಅಲ್ಲಿ ಇಳಿದು ದೇವಸ್ಥಾನಕ್ಕೆ ಹೋದೆವು.
ಅಣೆಕಟ್ಟನ್ನು ಕಟ್ಟುವಾಗ ಮುಳುಗಿ ಹೋಗಲಿದ್ದ ಅಬೂ ಸಿಂಬಲ್ ನಲ್ಲಿರುವ ದ್ವಿತೀಯ ರ್ಯಾಮಸೆಸ್ ಮತ್ತು ನೆಪ್ರೆಟರಿಯ ದೇವಸ್ಥಾನಗಳನ್ನು ಸ್ಥಳಾಂತರಿಸಿ ಕಟ್ಟಲಾದ ದೇವಾಲಯಗಳಿವು. 21 ಮೀಟರ್ ಎತ್ತರದ ಮೂರ್ತಿ ಶಿಲ್ಪಗಳನ್ನು ಹಂತ ಹಂತವಾಗಿ ಬಿಡಿಸಿ, 213 ಅಡಿ ಎತ್ತರದ ಸ್ಥಳದಲ್ಲಿ ಮತ್ತೆ ಮೊದಲಿನಂತೆಯೇ ಕಟ್ಟಲಾಗಿದೆ. ಇದಕ್ಕಾಗಿ ವಿಶ್ವಸಂಸ್ಥೆಯ ನೆರವಿನಿಂದ ಸುಮಾರು 25 ಕೋಟಿ ರೂ.ಗಳನ್ನು ಸಂಗ್ರಹಿಸುವಲ್ಲಿ 56 ರಾಷ್ಟ್ರಗಳು ಸಹಾಯಹಸ್ತ ನೀಡಿವೆಯಂತೆ. ಹೀಗೆ ನಾಲ್ಕು ವರ್ಷಗಳ ಕಾಲ ನಿರಂತರವಾಗಿ ಸ್ಥಳಾಂತರ ಮತ್ತು ನಿರ್ಮಾಣ ಕಾರ್ಯಗಳು ನಡೆದು, ದೇವಸ್ಥಾನಗಳು ವ್ಯವಸ್ಥಿತವಾಗಿ ಮೂಲದಂತೆಯೇ ಎದ್ದು ನಿಂತವು. ಮೂಲ ದೇವಸ್ಥಾನದಲ್ಲಿ ವರ್ಷಕ್ಕೆ ಎರಡು ಬಾರಿ ಫೆಬ್ರುವರಿ-21 ಮತ್ತು ಅಕ್ಟೋಬರ್ 21ರಂದು ಸೂರ್ಯೊದಯದ ಕಿರಣಗಳಿಂದ ಗರ್ಭಗೃಹದ ಮೂರ್ತಿಗಳು ಬೆಳಗುತ್ತಿದ್ದವಂತೆ. ಭಕ್ತರಿಗೆ ಇದೊಂದು ಅಪೂರ್ವ ಅನುಭವವಾಗಿತ್ತು. ಇದರ ದರ್ಶನಕ್ಕಾಗಿ ಸಾವಿರಾರು ಜನ ಬರುತ್ತಿದ್ದರಂತೆ. ಈಗ ಸ್ಥಳಾಂತರಿಸಿದ ದೇವಸ್ಥಾನವನ್ನೂ ಅದೆ ಕೋನದಲ್ಲಿ ಕಟ್ಟಲಾಗಿದೆ.
ಬೃಹದಾಕಾರದ ದೊಡ್ಡ ಬಂಡೆಯಲ್ಲಿ ಕೆತ್ತಿದ ಅಖಂಡಗೋಡೆಗಳು ಸ್ಥಳಾಂತರಿಸುವಾಗ ತುಂಡರಿಸಿದ್ದು ಕಂಡು ಬರುತ್ತಿತ್ತು. ಪ್ರವೇಶ ದ್ವಾರದ ಆಚೆ ಎರಡು, ಈಚೆ ಎರಡು, ಸಿಂಹಾಸನದ ಮೇಲೆ ಕುಳಿತ ರ್ಯಾಮಸೆನ ಸ್ ಮೂರ್ತಿಗಳ ನಡುವೆ ಇದ್ದ ಪ್ರವೇಶ ದ್ವಾರ ಇಲಿ ಬೋನಿನಂತೆ ಕಾಣುತ್ತದೆ. ಅಷ್ಟೊಂದು ಬೃಹದಾಕಾರದ ಶಿಲ್ಪಗಳಿಗೆ ಹಿನ್ನಲೆಯಾಗಿ, ದೇವಾಲಯದ ಗೋಡೆ, ಮೂರ್ತಿಗಳ ಎತ್ತರದಿಂದ ಮತ್ತೆ 10-12 ಮೀಟರ್ ಎತ್ತರವಿದೆ. ನಾವು ಅದರ ಮುಂದೆ ಗೊಂಬೆಗಳಂತೆ ಕಾಣುತ್ತೇವೆ. ರ್ಯಾಮ್ಸೆಸ್ ನ ಕಾಲಡಿಯಲ್ಲಿ ಆತನ ಹೆಂಡತಿ ಮತ್ತು ಮಗಳ ಚಿಕ್ಕ ಶಿಲ್ಪಗಳಿವೆ. ಇದು ಮೂಲತಃ ಅಖಂಡ ಏಕ ಶಿಲಾ ದೇವಾಲಯವಂತೆ.
ನೆಪ್ರೆಟರಿ ದೇವಾಲಯದ ಪ್ರವೇಶದ್ವಾರದ ಬಲಕ್ಕೆ ಮೂರು, ಎಡಕ್ಕೆ ಮೂರು ಮೂರ್ತಿಗಳಿವೆ. ಎರಡು ರ್ಯಾಮಸೆಸ್ ನವು ಒಂದು ನೆಪ್ರೆಟರಿಯದು. ರ್ಯಾಮಸೆಸ್ ಒಂದು ಕಡೆಯಲ್ಲಿ ಮೇಲಿನ ಇಜಿಪ್ತ ಸಂಕೇತವಾಗಿ ಕಿರೀಟ ಧರಿಸಿದ್ದರೆ, ಇನ್ನೊಂದೆಡೆ ಅಮೂನ್ ದೇವರುಳ್ಳ ಕಿರೀಟ ಧರಿಸಿದ್ದಾನೆ. ನೆಪ್ರಟರಿ, ಪ್ರೇಮ ದೇವತೆ ಹಾಥೂರ್ಳ ಕೊಂಬುಳ್ಳ ಕಿರೀಟ ಧರಿಸಿದ್ದಾಳೆ. ಈ ಮೂರ್ತಿಗಳ ಮಧ್ಯದ ಪಟ್ಟಿಕೆಗಳಲ್ಲಿಯ ಶಾಸನದಲ್ಲಿ “ಮಹಾನ್ ದೇವರ ದೇವ, ಸೂರ್ಯನ ಮಗ, ಎರಡೂ ಭೂಮಿಯ ಒಡೆಯ, ಸಿಂಹಾಸನಾದೀಶ, ಪ್ರೀತಿಪಾತ್ರನಾದ ರ್ಯಾಮಸೆಸ್, ಅಮೂನ್ ದೇವರ ಪ್ರೀತಿಗೆ ಪಾತ್ರನಾಗಿದ್ದಾನೆ” ಎಂದು ಚಿತ್ರ ಲಿಪಿಯಲ್ಲಿ ಬರೆಯಲಾಗಿದೆ. ಅಮೂನ್ ಎಂದರೆ ಸೂರ್ಯ (`ರಾ’). ದೇವಸ್ಥಾನದ ಒಳಹೋದರೆ ಗೋಡೆಗಳ ತುಂಬ ಚಿತ್ರಲಿಪಿ, ಅದರೊಂದಿಗೆ ನೆರೆಯ, ಬಿತ್ತುವ, ಸುಗ್ಗಿಯ ದೇವತೆಗಳ ಚಿತ್ರಗಳನ್ನು ಶಿಲಾಭಿತ್ತಿಯಲ್ಲಿ ಕೆತ್ತಲಾಗಿದೆ. ಇದೇ ಕಲ್ಲಿನಲ್ಲಿ ಪಂಚಾಂಗವನ್ನೂ ಕೆತ್ತಲಾಗಿದೆ. ಇಲ್ಲಿ ಒಂದೆಡೆ `ಹಾಪಿ’ ಎನ್ನುವ ದೇವತೆಯ ಚಿತ್ರವಿದೆ. ಇದು ಅರ್ಧ ಪುರುಷ ಅರ್ಧ ಸ್ತ್ರೀ, ನೈಲ್ ನದಿಯ ನೀರಿನ ದೇವತೆ ಇದು. ನೀರಿನ ಹರಿವು, ಮೀನಿನ ಚಿತ್ರವಿರುವ ನದಿಯ ಸಂಕೇತ ಈ ದೇವತೆಯದು. ಭೂಮಿಯ ಸತ್ವ ಕಡಿಮೆಯಾದಾಗ ನೆರೆಗಾಗಿ ಇದನ್ನು ಆರಾಧಿಸುತ್ತಿದ್ದರು. ನೆರೆ ಎಂದರೆ ಫಲವತ್ತಾದ ಹೂಳು! ಎಡಗೈಲಿ ದಂಡ, ಬಲಗೈಯಲ್ಲಿ `ಅಂಕ’ ಧರಿಸಿದ್ದಾನೆ. ಈ ನದಿಯ ಮೂಲ ಹೆಸರು ಕೂಡ ಹಾಪಿ. (ನೈಲ್ ಇದು ಗ್ರೀಕರು ಇಟ್ಟ ಹೆಸರು.) `
ಹಾಪಿ’ ಎಂದರೆ `ಜೀವದಾಯಕ’ ಎಂದರ್ಥ. ಇಲ್ಲಿ ಸೂರ್ಯದೇವತೆಗೆ ಮೂರು ಅವತಾರಗಳಿವೆ. ಅವುಗಳನ್ನು ತಿಳಿದುಕೊಂಡರೇನೆ `ಅಮೂನ್’ `ರಾ’ ಗಳು ಅರ್ಥವಾಗುವುದು. ಖೆಫ್ರಿ, ರಾ, ಅಮೂನ್ ಇವು ಸೂರ್ಯನ ಮೂರು ರೂಪಗಳು. ಬೆಳಗಿನ ಸೂರ್ಯ ಖೆಫ್ರಿ. `ಖೆಫ್ರಿ’ ಎಂದರೆ `ತನ್ನಿಂದ ತಾನೆ ಉದ್ಭವ’ ವಾಗುವವನು. ಸ್ವಯಂಭೂ. ಇವನ ರೂಪ-ಪುನರ್ಜನ್ಮದ ಸಂಕೇತ ಅಥವಾ ನಶ್ವರತೆಯನ್ನು ಪ್ರತಿನಿಧಿಸುವ ಸಗಣಿ ಹುಳದ ಮುಖ; ಪುರುಷದೇಹ, ಬಲಗೈಯಲ್ಲಿ ದಂಡ, ಎಡಗೈಯಲ್ಲಿ `ಅಂಕ್’ ಹಿಡಿದಿದ್ದಾನೆ. ಮಧ್ಯಾಹ್ನದ ಸೂರ್ಯ `ರಾ’. ಗಿಡುಗನ ಮುಖ ಹೋಲುವ ಪಕ್ಷಿಯ ಮುಖದ ಇವನ ತಲೆಯ ಮೇಲೆ ಉರಿಯುವ ಸೂರ್ಯಗೋಳ ಹಾಗೂ ಹಾವಿನ ಚಿಹ್ನೆ ಇವೆ. ಎಡಗೈಯಲ್ಲಿ ದಂಡ, ಬಲಗೈಯಲ್ಲಿ ಅಂಕ ಹಿಡಿದಿದ್ದಾನೆ. ಸಂಜೆ ಮುಳುಗುತ್ತಿರುವ ಸೂರ್ಯ `ಅಮೂನ್’. ಅತುಮ್, ಅಟೆನ್ ಎಂದೂ ಕರೆಯುತ್ತಾರೆ. ಇದು ಪರಿಪೂರ್ಣ ಮನುಷ್ಯ ರೂಪದಲ್ಲಿದ್ದು ಎರಡು ಗರಿಗಳ ಕಿರೀಟ ಧರಿಸಿ, ಬಲಗೈಯಲ್ಲಿ ರಾಜದಂಡ, ಎಡಗೈಯಲ್ಲಿ ಅಂಕವನ್ನು ಎತ್ತಿ ಹಿಡಿದು ಕುಳಿತ ಭಂಗಿಯಲ್ಲಿದ್ದಾನೆ.

ಇಲ್ಲೊಂದು ಹತ್ತು ತಲೆಗಿಂತ ಹೆಚ್ಚು ತಲೆ, ಇಪ್ಪತ್ತು ಕೈಗಳಿಗಿಂತ ಹೆಚ್ಚು ಕೈಗಳನ್ನು ಹೊಂದಿದ ಒಂದು ಚಿತ್ರ ಕೆತ್ತಲಾಗಿದೆ. ನಾನದರ ಫೋಟೋ ತೆಗೆದೆ. ಇಲ್ಲೆಲ್ಲ ನಮ್ಮ ಅರ್ಧನಾರೀಶ್ವರ, ರಾವಣ ಮನಃ ಪಟಲದಲ್ಲಿ ಸುಳಿದು ಹೋದರು. ಅಲ್ಲಿಂದ ತಿರುಗಿ ಅದೇ ನಾವೆಯಲ್ಲಿ ಬರಬೇಕಿತ್ತು. ನಾವೆ ಹತ್ತಿರ ಬಂದು ಅದನ್ನೇರುವಾಗ ಮತ್ತದೇ ಪ್ರಕೃತಿ, ಜುಳು-ಜುಳು ನೀರು. ಕಾಲುಜಾರದಂತೆ ಮುಂದೆ ಹೋಗಿ ನೈಲ್ ನೀರನ್ನು ಸ್ಪರ್ಶಿಸಿ, ಮುಖ, ಕಣ್ಣು, ನೆತ್ತಿಗೆ ಹಾಕಿಕೊಂಡೆ. ಏನೋ ಧನ್ಯತಾಭಾವ ಮೂಡಿತು. ನಾವೆಯಲ್ಲಿ ಮರಳಿ ಬರುವಾಗ ಮತ್ತೊಂದು `ಫಿಲೈ ದೇವಾಲಯ’ ನೋಡಿದೆವು. ಪೂಜ್ಯನೀಯ ದ್ವೀಪವೆನಿಸಿರುವ ಈ ಸುಂದರ ತಾಣವನ್ನು `ಇಜಿಪ್ತಿನ ಮುತ್ತು’ (Pearl of Egypt) ಎಂದು ಕರೆಯುತ್ತಾರೆ.
ಈ ದೇವಾಲಯಗಳನ್ನು ನೋಡಿ ಆಸ್ವಾನ್ ನಲ್ಲಿರುವ ಸೇಂಟ್ ಮೈಕಲ್ ಚರ್ಚ್ ನೋಡಿದೆವು. ಇದೂ ಪ್ರಾಚೀನ ಯುಗದಲ್ಲಿ ನಿರ್ಮಾಣಗೊಂಡದ್ದು. ಮಾರ್ಗದರ್ಶಿ ಹೇಳುತ್ತಿದ್ದ-ಇಲ್ಲಿ 30% ಕ್ರಿಶ್ಚಿಯನ್ನರಿದ್ದರೆ 10% ಯಹೂದಿಗಳೂ ಇದ್ದಾರೆ. ಇಲ್ಲಿ ಚರ್ಚ್ ಕೂಡ ಇದೆ. ಆಸ್ವಾನ್ ಡ್ಯಾಂ ಸುತ್ತಿ, ಬಹು ವಿಶಾಲವಾದ ಅಬೂಸಿಂಬೆಲ್ ದೇವಾಲಯ ಸುತ್ತಿ ನೋಡಿ, ಚರ್ಚ್ ನೋಡಿ ಬರುವವರೆಗೆ ಕಾಲುಗಳು ಕೂಗತೊಡಗಿದ್ದವು. ಈಗ ಸರಸ್ವತಿ, ಪ್ರಭಾ ನೇರಲಗಿ ಹಾಗೂ ಸರೋಜಿನಿ ಮೂವರನ್ನು ಸಂಬಾಳಿಸಿಕೊಂಡು ಬರುವುದು ಬಹಳೇ ಕಷ್ಟವಾಗಿತ್ತು. ನನ್ನ ಹೆಗಲ ಮೇಲೊಮ್ಮೆ, ಸರೋಜಾಳ ಹೆಗಲ ಮೇಲೊಮ್ಮೆ ಕೈ ಹಾಕಿಕೊಂಡು ತೆವಳಿ, ತೆವಳಿಕೊಂಡು ಬರುವುದರೊಳಗೆ ಸಾಕುಬೇಕಾಗಿತ್ತು. ಸರಸ್ವತಿ ಚಿಮ್ಮಲಗಿಯವರ ಕಾಲುಗಳೂ ಬಾತು ಹೋಗಿದ್ದವು. ಸಾಮಾನ್ಯ ಕಾಲುಬಾತರೆ ಆನೆಕಾಲು, ಇನ್ನು ಆನೆ ಕಾಲೇ ಬಾತರೆ…? ಬೇಡ ಫಜೀತಿ. ಉರಿಯುವ ಬಿಸಿಲು, ಸುರಿಯುವ ಬೆವರು, ನೀರು ಎಲ್ಲಿದೆ ಎಂದು ಹುಡುಕುವಂತಾಗಿತ್ತು.
ನೈಲ್ ನ ಅಲೆ ಅಲೆಯಲ್ಲಿ
ಇಷ್ಟೆಲ್ಲ ನೋಡಿಕೊಂಡು ನಾವು ಕೋಚ್ ಏರಿ, ಬಂದದ್ದು ಬಹಳಷ್ಟು ಹಡಗುಗಳು ನಿಂತ ಸ್ಥಳಕ್ಕೆ. ನಾಲ್ಕು ಮಹಡಿಗಳನ್ನುಳ್ಳ ಹಡಗುಗಳು. ಮಿಸೆಸ್ ಅಕ್ವೇರಿಸ್, ನೈಲ್ ಮಾಕ್ಸಿಮ್ ಮುಂತಾದ ಹೆಸರುಗಳನ್ನು ಹೊಂದಿರುವ ಇವು ಸುತ್ತಲೂ ಇಳಿಬಿಟ್ಟ ಟಯರ್ಗಳನ್ನು ಒತ್ತೊತ್ತಿಕೊಂಡು ಗುಂಪಾಗಿ ನಿಂತಿದ್ದವು. ನಾವು ಒಂದು ದೋಣಿಯೊಳಗಿಂದ ಹಾಯ್ದು ಇನ್ನೊಂದು ದೋಣಿಗೆ ಹೋದೆವು. ನಮ್ಮ ಹಿಂದಿನಿಂದ ನಮ್ಮ ಲಗೇಜ್ ಗಳೂ ಬಂದವು. ಒಳಗೆ ಕಾಲಿಟ್ಟರೆ, ಟೈಲ್ಸ್ ಗಳಿಂದ ಮಾಡಿದ ನೆಲ, ಮೆಟ್ಟಿಲುಗಳನ್ನು ಹೊಂದಿದ, ನಾಲ್ಕಂತಸ್ತಿನ, ವೈಭವದಿಂದ ಅಲಂಕರಿಸಲ್ಪಟ್ಟ ಪಂಚತಾರಾ ಕಟ್ಟಡ ಇದ್ದ ಹಾಗೆ ಇತ್ತು. ನಾವು ಸರಿ ಮಧ್ಯದಿಂದ ಒಳ ಪ್ರವೇಶಿಸಿದ್ದು, ಅಲ್ಲಿ ಬಲಗಡೆ ಡೈನಿಂಗ್ ಹಾಲ್ ಎಡಗಡೆ ಹಡಗಿನ ಸಿಬ್ಬಂದಿಗೆ ಸಂಬಂಧಿಸಿದ್ದು, ಮೆಟ್ಟಿಲುಗಳ ಮೂಲಕ ಏರಿ ಹೋದರೆ ಅಲ್ಲೊಂದು Reception ಕೌಂಟರ್ ಮತ್ತು ಅಂಗಡಿಗಳು, ಅಲ್ಲೆ ನಾಲ್ಕು ಮೆಟ್ಟಿಲು ಹತ್ತಿದರೆ ಬಲಗಡೆ ರೂಮುಗಳು, ಎಡಗಡೆ ಕಾರ್ಯಕ್ರಮ ಭವನ, ಮೂರನೆಯ ಮಹಡಿಯ ಎರಡೂ ಬದಿಗೂ ರೂಮುಗಳು. ನಾಲ್ಕನೆಯ ಮಹಡಿಯಲ್ಲಿ ಕಾರಂಜಿ, ಬುಗ್ಗೆಗಳಿಂದ ಸುಸಜ್ಜಿತವಾದ, ವಿದೇಶಿಯರು ಬಳಸುವಂಥ ಈಜುಕೊಳ. ತೇಲುವ ಪಂಚತಾರ ಹೋಟೆಲ್ ಅದಾಗಿತ್ತು.
ಈ ಹಡಗಿನ ಹೆಸರು `ರುಬಿನೈಲ್’. ನಮ್ಮ ನಮ್ಮ ರೂಮಿನ ಕೀಗಳನ್ನು ಕೊಟ್ಟರು. ಕೀಗಳನ್ನು ಪಡೆದು ರೂಂ ನಂಬರ್ 10ಕ್ಕೆ ಎರಡನೆಯ ಅಂತಸ್ತು ಏರಿ ಹೋದೆವು. ರೂಂ ನಂಬರ್ ಬರೆದು ಹಚ್ಚಿದ ಲಗೇಜ್ ಗಳು ನಮ್ಮ ಹಿಂದೆಯೇ ಬಂದವು. ರೂಂ ಬಾಗಿಲು ತೆಗೆದರೆ ಎಡಗಡೆ ವಾಶ್ ರೂಂ, ಬಾತ್ ರೂಂಗಳು; ಬಲಗಡೆ ಹ್ಯಾಂಗರ್ಸ್ ಕಬರ್ಡ್. ಅದಕ್ಕೆ ಹೊಂದಿಕೊಂಡಂತೆ ಮುಂದುವರೆದು ಮೆಕಪ್ ಟೇಬಲ್. ಅದರ ಮೇಲೆ ದೊಡ್ಡ ಕನ್ನಡಿ ಅದಕ್ಕೆ ಎದುರಾಗಿ ಎರಡು ಬೆಡ್ ಗಳು. ಅದರಾಚೆ ಒಂದು ಸಾಗವಾನಿ ಟಿಪಾಯಿ ಮತ್ತು ಎರಡು ಕುರ್ಚಿಗಳು. ರೂಮಿನ ಆಚೆಯ ಭಿತ್ತಿಗೆ ದಪ್ಪನೆಯ ಕಂದು ಬಣ್ಣದ ಪರದೆಯೇ ಇತ್ತು. ಸರಿಸಿದರೆ ಗಾಜಿನ ಗೋಡೆ, ಹೊರಗೆ ಹರಿಯುತ್ತಿರುವ ನೈಲ್! ಬೇಕಾದರೆ ಗಾಜೂ ಸರಿಸಿ ಗ್ಯಾಲರಿಯಲ್ಲಿ ನಿಂತು ನೇರವಾಗಿ ನೈಲ್ ನ ಸೌಂದರ್ಯ ಸವಿಯಬಹುದಿತ್ತು. ಆ ಕುರ್ಚಿಗಳ ಮೇಲೆ ಕುಳಿತು ನೈಲ್ ನ ಜುಳು ಜುಳು ಧಾರೆ ನೋಡುವುದೇ ಸ್ವರ್ಗಸುಖ.
ಈಗ ನಮ್ಮ ಪಯಣ ನೈಲ್ ನ ಅಲೆಯ ಮೇಲೆ. ನೈಲ್ ಅತಿ ಪ್ರಶಾಂತವಾಗಿ ಹರಿಯುತ್ತಿತ್ತು. ಯಾವುದೆ ಅಬ್ಬರ ಆಡಂಬರ ಇಲ್ಲದ ನೀಲಿ ಮಿಶ್ರಿತ ಕಪ್ಪು ಹಸಿರು ಬಣ್ಣದ ನೀರು ನಿಂತಂತೆ ಕಾಣುತ್ತಿತ್ತು. ಅಷ್ಟೊಂದು ಪ್ರಶಾಂತವದು. `ನೈಲ್’ ಈ ಹೆಸರು ಗ್ರೀಕ್ ಮೂಲದಿಂದ ಬಂದದ್ದು. ಏಕೆಂದರೆ ಗ್ರೀಕ್ ರು ಇಟ್ಟ ಹೆಸರಿದು. ಗ್ರೀಕ್ ನಲ್ಲಿ ‘neilos’ ಎಂದರೆ `ನದಿಕಣಿವೆ’ ಎಂದರ್ಥ. ನೈಲ್ ಇಜಿಪ್ಟಿನಲ್ಲಿ ನಾಗರಿಕತೆ ಸೃಷ್ಟಿಸಿ ಜಗಜ್ಜಾಹೀರವಾದದ್ದಷ್ಟೇ ಅಲ್ಲ ಜಗಜ್ಜನನಿಯೂ ಹೌದು. ಏಕೆಂದರೆ ಆಫ್ರಿಕಾ ಖಂಡದಲ್ಲಿ ದಕ್ಷಿಣದಿಂದ ಉತ್ತರಾಭಿಮುಖವಾಗಿ ಇಜಿಪ್ತನ್ನೊಳಗೊಂಡಂತೆ ಹತ್ತು ದೇಶಗಳಲ್ಲಿ ಹರಿದು ಮೆಡಿಟರೆನಿಯನ್ ಸಮುದ್ರ ಸೇರುತ್ತದೆ. ಇಥಿಯೋಫಿಯಾ, ಜೈರೆ, ಕಿನ್ಯಾ, ಉಗಾಂಡಾ, ತಾಂಜಿನಿಯಾ, ರ್ವಾಂಡಾ, ಬುರುಂಡಿ, ಸೂಡಾನ್, ಏರಿಟ್ರಿಯಾ ಹಾಗೂ ಇಜಿಪ್ತ್. ಈ ಹತ್ತು ದೇಶಗಳಲ್ಲಿ ಹರಿಯುವ ನೈಲ್ ನದಿಯ ಉದ್ದ ಸುಮಾರು 6695 ಕಿ.ಮೀ (4464 ಮೈಲು). ನದಿಯ ಈ ಒಟ್ಟು ಭಾಗದಲ್ಲಿ ಇಜಿಪ್ತಿಗೆ ದಕ್ಕಿದ್ದು ಶೇ. 22% ಮಾತ್ರ. ನೈಲ್ ನ ಮುಖಜ ಭೂಮಿ ಇಜಿಪ್ತಿನಲ್ಲಿರುವುದರಿಂದ, ಉತ್ತರದ ತುದಿಯಲ್ಲಿ ಇಜಿಪ್ತ್ ಇರುವುದರಿಂದ, ನೈಲ್ ಹರಿದು ಬರುವಾಗ ತರುವ ಮೆಕ್ಕಲು ಮಣ್ಣು ಇಲ್ಲಿಯ ಫಲವತ್ತತೆಯನ್ನು ದ್ವಿಗುಣಗೊಳಿಸಿದೆ. ಹೀಗೆ ಸಫಲ ಮತ್ತು ಸುಧೀರ್ಘ ದಾರಿಯನ್ನು ಕ್ರಮಿಸಿ ಹರಿಯುವುದರಿಂದಲೇ ನೈಲ್ ನ ಪಾತ್ರಗಳಲ್ಲಿ ಸದಾ ಹಸಿ, ಸದಾ ಹಸಿರು; ನಿತ್ಯ ನೀರು, ನಿತ್ಯ ಬೆಳೆ. ಇಂಥ ಮಹಾನ್ ಇತಿಹಾಸ ಹೊಂದಿದ ನೈಲ್ ನದಿಯಲ್ಲಿ ನಾವು ಪಯಣಿಸುತ್ತಿದ್ದೆವು. ಇದು ಕನಸಲ್ಲ ನನಸು! ಮೈ ಪುಳಕಗೊಳ್ಳುತ್ತಿತ್ತು.
ಊಟದ ಸಮಯವಾದ್ದರಿಂದ ಮೊದಲು ಊಟ ಮಾಡಿಬಂದೆವು. ಇಲ್ಲಿಯ ಆಹಾರ ಪದಾರ್ಥಗಳೂ ಅದೇ ಬಗೆಯವಾದರೂ ತುಂಬಾ ತಾಜಾ ಆಗಿದ್ದು, ತಿನ್ನುವಂತಿದ್ದವು. ಅಥವಾ ನಾವೇ ಒಗ್ಗಿಕೊಳ್ಳುತ್ತಿದ್ದೆವೋ? ಅಂತೂ ತುಂಬಾ ತಾಜಾ ಊಟ, ಹಾಲು, ಪಾನೀಯ, ಹಣ್ಣುಗಳಿದ್ದವು. ಬೆಳಿಗ್ಗೆಯಿಂದ ಇಂದು ಬೆವರಿನ ಸ್ನಾನ ಮಾತ್ರ ಆಗಿತ್ತು. ಸ್ನಾನ ಮಾಡೋಣವೆಂದು ಹೊಂದಿಕೊಂಡ ಬಾತ್ ರೂಂಗೆ ಹೋದರೆ, ಎಡಗಡೆ ಕಮೋಡ್, ಬಲಗಡೆ ದೊಡ್ಡ ಕನ್ನಡಿ ಟೇಬಲ್. ಅಲ್ಲಿ ಟಬ್ಬಾತ್ ಕಾಣಲೇ ಇಲ್ಲ. ಕಮೋಡ್ ಬದಿಯ ಮುಂದಿನ ಮೂಲೆಯಲ್ಲಿ, ಏರ್ಟೆಲ್ ಫೋನ್ ಬೂತ್ಗಳು ಹೊಸದಾಗಿ ಬಂದಾಗ ಇದ್ದಂತಹ, ಒಂದು ಸರಿಸುವ ಪಾರದರ್ಶಕ ಬಾಗಿಲಿರುವ ಬೂತ್ ನಂತಹ ಒಂದು ವ್ಯವಸ್ಥೆ ಅಲ್ಲಿತ್ತು. ಇದಕ್ಕೆ ಸರಿಸುವ ಎರಡು ಬಾಗಿಲುಗಳು, ಎರಡೂ ಕೈಯಿಂದ ಸರಿಸಿದರೆ ಗೋಲಾಕಾರದಲ್ಲಿ ಹಿಂದೆ ಸರಿಯುತ್ತಿದ್ದವು. ಒಬ್ಬರೂ ಮಾತ್ರ ಒಳಗೆ ಹೋಗಬಹುದಾದಷ್ಟು ದಾರಿ ಮತ್ತು ಒಳಗೂ ಒಬ್ಬರೇ ನಿಲ್ಲಬಹುದಾದಷ್ಟೇ ಸ್ಥಳಾವಕಾಶ. ಕೈಗಳನ್ನು ಉದ್ದ, ಆಚೆ, ಈಚೆ ಚಾಚುವ ಹಾಗಿರಲಿಲ್ಲ. ಮೂಲೆಗೆ ಭದ್ರಗೊಳಿಸಿದ ವ್ಯವಸ್ಥೆಯಲ್ಲಿ ತಣ್ಣೀರು, ಬಿಸಿ ನೀರುಗಳಿಗಾಗಿ ಬಟನ್ ಗಳಿದ್ದವು. ಹೆಡ್ ಷವರ್, ಹ್ಯಾಂಡ್ ಷವರ್ ಗಳೆರಡೂ ಇದ್ದವು. ಮತ್ತೊಂದು ರೀತಿಯ ಆಧುನಿಕ ಬಾತ್ ರೂಂ ಅದಾಗಿತ್ತು. ಅಲ್ಲಿಯೂ ಒಂದು ಜೊತೆ ಸೋಪ್, ಶ್ಯಾಂಪೂ, ಪೇಸ್ಟ್, ಟಾವೆಲ್ಗಳೆಲ್ಲವೂ ಇದ್ದವು. ಅಲ್ಲಿ ಕುಳಿತುಕೊಳ್ಳಲಾಗದು, ಕಾಲು ಚಾಚಲೂ ಆಗದು, ಬಾಗಲೂ ಆಗದು. ಸರಿ ಇಲ್ಲಿ ಇನ್ನೊಂದು ರೀತಿಯ ಸರ್ಕಸ್ ಮಾಡಿ ಸ್ನಾನ ಮಾಡಿದೆ. ಇಲ್ಲಿ ಕಾಲೊರೆಸಲೂ ಶುಭ್ರ ಟರ್ಕಿ ಮ್ಯಾಟನ್ನೇ ಹಾಕಲಾಗಿತ್ತು. ಅಂತೂ ಸ್ನಾನ ಮಾಡಿ ಶುಭ್ರರಾಗಿ ಎಲ್ಲರೂ ಸಿದ್ಧರಾಗಿ, ದೊಡ್ಡ ಹಾಲ್ಗೆ ಬಂದಾಗ 6.15 ಆರೂವರೆಗೆ ಟೀ ಮತ್ತು ಅಲ್ಲಿಯ ಕಾರ್ಯಕ್ರಮ ಆರಂಭ.
`ಬೇಗ ಬನ್ನಿ’ ಎಂದು ಮಾರ್ಗದರ್ಶಿ ಮನು ಎಲ್ಲರನ್ನು ಹೊರಡಿಸಿದ. ಸರಿ ಡೈನಿಂಗ್ ಕಮ್ ಪಂಕ್ಷನ್ ಹಾಲ್ ಗೆ ಬಂದೆವು. ಅಲ್ಲಿ ಮದ್ಯದಲ್ಲಿ ಉದ್ದನೆಯ ಟೇಬಲ್; ಆಚೆ ಈಚೆ ಪ್ರತ್ಯೇಕ ಟೇಬಲ್ ಗಳು. ಉದ್ದನೆಯ ಟೇಬಲ್ ತುದಿಗೆ ನೃತ್ಯ ಮಾಡಲು ಒಂದು ಸಣ್ಣ ವೇದಿಕೆ. ನಾನು ಕಿಟಕಿಯ ಬದಿಗಿರುವ ಟೇಬಲ್ ಕುರ್ಚಿ ಮೇಲೆ ಕುಳಿತು ನೈಲ್ ನೋಡತೊಡಗಿದೆ. ಹೊರಗೆ ಆಕಾಶದಲ್ಲಿ ಮೆಲ್ಲನೆ ಕೆಂಜು ಅಡರುಗಿತ್ತು. ತಿನ್ನಲು ಕುರುಕು ತಿಂಡಿ ಮತ್ತು ಪಾನೀಯಗಳು ಬಂದವು. ತಿನ್ನುವ ಮನಸ್ಸಿಲ್ಲದೆ ತಿನ್ನುತ್ತಾ ಕುಳಿತಿರಬೇಕಾದರೆ ಸುಮಾರು 4-5 ಮೀಟರ್, ಬೇರೆ ಬೇರೆ ಕಡು ಬಣ್ಣದ ಬಟ್ಟೆಯ ಪಟ್ಟಿಗಳನ್ನು ಚಿತ್ತಾರಗಳಿಂದ ಲಂಗದಂತೆ ಹೊಲಿದು ತಯಾರಿಸಿದ ಉಡುಪನ್ನು ತಲೆಯ ಮೇಲೆ ತಿರುಗಿಸುತ್ತ ಒಂದು ವ್ಯಕ್ತಿ ಬಂದಿತು. ಅಸ್ಪಷ್ಟವಾಗಿ ಕಾಣುವ ಶುಭ್ರ ಬಣ್ಣದ, ಕೆಂಪು ತುಟಿಯ, ಕಣ್ಣಿಗೆ ಕಾಡಿಗೆ ಹಚ್ಚಿದ ಪರಿನೋಡಿ ಅದು ಹೆಂಗಸು ಎಂದುಕೊಂಡೆ. ತೋಳಿರುವ ನಿಲುವಂಗಿ ಮತ್ತು ಕೆಳಗೆ ಬೂಟ್ ಗಳಷ್ಟೇ ಕಾಣುತ್ತಿದ್ದವು. ಒಮ್ಮೆ ಆ ಕೈಯಿಂದ, ಒಮ್ಮೆ ಈ ಕೈಯಿಂದ ಆ ದೊಡ್ಡ ಲಂಗವನ್ನೇ ತಿರುಗಿಸುತ್ತಿತ್ತು. ಆಚೆ ಈಚೆ ವಾಲುತ್ತಾ ಬಹಳ ಹೊತ್ತಿನವರೆಗೂ ತಿರುಗಿತು. ನಂತರ ಒಮ್ಮೆ ಬಲಕ್ಕೆ, ಒಮ್ಮೆ ಎಡಕ್ಕೆ, ಒಮ್ಮೆ ಕೆಳಗೆ ಕುಳಿತು ತಿರುಗೇ ತಿರುಗಿತು. ಅಬ್ಬಾ! ಇವಳಿಗೆ ಎಷ್ಟೊಂದು ಸ್ಟೆಮಿನಾ ಇರಬಹುದು ಎಂದು ಎಲ್ಲರೂ ಕುತೂಹಲದಿಂದ ನೋಡುತ್ತಿರುವಂತೆ ಮೆಲ್ಲನೆ ಲಂಗವನ್ನು ಕುತ್ತಿಗೆ ಮೂಲಕ ಸೊಂಟದವರೆಗೂ ತಿರುಗಿಸುತ್ತಲೆ ಇಳಿಸಿತು. ಅಯ್ಯ! ಎಲ್ಲರಿಗೂ ಘನ ಆಶ್ಚರ್ಯ! ಅದು ಹೆಣ್ಣಲ್ಲ ಗಂಡು;
ದೋಣಿಯಲ್ಲಿಯ ಒಬ್ಬ ಪರಿಚಾರಕ. ಪ್ಯಾಂಟ್ ಶರ್ಟ್ ಬೂಟು ಹಾಕಿದ್ದಾನೆ. ಕೆಂಪು ಕೆಂಪು ಮುಖ, ಗುಲಾಬಿ ತುಟಿಗಳು. ಕಣ್ಣಿಗೆ ಮಾತ್ರ ಕಪ್ಪು ಬಳಿದಿದ್ದ. ಸೊಂಟದಲ್ಲಿ ಲಂಗ ತಿರುಗುತ್ತಲೇ ಇತ್ತು. ಆ ಕಡೆಯಿಂದ ಇನ್ನೊಬ್ಬ ಪರಿಚಾರಕ ಎರಡು ಗಾಜಿನ ಲೋಟ ಮತ್ತು ಜ್ಯೂಸ್ ಇದ್ದ ಗಾಜಿನ ಜಗ್ ಇರುವ ಟ್ರೇ ತಂದು ತಿರುಗುವವನ ಕೈಗೆ ಕೊಟ್ಟ. ಆತ ತಿರುಗುತ್ತಲೇ ತೆಗೆದುಕೊಂಡು, ತಿರುಗುತ್ತಲೇ ಜ್ಯೂಸ್ ಹಾಕಿ, ಇಬ್ಬರಿಗೆ ಪೂರೈಸಿ ತಿರುಗುತ್ತಲೇ ಟ್ರೇ ಜಗ್ ನೊಂದಿಗೆ ಆಟ ಆಡಿ ಮರಳಿಸಿದ. ಆನಂತರ ತಿರುಗಿಸುತ್ತಲೇ ಲಂಗ ಮುಂಗೈ ಯಿಂದ ಮೇಲೆತ್ತಿ ಛತ್ರಿಯಂತೆ ತಿರುಗಿಸುತ್ತ ಮುಂದೆ ಕುಳಿತ ನಮ್ಮೆಲ್ಲರ ಸಮೀಪ ಹಿಂದೆ, ಮುಂದೆ ಬಂದು ಹಾಸ್ಯ ಮಾಡಿ ಫೋಟೋ ಫೋಸು ಕೊಟ್ಟು ತಿರುಗಿಸುತ್ತಲೇ ಮೂಲ ಸ್ಥಾನಕ್ಕೆ ಹೋದ. ತಿರುಗುವ ಲಂಗ ಮತ್ತೆ ಸೊಂಟಕ್ಕಿಳಿಯಿತು. ಮತ್ತೊಬ್ಬ ಪರಿಚಾರಕ ಇನ್ನೊಂದನ್ನು ಎಸೆದ. ಅದನ್ನೂ ಎರಡೂ ಮುಂಗೈಗಳನ್ನು ಒಳ ಹಾಕಿ ಇದರೊಂದಿಗೆ ತಿರುಗಿಸತೊಡಗಿದ. ಒಂದು ಮೇಲೆ, ಒಂದು ಕೆಳಗೆ, ಸೊಂಟದಿಂದ ಕೆಳಗಿನದನ್ನು, ಮುಂಗೈಯಿಂದ ಮೇಲಿನದನ್ನು ಒಂದೇ ರೀತಿ ತಿರುಗಿಸುತ್ತಲೇ ಇದ್ದ. ಅದು ಅಲ್ಲಿಯ ಸಾಂಪ್ರದಾಯಿಕ ನೃತ್ಯವಂತೆ. ಸುಮಾರು 30-35 ನಿಮಿಷ ನಮ್ಮನ್ನೆಲ್ಲಾ ರಂಜಿಸಿ, ತಿರುಗುತ್ತಲೇ ಮೇಲಿನ ಲಂಗವನ್ನು ತೆಗೆದು ಮಡಿಕೆ ಮಾಡಿ ಪರಿಚಾರಕನೆಡೆಗೆ ಎಸೆದು, ಸೊಂಟದಲ್ಲಿ ತಿರುಗಿಸುತ್ತಿದ್ದ ಲಂಗದೊಳಗೆ ಕೈ ಹಾಕಿ ಮೆಲ್ಲಗೆ ಎತ್ತಿದ. ಅದಕ್ಕೆ ಇದ್ದ ಮೇಲ್ಪದರಷ್ಟೇ ಮೇಲೆ ಬಂದು, ಕೆಳಗಿನ ಒಳಪದರಿನ ಲಂಗ ಇದ್ದಂತೆಯೇ ಇದ್ದು ಒಂದು ರೀತಿ ಆಕಾಶ ಬುಟ್ಟಿಯ ಆಕಾರ ನಿರ್ಮಾಣವಾಯಿತು. ನೋಡಲು ಖುಷಿ ಎನಿಸುತ್ತಿತ್ತು. ಮತ್ತೆ ಮೊದಲಿನಂತೆಯೇ ಆಗಿ ನಮಸ್ಕರಿಸಿ ನಮ್ಮ ಮಧ್ಯದಿಂದ ಸರಿದು ಹೋದ. ಇದೊಂದು ಜಾನಪದ ನೃತ್ಯವಾಗಿತ್ತು. ತನೂರಾ (Tanoura) ಅಥವಾ ತಿನಾಕಿ (Tinakey) ಎಂಬ ಹೆಸರಿನಿಂದ ಕರೆಯಲ್ಪಡುವ ಈ ಜನಪದ ನೃತ್ಯವನ್ನು ಸೂಫಿ ಹಬ್ಬಗಳಲ್ಲಿ ಸೂಫಿ ಜನ ಸಾಮಾನ್ಯವಾಗಿ ಮಾಡುತ್ತಾರಂತೆ.
ಒಂಥರಾ ಹೊಸ ರೀತಿ ನೃತ್ಯ, ಬಹಳೆ ಖುಷಿಕೊಟ್ಟಿತು. ಎಲ್ಲರ ಕರತಾಡನ. ಅಲ್ಲಿ ನಮ್ಮೊಂದಿಗೆ ಜರ್ಮನಿ, ಲಂಡನ್, ಹಾಲೆಂಡ್ ಮತ್ತು ಆಸ್ಟ್ರೇಲಿಯಾದಿಂದ ಬಂದ ಕುಟುಂಬಗಳು ಹಾಗೂ ಸ್ಥಳೀಯ ಎರಡು ಕುಟುಂಬಗಳೂ ಇದ್ದವು. ಒಟ್ಟು ಎಪ್ಪತ್ತು, ಎಂಬತ್ತು ಜನ ಇರಬಹುದೇನೋ? ಎಲ್ಲರಲ್ಲೂ ಆತನ ಚಾಕಚಕ್ಯತೆ, ಕಲೆ, ಸಂತುಲನ ಮತ್ತು ಗಟ್ಟಿತನದ ಬಗ್ಗೆನೇ ಚರ್ಚೆ ನಡೆಯಿತು. ನಂತರ ಒಬ್ಬ ಯುವಕ ಮತ್ತು ಒಬ್ಬ ಯುವತಿ ಯುಗಳ ಪಾಶ್ಚಾತ್ಯ ಗೀತೆ ಹಾಡಿದರು. ಆ ಯುವತಿ ಒಬ್ಬಳೇ ಒಂದು ಇಂಪಾದ ಅರೆಬಿಕ್ ಗೀತೆ ಹಾಡಿದಳು. ಅರ್ಥವಂತೂ ಆಗಲಿಲ್ಲ. ಆದರೆ ಸಂಗೀತ ಅರ್ಥವಾಗಬೇಕೆಂದೇನೊ ಇಲ್ಲ. ಎಲ್ಲರೂ ತಲೆ ತೂಗುತ್ತಿದ್ದೆವು. ಕೇಳಲು ಬಲು ಇಂಪಾಗಿತ್ತು. ಅದೇ ಗುಂಗಿನಲ್ಲಿರುವಾಗಲೇ ಅದೇ ದಾರಿಯಿಂದ ಒಬ್ಬ ನರ್ತಕಿ ಕ್ಯಾಬರೆ ಡ್ರೆಸ್ಸಿನಲ್ಲಿ ಬಂದು ನಿಂತು ಎಲ್ಲರಿಗೂ ಕೈ ಬೀಸಿದಳು. ಪರದೆ ಮೇಲೆ ನೋಡಿದ ಹೆಲೆನ್ ಪ್ರತ್ಯಕ್ಷ ದರ್ಶಿಯಾಗಿ ಮುಂದೆ ನಿಂತಂತೆ ಇತ್ತು. ಎದೆಯಿಂದ ಪಾದದವರೆಗೂ ಇರುವ ಬಿಗಿಯಾದ ಕಟ್ ಮಿಡಿ, ಎಡಬಲಕೆ ಪಾದದಿಂದ ಅರ್ಧ ತೊಡೆಯವರೆಗೂ ಕಟ್. ಕಂಕುಳಿಂದ ಸೊಂಟದವರೆಗೂ ಹುಲಿಪಟ್ಟಿಗಳಾಕಾರದಲ್ಲಿ ಕಟ್ಕಟ್. ಇದು ಬಾಹ್ಯ ತೊಡುಗೆ, ಇನ್ನೂ ಅವಳ ಕಣ್ಣುಗಳು ಬೆಕ್ಕಿನ ಕಣ್ಣುಗಳೆಂದರೆ ಸಾಮಾನ್ಯ ಮಾತಾದೀತು, ಹುಲಿಯ ಕಣ್ಣುಗಳು! ಕೆಂಜಗಿನ ಇಳಿಬಿಟ್ಟ ಕೂದಲು; ಸಾಕ್ಷಾತ್ ಹೆಲನ್ನೇ! ಅಂಥ ಡ್ರೆಸ್ಸಿನಲ್ಲಿ ಅವಳು ಎರಡೂ ಕೈ ಮೇಲೆತ್ತಿ ಸೊಂಟ ತಿರುಗಿಸುತ್ತ ಮಾಡಲಾರಂಭಿಸಿದ್ದು ಬೆಲ್ಲಿ ಡ್ಯಾನ್ಸ್.
ಮೂಲತಃ ಬೆಲ್ಲಿ ನೃತ್ಯದ ಇತಿಹಾಸ ನೋಡಿದರೆ ಅದು ದುರ್ಗಮ ಹೆಜ್ಜೆ ಹಾಕಿ ಪಯಣಿಸುತ್ತ ಎಲ್ಲೆಲ್ಲೋ ಹಾಯ್ದು ಬಂದ ನೃತ್ಯ. ಈ ಬೆಲ್ಲಿ ಹುಟ್ಟಿದ್ದು `ಘವಾಝಿ’ಯಿಂದ. 18-19ನೆಯ ಶತಮಾನದಲ್ಲಿ ಇಜಿಪ್ತಿನಲ್ಲಿ ಜಿಪ್ಸಿ (ಡೊಮ್) ಅಲೆಮಾರಿ ಜನಾಂಗಕ್ಕೆ ಸೇರಿದ, ಸಂಚಾರಿ ನರ್ತಕಿಯರಿರುವ ಘವಾಝಿ (Ghawazee) ಪ್ರಸಿದ್ಧವಾಗಿತ್ತು. ಮೇಲು ಇಜಿಪ್ತಿನವರೆಗೂ ಹರಡಿದ್ದ ಹಾಗೂ ಮುಸ್ಲಿಂ ಸಂಪ್ರದಾಯಕ್ಕೆ ವಿರೋಧವಾದ ಈ ನರ್ತಕಿಯರನ್ನು 1830ರಲ್ಲಿ ಮಹಮ್ಮದ್ ಅಲಿ ಕೈರೋದಿಂದ ಓಡಿಸಿಬಿಟ್ಟನಂತೆ! ಮುಂದೆ 19ನೆಯ ಶತಮಾನದ ಹೊತ್ತಿಗೆ ಈ ಘವಾಝಿ ಯೂರೋಪ್ ದೇಶಗಳಲ್ಲಿ `ಬೆಲ್ಲಿ ನೃತ್ಯ’ ಎಂಬ ಶಬ್ದ ಶೀರ್ಷಿಕೆಯೊಂದಿಗೆ ಪ್ರಸಿದ್ಧಿಗೊಂಡಿತು. ಬೆಲ್ಲಿ(Belly)ಎಂದರೆ ಶಬ್ದಶಃ ಅರ್ಥ `ಹೊಟ್ಟೆ’. ಹೊಟ್ಟೆಯ ನೃತ್ಯವಿದು. ಕಾಲಕ್ರಮೇಣ ವ್ಯಾಪಾರೀಕರಣದ ಕಪಿಮುಷ್ಠಿಗೆ ಸಿಕ್ಕು, ವಿಜ್ಞಾನ-ತಂತ್ರಜ್ಞಾನದಂತಹ ಪ್ರದರ್ಶನಗಳಲ್ಲಿ, ಜನರ ಗುಂಪುಗಳ ಗಮನ ಸೆಳೆಯಲು ಇದು ಬಳಕೆಯಾಯಿತು. ದಿನಗಳೆದಂತೆ ಯುರೋಪಿನ ಚಿತ್ರಕಾರರ ಕುಂಚಗಳಿಂದಾಗಿ, ಲೇಖಕರ ಲೇಖನಿಗಳಿಂದಾಗಿ ಈ ಬೆಲ್ಲಿ ನೃತ್ಯ ಹಂತಹಂತವಾಗಿ ಬೆಳಕಿಗೆ ಬಂದು, ಪ್ರಖ್ಯಾತಿ ಪಡೆಯಿತು. ಇಜಿಪ್ತಿನಲ್ಲಿ 20ನೆಯ ಶತಮಾನದಲ್ಲಿ ಘವಾಝಿ ನೃತ್ಯದೊಂದಿಗೆ ಉಳಿದ ಜಾನಪದ ನೃತ್ಯಗಳ ಹೆಜ್ಜೆಗಳನ್ನು ಸೇರಿಸಿ, ಅದಕ್ಕೆ ಡಪ್ಪು-ಡ್ರಮ್ಮು ಪಕ್ಕವಾದ್ಯಗಳನ್ನೆಲ್ಲ ಬೆರೆಸಿ, ಹೈಬ್ರಿಡ್ ಬೆಲ್ಲಿ ನೃತ್ಯ ರಚನೆಯಾಯಿತು. ನಂತರ ಸಿನಿಮಾಗಳಲ್ಲೆಲ್ಲ ಇದನ್ನೇ ಕ್ಯಾಬರೆ ನೃತ್ಯವಾಗಿ ಬಳಸತೊಡಗಿದರು.

ಬೆಲ್ಲಿ ನೃತ್ಯಕ್ಕೆ ಅದರದ್ದೇ ಆದ ಪೋಷಾಕಿದೆ, ಅದು ಅಲ್ಲಿಯ ಪಾರಂಪರಿಕ ನೃತ್ಯ. ಆದರೆ ಅದರ ಹೆಸರಿನಲ್ಲಿ ಇಲ್ಲಿ ಇವರು ನಗದೀಕರಣಗೊಳಿಸುವ ಪರಿ ಅಸಹ್ಯ ತರಿಸುವಂತಿತ್ತು. ಇದು ಕ್ಯಾಬರೆ ಪೋಷಾಕಿನಲ್ಲಿ ಕ್ಯಾಬರೇನೂ ಅಲ್ಲ, ಬೆಲ್ಲೀನೂ ಅಲ್ಲ, ಡಾನ್ಸ್ ಮಾಡುವ ಯುವತಿಯ ಅಂಗಾಂಗ ನೋಡಿದರೆ ಎರಡು ಮಕ್ಕಳ ತಾಯಿ ಇರಬಹುದು. ಅವಳು ಹೇಗ್ಹೇಗೆ ಸೊಂಟ ಕುಣಿಸುತ್ತಾಳೋ ಹಾಗ್ಹಾಗೆ ಎತ್ತಿದ ಕೈನ ರಟ್ಟೆ ಮತ್ತು ಹೊಟ್ಟೆ ತುಳುಕಾಡುತ್ತಿದ್ದವು. ಆ ನೃತ್ಯಕ್ಕೆ ಅದು ಆಕಾರವೂ ಅಲ್ಲ, ಹೊರ ರೂಪವೂ ಅಲ್ಲ. ಕಡಿಮೆ ದುಡ್ಡಿಗೆ ಇಂಥವರನ್ನು ಗುತ್ತಿಗೆ ಹಿಡಿದು ಹೆಚ್ಚು ಹಣ ಗಿಟ್ಟಿಸಿಕೊಳ್ಳುವುದು ಹಡಗಿನ ಮಾಲಿಕರ ಒಂದು ವ್ಯವಹಾರ. ಆ ರೀತಿಯ ನೃತ್ಯ ನೋಡಿ ಅಸಹ್ಯ ಎನಿಸುವುದಕ್ಕಿಂತ ಹೆಚ್ಚಾಗಿ ಪಾಪ! ಎನಿಸುವಂತಿತ್ತು. ನಾನು ಬರೀ ಅವಳ ಕಣ್ಣನೇ ನೋಡ್ತಾ ಇದ್ದೆ. ಹಸಿದ ಹುಲಿಯ ಕಣ್ಣುಗಳು, ಮತ್ತು ತುಂಬಿಕೊಂಡಿದ್ದವು. ಹಸಿರು ಮಿಶ್ರಿತ ಬೂದು ನೀಲಿ, ಗೋಲಿಗಳಂತೆ ಫಳಫಳನೆ ಹೊಳೆಯುವ ರೀತಿ ಮತ್ತೆ ಮತ್ತೆ ನೋಡಬೇಕೆನಿಸುತ್ತಿತ್ತು. ಸುಮಾರು ಅರ್ಧಗಂಟೆ ಕುಣಿದಳು. ತನ್ನೊಂದಿಗೆ ಕುಣಿಯಲು ಹೆಂಗಸರನ್ನು ಆಹ್ವಾನಿಸಿದಳು. ಯಾರು ಹೋಗದಾದಾಗ ತಾನೆ ಬಂದು ಕೈ ಹಿಡಿದಳು. ಆದಾಗ್ಯೂ ಯಾರೂ ಹೋಗಲಿಲ್ಲ. ಕೊನೆಗೆ ಭಾರತೀಯ ಮೂಲದ ಆದರೆ ಈಗ ಕೆನಡಾದಲ್ಲಿರುವ ಒಬ್ಬ ಹೆಂಗಸು ಹೋಗಿ ಹೆಜ್ಜೆ ಹಾಕಿದಳು. ಆನಂತರ ಪಾಶ್ಚಾತ್ಯ ಸುಂದರ ಜೋಡಿಯಲ್ಲಿಯ ಯುವತಿ ಎದ್ದು ಹೆಜ್ಜೆ ಹಾಕಿದಳು; ನಂತರ ಪುರುಷರ ಸರದಿ; ಯಾರೂ ಹೋಗದಿದ್ದಾಗ ಒತ್ತಾಯದಿಂದ ಕರೆದೊಯ್ದಳು. ಒಬ್ಬ ಪಾಶ್ಚಾತ್ಯ ವಯಸ್ಕ, ಒಬ್ಬ ಅರಬ್ಬಿ ಜೋಡಿಯೊಳಗಿನ ಯುವಕ ಹೆಜ್ಜೆ ಹಾಕಿದರು. ಕೊನೆಗೆ ಮೊದಲು ಹೆಜ್ಜೆ ಹಾಕಿದ ಪಾಶ್ಚಾತ್ಯ ಯುವತಿ ತನ್ನ ಗಂಡನನ್ನೆ ಕಳುಹಿಸಿದಳು. ಎತ್ತರ ಕಾಯದ ದೇಹ. ತುಂಬ ಚೆನ್ನಾಗಿ ಸೊಂಟ ಬಳುಕಿಸುತ್ತಿದ್ದ. ಆ ನೃತ್ಯಗಾರ್ತಿಗಿಂತಲೂ ಅವನ ನೃತ್ಯವೇ ಚೆನ್ನಾಗಿತ್ತು.
ಆದರೆ ಈ ಸೊಂಟ ಅಲ್ಲಾಡಿಸುವ ಹವಣಿಕೆಯಲ್ಲಿ ದೇಹವನ್ನೆಲ್ಲ ಅಲ್ಲಾಡಿಸೋದು ಬೆಲ್ಲಿ ನೃತ್ಯ ಅಲ್ಲ. ಇನ್ನು ಅವಳು ಸೊಂಟವನ್ನಷ್ಟೇ ಅಲ್ಲಾಡಿಸಿರಬಹುದೇನೋ ಆದರೆ ಆ ದೇಹವೇ ಹಾಗಿದ್ದ ಮೇಲೆ… ಅದೆಂಥ ನೃತ್ಯ? ಇತ್ತೀಚಿಗೆ ವ್ಯಾಪರೀಕರಣಗೊಂಡ ಕಲೆಗಳಲ್ಲಿ ಈ ನೃತ್ಯವೂ ಒಂದಾಗಿದೆ. ಆದರೆ ಇದು, ಮತ್ತೂ ಕನಿಷ್ಠ ದರ್ಜೆಯ, ಕಡಿಮೆ ಹಣದಲ್ಲಿ ಸಿಗುವ, ದೇಹದ ಮಾಟ ಕಳೆದುಕೊಂಡ ನೃತ್ಯಗಾರ್ತಿಯರನ್ನು ತಂದು ಹೀಗೆ ಕುಣಿಸಿ ದುಡ್ಡು ಮಾಡಿಕೊಳ್ಳುವುದು ಎಂಥ ವ್ಯಾಪಾರ? ಅದೆಂಥ ಮನರಂಜನೆ? ಹೊಟ್ಟೆ ಹೊರೆಯುವುದಕ್ಕೆ ಇಂಥ ನೃತ್ಯಕ್ಕೆ ಸಿದ್ಧರಾಗುವ ಅಮಾಯಕ ಹೆಣ್ಣುಗಳ ಶೋಷಣೆ ಒಂದೆಡೆಯಾದರೆ, ಕಡಿಮೆ ಖರ್ಚು ಮಾಡಿ ಹೆಚ್ಚು ಲಾಭಗಳಿಸುವ ಹಣದ ಗೀಳು, ಲಾಲಸೆ ಇನ್ನೊಂದೆಡೆ. ಒಂದು ಕಾಲದಲ್ಲಿ ಇಜಿಪ್ತ ಮೂಲೆ ಮೂಲೆಗಳಲ್ಲಿ ನಡೆಯುತ್ತಿದ್ದ ಈ ನೃತ್ಯದ ಇತಿಹಾಸ ಹೆಣ್ಣು ಕುಲಕ್ಕೇ ಅವಮಾನ ಎನಿಸುತ್ತದೆ. ಹೆಣ್ಣು ಶೋಷಣೆಗೆ, ಅದೂ ಲೈಂಗಿಕ ಶೋಷಣೆಗೆ ಒಳಗಾಗದ ಒಂದಾದರೂ ಮೂಲೆ ಇದೆಯೇ ಜಗತ್ತಿನಲ್ಲಿ? ಅಲ್ಲಿಯೇ ಇದ್ದ ಸ್ಥಳೀಯ ಅರಬ್ಬಿ ಜೋಡಿಯನ್ನು ಮಾತನಾಡಿಸಿದಾಗ ತಿಳಿದದ್ದು ಈ ನೃತ್ಯ ಪ್ರಾಚೀನ ಕಾಲದಿಂದಲೂ ಬೆಳೆದು ಬಂದದ್ದು. ಮದುವೆಯಾದ ದಿನ ರಾತ್ರಿ ಏರ್ಪಡಿಸುವ ನೃತ್ಯ ಸಮಾರಂಭದಲ್ಲಿ ಮದುವೆಣ್ಣು ತನ್ನ ದೇಹದ ಅಂಗಾಂಗಳನ್ನು ಪ್ರದರ್ಶಿಸಲು (ಪ್ರದರ್ಶಿಸಿ) ಸೊಂಟ, ನಿತಂಬ, ಎದೆ ಮತ್ತು ಭುಜಗಳನ್ನೇ ಕೇಂದ್ರವಾಗಿಟ್ಟುಕೊಂಡು ಮಾಡುವ ನೃತ್ಯ ಇದಂತೆ. ಇದು ಒಂದು ಪದ್ಧತಿ, ಸಂಪ್ರದಾಯ! ಇಲ್ಲಿ ಅಲ್ಲಗಳೆಯುವ, ಒತ್ತಾಯಿಸುವ ಪ್ರಶ್ನೆಗಳು ಇಲ್ಲವೆ ಇಲ್ಲ. ಈ ಅಂಗಾಂಗಳೇ ಪ್ರದರ್ಶನಗೊಳ್ಳಬೇಕೆಂದರೆ ಅದಕ್ಕೆ ತಕ್ಕ ವಸ್ತ್ರಾಲಂಕಾರ ಬೇಡವೆ?
ಮಧ್ಯ ಪ್ರಾಚ್ಯದಲ್ಲಿ ತುಂಬ ಪ್ರಸಿದ್ಧವಾದದ್ದು ಅರೆಬಿಕ್ ಸೂಟ್ ಬೆಡ್ಲಾ(Bedlah). ಅಗಲವಾದ, ಬಿಗಿಯಾದ ಸೊಂಟ ಪಟ್ಟಿಯಿಂದ ಕೂಡಿ, ಸುತ್ತಲೂ ನೀರಿಗೆಗಳನ್ನು ಹೊಂದಿ, ಪಾದದಲ್ಲಿ ಬಿಗಿಯಾದ ಪಟ್ಟಿಯನ್ನು ಹೊಂದಿದ ಸೂಟ್ (3/4 ಪಟಿಯಾಲಾ ಪ್ಯಾಂಟ್ನಂತೆ) ಹಾಗೂ ಮೇಲೆ, ಎದೆಗೆ, ಆಧಾರವಾಗಿ ನಿಲ್ಲಬಲ್ಲ ತೋಳಿಲ್ಲದ ಬಿಗಿಯಾದ ಉಡುಪು. ಇದಕ್ಕೆ ನಾಣ್ಯ, ಮಣಿ, ಬಣ್ಣದ ಕಲ್ಲುಗಳಿಂದ ಕಸೂತಿಯಲ್ಲಿ ಸಿಂಗರಿಸಿ, ಅದಕ್ಕೆ ಸಿಂಗರಿಸಿದ ಜಡೆಗಳನ್ನು ಜೋತು ಬಿಟ್ಟಿರುತ್ತಾರೆ. ತಲೆಗೆ ಮಣಿ, ಮುತ್ತು, ನಾಣ್ಯ, ಹರಳುಗಳಿಂದ ಸಿಂಗರಿಸಿ ಮಾಡಿದ ಹಣೆಪಟ್ಟಿ, ಕೇಶ ಜಡೆ. ಇದು ಸಾಂಪ್ರದಾಯಿಕ ವಸ್ತ್ರಾಲಂಕಾರ. ಈ ವಸ್ತ್ರಾಲಂಕಾರದಲ್ಲಿ ಆ ಲಕ್ಷಣಗಳುಳ್ಳ ನೃತ್ಯ ಹೇಗಿರಬಹುದು! ಹಲ್ಲುಗಟರಿ ಮುಷ್ಠಿ ಬಿಗಿಯಾಗುತ್ತವೆ. ಇಂಥದಕ್ಕೆ ಸಂಪ್ರದಾಯ, ಸಮಾರಂಭ, ವಸ್ತ್ರ, ಅಲಂಕಾರ ಎನ್ನುವ ಮಹಾ ಶಬ್ದಗಳು ಬೇರೆ ಕೇಡು. ವಿದೇಶಿಯರ ಆಳ್ವಿಕೆಯ ಸಂದರ್ಭದಲ್ಲಿ ಭಾರತವನ್ನು ಪ್ರವೇಶಿಸಿದಂತ ಈ ಹಿನ್ನೆಲೆಯ ನೃತ್ಯಗಳು ಭಾರತದಲ್ಲಿ ಎಷ್ಟಿಲ್ಲ? ಇನ್ನೇನಾದರೂ ಉಳಿಯಿತೆ ಹೆಣ್ಣಿನ ಶೋಷಣೆಗೆ? (ಇಂದು ಇದು ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ತನ್ನ ವಿರಾಟ ರೂಪ ದರ್ಶನ ಮಾಡುತ್ತಿದೆ) ನೆನೆದು ತಲೆ ಗೀರ್ರ್ ಎಂದಿತು.
ಬೆಳದಿಂಗಳ ಮಂದ ಬೆಳಕಿನಲ್ಲಿ ಮಂದಗಮನೆಯಾಗಿ ಹರಿಯುವ ನೈಲ್ ನೋಡುತ್ತಾ ಸುಮ್ಮನೆ ಕುಳಿತೆ. ಅವಳು ನೃತ್ಯ ಮುಗಿಸಿಕೊಂಡು ಹೋದಳು. ಊಟ ಸಿದ್ಧವಾಗಿತ್ತು. ಎದ್ದು ತಟ್ಟೆ ಹಿಡಿದುಕೊಂಡು ಸಾಲು ಹಚ್ಚಿ, ನೀಡಿಸಿಕೊಂಡು, ಬಂದು ಕುಳಿತು ಊಟ ಮಾಡತೊಡಗಿದೆ. ಗಂಟಲಲ್ಲಿ ತುತ್ತು ಇಳಿಯದಾಯಿತು. ಆದರೆ ಅರೆಬರೆ ಉಣ್ಣುತ್ತಿರುವ ಹೊಟ್ಟೆಗೆ ಸ್ವಲ್ಪವಾದರೂ ತಿನ್ನುವ ಅನಿವಾರ್ಯತೆ ಇತ್ತು. ಸೇರಿದ್ದಷ್ಟು ಊಟ ಮಾಡಿ ಕೊನೆಯ ಮಹಡಿಯ ತಾರಸಿಗೆ ಹೋಗಿ ಕುಳಿತೆವು. ಕೆಲವರು ಹಾಡಿನ ಬಂಡಿ ಕಟ್ಟಿದರು. ಈಜುಕೊಳದ ನೀರಿನ ತಂಪು, ನೈಲ್ ನ ಅಲೆಯ ಮೇಲಿನ ತಂಗಾಳಿ ತೀಡಿ ಬರುತ್ತಿತ್ತು. ಈಜು ಕೊಳದ ಬಳಿ ಇರುವ ನೀಳ ಕುರ್ಚಿಗಳ ಮೇಲೆ ನೀಳವಾಗಿ ಮೈ ಚಾಚಿದೆ. ಮೇಲೆ ದುಂಡಾಗುತ್ತಿರುವ ಚಂದ್ರ, ಪಕ್ಕನೆ ನಗು ಬಂತು. ಭಾರವಾದ ಮನಸ್ಸು ಹಗುರವೆನಿಸಿತು. ಕೆಳಗೆ ನೈಲ್, ಮೇಲೆ ನೆಯ್ದಿಲ್, ನಡುವೆ ತಂಗಾಳಿ, ಜಗತ್ತೆಲ್ಲ ನಿದ್ರೆಯೊಳಗೆ ಲೀನ. ತೇಲುವ ಸ್ವರ್ಗದ ಪಯಣ. ಮಕ್ಕಳು ಸಂಗಾತಿ ಜೊತೆಗಿದ್ದಿದ್ದರೆ…? ಎಲ್ಲರೂ ಒಂದು ಸಲ ಕಣ್ಮುಂದೆ ಹಾಯ್ದು ಹೋದರು.
ಈಗ ನಮ್ಮ ದೋಣಿ ದಡಕ್ಕೆ ಬಂದು ನಿಂತಿತ್ತು. ರಾತ್ರಿ ಪ್ರಯಾಣ ಮಾಡುವುದಿಲ್ಲ. ನೈಲ್ ದಡದಲ್ಲಿರುವ ಊರು ಎಡ್ಫು(Edfu). ತಾರಸಿಯ ಮೇಲೆ, ನೀಳವಾದ ಖುರ್ಚಿಲಿ ಮಲಗಿ ನಾನು ವಿಶ್ರಾಂತಿಯಲ್ಲಿರಬೇಕಾದರೆ ದಡದ ಪಕ್ಕದಲ್ಲಿಯೇ ಇದ್ದ ರಸ್ತೆಯಲ್ಲಿ ಟಪ್ ಟಪ್ ಪಟಾಕಿಗಳು ಸಿಡಿಯತೊಡಗಿದವು. ಎಲ್ಲರೂ ಎದ್ದು ಬಂದು ಗ್ಯಾಲರಿಯಲ್ಲಿ ನಿಂತು ನೋಡತೊಡಗಿದೆವು. ಅಲ್ಲಿ ನಡೆದದ್ದು ಮದುವೆಗೆ ಸಂಬಂಧಿಸಿದ ಏನೋ ಒಂದು ಸಮಾರಂಭ. ಅದೇ ಸಾಮಾನ್ಯ ದಾರಿಯಲ್ಲಿ ಆ ಕಡೆಗೆ ಏಳು ಕಾರುಗಳು, ಈ ಕಡೆಗೆ 8 ಕಾರುಗಳು ಎದುರು ಬದುರಾಗಿ ನಿಂತಿವೆ. ಒಂದು ಕಾರಿನಿಂದ ಕೋಟು, ಪ್ಯಾಂಟು, ಬೂಟು ಧರಿಸಿದ ಯುವಕ ಇಳಿದು ಬಂದ. ನಿಲುವಂಗಿ ಧರಿಸಿದ ಕೆಲವು ಗಂಡಸರು ಹಾಗೂ ಪ್ಯಾಂಟ್ ಶರ್ಟ್ ಧರಿಸಿದ ಯುವಕರು ಶೃಂಗಾರಗೊಂಡ ಯುವಕನ ಮೇಲೆ ಮಿಂಚು ಹೊಯ್ದು, ಕಾರಂಜಿಯಂತೆ ಸಿಡಿಸುತ್ತಿದ್ದರು. ಚೂಡಿ ಮತ್ತು ಲುಂಗಿಯಂಥ ಲಂಗ ಧರಿಸಿದ ಯುವತಿಯರಿದ್ದರು. ಒಳಗೆ ಕುಳಿತ ಯುವತಿಯ ಉಡುಗೆ ಹೇಗಿತ್ತೆಂದು ಕಾಣದಾಗಿತ್ತು. ಮಿಂಚುವ, ಹೊಸ ಉಡುಗೆಯಂತೂ ಕಾಣುತ್ತಿತ್ತು. ಆ ಕಾರುಗಳು ಒಂದರ ಹಿಂದೊಂದು ಹೋದವು. ಮತ್ತೆ ಐದು ನಿಮಿಷದಲ್ಲಿ ಮರಳಿ ಬಂದವು. ಚೇಷ್ಟೆ, ಕೂಗಾಟ ನಡೆದು ಮತ್ತೆ ಹೋದವು. ಮತ್ತೆ ಬಂದವು. ಹೀಗೆ 3-4 ಬಾರಿ ಮಾಡಿದರೂ ಅಲ್ಲಿ ನಡೆಯುತ್ತಿರುವುದೇನು ಎಂಬುದು ತಿಳಿಯಲೇ ಇಲ್ಲ. ಬಹುಶಃ ಮದುವೆಗೆ ಸಂಬಂಧಿಸಿದ ಕಾರ್ಯಕ್ರಮ ಇರಬಹುದೇನೋ? ಇಳಿದು ಬಂದು ಮಲಗಿ ಬಿಟ್ಟೆ. ಜುಲೈ 22ರ ರಾತ್ರಿ ನೈಲ್ ನ ಅಲೆ ಮೇಲೆ ಕಳೆದು ಹೋಯಿತು.
(ಮುಂದುವರಿಯುವುದು…)
 

‍ಲೇಖಕರು avadhi

17 March, 2014

ನಿಮಗೆ ಇವೂ ಇಷ್ಟವಾಗಬಹುದು…

ರಾಜಸ್ಥಾನವೆಂಬ ಸ್ವರ್ಗದ ತುಣುಕು : ಖ್ವಾಜಾ ಮೊಯಿನುದ್ದೀನ್ ಚಿಸ್ತಿ ಸನ್ನಿಧಿಯಲ್ಲಿ

ರಾಜಸ್ಥಾನವೆಂಬ ಸ್ವರ್ಗದ ತುಣುಕು : ಮತ್ತೆ ಮತ್ತೆ ಅದೇ ಜಾಗದಲ್ಲಿ ನಿಲ್ಲುತ್ತಿತ್ತು ಖಾಲಿ ಬೈಕ್

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading