ನಿಸಾರ್ ಸರ್ : ಇವರು ‘ಸೀಮಾತೀತ ಸಿರಿವಂತ’

ನಿಮ್ಮ ಮುದ್ರಣಾಲಯ ನೋಡಲೇಬೇಕು ಒಮ್ಮೆ ಬಂದೇ ಬರುತ್ತೇನೆ ಎಂದಿದ್ದರು…

‘ನಿತ್ಯೋತ್ಸವ’ದ ಮೂಲಕ ಕನ್ನಡಿಗರ ಮನದಲ್ಲಿ ಹಚ್ಚಹಸಿರಾಗಿದ್ದ ಹಿರಿಯ ಕವಿ ಕೆ.ಎಸ್. ನಿಸಾರ್ ಅಹಮದ್ ಅವರು ಆಗಾಗ ನಮ್ಮ ಮುದ್ರಣದ ಪುಸ್ತಕಗಳನ್ನು ಬಿಡುಗಡೆ ಮಾಡಿ ಮೆಚ್ಚುಗೆ ಸೂಚಿಸುತ್ತಲೇ ಇದ್ದರು.

ಒಂದು ದಿನ ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆಯ ಛಾಯಾಪತಿ ಅವರು ಒಂದು CD ಹಿಡಿದು ನಮ್ಮ ಮುದ್ರಣಾಲಯಕ್ಕೆ ಬಂದರು. ನೋಡಪ್ಪಾ, ನಿಸಾರ್ ಅವರ ‘ಸೀಮಾತೀತನ ಸಿರಿವಂತ ಸುಗ್ಗಿ’ ಪುಸ್ತಕ ಇದು, ಚೆನ್ನಾಗಿ ಮುದ್ರಣವಾಗಬೇಕು, ನಾನು CD ಓಪನ್ ಮಾಡಿ ನೋಡುವುದರಲ್ಲಿದ್ದೆ ಅಷ್ಟರಲ್ಲಿ ಇರು ಅವರೇ ಮಾತನಾಡಬೇಕಂತೆ ಎಂದು ನಿಸಾರ್ ಅವರಿಗೆ ಕರೆ ಮಾಡಿ ನನ್ನ ಕೈಗೆ ಫೋನ್ ಕೊಟ್ಟೇ ಬಿಟ್ಟರು..

ನಿಸಾರ್ ಅವರು “ನೋಡಪ್ಪಾ, ಎಲ್ಲರ ಪುಸ್ತಕಗಳನ್ನು ಎಷ್ಟು ಚೆನ್ನಾಗಿ ಮುದ್ರಿಸುತ್ತೀರಿ ಅದೇ ರೀತಿ ನನ್ನ ಪುಸ್ತಕ ಕೂಡ ಚೆನ್ನಾಗಿ ಮುದ್ರಿಸಿ ಕೊಡಪ್ಪ. ಮೈಸೂರು ದಸರಾ ಉದ್ಘಾಟನೆಯಲ್ಲಿ ಮುಖ್ಯಮಂತ್ರಿಗಳು ಹಾಗೂ ಇತರ ಗಣ್ಯರ ಸಮ್ಮುಖದಲ್ಲಿ ಈ ಪುಸ್ತಕ ಬಿಡುಗಡೆ ಮಾಡಲೇಬೇಕು ಆದ್ದರಿಂದ ಆದಷ್ಟು ಬೇಗ ಮುದ್ರಿಸಿ ಕೊಡು” ಎಂದರು…

ಪುಸ್ತಕ ಮುದ್ರಣವಾದ ಮೇಲೆ ಛಾಯಾಪತಿ ಅವರೇ ಬಂದು ಹತ್ತು ಪುಸ್ತಕಗಳನ್ನು ತೆಗೆದುಕೊಂಡು ಅವರ ಮನೆಗೆ ಹೋದರು… ಅವರ ಮನೆಯಿಂದಲೇ ಕರೆ ಮಾಡಿದ ನಿಸಾರ್ ಅವರು, ಎಲ್ಲೀದಿಯಪ್ಪಾ ಅರ್ಜೆಂಟ್ ಆಗಿ ನಮ್ಮ ಮನೆಗೆ ಬಾ…. ನೀನು ಬರುವವರೆಗೂ ಛಾಯಾಪತಿ ಅವರಿಗೆ ನಮ್ಮ ಮನೆಯಿಂದ ಬಿಡುಗಡೆಯಿಲ್ಲ ಎಂದರು.

ನನಗೆ ತುಸು ಗಾಬರಿಯಾಗಿ , ಯಾಕೆ ಸರ್ ಏನಾಯ್ತು ಏನಾದ್ರು ತಪ್ಪಾಗಿದೆಯಾ..? ಎಂದೆ. ಎಲ್ಲಾ ಫೋನ್ ನಲ್ಲಿ ಹೇಳೋಕ್ಕಾಗಲ್ಲ ಬೇಗ ಬಾ ಎಂದು ಫೋನ್ ಇಟ್ಟರು…

ನಾನು ಗಾಬರಿಯಲ್ಲಿ ಛಾಯಾಪತಿಯವರಿಗೆ ಮೂರು ನಾಲ್ಕು ಬಾರಿ ಮೊಬೈಲ್ ಗೆ ಕರೆ ಮಾಡಿದೆ. ಅವರು ಕರೆ ಸ್ವೀಕರಿಸುತ್ತಿಲ್ಲ..! ಇನ್ನಷ್ಟು ಗಾಬರಿಯಾಗಿ ನಮ್ಮ ಹುಡುಗ ಸುಜನ್ ಜೊತೆ ಅವರ ಮನೆಗೆ ಅವಸರದಿಂದಲೇ ಹೋದೆ. ಅಲ್ಲಿ ಎಲ್ಲಾ ನಗುನಗುತ್ತಲೇ ಮಾತನಾಡುತ್ತಾ ಕುಳಿತಿದ್ದನ್ನು ನೋಡಿ ಸ್ವಲ್ಪ ಸಮಾಧಾನದಿಂದಲೇ ಒಳಗೆ ಹೋದೆ.

ಛಾಯಾಪತಿ ಅವರು ನನ್ನನ್ನು ಪರಿಚಯಿಸಿದರು. ಆಗ ನಿಸಾರ್ ಅವರು “ಪುಸ್ತಕ ಬಹಳ ಚೆನ್ನಾಗಿ ಮುದ್ರಣವಾಗಿದೆ, ಆ ಖುಷಿಯನ್ನು ನಿನ್ನ ಜೊತೆ ಹಂಚಿಕೊಳ್ಳೋಕೆ ತುರ್ತಾಗಿ ನಿನ್ನ ಕರೆಸಿದ್ದು ” ಎಂದರು. ನಾನು ತಕ್ಷಣ ಸರ್ ಪುಸ್ತಕದ ಮುದ್ರಣದ ಬಗ್ಗೆ “ಒಂದು ಬುಕ್ ನಲ್ಲಿ ಬರೆದು ಸಹಿ ಹಾಕಿ ಕೊಡಿ” ಎಂದು ಕೇಳಿಕೊಳ್ಳುತ್ತಾ ನಮ್ಮದು ಚಿತ್ರದುರ್ಗ, ನಾನು ಸಹ್ಯಾದ್ರಿ ಕಾಲೇಜಿನಲ್ಲಿ ಓದಿದ್ದು ಎಂದ ಕೂಡಲೇ, ಅವರಿಗೆ ನನ್ನ ಮೇಲೆ ಇನ್ನಷ್ಟು ಅಕ್ಕರೆ ಉಕ್ಕಿಬಂದು ಕರೆದು ಪಕ್ಕದಲ್ಲಿ ಕೂಡಿಸಿಕೊಂಡು, ಮುದ್ರಣಾಲಯದವರು ಬರುತ್ತಾರೆ ಅಂದರೆ ತುಂಬಾ ವಯಸ್ಸು ಆಗಿರುವವರು ಅಂದುಕೊಂಡೆ. ಇಷ್ಟು ಉತ್ಸಾಹಿ ಯುವಕ ಅಂತ ತಿಳಿದಿರಲಿಲ್ಲ ..” ನಿಮ್ಮಂತ ಯುವಕರು ಇನ್ನಷ್ಟು ಕಷ್ಟಪಟ್ಟು ಶ್ರದ್ಧೆಯಿಂದ ಕೆಲಸ ಮಾಡಿ ಎತ್ತರಕ್ಕೆ ಬೆಳೆಯಬೇಕು ” ಎಂದು ಹಾರೈಸಿದರು.

ಸರ್ ನನ್ನದು ಒಂದು ಬಯಕೆಯಿದೆ ಎಂದೆ. ಕಿರುನಗೆಯಲ್ಲಿ ಏನಪ್ಪಾ ಎಂದರು. ಆಗ ನಾನು, ‘ಸರ್ ಒಮ್ಮೆ ನೀವು ನಮ್ಮ ಮುದ್ರಣಾಲಯಕ್ಕೆ ಬರಬೇಕು’ ಎಂದು ಕೋರಿಕೊಂಡೆ. ತಕ್ಷಣ ಅವರು- ‘ ನನಗೂ ನೀನು ಚಿತ್ರದುರ್ಗದಿಂದ ಬಂದು ಮುದ್ರಣ ಕ್ಷೇತ್ರದಲ್ಲಿ ತೀವ್ರ ಪೈಪೋಟಿ ನಡೆಯುವ ಬೆಂಗಳೂರು ಎಂಬ ಮಾಯಾನಗರಿಯಲ್ಲಿ ಹೇಗೆ ಮುದ್ರಣಾಲಯ ಕಟ್ಟಿರಬಹುದು ಎಂದು ನೋಡಬೇಕು ಅನಿಸುತ್ತಿದೆ. ಮೈಸೂರು ದಸರಾ ಮುಗಿದ ಮೇಲೆ ಒಮ್ಮೆ ಕರೆ ಮಾಡಿ ಬಂದು ಕರೆದುಕೊಂಡು ಹೋಗು ಖಂಡಿತ ಬರುತ್ತೇನೆ ‘ ಎಂದರು.

ನಂತರ ಒತ್ತಡದ ಕೆಲಸಗಳಲ್ಲಿ ಅವರನ್ನು ಮುದ್ರಣಾಲಯಕ್ಕೆ ಕರೆತರಲು ಆಗಲೇ ಇಲ್ಲ.. ಮುಂದೆ ಎರಡು ಮೂರು ಕಾರ್ಯಕ್ರಮಗಳಲ್ಲಿ ಸಿಕ್ಕು ವಿಚಾರಿಸುತ್ತಲೇ ಇದ್ದರು…. ನಮ್ಮ ಮುದ್ರಣಾಲಯಕ್ಕೆ ಕನ್ನಡ ಪುಸ್ತಕ ಪ್ರಾಧಿಕಾರದ ಮೊಟ್ಟಮೊದಲ ‘ಮುದ್ರಣ ಸೊಗಸು’ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರೇ ಪ್ರಶಸ್ತಿ ಪ್ರದಾನ ಮಾಡಿ, ವೇದಿಕೆ ಮೇಲಿನ ಅತಿಥಿಗಳಿಗೆ ‘ನಮ್ಮ ಸಹ್ಯಾದ್ರಿ ಕಾಲೇಜ್ ನಲ್ಲಿ ಓದಿದ ಹುಡುಗ ‘ ಎಂದು ಬೆನ್ನು ತಟ್ಟುತ್ತಾ ಹೆಮ್ಮೆಯಿಂದ ಪರಿಚಯಿಸಿದರು. ಅವರು ಯಾವಾಗ ಸಿಕ್ಕರೂ ಭುಜದ ಮೇಲೆ ಕೈ ಹಾಕಿ ಬೆನ್ನು ಸವರುತ್ತಾ ಎರಡು ಪ್ರೋತ್ಸಾಹದಾಯಕ ಮಾತಾಡಿಯೇ ಮುಂದಕ್ಕೆ ಹೋಗುತ್ತಿದ್ದರು.

ಸಮನ್ವಯ ಮನೋಧರ್ಮದ, ಸಮಾಧಾನದ, ಸುಸಂಸ್ಕೃತ ಚೇತನ, ಹಿರಿಯ-ಕಿರಿಯ ಎಂಬ ಭೇದವಿಲ್ಲದೆ ಸದಾ ಪ್ರೇರಕರಾಗಿ ಪ್ರೋತ್ಸಾಹ ನೀಡುತ್ತಿದ್ದ ಹಿರಿಯ ಕವಿ ನಿಸಾರ್ ಅಹಮದ್ ಅವರನ್ನು ನಮ್ಮ ಮುದ್ರಣಾಲಯಕ್ಕೆ ಕರೆತರಬೇಕೆಂಬ ಆಸೆ ಕೊನೆಗೂ ಈಡೇರಲೇ ಇಲ್ಲ .

‍ಲೇಖಕರು avadhi

May 4, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: