ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ನೀರು ತೋಟದ ಹಸಿರುಮನೆ’ – ಪ್ರಿಯಾ ಬರೆದ ಸಣ್ಣಕಥೆ

ಸಣ್ಣ ಕಥೆ

ಶ್ರೀಮತಿ ಪ್ರಿಯಾ ಎಂ ಕಲ್ಲಬ್ಬೆ


ಇತ್ತೀಚೆಗೆ ತೋಟದ ಆಚೆ ಮನೆಗೆ ಸಂಜೆಯ ಹೊತ್ತಿನ ಒಂದು ಭೇಟಿ ಮಾಮೂಲಿಯಾಗಿದೆ ಮಗಂದು. ಹೇಳಬೇಕೆನ್ನಿಸಿದ ಎಷ್ಟೋ ಮಾತುಗಳ ಹೇಳಲಾಗದಷ್ಟು ಬೆಳೆದು ಬಿಟ್ಟಿದ್ದಾನೆ ಎಂದು ಇತ್ತೀಚೆಗೆ ಅರ್ಥವಾಗುತ್ತಿದೆ ರಾಧೆಗೆ. ಹಾಗಂತ ಹೇಳದೇ ಇರಲು ಎಲ್ಲಿ ಸಾಧ್ಯ? ಸೀತಾರಾಮ ಹೆಗಡೇರ ಹತ್ರನೇ ಒಂದು ಮಾತು ಹೇಳಿಸಿದ್ರೆ ಹೆಂಗೆ ಅಂತ ಯೋಚನೆ ಬಂದಿತ್ತು. ಗಂಡ ಆಗಲೇ ಆ ಮಾತು ಬ್ಯಾಡ ಅಂತ ಬದಿಗೊತ್ತಿಬಿಟ್ಟಿದ್ದ. ಈ ಗಂಡಸರ ಜಾತಿಗೇ ಇಷ್ಟು ನಮ್ ಗಂಡುಮಕ್ಳು ಎಂಥಾ ಹಲ್ಕಟ್ಟು ದಂಧೆ ಮಾಡೂಕೆ ಶುರು ಮಾಡಿದ್ರೂ ಅಪ್ಪಂದಿರಗೆ ಮಗ ಶುದ್ಧ ಸಂಭಾವಿತ ಅನ್ಸೂದು ಬಿಡೂದೆ ಇಲ್ಲ. ನಾಳೆ ಏನಾದ್ರೂ ಹೆಚ್ಚು ಕಮ್ಮಿ ಆಗೂತ್ಲೆ ತಲೆ ಮೇಲೆ ಕೈ ಹೊತ್ಕಂಡು ಕೂತ್ರಾತು. ಎಂಥಾ ಮಾಡೂದು ಸ್ವಲ್ಪ ಮೊದ್ಲೆ ಸೂಕ್ಷ್ಮ ತಿಳ್ಕಂಬವಾದ್ರೆ ಏನಾದ್ರೂ ಮಾಡಬಹುದಿತ್ತು.ಹೆಂಗೆ ಹೇಳೂದು? ರಾಧೆ ಅವತ್ತಿಡೀ ಅಡ್ಗೆನೂ ಸರಿ ಮಾಡದೇ ಯೋಚನೆಗೆ ಬಿದ್ದಳು. ಅವಳನ್ನು ಅಷ್ಟು ಚಿಂತೆಗೀಡು ಮಾಡಿದ ವಿಷಯವೇ ಅದು.
ಯಾವತ್ತೂ ಆಯಿಗೆ ತಿರ್ಗಿ ಒಂದು ಮಾತಾಡಗಿದ್ದ ಮಗ ಸಂತು ಸಂಜೆ ಹೊತ್ತಿಗೆ ದಿನಾ ಬೈಲ್ಗದ್ದೆ ವಾಲಿಬಾಲ್ ಮ್ಯಾಚ್ ಆಡೂಲೆ ಹಳದಿ ಟೀ ಶರ್ಟ್ ಸಿಕ್ಕಕ್ಕಂಡ ಓಡವನು ಇದ್ದಕ್ಕಿದ್ದಂತೆ ಆಚೆ ತೋಟದ ಅವರ ಮನೆ ಬದಿಗೆ ಹೊರಡೂದು ಶುರು ಮಾಡಿ ಒಂದು ವಾರ ಆದಾಗ ಆಯಿ ಅವಳಿಗೆ ಇದೆಂತ ಹೊಸ ನಮ್ನಿ ಅನ್ನಿಸಿ ಸುಮ್ನೆ ನೋಡ್ವಾ ಅನ್ಕಂಡು ಇವತ್ ಸಂಜೆ ದೇವ್ರಮನೆಗೆ ಹೋಗ ಬರಾನ ಅಂದ್ಕೂಡ್ಲೆ ಅಂವ ಏಕ್ದಂ ಸಂಜೆಗೆ ಆಗಾಕಿಲ್ಲೆ ಆಯಿಅಂತಾನೂ ಹೇಳದೇ ಬಾಯಿಗೆ ಬಂದಿದ್ದೆಲ್ಲ ಜೋರಾಗಿ ಬೈಯ್ಕಂಬದು ಏನಾಗಿತ್ತು ಅಂತ ಈಗ್ಲೂ ಅರ್ಥ ಆಗ್ತಾ ಇಲ್ಲ ಅವಳಿಗೆ. ಅಪ್ಪ ಎದ್ರಿಗೆ ಇದ್ದ ಅಂತಾನೂ ನೋಡದೇ ಧುಮು ಧುಮು ಹೊರಟೇ ಬಿಟ್ನಪ್ಪ! ಅರೆ ಇಸ್ಕಿ ಇವಂಗೆಂತಾ ಆತು ಅಂತ ಅವಳು ತಲೆ ಕೆಡ್ಸಕಂಬುದು ಶುರುವಾಗೇ ಹೋತು.ಯಾವತ್ತೂ ಹಿಂಗೆಲ್ಲ ಆಡಿದ ಮಗ ಅಲ್ಲಪ್ಪ ಅಂವ. ಹಾಗಾಗಿ ರಾಧೆಗೆ ರಾತ್ರಿ ನಿದ್ರೆ ಕೂಡ ಹಾರಿಯೇ ಹೋಯ್ತು.
ಏನಾದ್ರಾಗ್ಲಿ. ಸೀತಾರಾಮ ಹೆಗಡೇರ ಮನೆವರೆಗೆ ಹೋಗೇ ಬರೂದು ಅಂತ ಎದ್ದು ಹೊರಟವಳಿಗೆ ಗಂಡನಿಗೆ ಊಟ ಬಡಿಸುವುದೂ ಮರೆತೇ ಹೋಯಿತು.ಅರ್ಧ ದಾರಿಗೆ ಹೋದ್ಮೇಲೆ ಇನ್ನು ಅಂವ ಬೈಯ್ಕತ್ತಿರ್ತಾ ಅನ್ಸಿದ್ರು ಇದೊಂದು ಪರಿಹಾರ ಮಾಡ್ಕಂಡೇ ಬಿಡುದು ಅನ್ಸಿ ಮುಂದೆ ಹೆಜ್ಜೆ ಎತ್ತಿಟ್ಟಳು.
ಸಿತಾರಾಂ ಹೆಗಡೇರಮನೇಲಿ ಅವತ್ತು ಬೆಳಗಿಂದಾನೆ ಜನ ಜನ. ಮಧ್ಯಾಹ್ನವಾದರೂ ಜಗುಲಿಯ ತುಂಬ ಜನರೇ ತುಂಬಿದ್ದರು ಕಾರು ಜೀಪು ಬೈಕು ಅಂತೆಲ್ಲ ಗೇಟಿನ ಆಚೆಗೆ ರಸ್ತೆವರೆಗೂ ತುಂಬಿತ್ತು! ರಾಧೆಗೆ ಗೇಟು ತೆಗೆದು ಒಳಗಡಿಯಿಟ್ಟಾದಮೇಲೆ ಹೆಗಡೇರ ಮನೆ ದೊಡ್ಡ ಜೂಲು ನಾಯಿಯ ಬೊಗಳುವಿಕೆಯ ಕೇಳಿದ ಮೇಲೆ ಇವೆಲ್ಲ ಲಕ್ಷಕ್ಕೆ ಬಂದಿದ್ದು. ಥೋ ಎಂತಾ ಟೈಮಿಗೆ ಬಂದೆ ಅನ್ನಿಸಿತು ಆ ಕ್ಷಣ ಅವಳಿಗೆ. ಹೆಗಡೇರ ಮನೇಲಿ ಈ ಪಾಟಿಜನ ಅಂದ್ರೆ ಏನೋ ವಿಶೇಷಾನೆ ಇರ್ಬೇಕು. ನನ್ನ ಕೆಲಸ ಅಪ್ಪುದಲ್ಲ ಇವತ್ತು ಅಂತ ಗೊತ್ತಾಗಿಹೋಯಿತು ಆದ್ರೆ ಅಲ್ಲಿವರೆೆಗೆ ಬಂದು ಮನೆಗ್ ಬರದೇ ಹೋಗುವುದು ತರವಲ್ಲ ಅನ್ನಿಸಿ ಹೆಗಡ್ತೀರನ್ನಾದರೂ ಮಾತನಾಡಿಸಿ ಹೋಗೋದು ಅನ್ಕೊಂಡು ಹಿಂಬದಿಯ ಬಾಗಿಲತ್ತ ನಡೆದಳು.
ಹೆಗಡ್ತೀರು ಭಾರೀ ಊಟಕ್ಕೆ ತಯಾರಿ ಮಾಡ್ತಿದ್ದವರು ರಾಧೆ ಕಂಡು ಕುಶಿಯಿಂದಲೇ ಮಾತನಾಡಿಸಿಕೊಂಡರು. ಅರೆ ರಾಧೇ ಅಪರೂಪ ಆಗೋಯ್ದಲೇ! ಒಳ್ಳೆ ದಿನಾನೇ ಬಂದೆ ನೋಡು.ಇವತ್ತು ಮನೆ ತುಂಬ ಜನ. ನೀ ಬಂದಿದ್ದು ಚೊಲೋದೇ ಆತು. ಊಟ ಮಾಡ್ಕಂಡುಹೋಗ್ಲಕ್ಕು. ಮತ್ ನಾ ಒಳಬದಿಗೆ ಇದ್ದಾಗ ಹಂಗೇ ಹೋಯಿಕ್ಕಡಾ ಅವರ ಎಂದಿನ ಆತ್ಮೀಯತೆಗೆ ರಾಧೆ ಯ ಮನ ಸ್ವಲ್ಪ ತಂಪಾಯಿತು. ಸ್ಟೀಲ್ ಚೊಂಬಿನಲ್ಲಿ ಮಜ್ಜಿಗೆ ತಂಬಳಿ ತಂದು ಕೊಟ್ಟರು. ರಣ ಬಿಸಿಲಿನ ಹಸಿದ ಹೊಟ್ಟೆಗೆ ಅದು ತಂಪು ಅಮೃತದಂತೆನ್ನಿಸಿತು.
ಹೆಗಡ್ತೀರೇ ಎಂಥಾ ವಿಶೇಷನ್ರಾ?ಮತ್ತೆ ಕೂಸಿಂದು ಮದ್ವೆ ಗಿದ್ವೆ ನಿಕ್ಕಿ ಆತ ಹೆಂಗೆ? ರಾಶೀ ಜನ ಇದ್ವಪ್ಪಾ ಹೊರ್ಗೆಲ್ಲವಾ ರಾಧೆಯ ಒಳ ಮನಸು ಸೀತಾರಾಂ ಹೆಗಡೇರು ಯಾವಾಗ ಮಾತಿಗೆ ಸಿಗಬಹುದೆಂಬ ಲೆಕ್ಕಾಚಾರದಲ್ಲೇ ಕುತೂಹಲವನ್ನು ಹೀಗೆ ಪ್ರಶ್ನೆಯಾಗಿಸಿತು.
ಅಲ್ದೇ ರಾಧೇ. ಕೂಸಿನ ಮದ್ವೆ ನಿಕ್ಕಿ ಆದ್ರೆ ನಿಂಗೆ ಹೇಳಗಿದ್ದೆ ಇರ್ತ್ನನೆ? ಇದು ಇಲೆಕ್ಷನ್ ಗಲಾಟೆನೇ. ಅದೇ ಜನ ಈಗ ಬಂತಲಿ ಇಲೆಕ್ಷನ್ನು. ಇನ್ನೊಂದು ತಿಂಗ್ಳು ಹಿಂಗೆಯಾ. ನಿನ ಹೆಗಡೇರ ಮಾತಾಡ್ಸುದೇ ಕಷ್ಟ ಮಾರಾಯ್ತಿ. ಊಟ ನಿದ್ರೆ ಕೊಡ್ತ್ವಿಲ್ಲೆ.
ರಾಧೆಗೆ ಏನು ಹೇಳಲೆಂದು ತೋಚಲಿಲ್ಲ. ಹೆಗಡ್ತೀರೇ ಹೀಗೆ ಹೇಳಬೇಕಾದ್ರೆ ನನಗೆಲ್ಲಿ ಮಾತಿಗೆ ಸಿಕ್ಕಾರು? ಅಂತ ಯೋಚನೆ ಶುರುವಾಯಿತು ಅವಳಿಗೆ. ಪರಿಚಯದ ಹಲವರು ಮಾತಾನಾಡುತ್ತಿದ್ದರೂ ಊಟ ಮುಗಿಸಿ ಹೊರಟಾಗಲೂ ಅವಳಿಗೆ ಹೆಗಡೇರು ಕಣ್ಣಿಗೂ ಕಾಣಲಿಲ್ಲ. ಹೋಗುತ್ತಿರುವಾಗಿಗಿಂತಲೂ ಹೆಜ್ಜೆ ಭಾರವಾಗಿಸಿಕೊಂಡು ಮರಳಿದಳು ರಾಧೆ.
ಅವತ್ತೂ ಸಂಜೆಯ ಹೊತ್ತಿಗೆ ಮಗ ಎಂದಿನಂತೆ ಟೀ ಶರ್ಟ ಬಿಟ್ಟು ಹೊಸದಾಗಿ ಹೊಲಿಸಿ ತಂದಿಟ್ಟುಕೊಂಡ ಕೆಂಪು ಚೌಕಳಿ ಮನೆಮನೆ ಇರುವ ಶರ್ಟ ಅಂತದ್ದೇ ಚೌಕಳಿ ಬಣ್ಣದ ಲುಂಗಿ ಸುತ್ತಿಕೊಂಡು ಹೆಗಲಿಗೊಂದು ಟಕರ್ೀಸು ಹಾಕಿ ಪೌಂಡ್ಸ್ ಪೌಡರ್ ಮೆತ್ತಿ ಮುಖ ಬಿಳಿಗಾಗಿಸಕೊಂಡು ಹೊರಟಾಗ ನಾಲಿಗೆ ತುದಿವರೆಗೂ ಬಂದ ಪ್ರಶ್ನೆ ಹೊರಬೀಳಲಿಲ್ಲ. ಅವನಪ್ಪನೂ ಟೀವಿ ಪರದೆಯಿಂದ ಕಣ್ಣು ಇತ್ತ ಹಾಯಿಸಲಿಲ್ಲ. ಗೇಟು ತೆರೆದು ಹೊರಟೇ ಹೋದ ಮಗನ ಹಿಂದೆಯೆ ದೊಡ್ಡ ನಿಟ್ಟುಸಿರು ಹೊರಬಂತು ಅವಳಿಂದ. ಇನ್ನೆಂತ ಮಾಡೂದಪ್ಪ ಭಗವಂತ ಎಂದು ತಲೆಯ ಮೇಲೆ ಕೈ ಹೊತ್ತಳು ರಾಧೆ.
ಸಂತು ಬಹಳ ಉತ್ಸಾಹಿತನಾಗಿದ್ದ. ಏನೇನು ಗೊತ್ತಿಲ್ಲದ ಹಳ್ಳಿ ಗುಗ್ಗು ತಾನು ಅಂತ ಅವನಿಗೆ ಅನ್ನಿಸ್ತಿತ್ತ್ತು ಹಲವು ಬಾರಿ. ತನ್ನ ಕ್ಲಾಸ್ಮೇಟ್ಸ್ಗಳೆಲ್ಲ ಇಂಜನಿಯರು, ಲೆಕ್ಚರು, ಅದೂ ಇದು ಅಂತ ನೌಕರಿ ಹಿಡಿದು ಊರಿಗೆ ಸ್ಟೈಲಾಗಿ ವಾಪಸ್ಸು ಬಂದಾಗೆಲ್ಲಾ ಅವನಿಗೆ ಒಳಗೊಳಗೆ ಖಿನ್ನತೆ ಆವರಿಸುತ್ತಿತ್ತು. ಬಣ್ಣ ಬಣ್ಣದ ಮೊಬೈಲ್ಗಳು.ಕೈಯಲ್ಲೇ ಹಿಡಿದುಕೊಂಡು ಪಾಟಿಯಂತೆ ಕಾಣುವ ಟ್ಯಾಬ್ ಗಳು! ಕುಟುಕುಟು ಕುಟ್ಟಿ ಇಡೀ ಪ್ರಪಂಚ ತೋರಿಸುವ ಲ್ಯಾಪ್ಟಾಪುಗಳು ಇವನ್ನೆಲ್ಲ ಬೀಗುತ್ತ ತೋರಿಸುವ ಹಳೆಯ ಗೆಳೆಯರು ಅವನನ್ನು ಸಂತು ನಿಂಗೇನೂ ಗೊತ್ತಿಲ್ಲ ಕಣೋ ಅಂತ ಹೇಳುವುದಕ್ಕೇ ಕಾದಿದ್ದವರಂತೆ ತೋರುತ್ತಿದ್ದರೂ ಒಮ್ಮೆಯೂ ಮನಸಿನ ಮಾತು ಹೊರಗಿಟ್ಟ ಪೋರನಲ್ಲ ಅವ. ಸುಮ್ಮನೆ ಬಿಳಿ ನಗೆಯಾಡಿ ಬಂದುಬಿಡುತ್ತಿದ್ದ. ತನಗೂ ಕಲಿಬೇಕೆಂಬ ಬಯಕೆಯನ್ನೂ ತೋರಿಸಿಕೊಂಡವನಲ್ಲ. ತಾನಾಯಿತು ತನ್ನ ತೋಟ ಮನೆ ಗದ್ದೆ, ವಾಲಿಬಾಲ್ ಮ್ಯಾಚು, ಸಿಡಿ ಬೆಟ್ಟದ ಅಂಚು ಎಂಬಂತಿದ್ದ ಅವನಿಗೂ ಒಳಗೊಳಗೆ ಈ ಹೊಸ ಪ್ರಪಂಚದ ಪುಳಕಗಳನ್ನೆಲ್ಲ ಅನುಭವಿಸಬೇಕೆಂಬ ಬಯಕೆ ತೀವ್ರವಾಗತೊಡಗಿತ್ತು. ಅದಕ್ಕೆ ಸರಿಯಾಗಿ ಆಚೆತೋಟದ ಅವರ ಮನೆಯಲ್ಲಿ ಬಿಳಿ ಬಿಳೀ ನಾಯಿಮರಿ ಇದ್ದಾವೆಂದು ನೋಡಲು ಹೋದ ಅವತ್ತು ಅವನಿಗೆ ನಿಧಿ ಸಿಕ್ಕಂತಾಗಿತ್ತು. . ಅಷ್ಟೇ ಅಲ್ಲ ಅದು ತನ್ನ ಕೈಗೇ ಸಿಗಲೆಂದೇ ಬಂದಿದೆಯೆಂಬ ಹೊಸದೊಂದು ಕನಸು ಅವನನ್ನು ಸಿಡೀ ಬೆಟ್ಟದ ಅಂಚಿಂದ ರೆಕ್ಕೆ ಕಟ್ಟಿ ಹಾರಿದಷ್ಟು ಖುಶೀ ಆಗಿತ್ತು. ಕನ್ನಡ ಶಾಲೆಯಲ್ಲಿ ಸರಿಯಾಗಿ ಇಂಗ್ಲೀಷ್ ಕಲಿಯದ್ದರ ಬಗ್ಗೆ ಅವನ ಬಗ್ಗೆ ಅವನಿಗೇ ಇದ್ದ ಬೇಜಾರೆಲ್ಲ ಇಂಗ್ಲೀಷ್ ಮಾಸ್ತರೆ ಸರಿ ಇಲ್ಲ ಅಂತ ಸಮಾಧಾನ ಪಟ್ಕಂಡಿದ್ದು ಹೈಸ್ಕೂಲಿನಲ್ಲಂತು ಇಂಗ್ಲೀಷ್ ಕಲಿಸಲು ಬಂದ ಮೇಡಂ ಗೋಳು ಹೊಯ್ಕಂಡಿದ್ದೇ ನೆನಪಿಗಿರೋದು. ಆದರೀಗ ಅದೆಲ್ಲ ಮರೆತೇ ಹೋಯ್ತು. ಇಂಗ್ಲೀಷು ಕಲಿಯದ್ದರಿಂದ ಮೊಬೈಲು, ಕಂಪ್ಯೂಟರ ನ ಇಡೀ ಪ್ರಪಂಚದಿಂದ ತನ್ನ ಹೊರಗಿಟ್ಟಿದ್ದಾರೆನ್ನಿಸಿದ ಆ ಅಸಹನೆ ಕೂಡ ಈ ಸಂಂಭ್ರಮದೊಳಗೆ ಮರೆಯಾಯಿತು.ಇವೆಲ್ಲ ಆದದ್ದು ಆಚೆ ತೋಟದ ನಾರಣಪ್ಪನ ಮನೇಲಿ ಅವಳು ಬಂದಾಗಿಂದ. ಯಾವುದೋ ಬೇರೇ ಪ್ರಪಂಚವೇ ಕೈಗೆ ಸಿಕ್ಕಷ್ಟು ಕುಶಿ ಆಯಿತು ಅವನಿಗೆ. ಪ್ರಾಚೀ ಎಂಬ ಡಾಕ್ಟರಣೀ ದೋಸ್ತಿ ಆದಾಗಿಂದ.!
ಅಪ್ಪ ಆಯಿ ಯಾರೂ ಕಲಿಸ್ದೇ ಇದ್ದ ನೂರಾರು ವಿಷಯ ಕಲಿಸ್ತಾ ಇದ್ದ ಅವಳು ಅವನಿಗೆ ಸಾಕ್ಷಾತ್ ದೇವತೆಯಂತೆ ಕಾಣ್ತಾ ಇದ್ದಾಳೆ.. ನಾರಣಪ್ಪನ ಮಗಳು ಸಿಂಧುವಿನ ಗೆಳತಿಯಂತೆ ಅವಳು. ಏನೋ ರಜೆಗೆಂದು ಬಂದವಳು ಇಲ್ಲಿಯೇ ನಿಂತಿದ್ದಾಳೆ. ಅಕಸ್ಮಾತ್ ಅವತ್ತು ವಾಲಿಬಾಲ್ ಆಟ ಆಡುವಾಗ ನೋಡಿದವಳು ಸುಮ್ಮನೆ ರಸ್ತೆಯಲ್ಲಿ ಬರುತ್ತಿದ್ದ ನನ್ನ ನಿಲ್ಲಿಸಿ ಮಾತನಾಡಿದಾಗ ಇವಳ್ಯಾವ ಸೀಮೆ ಹೆಣ್ಣಪ್ಪ ಅನ್ನಿಸ್ತ್ತು. ಪರಿಚಯ ಎಲ್ಲ ಹೇಳ್ಕೊಂಡು ಹಾಗೆ ದೋಸ್ತಿ ಮಾಡಿಕೊಂಡ್ಬಿಟ್ಳು. ಬಿಳಿ ಬೀಳೀ ಬಟ್ಟೆ ಹಾಕ್ಕೊಂಡು ಬೆಟ್ಟ ಗುಡ್ಡ ಸುತ್ತೋಕೆ ಹೊರಡುವ ಅವಳೊಂಥರಾ ವಿಚಿತ್ರ ಅನ್ಸಿತ್ತು ಅವಂಗೆ. ನಾರಣಪ್ಪ ಮತ್ತು ಸಿಂಧು ಅವಳಿಗೆ ನಮ್ಮೂರ ಸಿಡಿ ಬೆಟ್ಟದ ತುದಿವರೆಗೂ ತೋರ್ಸಿ ಬರಲು ಕರೆದಾಗ ಸಿಡಿ ಬೆಟ್ಟದ ಬಗ್ಗೆ ತನಗೆ ಗೊತ್ತಿದ್ದಷ್ಟು ಇನ್ಯಾರಿಗೆ ಗೊತ್ತು ಎಂದು ಹೆಮ್ಮೆಯಿಂದ ಬೀಗಿದ್ದ ಅವನು. ಹಾಗೆ ಹಾಗೆ ದಿನಾ ಸಂಜೆ ವಾಕಿಂಗ್ ಅಂತ ನಾರಣಪ್ಪ ಸಂತು ಮತ್ತು ಪ್ರಾಚೀ ಬೆಟ್ಟ ಗುಡ್ಡ ಸುತ್ತಾಡುತ್ತಿದ್ದರೆ ರಾಧೇ ಮಗನ ಬಗ್ಗೆ ಚಿಂತೆ ಮಾಡಿ ಮಾಡಿ ಹೈರಾಣಾಗಿದ್ದಳು. ನಾರಣಪ್ಪನ ಮನೆ ತುಂಬ ಬೆಳೆದ ಹೆಣ್ಣುಮಕ್ಕಳಿದ್ದಾರೆ. ಜಾತೀಲಿ ಒಂದು ಗುಲಗಂಝಿ ತಮಗಿಂತ ಮೇಲೇಯೇ ಅವರು. ದುಡ್ಡಿರೋ ಜನ. ಇನ್ನೇನಾದೀತು ಎಂದು ಅವಳದ್ದು ಒಂದೇ ಚಿಂತೆ. ಇದ್ದೊಬ್ಬ ಮಗನ ದೇವರೇ ಕಾಪಾಡಬೇಕು ಅಂದುಕೊಂಡಳು. ಸರಿಯಾಗಿ ವಿಚಾರಿಸಿಕೊಳ್ಳಬಹುದಾದ ಸೀತಾರಾಂ ಹೆಗಡೆಯವರೂ ಅವಳಿಗೆ ಸಿಗಲೇ ಇಲ್ಲ.
ಅವತ್ತೊಂದಿನ ಸಿಡಿ ಬೆಟ್ಟದ ಪಶ್ಚಿಮಾಭೀಮುಖದಲ್ಲಿ ಹೊರಟರು ನಾರಣಪ್ಪ, ಸಂತು ಮತ್ತು ಪ್ರಾಚೀ. ಎಂದಿನಂತೆ ಅವಳ ಕೈಲೊಂದು ಕ್ಯಾಮರಾ, ಕುತ್ತಿಗೆಯಲ್ಲಿ ಉದ್ದೀ ಸುಂಡಿಯ ಬೈನಾಕ್ಯುಲರ್. ನೀಲಿ ಜೀನ್ಸಿನ ಮೇಲೊಂದು ಬಿಳಿ ಬಣ್ಣದ ಟಾಪು. ಅವಳು ನಮ್ಮೂರ ಹುಡ್ಗೀರ ತರಾ ದುಪ್ಪಟ್ಟಾ ಹೊದ್ದು ಬರೋದಿಲ್ಲ ಅಂತ ಅವನು ಗಮನಸಿದ್ದ. ಅವಳ ಬಿಳೀ ಶಂಖದಂತ ಕೊರಳಿನ ಸುತ್ತ ಒಂದು ಚೈನೂ ಲಾಕೆಟ್ಟೂ ಕಂಡಿಲ್ಲ ಅವನಿಗೆ. ಎಲ್ಲಾದರೂ ಅಪರೂಪಕ್ಕೆ ಅವಳೇನಾದ್ರೂ ಕಾರಣಕ್ಕೆ ಬಗ್ಗಿದ್ರೆ ಅವಳ ಕೊರಳಿನ ಆಳ ಕಾಣುತ್ತಿತ್ತು. ಬೇಡಬೇೆಡ ಅನ್ನಿಸದರೂ ಅವಳು ಬೇಕೆಂತಲೇ ಹಾಗೆ ಮಾಡುತ್ತಾಳೆ ಅನ್ನಿಸ್ತಿತ್ತು ಅವನಿಗೆ. ಅವಳ ಬೋಲ್ಡ್ ಆಗಿರೋ ಮಾತು ಸಿಗ್ಗಿಲ್ಲದ ನಡವಳಿಕೆ ಅಲ್ಪ ಸ್ಡಲ್ಪ ಮೈ ಕೈ ತಾಗಿದರೂ ನಕ್ಕು ಸುಮ್ಮನಾಗುತ್ತಿದ್ದ ಕಂಗಳು ಒಂಥರಾ ಸಂತು ಅವಳ ಆರಾಧಕನಾಗಿಬಿಟ್ಟಿದ್ದ. ಆಗಲೇ ತಿಂಗಳು ಸಮೀಪಿಸಿದೆ ಇದೇ ಸುತ್ತಾಟದಲ್ಲಿ. ಅವಳೊಂದಿಗೆ ಕ್ಯಾಮರ ಕ್ಲಿಕ್ ಮಾಡೋದು, ಲ್ಯಾಪ್ ಟಾಪಿಗೆ ಹಾಕಿದ ಪೋಟೋಗಳ ನೋಡೋದು ಎಲ್ಲ ಕಲಿತಿದ್ದಾನೆ ಸಂತು. ಬೆಟ್ಟದ ತುದಿತುದಿಯಲ್ಲಿ ನಿಂತಾಗ ಮಾತ್ರ ಬರುವ ನೆಟ್ ವರ್ಕ ನಲ್ಲಿ ಮೊಬೈಲ್ ಆಪರೇಟಿಂಗ್ ಸಹ ಅವನಿಗೆ ಅರ್ಥವಾಗಿದೆ ಈಗ. ಯಾವ ಸ್ಥಳದಲ್ಲಿ ನಿಂತರೆ ನೆಟ್ವರ್ಕ ಸಿಗಬಹುದೆಂಬ ಅಂದಾಜು ಅವನಿಗಾಗಿದೆ. ಇಷ್ಟೆಲ್ಲ ಗೊತ್ತಾದರೂ ಒಮ್ಮೆಯೂ ತಮ್ಮ ಜೊತೆಗೆ ಸಿಂಧೂ ಎಂಬ ಪ್ರಾಚೀ ಗೆಳತಿ ಯಾಕೆ ಬರುವುದಿಲ್ಲ ಈ ಸುತ್ತಾಟಕ್ಕೆ? ಎಂಬ ಪ್ರಶ್ನೆ ಒಳಗೊಳಗೆ ಸುತ್ತುತ್ತಿದೆ. ಈ ಡಾಕ್ಟರಣೀ ಇಷ್ಟು ದಿನ ಸುತ್ತಾಡಿ ಸುತ್ತಾಡೀ ಇಷ್ಟೆಲ್ಲ ಪೋಟೋ ತೆಗೆದು ಏನು ಮಾಡುತ್ತಾಳೆ ಎಂಬುದೂ ಒಂದು ಪ್ರಶ್ನೆ ಇದೆ. ನಾರಣಪ್ಪ ಮಾತಿಲ್ಲದ ಮೂಗನಂತೆ ತಮ್ಮಜೊತೆ ತಿರುಗುತ್ತಿದ್ದಾನೆ. ಅವನ ಕೈಯಲ್ಲಿನ ದೊಣ್ಣೆ ಕೆಲವು ಗಿಡಗಳ ಸವರಿದ್ದು ಬಿಟ್ಟರೆ ಇನ್ನೇನೂ ಇಲ್ಲ. ದಿನಾ ನಕ್ಷೆ ತೆಗೆದು ಎಲ್ಲಿಗೆ ಹೋಗಿ ತಲುಪಬೇಕೆಂಬ ಮ್ಯಾಪ್ ಗುರುತು ತೋರಿಸುತ್ತಾಳೆ ಈ ಹುಡುಗಿ. ಅಲ್ಲಿಯವರೆಗೂ ಕರೆದೊಯ್ಯುವುದು ಸಂತು ಮತ್ತು ನಾರಣಪ್ಪ ಕೆಲಸ. ಒಂದರ್ಧ ಗಂಟೆ ಅಲ್ಲಿಯೇ ಕುಳಿತು ಏನೇನೋ ಲೆಕ್ಕಾಚಾರ ಹಾಕಿಕೊಳ್ಳುವುದು ಅವಳ ವಾಡಿಕೆ. ಮತ್ತೆ ವಾಪಸ್. ಸುಮಾರು 25 ಎಕರೆಯ ಆ ಅರಣ್ಯ ಪ್ರದೇಶದ ಇಂಚಿಂಚೂ ಬಿಡದೇ ಸಂತು ಅವಳಿಗೆ ತೋರಿಸಿದ್ದ. ಅವನ ಪ್ರಶ್ನೆಗಳೂ ಹಾಗೇ ಉಳಿದಿದ್ದವು.
ಸಿಡಿ ಬೆಟ್ಟ ವೆಂದರೆ ಅಘನಾಶಿನಿ ದಂಡೆಯಲ್ಲಿ ಎದ್ದು ನಿಂತ ಹಸಿರು ದೇಗುಲ. ಅಲ್ಲಿ ನಾಗರಿಕತೆಯ ಸೋಂಕು ಇನ್ನೂ ತಾಗಿಲ್ಲ. ಆ ಬೆಟ್ಟದ ತುತ್ತ ತುದಿಗೆ ನಡೆದರೆ ಅಲ್ಲೊಂದು ವಿಹಂಗಮ ಸ್ವರ್ಗವಿದೆ ಎನ್ನಬಹುದು. ಸುಮಾರು ಎಕರೆಗಿಂತ ಮಿಗಿಲಾದ ವಿಸ್ತಾರವಾದ ಕಪ್ಪು ಬಂಡೆಯ ನಿಸರ್ಗ ನಿರ್ಮಿಸಿದ ಚಪ್ಪಡಿ ಹಾಸಿದೆ ಅಲ್ಲಿ! ಬೆಟ್ಟದ ಬುಡದಲ್ಲಿ ಹರಿದ ಅಘನಾಶಿನಿ ಅವಳ ಪಾದಗಳನ್ನು ಚುಂಬಿಸುತ್ತ ಸುತ್ತು ಬಳಸಿ ವೈಯ್ಯಾರದಿಂದ ಸಾಗಿದರೆ ಅದೋ ಕಣ್ಣಿಗೆ ಕಾಣುವಂತೆ ದೂರದಲ್ಲಿ ನೀಲಾಕಾಶವೇ ಧರೆಗಿಳಿದಂತ ಅರಬ್ಬೀ ಸಮುದ್ರದ ನೋಟ. ಸೂರ್ಯ ಪಶ್ಚಿಮದಲ್ಲಿ ಮುಳುಗುತ್ತಿರುವಾಗ ಅವನ ಹೊಂಬಣ್ಣ ಪ್ರತಿಫಲಿಸುವ ಆ ನದಿ ಶಿಖರಗಳೆರಡೂ ಹೃದಯತುಂಬಿ ಆನಂದ ಸುರಿಯುವಂತ ನೋಟ ಅದು. ಬೆಟ್ಟದ ತಪ್ಪಲಿನ ಆ ಹಳ್ಳಿಗರಿಗೆ ಸಿಡಿ ಬೆಟ್ಟವೆಂಬುದು ತವರ ಮನೆಯ ಆಡೊಂಬಲದಂತೆ. ದನ ಕರು ಮೇವು, ತೆರಕು, ಸೊಪ್ಪು ಎಲ್ಲವನ್ನೂ ಒದಗಿಸುವ ಅಮ್ಮನಿದ್ದಂತೆ. ಸಂತುವಿನಂತ ಅನೇಕ ಹಳ್ಳೀ ಹೈದರಿಗೆ ಅದು ಸೆರಗಿನಲ್ಲೇ ಸಂತೈಸುವ ಸಖಿಯಂತೆ.
ಅವತ್ತೂ ಅವರು ಸಿಡಿ ಬೆಟ್ಟದ ಪಶ್ಚಿಮ ತುದಿಯ ತಲುಪಿದರು. ನಾರಣಪ್ಪ ಸ್ವಲ್ಪ ಸುಸ್ತಾದಂತೆ ಕಂಡರು. ಅವನೇ ನಾರಣಪ್ಪನ ಒಂದುಕಡೆ ಕುಳ್ಳಿರಿಸಿ ನೀರು ಕುಡಿಸಿ ವಿಶ್ರಾಂತಿಗೆ ಬಿಟ್ಟು ದೂರದಲ್ಲಿ ಕುಳಿತ ಪ್ರಾಚೀ ಯ ಹಿಂದುಗಡೆಯಿಂದ ಮೆಲ್ಲಗೆ ನಡೆದ. ಅಷ್ಟು ದಿನದ ಸಲಿಗೆ ಅವನಲ್ಲಿ ಪುಟ್ಟ ಹುಡುಗಾಟವಾಡಲು ಪ್ರೇರೇಪಿಸಿತ್ತಷ್ಟೇ. ಲ್ಯಾಪ್ ಟಾಪಿನ ಮೇಲೆ ಅನೇಕ ಪೋಟೋಗಳ ಬಿಚ್ಚಿಕೊಂಡ ಅವಳು ಮಾಡ್ತಾ ಇರೋ ಕೆಲಸದ ಬಗ್ಗೆ ಕುತೂಹಲ ಶುರುವಾಯಿತು.

ಸ್ಕ್ರೀನ್ ಬದಲಾದಂತೆ ಅವನು ವಿಚಿತ್ರ ಆವೇಗಕ್ಕೊಳಗಾದ. ಇಡೀ ಸಿಡಿ ಬೆಟ್ಟ ದೇವಲೋಕದಂತ ಒಂದು ಬಣ್ಣ ಬಣ್ಣದ ನಕ್ಷೆ ಅಲ್ಲಿತ್ತು. ಸಿಡೀ ಬೆಟ್ಟವ ಸುತ್ತೀ ಬಂದ ಅಘನಾಶಿನಿಯ ಮಡಿಲಲ್ಲಿ ಹಲವು ಬೋಟುಗಳ ಚಿತ್ರಗಳಿದ್ದವು! ಅದಕ್ಕೊಂದು ಹೆಸರೂ ಇಟ್ಟಿದ್ದಳು. ನೀರುತೋಟದ ಹಸಿರು ಮನೆ
ಅಂದರೆ ಸಿಡಿ ಬೆಟ್ಟವನ್ನು ಹೀಗೆಲ್ಲ ಮಾಡುವಳೇ ಈ ಹುಡುಗಿ? ಇವಳಿದ್ನಾ ಖರೀದಿಸುತ್ತಿದ್ದಾಳೆಯೇ? ಇಷ್ಟು ದೊಡ್ಡ ಬೆಟ್ಟವನ್ನು ಖರೀದಿ ಮಾಡುವಷ್ಟು ಶ್ರೀಮಂತಳೇ? ಪ್ರಶ್ನೆಗಳ ಮೇಲೆ ಪ್ರಶ್ನೆಗಳೇಳುತ್ತಿದ್ದಂತೆ ಅವಳಿಗೆ ಕಾಲ್ ಬಂತು.
ಲ್ಯಾಪ್ ಟಾಪ್ ಮೇಲೇ ಅವನದೇ ಅನೇಕ ಚಿತ್ರಗಳು ಮೂಡುತ್ತದ್ದವು. ಅವನಿಗೆಂದೂ ಅರಿವಾಗದ ರೀತಿಯಲ್ಲಿ ಅವಳ್ಯಾವಾಗ ಈ ಪೋಟೋಗಳನ್ನು ತೆಗೆದಳು? ಅವನಿಗೆ ನಾಚಿಕೆಯೆನ್ನಿಸಿತು. ಅವನೆಂದು ಮೈಕಟ್ಟು ಪ್ರದರ್ಶನ ಮಾಡಿದವನಲ್ಲ. ರಾಧೆ ಯೆದುರು ಮಾತ್ರ ಹಾಗೆ ಅವನು ಶರ್ಟ್ ಬಿಚ್ಚಿ ನಿಲ್ಲುತ್ತಿದ್ದದ್ದು. ಅದೂ ಆಯಿಯ ಕೈನ ಎಣ್ಣೆ ಸ್ನಾನಕ್ಕಾಗಿ ಮಾತ್ರ. ಆಯಿ ಆಗಾಗ ಹುಡ್ಗೀರ ಎದ್ರಿಗೆ ಹಿಂಗೆಲ್ಲ ಶರ್ಟ ತೆಗೆದು ನಿಲ್ಲಬ್ಯಾಡ ಕಟ್ಟು ಮಸ್ತು ದೇಹ ನಿಂದು. ದೃಷ್ಟಿ ಆದೀತು ಅಂದಿದ್ದು ನೆನಪಿಗೂ ಬಂತು. ಆದ್ರೂ ಡಾಕ್ಟರಣಿ ಪ್ರಾಚೀ ತುಂಬ ಒಳ್ಳೆ ಹುಡುಗಿ ಅಂದುಕೊಂಡು ಅಂತ ಯೋಚನೆ ದೂರ ಸರಿಸಿದ. ಯಾಕೋ ಅವಳ ಲ್ಯಾಪ್ ಟಾಪಿನಲ್ಲಿ ತನ್ನ ಅಂಥ ಪೋಟೋಗಳು ಅವನಿಗೆ ಒಳಗೊಳಗೆ ಮಜವೆನ್ನಿಸದರೂ ಇಂಗ್ಲೀಷ್ ನಲ್ಲೇ ಮಾತನಾಡುವ ಅವಳ ಮೋಡಿ ಮಾಡುವ ಕಂಗಳು ಅವನಿಗ್ಯಾಕೋ ಭಯ ಹುಟ್ಟಿಸಿತು ಮೊದಲ ಬಾರಿಗೆ ಏನು ಮಾಡುತ್ತ್ತಿದ್ದಾಳೆ ಈ ಹುಡುಗಿ? ತಿಳಿಯಲೇಬೇಕೆಂಬ ಹಠ ಹುಟ್ಟಿಕೊಂಡಿತು ಆ ಕ್ಷಣ ಸಂತುವಿನಲ್ಲಿ! ಪೆದ್ದು ನಗು ನಗುತ್ತ ಬೆಟ್ಟದ ತುದಿಯಲ್ಲಿದ್ದ ಬಂಡೆಗಲ್ಲಿನ ಮೇಲೆ ನಿಂತ..
ದೂರ ದೂರದ ವರೆಗೂ ಹಸಿರು ಹಸಿರು ಹಸಿರು. ಅಲ್ಲಿ ನಿಂತು ಉಸಿರಾಡಿದರೆ ರಕ್ತವೂ ಹಸಿರಾಗಬೇಕು! ಅಂತ ವನರಾಜ್ನಿ ಅವಳು! ಸಿಡಿ ಬೆಟ್ಟದ ತನ್ನಂತ ಹಸಿರು ಪ್ರೇಮಿಗಳ ಧ್ಯಾನ ತಾಣ. ನಾಗರಿಕತೆಯ ಸೋಂಕಿಲ್ಲದೆ ಶುದ್ಧ ಹಸಿರಿನ ಸಮೃದ್ಧ ಕಾಡಿನ ಆ ಬೆಟ್ಟ ಅದೆಷ್ಟು ಮುಗ್ಧವಾಗಿ ಅಲ್ಲಿ ನೆಲೆ ನಿಂತಿತ್ತು! ತನ್ನಂತೆ. ಈ ಪ್ರಪಂಚದ ಯಾವ ಘನ ನಾಗರಿಕತೆಗಳ ಅವಶ್ಯಕತೆ ಇವಳಿಗಿಲ್ಲ. ಅಘನಾಶಿನಿ ಮೈದೆರೆದು ಸುತ್ತಿಕೊಂಡಿರುವ ಈ ನೆಲೆ ಯಾವ ದೇವಸ್ಥಾನಗಳಿಗೂ ಕಮ್ಮಿ ಇಲ್ಲದ ಪೃಕೃತಿ ದೇವಿಯ ವಾಸಸ್ಥಳ. ಇದರ ಮೇಲೂ ಇವರ ಕಣ್ಣು ಬಿದ್ದಿತೆಂಬ ಅರಿವೇ ಇಲ್ಲದ ಮೂರ್ಖನಂತೆ ನಾನು ಈ ಸಿಡಿ ಬೆಟ್ಟವ ಪರಿಚಯಿಸಿದೆನಲ್ಲವಾ ಈ ಬಿಳಿ ಕೋಟಿನ ಹುಡುಗಿಗೆ? ಛೇ.. ತನ್ನದೇ ಜೀವ ಯಾರದ್ದೋ ಒತ್ತೆಯಾಳಾದಂತೆ ವಿಲಿವಿಲಿ ಒದ್ದಾಡಿತು ಅವನ ಮನಸು.
ಇನ್ನೂ ಸಾವಿರ ಪ್ರಶ್ನೆಗಳು ಒಮ್ಮೇಲೇ ಹುಟ್ಟಿಕೊಂಡವು. ಉತ್ತರ ಸಿಗಬೇಕೆಂದರೆ ಅವನಿಗೆ ಒಂದೇ ದಾರಿ ಸಿಂಧೂ.
ಇಲೆಕ್ಷನ್ನಿನ ಗಡಿಬಿಡಿಯ ನಡುವೆಯೇ ಒಂದಿನ ಹೆಗಡೇರು ಅಂತೂ ಇಂತೂ ಸಿಕ್ಕಿದ್ದರು ರಾಧೆಯ ನಸೀಬಕ್ಕೆ. ಅವತ್ತು ಅವಳು ಕ್ಷಣ ಬಿಡದೇ ಅಲವತ್ತುಕೊಂಡಳು. ಮಗ ಅವಳ್ಯಾವಳೋ ಡಾಕ್ಟರಣಿಯ ಜೊತೆ ಬೆಟ್ಟ ಅಲೆಯುತ್ತದ್ದಾನೆಂದೂ ಅಪ್ಪನ ಅಂಕೆ ಇಲ್ಲದ ಮಗ. ಅಪ್ಪನ ಹಾಗೆ ಕುಡುಕ ಜವಾಬ್ಧಾರಿ ಇಲ್ಲದವನಾದರೆ ತಾನು ಜೀವ ಇಟ್ಟುಕೊಂಡು ಬದುಕಲಾಗದೆಂದೂ ಕಣ್ಣೀರು ಹಾಕಿದಳು. ಅದಾಗಲೇ ಹೆಂಗಸರ ಸುದ್ದಿ ಮನೆಯಲ್ಲಿ ಇದು ಹರಿದಾಡಿದ್ದು ಅವರ ಕಿವಿಗೂ ಬಿದ್ದಿದ್ದರಿಂದ ಸ್ವಲ್ಪ ಗಂಭೀರವಾಗೇ ಅವಳಿಗೆ ವಿಚಾರಿಸುವುದಾಗಿ ಭರವಸೆಯಿತ್ತರು ಸೀತಾರಾಂಹೆಗಡೆಯವರು. ಈ ಬಾರಿಯ ಇಲೆಕ್ಷನ್ನು ಅವರಿಗೂ ತಲೆನೋವಾಗಿ ಪರಿಣಮಿಸಿತ್ತು. ಯಾರನ್ನೂ ವಿರೋಧ ಕಟ್ಟಿಕೊಳ್ಳುವ ಹಾಗಿರಲಿಲ್ಲ. ಎಲ್ಲ ಸಮಸ್ಯೆಗೂ ನಾಜೂಕದ ಪರಿಹಾರ ಹುಡುಕುವ ತಾಳ್ಮೆಯಿಂದ ಮಾತನಾಡಿ ಕಳಸಿದರು ರಾಧೆಯ. ರಾಧೇಯೀಗ ಸ್ವಲ್ಪ ಹಗುರ! ಸಂತು ವಿನ ತಲೆ ಭಾರಭಾರ.
ಹಳ್ಳೀಮನೆಯ ಮಧ್ಯೆ ಸಿಂಧೂ ವೆಂಬ ಸುಂದರಿಯ ಹಿಡಿದು ನಿಲ್ಲಿಸಿ ಮಾತನಾಡಿಸುವುದೇನು ಅಷ್ಟು ಸುಲಭದ ಮಾತ? ನಾರಣಪ್ಪ ಪ್ರಾಚೀ ಜೊತೆ ಅಲೆಯಲು ತನ್ನ ಕರೆದೊಯ್ದರೂ ತನ್ನ ಮೂವರು ಮಕ್ಕಳನ್ನೂ ಅವನ ಹತ್ತಿರಕ್ಕೆ ಸೇರಗೊಡಲಿಲ್ಲ. ಜಾಸ್ತಿ ಮಾತೂ ಆಡುತ್ತಿರಲಿಲ್ಲ. ಏನೋ ಸಮಯ ಸಾಧಿಸಿ ಅಂಥೂ ಇಂಥೂ ಅವನು ಸಿಂಧೂ ಹಿಡಿದು ಮಾತನಾಡಿಸಲು ನಾಲ್ಕು ದಿನ ಬೇಕಾಯಿತು. ಅಲ್ಲಿಯವರೆಗೂ ದಿನ ಮೊದಲಿನಂತೆ ಕಳೆಯುತ್ತಿತ್ತು. ಅವನೂ ಪೆದ್ದು ಪೆದ್ದು ಪ್ರಶ್ನೆ ಕೇಳುತ್ತ ಹಾಗೇ ಇದ್ದ. ಅವತ್ತು ಬೆಳ್ಳಂಬೆಳಿಗ್ಗೆ ಸಿಂಧೂ ನದೀ ತೀರಕ್ಕೆ ಬಂದಾಗ ಕಾಯ್ದು ನಿಲ್ಲಿಸಿದ ಅವಳನ್ನು. ಎಂದೂ ಅವಳನ್ನು ಹಾಗೆ ಗಮನಿಸದ ಸಂತು ಆ ಚಂದದ ಹುಡುಗಿಯ ಬೆಳಗಿನ ಬೆಳಕಿನ ಹಣತೆಯಂತೆ ನೋಡಿದ. ಬಂದ ಕೆಲಸ ನೆನಪಾಗಿ ಈ ನಿನ್ನ ಪ್ರೆಂಡ್ ಎಂಥಕ್ಕೆ ಬಂದಿದ್ದು ಇಲ್ಲಿಗೆ? ಎಂಥ ಮಾಡ್ತಿದ್ದಾಳೆ ಅದು? ನೀ ಎಂಥಕ್ಕೆ ಕರ್ಕ ಬಂದಿದ್ದು? ಎಲ್ಲ ನಿಜ ಹೇಳು ಸಿಂಧು. ನಂಗೆ ಎಲ್ಲ ಗೊತ್ತಾಗಿದೆ.
ನೀ ಸುಳ್ಳು ಗಿಳ್ಳೂ ಹೇಳದ್ಬ್ಯಾಡ ಮತ್ತೆ. ಪಟ್ ಪಟ್ ಅಂತ ಹೇಳು. ಒಂದೇ ಉಸಿರಿಗೆ ಗಟ್ಟಿಯಾಗಿ ಹೇಳಿದ ಅವ. ಅವನ ಆ ದನಿಗೆ ಬೆದರಿದ ಗುಬ್ಬಚ್ಚಿಯಂತೆ ಬಾಯಿ ಬಿಟ್ಟಳು ಅವಳು. ನಂಗೊತ್ತಿಲ್ಲ ಸಂತು. ಎಂಥದ್ದೋ ಪಾರೆಸ್ಟು ರೆಸಾರ್ಟ ಮಾಡ್ತೇನೆ ಅಂಥಾಳೆ.
ನಿಂಗೆಲ್ಲಿ ಸಿಕ್ಕಿದ್ದು? ನಿನ್ನಪ್ಪ ಎಂಥಕ್ಕೆ ಅವಳು ಹೇಳೀದ್ದಕ್ಕೆಲ್ಲ ಹುಂ ಹಾಕ್ತ? ನೀ ಎಂಥಕ್ಕೆ ಕಾಲೇಜು ಬಿಟ್ಕಂಡು ಕೂತಿದ್ದೆ ಮನೇಲಿ?
ಅದು .ಅದು.
ಸುಳ್ ಹೇಳೀದ್ರೆ ಪೋಲಿಸಿಗೆ ಹೇಳ್ಕೊಡ್ತೆ. ನಂಗೆಲ್ಲ ಗೊತ್ತಾಗದೆ ಅವಳ ಕಣ್ಣಲ್ಲಿ ಗಂಗಾ ಭವಾನಿ. ಆದ್ರು ಸಂತು ಗತ್ತು ಬಿಡಲಿಲ್ಲ
ನಾ ಕಾಲೇಜಿಗೆ ಹೋಗ್ತಿದ್ದಾಗ ಒಬ್ಬವ್ನ ಲವ್ ಮಾಡ್ತಿದ್ದೆ ಸಂತು ಅವನು ಒಳ್ಳೆಯವನ ಹಂಗೆ ನನ್ನ ನಂಬಿಸ್ದ. ಅವ್ನ ನಂಬ್ಕಂಡ ಅವನ ಸಂಗ್ತಿಗೆ ನಾನಿದ್ದ ಪೋಟೋ ವಿಡಿಯೋ ಎಲ್ಲಾ ತಗಂಡು ಅವ್ನು ಈ ಪ್ರಾಚೀನೂ ಸೇರ್ಕಂಡು ನನ್ನ ಅಪ್ಪನ ಹೆದರಿಸ್ದ. ಸಿಡಿ ಬೆಟ್ಟ ದಲ್ಲಿ ಅವರದ್ದು ಎಂಥಾ ಪ್ಲಾನು ನಂಗೊತ್ತಿಲ್ಲೆ. ಫಾರೆಸ್ಟು ರೆಸಾಟರ್ು ಹೇಳ್ತ ಇರ್ತ. ಉಳಿದದ್ದೆಲ್ಲ ಅವೇ ಮಾಡ್ಕೊಳ್ತಿವಿ ಅಂದ. ಬೆಟ್ಟದ ಪರಿಚಯ ಉಳಿಯಕ್ಕೆ ಜಾಗ ಊಟ ತಿಂಡಿ ಅಷ್ಟೇ ನಮ್ದು. ಮತ್ತೆಂತ ಗೊತ್ತಿಲ್ಲೆ ನಮ್ಗೆ. ಅಪ್ಪಂಗೆ ದುಡ್ಡೂ ಕೊಡ್ತೆ ಹೇಳ್ತ. ಆದ್ರೆ ಅಪ್ಪ ದುಡ್ಡು ತಕತ್ನಿಲ್ಲೆ.ದೇವರಾಣೆ. ಅವಳಿಗೆ ಅದಕ್ಕಿಂತ ಜಾಸ್ತಿ ಗೊತ್ತಿಲ್ಲ ಎಂಬುದು ಅವನಿಗೇ ಅನ್ನಿಸಿತು ಯಾಕೋ. ಆದ್ರೂ ಕೇಳಿದ ನನ್ನ ಪೋಟೋ ಊರಿನ ಸುಮಾರು ಹುಡುಗರ ಪೋಟೋ ಎಲ್ಲಾ ತೆಗದು ತೆಗದು ಇಟ್ಕಂಜು ಅದು ಎಂಥಾ ಮಾಡ್ತು ಅದರ?
ನೀ ನೋಡೂಕೆ ಚಂದ ಇದ್ಯಲಿ ಎತ್ತರಕ್ಕೆ ಚಂದಕ್ಕೆ ಇರೋ ಹುಡುಗರ ಪೋಟೋ ವೆಬ್ ಸೈಟಿಗೆ ಹಾಕಿದರೆ ಜಾಸ್ತಿ ಪ್ರಚಾರ ಆಗ್ತು ಅಂತ ಮಾತಾಡ್ತ ಇದ್ದಾಗ ಕೇಳಿದ್ದೆ ಅವನಿಗೂ ಇದು ಯಾವುದರ ಪ್ರಚಾರ ಅರ್ಥವಾಗಲಿಲ್ಲ.
ಸರಿ ನೀ ಹೋಗೂ. ನಾ ಎಲ್ಲ ನೋಡ್ಕತ್ತೆ. ಎಲ್ಲ ಬಲ್ಲವರ ಫೋಸಿನಲ್ಲಿ ಅವಳನ್ನು ಕಳಿಸಿಬಿಟ್ಟ. ಅವನಿಗೂ ಗೊತ್ತಿಲ್ಲ ಏನು ಮಾಡಬೇಕೆಂಬುದು. ಸಿಕ್ಸ್ ಪ್ಯಾಕ್ ಹುಡುಗರ ಪೋಟೋಗಳಿಗೆ ಎಷ್ಟು ವ್ಯಾಲ್ಯೂ ಏನಿದೆ ಪ್ರಚಾರ ಎಂಬುದು ಸಂತುನಂತ ಹಳ್ಳೀ ಹೈದನಿಗೆ ಹೇಗೆ ಗೊತ್ತಗ್ಬೇಕು?
ಅವತ್ತೇ ಅವನಿಗೆ ಸೀತಾರಾಂ ಹೆಗಡೇರಿಂದ ಕರೆ ಹೋಯಿತು. ಇಲೆಕ್ಷನ್ನು ಪ್ರಚಾರದ ವಿಷಯ ಮಾತನಾಡುವುದಿದೆ ಎಂದು ಬರಹೇಳಿ ಹೋದ ಅವರ ಹಿಂಬಾಲಕರಲ್ಲೊಬ್ಬರಾದ ಗೊಂದ. ಅವರಿಂದ ಕರೆಯೆಂದಮೇಲೆ ಹೋಗದಿರುವುದು ಸಾಧ್ಯವೆ? ಸಂತು ಅವತ್ತು ನಾರಣಪ್ಪನಿಗೆ ಬರಲಾಗುವುದಿಲ್ಲವೆಂದು ಗೇಟಿನ ಬಳಿಯಿಂದಲೇ ಕೂಗಿ ಹೇಳಿ ಅದೇ ದಾರಿಯಿಂದ ಹೆಗಡೇರ ಮನೆ ಹಾದಿ ತುಳಿದ. ಉದ್ದ ಕೂದಲಿನ ಆಲ್ಸೇಷಿಯನ್ ನಾಯಿ ನೋಡುತ್ತಲೇ ಖುಷಿಯಾಯಿತು ಅವನಿಗೆ. ನಾಯಿಗಳೆಂದರೆ ಅವನಿಗೆ ಮುದ್ದು ಪ್ರೀತಿ. ನಾರಣಪ್ಪನ ಮನೆಯಿಂದ ತಂದ ಬಿಳಿ ಬಿಳೀ ನಾಯಿ ಮರಿಗಳೆರಡೂ ಸ್ವಲ್ಪ ದೊಡ್ಡವಾಗಿದ್ದವು ಈಗ.. ಬೆಳಗಿನ ಒಂದು ತಾಸು ಅವರ ಜೊತೆಗೇ ಕಳೆಯುತ್ತಿತ್ತು ಅವನದು. ರಾಧೆಯ ಧ್ವನಿ ತಿಂಡಿಗೆಂದು ಕೂಗಿದ ಮೇಲೇ ಅವನು ಒಳ ಬರುತಲ್ತಿದ್ದದು. ಮುಂದಿನ ಜಗುಲಿಯ ಮೇಲೆ ಹೆಗಡೇರು ಬೆಳ್ಳಿ ಕಟ್ಟಿನ ಕನ್ನಡಕ ಧರಿಸಿ ಎಲೆಯಡಿಕೆಯ ಮಡಿಸುತ್ತಿದ್ದರು.
ಬಾ ಸಂತು. ಕುತ್ಗ. ಅವರು ಹಿರಿಯರಷ್ಟೇ ಅಲ್ಲ. ಊರಿಗೆ ಶ್ರೀಮಂತರೂ, ರಾಜಕೀಯ ಶಕ್ತಿಯೂ ಹೌದು. ಆದರೂ ಸರಳ ಜೀವಿಗಳು, ಪ್ರೀತಿ ವಿಶ್ವಾಸದ ನುಡಿ ಅವರ್ದು ಎಲ್ಲರ ಜೊತೆಗೂ. ಸೋಪಾದಲ್ಲಿ ಬದಿಗೆ ಕುಳಿತಂತೆ ಒಳಮನೆಯಿಂದ ಚಾ ಕಪ್ಪು ಬಂತು. ಇಬ್ಬರಿಗೂ. ಅವರ ಪ್ರಶ್ನೆ ಗಳಿಗೆ ಮೊದಲು ಅನುಮಾನ ಮಾಡಿದರೂ ಸಿಡಿ ಬೆಟ್ಟ ಉಳಿಸೋರು ಅವ್ರೊಬ್ಬರೇ ಅನ್ನಿಸಿತು ಅವನಿಗೆ. ಸಂತು ಕೂಡ ತನ್ನ ಅನುಮಾನಗಳ ಬಿಚ್ಚಿಟ್ಟುಕೊಂಡ. ಅವರಾಗೇ ಕೇಳಿದ್ದು ಅವನಿಗೆ ಸ್ವಲ್ಪ ಧೈರ್ಯ ಬಂದಿತ್ತು. ಅವನಿಗೆ ತಿಳಿದಷ್ಟನ್ನೂ ಹೇಳೀದ ಮೇಲೆ ಅದೇನೋ ನಮ್ಮೂರ ಹೈಕಳ ಪೋಟೋ ಹಾಕ್ಕೊಂಡು ವೆಬ್ಸೈಟು ಮಾಡ್ತಾಳಂತೆ ಆ ಡಾಕ್ಟರಣಿ ಅಂತ ಹೇಳುವಾಗ ಅವನಿಗೆ ಮುಜುಗರವಾಗಿತ್ತು. ಅಷ್ಟು ಹಿರೇಕರೆದ್ರಿಗೆ ಹಂಗೆಲ್ಲ ಮಾತಾಡೋ ಅಭ್ಯಾಸ ಇದ್ದವನಲ್ಲ ಅವ. ಅಲ್ಲಿಂದ ವಾಪಸ್ಸು ಹೊರಡುವಾಗ ಹೆಗಡೇರ ಮನೆ ನಾಯಿನು ಅವನ ಪ್ರೆಂಡಾಗಿತ್ತು. ಸಂತು ನಿರಾಳವಾಗಿದ್ದ. ಸುಮಾರು ದಿನದ ಮಣಭಾರ ಇಳಿದಂತೆ ಮನೆಗೆ ಬಂದವನೇ ಅಪರೂಪಕ್ಕೆ ಆಯೀ ಇವತ್ತು ತಿನ್ನೂಕೆ ಎಂಥಾ ಮಾಡ್ತೆ? ರಾಶೀ ದಿನಾತು ಬೋಂಡಾ ಮಾಡಿಕೊಡೇ ಅದು ರಾಧೇಯ ಸೆರಗಿನ ಮಗುವಿನ ದನಿ.
ರಾಧೇ ಅವತ್ತೇ ಸಂಜೆ ಕೃಷ್ಣನ ಮಂಟಪದಲ್ಲಿ ಮತ್ತೆರಡು ತುಪ್ಪದ ದೀಪ ಹಚ್ಚಿಟ್ಟಳು.
ಇಲೆಕ್ಷನ್ನಿನ ಮುನ್ನಾದಿನ.
ನಾರಣಪ್ಪ ರಾಧೆ ಮನೆಯಂಗಳಕ್ಕೆ ಕಾಲಿಟ್ಟಿದ್ದ. ಸಂತು ರಾಧೇ ಇಬ್ಬರೂ ನಾರಣಪ್ಪನ ಬರಮಾಡಿಕೊಂಡರು. ಅವನ ಮುಖದಲ್ಲಿ ಎಂದೂ ಕಾಣದ ಗೆಲುವಿತ್ತು. ಸಂತು ನಿನ್ನಿಂದಾಗಿ ನಮ್ಮ ಸಿಡಿ ಬೆಟ್ಟ ಹಾಗೆ ಉಳಕೊಂಡ್ತು ನೋಡು. ನಮ್ಮ ಹೆಗಡೆಯವರು ಅವರ ಎಲ್ಲಾ ಇನ್ ಪ್ಲುಯೆನ್ಸ್ ಉಪಯೋಗ್ಸಿ ಆ ಹಾಳಾದವ್ರ ಓಡ್ಸಿದ್ರು. ನೋಡು ಇಂತ ಸಂದರ್ಭದಲ್ಲಿ ಜಾತಿ ಗೀತಿ ಮುಖ್ಯ ಅಲ್ಲ. ನೀತಿ ಮಾತ್ರ ಮುಖ್ಯ ಅಂತ ನಂಗೆ ತಿಳಿತೂ ನೋಡು. ಈ ಸುಡುಗಾಡು ಜನ ದುಡ್ ಮಾಡೂದಕ್ಕೆ ಎಂಥೆಂಥ ಮಾಡ್ತಾರೆ ಮಾರಾಯ! ಅವರು ನಮ್ಮ ಬೇರೆ ದೇಶದ ಜನಾನ ಕರ್ಕ ಬಂದು ನಮೂರ ಹೆಣ್ಮಕ್ಕಳ ಮಾತ್ರ ಅಲ್ಲ ಗಂಡು ಮಕ್ಕಳನ್ನು ಹಾಳ್ಮಡ್ತಿದ್ರು ಅವ್ರು. ಆ ರೆಸಾರ್ಟ ಮಾಡೂ ಜನ ನಂಬೂದಲ್ಲ. ನಂಗೆ ಅವ್ರು ಬರೀ ಸುಳ್ಳೇ ಹೇಳಿದ್ದು..ಎಷ್ಟು ಹೆದರ್ಸದ ಮಾರಾಯಾ. ಅವ್ರತ್ರ ಎಂಥಾ ಪರ್ಮಿಷನ್ನು ಇಲ್ಲೆ ಎಂಥಾ ಸುಡುಗಾಡು ಇಲ್ಲೆ. ಅವರ ವೆಬ್ಬು ಅದೆಲ್ಲಾ ಬಂದು ಮಾಡಿದ್ರು ನೋಡು ಹೆಗಡೇರು. ಪೋಟೋ ಗೀಟೋ ಎಲ್ಲಾ ಬಿಟ್ಟಿಕ್ ಓಡಿದ್ದ ಅವ್ರು! ಆ ಡಾಕ್ಟರಣಿ ಅವಳು ನೋಡೂವರೆಗೆ ಡಾಕ್ಟರಣಿಯೇ ಅಲ್ಲ ಎಂಥೂ ಅಲ್ಲ. ಎಲ್ಲಾ ಸುಳ್ಳೇ. ಮೊನ್ನೆ ಹೆಗಡೇರು ನಾನು ಪ್ಲಾನ್ ಮಾಡಿ ಪೋಲಿಸ್ನೋರು ಕರೆಸುವರೆಗೆ ಎಲ್ಲಾ ಹೊರಗೆಬಿತ್ತು ಸಂತು. ನಿನ್ನ ಧೈರ್ಯಕ್ಕೆ ಮೆಚ್ಚಿದೆ ಮಾರಾಯ. ಇಲ್ದೆ ಇದ್ರೆ ನಾ ತಲೆ ಮೇಲೆ ಕೈ ಹೊತ್ಗಂಡು ಬೆಟ್ಟ ಅವ್ಕೆ ಕೊಟ್ಟಂಗ ಆಗ್ತಿತ್ತು. ನಾಳೆ ದನ ಮೇಯೂಲು ಜಾಗ ಇರ್ತಿತ್ತಿಲ್ಲೆ. ಎಂಥ ಕೆಲಸ ಮಾಡ್ಬಿಡ್ತಿದ್ದೆ ನಾನು! ನಮ್ಮ ಕೂಸಿನ ಹೆಸರು ಹೇಳ್ದೆ ಇದ್ರೆ ನಾ ಒಪ್ಪು ಮನ್ಷ ಅಲ್ಲಾಗಿತ್ತು ಅನ್ನು. ಅದೊಂದೆ ಹೆದ್ರಿಕೆ ನಂಗೆ. ರಾಧೇ.. ನೀ ಚಿಂತೆ ಮಾಡ್ಬೇಡ್ವೆ. ನಿನ್ನ ಮಗ ಇಂಗ್ಲೀಷ್ ಕಲೀಲಿಲ್ಲ ಅಂತ. ಚಿನ್ನ ಚಿನ್ನದಂತ ಗುಣ ಅವಂದು..
ಸಂತು ಹೊಸದಾಗಿ ಆಯಿ ಕೊಡಿಸಿದ್ದ ಮೊಬೈಲ್ ನಲ್ಲಿ ಆಪ್ಷನ್ಸ್ ಹುಡುಕುತ್ತಿದ್ದ….
 

‍ಲೇಖಕರು G

9 July, 2014

3 Comments

  1. Kiran

    A very refreshing read, liked the wordings like “ದೂರ ದೂರದ ವರೆಗೂ ಹಸಿರು ಹಸಿರು ಹಸಿರು. ಅಲ್ಲಿ ನಿಂತು ಉಸಿರಾಡಿದರೆ ರಕ್ತವೂ ಹಸಿರಾಗಬೇಕು”! WOW.

  2. Priya Bhat

    Thank u very much Kiran… and thanx to “AVADHI”

  3. Kavya Bhat

    Tumba tumba chennagide kathe 🙂

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading