ಜೀವಂತಿಕೆಯ ಸೆಲೆ ಖ್ಯಾತ ಜಾನಪದ ಹೋರಾಟಗಾರ ಸಂಗಾತಿ ಎನ್ ಆರ್ ನಾಯಕ ಅವರು ಇನ್ನಿಲ್ಲ.
ಅವರ ಪ್ರಾಮುಖ್ಯತೆಯನ್ನು ಬಣ್ಣಿಸುವ ಬರಹಗಳು ಇಲ್ಲಿವೆ.

ರಾಜೀವ ನಾಯಕ
ಜಾನಪದ ವಿದ್ವಾಂಸ ಡಾ. ಎನ್ ಆರ್ ನಾಯಕ ನಿನ್ನೆ ತೀರಿಕೊಂಡಿದ್ದಾರೆ. ಸಾಹಿತ್ಯ, ಸಂಸ್ಕೃತಿ, ಜಾನಪದ, ಶಿಕ್ಷಣ ಕ್ಷೇತ್ರಗಳಲ್ಲಿ ಅವರದು ೯೦+ ವರ್ಷಗಳ ಸಮೃದ್ಧ ಬದುಕು. ಪತ್ನಿ ಶಾಂತಕ್ಕ ಅಗಲಿದ ಒಂದು ತಿಂಗಳೊಳಗೇ ಬದುಕಿಗೆ ವಿದಾಯ ಹೇಳಿರುವುದು ಸಾವಿನ ನೋವು ಹೆಚ್ಚಲು ಕಾರಣವಾಗಿದೆ. ಶಾಂತಕ್ಕ ಮತ್ತು ಎನ್ ಆರ್ ನಾಯಕ ಇಬ್ಬರದೂ ಅನನ್ಯ ವ್ಯಕ್ತಿತ್ವ ಮತ್ತು ಸಾರ್ಥಕ ಬದುಕು.
ಎನ್ ಆರ್ ನಾಯಕರನ್ನು ನನ್ನ ಹೈಸ್ಕೂಲು ದಿನಗಳಿಂದಲೂ ಕಂಡಿರುವೆ. ಅವರು ಜಾನಪದ ಹಾಡುಗಳನ್ನು ಸಂಗ್ರಹಿಸುತ್ತಿದ್ದ, ಅಧ್ಯಯನಗೈಯುತ್ತಿದ್ದ ಕಾಲವದು. ನಮ್ಮ ಬೊಳೆಯಲ್ಲಿ ಹಾಡುಗಳ ಕಣಜವಾಗಿದ್ದ ನಾಗಮ್ಮಕ್ಕನಂಥವರ ಹಾಡುಗಳನ್ನು ರೆಕಾರ್ಡ ಮಾಡಿಕೊಳ್ಳಲು ಬರುತ್ತಿದ್ದರು. ನಮ್ಮ ಅಜ್ಜಿ ಬಡಿಸುತ್ತಿದ್ದ ಗಂಜಿ ಊಟವನ್ನು ಉಂಡು ಪ್ರೀತಿಯ ಮಾತಾಡಿ ಹೋಗುತ್ತಿದ್ದರು. ಅವರದು ಸದಾ ನಗುಮುಖ. ಲವಲವಿಕೆ. ಅಪಾರ ಜೀವನ ಪ್ರೀತಿ.
ಡಾ. ಎನ್ ಆರ್ ನಾಯಕರ ಜೀವನೋತ್ಸಾಹದ ಆ ನಗು, ಕೊನೆವರೆಗೂ ಹಾಗೇ ಇತ್ತು. ಎಂಬತ್ನಾಲ್ಕರ ಹರೆಯದಲ್ಲಿ ಅವರು ಮೋತಿಗುಡ್ಡ ಹತ್ತಿಳಿದಿದದ್ದನ್ನು ಪೇಸ್ಬುಕ್ಕಿನಲ್ಲಿ ಪೋಸ್ಟ್ ಮಾಡಿದ್ದರು!
ಅವರೊಡನೆ ಹೆಚ್ಚಿನ ಒಡನಾಟವಿಲ್ಲದಿದ್ದರೂ ನನ್ನ ಕಥಾ ಸಂಕಲನ “ಲಾಸ್ಟ್ ಲೋಕಲ್…..” ನಲ್ಲಿಯ ಕತೆಗಳನ್ನು ಓದಿ ಸಹೃಯತೆಯಿಂದ ಪ್ರತಿಕ್ರಿಯಿಸಿದ್ದರು.
“ನಿಮ್ಮ ಕಥಾ ಸಂಕಲನ ಲಾಸ್ಟ ಲೋಕಲ್ ಲೊಸ್ಟ ಲವ್ ಓದಿ ಖುಷಿಪಟ್ಟೆ. ಸಮಕಾಲೀನ ಅನೇಕ ಸಾಮಾಜಿಕ ಸಮಸ್ಯೆಗಳಿಗೆ ನಾಲಿಗೆಯಾಗಿದೆ ನಿಮ್ಮ ಕಥಾ ಸಂಕಲನ.ಕೆಲವು ಕಥೆಗಳಲ್ಲಿಯ ತಂತ್ರ ನಾವೀನ್ಯತೆ ,ಕಾವ್ಯಾತ್ಮಕ ಭಾಷೆಯಲ್ಲಿ ಉತ್ತರಕನ್ನಡದ ಅಸಲಿತನದ ಹೆಚ್ಚುಗಾರಿಕೆಯನ್ನು ತೋರಿದ್ದು ನನಗೆ ಹಿಡಿಸಿತು.ನಾಡಿನ ಗಣ್ಯ ಕಥೆಗಾರರಲ್ಲಿ ನಿಮಗೊಂದು ಗಟ್ಟಿ ಸ್ಥಾನ ಗ್ಯಾರಂಟಿ.”
ಅವರ ಈ ಪ್ರೋತ್ಸಾಹದ ಮಾತುಗಳು ನನಗೆ ಪ್ರಶಸ್ತಿ ಸ್ವರೂಪದಲ್ಲಿ ಉಳಿಯಲಿವೆ.
ಡಾ. ಎನ್ ಆರ್ ನಾಯಕರ ಅಗಲುವಿಕೆಯಿಂದ ನಾಡಿನ ಜನಪದ ಧ್ವನಿ ಬಡವಾದಂತೆ ಅನಿಸುತಿದೆ. ಆದರೆ ಅವರು ಸಂಗ್ರಹಿಸಿದ ಉತ್ತರ ಕನ್ನಡದ ಜನಪದ ಶ್ರೀಮಂತಿಕೆ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಗೆ ಇಂದು ಮುಂದೂ ಒಂದು ನಿಧಿಯಾಗಿ ಬಾಳಲಿದೆ.
ಹೋಗಿ ಬನ್ನಿ ಸರ್….ನಮನಗಳು!

ಪುರುಷೋತ್ತಮ ಬಿಳಿಮಲೆ
ಹೊನ್ನಾವರದ ಜಾನಪದ ತಜ್ಞೆ ಡಾ. ಶಾಂತಿ ನಾಯಕರು ಕಳೆದ ಅಗೋಸ್ತು ತಿಂಗಳ ೧೫ರಂದು ತೀರಿಕೊಂಡರು. ಅವರು ಕೊನೆಯುಸಿರೆಳೆದು ಒಂದು ತಿಂಗಳು ತುಂಬುವ ಮುನ್ನವೇ ಅವರ ಪತಿ ಡಾ. ಎನ್ ಆರ್ ನಾಯಕರು ನಿನ್ನೆ ನಮ್ಮನ್ನಗಲಿದ್ದಾರೆ. ಇವರಿಬ್ಬರ ನಿಧನದೊಂದಿಗೆ ಉತ್ತರ ಕನ್ನಡದ ಜಾನಪದ ಅಧ್ಯಯನಗಳ ಒಂದು ಯುಗ ಕೊನೆಯಾದಂತಾಯಿತು.
ಎನ್ ಆರ್ ನಾಯಕರು ಬಹಳ ಒಳ್ಳೆಯ ಜಾನಪದ ತಜ್ಞ, ಶಿಕ್ಷಣ ತಜ್ಞ, ಕವಿ, ಸಾಹಿತಿ,ಸಂಶೋಧಕ, ಪುಸ್ತಕ ಪ್ರಕಾಶಕ ಮತ್ತು ಸಂಘಟಕ. ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲ್ಲೂಕಿನ ಭಾವಿಕೇರಿಯಲ್ಲಿ ೧೯೩೫ರಲ್ಲಿ ಜನಿಸಿದ ಅವರು ಹೊನ್ನಾವರದ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ದುಡಿದು, ಆನಂತರ ಅದೇ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು. ಅವರಲ್ಲಿರುವಾಗ ಏನಿಲ್ಲವೆಂದರೂ ಹತ್ತಕ್ಕಿಂತ ಹೆಚ್ಚು ಸಲ ನಾನಲ್ಲಿಗೆ ಹೋಗಿದ್ದೆ.
ಯಕ್ಷಗಾನ, ಕಡತೋಕ ಮಂಜು ಭಾಗವತರು, ಹಾಲಕ್ಕಿ ಒಕ್ಕಲಿಗರು, ಸಿದ್ದಿಗಳು- ಹೀಗೆ ಇಡೀ ಉತ್ತರ ಕನ್ನಡವೇ ಅವರ ಬಾಯಲ್ಲಿತ್ತು. ಅದನ್ನು ಕೇಳುವುದೇ ಒಂದು ಅನುಭವ. ನಾಯಕರು ೧೦೦ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಅವರ ʼಗಾಮೊಕ್ಕಲ ಭಾರತʼ ಮತ್ತು ಕೂಸಾಯ್ತು ನಮ್ಮ ಕೊಮರಾಗೆʼ ಪ್ರಶಸ್ತಿ ವಿಜೇತ ಮೌಲಿಕ ಕೃತಿಗಳು. ಇಂಥವರು ತೀರಿಕೊಂಡಾಗ ಸಾವು ನಮ್ಮ ಬಳಿ ಸುಳಿದಂತಾಗುತ್ತದೆ, ಯುಗ ಮುಗಿದ ವಿಷಾದ ಸುತ್ತೆಲ್ಲ ಆವರಿಸಿಕೊಳ್ಳುತ್ತದೆ. ಅವರಿಗೆ ಅಂತಿಮ ನಮನಗಳು.






0 Comments