
ಡಾ ನಿರ್ಮಲಾ ಬಟ್ಟಲ
“ಅಕ್ಕಮಹಾದೇವಿ ತಾಯಿ ಹೇಗಿದ್ದಳು?” ಆಕೆ ಹೀಗೆಯೇ ಇದ್ದಳು”. ಎಂದು ಖಚಿತವಾಗಿ ಹೇಳಲು ಯಾರಿಂದಲೂ ಸಾಧ್ಯವಾಗದು. ಕವಿಗಳು, ಪುರಾಣಕಾರರೂ ಮತೀಯ ಕಾರಣಗಳಿಂದಾಗಿ ಅಕ್ಕನ ವ್ಯಕ್ತಿತ್ವಕ್ಕೆ ಅವಾಸ್ತವವೆನಿಸುವ ಅಲೌಕಿಕ ಬಣ್ಣ ಬಳೆದಿರುವುದು ನಿಜವೆ. ಅಸಹಜವೂ ಅಸ್ವಾಭಾವಿಕವು ಆದ ಆ ಬಣ್ಣವನ್ನು ತೆಗೆದು ಹಾಕಿ, ಅಕ್ಕನ ಜೀವನವನ್ನು ವಿಶುದ್ಧವಾದ ವೈಜ್ಞಾನಿಕ ದೃಷ್ಠಿಯಿಂದ ನೋಡಿ ಆಕೆಯ ಸಹಜ ಸ್ವರೂಪವನ್ನು ಚಿತ್ರಿಸಲು ನಾನಿಲ್ಲಿ ಯತ್ನಿಸಿದ್ದೇನೆ.”- ಎಂದು ಕನ್ನಡದ ಖ್ಯಾತ ಕಾದಂಬರಿಕಾರ ಬಸವರಾಜ ಕಟ್ಟಿಮನಿಯವರು (೧೯೫೦) ಹೇಳಿದ್ದಾರೆ. ಈ ಮೂಲಕ ಅಕ್ಕ ಮಹಾದೇವಿಯ ಜೀವನವನ್ನು ವಿಭಿನ್ನ ದೃಷ್ಠಿಕೋನದಿಂದ ನೋಡಿದ್ದಾರೆ.
ವಾಸ್ತವ ನೆಲೆಗಟ್ಟಿನಲ್ಲಿ ಕಾಲಮಾನದ ಸಾಮಾಜಿಕ, ಧಾರ್ಮಿಕ, ರಾಜಕೀಯ, ಸನ್ನಿವೇಶಗಳ ಪ್ರಭಾವವು ಕಥಾವಸ್ತುವಿನ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎನ್ನುವುದನ್ನು ತುಂಬಾ ಮಾರ್ಮಿಕವಾಗಿ ಚಿತ್ರಿಸಿದ್ದಾರೆ. ಕಥೆಯ ವಿಷಯವಸ್ತುವಿಗೆ ಪೂರಕವಾಗಿ ಮತ್ತು ಸಾಧ್ಯತೆಯನ್ನು ಓದುಗನು ತರ್ಕಬದ್ಧವಾಗಿ ಒಪ್ಪುವಂತೆ ಐತಿಹಾಸಿಕವಾಗಿ, ಸಾಹಿತ್ತಿಕವಾಗಿ, ಸ್ತ್ರೀ ಅಭಿವ್ಯಕ್ತಿಯ ಪ್ರತೀಕವಾಗಿ ಅಕ್ಕಮಹಾದೇವಿಯ ಕಥೆಯನ್ನು ಓದುಗನಿಗೆ ಆಪ್ತವಾಗುವಂತೆ ಮತ್ತು ವೈಚಾರಿಕವಾಗಿ ಆಲೋಚಿಸಿ ಸತ್ಯಾಸತ್ಯತೆಗಳನ್ನು ಓರೆಗೆ ಹಚ್ಚಲು ಪ್ರೇರೆಪಿಸುವ ರೀತಿಯಲ್ಲಿ ಕಾದಂಬರಿಯನ್ನಾಗಿಸಿದ್ದಾರೆ. ಆಧುನಿಕ ಕಾದಂಬರಿಯ ವಿಶಿಷ್ಠ ತಂತ್ರಗಳು ಈ ಕಾದಂಬರಿಯಲ್ಲಿ ಬಿಂಬಿತವಾಗಿದೆ. ಗಿರಿಯ ನವಿಲು ೨೧೬ ಪುಟಗಳನ್ನು, ೨೪ ಅಧ್ಯಾಯ ಅಥವಾ ಕಥಾ ಘಟನಾವಳಿಗಳನ್ನು ಒಳಗೊಂಡಿದೆ.

ಕಾದಂಬರಿಯ ತಂತ್ರಗಾರಿಕೆ ಜಂಗಮನ ಪಾತ್ರ ಸೃಷ್ಠಿಯ ಮೂಲಕ ನಿರ್ಮಲಶೆಟ್ಟಿ ಮತ್ತು ಸುಮತಿಯವರ ಸಮಸ್ಯೆಗೆ ಪರಿಹಾರ, ಓದುಗರಿಗೆ ಮಹಾದೇವಿಯ ಜನನದ ವೃತ್ತಾಂತವನ್ನು ಕಥಾತ್ಮಕವಾಗಿ ಹೇಳುವುದು.
ಗಿಡಮೂಲಿಕೆಗಳಿಂದ ಮಾಡಿರುವ ಭಸ್ಮವು ಔಷಧೀಯ ಗುಣವನ್ನು ಹೊಂದಿರುವಂತದು ಎನ್ನುವುದನ್ನ ಕಥೆಯಲ್ಲಿ ಹೇಳುವುದು.
ಕನಸಿನ ಮೂಲಕ ಮಹಾದೇವಿಯ ಹುಟ್ಟಿನ ವೃತ್ತಾಂತ ಹೇಳುವುದು.
ಹೊಸ ಹೊಸ ಪಾತ್ರಗಳ ನಿರ್ಮಾಣ, ಸನ್ನಿವೇಶಗಳ ಮನೋಭೂಮಿಕೆಯಿಂದ ಕಥಾ ಹಂದರ ಮುಂದುವರೆಯುವಂತೆ ತಂತ್ರಗಾರಿಕೆ ರೂಪಿಸಿದ್ದಾರೆ.
ಅಕ್ಕಮಹಾದೇವಿಗಿರುವ ‘ಹೈ ಸೆಲ್ಫ ಏಸ್ಟೀಮ್’ ಅನ್ನು ಅತ್ಯಂತ ಮನೋಜ್ಞವಾಗಿ ಚಿತ್ರಿಸಿದ್ದಾರೆ.
ಅಕ್ಕನ ಮೂರು ಕರಾರುಗಳು- ಮಹಾದೇವಿ ಕೌಶಿಕನನ್ನು ಮದುವೆಯಾಗಲು ಹಾಕುವ ಮೂರು ಕರಾರುಗಳು. ಮಹಾದೇವಿಯನ್ನು ತುಂಬಾ ಪ್ರೀತಿಸುವ ಕೌಶಿಕ, ಮಹಾದೇವಿಯ ಮೂರು ಕಠಿಣ ಕರಾರುಗಳನ್ನು ಒಪ್ಪಿ ಮದುವೆಯಾಗುವುದು. ಆ ಕರಾರುಗಳು ಮೂರು ವರ್ಷಗಳಲ್ಲಿ ಮುರಿಯುವಂತೆ ಪ್ರಸಂಗಗಳು ಬಂದೊದಗುವುದು. ಅವುಗಳಿಗೆ ಅರಮನೆಯ ರಾಜಕೀಯ, ಸವತಿ ಮತ್ಸರ ಮತ್ತು ಜಾತಿ ಹೇಗೆ ಪ್ರಭಾವ ಬೀರುತ್ತವೆ ಎನ್ನುವುದರ ಚಿತ್ರಣದ ತರ್ಕಬದ್ದವಾದ ನಿರೂಪಣೆ.
ಚನ್ನಮಲ್ಲಿಕಾರ್ಜುನನ್ನೆ ತನ್ನ ಗಂಡ ಎಂದು ಮಹಾದೇವಿ ಯಾಕೆ ಆಯ್ಕೆ ಮಾಡಿಕೊಂಡಳು ಎನ್ನುವುದಕ್ಕೆ ಪೂರಕವಾದ ಗಿರಿಜೆ ಕಥೆ, ಮಲ್ಲಿಕಾ ಪುಷ್ಪದ ಕಥೆ, ಅಲ್ಲಮನ ಕಥೆಗಳ ಚಿತ್ರಣವನ್ನು ನೀಡುತ್ತಾರೆ.
ಪ್ರತಿಯೊಂದು ಸನ್ನಿವೇಶದಲ್ಲಿಯು ಕಾವ್ಯಾತ್ಮಕ ವರ್ಣನೆ ಇದೆ.ಅದು ಓದುಗನಲ್ಲಿ ರಸಸ್ವಾದ ಉಂಟುಮಾಡುತ್ತದೆ. ಕಥಾ ರಚನಾ ಶೈಲಿ ಸೃಜನಶೀಲತೆಯಿಂದ ಕೂಡಿದೆ.
ಪೌರಾಣ ಕ ಹಿನ್ನಲೆಯಿಂದ ಬಿಡಿಸಿ ವಾಸ್ತವ ನೆಲೆಯಲ್ಲಿ ಅಕ್ಕಮಹಾದೇವಿಯ ಜೀವನವನ್ನು ಕಟ್ಟಿಕೊಟ್ಟಿದ್ದಾರೆ. ಕಾದಂಬರಿಯಲ್ಲಿ ಬಹಳಷ್ಟು ನಾಟಕೀಯ ಅಂಶಗಳಿವೆ.
(ಸುಮತಿಯ ಕನಸಿನ ಸನ್ನಿವೇಶ ಮತ್ತು ರುದ್ರಕನ್ನಿಕೆ ಪ್ರಸಂಗ, ಮದುವೆ ಪ್ರಸಂಗ ನಾಟಕೀಯ ಅಂಶಗಳಿಂದ ಕೂಡಿವೆ.) ಚಂದೀಮರಸನ ವ್ಯಕ್ತಿತ್ವ ವರ್ಣನೆ. ಮತ್ತು ಪಾತ್ರ ಸೃಷ್ಠಿ ಮಹಾದೇವಿಯ ಜೀವನದ ಘಟನಾವಳಿಗಳಿಗೆ ಪೂರಕವಾಗಿದೆ. ಭವಿಷ್ಯತ್ಕಾಲದಲ್ಲಿ ನಡೆಯುವ ಘಟನೆಗಳಿಗೆ ಮುನ್ಸುಚನೆಯಿಂದ ಸಂಗತಿಗಳನ್ನು ವರ್ತಮಾನದಲ್ಲಿ ಹೇಳುವುದು. ಭವಿಯ ಕೈ ಹಿಡಿಯಬೇಕಾಗುವುದು, ಮಹಾದೇವಿಯ ಜೀವನದಲ್ಲಿ ನಡೆಯುವ ಪ್ರಮುಖ ಘಟನೆ. ಅದಕ್ಕೆ ತಾಯಿಯ ಗರ್ಭದಲ್ಲಿದ್ದಾಗ ಕನಸಿನ ಮೂಲಕ. ಕೋಡಿಮಠದ ಸ್ವಾಮಿಗಳ ಮೂಲಕ ಚಂದಿಮರಸರ ಮೂಲಕ ಪ್ರಸ್ತಾಪಿಸುವುದು. ಕಾದಂಬರಿಯ ನಿಜ ಆಶಯವನ್ನು ಲೇಖಕರು ಪಾತ್ರಗಳ ಮೂಲಕ ಹೇಳುವುದು.
“ವೈದಿಕ ಧರ್ಮದ ವಿರುದ್ಧ ಬಂಡಾಯ ಹೂಡಿ ವರ್ಣಗಳನ್ನು ನಷ್ಠಗೊಳಿಸಿ ಸ್ತ್ರೀ ಪುರುಷರು, ಬ್ರಾಹ್ಮಣ ಕ್ಷತ್ರೀಯ ವೈಶ್ಯ ಶೂದ್ರರು ಎಲ್ಲರಿಗೂ ಸಮಾನ ಅಧಿಕಾರಗಳಿವೆಯೆಂದು ಸಾರಿದ ಈ ಧರ್ಮಗಳನ್ನು (ಜೈನ್, ಬೌಧ್ಧ) ವೈದಿಕರು ಈ ದೇಶದಲ್ಲಿ ಬಾಳಗೊಡಲಿಲ್ಲ. ಸಮತಾಧರ್ಮಗಳು ಪ್ರಬಲಿಸಿದರೆ ಪುರೋಹಿತರ ಸುಖ ಜೀವನಕ್ಕೆ ಕೊಡಲಿಯ ಪೆಟ್ಟು ಬೀಳುವುದಿಲ್ಲವೆ….? ಅದಕ್ಕೆ ವೈದಿಕರು ದಡಬಡಿಸಿ ಬೌದ್ಧರನ್ನು ಜೈನರನ್ನು ನಾಸ್ತಿಕರೆಂದೂ ಧರ್ಮಲಂಡರೆಂದೂ ದೇವರ ವಿರೋಧಿಗಳೆಂದೂ ಹೀಯಾಳಿಸಿ, ಭಯಂಕರವಾದ ರೀತಿಯಲ್ಲಿ ಅಪಪ್ರಚಾರ ಮಾಡಿ ಅವರ ಬಲವನ್ನು ಕುಗ್ಗಿಸಿದರು. ಬೌದ್ಧಧರ್ಮವಂತೂ ಇಲ್ಲಿ ಹೆಸರಿಲ್ಲದಂತೆ ಅಳಿದು ಹೋಯಿತು.
ಜೈನರೇನೋ ಅಲ್ಲಲ್ಲಿ ಉಳಿದುಕೊಂಡಿದ್ದರು. ಅವರ ಧರ್ಮದ ಸಮಾನತೆಯ ತತ್ವವನ್ನು ಬಿಟ್ಟು ವೈದಿಕರ ಹಾಗೆ ವರ್ಣಾಶ್ರಮಗಳನ್ನೊಪ್ಪಿಕೊಂಡಿದ್ದಾರೆ. ಈ ವರ್ಣಾಶ್ರಮ ಧರ್ಮದ ದೋಷಗಳನ್ನು ತೆಗೆದು ಹಾಕಿ ಸಮತೆಯನ್ನುಂಟುಮಾಡುವುದೇ ನಮ್ಮ ಧರ್ಮದ ಮುಖ್ಯ ಉದ್ದೇಶ. ಲಿಂಗಧಾರಿಗಳೆಲ್ಲ ಸಮಾನರು ಎಲ್ಲರಿಗೂ ಒಂದೇ ಬಗೆಯ ಹಕ್ಕುಗಳುಂಟು ನಮ್ಮಲ್ಲಿ ಉಚ್ಛಜಾತಿ ಕೀಳುಜಾತಿಯೆಂಬುದಿಲ್ಲ. ಗಂಡು ಹೆಣ್ಣೆಂಬ ಭೇದವಿಲ್ಲ. ಸಂಸ್ಕೃದಲ್ಲೆ ಧರ್ಮತತ್ವ ಬೋಧಿಸಬೇಕೆಂಬ ಹಟವಿಲ್ಲ. ವಿದ್ಯಾಭ್ಯಾಸ ಮಾಡಿದವರಿಗೂ ಮಾಡದಿದ್ದವರಿಗೂ ಎಲ್ಲರಿಗೂ ಸುಲಭವಾಗಿ ಅರ್ಥವಾಗುವಂತೆ ಸರಳ ಭಾಷೆಯಲ್ಲಿ ನಮ್ಮ ಮತಿಯರು ವಚನಗಳನ್ನು ರಚಿಸಿದ್ದಾರೆ. ಇಂಥಾ ನಮ್ಮ ಧರ್ಮವೇ ಎಲ್ಲಾ ಧರ್ಮಗಳಲ್ಲಿ ಶ್ರೇಷ್ಠವಾದದ್ದು” ಅಂತ ನಿನಗೂ ಅನ್ನಿಸುವುದಿಲ್ಲವೇ ಮಹಾದೇವಿ. ಎಂದು ಲೇಖಕರು ತಮ್ಮ ಮಾತುಗಳನ್ನು ಪಾತ್ರದ ಮೂಲಕ ಆಡಿಸುವುದು.

ಕಾವ್ಯಾತ್ಮಕ ವರ್ಣನೆಯಲ್ಲಿ ಮಹಾದೇವಿಯ ಪಾತ್ರ ಓದುಗನ ಕಣ್ಣ ಮುಂದೆ ಸುಳಿದು ಸ್ಮೃತಿ ಪಟಲದ ಮೇಲೆ ನೆಲೆಗೊಳ್ಳುತ್ತದೆ.
ಅದ್ಭುತವಾದ ನಿರೂಪಣಾ ಶೈಲಿಯಲ್ಲಿಯ ಅನುಭವ ಮಂಟಪದ ಸನ್ನಿವೇಶ ಓದುಗನ ಮನಸಿನ ಮೇಲೆ ಘಾಡ ಪ್ರಭಾವವನ್ನುಂಟು ಮಾಡುತ್ತದೆ. ಅಕ್ಕಮಹಾದೇವಿ ಮತ್ತು ಅಲ್ಲಮ ಪ್ರಭುಗಳ ವಚನಗಳನ್ನು ಬಹಳ ಸಮರ್ಪಕವಾಗಿ ಸಂವಾದ ರೂಪದಲ್ಲಿ ಬಳಸಿ ಸನ್ನಿವೇಶ ಸೃಷ್ಠಿಸಿರುವುದು ಕಾದಂಬರಿಯ ಮೆರಗನ್ನು ಹೆಚ್ಚಿಸಿದೆ.
ನಾಟಕೀಯ ಅಂಶಗಳು ಪ್ರಧಾನವಾಗಿ ಅನುಭವ ಮಂಟಪದ ಘಟನಾವಳಿಯಲ್ಲಿ ಕಂಡುಬರುತ್ತದೆ. ಮಹಾದೇವಿ ಅಕ್ಕ ಶ್ರೀಶೈಲದ ಕದಳಿ ವನದಲ್ಲಿ ಐಕ್ಯವಾದಳು. ಆ ರೀತಿಯ ನಿರ್ಣಯಕ್ಕೆ ಬರಲು ಕಾರಣವಾದ ಸನ್ನಿವೇಶ ಯಾವುದು ಎನ್ನುವ ಓದುಗನ ಕುತೂಹಲವನ್ನು ತುಂಬಾ ತರ್ಕಬದ್ದವಾಗಿ ಸನ್ನಿವೇಶವನ್ನು ಹೆಣೆದು ಕಾದಂಬರಿಯನ್ನು ಅಂತ್ಯಗೊಳಿಸುತ್ತಾರೆ.
ಕಾದಂಬರಿಯ ಬರವಣ ಗೆಗೆ ಲೇಖಕರು ಹರಿಹರನ “ಮಹಾದೇವಿಯಕ್ಕನ ರಗಳೆ”ಯನ್ನು ಅಭ್ಯಸಿಸಿ, ಆಧಾರವಾಗಿಟ್ಟುಕೊಂಡಿರುವುದನ್ನು ಉಲ್ಲೇಖಿಸಿದ್ದಾರೆ.
ಹೀಗೆ ಬಸವರಾಜ ಕಟ್ಟಿಮನಿಯವರು ಇತಿಹಾಸದ ಮತ್ತು ಕಲ್ಪನಾ ಶಕ್ತಿಗೆ ಸೃಜನ ಶೀಲತೆಯನ್ನು ಬೆರೆಸಿ, ಉತ್ತಮ ಕಾದಂಬರಿಯನ್ನು ಕನ್ನಡ ಸಾರಸತ್ವ ಲೋಕಕ್ಕೆ ನೀಡಿ ಶ್ರೀಮಂತಗೊಳಿಸಿದ್ದಾರೆ.
ಗಿರಿಯನವಿಲು ಓದುಗನ ಸೃತಿ ಪಟಲದ ಮೇಲೆ ನಾಟ್ಯವಾಡುವಂತೆ ಮಾಡಿದ್ದಾರೆ.






0 Comments