
ಡಾ ನಿರ್ಮಲಾ ಬಟ್ಟಲ
ಗ್ರಾಮೀಣ ಬದುಕಿನ ಜೀವನ ಸಂಘರ್ಷಗಳನ್ನು ತೆರೆದಿಡುವ ಕಥಾ ಸಂಕಲನ ‘ಸುಳಿ’ ಶ್ರೀಮತಿ ಪಾರ್ವತಿ ಪಿಟಗಿ ನಾಡಿನ ಹೆಸರಾಂತ ಲೇಖಕಿ, ಕಾದಂಬರಿ ಕಾರ್ತಿ, ಕಥೆಗಾರ್ತಿಯಾಗಿ ಈಗಾಗಲೇ ತಮ್ಮ ೬ ಕಾದಂಬರಿ ೩ ಲೇಖನ ಸಂಗ್ರಹ ಮತ್ತು ೩ ಕಥಾ ಸಂಕಲನವನ್ನು ಹೊರತರುವ ಮೂಲಕ ಕನ್ನಡ ಸೃಜನಶೀಲ ಸಾಹಿತ್ಯ ಭಂಡಾರವನ್ನು ಶ್ರೀಮಂತಗೊಳಿಸಿದ್ದಾರೆ. ಈಗ ಮತ್ತೊಂದು ಕೃತಿಯನ್ನು ಸಹಿತ್ಯಾಸಕ್ತರ ಓದಿಗೆ ನೀಡುತ್ತಿದ್ದಾರೆ. ಅದೇ ‘ಸುಳಿ’ ಎನ್ನುವ ಕಥಾಸಂಕಲನ.
ಸುಳಿ ಎನ್ನುವ ವಿಶಿಷ್ಟ ಶೀರ್ಷಿಕೆಯ ಕಥಾ ಸಂಕಲನದಲ್ಲಿ ವಿಭಿನ್ನ ಕಥಾವಸ್ತುವುಳ್ಳ ೨೫ ಕಥೆಗಳಿವೆ. ಇವು ಈಗಾಗಲೇ ನಾಡಿನ ಹೆಸರಾಂತ ಪತ್ರಿಕೆಗಳಲ್ಲಿ ಪ್ರಕಟಗೊಂಡು ಓದುಗರ ಮೆಚ್ಚುಗೆಗೆ ಪಾತ್ರವಾಗಿವೆ. ಮತ್ತು ಹಲವಾರು ಕಥಾ ಸ್ಪರ್ಧೆಗಳಲ್ಲಿ ಬಹುಮಾನವನ್ನು ಪಡೆದಿರುತ್ತವೆ ಎನ್ನುವುದು ಹೆಮ್ಮೆಯ ಸಂಗತಿ.
ಗ್ರಾಮೀಣ ಬದುಕು ಮತ್ತು ಭಾಷೆಯನ್ನು ತಮ್ಮ ಕಥೆಗಳಲ್ಲಿ ಕಟ್ಟಿಕೊಡುವಲ್ಲಿ ಕಥೆಗಾರ್ತಿ ಸಿದ್ಧಹಸ್ತರು ಎನ್ನುವುದು ಅವರ ೨೫ ಕಥೆಗಳಿಂದ ತಿಳಿದುಬರುತ್ತದೆ. ರಾಮದುರ್ಗ ಭಾಗದ ಕನ್ನಡ ಉಪಭಾಷಾ ಶೈಲಿಯನ್ನು ನಾಡಿನಾದ್ಯಂತ ಓದುಗರಿಗೆ ಪರಿಚಯಿಸುತ್ತಾರೆ. ಕಥೆಯ ಪಾತ್ರಗಳು ಇಲ್ಲಿಯ ಭಾಷೆಯ ಸೊಗಡನ್ನು ಹೊಂದಿರುವುದರಿಂದ ಕಥೆಯ ಪಾತ್ರಗಳಲ್ಲಿ ಜೀವಂತಿಕೆ ಎದ್ದು ಕಾಣುತ್ತದೆ.
ಸಹಜವಾಗಿ ಪಾತ್ರ ಸನ್ನೀವೇಶಗಳು ಓದುಗನ ಸ್ಮೃತಿ ಪಟಲದ ಮೇಲೆ ಹಾದು ಹೋಗುವುದರ ಮೂಲಕ ಕಥೆಗಳು ಓದುಗನ ಮನಸಲ್ಲಿ ನೆಲೆಗೊಳ್ಳುವಲ್ಲಿ ಯಶಸ್ವಿಯಗುತ್ತವೆ. ಬಿಗಿಯಾದ ನಿರೂಪಣಾ ಶೈಲಿಯಿಂದ ಕಥೆಗಳು ಓದುಗನಲ್ಲಿ ಮುಂದೆ ಏನು ಎನ್ನುವ ಕುತುಹಲವನ್ನು ಹುಟ್ಟಿಸಿ ಓದಿಸಿಕೊಂಡು ಹೋಗುತ್ತವೆ. ಕಥೆಗಳಲ್ಲಿ ಒಮ್ಮೊಮ್ಮೆ ಕಥೆಗಾರ್ತಿ ತಾನೇ ಪಾತ್ರವಾಗಿ ಕಥೆಯನ್ನು ನಿರೂಪಿಸಿದರೆ, ಒಮ್ಮೊಮ್ಮೆ ಪಾತ್ರಗಳ ಮೂಲಕ ನಿರೂಪಿಸುವಲ್ಲಿ ಯಶಸ್ವಿಯಾಗುತ್ತಾಳೆ. ಕಥಾವಸ್ತು ಗ್ರಾಮೀಣ ಬದುಕನ್ನು ವಿಭಿನ್ನ ಸ್ಥರಗಳಲ್ಲಿ ಕಟ್ಟಿಕೊಡುತ್ತದೆ.

ಗ್ರಾಮೀಣ ಬದುಕಿನ ಮೇಲೆ ಆಗಿರುವ ಆಧುನಿಕ ಪ್ರಭಾವ ಮಾನವನ ದುರಾಸೆ ಅದರಿಂದಾಗುವ ಪರಿಸರನಾಶದಂತಹ ಪ್ರಚಲಿತವಾದ ಸಮಸ್ಯೆಗಳ ಸುತ್ತ ತೆರೆದುಕೊಳ್ಳುವ ಕಥೆ “ಸುಳಿ.” ಮರಳು ಮಾಫಿಯಾದ ಮೇಲೆ ಬೆಳಕು ಚೆಲ್ಲುವ ಕಥೆ. ದುರಾಸೆ ಮನುಷ್ಯನನ್ನು ಯಾವ ರೀತಿ ಅಂತ್ಯಗೊಳಿಸುತ್ತದೆ. ಎನ್ನುವುದನ್ನು ಅತ್ಯಂತ ಮಾರ್ಮಿಕವಾಗಿ ತೆರೆದಿಡುತ್ತಾರೆ. ತವರಿನಲ್ಲಿಯ ನೈಸರ್ಗಿಕ ಪರಿಸರ ಹಾಳಾಗಿರುವುದನ್ನು ಕಂಡು ಮರುಗುವ ಕಥೆಗಾರ್ತಿಯಲ್ಲಿ ಪರಿಸರ ಕಾಳಜಿ ಎದ್ದು ಕಾಣುತ್ತದೆ.
‘ಹಾರಾಡಿ ಬಂದಾಗ ತೂರಾಡಿ ನೆನಪ..’ ಎನ್ನುವ ಕಥೆಯಲ್ಲಿ ಬೀನಾ ಜಮುನಾ ಎನ್ನುವ ಗಿಳಿಗಳು ಕಥೆಯ ಪಾತ್ರಗಳಾಗಿ ಕಥೆಯನ್ನು ನಿರೂಪಿಸುವ ಶೈಲಿ ವಿಭಿನ್ನವಾಗಿದೆ. ಪರಿಸರದಲ್ಲಿ ಆದ ಬದಲಾವಣೆಗಳು ಕಡಿದ ಮರ ಬತ್ತಿದ ಹೊಳೆ, ಜೀವ ಸಂಕುಲದ ತಲ್ಲಣಕ್ಕೆ ಕಾರಣವಾಗುವ ಅಂಶಗಳನ್ನು ಮನೋಜ್ಞವಾಗಿ ಚಿತ್ರಿಸುತ್ತಾ ಕಥೆಗೆ ತಾರ್ಕಿಕವಾದ ಅಂತ್ಯವನ್ನು ಚೆನ್ನಪ್ಪಜ್ಜನ ಪಕ್ಷಿ ಕಾಳಜಿಯನ್ನು ತೋರುವುದರ ಮೂಲಕ ನೀಡುವಲ್ಲಿ ಕಥೆಗಾರ್ತಿ ಯಶಸ್ವಿಯಗಿದ್ದಾರೆ.
‘ಪ್ರೀತಿ ಪ್ರವಾಹ’- ಎನ್ನುವ ಕಥೆಯಲ್ಲಿ ಪ್ರೀತಿಯು ಒಂದು ರೀತಿಯ ಪ್ರವಾಹವೇ. ಆದರೆ ಕಥಾನಾಯಕಿ ಸಹನಾ ಪ್ರೀತಿ ಎನ್ನುವ ಪ್ರವಾಹದಲ್ಲಿ ಕೊಚ್ಚಿ ಹೋಗದೆ, ತಾನು ಪ್ರೀತಿಸಿದ ಹುಡುಗನ ಒಲವನ್ನು, ಪ್ರವಾಹ ಪೀಡಿತರಿಗೆ ಸಹಾಯ ಮಾಡುವಲ್ಲಿ ನಿರತಳಾಗಿ ತನ್ನ ಪ್ರೀತಿಗಿಂತ ಅವರಿಗೆ ಸಹಾಯ ಮಾಡುವುದೇ ತನ್ನ ಮೊದಲ ಆಧ್ಯತೆಯಾಗಿಸಿಕೊಂಡ ಗಟ್ಟಿ ಮನಸ್ಸಿನ ಮಾನವೀಯ ಮೌಲ್ಯಕ್ಕೆ ಬೆಲೆ ಕೊಡುವ ಹುಡುಗಿಯ ಕಥೆಯಾಗಿದೆ.
ಪ್ರವಾಹ ಪೀಡಿತ ಪ್ರದೇಶದ ವಾಸ್ತುಸ್ಥಿತಿಯನ್ನು ಅತ್ಯಂತ ಮನೋಜ್ಞವಾಗಿ ಸಂಕವ್ವ ಅನ್ನುವ ಪಾತ್ರದ ಮೂಲಕ ಕಟ್ಟಿಕೊಟ್ಟಿದ್ದಾರೆ.
ಎಲ್ಲಾ ಮಾಯವೋ ಎನ್ನುವ ಕಥೆಯಲ್ಲಿ ಆಧುನಿಕತೆಯ ಭರಾಟೆಯಲ್ಲಿ ಹಳ್ಳಿಯ ಜೀವನ ಹೇಗೆ ಬದಲಾಗುತ್ತಿದೆ, ಮನಸ್ಥಿತಿಗಳ ಬದಲಾವಣೆಯ ಕುರಿತು ಹೇಳಿದ್ದಾರೆ. ಮಾನವನ ದುರಾಸೆಗೆ ಬಲಿಯಾಗಿ ನದಿಯು ಚರಂಡಿಯಾದ ಧಾರುಣ ಸ್ಥಿತಿ, ಕಾಂಕ್ರೀಟ್ ಕಾಡಾದ ಆಟದ ಬಯಲಿನ ಸ್ಥಿತಿ ಮತ್ತು ಹಳ್ಳಿಗಳಲ್ಲಿ ವೃದ್ಧಾಶ್ರಮಗಳು ತಲೆ ಎತ್ತಿದ ನೋವಿನ ಎಳೆಯೊಳಗೆ ಕಥೆಯನ್ನು ಹೆಣೆದಿದ್ದಾರೆ.
‘ಕೆಂಪು ಗುಲಾಬಿ’- ಎನ್ನುವ ಕಥೆಯ ನಾಯಕಿ ಹೂ ಹುಡುಗಿ ಹೇಗೆ ಬೇರೆಯವರ ಜೀವನವನ್ನು ಬೆಳಗಿಸಿ ಸುಗಂಧ ಬೀರುವಳು ಎನ್ನುವ ಕಥಾವಸ್ತುವನ್ನು ಒಳಗೊಂಡಿದೆ. ‘ಮುಂಗುಟ್ಟೆ ಮತ್ತು ಮರುಜನ್ಮ’- ಕಥೆಯಲ್ಲಿ ಮುಂಗುಟ್ಟೆ ಪಕ್ಷಿಯ ಜೀವನವನ್ನು ಅಸಾಹಾಯಕ ಹೆಣ ್ಣನ ಜೀವನದೊಂದಿಗೆ ಹೋಲಿಸಿ ತುಂಬಾ ಮನೋಜ್ಞವಾಗಿ ಕಥೆಯನ್ನು ರಚಿಸಿದ್ದಾರೆ. ‘ಜೀವನ್ಮುಖಿ’- ಕಥೆಯಲ್ಲಿ ಕಳೆದುಹೋದ ಮಗುವಿಗಾಗಿ ಅಳದೆ ಅನಾಥಮಗುವನ್ನು ದತ್ತು ತೆಗೆದುಕೊಂಡು ಶಿಕ್ಷಣಕೊಡಿಸಿ ಮಾದರಿಯಾದ ಶಿಕ್ಷಕಿಯ ಕಥೆಯಿದೆ.
‘ಕಾಯಕಯೋಗಿ ಕಾಶಪ್ಪ ಕಾಕಾ’- ಎನ್ನುವ ಕಥೆಯಲ್ಲಿ ಬದಿಕಿನ ಮೌಲ್ಯಗಳ ಜೊತೆಗಿನ ಸಂಘರ್ಷವನ್ನು ಕಾಣಬಹುದಾಗಿದೆ. ಮಗ ಮೋಸ ಮಾಡಿದರೂ ಕಾಯಕ ನಂಬಿದ ಕಾಶಪ್ಪ ಸ್ಮಶಾನವನ್ನು ನಂದನವನವನ್ನಾಗಿ ಪರಿವರ್ತಿಸಿ ಆನಂದವನ್ನು ಕಾಣುವ ಪರಿಯನ್ನು ತಿಳಿಸುತ್ತದೆ.
‘ಮಾನವೀಯತೆ’- ಕಥೆಯಲ್ಲಿ ಅವ್ವ ಕಷ್ಟ ಪಟ್ಟು ದುಡಿದ ಹಣವನ್ನು ಕಳೆದುಕೊಂಡು ಕಾಲೇಜಿಗೆ ಹೋಗಲಾರದ ಬಡಪಾಯಿಗೆ ಬಸ್ಸಿನಲ್ಲಿರುವವರೆಲ್ಲ ಸಹಾಯ ಮಾಡಿ ಮಾನವೀಯತೆಯನ್ನು ಮೆರೆವ ಕಥೆ.
‘ಎಲ್ಲಿಂದಲೋ ಬಂದವರು’- ಕಥೆಯಲ್ಲಿ ಕಥೆಗಾರ್ತಿಯು ಅಲೆಮಾರಿಗಳ ಅನಿಶ್ಚಿತ ಬದುಕಿನ ಚಿತ್ರಣವನ್ನು ಎಳೆ ಎಳೆಯಾಗಿ ವಿವರಿಸುತ್ತಾ ಶ್ರಮದ ಜೀವನದಲ್ಲಿಯ ಸುಖ ಕಾಣುವ ಅವರ ಬದುಕಿನ ಚಿತ್ರಣ ಕಥೆಯಾಗಿ. ಮೂಡಿಸಿದ್ದಾರೆ, ‘ಮಾಯಾ ಮಾಯಿ ಮಾಯೆ’- ಎನ್ನುವ ಕಥೆಯಲ್ಲಿ ಕಥಾನಾಯಕಿ ಮುಂಬೈ ಮಹಾನಗರಿಯಲ್ಲಿಯ ಜನಜೀವನ ಯಾಂತ್ರಿಕ ಬದುಕಿನ ಚಿತ್ರಣವನ್ನು ಚಿತ್ರಿಸಿದ್ದಾರೆ. ಆ ಜನಸಂದಣ ಯಲ್ಲಿ ಮಗುವನ್ನು ಕಳೆದುಕೊಂಡು ಪರಿತಪಿಸುವ ತಾಯಿಯ ವ್ಯತೆಯನ್ನು ಮಾರ್ಮಿಕವಾಗಿ ಕಥೆಯಲ್ಲಿ ಕಟ್ಟಿಕೊಟ್ಟಿದ್ದಾರೆ.
‘ನಲ್ಲಿ ನೀರು’- ಕಥೆಯಲ್ಲಿ ನೀರಿಗಾಗಿ ಹಳ್ಳಿಯಲ್ಲಿ ನಡೆಯುವ ಕದನಗಳ ಚಿತ್ರಣವನ್ನು ನೀಡುವ ಮತ್ತು ನೀರಿನ ಸಂರಕ್ಷಣೆಯ ಮಹತ್ವವನ್ನು ಸಾರುವ ಕಥೆಯಾಗಿದೆ. ಖಾಲಿಯಾಗುತ್ತಿರುವ ಅಂತರ್ಜಲದ ಬಗ್ಗೆ ಕಳವಳ, ನೀರಿನ ಸದ್ಭಳಕೆಯ ಮತ್ತು ಸಂರಕ್ಷಣೆಯನ್ನು ಸಂದೇಶ ಸಾರುವಲ್ಲಿ ಕಥೆ ಯಶಸ್ವಿಯಾಗಿದೆ.
‘ಪರಿವರ್ತನೆ’- ಎನ್ನುವ ಕಥೆಯಲ್ಲಿ ಕನ್ನಡ ಶಾಲೆಯ ಶಿಕ್ಷಕನನ್ನು ಮದುವೆಯಾಗಲು ನಿರಾಕರಿಸುತ್ತಿದ್ದ ಶ್ರೀದೇವಿ. ತಮ್ಮ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಮ್ಮೇಳನದಲ್ಲಿ ಶಿಕ್ಷಕರಿಗೆ ದೊರೆತ ಸನ್ಮಾನವನ್ನು ಕಂಡು ತನ್ನ ಮನ ಪರಿವರ್ತಿಸಿ ಶಿಕ್ಷಕನನ್ನು ಮದುವೆಯಾಗಲು ಸಿದ್ಧವಾಗುವ ಕಥಾವಸ್ತುವನ್ನು ಒಳಗೊಂಡಿದೆ.
‘ಉಯಿಲು’- ಎನ್ನುವ ಕತೆಯ ನಾಯಕ ವೀರೆಶಪ್ತ ಸಾಹಿತಿಯಾಗಲು ಸಮ್ಮೇಳನಾಧ್ಯಕ್ಷನಾಗಲು ಮಾಡುವ ಹರಸಾಹಸಗಳ ಚಿತ್ರಣವನ್ನು ಒಳಗೊಂಡಿದೆ. ‘ಹೇ ರಾಮ್’- ಕಥೆಯಲ್ಲಿ ಶೌಚಾಲಯ ನಿರ್ಮಾಣದ ಫಲಾನುಭವಿಯಾದ ಪತ್ರಪ್ತ ಹಣ ಮಂಜೂರಾತಿಗಾಗಿ ಪಂಚಾಯತಿ ಕಾರ್ಯಾಲಯಕ್ಕೆ ಅಲೆದಾಡುವುದು, ಹಣ ಬಿಡುಗಡೆಯ ಆಸೆಗಾಗಿ ಗಾಂಧಿವೇಶ ಹಾಕಿ ಶಿಕ್ಷೆ ಅನುಭವಿಸುವ ಕಥೆ ತುಂಬಾ ಮಾರ್ಮಿಕ ಮನೋಜ್ಞವಾಗಿದೆ.
‘ಅಜ್ಞಾತವಾಸ’- ಕಥೆಯು ಹೆಣ್ಣು ಭ್ರೂಣ ಹತ್ಯೆಯ ವಸ್ತುವನ್ನು ಇಟ್ಟುಕೊಂಡು ಹೆಣೆದಿರುವ ಕಥೆಯಾಗಿದೆ. ಈ ಕಥೆಯು ಪಾತ್ರಗಳ ಸಂಘರ್ಷ ಮತ್ತು ಸಾಮಾಜಿಕ ಸಂದೇಶವನ್ನು ಒಳಗೊಂಡಿದೆ. ‘ತಾನಲ್ಲ ತನ್ನದಲ್ಲ’- ಎನ್ನುವುದು ಬದುಕಿನ ಭರವಸೆಗಳ ಮೇಲೆ ಹೆಣೆದಿರುವ ಕಥೆ. ಮೊಬೈಲ್ ಕಳೆದುಕೊಂಡು ಪರಿತಪಿಸುವ ಕಥಾನಾಯಕಿ ಬೇರೆಯವರು ಪಡೆಯಲಸಾಧ್ಯವಾದ ವಸ್ತುವನ್ನು ಕಳೆದುಕೊಂಡರೂ ಬದುಕಿನ ಭರವಸೆಗಳನ್ನು ಕಳೆದುಕೊಳ್ಳದಿರುವುದನ್ನು ಕಂಡು ತಾನು ಬದಲಾಗುವ ಮತ್ತು ಗುರಿ ಸಾಧಿಸುವ ಕಥೆಯಲ್ಲಿ ಸಂಗಜ್ಜಿ ಮನೋಚಿಕಿತ್ಸಕಿಯಾಗಿ ಬರುತ್ತಾಳೆ.
‘ತಲ್ಲಣ ಸದಿರು ತಾಳು ಮನವೆ’- ಕಥೆಯಲ್ಲಿ ಹರೆಯದ ಆಸೆಗಳಿಗೆ ಬಲಿಬಿದ್ದು ಜೀವನವನ್ನು ಹಾಳುಮಾಡಿಕೊಳ್ಳುವ, ಹೆಣ್ಣು ಮಗಳು ಕೊನೆಗೆ ಏಡ್ಸ ರೋಗಿಯಾಗಿ ಅಂತ್ಯ ಕಾಣುವ ಪರಿಯಿದೆ.

‘ಎಲ್ಲಿಗೆ ಬಂತು ಸಂಗಯ್ಯ’- ಎನ್ನುವ ಕಥೆಯಲ್ಲಿ ಸರಕಾರಿ ಯೋಜನೆಗಳನ್ನು ಪಡೆದ ಫಲಾನುಭವಿಗಳು ಯಾವ ರೀತಿ ದಾರಿ ತಪ್ಪುತ್ತಾರೆ. ಎನ್ನುವುದನ್ನು ಚಿತ್ರಿಸಿದ್ದಾರೆ. ‘ಗುರುಬ್ರಹ್ಮ ಗುರು ವಿಷ್ಣು’- ಕಥೆಯಲ್ಲಿ ಒಬ್ಬ ಆದರ್ಶ ಶಿಕ್ಷಕ ವಿದ್ಯಾರ್ಥಿಗಳ ಜೀವನವನ್ನು ಹೇಗೆ ಬೆಳಗಬಲ್ಲ ಎನ್ನುವ ಕಥಾ ವಸ್ತುವನ್ನು ಒಳಗೊಂಡಿದೆ. ಕಥೆಯಲ್ಲಿ ಕಥಾನಾಯಕಿ ತಾನು ಕಾದಂಬರಿಕಾರ್ತಿಯಾಗಿ ಹೆಸರುವಾಸಿಯಾದುದ್ದನ್ನು ತನ್ನ ಗುರುಗಳಿಗೆ ತಿಳಿಸಬೇಕಿತ್ತು ಎನ್ನುವುದನ್ನು ಸ್ಮರಿಸುವ ಮೂಲಕ ಗುರುವಿನ ಸ್ಥಾನದ ಮಹತ್ವವನ್ನು ಸಾರುತ್ತಾಳೆ.
‘ಸಂಗಾತಿ’- ಎನ್ನುವ ಕಥೆಯು ಸಂಗಾತಿಯನ್ನು, ಅರಸಿ ಹೋದ ಹಾಗೂ ಸಂಗಾತಿಯನ್ನು ತಿರಸ್ಕರಿಸಿದ ಹೆಣ್ಣಿನ ದುರ್ಬಲ ಮನಸ್ಥಿತಿಯ ಕಥಾವಸ್ತುವನ್ನು ಒಳಗೊಂಡಿದೆ. ‘ಹೌಸ್ ಎಕ್ಸಟೆನ್‌ಶನ್’ ಮತ್ತು ‘ಅಳಿದ ಮೇಲೆ’- ಎನ್ನುವ ಕಥೆಗಳು, ಸರಕಾರಿ ಯೋಜನೆಗಳು ಫಲಾನಿಭವಿಗಳಿಗೆ ತಲುಪುವುದರೊಳಗೆ ಫಲಾನುಭವಿಗಳ ಸ್ಥಿತಿ ಏನಾಗಿರುತ್ತದೆ ಎನ್ನುವುದು ಅತ್ಯಂತ ವಿಡಂಬನಾತ್ಮಕವಾಗಿ ಕಥೆಯಲ್ಲಿ ಚಿತ್ರಿಸಲಾಗಿದೆ.
ಈ ರೀತಿಯಾಗಿ ಸುಳಿ ಕಥಾಸಂಕಲನವು ಗ್ರಾಮೀಣ ಜೀವನದ ಅನುಭವ ಮತ್ತು ಘಟನಾವಳಿಗಳನ್ನು ಚಿತ್ರಿಸುವಲ್ಲಿ ಯಶಸ್ವಿಯಾಗಿದೆ.
ಪಂಚಾಯತಿ ಮಟ್ಟದಲ್ಲಿನ ಅಭಿವೃದ್ಧಿ ಯೋಜನೆಗಳಲ್ಲಿಯ ನ್ಯೂನ್ಯತೆ ಅವುಗಳ ದುರುಪಯೋಗ, ಪಂಚಾಯತಿಯ ರಾಜಕೀಯ, ಎಲ್ಲವುಗಳನ್ನು ವಿಡಂಬನಾತ್ಮಕವಾಗಿ ತಮ್ಮ ಕಥೆಗಳಲ್ಲಿ ನಿರೂಪಿಸಿದ್ದಾರೆ. ಕಥೆಗಾರ್ತಿಯ ಸಾಮಾಜಿಕ ಕಳಕಳಿ ಪಾತ್ರಗಳ ಮೂಲಕ ಎದ್ದು ಕಾಣುತ್ತದೆ. ಆಧುನಿಕ ಭರಾಟೆಗೆ ಬಲಿಯಾದ ಮರ, ನದಿ, ಕೌಟುಂಬಿಕ ವ್ಯವಸ್ಥೆಯ ಕುರಿತು ಕಥೆಗಾರ್ತಿ ಸ್ಪಂದಿಸುವ ಪರಿ ಅನನ್ಯವಾಗಿದೆ. ಎಲ್ಲಾ ಕಥೆಗಳನ್ನು ಓದಿ ಹೊರಬಂದಾಗ ಒಂದು ಗ್ರಾಮೀಣ ಪರಿಸರದಿಂದ ಹೊರಬಂದಂತೆ ಅನುಭವವಾಗುತ್ತದೆ.
ಗಾಂಧಿಯ ಪಾತ್ರಧಾರಿ ಪತ್ರಪ್ಪ, ಕರೆವ್ವ, ಕೆಂಚವ್ವ, ಹೂವಕ್ಕ, ಕಾಶಪ್ಪ ಕಾಕಾ ಪಾತ್ರಗಳು ಓದುಗನನ್ನು ಮತೆ ಮತ್ತೆ ಕಾಡುತ್ತವೆ.






Nice review