ನಿಮ್ಮ ಕವಿತೆಗಳು ನಮ್ಮ ಜೊತೆಗಿವೆ ನಿಮ್ಮ ನೆನಪುಗಳಾಗಿ!..

ಕು.ಸ.ಮಧುಸೂದನ, ರಂಗೇನಹಳ್ಳಿ

ಸುಮತೀಂದ್ರ ನಾಡಿಗ್ ಇನ್ನಿಲ್ಲವಾದ ಸುದ್ದಿ ಕೇಳಿ  ಮನಸಿಗೆ ಪಿಚ್ಚೆನ್ನಿಸಿಬಿಟ್ಟಿತು. ಬಹುಶ: ಈ ಪೀಳಿಗೆಯ ಬಹುತೇಕರಿಗೆ ನಾಡಿಗರು ಅಪರಿಚಿತರೇ ಎನ್ನಬಹುದು.

ಯಾವತ್ತಿಗೂ ನಾನವರನ್ನು ಬೇಟಿಯಾಗಲೇ ಇಲ್ಲ. ಅದೊಂದು ನೋವು ಸದಾ ನನ್ನನ್ನು ಕಾಡುವುದು ಖಂಡಿತ! ಕೇವಲ ಪತ್ರಗಳ ಮೂಲಕವೇ ನನಗವರು ಕೆಲಕಾಲ ನನ್ನ ಹಿತೈಷಿಯಾಗಿ, ನಾನು ತೀವ್ರವಾದ ಅನಾರೋಗ್ಯ ಪೀಡಿತನಾಗಿದ್ದ ಸಮಯದಲ್ಲಿ ಬದುಕುವ ಧೈರ್ಯ ತುಂಬಿದಂತವರು.

2000 ನವೆಂಬರಿನಲ್ಲಿ ನನ್ನ ದೇಹದ ಎಡಭಾಗಕ್ಕೆ ಆದ ಪಾರ್ಶ್ವವಾಯುವಿನಿಂದ ಸತತ ಎರಡು ವರ್ಷ  ಆಸ್ಪತ್ರೆಯಲ್ಲಿ ಅಕ್ಷರಶ: ಜೀವ ಶವದಂತೆ ಮಲಗಿದ್ದೆ. ನಂತರ ನಿದಾನವಾಗಿ ಎದ್ದು ಓಡಾಡುವಂತಾದಾಗ  ಎಂದೂ ಸುಮ್ಮನೆ ಕೂರದ ನಾನು ಕವಿತೆಗಳಿಗೆ ಮಾತ್ರ ಮೀಸಲಾಗಿದ್ದ ಕಾವ್ಯ ಖಜಾನೆ (ಕಾವ್ಯ ಕನ್ನಡಿ) ಎನ್ನುವ ಖಾಸಗಿ ಪತ್ರಿಕೆಯೊಂದನ್ನು ಶುರು ಮಾಡಿದ್ದೆ.

ಆಗ ನಾಡಿಗರ ವಿಳಾಸ ಹುಡುಕಿ ನನ್ನ ಬಗ್ಗೆ ವಿವರವಾಗಿ ಬರೆದು ಅವರ ಕವಿತೆಗಳನ್ನು ಕಳಿಸಲು ಕೋರಿ ಕೊಂಡಿದ್ದೆ. ತಕ್ಷಣವೇ ಪ್ರತಿಕ್ರಿಯೆ ನೀಡಿದ ಅವರು ತಮ್ಮ ಎರಡು ಕವಿತೆಗಳನ್ನು ಕಳಿಸಿ ನನ್ನ ಆರೋಗ್ಯದ ಬಗ್ಗೆ ಕಾಳಜಿ ತೋರಿಸಿ ತಮ್ಮ ಹೃದಯ ವೈಶಾಲ್ಯತೆ ಮೆರೆದಿದ್ದರು.

ನಂತರವೂ ಪತ್ರಿಕೆ ನಡೆದ ಮೂರು ವರ್ಷಗಳ ಕಾಲ ಸುಮಾರು ಕವಿತೆಗಳನ್ನು ಪ್ರಕಟಿಸಲು ನೀಡಿದ್ದರು. ಅದರಲ್ಲಿ ಬಹುಮುಖ್ಯವಾಗಿ ಬಂಗಾಳಿ ಕವಿ ಜೀವನದಾಸ್ ಅವರ ಕವಿತೆಗಳನ್ನು ಅನುವಾದಿಸಿ ಕೊಟ್ಟಿದ್ದರು. ಆ ಸಮಯದಲ್ಲಿ ಪ್ರತಿ ತಿಂಗಳೂ ಕವಿತೆ ಕಳಿಸುವಾಗ ನನಗೆ ಸಾಹಿತ್ಯ ಪತ್ರಿಕೆಯೊಂದನ್ನು ನಡೆಸಬೇಕಾದ ರೀತಿಯ ಬಗ್ಗೆ ಕಿವಿಮಾತು  ಹೇಳುತ್ತಾ, ನನ್ನ ಆರೋಗ್ಯದ ಬಗ್ಗೆ ವಿಚಾರಿಸುತ್ತ ಪ್ರೀತಿ ತೋರಿಸಿದ್ದರು. (ಆ ದಿನಗಳಲ್ಲಿ ಜಿ.ಎಸ್.ಶಿವರುದ್ರಪ್ಪ, ಚನ್ನವೀರ ಕಣವಿ, ಎಂ. ಆರ್.ಕಮಲಾ, ಜಯಂತ್ ಕಾಯ್ಕಿಣಿ, ಮುಂಬೈನಲ್ಲಿದ್ದ ಹಾ.ಮ.ಕನಕ, ಹೆಚ್.ಎಸ್.ಶಿವಪ್ರಕಾಶ್ ಮುಂತಾದ ಘಟಾನುಘಟಿ ಕವಿಗಳು ನನ್ನ ಪತ್ರಿಕೆಗೆ ಕವಿತೆ ಕಳಿಸಿದ್ದು ಇವತ್ತಿಗೂ ನನಗೆ ಹೆಮ್ಮೆಯ ವಿಚಾರ).

ನಂತರ ಪತ್ರಿಕೆ ನಿಂತು ಹೋದರೂ, ಒಂದಷ್ಟು ಕಾಲ ಪತ್ರ ಬರೆಯುವುದು ಮಾತಾಡುವುದು ನಡೆದಿತ್ತು. ಬಹುಶ: ನಂತರ ನಡೆದ ನನ್ನ ಖಾಸಗಿ ಬದುಕಿನ ಹಲವು  ಏರುಪೇರುಗಳು ನಾನು ಸಾಹಿತ್ಯ ಕ್ಷೇತ್ರವಿರಲಿ, ಯಾರೊಂದಿಗೂ ಸಂಪರ್ಕವನ್ನೇ ಇಟ್ಟುಕೊಳ್ಳಲಾಗದಂತಹ ಖಿನ್ನತೆಗೆ ದೂಡಿಬಿಟ್ಟವು.

ಮತ್ತೆ ನಾನೆಂದೂ ನಾಡಿಗರಿಗೆ ಪತ್ರ ಬರೆಯುವ ಮಾತಾಡಿಸುವ ಪ್ರಯತ್ನ ಮಾಡಲಿಲ್ಲ. ಇವತ್ತಿಗೂ ನನಗೀ ಬಗ್ಗೆ ಒಂದು ಸಣ್ಣದಾದ  ಅಪರಾಧಿ ಪ್ರಜ್ಞೆ ಕಾಡುತ್ತಿದೆ. ಇವತ್ತಿನ ಪೀಳಿಗೆಯ ಕವಿಗಳು ಸುಮತೀದ್ರ ನಾಡಿಗರ ಸರಳತೆಯನ್ನು  ಮೈಗೂಡಿಸಿಕೊಳ್ಳಬೇಕಿದೆ.

ಕೊನೆಯದಾಗಿ: ಹೋಗಿಬನ್ನಿ ಸರ್,  ನಿಮ್ಮ ಕವಿತೆಗಳು ನಮ್ಮ ಜೊತೆಗಿವೆ ನಿಮ್ಮ ನೆನಪುಗಳಾಗಿ!

ಕವಿತೆಗಳನ್ನು ಬರೆದು ಓದಿಸಿದ್ದಕ್ಕೆ ನಾವು ಋಣಿಯಾಗಿರುತ್ತೇವೆ.

‍ಲೇಖಕರು avadhi

August 7, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: