ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಿರ್ಭಯಾ ನೆನಪಿನಲ್ಲಿ ಒಂದು ಕಥೆ

“ನಾನು ಗಂಡಾಗಿ ಹುಟ್ಟುತ್ತಿದ್ದೇನೆ”

ಚೈತ್ರಾ ಭವಾನಿ

ನೀರಿಗೆ ಎಲ್ಲವನ್ನು ಮೆದುವಾಗಿಸೋ, ಮೃದುವಾಗಿಸೋ ಚೈತನ್ಯವಿದೆ. ದೇಹಕ್ಕಂಟಿದ ಎಷ್ಟೋ ಕಲ್ಮಶಗಳನ್ನು ತೊಳೆದುಬಿಡುತ್ತದಂತೆ! ಆದರೆ ನನ್ನ ಮನಸನ್ನು ತೊಳೆಯಲು ಯಾವ ಗಂಗೆಯಿಂದ ಸಾಧ್ಯ! ಹೆತ್ತಮ್ಮನಿಗೂ, ಹೊತ್ತ ಸಮಾಜಕ್ಕು!?
ಸ್ನಾನದ ನಂತರ ಕನ್ನಡಿಯಲ್ಲೂ ನನ್ನ ತೊಗಲನ್ನು ಕಾಣಲು ಮುಜುಗರಪಡುವ ಹೆಂಗಳೆ ನಾನು. ಬಸ್ ಹತ್ತುವಾಗ ಅಪ್ಪಿ- ತಪ್ಪಿ ಯಾವುದಾದರು ‘ಗಂಡಸು’ ಅನ್ನೋ ಸ್ಪರ್ಶ ಅನುಭವ ಆದ ಕೂಡಲೇ ನನ್ನ ಹುಬ್ಬು ಸಂಕುಚಿತವಾಗುತಿತ್ತು. ಥೂ…! ಎಂದು ಮೈ ಕೊಡವಿ ಸಾವರಿಸಿಕೊಳ್ಳುವ 10-15 ನಿಮಿಷದಲ್ಲಿ ಕಾಮದ ಕೊಚ್ಚೆಯಂಥ ಗಂಡಸರ ಮೇಲೆ ಶವ ಸಂಸ್ಕಾರ ಮಾಡಿಬಿಡುವಷ್ಟು ರೊಚ್ಚಿಗೇಳುತ್ತಿತ್ತು ಮೈಮನ.
ಫೆಲೋಪಿಯನ್ ಟ್ಯೂಬ್ ಪೂರ್ತಿ ಡ್ಯಾಮೇಜ್ ಆಗಿದೆ. ಇದರಿಂದ ಆಕೆಯ ಜನನಾಂಗವೇ ಹೋಗಿಬಿಡಬಹುದು, ಪೇಷೆಂಟ್ ಸಾಯಲುಬಹುದು. ವೆಜೈನಾ ಹರಿದು ಹೋಗಿದೆ ಕೂಡಲೇ ಅದನ್ನು ರ್ಯಾಪ್ ಮಾಡಬೇಕು. ಅಬ್ಬಾ ಎಷ್ಟು ಭೀಕರ…! ನನ್ನ ಕೈ ನಡುಗುತ್ತಿದೆ. ನಾನೊಬ್ಬ ಸ್ತ್ರಿರೋಗ ತಜ್ಞೆ ಇರಬಹುದು. ಅದಕ್ಕೂ ಮುನ್ನ ನಾನು ಒಂದು ಹೆಣ್ಣು. ಆ ಸ್ಟ್ರಕ್ಚರ್ ಮೇಲೆ ಇದ್ದದ್ದು ಅವಳಲ್ಲ ನಾನು! ಹೇಗೆ ಟ್ರೀಟ್ ಮಾಡಲೋ ತಿಳಿಯಲಿಲ್ಲ. ಪೋಲಿಸರ ಒತ್ತಡ, ಆಕೆಯ ರೋಧನ ನನ್ನನ್ನು ಕರ್ತವ್ಯಕ್ಕೆ ಮುಂದಾಗುವಂತೆ ಮಾಡಿತ್ತು. ಹೆಸರಾಂತ ಸ್ತ್ರಿರೋಗ ತಜ್ಞೆ ಫೋನಿನಲ್ಲಿ ಗಂಡನಿಗೆ ವಿವರಿಸುತ್ತಿದ್ದಳು.

‘ಇಂದು ಆ ಡ್ರೆಸ್ ಧರಿಸಿ ಬಾ’ ಎಂದು ಅವನು ಹೇಳಿದ್ದ. ನಾನು ಹ್ಯಾಂಡ್ ವ್ಯಾಕ್ಸ್ ಮಾಡಿಸಿ, ಕೂದಲು ಸ್ಟ್ರೇಟನಿಂಗ್ ಮಾಡಿಸಿ, ಕಲರಿಂಗ್ ಮಾಡಿಸಿದ್ದೆ. ಅವನ ಜೊತೆ ಹೇಗೆಲ್ಲ ಇರಬೇಕೆಂದು ಪ್ರ್ಯಾಕ್ಟೀಸ್ ಮಾಡಿದ್ದೆ. ಮದುವೆಗೆ ಮನೆಯವರು ಒಪ್ಪಿಕೊಂಡಿದ್ದರಾದರೂ ನಾನಿನ್ನು ಅವನ ಹೆಂಡತಿಯಾಗಿರಲಿಲ್ಲ. ಅಬ್ಬಾ! ‘ಹೆಂಡತಿ’ ಎಷ್ಟು ಚೆಂದದ ಭಾವನೆ. ಅವನ ವಿಶಾಲ ತೋಳುಗಳಲ್ಲಿ, ಅಗಲವಾದ ಎದೆ ಮೇಲೆ ತಲೆಯೊರಗಿಸಿ ನನ್ನ ಇಷ್ಟು ದಿನದ ಕಣ್ಣೀರನ್ನು ಕರಗಿಸಿಬಿಡಬೇಕು. ನನ್ನ ತಲೆ ನೇವರಿಸುವಾಗ ಮತ್ತಷ್ಟು ಗಟ್ಟಿಯಾಗಿ ಅಪ್ಪಿಕೊಂಡು ಮಗುವಿನಂತೆ ನೆಮ್ಮದಿ ಅನುಭವಿಸಬೇಕು. ಹೊಸ ಮನೆ, ಹೊಸ ಬದುಕು. ನನ್ನ ತುಂಟು ಮಾತುಗಳು, ಅವನ ಚಟಾಕಿಗಳು. ನನ್ನ ಕಂಡೀಷನ್ಗಳು ಅವನ ನಾಟಕಗಳು. ಆಮೇಲೆ ನಮಗೊಬ್ಬ ಮಗ. ಅವನಿಗೆ ಉತ್ತಮ ಸಂಸ್ಕಾರ ಕೊಡಬೇಕು. ನನ್ನ ಹೆಗಲ ಮೇಲೆ ಕೂರಿಸಿ ಕೂಸುಮರಿ ಮಾಡಬೇಕು. ಅದಕ್ಕೂ ಮುನ್ನ ನನ್ನವನೊಂದಿಗೆ ಹೊಸಗೆ! ಅಯ್ಯೋ ನನಗೆ ನಾಚಿಕೆಯಾಗುತ್ತಿದೆ. ಗೆಳತಿಯರು ಹೇಳಿದ್ದು, ಸಿನಿಮಾದಲ್ಲಿ ಕಂಡಿದ್ದು, ಅವನೊಂದಿಗೆ ಆಗಾಗ ಕೊಂಚ ಆ ವಿಷಯದ ಬಗ್ಗೆ ಮಾತನಾಡಿದ್ದು…! ಅಬ್ಬಾ ಹೇಗಿರಬಹುದು ಆ ದಿನ…? ಅಯ್ಯೋ ಆ ಕ್ಷಣ…ಹೇಗಪ್ಪಾ…? ಇದೆಲ್ಲಾ ನನಗೆ ಸಾಧ್ಯವೇ?ನನ್ನನ್ನು ಅವನಿಗೆ ತೆರೆದುಕೊಳ್ಳಲು? ಇಲ್ಲ ಇಲ್ಲ ಆ ವಿಷಯ ನೆನೆಸಿಕೊಳ್ಳೋದಕ್ಕೆ ಕಷ್ಟವಾಗುತ್ತಲ್ಲ. ಉಫ್… ನಾಚಿಕೆ, ದಿಗಿಲಿನಿಂದ ತಬ್ಬಿಬ್ಬುಗೊಂಡಿತು ಮನ.
ನೋ ಇದು ಬಹಳ ಕ್ರಿಟಿಕಲ್. ಆಕೆಯ ಬೆಳ್ಳಗಿರುವ ಮೈ ನೋಡಿ ನೀಲಿಗಟ್ಟಿದ ಹಲ್ಲಿನ ಗುರುತು. ಕುತ್ತಿಗೆ ಬಳಿ ಸಿಗರೇಟಿನಿಂದ ಸುಟ್ಟ ಗಾಯಗಳು. ತುಟಿಯಂತೂ ಕೀತುಕೊಂಡಿದೆ. ಕೆನ್ನೆಯಂತೂ ರಕ್ತದೊಕುಳಿ! ಆಕೆಯ ಪ್ರೈವೇಟ್ ಪ್ಲೇಸಸ್ ಮುಟ್ಟಲಿಕ್ಕೆ ಆಗ್ತಿಲ್ಲ. ಸೋರುತ್ತಿರುವ ರಕ್ತವನ್ನು ತಡೆಯಲಾಗುತ್ತಿಲ್ಲ. ಸಣ್ಣ ಕರುಳು ಡ್ಯಾಮೇಜ್ ಆಗಿರೋ ಹಾಗಿದೆ. ಆಕೆಗೆ ಬಟ್ಟೆಯನ್ನು ಹೊದಿಸಲಾಗುತ್ತಿಲ್ಲ. ಬಟ್ಟೆ ಸ್ಪರ್ಶಿಸಿದ್ರೆ ಕೂಗುತ್ತಿದ್ದಾಳೆ. ನೋ ನೋ ಐ ಕಾಂಟ್! ಸ್ತ್ರಿರೋಗ ತಜ್ಞೆ ಪೋಲಿಸರ ಬಳಿ ಕೈ ಹಿಚುಕಿಕೊಳ್ಳುತ್ತಿದ್ದಾರೆ.
‘ಹೋಗೊ ನಿನ್ನದು ಬರಿ ತಮಾಷೆಯೇ. ಆ ಹಿರೊಯಿನ್ ಹಾಗೆ ಮಾಡಿದ್ದಕ್ಕೆ ಅವನಿಗೆ ಪ್ರೀತಿ ಗೊತ್ತಾಗಿದ್ದು. ಸುಮ್ನಿರೇ ಸಾಕು ಯಾವಾಗ್ಲೂ ನಿಮ್ಮನ್ನ ಒಲೈಸೋ ಹೀರೋಗಳಿದ್ರೆನೆ ನಿಮಗೆ ಸಿನಿಮಾ ಇಷ್ಟವಾಗೋದು ಅಲ್ವಾ! ಹೇ ಹೋಗೋ..! ಟೈಂ 10 ಗಂಟೆ ನಮ್ಮ ಮನೆಗೆ ಬಸ್ಗಳು ಕಡಿಮೆ. ಹೇ ಅಲ್ಲಿ ಬಸ್ ಬರ್ತಿದೆ. ಓಡೋಣ ಬಾ, ಛೇ ಮಿಸ್ ಆಯ್ತಲ್ಲೋ. ಅಲ್ನೋಡೋ ಇನ್ನೊಂದ್ ಬಸ್ ಬರ್ತಿದೆ. ಸ್ಟಾಪ್ ಸ್ಟಾಪ್ ಇಲ್ಲೆ ಕೆ ಆರ್ ಪುರಂ ಹೋಗಬೇಕು’ ಅವನೆಂದ. ಸರಿ ಹತ್ತಿಕೊಳ್ಳಿ ಬಸ್ಸಿನೊಳಿದ್ದ ವ್ಯಕ್ತಿಯಂದ.
“ಬಸ್ಸಿನೊಳಗೆ ಯಾರು ಇಲ್ಬಲ್ಲೊ! ಹೇ ಬಾರಮ್ಮ ಹೆದರಬೇಡ” ಅವನೆಂದ. ಅಷ್ಟರಲ್ಲೇ ಬಸ್ ರಸ್ತೆ ಬದಲಿಸಿತು. ಇದು ಕೆ ಆರ್ ಪುರಂ ರೂಟ್ ಅಲ್ಲ, ಯಾವ ಕಡೆ ಹೋಗ್ತಿದ್ದೀರಿ. ನಿಲ್ಲಿಸಿ ಅವನೆಂದ. ಅವಳ ದೇಹ ರಕ್ತ ಹೀನವಾಯಿತು. ಅವರೆಲ್ಲ ನಗಲು ಆರಂಭಿಸಿದರು. ಅವಳು ಪ್ರಜ್ಞೆ ತಪ್ಪುವುದೊಂದು ಉಳಿದಿತ್ತು. ಇಬ್ಬರಿಗೂ ಮುಂದಿನ ಸ್ಥಿತಿ ಗ್ರಹಿಕೆಗೆ ಬಂದಿತ್ತು.
‘ಏನ್ರಿ ಮಾಡ್ತಿದೆ ನಿಮ್ಮ ಸರ್ಕಾರ? ಹೆಣ್ಣಿನ ಮೇಲೆ ಈ ರೀತಿ ನಡೆದಿದೆ’ ಸದನದಲ್ಲಿ ವಿರೋಧ ಪಕ್ಷದವರ ಕೂಗು. ‘ನಾವು ಅಧಿಕಾರಿಗಳನ್ನ ಸಸ್ಪೆಂಡ್ ಮಾಡಿದ್ದೀವಿ, ಹುಡುಗಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾಳೆ. ಸರ್ಕಾರ ಎಲ್ಲ ಸಹಾಯಕ್ಕೂ ಸಿದ್ಧ.’ ಆಡಳಿತ ಪಕ್ಷಗಳ ಸಮರ್ಥನೆ. ‘ನಿಮ್ಮ ಅಧಿಕಾರಿಗಳು, ಸೆಕ್ಯೂರಿಟಿಗಳು, ಗಸ್ತು ತಿರುಗೋರು ಯಾಕ್ರಿ ಇರಲಿಲ್ಲ?’ ಪೊಲೀಸರಿಗೆ ಮಾಧ್ಯಮದವರ ಪ್ರಶ್ನೆಗಳ ತಿರುಗುಬಾಣ. ‘ನೋಡಿ ನಮಗೆ ಅಧಿಕಾರವೇ ಇಲ್ಲ. ಮೇಲಿಂದ ಒತ್ತಡ ನಮ್ಮಲ್ಲಿ ಇರೋ ಪೊಲಿಸರು ಅರ್ಧ ಕರ್ಧ ಮಿನಿಸ್ಟರ್ ಸೆಕ್ಯೂರಿಟಿ, ಹೋರಾಟ, ಗಲಾಟೆಗಳಲ್ಲಿ ಕಾವಲಿದ್ದಾರೆ. ನಮ್ಮಲ್ಲಿ ಹೆಚ್ಚಿನ ಅಧಿಕಾರಿಗಳಿಲ್ಲ…! ಪೊಲೀಸರ ಅಸಹಾಯಕತೆ.
‘ಸರ್ಕಾರಕ್ಕೆ ಖಾಲಿ ಹುದ್ದೇನ ಭರ್ತಿ ಮಾಡೋದಕ್ಕೆ ಸಮಯವಿಲ್ಲ. ನಿರುದ್ಯೋಗಿಗಳಿಗೆ ಸಾಯುವ ಸಮಸ್ಯೆ ತಪ್ಪಿಲ್ಲ. ಇದು ಸಕರ್ಾರದ ನಿರ್ಲಕ್ಞ್ಯವೇ? ಪೊಲೀಸರ ದೌರ್ಬಲ್ಯವೇ? ಈ ಎಲ್ಲಾ ಪ್ರಶ್ನೆಗಳಿಗೂ ಸಿ ಎಂ ಉತ್ತರಿಸಬೇಕು… ವಿಥ್ ಕ್ಯಾಮರ ಪರ್ಸನ್ ಆಶಿಶ್,ನಿವೇದಾ ಫಾರ್ ನ್ಯೂಸ್ ಟಿವಿ’. ಟಿವಿ ಹೊಡೆದುಕೊಳ್ಳುತ್ತಿತ್ತು. ಸೋಫಾ ಮೇಲೆ ಕುಳಿತಿದ್ದ ದಂಪತಿಗಳು ಛೇ.. ಛೇ… ಕೆಟ್ಟ ಸರ್ಕಾರ, ಪೊಲೀಸ್ ನವರು ಸರಿ ಇಲ್ಲ. ಲೋಚಗುಡುತ್ತಲೆ ಪಾರ್ಟಿಗೆ ಹೊರಟುಬಿಟ್ಟರು.
ಪ್ಲೀಸ್ ಅವಳಿಗೇನು ಮಾಡಬೇಡಿ. ಅಮ್ಮಾ…! ತಲೆಗೆ ಪೆಟ್ಟು ಬಿದ್ದ ತಕ್ಷಣ ಹುಡುಗ ಕೆಳಗೆ ಬಿದ್ದ. ನಾನು ಮುದುರಿ ಸೀಟಿನ ಮೂಲೆಯಲ್ಲಿ ಕುಳಿತುಬಿಟ್ಟಿದ್ದೆ. ದುಪ್ಪಟದಿಂದಲೇ ತುಂಬು ತೋಳಿನ ಕಾಲರ್ ಇರುವ ಕುರ್ತಾವನ್ನು ಪಟಿಯಾಲ ಪ್ಯಾಂಟನ್ನು ಮುಚ್ಚಿಕೊಳ್ಳಲು ಪ್ರಯತ್ನಿಸುತ್ತಿದ್ದೆ. ಬಾಯಿ ಬಿಡಲಾಗುತ್ತಿಲ್ಲ. ಸುತ್ತಲು ಕತ್ತಲಾಗಿದೆ. ಕಿಟಕಿಗಳನ್ನು ಪರದೆಗಳಿಂದ ಮುಚ್ಚಲಾಗಿದೆ. ಒಮ್ಮೆಗೆ ಅಷ್ಟು ಮುಖಗಳು ತನ್ನೆಡೆ ಬರುತ್ತಿರುವುದನ್ನು ನೋಡಿ ತೊಟ್ಟಿಲಲ್ಲಿ ಒಂಟಿಯಾಗಿ ನಿದ್ದೆ ಮಾಡುತ್ತಿರುವ ಮಗು ಪಕ್ಕದಲ್ಲಿ ಅಮ್ಮ ಇಲ್ಲದ್ದನ್ನು ಕಂಡು ಚಿಠಾರನೆ ಚೀರುವಂತೆ ಚೀರಲು ಪ್ರಯತ್ನಿಸುತ್ತಿದ್ದೆ. ಒಮ್ಮೆಲೆ ಅಪ್ಪನ ಕಾಳಜಿ, ಅಮ್ಮನ ಎಚ್ಚರಿಕೆ, ಅಣ್ಣನ ಹುಷಾರು, ತಮ್ಮನ ಮುದ್ದು ನೆನಪಾಗಿತ್ತು. ಅಷ್ಟರಲ್ಲೇ ಬಾಯಿಗೆ ಬಟ್ಟೆ ತುರುಕಿದರು. ಕಂಗಳು ದೊಡ್ಡದಾದವು. ತಲೆಯನ್ನು ಬಿರುಗಾಳಿಯಂತೆ ಕೊಡವಿದೆ. ಕೈ ಕಟ್ಟಿದ ಒಬ್ಬ, ಕಾಲುಗಳನ್ನ ಹಿಡಿದ ಮತ್ತೊಬ್ಬ. ಇನ್ನೊಬ್ಬ ಕುತರ್ಾವನ್ನೇ ಬಲವಾಗಿ ಎಳೆದಾಡಿದ್ದ. ಅಯ್ಯೋ ಅರ್ಧ ಬೆತ್ತಲ ದೇಹ ! ಹಸಿದ ನಾಯಿಗಳ ಈ ದೃಷ್ಟಿ. ಅಯ್ಯೋ ಅಲ್ಲೇ ಆಗಿ ಹೋಯಿತ್ತಲ್ಲ ಅತ್ಯಾಚಾರ. ಆತ್ಮ ರೋಧಿಸುತ್ತಿದೆ. ಅಷ್ಟು ದಿನದಿಂದ ಕಾಪಿಟ್ಟುಕೊಂಡು ಅವನಿಗಾಗಿ ಮೀಸಲಿಟ್ಟಿದ್ದ ದೇಹದ ಮೇಲೆ ತನಗೆ ಬೇಡದ ಕೈ. ಹೆದರಿಸುವ ಕಂಗಳ ನೋಟ! ಅಯ್ಯೋ ಬೇಡ ಮುಟ್ಟಬೇಡ! ನಿನ್ನ ಸ್ಪರ್ಶವನ್ನು ನನಗೆ ಸಹಿಸಲಾಗುತ್ತಿಲ್ಲ. ಕಿರುಚಲಾಗುತ್ತಿಲ್ಲ ಬಾಯಿಗೆ ಬಟ್ಟೆ ಅಡ್ಡ. ಬೇಡ ಬೇಡ ಬಿಡೊ ನನ್ನ! ಕೂಗಲಾಗುತ್ತಿಲ್ಲ. ಕಾಲಿನಿಂದ ಒದ್ದೆ ಅಬ್ಬಾ! ಏನೋ ಸಮಧಾನ. ಮತ್ತೆ ಬಂದ ರಾಕ್ಷಸ ಕೆನ್ನೆಗೆ ಹೊಡೆದ. ಮಮರ್ಾಘಾತ ನೀಡುವ ಸ್ಪರ್ಶವದು. ಪ್ರತಿ ರೋಧಿಸುವಷ್ಟು ರೋಧಿಸಿದೆ. ಒಟ್ಟೊಟ್ಟಿಗೆ 5 ಬೆವರು ವಾಸನೆ. ಸಿಗರೇಟು, ಕುಡಿತ ಮತ್ತು ಮಾಂಸದ ವಾಸನೆ, ಅವನ ಶರ್ಟಿನ ಮೇಲೆ ಮಾಂಸದಡುಗೆಯ ಕಲೆ. ಹಸಿದ ನಾಯಿಗಳು ಎಳೆ ಕಂದನನ್ನು ಎಳೆದಾಡುತ್ತಿವೆ. ಚಿತೆಯ ಮೇಲೆ ಜೀವಂತ ಶವ ಸಂಸ್ಕಾರ. ಬೆತ್ತಲಾಗಿ ರಸ್ತೆಯಲ್ಲಿ ಒಡಿದ ಅನುಭವ. ಮೂಳೆಯನ್ನು ಜಗಿದು ತಿನ್ನುವಂತೆ ಮುಕ್ಕುತ್ತಿದ್ದಾನೆ. ಕಿರುಚಲಾಗುತ್ತಿಲ್ಲ. ಆಗಲೇ ದಣಿದಿದ್ದೆ. ಮತ್ತೊಬ್ಬ ವಿ ವಸ್ತ್ರ ಪ್ರಜ್ಞೆ ತಪ್ಪಿಬಿಟ್ಟೆ. ನೀರು ಎರಚಿ ಎಬ್ಬಿಸಿದರು. ಮತ್ತೊಬ್ಬ ರಕ್ತದೊಕುಳಿ ಹರಿಸಲು ಸಿದ್ಧನಾದ. ಕಣ್ಣು ಕಟ್ಟಿತ್ತು. ನನ್ನ ದೇಹಕ್ಕೆ ಏನಾಗುತ್ತಿದೆ? ಆ ಸ್ಪರ್ಶದ ಅರಿವು ಹೊರಟುಹೋಗಿತ್ತು. ಕಡೆಯವನೊಬ್ಬ ಕೆರಳಿದ ಸಿಂಹನಂತೆ ಎರಗಿದ ಸಿಗರೇಟಿನ ಕಡೆ ಧಂ ಎಳೆದಂತೆ, ಕಡೆ ಪೆಗ್ ನ ಕಡೆ ಹನಿಯನ್ನು ಹೀರುವಂತೆ ಹೀರಿಬಿಟ್ಟ. ಹಸಿವಲ್ಲ ಅದು! ತೇಗಿದರು ರಕ್ಕಸರು!. ನಾಗರಿಕತೆಯಲ್ಲಿ ವಿಕಾಸವಾಗದ ಕ್ರೂರ ಮೃಗಗಳು. ಏನು ನಡೆಯುತ್ತಿದೆ ಎನ್ನುವಷ್ಟರಲ್ಲೇ ಇಬ್ಬರನ್ನು ಬಸ್ಸಿನಿಂದ ಕೆಳಗೆ ಎಸೆದಿದ್ದರು.
ನೋಡ್ರಿ ಆ ಹುಡುಗಿಯನ್ನ ಕೂಡಲೇ ವಿದೇಶಿ ಆಸ್ಪತ್ರೆಗೆ ಶಿಫ್ಟ್ ಮಾಡಿ. ಇಷ್ಟು ಭೀಕರತೆ! ಇಲ್ಲ ಸಾರ್ ಆಕೆ ಬದುಕೋದಕ್ಕೆ ಸಾಧ್ಯವಿಲ್ಲ. ಮೀಡಿಯಾದವರಿಗೆ ಹೇಳಬೇಡಿ ಮೇಡಂ, ಲಾ ಅಂಡ್ ಆರ್ಡರ್ ಪ್ರಾಬ್ಲಂ ಆಗಿಬಿಡತ್ತೆ. ಆಗಲೇ ದೇಶದೆಲ್ಲೆಡೆ ದೊಡ್ಡ ಚಳವಳಿಗಳು ಪ್ರಾರಂಭವಾಗಿವೆ.
ಡೌನ್ ಡೌನ್ ಪೊಲೀಸ್, ಥೂ ಎಂಥಾ ಸರ್ಕಾರ. ಫೇಸ್ಬುಕ್ನಲ್ಲಿ ವ್ಯಾಪಕ ಚರ್ಚೆ. ಸಣ್ಣ ನಡುಕದಲ್ಲೇ ಜಗತ್ತು ಚಲನೆಯಲ್ಲಿ ತೊಡಗಿದೆ. ಎಲ್ಲರ ಅಕೌಂಟಿಗೂ ಆ ದಿನದ ಸಂಬಳ ಸೇರುತ್ತಿದೆ. ಭಯದಲ್ಲೇ ಚಿತ್ರನ್ನದ ಒಗ್ಗರಣೆ ಸಿಡಿಯುತ್ತಿದೆ. ಗುರುವಾರ ಚಾನೆಲ್ ಟಿ ಆರ್ ಪಿ ಬಂದಿದೆ. ಎಂದಿನಂತೆ ನಂಬರ್1 ಚಾನೆಲ್ ಟಾಪ್ ಇದೆ. ‘ಏನ್ರೀ ನಾವು ಆ ಹುಡುಗಿ ಮನೆ ಬಗ್ಗೆ, ಆ ಹುಡುಗನ ಲೈವ್ ಸಂದರ್ಶನ ಮಾಡಿದ್ವಿ. ಆದ್ರೂ ಆ ಚಾನೆಲ್ ಟಾಪ್ ಇದೆಯಲ್ಲರಿ’. ಸಾರ್ ಆ ಸಮಯದಲ್ಲಿ ಅವರು ಆ ಹುಡುಗಿಯ ಆಸ್ಪತ್ರೆ ವಿಶ್ಯುಯಲ್ ತೋರಿಸುತ್ತಿದ್ರು. ಇನ್ಪುಟ್ ಚೀಫ್ ಪರದಾಟ. ಸರಿ ಹೋಗ್ಲಿ ಆ ಹುಡುಗಿ ಮನೆ ಫಾಲೋ ಅಪ್ ನೋಡಿ, ಪಾಪ ಅವರ ಮನೆಗೆ ಸಕರ್ಾರದಿಂದ ಪರಿಹಾರ ಬಂತ? ಸಂಜೆ ಗೆಸ್ಟ್ ಲೈನ್ ಅಪ್ ಮಾಡಿ ಲೈವ್ ಮಾಡೋಣ. ಮಾಧ್ಯಮದಿಂದ ಆಕೆಗೆ ಎಷ್ಟು ಸಾಧ್ಯವೋ ಅಷ್ಟು ಸಹಾಯ ಮಾಡೊಣ. ಮಾನವೀಯತೆ ಮತ್ತೆ ಮತನಾಡುತ್ತಿತ್ತು.
ಯೆಸ್ ಸರ್ ಶಿ ಇಸ್ ಡೆಡ್! 7 ದಿನಗಳ ತಂದೆ ತಾಯಿ ನರಕ ಇಂದಿಗೆ ಮುಗಿದಿತ್ತು. ಸಮಾಜ ಬದಲಿಸಲು ಸಾಮಾಜಿಕ ಬಲಿಪಶುವಾಗಬೇಕಾಯ್ತು. ಕ್ಯಾಂಡಲ್ ಗಳ ಬೆಳಕಲ್ಲೆ ಹೊಸ ಕಾನೂನುಗಳು ಬಂದವು. ನಡುವೆಯೆ ಸದ್ದಿಲ್ಲದೇ ಮತ್ತಷ್ಟು ಹೂಗಳು ಬಾಡಿದವು. ಒಂದೆಡೆ ಸಾಮೂಹಿಕವಾಗಿ ಸ್ನೇಹಿತರು, ಮತ್ತೊಂದೆಡೆ ಅಪ್ಪನಿಂದ, ಇನ್ನೊಂದೆಡೆ ದಲಿತ ಹೆಣ್ಣು ಮಗಳು, ಬಹಿಷ್ಕಾರಕ್ಕೆ ಒಳಗಾದವರು, ಯೂನಿಫಾರ್ಮ್ ನಲ್ಲಿ ಶಾಲೆಗೆ ಹೋದ ಮಗಳು ಪೆಟಿಕೋಟ್ನಲ್ಲಿ ಹೆಣವಾದಳು. ಸೆಂಟ್ ವಾಸನೆಯಲ್ಲಿ ಪಾರ್ಟಿಗೆ ಹೋದ ಮಗಳು ರಕ್ತದ ಮಡುವಿನಲ್ಲಿ ಚಿತೆಯಲ್ಲಿ ಮಲಗಿದ್ದಳು.
ಯೆಸ್! ಯೆಸ್! ಯೆಸ್! ನಾನು ಹತ್ತು ಗಂಟೆಗೆ ಸಿನಿಮಾಗೆ ಹೋಗಿದ್ದು ನನ್ನ ತಪ್ಪೇ? ಹೌದು. ನನ್ನದೇ ತಪ್ಪು!. ರಾತ್ರಿಯ ತನಕ ಸಿನಿಮಾ ಪ್ರದರ್ಶನಕ್ಕೆ ಅನುವು ಮಾಡುವ ಸರ್ಕಾರ. ಹತ್ತು ಗಂಟೆಯ ನಂತರ ಸಾರಿಗೆ ವ್ಯವಸ್ಥೆ ನೀಡದ ಸಾರಿಗೆ ಮಂತ್ರಿಗಳ ಆಡಳಿತದಲ್ಲಿ, ಪವರ್ ಇದ್ದರೂ ದೌರ್ಬಲ್ಯಕ್ಕೆ ಸಿಲುಕಿಕೊಂಡ ಪೊಲೀಸ್ ವ್ಯವಸ್ಥೆಯಲ್ಲಿ ದೀಪ ಹಚ್ಚುವ ಮುನ್ನ ನಾನು ಮನೆಯಲ್ಲಿ ಇರಬೇಕಿತ್ತು. ಹಾಗೇ ಇದ್ದ ನನ್ನ ಗೆಳತಿ ಮೇಲೆ ಆಕೆ ಅಪ್ಪನೇ ಅತ್ಯಾಚಾರ ಮಾಡಿಬಿಟ್ಟನಲ್ಲ? ಹೌದು ನನ್ನ ಗೆಳತಿ ನೈಟ್ ಪಾಟರ್ಿಗೆ ಸ್ಲೀವ್ಲೆಸ್ ಹಾಕಿದ್ದೆ ಆ ಕಾಮುಕನ ಹಸಿವು ಹೆಚ್ಚಿಸಿಬಿಡ್ತಾದರೆ, ತುಂಬು ತೋಳಿನ ಕಾಲರ್ ನೆಕ್ ಕುರ್ತಾ ಧರಿಸಿದ್ದ ನನ್ನ ಮೇಲೆ ನಡೆದದ್ದು ಏನು?
ಅಮ್ಮ ನಿನ್ನ ಮಗ ಸಿಗರೇಟು ಸೇದಿದರೆ ಗಂಡಸು. 1 ಗಂಟೆಗೆ ಮನೆಗೆ ಬಂದರೆ ನೆಗ್ಲೆಟ್ಟು. ಅವನ ಶರ್ಟ್ ಮೇಲೆ ರಕ್ತದ ರ್ಕತ್ಲೆ ಇದ್ದರೆ ಅನಿಗೇನಾಯ್ತು? ಅನ್ನುತ್ತೀಯ, ಅವನು ಯಾರಿಗೇನು ಮಾಡಿದ ಎಂದು ಕೇಳದ ಮಮತಮಯಿ ನೀನು. ಕೆಟ್ಟ ಮಾತನಾಡಿದಾಗ ಹೊಡೆಯಬೇಕಿತ್ತು. ತನ್ನ ಅಂಗಾಗಗಳ ಕುಚೇಷ್ಟೇ ಮಾಡುವಾಗ ಬರೆ ಇಡಬೇಕಿತ್ತು. ನಿನ್ನ ಮುಟ್ಟಿನ ನೋವು, ಕಾಮುಕರ ಕಣ್ಣಲ್ಲಿ ನೀನು ಸುಟ್ಟು ಹೋಗಿದ್ದನ್ನು ನೆನಪಿಸಿ ಅವನನ್ನು ಬೆಳಕಿನ ಅಗ್ನಿ ಮಾಡಬೇಕಿತ್ತು.
ಅಪ್ಪ ರಾತ್ರಿ 9 ಗಂಟೆಯ ನಂತರ ಮನರಂಜನೆ ಬಯಸುವ ನನ್ನ ಕೆನ್ನೆಗೆ ಹೊಡೆಯಬೇಕಿತ್ತು. ಇಲ್ಲ ಸರ್ಕಾರದ ಕೆನ್ನೆಗೆ ಬಾರಿಸಬೇಕಿತ್ತು. ನಿನಗೆ ನಾನು ಓಟು ಕೊಟ್ಟಿದ್ದೇನೆ. 9 ಗಂಟೆಯ ನಂತರ ಮಾಲ್, ಸಿನಿಮಾ ಮಂದಿರ, ಬಾರ್,ಪಬ್ಗಳನ್ನು ಮುಚ್ಚಿಸು. ನಿನ್ನ ಆದಾಯ ಮುಖ್ಯವಲ್ಲ, ನನ್ನ ಆದೇಶ ಅಂತ. ಇಲ್ಲ ನನ್ನ ಮಗಳನ್ನು ಜೋಪಾನವಾಗಿ ಮನೆ ಸೇರಿಸೋ ಹೊಣೆ ನಿನ್ನದು ಎಂದು ಕುತ್ತಿಗೆ ಪಟ್ಟಿ ಹಿಡಿದು ಪಟ್ಟಾಗಿ ಕೂರಬೇಕಿತ್ತು.
ಅಯ್ಯೋ…! ಹುಡುಗ ನೀನು ಈ ಸಮಾಜವನ್ನು ನಂಬಿ ಬಿಟ್ಟೆ. ಸಾರಿಗೆ, ಪೊಲೀಸ್, ಸರ್ಕಾರ ಎಲ್ಲವನ್ನು ನಂಬಿ ಬಿಟ್ಟೆ. ನಾನು ಕೂಡ! ನನ್ನದು ಪ್ರಜಾಪ್ರಭುತ್ವ. ಕಾಮುಕರ ಪ್ರಭುತ್ವವೆಂದು ತಿಳಿದಿರಲಿಲ್ಲ ನನಗೆ. ಕಾಮಕ್ಕೆ ಮೆಟ್ರೋ ಸಿಟಿಯಾದರೇನು? ಟವರ್ ಸಿಗದ ಮಲೆನಾಡದರೇನು? ಶೌಚಾಲಯ ಕಾಣದ ಬಯಲು ಸೀಮೆಯಾದರೇನು? ಅಂತರಾಷ್ಟ್ರೀಯ ಶಾಲೆ? ಆಟದ ಮೈದಾನ? ಸ್ಕೂಲ್ ವ್ಯಾನ್? ಕಂಬಿಗಳ ಒಳಗೆ, ಹೊರಗೆ? 3 ತಿಂಗಳ ಹಸುಗೂಸು? 80 ರ ಮುದುಕಿ? ಕಾಮಕ್ಕೆ ಕಣ್ಣಿಲ್ಲ ನಿಜ. ಆದರೆ ‘ಪುರುಷತ್ವ’ದ ಹೆಮ್ಮೆಗೆ ಭಯವಿದೆಯಲ್ಲ! ಕಾನೂನು ಆ ಆಯಾಮದಲ್ಲೇ ಶಿಕ್ಷೆ ನೀಡಲಿ. ನಾಯಿಗಳಂತೆ ಮುಕ್ಕಿದವರು ನಾಯಿಗಳಿಗೆ ಆಹಾರವಾಗಲಿ.
ನಾನೆಂದು ಶೌರ್ಯದ ಕನಸು ಕಂಡವಳಲ್ಲ. ಚರಿತ್ರೆಯಾಗಬೇಕೆಂದವಳಲ್ಲ. ಆದರೂ ಹೋರಾಡಿದೆ ನನ್ನ ಕಡೆ ಉಸಿರಿನ ತನಕವೂ ಹೋರಾಡಿದೆ. ನನ್ನದೇ ಭೀಕರವೋ? ನಾಗರಿಕತೆ ವಿಕಾಸದ ಹಂತದಲ್ಲಿ? ಯುದ್ಧ ಸಂದರ್ಭದಲ್ಲಿ? ನನಗಿಂತಲೂ ಅಥವಾ ಇನ್ನೂ ಭೀಕರವಾಗಿ ಅತ್ಯಾಚಾರದ ಕುಲುಮೆಯಲ್ಲಿ ಬೆಂದು ಹೋಗಿರಬಹುದು. ಅದರ ವಿನಾಶಕ್ಕೆ ನಾನು ಮುನ್ನುಡಿ ಬರೆದೆ.
ಹುಡುಗ ನನ್ನ ಕ್ಷಮಿಸು ನಾನು ಬದುಕಿದ್ದರೂ, ನಿನ್ನ ಜೊತೆ ಬಾಳಲಾಗುತ್ತಿರಲಿಲ್ಲ. ನೀನು ನನ್ನ ಮುಟ್ಟಿದರೇ!? ಇಲ್ಲ ಮುಟ್ಟಲಾಗುತ್ತಿರಲಿಲ್ಲ. ಅಮ್ಮ ಕೂಡ ನನ್ನ ಮುಟ್ಟಲು ಬಿಡುತಿರಲಿಲ್ಲ ನಾನು. ನಿದ್ದೆ ಮಾಡಲು ಆಗುತ್ತಿರಲಿಲ್ಲ. ಸಮಾಜದ ಅನುಕಂಪದ ಕಂಗಳು! ನನ್ನ ದೇಹದ ನೋವು! ಆ ದುಸ್ವಪ್ನದಿಂದ ನಿತ್ಯ ಸಾಯುತ್ತಿದ್ದೆ. ನನ್ನ ದೇಹವನ್ನು ಕನ್ನಡಿಯಲ್ಲಿ ನೋಡಲು ನಾನೇ ಹೆದರುತ್ತಿದ್ದೆ. ಮುಟ್ಟು ಸರಿಯಾಗುತ್ತಿರಲಿಲ್ಲ. ನಿತ್ಯ ಕರ್ಮಗಳು ಕಷ್ಟವಾಗುತ್ತಿದ್ದವು. ಹೆಚ್ಚು ನೀರು ಕುಡಿಯುತ್ತಿರಲಿಲ್ಲ. ಅನೇಕ ಕಾಯಿಲೆಗಳು! ಸೊಂಕು, ಕೊನೆಗೆ ಎಚ್ ಐ ವಿಯ ಆಗುತಿತ್ತು. ನಿನ್ನ ಮೇಲೆ ನಾನು ಪ್ರತಿದಿನ ಅತ್ಯಾಚಾರ ಮಾಡಿದಂತೆ ಆಗುತ್ತಿತ್ತು. ಅದಕ್ಕೆ ಹುಡುಗ ನಾ ಹೋಗಿಬಿಟ್ಟೆ! ಸರಿ, ನಾನೀಗ ಬರುತ್ತೇನೆ. ನನಗೆ ಪುನರ್ಜನ್ಮವಂತೆ! ಸದ್ಯ ನಾನೀಗ ಗಂಡಾಗಿ ಹುಟ್ಟುತ್ತಿದ್ದೇನಂತೆ! ಉತ್ತಮ ಸಂಸ್ಕಾರವಂತ ಪುರುಷನಾಗಿ, ಅಣ್ಣ, ತಮ್ಮ, ಗಂಡನಾಗಿ, ಒಬ್ಬ ಉತ್ತಮ ಪ್ರಜೆಯಾಗಿ! ಬರಲೇ ಗೆಳೆಯ!.
 

‍ಲೇಖಕರು G

16 December, 2014

9 Comments

  1. ಕುಸುಮಬಾಲೆ

    ಜೀವ ಹಿಂಡುವ ನೋವೆಂದರೆ…

  2. Nagakannika

    karulu kattarisuvanta mooka vedane

  3. shylaja

    So touching. matte aa novu marukalisitu. Neenu olle sensitive Barahagarti KAnda

  4. ಋತಊಷ್ಮ

    ಕಥೆಯ ಹೆಣ್ಣಿಗೆ ಏನೆಲ್ಲಾ ಆದರೂ ಅವಳ ಮೌನ ಮತ್ತು ಆಶಯತೆ ಮನ ಕಲುಕುತ್ತದೆ.

  5. lakshmishankarjoshi.

    ಅಮ್ಮಾ,ಆ ನೆನಪೇ ಬೇಡವೆಂದರೂ………ನೆನ್ನೆ ನೆನಪಾಗಿತ್ತು.ಹೊಟ್ಟೇಲಿ ತಳಮಳ.

  6. hari prasad k r

    gud narrative..

  7. pushpa

    ಸೊಗಸಾದ ಆರ್ದ್ರ ನಿರೂಪನೆ…… ಕತೆಯ ಕೊನೆಯ ಆಶಯದಲ್ಲಿ ಮೊನಚಾದ ವ್ಯಂಗ್ಯವಿದೆ….ಪುರುಷನಿಗೆ ಬೇಕಾದ ಸಂಸ್ಕಾರದ ತುರ್ತನ್ನ ದ್ವನಿಸುತ್ತದೆ.

  8. Rohini Nagesh

    ಗೆಳತಿ…
    ನೀ ಓದಿಸಿದ ಓದಿ..ಕೈ ನಡುಗುತಿದೆ, ಮನ ಬಿಕ್ಕುತಿದೆ.ಕಣ್ಣಲ್ಲ್ಲಿ ಆಕ್ರೋಶದ, ಅಸಹಾಯಕತೆಯ ಅಶೃಧಾರೆ. ಪರಿಹಾರ ಸಿಗದೆ ಆತ್ಮ ಬೇಯುತಿದೆ. ನರಹಂತಕನ “ಆಯುಧ”ದ ಅಟ್ಟಹಾಸದ ಹುಟ್ಟಡಗಿಸು ದೇವ.

  9. Rohini Nagesh

    ಗೆಳತಿ…
    ಅಂಥ ಹೆಣ್ಣು ಮಗಳ ಮನ: ಸ್ಥಿತಿಯ ಬಗ್ಗೆ , ನಾ ಊಹಿಸಿಯೂ ಇರಲಿಲ್ಲ., ವಿವರವಾಗಿ ಎಂದೂ.. ತಿಳಿಯ ಬಯಸಿರಲಿಲ್ಲ. ಮಾನಸಿಕ ಹಿಂಸೆ ಇಂದ ನನ್ನನ್ನು ನಾನು ಪಲಾಯನಗೊಳಿಸಲು, ನನ್ನನ್ನು ನಾನು ಸಮಾಜದ ಭಯದಿಂದ ಮುಕ್ತವಾಗಿರಿಸಲು. ಓದುವಾಗ ನಾನೆ ಆ ಹೆಣ್ಣಾಗಿ ಹಾದು ಹೋದಂತಾಯಿತು.
    ಕಂಪಿಸುತಿದೆ ಭಯದಿ ಎನ್ನ ಹೆಣ್ತನ. ಚಟಪಟಿಸುತಿದೆ ನನ್ನ ತಾಯ್ತನ, ಜಗದ ನನ್ನೆಲ್ಲಾ.. ಹೆಣ್ಣು ಮಕ್ಕಳಿಗಾಗಿ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading