ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನೂರಬಾಷಾ ಎಂಬ ಕೌತುಕ ಮತ್ತು ಆಲಮಟ್ಟಿ!

ಶಿವಕುಮಾರ್ ಮೆಣಸಿನಕಾಯ್

ಬರೋಬ್ಬರಿ 23 ವರ್ಷಗಳಾಗಿದ್ದವು. ಎರಡನೇ ತರಗತಿ ಇದ್ದಾಗ ಆ ಊರು ಬಿಟ್ಟ ಮೇಲೆ ಮೊನ್ನೆ ಫೆ.16ರಂದು ಶನಿವಾರ ಮಧ್ಯಾಹ್ನ ಅಕಾಲಿಕ ಮಳೆ ಬೀಳುತ್ತಿದ್ದ ವೇಳೆ ಮತ್ತೆ ಅದೇ ಜಾಗೆಯಲ್ಲಿ ನಿಂತಿದ್ದೆ. ಎರಡನೇ ತರಗತಿ ಮುಗಿದ ಮೇಲೆ ಹೊರಟವನು ಮತ್ತೆ ಅದೇ ಶಾಲೆಯ ಮುಂದೆ ನಿಂತಾಗ ಹಳೆಯ ನೆನಪುಗಳು ಬೇಡವೆಂದರೂ ಮರುಕಳಿಸಿ ಗಂಟಲು ಬಿಗಿದುಕೊಳ್ಳುತ್ತಿತ್ತು. ಅದು ಆಲಮಟ್ಟಿ ಡ್ಯಾಮ್ ಸೈಟ್ ಶಾಲೆ. ಒಂದು ಸರಕಾರಿ ಶಾಲೆ ಎಂದರೆ ಸಮಾಜಕ್ಕಿರುವ ಕೆಟ್ಟ ಪರಿಕಲ್ಪನೆ ದೂರ ಮಾಡಬಲ್ಲಂತಹ ಆದರ್ಶ ಶಾಲೆ ಅದಾಗಿತ್ತು. ಆ ಶಾಲೆ ಮುಂದೆ ಅಷ್ಟು ಸುದೀರ್ಘ ಸಮಯದ ನಂತರ ಹಾದು ಹೋಗುವಾಗ ಅದರ ಋಣ ಯಾವ ಕಾಲಕ್ಕೂ ತೀರಿಸಲು ಸಾಧ್ಯವಿಲ್ಲ ಎನಿಸಿತು.
1989ರಲ್ಲಿ ಆಲಮಟ್ಟಿಯಿಂದ ತಂದೆಗೆ ಟ್ರಾನ್ಸಫರ್ ಆದ ಮೇಲೆ ಮತ್ತೆ ಆ ಊರಿಗೆ ಹೋಗಿರಲಿಲ್ಲ. ವಿಜಾಪುರಕ್ಕೆ ಹೋಗುವಾಗ, ಬರುವಾಗ ಬಸ್ ಮತ್ತು ರೈಲಿನಲ್ಲಿ ಇಣುಕಿದ್ದು ಬಿಟ್ಟರೆ ಮತ್ತೆ ಹೋಗಿರಲಿಲ್ಲ. ಆಲಮಟ್ಟಿ ಹತ್ತಿರದ ಯಲಗೂರಕ್ಕೆ ಹೋಗಬೇಕೆಂಬ ಬಹುವರ್ಷಗಳ ಆಸೆ ಕೊನೆಗೂ ಮೊನ್ನೆ ಈಡೇರಿತು. ಯಲಗೂರಕ್ಕೆ ಹೋಗಿ ವಾಪಸ್ ಬಾಗಲಕೋಟೆ ಕಡೆಗೆ ಹೊರಡುವಾಗ ಒಂದು ಸಲ ಆಲಮಟ್ಟಿ ಡ್ಯಾಮ್್ ಮತ್ತು ಅಲ್ಲಿನ ಶಾಲೆಗೆ ಹೋಗಬೇಕು ಎನಿಸಿತು. ಕಾರನ್ನು ಅತ್ತ ತಿರುಗಿಸುವಂತೆ ಡ್ರೈವರಗೆ ಹೇಳಿದಾಗ ನನಗರಿವಿಲ್ಲದಂತೆ ನಾನು ಭಾವುಕನಾಗಿದ್ದೆ. ಅವತ್ತು ಎರಡನೇ ತರಗತಿಯಲ್ಲಿದ್ದ ನನಗೆ ಆಲಮಟ್ಟಿ ರೈಲ್ವೆ ಸ್ಟೇಶನ್ ಮತ್ತು ಡ್ಯಾಮ್್ ಸೈಟ್ ನಡುವೆ ಬಹಳ ಅಂತರವಿದೆ ಎನಿಸುತ್ತಿತ್ತು. ಆದರೆ ಮೊನ್ನೆ ಅರೇ ಇಷ್ಟೇ ದೂರಾನಾ? ಎನಿಸಿತು.

ಕಲೆ: ಧನರಾಜ್ ಕೀಳಾರ

ಆಲಮಟ್ಟಿ ಹಾಗೇ ಇದೆ. ನೀರಾವರಿ ಇಲಾಖೆಯ ಕ್ವಾರ್ಟರ್ಸಗಳು, ಕಚೇರಿಗಳು, ಅಗಲವಾದ ರಸ್ತೆ, ವಿಶಾಲವಾದ ಮೈದಾನಗಳು, ಅಲ್ಲಲ್ಲಿ ಸಣ್ಣ ಸಣ್ಣ ಮಳಿಗೆಗಳು, ಡ್ಯಾಮ್ ಸೈಟ್ ಮತ್ತು ಸ್ಟೇಶನ್ ನಡುವಿನ ಮಾವಿನ ತೋಪು, ರಾಮಲಿಂಗೇಶ್ವರ ಗುಡಿ, ಅದರ ಹಿಂದಿನ ಉದ್ಯಾನ ಎಲ್ಲವೂ.. ಆದರೆ ಸರಕಾರಿ ಶಾಲೆ ಹಿಂದೆ-ಮುಂದೆ ಹೊಸ ಕಟ್ಟಡಗಳೂ ಬಂದಿವೆ. ಅಂದ ಹಾಗೆ ಆ ಹೊಸ ಕಟ್ಟಡಗಳ ಪೈಕಿ ಮತ್ತೊಂದು ಕಟ್ಟಡ ನನ್ನ ಯೋಚನೆ ದಿಕ್ಕನ್ನು ಬದಲಿಸಿತು. ಆ ಶಾಲೆಗೆ ಹೊಂದಿಕೊಂಡೇ ಉರ್ದು ಶಾಲೆಯ ಹೊಸ ಕಟ್ಟಡ ಬಂದಿದೆ.
ನಾವು ಒಂದನೇ ತರಗತಿಯಲ್ಲಿ ಕಲಿಯುವಾಗ ಒಬ್ಬ ನೂರಬಾಷಾ ಎಂಬ ಸ್ನೇಹಿತನಿದ್ದ. ಆತ ಆ ಕಾಲದ ನಮ್ಮ ಬಹುದೊಡ್ಡ ಎಂಟರ್ಟೇನ್ಮೆಂಟ್. ಶಾಲೆಯಲ್ಲಿ ಢೇಂಗಿ ಟೀಚರಗೆ ಬೋರಾಗಿದ್ದರೆ, ಇಲ್ಲವೇ ಅವರು ರಜೆ ಇದ್ದರೆ, ಅಥವಾ ಓದಲು ಬರೆಯಲು ನಾವು ತಯಾರ ಇಲ್ಲವೆಂದರೆ, ಢೇಂಗಿ ಟೀಚರ್ ನೂರಬಾಷಾನನ್ನು ಕರೆದು, ಲೇ ನೂರಬಾಷಾ ಕಥೆ ಹೇಳೋ ಅನ್ನುತ್ತಿದ್ದರು. ಅವರು ಅಷ್ಟು ಹೇಳಿದ್ದೇ ತಡ, ನಾವೆಲ್ಲ ಕುಳಿತಲ್ಲೇ ಆಕಾಶ ಮುಟ್ಟಿದಷ್ಟು ಖುಷಿ ಪಡುತ್ತಿದ್ದೆವು. ನೂರಬಾಷಾ ಕತೆ ಹೇಳಲು ಆರಂಭಿಸಿದರೆ ಆತ ಇಡೀ ದಿನ ಒಂದೇ ಕತೆ ಹೇಳುತ್ತಿದ್ದ. ಮಧ್ಯಾಹ್ನ ಊಟದ ರೆಸ್ಟ್್ ಮುಗಿದ ಬಳಿಕ ಸಂಜೆ 5ರ ತನಕ ಆತನ ಕತೆ ಸಾಗುತ್ತಿತ್ತು.
ಬಹುಶ ಆತ ತುಂಬಾ ಬಡತನದಿಂದ ಬಂದವನಿರಬೇಕು ಎಂಬುದು ಈಗ ಯೋಚನೆ ಮಾಡಿದಾಗ ಅನಿಸುತ್ತದೆ. ಏಕೆಂದರೆ ನೂರಬಾಷಾ ಎರಡೂ ಕೈಕಟ್ಟಿ ಎದ್ದುನಿಂತು ಕತೆ ಹೇಳಲು ಆರಂಭಿಸಿದರೆ ಬಗಲಲ್ಲಿ ಆತನ ಬಿಳಿ ಶರ್ಟ್ ಹೊಲಿಗೆ ಬಿಚ್ಚಿರುತ್ತಿತ್ತು. ಮೂಗಿನಲ್ಲಿ ಸದಾ ಕೃಷ್ಣೆಯ ಹರಿವು. ಶರ್ಟಿನ ಬಲಗಡೆ ಕಾಲರ್ ಚುಂಗು ಆತನ ಬಾಯಲ್ಲಿ ಇರುತ್ತಿತ್ತು. ಅದರ ಮಧ್ಯೆಯೂ ಆತ ಗೋವಿನ ಕತೆಯನ್ನ, ಮಂಗ-ನಾಯಿ ಕತೆಯನ್ನ, ಇಲ್ಲವೇ ಹಾವು-ಮುಂಗಸಿ ಕತೆ ಹೇಳುತ್ತಿದ್ದ. ವಿಚಿತ್ರವೆಂದರೆ ಆತನ ಕತೆಗಳು ಬರೀ ಬಲಶಾಲಿ ಮತ್ತು ಬಲಹೀನತೆಯ ಎರಡು ಪ್ರಾಣಿ-ಪಕ್ಷಿಗಳ ನಡುವಿನ ಕತಾ ವಸ್ತು ಹೊಂದಿರುತ್ತಿದ್ದವು. ಒಂದು ಬಲಶಾಲಿ ಪ್ರಾಣಿ ಮತ್ತೊಂದು ಬಲಹೀನ ಪ್ರಾಣಿಯ ಮೇಲೆ ಅಟ್ಟಹಾಸ ನಡೆಸುವ ಮತ್ತು ಕೊನೆಗೆ ಬಲಶಾಲಿ ಮನವೊಲಿಸಿ, ಸರಿದಾರಿಗೆ ತರುವ ಬಲಹೀನ ಪ್ರಾಣಿಯ ಯಶಸ್ಸಿನ ಕತಾವಸ್ತುವನ್ನೇ ಆ ಕತೆಗಳು ಹೊಂದಿರುತ್ತಿದ್ದವು.
ನೂರಬಾಷಾ ಹೇಳುತ್ತಿದ್ದ ಕತೆಗಳನ್ನು ನಾವು ಮತ್ತೆ ಯಾವ ಶಾಲೆಯಲ್ಲೂ, ಯಾರಿಂದಲೂ ಕೇಳಲಿಲ್ಲ. ಆತನಿಗೆ ಕತೆ ಹೇಳುವ ಕಲೆ ಬಾಲ್ಯದಲ್ಲೇ ಒಲಿದಂತಿತ್ತು. ಮುಂದೆ ನಾವು ಆಲಮಟ್ಟಿ ಬಿಟ್ಟುಬಂದೆವು. ಬಹುಶಃ ನೂರಬಾಷಾ ಅದೇ ಶಾಲೆಯಲ್ಲಿ ಮುಂದುವರಿದಿರಬೇಕು. ಆದರೆ ಆತನ ಅಗಾಧ ಕತಾಶಕ್ತಿ ನನ್ನ ಸ್ಮೃತಿಪಟಲದಲ್ಲಿ ಯಾವತ್ತಿಗೂ ಮಾಸಲು ಸಾಧ್ಯವಿಲ್ಲ ಎನಿಸಿಬಿಟ್ಟಿದೆ. ಅಂದಹಾಗೆ ನೂರಬಾಷಾ ಆ ವೇಳೆ ನಮ್ಮದೇ ಆತ್ಮೀಯ ಗೆಳೆಯರ ಗುಂಪಿನ ಸದಸ್ಯ. ನಾನು ಶರಣು ಬಿರಾದಾರ, ನೂರಬಾಷಾ, ಭಾನುದಾಸ ಕೋಳೆಕರ, ವಡವಡಗಿ ಒಂದೇ ಬೆಂಚಿನಲ್ಲಿದ್ದೆವು. ಈಗ ಅವರೆಲ್ಲ ಎಲ್ಲಿದ್ದಾರೋ ಗೊತ್ತಿಲ್ಲ.
ಇದನ್ನೇ ಯೋಚಿಸುತ್ತ ಆಲಮಟ್ಟಿಯನ್ನು ಒಂದು ರೌಂಡ್್ ಕಾರಿನಲ್ಲಿ ಸುತ್ತಿ ಬಾಗಲಕೋಟೆ ಕಡೆಗೆ ಹೊರಟೆ. ಆದರೆ ಮತ್ತೆ ಮತ್ತೆ ಕಾಡಿದವನು ನೂರಬಾಷಾ, ಎಲ್ಲಿದ್ದಾನೋ? ಆತನ ಕತೆ ಹೇಳುವ ಘಟನೆ ನೆನಪಾಗಿ ಮರೆಯುವ ಮುಂಚೆ ಮತ್ತೊಂದು ಸಂಗತಿ ನನ್ನ ಮನದಲ್ಲಿ ಸರಿದು ಹೋಯಿತು. ಇತ್ತೀಚೆಗೆ ದೊಡ್ಡ ಪತ್ರಕರ್ತರೊಬ್ಬರು, ತಾವು ಸಂದರ್ಶನ ಮಾಡಿದ ಹೊಸ ತಲೆಮಾರಿನ ಪತ್ರಕರ್ತರನ್ನು ಹೀಯಾಳಿಸಿ ಬರೆದು, ತಾವು ಸಂದರ್ಶಿಸಿದ ಯುವ ಪತ್ರಕರ್ತ ಒಂದು ಕೋಮಿಗೆ ಸೇರಿದವನೆಂದೂ, ಆತ ಶಿಕ್ಷಕನ ಮಗನೆಂದು, ಆತ ಖ್ಯಾತ ಕೃತಿಯೊಂದರ ಕೃತಿಗಾರನ ಹೆಸರೇ ಗೊತ್ತಿರಲಿಲ್ಲ ಮತ್ತು ಆ ಕೃತಿಯನ್ನು ಆತ ಓದೇ ಇಲ್ಲ ಎಂದೂ ಏನೇನೋ ಬರೆದು, ತಮ್ಮ ಸೀನಿಯಾರಿಟಿ ಮತ್ತು ಅಥೆಂಟಿಸಿಟಿಯನ್ನು ಚಪ್ಪರಿಸಿಕೊಂಡಿದ್ದರು. ಆದರೆ, ಆ ಯುವಪತ್ರಕರ್ತ ಶಿಕ್ಷಕನ ಮಗನಲ್ಲ ಎಂದೂ ಆತ ರಸ್ತೆ ಬದಿ ಅಕ್ಕಡಿಕಾಳು ಮಾರಾಟ ಮಾಡುತ್ತಿದ್ದ ಬಡಪಾಯಿಯೊಬ್ಬರ ಮಗನೆಂದೂ ನನಗೆ ಗೊತ್ತಿತ್ತು. ನನಗೆ ಅನಿಸಿದ್ದು, ಖ್ಯಾತ ಕೃತಿಗಳನ್ನು ಓದಲೇಬೇಕಾದ ಕಡ್ಡಾಯ ನಿಯಮ ಯಾವ ವೃತ್ತಿಯಲ್ಲಿದೆ? ಮತ್ತದರ ಹಿಂದಿನ ಉದ್ಧೇಶ ಏನು? ಎಂಬುದು ಗೊತ್ತಾಗಲಿಲ್ಲ. ರಸ್ತೆ ಬದಿ ಅಕ್ಕಡಿಕಾಳು ಮಾರುವ ಬಡಪಾಯಿ ಮಗ ಪತ್ರಕರ್ತನಾಗಿರುವ ಸಾಧನೆಯ ಹಿಂದಿನ ದರ್ದು ಹಿರಿಯರಿಗೆ ಗೊತ್ತಾದರೆ ಸಾಕು ಎನಿಸಿತು.
ಹೀಗಾಗಿ ಆ ನೂರಬಾಷಾ ಈಗೆಷ್ಟು ಕತೆಗಳನ್ನು ಹೆಣೆದಿದ್ದಾನೋ, ಅವನು ಎಷ್ಟು ಖ್ಯಾತ ಕೃತಿಗಳನ್ನು ಓದಿದ್ದಾನೋ ಎಂಬ ಕೆಟ್ಟ ಕುತೂಹಲ ನನ್ನನ್ನು ಈ ಕ್ಷಣಕ್ಕೂ ಕಾಣುತ್ತಿದೆ. ನಿಜಕ್ಕೂ ನೂರಬಾಷಾ ಎಂಬ ಕೌತುಕದ ಕತಾವಸ್ತು ನನ್ನನ್ನು ಗಾಢವಾಗಿ ಕಾಡುತ್ತಿದೆ
 

‍ಲೇಖಕರು G

20 February, 2013

2 Comments

  1. ಹನುಮಂತ ಹಾಲಿಗೇರಿ

    ನಿಮ್ಮ ನೂರಭಾಷಾನ ನೆನಪಿನೊಂದಿಗೆ ನನ್ನೂರಿನ(ಬಾಗಲಕೋಟೆಯ ತುಳಸಿಗೇರಿಯ) ಶಾಲೆಯಲ್ಲಿ ನೂರಭಾಷಾನ ಹಾಗೆ ಕಥೆ ಹೇಳುತ್ತಿದ್ದ ರಾಜೇಸಾಬ್ ನನ್ನು ನೆನಪಿಸಿ ಕಾಡಿಸುವಂತೆ ಮಾಡಿರುವಿರಿ. ಥ್ಯಾಂಕ್ಸ್. ಎಲ್ಲವೂ ಎಲ್ಲರಿಗೂ ಗೊತ್ತಿರಬೇಕಿಲ್ಲ ಎಂದು ಹಿರಿಯ ಪತ್ರಕರ್ತರು ತಿಳಿದುಕೊಂಡರೆ ಅಷ್ಟೆ ಸಾಕು.

    • ಟಿ.ಎಸ್.ಗೊರವರ

      ಸರ್, ಬರಹ ಆದಱವಾಗಿದೆ. ಅಕ್ಷರಗಳನ್ನು ಭಾವನೆಗಳಲ್ಲಿ ಅದ್ದಿ ಬರೆದಿದ್ದೀರಿ. ಬಾಲ್ಯಕಾಲದ ಸೊಗಸೇ ಹಾಗೇನೋ.ನೂರುಭಾಷಾನ ಕತೆ ಕೇಳುವ ಕುತೂಹಲ ನನ್ನೊಳಗೂ ಮೂಡಿತು. ನೂರುಭಾಷಾನ ವಿವರಗಳನ್ನು ಓದುತ್ತಾ ಕಣ್ಣಾಲಿಗಳು ತುಂಬತೊಡಗಿದ ಹೊತ್ತಿನಲ್ಲೇ ಯಾಕೆ ನೀವು ಅಕ್ಕಡಿ ಕಾಳು ಹುಡುಗ, ಆ ಹಿರಿಯ ಪತ್ರಕತಱನನ್ನು ನೆನಪಿಸಿಕೊಂಡಿರಿ? ನಿಜಕ್ಕೂ ರಸಭಂಗವಾಯಿತು. ಆ ಅಕ್ಕಡಿಕಾಳು ಮಾರುವ ಹುಡುಗ ನನ್ನ ಗೆಳೆಯನೂ ಹೌದು. ನಿಮ್ಮ ಬರಹ ಓದುತ್ತಾ ಅನಿಸಿತು ; ನೂರುಭಾಷಾ ಮತ್ತು ಅಕ್ಕಡಿ ಕಾಳು ಮಾರುವ ಹುಡುಗರಿಬ್ಬರು ನಿಜ ಅಣ್ಣ ತಮ್ಮಂದಿರೇ ಇರಬೇಕು. ನೂರುಭಾಷಾ ಕತೆ ಹೇಳುತ್ತಿದ್ದ ಈ ಅಕ್ಕಡಿ ಕಾಳು ಮಾರುವ ಹುಡುಗ ಚೆಂದ ಕತೆ ಬರೆಯುತ್ತಿದ್ದ.ನೀವು ಪ್ರಸ್ತಾಪಿಸಿದ ಹಿರಿಯ ಪತ್ರಕತಱರು ಎಷ್ಟೊಂದು ಹುಡುಗರ ಬದುಕಿನಲ್ಲಿ ಆಟವಾಡಿದ್ದಾರೆ? ಸರ್, ನನಗೆ ಗೊತ್ತಿರುವ ಹಾಗೆ ಆ ಅಕ್ಕಡಿ ಕಾಳು ಮಾರುವ ಹುಡುಗನಿಗೆ ಜಗತ್ತಿನ ಒಳ್ಳೆಯ ಕೃತಿಗಳನ್ನೆಲ್ಲಾ ಓದುವ ಉಮೇದಿ ಇತ್ತು. ಹಳ್ಳಿಯಲ್ಲಿ ಮಗ್ಗಿ ಪುಸ್ತಕ ಬಿಟ್ಟು ಜಗತ್ತಿನ ಯಾವ ಸಾಹಿತ್ಯಕ ಕೃತಿಗಳು ಸಿಗಬೇಕು ನೀವೆ ಹೇಳಿ. ಆ ಹಿರಿಯ ಪತ್ರಕತಱರ ಹೊಟ್ಟೆ ತಣ್ಣಗಿರಲಿ ಅವರ ದಾರಿ ಅವರಿಗೆ. ನಮ್ಮ ದಾರಿ ನಮಗೆ.ಆದರೆ, ನೂರುಭಾಷಾ, ಅಕ್ಕಡಿ ಕಾಳು ಮಾರುವ ಹುಡುಗ ಸವೆಸುವ ಹಾದಿಯಲ್ಲೇ ಹೆಸರೇ ಇರದ ಹೂಗಳು ಅರಳಿ ಘಮ ಘಮಿಸುವುದು, ಗಿಳಿ, ಗೊರವಂಕ, ಕೋಗಿಲೆ ಸಂಭ್ರಮಿಸಿ ಹಾಡುವುದು ಎನ್ನುವ ನಂಬುಗೆ ನನ್ನದು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading