ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನೈಲ್ ನದಿಯ ಮಡಿಲಲ್ಲಿ : ’ಈಸಿಸ್’ ಮತ್ತು ’ರಾ’

(ಇಲ್ಲಿಯವರೆಗೆ…)

[ಕಾರ್ನಾಕ್ ನ ಅಮೂನ್ ದೇವಾಲಯ]
ಎಲ್ ಬಹಾರಿ ದೇವಾಲಯ ನೋಡಿ ಕಾರ್ನಾಕ್ ದೇವಾಲಯಕ್ಕೆ ಬಂದೆವು.
ಇದು ಮಧ್ಯಯುಗೀನ ಕಾಲದಲ್ಲಿ ಆಳಿದ ದ್ವಿತೀಯ ಅಂಟೆಪ್ (Antef-II) ಕಾಲದ್ದು (ಕ್ರಿ.ಪೂ 2118-2069). ಈ ಬೃಹತ್ ಕಟ್ಟಡದ ಕಾರ್ಯ 11-12ನೇ ರಾಜವಂಶಗಳ ಕಾಲದವರೆಗೂ ಮುಂದುವರೆದಿದೆ. ಇದನ್ನು ಕಟ್ಟಿದ ರಾಜವಂಶಗಳೆಲ್ಲವೂ ಥೀಬ್ಸ್ ನ್ನೇ ಕೇಂದ್ರವನ್ನಾಗಿಟ್ಟುಕೊಂಡು ರಾಜ್ಯವಾಳಿದ್ದರಿಂದ ಇದಕ್ಕೆ ಅತ್ಯಂತ ಮಹತ್ವ ಲಭಿಸಿ, ಅಸಾಧಾರಣ ಅಭಿವೃದ್ಧಿ ಕಂಡಿತ್ತು. ಥೀಬ್ಸ್ ಜಗತ್ತಿನಲ್ಲಿ ಅತ್ಯಮೂಲ್ಯ ಸಂಪತ್ತು ಹೊಂದಿದ ನಗರವಾಗಿತ್ತು.
ಈ ದೇವಾಲಯವನ್ನು “ಭೂಮಿಯ ಮೇಲಿನ ಸ್ವರ್ಗ” ಎಂದು ಕರೆಯುತ್ತಿದ್ದರಂತೆ. ಈ ದೇವಾಲಯ ಅಂದಾಜು ಒಂದು ಸಾವಿರ ಅಡಿ ಉದ್ದ, ಮುನ್ನೂರು ಅಡಿ ಅಗಲವಿದೆ. ಇದನ್ನು ಪೂರ್ವದಿಂದ ಪಶ್ಚಿಮ ಮತ್ತು ದಕ್ಷಿಣೋತ್ತರ ಅಕ್ಷಾಂಶಗಳು ಸಂದಿಸುವಲ್ಲಿ ಕಟ್ಟಲಾಗಿದೆ. ಈ ಅಕ್ಷಾಂಶಗಳು ಕೂಡುವ ಕೇಂದ್ರದಲ್ಲಿ ನಾಲ್ಕು ಶಿಲಾಶಾಸನ ಸ್ತಂಭಗಳನ್ನು ನಿಲ್ಲಿಸಲಾಗಿದೆ. ಈ ಕಂಬಗಳ ಮೇಲ್ಭಾಗ ಬಂಗಾರದಿಂದ ಮಾಡಲಾಗಿತ್ತಂತೆ. ಮುಂಭಾಗದಲ್ಲಿ 30ನೇ ರಾಜವಂಶದ ಪ್ರಥಮ ನೆಕ್ಟೆನೆಬೊ(Nectanebo) ಕಟ್ಟಿಸಿದ ಸ್ಪಿಂಕ್ಸ್ ಗ ಳ ಸಮಾವೇಶ ಸ್ಥಳ ಹಾಗೂ ಮಹಾಗೋಡೆಗಳ ಮಹಾದ್ವಾರವಿದೆ. ದಾರಿಯ ಇಕ್ಕೆಲಗಳಲ್ಲಿ ಅಸಂಖ್ಯಾತ ಸ್ಪಿಂಕ್ಸ್ ಗಳು ಟಗರಿನ ಮುಖ, ಸಿಂಹದ ಶರೀರ ಹೊಂದಿವೆ. ಫಲವತ್ತತೆಯ ಸಂಕೇತವಾದ ಟಗರು, ಅಮೂನ್ ದೇವರ ಆರಾಧ್ಯ ಪ್ರಾಣಿಯಂತೆ. ಈ ಸಿಂಹಕೇಸರದಲ್ಲಿ ಫೇರೊ ದ್ವಿತೀಯ ರ್ಯಾಮಸೆಸ್ ನ ಚಿಕ್ಕಮೂರ್ತಿಗಳನ್ನು, ಈ ಬಲಿಷ್ಠ ಪ್ರಾಣಿಯ ಹೊಟ್ಟೆಯಲ್ಲಿ ಹುಟ್ಟಿಬರಲಿ ಹಾಗೂ ಅದು ಅವರನ್ನು ಕಾಪಾಡಲಿ ಎಂಬುದರ ಪ್ರತೀಕವಾಗಿ ಕೆತ್ತಲಾಗಿದೆ. ಈಗ ಉಳಿದ ಸ್ಪಿಂಕ್ಸ್ ಗಳೆಂದರೆ ಉತ್ತರ ಸಾಲಿನಲ್ಲಿ 19 ಹಾಗೂ ದಕ್ಷಿಣ ಸಾಲಿನಲ್ಲಿ 33. ಅವೂ ಭಗ್ನಗೊಂಡಾವಸ್ಥೆಯಲ್ಲಿವೆ.
ಪೂಜಾ ಸಮಯದಲ್ಲಿ ಧ್ವಜ ಮತ್ತು ಪೂಜ್ಯನೀಯ ಸಂಕೇತಗಳನ್ನು ಇವುಗಳ ತುದಿಗೆ ಇರಿಸಲಾಗುತ್ತಿತ್ತು. ಇದರ ಎರಡನೆಯ ಮಹಾ ದ್ವಾರವನ್ನು ಫೇರೋ ಹರೆಮ್ಹೆಬ್ (Horemheb) ಆರಂಭಿಸಿದರೆ ಇದನ್ನು ಕಟ್ಟಿ ಮುಗಿಸಿದವನು ಪ್ರಥಮ ರ್ಯಾಮಸೆಸ್. ಮೂರನೆಯ ಮಹಾದ್ವಾರವನ್ನು ಮುಮ್ಮಡಿ ಆಮೆನ್ ಹೊಟೆಪ್ ಕಟ್ಟಿಸಿದನಂತೆ. ಈಗ ಅದು ಬಿದ್ದು ಹೋಗಿದೆ. ನಾಲ್ಕನೆಯ ಮಹಾದ್ವಾರ ಪ್ರಥಮ ತುತ್ಮೊಸಿಸ್ ನಿಂದ ಕಟ್ಟಲ್ಪಟ್ಟರೆ ಐದು, ಆರನೆಯ ಮಹಾದ್ವಾರಗಳು ಮುಮ್ಮಡಿ ತುತ್ಮೊಸಿಸ್ ನಿಂದ ನಿರ್ಮಾಣಗೊಂಡಿವೆ. ಉತ್ತರ ದಕ್ಷಿಣ ದಿಕ್ಕಿನಿಂದಾರಂಭವಾಗುವ ಏಳನೆಯ ಮಹಾದ್ವಾರವೂ ಈತನಿಂದಲೇ ನಿರ್ಮಾಣಗೊಂಡಿದೆ. ಇನ್ನು 8-9ನೇ ಮಹಾದ್ವಾರಗಳು ಹ್ಯಾಟಷೆಪ್ಸೂತ್ ಹಾಗೂ ಇಮ್ಮಡಿ ತುತ್ಮೊಸಿಸ್ ನಿಂದ ನಿರ್ಮಾಣಗೊಂಡಿವೆ. ಹತ್ತನೆಯ ಮಹಾದ್ವಾರ ಹರೆಮ್ಹಬ್ ಮತ್ತು ಅಖ್ ನಟೆನ್ರು ಕಟ್ಟಿಸಿದ್ದಾರೆ. ಇದರ ಅತ್ಯಂತ ವೈಭವದ ಕಾಲದಲ್ಲಿ ಇಲ್ಲಿ 80,000 ಪುರೋಹಿತರು ಸೇವೆ ಗೈಯುತ್ತಿದ್ದರಂತೆ.

ಇದೆ ದೇವಾಲಯದ ಒಂದು ದಿವ್ಯ ಭವನ(Hypostyle Hall)ವನ್ನು 134 ಕಂಬಗಳನ್ನು 16 ಸಾಲುಗಳಲ್ಲಿರಿಸಿ ನಿರ್ಮಿಸಲಾಗಿದೆ. ಭೂತಾಕಾರದ ಕಂಬಗಳ ಅಂದಾಜು ಉದ್ದ 15 ಮೀಟರ್ (ಪೀಠ ಭಾಗ ಬಿಟ್ಟು), ಈ ಪೀಠ ಭಾಗವನ್ನು ತಬ್ಬಿ ಹಿಡಿಯಲು ಆರು ಮಂದಿ ಕೈ ಚಾಚಿ ಸುತ್ತುವರಿಯಬೇಕು. ಫೇರೊ ಮುಮ್ಮಡಿ ಅಮೆನ್ಹೊಟೆಪ್ 12 ಕಂಬಗಳನ್ನು ನಿಲ್ಲಿಸಿದರೆ, ಉಳಿದ 122 ಕಂಬಗಳನ್ನು ಪ್ರಥಮ ಸೆತ್ ಮತ್ತು ದ್ವಿತೀಯ ರ್ಯಾಮಸೆಸ್ ನಿಲ್ಲಿಸಿದರಂತೆ. ಕಂಬಗಳ ತುದಿಭಾಗವನ್ನು ಗಾಳಿ ಬೆಳಕು ಬರಲು ಮಾಡಿದ್ದ ಕಿಟಕಿಗಳಿಂದ ಕೂಡಿದ ಗೋಡೆ ಸೇರಿಸುತ್ತಾ ಹೋಗಿದೆ. (ಈಗ ಇದರ ಅಳಿದುಳಿದ ಸ್ವಲ್ಪ ಭಾಗ ಮಾತ್ರ ಇದೆ.) ಈ ಕಂಬದ ತುದಿಗಳಲ್ಲಿ ಬಂಗಾರದ ಕಳಸಗಳಿದ್ದುವಂತೆ, ಈ ಕಂಬಗಳ ನಡುವೆ ಸಂಜೆಯ ಸೂರ್ಯ (ಅಮೂನ್) ಕಾಣಿಸಿಕೊಂಡಾಗ ಕಾಣುವ ದೃಶ್ಯ ಮೈಮರೆಸುವಂಥದ್ದಂತೆ. ಈಗ ಬಹುಪಾಲು ಕಂಬದ ತುದಿಗಳೆಲ್ಲ ಮುರಿದು ಬಿದ್ದಿವೆ. ಉದ್ದನೆಯ ಕಲ್ಲು, ತೊಟ್ಟಿನಂತೆ ಎತ್ತರವಾಗಿ ಬೆಳೆದು ತುದಿಯಲ್ಲಿ ಹೂವಾಗಿ ಅರಳಿರುವ ರೀತಿ! ಅದನ್ನು ನೋಡಿಯೇ ಅನುಭವಿಸಬೇಕು. ತುದಿಯಲ್ಲಿ ಹತ್ತು ಹನ್ನೆರಡು ರೀತಿಯ ಹೂವುಗಳ ಕೆತ್ತನೆ ಮೂಕ ವಿಸ್ಮಿತರನ್ನಾಗಿಸುತ್ತದೆ.
ನಿಜವಾಗಿಯೂ ನಟ್ಟನಡುವಿರುವ ಶಾಸನ, 134 ಶಿಲಾಸ್ತಂಭಗಳ ಬಂಗಾರದ ಕಳಸಗಳ ನಡುವೆ, ಸಂಜೆಯ ಕೆಂಪು ಸೂರ್ಯ ಬಂದರೆ ಅದು ಭೂಮಿಯ ಮೇಲಿನ ಕ್ಷೀತಿಜ ಆಗದೇ ಇದ್ದೀತೇ? ಪ್ರಾಚೀನ ನಾಗರಿಕತೆಗಳ ಕಲಾವಂತಿಕೆಗೆ, ಶಿಲ್ಪಕಲಾತ್ಮಕತೆಗೆ ದಿವ್ಯ ಉದಾಹರಣೆಗಳಿವು. ಆದರೀಗ ನೋಡುತ್ತಿರುವುದು ಅಳಿದುಳಿದ ಭಾಗ ಮಾತ್ರ. ಬೃಹದಾಕಾರದ ರೂಪ ಕಲ್ಪಿಸಿಕೊಳ್ಳಬಹುದಷ್ಟೇ. ಅದರ ಸೌಂದರ್ಯ ಕಲ್ಪನಾತೀತ. ರಾಣಿ ಹ್ಯಾಟ್ಷೆಪ್ಸೂತ್ ಳು ಇಲ್ಲಿ ಕೆತ್ತಿಸಿದ ಒಂದು ಶಾಸನದ ಒಕ್ಕಣಿಕೆಯಲ್ಲಿ “ಎಷ್ಟೋ ವರ್ಷಗಳಾದ ಮೇಲೆ ಈ ಸ್ಮಾರಕಗಳನ್ನು ನೋಡುವ ನೀವೇನೆನ್ನುವಿರಿ! ಬಂಗಾರದ ಬೆಟ್ಟವನ್ನು ಹೇಗೆ ಮಾಡಿದರೋ ಅರ್ಥವೇ ಆಗುವುದಿಲ್ಲ… ಎಂದು. ಕಾರ್ನಾಕ್, ಭೂಮಿಯಲ್ಲಿ ಸ್ವರ್ಗದ ಕ್ಷಿತಿಜ ಎಂಬುದು ಗೊತ್ತು ನನಗೆ, ಆದುದರಿಂದಲೇ ಇದನ್ನು ಅಲಂಕರಿಸುವುದಕ್ಕಾಗಿ ಕೊಳಗ ಗಟ್ಟಲೇ ಬಂಗಾರವನ್ನು ಅಳೆದು ಕೊಟ್ಟಿದ್ದೇನೆ.” ಎಂದು ಹೇಳಿದ್ದಾಳೆ. ಇಷ್ಟು ಸುದೀರ್ಘ ಕಾಲದ ಬಳಿಕ ಸುಮಾರು 3000 ವರ್ಷಗಳ ಬಳಿಕಾದರೂ ಕನಿಷ್ಠ ಪಕ್ಷ ಇಷ್ಟನ್ನಾದರೂ ನೋಡುತ್ತಿರುವ ನಾವೇ ಧನ್ಯರು ಎಂದುಕೊಂಡು ಸಮಾಧಾನಪಟ್ಟುಕೊಳ್ಳಬೇಕು. ಈ ಕಾರ್ನಾಕ್ ದೇವಾಲಯದಿಂದ ಲಕ್ಸರ್ ದೇಗುಲದವರೆಗೆೆ ಸುಮಾರು 2 ಕಿ.ಮೀ ಉದ್ದದ ಉತ್ಸವ ಹಾದಿ ಇರುವುದನ್ನು ಈಗ ಕಂಡುಹಿಡಿದಿದ್ದಾರೆ. ಈ ಹಾದಿಯ ಇಕ್ಕೆಲದಲ್ಲಿ ಮಾನವ ಮುಖದ ಸ್ಪಿಂಕ್ಸ್ ಗಳಿವೆ. ಇವು ಸಾವಿರಾರು ಸಂಖ್ಯೆಯಲ್ಲಿರಬಹುದು. ಈಗ ಕಾಲು ಭಾಗ ಮಾತ್ರ ಉತ್ಖನನವಾಗಿದೆ.
ನಂಬಿಕೆಗಳು ಮತ್ತು ದೇವತೆಯರು
ನಾವು ನೋಡುತ್ತಾ ಹೋದಂತೆ ಬೃಹತ್ ದೇವಾಲಯಗಳ ದಿವ್ಯ ದರ್ಶನದೊಂದಿಗೆ ಅವುಗಳನ್ನು ಕಟ್ಟಿಸಿದವರು ಮತ್ತು ಅದು ಯಾರ ದೇವಾಲಯ ಅಥವಾ ಯಾವ ಪೇರೋನ ದೇವಾಲಯ, ಅದರ ಸುತ್ತಲೂ ಹೆಣೆದುಕೊಂಡಿರುವ ಸತ್ಯಗಳು, ಮಿಥ್ಯಗಳು ಪ್ರಮುಖ ಭಾಗವಾಗಿ ನಮಗೆ ಕೇಳಿಸಲ್ಪಟ್ಟವು. ಇವುಗಳೊಂದಿಗೆ ಪ್ರಾಚೀನ ಇಜಿಪ್ತಿನಲ್ಲಿ ಆರಾಧಿಸುತ್ತಿದ್ದ ಇನ್ನೂ ಹಲವಾರು ದೇವತೆಗಳು ಮತ್ತು ಅದರ ಸುತ್ತಲೂ ಗಟ್ಟಿಗೊಂಡಿರುವ ನಂಬಿಕೆಗಳು ಸಾಕಷ್ಟಿವೆ. ಇವುಗಳ ಚಿತ್ರಗಳು, ದೇವಾಲಯ ಮತ್ತು ಪಿರ್ಯಾಮಿಡ್ ಗಳ ಭಿತ್ತಿಗಳ ಮೇಲೆ ಉಬ್ಬು ಚಿತ್ರಗಳಲ್ಲಿ ಕೊರೆಯಲಾಗಿದೆ.

ಅವುಗಳ ಬಗೆಗೆ ಒಂದಿಷ್ಟು ಹೇಳದೆ ಹೋದರೆ ನನ್ನೀ ಕಥನ ಅಪೂರ್ಣವಾದೀತು. ಇಲ್ಲಿ ಸಾಮಾನ್ಯವಾಗಿ ಕಾಣುವುದು ಅಂಕ್. `ಅಂಕ್’ ಎಂದರೆ `ಪ್ರತೀಕ,’ `ಪ್ರತಿರೂಪ’ ಎಂದರ್ಥ. ಇದು ಪ್ರತಿಯೊಬ್ಬ ಪ್ರಾಚೀನ ಇಜಿಪ್ತ ದೇವತೆಯ ಕೈಯಲ್ಲಿದೆ. ಇದು ಜೀವನದ ಪ್ರತೀಕ ಅಥವಾ ಸಂಕೇತವಂತೆ. ನೋಡಲು ಇದರ ಕೆಳ ಅರ್ಧ ಭಾಗ ನಮ್ಮ ಋಷಿಗಳ ಕೈಯಲ್ಲಿಯ ದಂಡದಂತಿದೆ. ಅದರ ಮೇಲೆ ಮೊಟ್ಟೆಯಾಕಾರವಿದೆ. ಇದರಲ್ಲಿ ಕೆಳಗಿನ ಭಾಗ ದಕ್ಷಿಣ ಇಜಿಪ್ತಿನ ಸಂಕೇತ, ಅಡ್ಡಭಾಗ ಉತ್ತರ ಇಜಿಪ್ತಿನ ಸಂಕೇತ. ಮೇಲಿನ ಭಾಗ ದೇವತಾ ಪುತ್ರರಾದ ಫೇರೋಗಳನ್ನು ಪ್ರತಿನಿಧಿಸುತ್ತದಂತೆ. ಮೇಲಿರುವ ಗೋಲಾಕಾರದ ಸುತ್ತಲೂ ಚಿತ್ರಲಿಪಿ ಇದೆ. ಅದರೊಳಗೆ ನೀಲಿ, ಕೆಂಪು ಪಟ್ಟಿಗಳಿವೆ. ಅದರೊಳಗೆ ಮೇಲ್ಭಾಗದಲ್ಲಿ ಪುನರ್ಜನ್ಮದ ಸಂಕೇತವಾದ ಪವಿತ್ರ ಸಗಣಿ ಹುಳ, ಕೆಳ ಭಾಗದಲ್ಲಿ ಸಮೃದ್ಧಿಯ ಸಂಕೇತವಾಗಿ ಬೆಳೆಗಳು ಮತ್ತು ಕಮಲದ ಹೂವಿನ ಚಿತ್ರಗಳಿವೆ. ಕೆಲವರು ಜೀವದಾಯಿನಿ ಹಾಪಿ(ನೈಲ್)ಯ ಹರಿವಿನ ಪ್ರತಿಕೃತಿ ಎನ್ನುತ್ತಾರೆ. ಏಕೆಂದರೆ ಹಾಪಿ ದಕ್ಷಿಣದಿಂದ ಇಜಿಪ್ತ ಪ್ರವೇಶಿಸಿ ಉತ್ತರಕ್ಕೆ ಬಂದಂತೆ ಹಲವು ಕವಲೊಡೆದು ತ್ರಿಕೋನಾಕಾರದಲ್ಲಿ ಹರಿಯುತ್ತಾಳೆ. ಇದರ ಸಂಕೇತ ಎಂಬ ನಂಬಿಕೆಯೂ ಇದೆ. ಈ ಅಂಕ್ ಹಿಡಿದವರೆಲ್ಲರೂ ಪ್ರಥಮ ಮೂಲದೇವ `ರಾ’ನ ಪ್ರತೀಕಗಳು ಎಂಬುದು ಅರ್ಥವಂತೆ. ಇಲ್ಲಿಯ ದೇವತೆಗಳನ್ನು ಗಮನಿಸಿದರೆ ನಮ್ಮಲ್ಲಿರುವ ವರಾಹ, ನರಸಿಂಹ, ಕಾಮಧೇನು, ಗಣಪತಿ, ಜೋಕುಮಾರಸ್ವಾಮಿ, ಹನುಮಂತ ಮುಂತಾದ ದೇವರುಗಳು ನೆನಪಿಗೆ ಬರುತ್ತಾರೆ.
ಭಾರತೀಯ ಪುರಾಣ ಇತಿಹಾಸಗಳಲ್ಲಿರುವಂತೆಯೇ ಪ್ರಾಚೀನ ಇಜಿಪ್ತಿನ ಇತಿಹಾಸದಲ್ಲಿಯೂ ಅಸಂಖ್ಯ ದೇವತೆಗಳಿದ್ದಾರೆ. ಇವರ ಮುಖ್ಯ ದೇವತೆ `ರಾ’. (ಸೂರ್ಯ). ಜಗತ್ತಿನ ಬಹುತೇಕ ಸಂಸ್ಕೃತಿಯಲ್ಲಿ ಸೂರ್ಯನೇ ಆದಿ ದೈವವಾಗಿದ್ದಾನೆ. ಎಲ್ಲ ನಾಗರೀಕತೆಗಳ ಜನರೂ ಸೂರ್ಯೊಪಾಸಕರಾಗಿದ್ದಾರೆ. ಅಂದರೆ ಸೃಷ್ಟಿಯ ಮೊದಲ ಮತ್ತು ಅಂತಿಮ ಸತ್ಯವನ್ನು ತಿಳಿಯಬಲ್ಲ ಮೇಧಾವಿಗಳು ಅವರು. ಇಲ್ಲಿ ಸೂರ್ಯನನ್ನು ಭೌತಿಕವಾಗಿ ಕೆಂಪು ಉಂಡೆಯಂತೆ, ಹೊಳೆವ ಗೋಳದಂತೆ ಚಿತ್ರಿಸಿದರೂ ಈತ ರೂಪಾತೀತ, ನಿರಾಕಾರನಾದ ಸರ್ವಶಕ್ತ, ಸೃಷ್ಟಿ ಮೂಲ. ಸೃಷ್ಟಿಯಲ್ಲಿ ಏನೂ ಇರಲಿಲ್ಲ. ಎಲ್ಲವೂ ಕಗ್ಗತ್ತಲೆ. ಈ ಗಾಡಾಂಧಕಾರದಲ್ಲಿ `ನುನ್’ ಎಂಬ ಪ್ರಳಯ ಜಲದಲ್ಲಿ `ರಾ’ ಎಂಬ ಮೂಲಶಕ್ತಿ ಸುಪ್ತ ಸ್ಥಿತಿಯಲ್ಲಿತ್ತು (ವಿಷ್ಣು ಕ್ಷೀರ ಸಾಗರದಲ್ಲಿ ಆದಿಶೇಷನ ಮೇಲೆ ಗಾಢ ನಿದ್ದೆಯಲ್ಲಿದ್ದಂತೆ.) ಒಂದು ಶುಭದಿನ ಅವನಿಗೆ ಸೃಷ್ಟಿ ಸಂಚಲನ ಕಾರ್ಯದಲ್ಲಿ ತೊಡಗುವ ಇಚ್ಛೆಯಾಯಿತು. `ನುನ್’ ಜಲಸಾಗರದಿಂದ `ರಾ’ ಮೇಲೆದ್ದು ಬಂದು `ಷಂ’ ಎಂಬ ದೇವನನ್ನು `ಟೆಪ್ನುತ್ ಎಂಬ ದೇವತೆಯನ್ನು ಸೃಷ್ಟಿಸಿದ. `ಷಂ’ ಗಾಳಿಯ ಆದಿ ದೇವತೆ, (ವಾಯುದೇವ) `ಟೆಪ್ ನತ್’ ಮಂಜಿನ ದೇವತೆ. ಹೀಗೆ `ರಾ’ ಏಕೈಕ ಆದಿ ದೇವನಾಗಿದ್ದವನು ಸೃಷ್ಟಿಯ ಮೂಲಕ ಮೂರಾದನಂತೆ. ಷಂ ಮತ್ತು ಟೆಪ್ನುತ್ ದಾಂಪತ್ಯ ಜೀವನ ಆರಂಭಿಸಿದಾಗ ಅವರಿಗೆ `ಗೆಬ್’ ಎಂಬ ಭೂತತ್ವದ ಗಂಡು ಮಗು (ಭೂದೇವ) ಹಾಗೂ ಆಕಾಶ ತತ್ವದ `ನುತ್’ ಎಂಬ ಹೆಣ್ಣು ಮಗು ಹುಟ್ಟಿದವು.
ಈ `ನುತ್ ಗೆಬ್’ ರಿಗೆ ಓಸರೀಸ್, ಸೆತ್, ಈಸೀಸ್ ಮತ್ತು ನೆಫ್ರೀಸ್ ಎಂಬ ನಾಲ್ಕು ಮಕ್ಕಳಾದವು. ಸೆತ್ನಿಗೆ ಈಸೀಸಳನ್ನು ವರಿಸುವ ಆಸೆಯಿದ್ದರೆ, ನೆಪ್ರೀಸ್ ಓಸಿರೀಸನನ್ನು ವಿವಾಹವಾಗ ಬಯಸುತ್ತಾಳೆ. ಆದರೆ `ರಾ’ನ (ಅಜ್ಜನ) ಆದೇಶದಂತೆ ಓಸಿರೀಸ್, ಈಸೀಸ್ ಳನ್ನು ಮದುವೆಯಾಗುತ್ತಾನೆ. ಸೆತ್ ನೇಪ್ರಿಸಳನ್ನು ಅನಿವಾರ್ಯವಾಗಿ ಮದುವೆಯಾಗುತ್ತಾನೆ. ಇದರಿಂದಾಗಿ ಸೆತ್ ಓಸಿರೀಸ್ ನನ್ನು ದ್ವೇಷಿಸಲಾರಂಭಿಸಿದ. ಇತ್ತ ನೆಪ್ರೀಸ್ ಗುಟ್ಟಿನಿಂದ ಓಸಿರೀಸ್ ನನ್ನು ಸೇರುತ್ತಿದ್ದಳು. ಅವರಿಗೊಂದು ಗಂಡು ಮಗುವಾಯಿತು. ಈ ಮಗುವೇ `ಅನೂಬಿಸ್,’ ಇದರಿಂದ `ಸೆತ್’ ಕೋಪೋದ್ರಿಕ್ತನಾದ. ಪತಿಯ ಕೋಪಕ್ಕೆ ಹೆದರಿ ನೆಪ್ರೀಸ್ ಈ ಮಗು (ಅನೂಬಿಸ್) ವನ್ನು ನೈಲ್ ನದಿಯ ತೀರದಲ್ಲಿ ಹುಲುಸಾದ ಪಪೈರಸ್ ಹುಲ್ಲಿನ ಮಧ್ಯೆ ಬಿಟ್ಟು ಬಂದಳು. ಸೆತ್ ಉಪಾಯಮಾಡಿ ತನ್ನ ಅಣ್ಣ ಓಸಿರೀಸ್ ನನ್ನು ಹತ್ಯೆ ಮಾಡಿ ಪೆಟ್ಟಿಗೆಯಲ್ಲಿ ತುಂಬಿ ನೀರಿಗೆಸೆದನು. ಮತ್ತು ಈಸೀಸ್ ಳನ್ನು ಒಲಿಸಿಕೊಳ್ಳುವ ಪ್ರಯತ್ನ ಮಾಡಿದ. ಆದರೆ ಈಸಿಸ್ ಒಪ್ಪದೆ ಪತಿಯನ್ನು ಹುಡುಕಿ ತೆಗೆಯುತ್ತಾಳೆ. ಇದನ್ನು ತಿಳಿದ ಸೆತ್ ಓಸರೀಸ್ ನ ದೇಹವನ್ನು ಹದಿನಾಲ್ಕು ತುಂಡುಗಳಾಗಿ ಕತ್ತರಿಸಿ ಹದಿನಾಲ್ಕು ಕಡೆಗೆ ಬಿಸಾಡಿದ. ಆದರೆ ಈಸಿಸ್ ಛಲಬಿಡದೆ ಹದಿನಾಲ್ಕು ತುಂಡುಗಳನ್ನು ಹುಡುಕಿ ಜೋಡಿಸುವ ಪ್ರಯತ್ನದಲ್ಲಿದ್ದಾಗ, ಪಪೈರಸ್ ನ ಮಧ್ಯ ಬೆಳೆದ ಅನೂಬಿಸ್ ನನ್ನು ನೋಡುತ್ತಾಳೆ. ಅವನ ಕಥೆ ಕೇಳಿ ಅನೂಬಿಸ್, ನೆಪ್ರಿಸ್ ಇಬ್ಬರನ್ನು ಕರುಣೆಯಿಂದ ತನ್ನವರೆಂದು ಒಪ್ಪಿಕೊಳ್ಳುತ್ತಾಳೆ.
ಅನೂಬಿಸ್, ಓಸಿರಿಸ್ (ತಂದೆಯ)ನ ದೇಹಕ್ಕೆ ಲೇಪನ ಕ್ರಿಯೆ ಮಾಡಿ, ಬಟ್ಟೆಯ ಪಟ್ಟಿಗಳಲ್ಲಿ ಸುತ್ತಿ ಮತ್ತೆ ಮನುಷ್ಯನ ರೂಪ ಕೊಡುತ್ತಾನೆ. (ಇದರಿಂದಾಗಿಯೇ ಈತ ಶವ ಸಂಸ್ಕಾರವಿಧಿಯ ಮುಖ್ಯ ದೇವನಾದ) ಈಸೀಸ್ ತನ್ನ ಅತಿಮಾನುಷ ಶಕ್ತಿಯಿಂದ ಓರಿಸೀಸ್ ನ ನಿಸ್ತೇಜ ದೇಹದಲ್ಲಿ ಜೀವ ತುಂಬುತ್ತಾಳೆ. ಮುಂದೇನಾಯಿತೆಂಬುದನ್ನು ಪುಟ 86-87 ರಲ್ಲಿ ನೋಡಿದ್ದೇವೆ. ಇಲ್ಲಿ ಈಸೀಸ್ ಗೆ ಅತಿಮಾನುಷ ಶಕ್ತಿ ಬಂದಿದ್ದೆಲ್ಲಿಂದ? ಹೇಗೆ ಓಸಿರೀಸ್ ನಿಗೆ ಜೀವ ತುಂಬಿದಳು? ಎಂಬ ಪ್ರಶ್ನೆಗೆ ಮತ್ತೊಂದು ಕಥೆ ಉತ್ತರ ಹೇಳುತ್ತದೆ.
ಇಜಿಪ್ತಿನ ಮೈಥಾಲಜಿ ಪ್ರಕಾರ ಪ್ರತಿಯೊಬ್ಬ ದೇವತೆಗೂ ಒಂದು ರಹಸ್ಯನಾಮ ಇರುತ್ತಿತ್ತು. ಒಬ್ಬರ ಈ ರಹಸ್ಯ ನಾಮವನ್ನು ಇನ್ನೊಬ್ಬರು ತಿಳಿದರೆ ದೇವತೆಯ ಶಕ್ತಿ ಅವರಲ್ಲಿ ಸೇರಿಕೊಂಡು ಅವರು ಅತಿಮಾನುಷ ಶಕ್ತಿವಂತರಾಗುತ್ತಿದ್ದರಂತೆ. ಈಸೀಸ್ ಈ ಶಕ್ತಿ ಆಹ್ವಾನಕ್ಕೆ ಆತುರಳಾಗಿ ಅಂಥ ಸಮಯಕ್ಕೆ ಕಾಯುತ್ತಿರುತ್ತಾಳೆ. ಒಂದು ದಿನ `ರಾ’ (ಈಸೀಸ್ ಳ ಅಜ್ಜ)ನ ಬಾಯಿಂದ ಜೊಲ್ಲು ಸುರಿಯಿತು. ಇದಕ್ಕೆಂದೇ ಕಾಯುತ್ತಿದ್ದ ಈಸೀಸ್, ಜೊಲ್ಲಿನಿಂದ ತೊಯ್ದು ಮಣ್ಣಿನಿಂದ ಒಂದು ನಾಗರಹಾವನ್ನು ಮಾಡಿ, ಅದಕ್ಕೆ ಜೀವ ತುಂಬಿ, ವಿಷಮಯವಾದ ಈ ಹಾವನ್ನು `ರಾ’ (ಅಜ್ಜ) ಬರುವ ದಾರಿಯಲ್ಲಿ ಬಿಟ್ಟಳು. ಇದು `ರಾ’ನನ್ನು ಕಚ್ಚಿತು. ತೀವ್ರ ನೋವಿನಿಂದ `ರಾ’ ಕಿರುಚಾಡಿದನಂತೆ. ಈ ಆಕ್ರಂದನಕ್ಕೆ ಭೂಮ್ಯಾಕಾಶಗಳು ತಲ್ಲಣಿಸಿದವಂತೆ. ವಿಷವೇರುತ್ತಿತ್ತು. ಅವನ ಸಂತತಿಯವರೆಲ್ಲ ಓಡಿ ಬಂದಾಗ ಈಸೀಸ್ `ಅಜ್ಜ ನಿಮ್ಮ ರಹಸ್ಯ ಹೆಸರನ್ನು ನನಗೆ ತಿಳಿಸಿ ಆಗ `ನಾನು’ `ನೀವು’ ಆಗುತ್ತೇನೆ. ನಿಮ್ಮನ್ನು ಈ ವಿಷಬಾಧೆಯಿಂದ ಮುಕ್ತಗೊಳಿಸುವ ಸರ್ವಶಕ್ತಳಾಗುತ್ತೇನೆ.’ ಎಂದಳಂತೆ. `ರಾ’ ಮೊದಮೊದಲು ಒಪ್ಪಲಿಲ್ಲ. ಕೊನೆಗೆ ತೀವ್ರ ವಿಷ ಬಾಧೆ ತಡೆಯಲಾಗದೆ ಈಸೀಸ್ ಳ ಕಿವಿಯಲ್ಲಿ ತನ್ನ ರಹಸ್ಯ ನಾಮ ಹೇಳಿದ. ಆಗ ಅತಿಮಾನುಷ ಶಕ್ತಿ ಪಡೆದ ಈಸೀಸ್ ಮಂತ್ರೋಚ್ಛಾರಣೆ ಮಾಡುತ್ತ ಹಾವನ್ನು ಅಲ್ಲಿಗೆ ಬರುವಂತೆ ಮಾಡಿದಳು. ಅದು ವಿಷ ಹೀರಿ ತೆಗೆಯಿತು. `ರಾ’ ಹಾವನ್ನು ಹಿಡಿದು ತನ್ನ ತಲೆಯಲ್ಲಿ ಧರಿಸಿದ. ಅಂದಿನಿಂದ ಹಾವಿನ ಹೆಡೆ `ರಾ’ ವಂಶಜರ ಕಿರೀಟದಲ್ಲಿ ಲಾಂಛನವಾಗಿ ಉಳಿಯಿತು. ಈಸೀಸ್ ಈ ರೀತಿಯಲ್ಲಿ ಅತಿಮಾನುಷ ಶಕ್ತಿಯನ್ನು ಪಡೆದಳು.
ಹೀಗೆ ಪುರಾಣ ಕತೆಗಳಿಂದ `ರಾ’ ಸರ್ವಶ್ರೇಷ್ಠ ದೇವತೆ ಹಾಗೂ ಈಸೀಸ್ ಓಸಿರೀಸ್ ರು ಪ್ರಮುಖ ದೇವತೆಗಳು ಎಂಬುದು ತಿಳಿದು ಬರುತ್ತದೆ. ಈ ದೇವತೆಗಳಲ್ಲದೆ ಇನ್ನೂ ಅನೇಕ ದೇವತೆಗಳು ಇಲ್ಲಿವೆ.
(ಮುಂದುವರಿಯುವುದು…)

‍ಲೇಖಕರು avadhi

19 March, 2014

ನಿಮಗೆ ಇವೂ ಇಷ್ಟವಾಗಬಹುದು…

ರಾಜಸ್ಥಾನವೆಂಬ ಸ್ವರ್ಗದ ತುಣುಕು : ಖ್ವಾಜಾ ಮೊಯಿನುದ್ದೀನ್ ಚಿಸ್ತಿ ಸನ್ನಿಧಿಯಲ್ಲಿ

ರಾಜಸ್ಥಾನವೆಂಬ ಸ್ವರ್ಗದ ತುಣುಕು : ಮತ್ತೆ ಮತ್ತೆ ಅದೇ ಜಾಗದಲ್ಲಿ ನಿಲ್ಲುತ್ತಿತ್ತು ಖಾಲಿ ಬೈಕ್

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading