ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನೀವು, ನೀಲು ಮತ್ತು ನಾವು..

ಲಂಕೇಶ್ ಅಂದ್ರೆ ನೀಲು, ನೀಲು ಸಿಕ್ರೆ ಲಂಕೇಶ್ ನೆನಪಾಗುತ್ತದೆ. ನೀಲು ಸೃ‍ಷ್ಟಿಕರ್ತ ಲಂಕೇಶ್ ಸ್ಮರಿಸುತ್ತಾ..
-ಅಲೆಮಾರಿ
poetry_reading
ಸುಖಕ್ಕಾಗಿ ಕಾತರಿಸುವ
ಕೋಟ್ಯಂತರ ಜನಕ್ಕೆ
ಹಣ, ನೆಲಹೊನ್ನು ಬೇಕು
ಕೆಲವರಿಗೆ ಪ್ರೀತಿ;
ಎಲ್ಲೋ ಕೆಲವರಿಗೆ ಕುಗ್ರಾಮದ
ಹಿತ್ತಿಲೊಂದರ ಹೂವು,
ಬಡಜೋಗಿಯ ಹಾಡು.
***
ದುಷ್ಟ ಪುಸ್ತಕ ಅಪ್ಪಟ ಅಪಾಯದ್ದು
ಯಾಕೆಂದರೆ
ದುಷ್ಟ ಮನುಷ್ಯನಂತೆ ಅದು
ಅಕಸ್ಮಾತ್
ಪಶ್ಚಾತ್ತಾಪ ಪಡಲಾರದು.
***
ಹೂಗಳ ಮುಗ್ಧ ಚೆಲುವು
ಮತ್ತು ಎರಗಿ, ಹೀರಿ, ಸುಖಿಸುವ
ಚಿಟ್ಟೆಯ ವ್ಯಭಿಚಾರಗಳೇ
ಕಾಯಿ, ಹಣ್ಣು, ಬೀಜಗಳ ಹುಟ್ಟಿಗೆ ಕಾರಣ.
***
ವಿಲಾಸಿ ತರುಣಿ ಕಾಲೂರಿ
ಪಾಪ ನಿವೇದನೆ ಮಾಡಿಕೊಳ್ಳುತ್ತಿರಲು
ಮುದಿ ಸನ್ಯಾಸಿಯ.
ಕಾಮವೂ ಕೆರಳುವುದು.
ಏನನ್ನೂ ಕೆರಳಿಸದ
ನಿಚ್ಚಳ ಬೆಳಕಿನಜಡ ರೂಪಕ್ಕಿಂತ
ಕತ್ತಲ ಕೋಣೆಯ
ಸ್ಪರ್ಶ, ಗಂಧಗಳೇ ಜೀವಂತ.
***
ರಾಜ್ಯಗಳನ್ನು ಗೆಲ್ಲಲಾಗದ
ಚಕ್ರವರ್ತಿಯ ಅವಮಾನ
ಸಂಗಾತಿಯ ಹೃದಯ ಗೆಲ್ಲಲಾಗದ
ತರುಣನ ಪರಿತಾಪಕ್ಕಿಂತ
ದೊಡ್ಡದೇನಲ್ಲ .
***
ಕಂಡದ್ದು ಕಂಡಹಾಗೆ
ಹೇಳುವವನ ವರಸೆಗೆ
ಮರುಳಾಗಬೇಡಿ
-ಕಂಡ ಕಣ್ಣು, ಹೇಳುವ ನಾಲಗೆ
ಬೇರೆ ಬೇರೆ!
***
ನೀಲುವಿನಂತೆ ಬರೆಯಲು ಬಯಸುವ
ಜಾಣೆಯರು
ನೀಲುವಿನಂತೆ ಭಯ, ಕಾತರ,
ಆತಂಕ ಪಡುವುದ ಕಲಿಯಬೇಕು.
***
ಕಾಳಿದಾಸ ಸುಂದರಿಯ ವರ್ಣಿಸುವಾಗ
ತನ್ನ ವರ್ಣನೆಯನ್ನೇ ಹೆಚ್ಚು ಪ್ರೀತಿಸಿದ
ಅನಿಸುತ್ತದೆ, ಕ್ಷಮಿಸಿ.
***
ಕಡು ಬಡವ ಕೂಡ
ತನ್ನ ಗುಡಿಸಲಲ್ಲಿ
ಸುಂದರ ಮಣ್ಣಿನ ತಟ್ಟೆಯ ಪಕ್ಕಕ್ಕೆ
ಹೊಳೆವ ತಾಮ್ರದ ಗಿಂಡಿಯಲ್ಲಿ
ನೀರಿಟ್ಟುಕೊಂಡರೆ
ಅದೇ ಅಭಿರುಚಿ.

‍ಲೇಖಕರು avadhi

13 March, 2009

4 Comments

  1. paranjape

    ಲ೦ಕೇಶರಿಗೆ ಲ೦ಕೇಶರೇ ಸಾಟಿ. ಅವರ ನೀಲುಕವಿತೆಗಳನ್ನು ಓದುತ್ತ ಓದುತ್ತ ಬೆಳೆದವನು ನಾನು,ಅವಧಿಯಲ್ಲಿ ನೀಲು ಕವಿತೆಗಳು ಆಗಾಗ ಖುಷಿ, ಕಚಗುಳಿ ಕೊಡುತ್ತಿರುತ್ತವೆ.
    ಪರಾ೦ಜಪೆ
    http://www.nirpars.blogspot.com

  2. kaviswara shikaripura

    neelu neenu nilukuvudu dehadoliruva ola-manassige maatra… kaarana neenu deha-manassugala advaitha aavaranavannu daatidavalu… kanaviyavaru baredanthe ditta dhamaakinavalu.. luv u neelu

  3. basavaraja halli

    Neelu Andare Neelu.Odidantella Manassinalli
    noorentu Alochenegalu
    – Basavaraja Halli

  4. ನಾಟಕಿ ಬೆಂಗಳೂರು

    ಲಂಕೇಶ್ ಓದುವಾಗ ಈ ‘ನೀಲು’ ಯಾರೆಂಬ ಕುತೂಹಲ ನಮಗೆ. ಹೈಸ್ಕೂಲ್ ವಯಸ್ಸಿನಲ್ಲೂ ಕೆಲವೊಂದು ಅರ್ಥವಾಗದ ಪದಗಳಿಗಾಗಿ ಕೋಶ ತೆಗೆದು ಜಾಲಾಡಿ ಅರ್ಥ ಕಂಡುಕೊಂಡಾಗ ೇನೋ ಖುಸಿ. ಕೊಕ್ಕರೆ ಕಾಲಿನಂತಹ ನೀಲುವಿನ ಅಕ್ಷರಗಳೇ ನನಗೆ ಮೋಡಿ ಹಾಕುತ್ತಿದ್ದುದು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading