
ನೂತನ ದೋಶೆಟ್ಟಿ
ಒಂದು ನಿಸ್ತಂತುವಿನೆಳೆ, ರೂಪ ಹಾಸನ ಅವರ ಹೊಸ ಕವನ ಸಂಕಲನ. 2020 ರಲ್ಲಿ ಪಲ್ಲವ ಪ್ರಕಾಶನದಿಂದ ಪ್ರಕಟವಾದ ಈ ಸಂಕಲನದಲ್ಲಿ 40 ಕವಿತೆಗಳಿವೆ.
ಮಹಿಳೆ ಹಾಗೂ ಮಕ್ಕಳ ಪರ ಹೋರಾಟದಲ್ಲಿ ಕಳೆದ 3 ದಶಕಗಳಿಂದ ತೀವ್ರವಾಗಿ ತೊಡಗಿಸಿಕೊಂಡಿರುವ ರೂಪ ಅವರ ಈ ಸಂಕಲನದ ಕವಿತೆಗಳು ಸುತ್ತಲ ಪ್ರಕೃತಿ, ಜನರ ಬದುಕಿಗೆ ಮಿಡಿಯುವ ಜೀವಪರ ಕವಿತೆಗಳು. ನೋವೀಗ ಮೊದಲಿನಂತಿಲ್ಲ ಶೀರ್ಷಿಕೆಯ ಮೊದಲ ಕವಿತೆಯ.. ‘ಒಂದಿಷ್ಟೂ ಕಷ್ಟವಿಲ್ಲದೇ ಮರಗಟ್ಟಿಸಿ/ಕೋಮಾದಲ್ಲಿಡುವುದನ್ನವರು ಕಲಿತಿದ್ದಾರೆ’ ಸಾಲುಗಳು ಅದಕ್ಕೆ ಮುನ್ನುಡಿ ಬರೆಯುತ್ತವೆ.
ಮಹಿಳೆಯರು ಅನುಭವಿಸುವ ನೋವನ್ನು ಹತ್ತಿರದಿಂದ ಕಂಡ ಅನುಭವದ ಮಾತು ಇದು ಎನ್ನಿಸುತ್ತದೆ. ಮಣ್ಣಿನ ಧ್ಯಾನದಲ್ಲಿ ಅಪ್ಪ – ಕವಿತೆಯ ‘ನಿತ್ಯ ಹಕ್ಕಿಗಳು ಅಪ್ಪನಿಗೆ/ಕರೆ ಮಾಡುತ್ತವೆ ಅನುಮತಿಗಾಗಿ../ನಿರಾಳ ಗೂಡು ಕಟ್ಟಲು…/’ ಎಂಬ ಸಾಲುಗಳಲ್ಲಿ ಪ್ರಕೃತಿಯ ಆದರ್ಶ ತಾದಾತ್ಮ್ಯ ಕಣ್ಣು ಕಟ್ಟುತ್ತದೆ. ಅದರಂತೆ ತನ್ನ ತಾನೇ ಮುಗಿಸಿಕೊಳ್ಳುವುದು ಹೆಸರಿನ ಕವಿತೆ ಮೇಲ್ನೋಟಕ್ಕೆ ಪರಿಸರ ನಾಶದ ಬಗ್ಗೆ ಹೇಳಿರುವಂತೆ ಕಂಡರೂ ಆಳದಲ್ಲಿ ಸಾಮಾಜಿಕವಾಗಿ ಹೆಣ್ಣು ಅನುಭವಿಸುವ ನೋವು – ಸಂಕಟಗಳಂತೆ ಇದೆ. ರೂಪ ಅವರು ಮಹಿಳಾ ಸಬಲೀಕರಣದ ಕಾರ್ಯದಲ್ಲಿ ಇಂಥ ಅನೇಕ ಹೆಣ್ಣುಗಳನ್ನು ಪ್ರತಿನಿತ್ಯ ಭೇಟಿಯಾಗುವ ಹಿನ್ನೆಲೆಯಲ್ಲಿ ಈ ಮಾತನ್ನು ಹೇಳಬಹುದಾಗಿದೆ.

ಇಂಥದ್ದನ್ನೇ ಹೇಳುವ ಇನ್ನೊಂದು ಕವಿತೆ ನೆರಳು ಗೋರುತ್ತಾ. ಕವಿತೆಯ ಹುಡುಗಿ ಮುರುಕು ಬುಟ್ಟಿ ತುಂಬುತ್ತಲೇ ಇದ್ದಾಳೆ. ಅಲ್ಲಿರುವುದು ನೆರಳೊ, ಬೆಳಕೊ ಅರಿಯದಾಗಿದೆ ಎಂಬುದು ಕವಿಯ ಅಳಲು. ಲೋಕ ಮರ್ಯಾದೆಯ ಮುಸುಕಿನಲ್ಲಿ ! – ಕವಿತೆ ಪರಿತ್ಯಕ್ತ ಹೆಂಗಳೆಯರ ಬದುಕಿನ ಕನ್ನಡಿಯಾಗಿದೆ. ‘ಬಹುಜನರ ಸುಖಕ್ಕಲ್ಲವೇ ಬೀದಿ?’ ಎಂದು ಕನಲುವ ಕವಿ ‘ಒಂದಲೆಯಗರ್ಭದಿಂದ/ಇನ್ನೊಂದಲೆಹುಟ್ಟುತ್ತಾ..’ ಎನ್ನುತ್ತ ‘ಕಡಲು ವ್ಯಾಪಿಸಿರುವ ಗುಟ್ಟು /ಜಗತ್ತಿಗೇ ಗೊತ್ತು!‘ ಎನ್ನುವಲ್ಲಿ ಅದರ ವ್ಯಾಪಕತೆಯನ್ನು ತಡೆಯಲಾಗದ ಅಸಹಾಯಕತೆಗೆ ಮರುಗುತ್ತಾರೆ. ‘ಮೈಮರೆತು ಚಪ್ಪರಿಸುತ್ತಾರೆ ವಿಟರುಲೋಕ ಮರ್ಯಾದೆಯ ಮುಸುಕಿನಲ್ಲಿ!’ ಎಂದು ಪುರುಷರ ಹೀನ ಮನಸ್ಥಿತಿಯನ್ನು ಎತ್ತಿ ತೋರಿಸುತ್ತಾರೆ.
ದೀರ್ಘವಾಗಿರುವ ಈ ಕವಿತೆಯಲ್ಲಿ ಕವಿಯ ಬೇಗುದಿ ಬುಸುಗುಡುತ್ತದೆ. ಅಂತ್ಯದಲ್ಲಿ ‘ಜಗತ್ತು ನಾಚಿಕೆಗೆಟ್ಟು ತಣ್ಣಗೆ/ಹೆಜ್ಜೆಯಿಡುತ್ತ ಸಾಗುತ್ತದೆ ಹೀಗೆ/ಬೀದಿಗೆ ಬಿದ್ದ ಈತಪ್ತ ಜೀವಗಳ/ಎದೆಯ ಮೇಲೆ’ ಎಂದು ವಿಷಾದ ವ್ಯಕ್ತಪಡಿಸುತ್ತಾರೆ. ಸಂಕಲನದ ಶೀರ್ಷಿಕೆಯ ಕವಿತೆ – ಒಂದು ನಿಸ್ತಂತುವಿನೆಳೆ…ಯಲ್ಲಿ ತಾನೇ ನಿಸ್ತಂತುವಾಗಿ ದುಃಖವ ಹರಿಯುವ ಎಳೆಯಾಗಿದ್ದಾರೆ ಕವಿ. ಹೆಣ್ಣು ಜಗದ ದುಃಖವನ್ನು ನೋಡಿ, ಕಂಬನಿ ಮಿಡಿದ ತಾಯಿ ಕರುಳು ಅವರನ್ನು ಪೊರೆಯುವ ಎಳೆಯಾಗಿ ನಿಲ್ಲುವ ಅಚಲ ನಿರ್ಧಾರ ತೆಗೆದುಕೊಂಡಿದ್ದು ಒಬ್ಬ ವ್ಯಕ್ತಿಯಾಗಿ ಕವಿ ಬೆಳೆದದ್ದನ್ನು, ಗುರುತಿಸಿಕೊಳ್ಳಲು ಬಯಸಿದ್ದನ್ನು ಸೂಚಿಸುತ್ತದೆ. ನದಿಯೊಂದಿಗೆ…ಕವಿತೆ ಜೀವನದಿಯ ಕುರಿತು ಇರುವುದು. ಜೀವನದ ಅನುಕ್ಷಣ ಸಾಗುವ ಬಗೆ, ಅದರ ಹಾದಿ ಇತ್ಯಾದಿಯನ್ನು ನದಿಯ ಹರಿವು ಕಟ್ಟಿಕೊಟ್ಟಿದೆ.
ಒಳಗು ಹೊರಗಾದಾಗ.. ಕವಿತೆ, ಅಡುಗೆ ಮನೆಯ ಕೆಲಸ, ವಸ್ತುಗಳ ಕುರಿತು ಹೇಳುತ್ತ, ‘ತಾಕತ್ತು ಅಕ್ಕಿ ಉದ್ದಿನದಲ್ಲ/ಎರಡರ ಹದ ಪ್ರಮಾಣವಾಗಿ/ಒಂದಾದ ಆ ಕ್ಷಣದ್ದು/’ ಎನ್ನುವಲ್ಲಿ ‘ಹಾಲಿಗಷ್ಟೇ ಹೆಪ್ಪು ಹನುಕಿಸಿದ್ದು/ರಾತ್ರಿಯೆಲ್ಲಾ ಎಂಥದೋ ಮಸಲತ್ತು!/ಬೆಳಗಿಗಾಗಲೇ ಹಾಲೇ ಮೊಸರು/ಮೇಲೆ ಸಾಭ್ಯಸ್ಥ ಗಟ್ಟಿ ಕೆನೆ/ಮಡುಗಟ್ಟಿದ ಹುಳಿ ಒಡಲಾಳದಲ್ಲಿ…’ ಎಂದಾಗ ಸಂಬಂಧಗಳು, ಅವುಗಳ ಜಂಜಾಟಗಳು, ಮೋಸಗಾರಿಕೆ, ದ್ವಂದ್ವ ನೀತಿ ಮೊದಲಾದ ನಿತ್ಯದ ಜಂಜಡಗಳನ್ನು ಹೇಳುತ್ತಾರೆ. ಉದ್ದಕ್ಕೂ ಹೋರಾಡುತ್ತಲೇ ಬಂದಿರುವ ಈ ಕವಿ ‘ತಕ್ಕಡಿಯ ತಟ್ಟೆಯ/ಒಳಗುಳಿಯಬೇಕೆಂದರೆಅಳತೆ ಹೊಟ್ಟಿಗೆ ಸಮನಾಗಿ ತೂಗಿ/’ಎನ್ನುವಾಗ ಅಚ್ಚರಿಯಾಗುತ್ತದೆ.

ಕೆಲವೊಮ್ಮೆ ಹೊಂದಾಣಿಕೆಯೂ ನಿರಾಳತೆಯೇ ಅಲ್ಲವೆ? ಮೌನ ಇಲ್ಲಿನ ಅನೇಕ ಕವಿತೆಗಳಲ್ಲಿ ಎದುರಾಗುತ್ತದೆ. ಹೋರಾಟದ ಗೌಜು- ಗದ್ದಲದಲ್ಲಿ ಮಿಂದೇಳುವ ಕವಿಗೆ ತನ್ನ ಏಕಾಂತದ ಮೌನ ಈಗ ಇಷ್ಟವಾಗುತ್ತಿರಬಹುದು. ಅಲೆಮಾರಿ ಹೆಜ್ಜೆಗಳು ವಿಶಿಷ್ಟವಾಗಿರುವ ಕವಿತೆ. ಇಲ್ಲಿ ಎಚ್ಚರಿಕೆಯೊಡನೆ ವಿಷಾದವೂ ಹೆಪ್ಪುಗಟ್ಟಿದೆ. ದಾಖಲಾಗುತ್ತಿವೆಯೇ ಉಸಿರುಗಳು- ಕವಿತೆಯಲ್ಲಿ ‘ಇರುವುದೆಲ್ಲಿ ?/ಗುಹೆಯೋ/ಗೂಡೋ/ಗರ್ಭವೋ..’ ಎತ್ತುವ ಪ್ರಶ್ನೆಗಳು ವಾಸ್ತವದಲ್ಲಿ ಸೊರಗಿ ಸುಣ್ಣವಾಗಿರುವ ಮನುಕುಲದ ಸ್ಥಿತಿಯ ತಲ್ಲಣವಾಗಿವೆ. ಇದನ್ನು ಕೊರೊನಾ ಸಂದರ್ಭದ ಕವಿತೆಯಾಗಿಯೂ ನೋಡಬಹುದಾಗಿದೆ. ಬಟ್ಟಂಬಯಲು, ನದಿ, ಪಾದವೂರುವುದು, ಮಾತು- ಮೌನ, ಚುಕ್ಕಿಮುನಿಯ, ಸುಡುಸುಡು ನಿಟ್ಟುಸಿರು ಮೊದಲಾದ ಪದಗಳು ಆಗಾಗ ಕವಿತೆಗಳಲ್ಲಿ ಬರುತ್ತವೆ.
ಕಾಲರುದ್ರನೊಡಲಿನ ಶಿವೆ – ಇತರ ಕವಿತೆಗಳಿಗಿಂತ ಭಿನ್ನವಾಗಿದೆ. ರೌದ್ರತೆ, ಭೀಭತ್ಸತೆಯನ್ನು ಕಾಲವೆಂಬ ರುದ್ರನಲ್ಲಿ ಆವಾಹಿಸಿ, ವೇದನೆಯನ್ನು ಶಿಲೆಯಲ್ಲಿ ಆವಾಹಿಸಿ ಕೊನೆಗೆ ಅದನ್ನು ಮೀರಿ ನಿಲ್ಲುವ ವಾಸ್ತವದಲ್ಲಿ ನಗುವ ಶಿವೆಯರನ್ನು ಕಂಡು ರುದ್ರನೇ ಬೆರಗಾಗಿ ನಿಲ್ಲುವಂತೆ ಮಾಡುವಲ್ಲಿ ಕವಿಯ ಆಶಯ ಎದ್ದು ಕಾಣುತ್ತದೆ. ಕಾಲಾತೀತವಾದ ರುದ್ರ- ಶಿವೆಯರನ್ನು ಪಕ್ಕಕ್ಕೆ ತಂದು ಹೆಣ್ಣು- ಗಂಡಾಗಿ ನಿಲ್ಲಿಸುವ ಈ ಕವಿತೆ ದಟ್ಟ ವಿವರಗಳಿಂದ ಗಮನ ಸೆಳೆಯುತ್ತದೆ.
ನೈದಿಲೆಯ ಪಾದಕ್ಕೆ ಮಾತು ಸುರಿದು… ಕವಿತೆಯಲ್ಲಿ ತನ್ನ ಸಿಟ್ಟು, ಅಸಹನೆ, ತುಡಿತ, ಮೊರೆತ, ನೋವನ್ನೆಲ್ಲ ಸುರಿದು ಖಾಲಿಯಾದಾಗ ಕವಿ ಬೆಚ್ಚುತ್ತಾರೆ, ನಾಚುತ್ತಾರೆ; ಕೊನೆ ಮೊದಲಿಲ್ಲದ ಪ್ರವರವನ್ನು ಮೊದಲಿನಿಂದ ಆಲಿಸಲು ಸಿದ್ಧವಾಗುತ್ತಾರೆ. ಈ ದೀರ್ಘ ಕವಿತೆ ಹಾಗೆ ನೋಡಿದರೆ ಕವಿಯ ಪಯಣದ ಹಾದಿಯೋ ಎಂಬಂತೆ ಆತ್ಮಕಥಾನಕವಾಗಿಯೂ ಕಾಣುತ್ತದೆ.






0 Comments