ನೀನಾಸಂ ಮರುತಿರುಗಾಟದ ನಾಟಕ ‘ನೀರಿನ ನಿಲುತಾಣ’ದ ಬಗ್ಗೆ ಸಾಕಷ್ಟು ಚರ್ಚೆ ನಡೆದಿದೆ. ನೀವೆಲ್ಲಾ ಓದಿದ್ದೀರಿ.
ಈಗ ಅದು ಕೊನೆ ಸುತ್ತಿನಲ್ಲಿದೆ.
ಎಚ್ ಸುಂದರ ರಾವ್ ಅವರ ಬರಹಕ್ಕೆ ಜಿ ಎನ್ ಅಶೋಕವರ್ಧನ ಅವರ ಪ್ರತಿಕ್ರಿಯೆ ಇಲ್ಲಿದೆ.
ಬೀಸು ಮಾತುಗಳ ನಡುವೆ ಬರುವ `ಎಲ್ಲೋ ಹುಚ್ಚು’, `ಮೆಂಟಲ್ಲೂ’, (ಮಾನಸಿಕ ರೋಗಿಗಳ ಆಸ್ಪತ್ರೆಯ ಬಸ್ಸುದ್ದೇಶಿಸಿ)`- ನಂಬರ್ ಬಸ್ಸಿಗೆ ಹಾಕಿ’ ಇತ್ಯಾದಿಗಳ ಧ್ವನಿ ಒಂದೇ – ತಿರಸ್ಕಾರ. ಹಾಗೇ ನಾಟಕದ ಕುರಿತಂತೆ ಸುಂದರರಾಯರ ಅಭಿಪ್ರಾಯದ ಸಮರ್ಥ ಅಭಿವ್ಯಕ್ತಿ ಎಂದಷ್ಟೇ ನಾನು `ನಿಮಾನ್ಸ್ಗೆ ಹಾಕಿ’ ಬಳಸಿಕೊಂಡೆ. ನನ್ನ ಟಿಪ್ಪಣಿಯನ್ನು ಹಿಂಬಾಲಿಸಿದ ರಾಯರ ಬರಹದಲ್ಲೇ ಬಂದ `ಕುರ್ಚಿಯನ್ನು ಒದ್ದು, ಎದ್ದು ಹೋಗಬೇಕೆನಿಸಿತು’, ವೆಂಕಟ್ರಮಣ ಉಪಾಧ್ಯರ `ಇನ್ನು ಮುಂದೆ ನಾಟಕ ನೋಡುವುದಿಲ್ಲ’, ಮುರಳೀಧರ ಉಪಾಧ್ಯಾಯರ `ನೀನಾಸಂ ತಲೆನೋವು ತರಿಸಿತು’ ಇತ್ಯಾದಿಗಳ ಧ್ವನಿಯೂ ಅದೇ. ಇದನ್ನು ದೇವುಹನೆಹಳ್ಳಿ ಸ್ಪಷ್ಟ ಎರಡು ವ್ಯಕ್ತಿಗಳ ದೈಹಿಕ ಸಂಬಂಧಗಳ ಕುರಿತಾಡಿದ ಮಾತಿನೊಂದಿಗೆ ಹೋಲಿಸಬಾರದು. ಶಿವರಾಮ ಕಾರಂತರು ಆತ್ಮಕಥೆಯನ್ನು `ಹುಚ್ಚು ಮನಸ್ಸಿನ ಹತ್ತು ಮುಖಗಳು’ ಎಂದೇ ಬಣ್ಣಿಸಿಕೊಂಡದ್ದು, ಒಳ್ಳೆಯದರ ಗೀಳಿರುವವರು `ನನಗೆ ಹುಚ್ಚು’ ಎಂದು ಹೇಳಿಕೊಳ್ಳುವುದೆಲ್ಲಾ ವೈಚಾರಿಕ ನೆಲೆಗಟ್ಟಿನಲ್ಲಿ ಚಿಂತನೆ ವಿಕಸಿಸಲೆಂದೇ ಹೊರತು ಶಬ್ದಾರ್ಥ ವಿಸ್ತರಣೆ ಬಯಸಿ ಅಲ್ಲ.
ನನ್ನ ಬರಹವಾದರೋ ನನ್ನ ವೈಯಕ್ತಿಕ ಅಭಿಪ್ರಾಯವನ್ನಷ್ಟೇ ಬಿಂಬಿಸುತ್ತದೆ. ನಾನು ಸ್ಪಷ್ಟವಾಗಿ ನನ್ನ ಒಂದು ನೀರಿನ ನಿಲುತಾಣವಾದ ಅಡ್ಡಹೊಳೆಯ ಅನುಭವವನ್ನು ವಿಸ್ತರಿಸಿಯೇ ನಾಟಕದ ಕುರಿತು ಅಭಿಪ್ರಾಯ ಮಂಡಿಸಿದೆ. (ಈ ನಿಲುತಾಣ ರಾಯಾರಿಗೂ ಅಪರಿಚಿತವೇನಲ್ಲ)ಭಿನ್ನಾಭಿಪ್ರಾಯಗಳೂ ಇವೆ ಎನ್ನುವುದಕ್ಕೇ ಮಿತ್ರರಿಬ್ಬರ ಉದ್ಗಾರ ಬಳಸಿದೆ. ನನ್ನ ಮಾತುಗಳು ನಾಟಕದ ಸಮರ್ಥನೆಯೇ ಆದರೂ ಪ್ರೇಕ್ಷಕರೆಂಬ ಸಮುದಾಯವನ್ನು ವಹಿಸಿಕೊಂಡು ಬರೆದದ್ದಲ್ಲ ಎನ್ನುವುದನ್ನು ಗಮನಿಸಬೇಕು. ಹಿಂದೊಬ್ಬ ಉಡುಪಿಯ ಪತ್ರಿಕಾ ವಿಮರ್ಶಕ ಪ್ರದರ್ಶನ ಒಂದರ ಕುರಿತು (ನಾಟಕದ ಹೆಸರು ಮರೆತಿದ್ದೇನೆ. ನಿರ್ದೇಶಕ – ರಘುನಂದನ್) ಬರೆಯುತ್ತಾ `ಮುಂದೆ ನೀನಾಸಂ ನಾಟಕಗಳನ್ನೇ ಉಡುಪಿ ಬಹಿಷ್ಕರಿಸಬೇಕು’ ಎಂದೇ ಕರೆಕೊಟ್ಟದ್ದು ನೆನಪಾಗುತ್ತದೆ. ಗೆಳೆಯ ಸುಂದರರಾಯರದು ಖಂಡಿತವಾಗಿಯೂ ಆ ಧೋರಣೆಯಲ್ಲ ಎಂದು ಸ್ಫುಟಪಡಿಸಲು ನಾನು ಚರ್ಚೆ ಬೆಳೆಸಿದೆ. ಇಲ್ಲಿಗೆ ನಾನೂ ಮುಗಿಸಿದ್ದೇನೆ.






ಮಾನ್ಯರೆ, ನೀರಿನ ನಿಲುಗಡೆ ಕುರಿತ ನಡೆಯುತ್ತಿರುವ ಬರಹಗಳನ್ನು ಗಮನಿಸಿದ್ದೇನೆ.
ಮೊದಲ ನೋಟಕ್ಕೆ ಅರ್ಥವಾಗದಿರುವುದನ್ನು ಒದ್ದು ಹೋಗುವ ಬದಲು ಹೊಸ ಬಗೆಯನ್ನು ಅರ್ಥಮಾಡಿಕೊಳ್ಳುವ ಪ್ರಯತ್ನ ನಮ್ಮ ಕಡೆಯಿಂದಲೂ ಆಗುವುದಿದೆ. ಅಂದಷ್ಟೇ ಹೇಳಬಹುದು.
ನೀರಿನಿಂದ ಉಡುಪು ಒದ್ದೆಯಾಗುವುದೆಂದು ಉಡುಪನ್ನೇ ಬಹಿಷ್ಕರಿಸಿದರೆ ಸಹ ಪ್ರೇಕ್ಷಕರ ಗತಿ ಏನು!
ಪ್ರೀತಿಯಿಂದ
ಪಂಡಿತಾರಾಧ್ಯ