ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನೆನಪುಗಳ ‘ಮಾಯಾಚಾಪೆ’ಯೊಳಗೆ…

ಹರ್ಷಕುಮಾರ್ ಕುಗ್ವೆ

ದಿ ಸಂಡೇ ಇಂಡಿಯನ್

ನೆನಪುಗಳು, ಅದರಲ್ಲೂ ಬಾಲ್ಯದ ನೆನಪುಗಳು ಮುದ ನೀಡುವಂತವು. ದೊಡ್ಡವರಾಗುತ್ತಾ ಹೋದಂತೆಲ್ಲಾ ಆ ನೆನಪುಗಳು ಹೆಚ್ಚು ಕಾಡುತ್ತಾ ಹೋಗುತ್ತವೆ. ದಿನನಿತ್ಯದ ಬದುಕಿನಲ್ಲಿ ಇಣುಕುವ ನೆನಪುಗಳನ್ನು ವಿಶಿಷ್ಟ ರೀತಿಯಲ್ಲಿ ತೆರೆದಿಡುತ್ತದೆ ಅಂಕಿತ ಪ್ರಕಾಶನ ಪ್ರಕಟಿಸಿರುವ ಜಿ.ಎನ್. ಮೋಹನ್ ಅವರ ‘ಡೋರ್ ನಂಬರ್ 142’.

‘ಡೋರ್ ನಂಬರ್ 142’ರ ಒಳಕ್ಕೆ ಪ್ರವೇಶಿಸಿದಂತೆ, ಲೇಖಕರ ಬದುಕಿನ ನೆನಪುಗಳ ನೆರಳಿನಲ್ಲಿ ನಮ್ಮ ನೆನಪುಗಳು ಒಂದೊಂದಾಗಿ ಬಿಚ್ಚಿಕೊಳ್ಳುತ್ತವೆ. ವ್ಯಕ್ತಿ, ಸನ್ನಿವೇಶ ಬೇರೆ, ಅನುಭವ ಒಂದೇ ಎನ್ನಿಸುವಂತೆ. ಈ ಕೃತಿಯ ವೈಶಿಷ್ಟ್ಯವೆಂದರೆ ಲೇಖಕರು ತಮ್ಮ ಬಾಲ್ಯದ ನೆನಪುಗಳನ್ನು ಬಿಚ್ಚಿಡುವಾಗ ಬಾಲ್ಯದಲ್ಲೇ ಮುಳುಗಿ ಬರೆಯುವುದಿಲ್ಲ. ಬದಲಿಗೆ, ಅವರ ಒಂದೊಂದು ನೆನಪುಗಳ ಹಿಂದೆಯೂ ವರ್ತಮಾನದ ಯಾವುದೋ ಒಂದು ಘಟನೆಯಿದೆ. ಗೆಳೆಯನೊಬ್ಬನ ಮಾತು ನೆನಪಿಸಿದ ನಂಜನಗೂಡು ಟೂತ್ ಪೌಡರ್, ಚೀತಾಫೈಟ್ ಬೆಂಕಿಪೊಟ್ಟಣ, ಎಂ.ಜಿ. ರೋಡಿನ ಬುಕ್ ಸ್ಟಾಲ್‌ನಲ್ಲಿರುವ ಪುಸ್ತಕ ನೆನಪಿಸಿದ ಡಾಕ್ಟರ್ ಆಂಟಿಯ ಡೈಲಾಗ್, ಟೈಮ್ಸ್ ಆಫ್ ಇಂಡಿಯಾದ ಶಾರೂಖ್ ಜಾಹೀರಾತು ನೆನಪಿಸಿದ ಅಂಟವಾಳ ಸಿಪ್ಪೆ… ಹೀಗೆ.

ಕೃತಿ ಓದಿದ ಯಾರಿಗಾದರೂ ಲೇಖಕರ ಅನುಭವಗಳ ವೈವಿಧ್ಯತೆ ಅಚ್ಚರಿ ಮೂಡಿಸುತ್ತದೆ. ಮಾತ್ರವಲ್ಲ, ತಮಾಷೆ ಎನಿಸುವ, ಕಚಗುಳಿ ಇಡುವ, ಕಣ್ಣಂಚಿನಲ್ಲಿ ನೀರಹನಿಯನ್ನು ಉಕ್ಕಿಸುವ, ವಿಷಾದವೆನಿಸುವ, ಅಚ್ಚರಿದಾಯಕ ಎನಿಸುವ ಅನುಭವಗಳು ದಂಡಿಯಾಗಿವೆ ಈ ‘ಡೋರ್‌ನಂಬರ್ 142’ರಲ್ಲಿ.

ಜಿ.ಎನ್. ಅವರು ತಮ್ಮ ನೆನಪುಗಳನ್ನು ಅನಾವರಣಗೊಳಿಸಲು ಬಳಸಿರುವ ಭಾಷೆಯೂ ಅವರ ಹಿಂದಿನ ಕೃತಿಗಳಲ್ಲಿರುವಂತೆಯೇ ಆಪ್ಯಾಯವೆನಿಸುತ್ತದೆ. ದೂರದ ಕ್ಯೂಬಾದ ಅನುಭವಗಳನ್ನೇ ನಮ್ಮೊಳಗೆ ಇನ್ನಿಲ್ಲದಂತೆ ದಾಖಲಿಸಿರುವ ಜಿ.ಎನ್. ಅವರಿಗೆ ಇನ್ನು ತಮ್ಮದೇ ಬದುಕಿನ ಅನುಭವಗಳನ್ನು ನಮಗೆ ದಾಟಿಸುವುದು ಕಷ್ಟವಾಗಲು ಹೇಗೆ ಸಾಧ್ಯ? ‘ಅವ್ರು ನಮ್ದೆಲ್ಲಾ ಬರೆದವ್ರೆ ಅಂದ್ರೆ ನಂ ಥರಾನೇ’ ಎಂಬ ಬರಹದಲ್ಲಿ ಲಂಕೇಶರು ಲೇಖಕರನ್ನು ಪ್ರಭಾವಿಸಿದ ಬಗೆಯನ್ನು ತಿಳಿಸಿರುವುದು ವಿಶಿಷ್ಟವಾಗಿದೆ. ‘ರೋಷದ ರಾಗಗಳು’ ಲೇಖಕರ ಲೋಕದೃಷ್ಟಿಯನ್ನು ಬದಲಾಯಿಸಿದ ಬಗೆಯೂ ಕೂಡಾ. ಹಾಗೆಯೇ ಅಣ್ಣನಾದವನು ತಮ್ಮನ ನಡೆನುಡಿಯ ಮೇಲೆ ಬೀರುತ್ತಾ ಬರತೊಡಗಿದ ಪ್ರಭಾವಗಳಿಗೂ ಮತ್ತು ಅಪ್ಪ ಬೀರಿದ ಪ್ರಭಾವಗಳಿಗೂ ಅಜಗಜಾಂತರ. ಅಪ್ಪ ಲೇಖಕರಿಗೆ ಎಂದೂ ನೆಗೆಟಿವ್ ವ್ಯಕ್ತಿಯೇ ಆಗಿರುವುದು ವಿಷಾದವನ್ನು ತರಿಸುತ್ತದೆ. ಆದರೂ, ‘ನೀನು ಥೇಟ್ ನಿಮ್ಮಪ್ಪನ ಥರಾನೇ’ ಎಂದು ಅಮ್ಮ ಹೇಳಿದ ದಿನ ಲೇಖಕರ ಮನದಲ್ಲಿ ಚೇಳು ಕುಟುಕಿದಂತಾಗುತ್ತದೆ. ‘ಹುಚ್ಚು ಕುದುರೆಯ ಬೆನ್ನನೇರಿ’ದಾಗ ಅಣ್ಣ ತಂದ ‘ಪುಸ್ತಕ’ಗಳನ್ನು ನೋಡಿ ಲೇಖಕರಿಗಾದ ಅನುಭವಗಳನ್ನು ಪ್ರಾಮಾಣಿಕವಾಗಿ ಹೇಳಿಕೊಂಡಿದ್ದಾರೆ.

ಕೃತಿಯಲ್ಲಿ ಒಂದೆಡೆ ‘ನೀ ಯಾರೋ ಏನೋ ಎಂತೋ, ಅಂತು ಪೋಣಿಸಿತು ಕಾಣದ ತಂತೂ…’ ಸಾಲುಗಳ ಉಲ್ಲೇಖವಿದೆ. ವಾಸ್ತವದಲ್ಲಿ ‘ಡೋರ್ ನಂಬರ್ 142’ ಕೃತಿಗೂ ಕೂಡಾ ಇದೇ ಸಾಲು ಅನ್ವಯವಾಗುತ್ತವೆ. ಕೃತಿಯಲ್ಲಿ ಬಹಳವಾಗಿ ಕಾಡುವುದು ಬಾಲ್ಯದ ಅನುಭವಗಳೇ ಆದರೂ ಅಷ್ಟಕ್ಕೇ ಸೀಮಿತವಾಗೇನೂ ಇಲ್ಲ. ಯೌವನಕ್ಕೆ ಕಾಲಿಟ್ಟ, ಪ್ರೀತಿಸಿದ, ಮದುವೆಯಾದ ಹಾಗೂ ನಂತರದ ಬದುಕಿನ ಚಿತ್ರಗಳೂ ಕೆಲವಾರು ಲೇಖನಗಳಲ್ಲಿ ಪ್ರತಿಬಿಂಬಿತವಾಗಿವೆ. ಆದರೆ ಬಾಲ್ಯದ ದೃಶ್ಯಗಳಷ್ಟು ತೀವ್ರವಾಗಿ ಅಲ್ಲ. ದಿಸ್ ಈಸ್ ಮೈ ಬಾಡಿ- ಐ ಎಂಜಿನೀರ್ ಇಟ್, ಆರ್ ಯು ವರ್ಜಿನ್?, ಮಾತಾಡೋನೇ ಮಹಾಶೂರ, ಬಿಚ್ಚ ಬೇಕಾದ ಕಟ್ಟಡಗಳು, ಆಲಿಸಬೇಕಾದ ದನಿಗಳು, ಮುಂತಾದ ಶೀರ್ಷಿಕೆಗಳಲ್ಲಿ ಲೇಖಕರು ಲೈಂಗಿಕತೆಯ ವಿಚಾರಗಳನ್ನು ಪ್ರಾಸ್ತಾಪಿಸುತ್ತಾರೆ. ಇವುಗಳಲ್ಲಿ ಬಹುತೇಕವು ಮನೋವೈಜ್ಞಾನಿಕ ಲೇಖನಗಳಂತೆ ಭಾಸವಾಗಿ ಅವುಗಳಲ್ಲಿ ಆತ್ಮಕತೆಯ ಅಂಶಗಳು ಗೌಣವಾಗಿಬಿಡುತ್ತವೆ. ಲೇಖಕರ ಬಾಲ್ಯದ ವಿವರಗಳನ್ನು ಸವಿಯುತ್ತಾ ಬರುವ ಓದುಗರಿಗೆ ನಂತರದ ಬದುಕಿನ ವಿವರಗಳು ಕ್ಷೀಣವಾಗುತ್ತಾ ಹೋಗಿಬಿಡುತ್ತವಾದ್ದರಿಂದ ಎಲ್ಲೋ ಅಸಮಾಧಾನವಾಗತೊಡಗುತ್ತದೆ. ಅಥವಾ ಆ ವಿವರಗಳು ಡೋರ್ ನಂಬರ್ ೧೪೨ರ ಹೊರಗಿನವಾದ್ದರಿಂದ ಲೇಖಕರು ಅವುಗಳನ್ನು ದಾಖಲಿಸಲು ಹೋಗಲಿಲ್ಲವೇನೋ?

ಇಡೀ ಕೃತಿಯಲ್ಲಿ ಜಿ.ಎನ್. ಮೋಹನ್ ತಮ್ಮ ಎಂದಿನ ನವಿರಾದ ಭಾಷೆಯಲ್ಲಿ ಪ್ರತಿಯೊಂದು ಅನಿಸಿಕೆ, ಅನುಭವ, ಘಟನೆಗಳನ್ನೂ ಪೋಣಿಸುತ್ತಾ ಹೋಗುವುದರಿಂದ ಕೃತಿ ಸುಲಭವಾಗಿ ಓದಿಸಿಕೊಂಡು ಹೋಗಿಬಿಡುತ್ತದೆ. ಅಲ್ಲಲ್ಲಿ ಲೇಖಕರು ಹಲವಾರು ಕವಿತೆಗಳನ್ನು, ಹೇಳಿಕೆಗಳನ್ನು ಉಲ್ಲೇಖಿಸುತ್ತಾ ಹೋಗುತ್ತಾರೆ. ಓದುಗರ ಮಟ್ಟಿಗೆ ಹೊಸದೆನ್ನಿಸುವ ಮಾಹಿತಿಗಳನ್ನು ನೀಡುತ್ತಾರೆ. ಆದರೆ ಅವುಗಳ ಮೂಲವನ್ನು ಹೇಳುವ ತೊಂದರೆ ತೆಗೆದುಕೊಳ್ಳುವುದಿಲ್ಲ. ಕೃತಿಯ ಒಳಪುಟಗಳಲ್ಲಿನ ಅನುಭವಗಳಿಗೆ ಪೂರಕವಾಗಿ ಪ.ಸ. ಕುಮಾರ್ ಗೀಚಿರುವ ಚಿತ್ರಗಳು ಹಾಗೂ ಕೊನೆಯಲ್ಲಿರುವ ಕವಿತೆ ಕೃತಿಗೆ ಕಸುವು ತುಂಬಿವೆ. ಅಪಾರ ಅವರ ಮುಖಪುಟ ವಿನ್ಯಾಸ ಸೊಗಸಾಗಿದೆ. ಟಿಎಸ್‌ಐ

 

 

ಹರ್ಷಕುಮಾರ್ ಕುಗ್ವೆ

 

‍ಲೇಖಕರು G

30 May, 2011

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading