ನಿಮ್ಮದು ಕಥೆಯಲ್ಲ.. ಸಂಶೋಧನಾ ಲೇಖನ

ಕೇಂದ್ರ ಸಾಹಿತ್ಯ ಅಕಾಡೆಮಿ ಇತ್ತೀಚೆಗೆ ಕಲಬುರ್ಗಿಯಲ್ಲಿ ‘ಸಮಕಾಲಿನ ಸಣ್ಣಕಥೆಗಳ ಓದು  ಮತ್ತು ಸಂವಾದ’ ಹಮ್ಮಿಕೊಂಡಿತ್ತು. ಬಸವರಾಜ ಡೋಣೂರು ಮತ್ತು ಮಹಾಂತೇಶ ನವಲಕಲ್ ಕಥೆಗಳನ್ನು ವಾಚಿಸಿದ್ದರು.

ಈ ಕುರಿತು ಕೆ ಎಂ ವಿಶ್ವನಾಥ ಮರತೂರ ಅವರು ಬರೆದ ಸಮೀಕ್ಷಾ ಬರಹ ‘ಅವಧಿ’ಯಲ್ಲಿ ಪ್ರಕಟವಾಗಿತ್ತು. ಅದು ಇಲ್ಲಿದೆ-

ಇದಕ್ಕೆ ಕಥೆಗಾರ ಮಹಾಂತೇಶ ನವಲಕಲ್ ಅವರು ಪ್ರತಿಕ್ರಿಯೆ ನೀಡಿದರು. ಅದು ಇಲ್ಲಿದೆ

ಮತ್ತೊಬ್ಬ ಕಥೆಗಾರ, ಕಲಬುರ್ಗಿಯ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರೊ ಬಸವರಾಜ ಡೋಣೂರು ಅವರು ಬರೆದ ಪ್ರತಿಕ್ರಿಯೆ ಇಲ್ಲಿವೆ.

ಒಟ್ಟು ಕಾರ್ಯಕ್ರಮದಲ್ಲಿ ಆದದ್ದೇನು ಎನ್ನುವ ಬಗ್ಗೆ ಕಥೆಗಾರ್ತಿ, ಕಾರ್ಯಕ್ರಮದಲ್ಲಿ ಅತಿಥಿಯೊಬ್ಬರಲ್ಲಾದ ಸಂಧ್ಯಾ ಹೊನಗುಂಟಿಕರ್ ಬರೆದಿದ್ದಾರೆ. ಅದು ಇಲ್ಲಿದೆ 

ಈಗ ಈ ಚರ್ಚೆಯನ್ನು ಆರಂಭಿಸಿದ ವಿಶ್ವನಾಥ ಮರತೂರ ತಮ್ಮ ನೋಟವನ್ನು ಸ್ಪಷ್ಟಪಡಿಸಿದ್ದಾರೆ.

ಕೆ.ಎಂ. ವಿಶ್ವನಾಥ ಮರತೂರ

ಮಹಾಂತೇಶ ನವಲಕಲ್ ಸರ್ ಅವರಿಗೆ, ಪ್ರೀತಿ ಪೂರ್ವಕ ನಮಸ್ಕಾರಗಳು.

ತಾವು ‘ಅವಧಿ’ಯಲ್ಲಿ ಲೇಖನ ಗಮನಿಸಿ, ಪ್ರತಿಕ್ರಿಯಿಸಿದ್ದೀರಿ ನೀವು ನಿಮ್ಮ ಅಭಿಪ್ರಾಯಕ್ಕೆ ಹೇಗೆ ಬದ್ಧರೊ ಹಾಗೆ ನನ್ನ ಅಭಿಪ್ರಾಯಕ್ಕೆ ಬದ್ಧನಾಗಿರುವೆ.

ಈ ಹಿನ್ನಲೆಯಲ್ಲಿ ಒಂದು ಚಿಕ್ಕ ಸ್ಪಷ್ಟತೆ ಕೊಡುತ್ತಿದ್ದೇನೆ.

ನಾನು ನನಗೆ ಅನಿಸಿದ್ದನ್ನು ನೇರವಾಗಿ ಬರೆಯುವ ವ್ಯಕ್ತಿ, ಸುತ್ತಮುತ್ತಲಿನ ಸಾಹಿತ್ಯದ ಕಾರ್ಯಕ್ರಮಗಳಲ್ಲಿ ಸಾಹಿತ್ಯದ ಜ್ಞಾನ ವಿಕಾಸಕ್ಕಾಗಿ ಏನಾದರು ಸಿಗಬಹುದೆ ಎಂಬ ಆಸಕ್ತಿಯ ಯುವಕ. ಸಣ್ಣ ಕಥೆಗಳು ಓದು ಮತ್ತು ಸಂವಾದ ಕಾರ್ಯಕ್ರಮವೆಂದು ಕೇಳಿದಾಗ ಅತ್ಯಂತ ಹರ್ಷದಾಯಕವಾಗಿ ಭಾಗವಹಿಸಿದ್ದೆ. ನಾನು ಲೇಖನದಲ್ಲಿ ಉಲ್ಲೇಖಿಸಿದಂತೆ ಅದು ನನ್ನ ಸಂಪೂರ್ಣ ವಯಕ್ತಿಕ ಅನಿಸಿಕೆ. ಅಕಾಡೆಮಿಯಂತಹ ಕಾರ್ಯಕ್ರಮದಲ್ಲಿ ವಾಚಿಸಿದ ಕಥೆಗಳ ಕುರಿತು ಚರ್ಚಿಸದೇಯಿದ್ದರೆ ಅದಕ್ಕೊಂದು ಅರ್ಥವಿದೆಯೆ ನೀವೇ ಹೇಳಿ. ಕಥಾ ಸಂವಾದವೆಂದರೆ ಓದುಗರ ಅನಿಸಿಕೆ ತಿಳಿಸುವುದು ತಪ್ಪೆ?

ನಿಮಗೆ ಈ ಕಾರ್ಯಕ್ರಮದ ಆಯೋಜಕರ ಬಗ್ಗೆ ಹಿಂಜರಿಕೆಯಿದ್ದರೆ ಅದು ನನ್ನ ತಪ್ಪಲ್ಲ, ಈ ಕಾರ್ಯಕ್ರಮದಲ್ಲಿ ನಿಮ್ಮಂತಹ ಹಿರಿಯರಿಂದ ಕನ್ನಡ ಸಾಹಿತ್ಯವನ್ನು ಬಹಳ ಮುಖ್ಯವಾಗಿ ಸಣ್ಣ ಕಥೆಗಳ ಜಗತ್ತಿನ ಪರಿಚಯವಾಗಬಹುದೆಂಬ ಆಸೆಯಿಂದ ಭಾಗವಹಿಸಿದ್ದೆ, ನಿಮ್ಮ ನಿಲುವುಗಳಿಗೆ ಸರಿಹೊಂದದ ವ್ಯವಸ್ಥೆಯ ಬಗ್ಗೆ ನನಗೆ ತಿಳಿದಿಲ್ಲ ಅದು ನಿಮ್ಮ ವಯಕ್ತಿಕ ಮಾತ್ರ. ನೀವು ಖಿನ್ನ ಮನಸ್ಸಿನಿಂದ ಭಾಗವಹಿಸಿ ಕಥೆ ಓದಿದಿರೋ ಅಥವಾ ಹೇಗೆ ಎಂಬುವುದು ನಿಮ್ಮ ಮನಸ್ಸಿನಾಳಕ್ಕೆ ಬಿಟ್ಟಿದ್ದು,

ನೀವೇ ಹೇಳುವ ಹಾಗೆ ‘ಅಶ್ವಗಂಧದ ಹಾದಿ’ ಎನ್ನುವ ಕಥೆ ಅದು 1960-1990 ರವರೆಗೆ ಸಂಶೋಧನಾ ಲೇಖನವೆನಿಸಿತೆ ವಿನ: ಕಥೆಯಂದು ನನಗೆ ಅನಿಸಿಲ್ಲ ಎಂಬುವುದು ಸಾಮಾನ್ಯ ಓದುಗನಾಗಿ ನಾನು ಹೇಳಿದ್ದು, ನೀವು ಹೇಳುವ ಚಳುವಳಿಯನ್ನು ಬೆಂಬಲಿಸುತ್ತಾ, ಅನೇಕ ಕಥೆಗಾರರು ಕಥೆಗಳನ್ನು ಈಗಾಗಲೇ ಕೊಟ್ಟಿದ್ದಾರೆ ಆದರೆ ಕಟ್ಟಿಕೊಡುವ ರೀತಿಯಲ್ಲಿ ನನ್ನ ಪ್ರಶ್ನೆ.

ಸಂವಾದದಲ್ಲಿದ್ದ ಸಂಧ್ಯಾ ಹೊನಗುಂಟಿಕರ್ ಅವರು ಸಭಿಕರನ್ನು ಕಮಿಟ್ ಮಾಡಿದ್ದು ಸುಳ್ಳು ಅವರು ಅವರ ಅನಿಸಿಕೆ ಹೇಳಿದರು ಅಷ್ಟೆ ಯಾರು ಯಾರನ್ನು ಕಮಿಟ್ ಮಾಡಲು ಸಾಧ್ಯವಿಲ್ಲ ಎನ್ನುವ ವಿಚಾರ ತಮ್ಮ ಗಮನಕ್ಕೆ ತರಬಯಸುತ್ತೇನೆ.

ನಾನು ಎರಡು ಕಥೆಗಳನ್ನು ಉಲ್ಲೇಖಿಸಿ ಕಾಲಕಾಲಕ್ಕೂ ಉಲ್ಲೇಖಿಸಲ್ಪಡುವ ಕಥೆಗಳನ್ನು ಕಥೆಗಾರರು ಬರೆಯಬೇಕೆಂಬ ಆಶೆಯ ವ್ಯಕ್ತಪಡಿಸಿದ್ದೇನೆ ಅಷ್ಟೆ. ನಾವು ಇವತ್ತೂ ಎಷ್ಟೆ ದೊಡ್ಡ ಕಥೆಗಾರರಾದರು ನಮ್ಮ ಕಥಾ ಸಾಹಿತ್ಯದ ಮರಂಪರೆಯ ದಾರಿಯ ಮೇಲೆಯೇ ಹೊರತು ಬೇರಾವುದಿಲ್ಲ ಎಂಬ ಸತ್ಯ ತಮಗೆ ತಿಳಿದಿದೆ ಎಂದು ಭಾವಿಸುತ್ತೇನೆ.

ನೀವು ತಿಳಿದುಕೊಂಡಂತೆ ನಾನು ಬರಿ ಎರಡು ಕಥೆಗಳನ್ನು ಪೇಟೆಂಟ್  ತೆಗೆದುಕೊಂಡಿಲ್ಲ. ಬದಲಿಗೆ ಅಂತಹ ಮಹತ್ವದ ಕಥೆಗಳನ್ನು ಉಲ್ಲೇಖಿಸಿದ್ದೇನೆ ಅಷ್ಟೆ, ಬಹುಷಃ ನೀವು ಯಾರದ್ದೊ ಸುಳ್ಳಿನ ಮಾತಿಗೆ ಕಿವಿಗೊಟ್ಟಿದ್ದೀರಿ. ನೀವೇ ಅನೇಕ ಬಾರಿ ಸಾಹಿತ್ಯದ ಮಾತುಗಳನ್ನಾಡುವಾಗ ಹಲವು ಕಥೆಗಾರರನ್ನು (ಕುಂವೀ, ಲಂಕೇಶ, ಕಲಬುರ್ಗಿ, ಕಾರ್ನಾಡ) ಕಥೆಗಳನ್ನು ಉಲ್ಲೇಖಿಸುತ್ತೀರಿ ಹಾಗಾದರೆ ನೀವು ಅವರನ್ನು ಅವರ ಕಥೆಗಳನ್ನು ಪೇಟೆಂಟ್  ತೆಗೆದುಕೊಂಡಿದ್ದೀರಾ?

ನೀವು ಕೇಳಿರುವಂತೆ ನಾನು ಸಣ್ಣವನೆ ಹೊರತು ಇನ್ನೊಬ್ಬರ ಮಾತು ಕೇಳಿ ಬರೆಯುವಷ್ಟು ಕಷ್ಟ ನನಗೇನು ಬಂದಿಲ್ಲ. ನನಗೆ ಸ್ವಂತ ಬುದ್ಧಿಯಿದ್ದು ಸತ್ಯ ಬರೆದಿದ್ದೇನೆ ಅದನ್ನು ನೀವು ಯಾವುದಕ್ಕೋ ಯಾರದ್ದಕ್ಕೊ ಜೋಡಿಸುವುದು ತಪ್ಪು. ನಾನೇನು ಎ.ಸಿ.ರೂಂನಲ್ಲಿ ಕುಳಿತು ಕ್ಷೇತ್ರ ಅನುಭವವಿರದೇ ಅಧ್ಯಯನವಿರದೇ ಬರೆಯುವವನಲ್ಲ, ನನಗೂ ಸಾಹಿತ್ಯದ ಆಸಕ್ತಿಯಿದ್ದು ನಿಮ್ಮಷ್ಟು ಓದಿ ಬರೆಯದಿದ್ದರೂ ಸ್ವಲ್ಪಮಟ್ಟಿಗೆ ಬರವಣಿಗೆ ಮತ್ತು ಓದಿನಲ್ಲಿ ತೊಡಗಿಸಿಕೊಂಡಿದ್ದೇನೆ. ಬರವಣಿಗೆಯನ್ನು ಇನ್ನೊಬ್ಬರು ಹೇಳಿದಂತೆ ಬರೆಯುವ ಬಾಡಿಗೆ ಬರಹಗಾರನಲ್ಲ ನನ್ನ ಬಗ್ಗೆ ನಿಮಗೆ ಹಾಗೆನಿಸಿದರೆ ಅದು ನಿಮ್ಮ ತಪ್ಪು.

ನಿಮ್ಮ ಕಥೆಯಲ್ಲಿ ಅಂತಹ ಯಾವುದೇ ಗುಪ್ತಗಾಮಿನಿಯಿಲ್ಲ. ಬಹಳ ಸರಳವಾದ ಸತ್ಯ ಇತಿಹಾಸ ಬಿಚ್ಚಿಡುವ ಸಂಶೋಧನಾ ಲೇಖನವಾಗಿದೆ. ನಿಮ್ಮ ಲೇಖನದಲ್ಲಿ ಬರುವ ಸೈದ್ಧಾಂತಿಕ ವಿಚಾರದ ಬಗ್ಗೆ ನನ್ನ ಪ್ರಶ್ನೆಯಲ್ಲ ಬದಲಿಗೆ ಅದೇ ವಿಚಾರವನ್ನು ನೀವು ಕಥೆಯ ರೂಪದಲ್ಲಿ ಹೇಳುವುದಾದರೆ ಕಥಾ ಹಂದರಕ್ಕೊಳಪಡಿಸಿ ಓದುಗರನ್ನು ಹಿಡಿದಿಡುವಂತೆ ಹೇಳಿದರೆ ಅದು ಕಥೆಯಾಗುತ್ತಿತ್ತು ಕನ್ನಡ ಸಾಹಿತ್ಯದಲ್ಲಿ ಇತಿಹಾಸ ಹೇಳುವುದಕ್ಕೂ ಕಥೆ ಹೇಳುವುದಕ್ಕೂ ಸಾಕಷ್ಟು ವ್ಯತ್ಯಾಸ ತಾವು ಬಲ್ಲಿರಿ ಎಂದುಕೊಂಡಿದ್ದೇನೆ.

ನೀವು ಹೇಳಿದಂತೆ ನಾನು ಆಬ್ಸೆಂಟ್ ಮೂಡ್ ನಲ್ಲಿ ಇದ್ದಿದ್ದರೆ ಕಾರ್ಯಕ್ರಮ ಮುಗಿದ ಒಂದು ಗಂಟೆಯೊಳಗೆ ಎರಡು ಪುಟಗಳಷ್ಟು ಲೇಖನ ಬರೆಯುತ್ತಿರಲಿಲ್ಲ. ಇದನ್ನು ತಾವು ಗಮನಿಸಿಲಿಲ್ಲ ಎನಿಸುತ್ತದೆ. ನಾನು ಬರೆದಿದ್ದು ವಿಮರ್ಶೆ ಎಂದು ನಾನು ಎಲ್ಲಿಯೂ ಹೇಳಿಲ್ಲ. ನೀವು ಹೇಳಿದಂತೆ ಬರವಣಿಗೆ ಎಲ್ಲಿಯೂ ದಾರಿ ತಪ್ಪಿಲ್ಲ ಬದಲಿಗೆ ಯಥಾವತ್ತ ಚಿತ್ರಣ ನೀಡಿದೆ. ಅನಿಸಿದ ಸತ್ಯ ಸ್ವಲ್ಪ ಕಹಿಯಾಗಿ ಕಂಡಿದೆ ಅಷ್ಟೆ.  ನಾನು  ಕಾರ್ಯಕ್ರಮ ಮುಗಿಸಿ ಕೈ ತೊಳೆದು ಹೋಗುವವನಲ್ಲ, ನಮ್ಮ ಎಷ್ಟೊ ಕೆಲಸಗಳು ಬಿಟ್ಟು ಕಾರ್ಯಕ್ರಮದಲ್ಲಿ ಕುಳಿತಾಗ ಅತ್ಯಂತ ಜಾಗರೂಕತೆಯಿಂದ ಆಲಿಸಿ ಇಷ್ಟಪಟ್ಟು ಅರ್ಥಮಾಡಿಕೊಳ್ಳುವ ವ್ಯಕ್ತಿ ನಾನು. ನೀವು ನನ್ನ ಬಗ್ಗೆ ಖೇದವಿಟ್ಟುಕೊಳ್ಳಬೇಡಿ ನಾನು ಎಲ್ಲವೂ ಅರ್ಥಮಾಡಿಕೊಂಡೆ ಬರೆದಿದ್ದೇನೆ. ನಿಮಗೆ ಷಡ್ಯಂತ್ರಕ್ಕೆ ಸಿಕ್ಕಿಸುವದರಿಂದ ನನಗೇನು ಲಾಭವಿದೆ ಹೇಳಿ ನಾನು ಆ ಕೆಲಸ ಮಾಡುವುದಿಲ್ಲ, ನಾನು ನಿಮಗಿಂತ ದೊಡ್ಡ ಬರಹಗಾರನಲ್ಲದಿರಬಹುದು ಆದರೆ ಕಥೆ, ಕಾವ್ಯ, ಲೇಖನ, ಸಂಶೋಧನಾ ಲೇಖನ, ಆಶುಲೇಖನ, ನುಡಿಚಿತ್ರ ಇವುಗಳ ಬಗ್ಗೆ ತಕ್ಕಮಟ್ಟಿಗೆ ತಿಳಿದುಕೊಂಡಿದ್ದೇನೆ ಎನ್ನುವುದು ತಮ್ಮ ಗಮನಕ್ಕೆ ತರಬಯಸುತ್ತೇನೆ.  ಕಥೆಗಾರನ ಲೋಕ ಅನಂತವಷ್ಟೆಲ್ಲ ಅತ್ಯಂತ ಶ್ರೇಷ್ಠವು ಅನನ್ಯವೂ ಎನ್ನುವ ಸತ್ಯ ನನಗೆ ಅರಿವಿದೆ.

ನೀವು ಪೂರ್ವಾಗ್ರಹವಾಗಿ ಯೋಚಿಸಿ ಯಾರೋ ಬರೆಸಿದ ಲೇಖನವೆಂದು ತಿಳಿದಿರುವುದು ಅತ್ಯಂತ ದೊಡ್ಡ ತಪ್ಪು, ಕಾರ್ಯಕ್ರಮದಲ್ಲಿ ನಿಮ್ಮ ಬಗ್ಗೆ ಷಡ್ಯಂತ್ರದ ಬಗ್ಗೆ ನನಗೆ ಎಳ್ಳು ಕಾಳಿನಷ್ಟು ಸುಳಿವಿಲ್ಲ, ನನ್ನ ಪ್ರಶ್ನೆ ಇರುವುದು ವ್ಯಕ್ತಿಯಲ್ಲ ಸಾಹಿತ್ಯ ಮಾತ್ರ. ನನ್ನ ಆಸಕ್ತಿಯಿರುವುದು ಬರವಣಿಗೆಯಲ್ಲಿ ವ್ಯಕ್ತಿಗಳಲ್ಲ, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಸಾಹಿತ್ಯದ ಬಗ್ಗೆ ತಿಳಿದುಕೊಳ್ಳಲೇ ಹೊರತು ಯಾರ ವ್ಯಕ್ತಿಗಳಿಗೋಸ್ಕರವಲ್ಲ. ಯಾರೋ ಹೇಳಿದಂತೆ ಬರೆಯಲು ನಾನೇನು ಚಿಕ್ಕ ಮಗುವೆ ಕೈಹಿಡಿದು ಬರೆಸಲು. ನಾನು ಸಮಾಜದ ಆಗುಹೋಗುಗಳನ್ನು ಸ್ಪಂದಿಸಿ ಪ್ರತಿದಿನವೂ ಹಲವು ವಿಷಯಗಳಲ್ಲಿ ಲೇಖನ ಬರೆದು ಪ್ರಕಟಿಸುವ ಶಕ್ತಿಯಿದೆ. ನಿಮ್ಮ ಆಲೋಚನೆಯಲ್ಲಿರುವ ವ್ಯಕ್ತಿಗಳೊಂದಿಗೆ ನನ್ನ ಊಹಿಸಿಕೊಳ್ಳಬೇಡಿ. ನನ್ನ ನಿಲುವು ಅತ್ಯಂತ ಸ್ಪಷ್ಟವಾಗಿದೆ.

ಈ ಉತ್ತರವನ್ನು ಬರೆಯಿರಿ ಎಂದು ಹೇಳಲಿಲ್ಲ ಆದರೆ ನೀವು ತಿಳಿದುಕೊಂಡ ರೀತಿಯನ್ನು ಸ್ಪಷ್ಟಪಡಿಸಲು ಬರೆಯಬೇಕಾಯಿತು. ನಾನು ಕಳೆದ ಹಲವು ವರ್ಷಗಳಿಂದ ಸಾಹಿತ್ಯದ ವಿಧ್ಯಾರ್ಥಿಯಲ್ಲದಿದ್ದರೂ ಸಾಹಿತ್ಯವನ್ನು ಅತ್ಯಂತ ಆಸಕ್ತಿಯಿಂದ ಪ್ರೀತಿಯಿಂದ ಓದುತ್ತಾ ಬರೆಯುತ್ತಾ ಸಾಗುತ್ತಿರುವೆ. ಸಾಹಿತ್ಯಕ್ಕಾಗಿ ಅದರ ಮಾಹಿತಿಗಾಗಿ ಮತ್ತು ಕಲಿಕೆಗಾಗಿ ನಾಡಿನ್ಯಾದ್ಯಾಂತ ಸುತ್ತಿದ್ದೇನೆ. ನಾಡಿನ ಹಿರಿಯ ಸಾಹಿತಿಗಳೊಂದಿಗೆ ಒಡನಾಟದಲ್ಲಿದ್ದೇನೆ. ನಾನು ಯಾವತ್ತಿಗೂ ಉಡಾಫೆಯಲ್ಲಿ ಬರೆದಿಲ್ಲ ಯಾವತ್ತೂ ಬರೆಯುವುದಿಲ್ಲ ಎಂಬುದನ್ನು ತಿಳಿಸಬಯಸುತ್ತೇನೆ. ನಾನು ಬಹುತೇಕ ಎಚ್ಚರವಾಗಿಯೇ ಇರುತ್ತೇನೆ, ಬರೆಯುತ್ತೇನೆ ಮತ್ತು ಅಂತೆಯೇ ಬದುಕಲು ಪ್ರಯತ್ನಿಸುತ್ತೇನೆ.

‍ಲೇಖಕರು avadhi

August 31, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: