ಹರೀಶ್ ಗಂಗಾಧರ
ಕೆಲವು ಪಂದ್ಯಾವಳಿಗಳು ಅಚ್ಚಳಿಯದೆ ನಮ್ಮ ಮನಸ್ಸಿನಲ್ಲಿ ಹಾಗೆ ಉಳಿದುಬಿಡುತ್ತವೆ. ಬೇರೆಲ್ಲಾ ವಿಶ್ವ ಕಪ್ಗಳಿಗಿಂತ 1996ರ ಕ್ರಿಕೆಟ್ ವಿಶ್ವಕಪ್ ಹಲವು ಕಾರಣಗಳಿಗೆ ಕಾಡುತ್ತದೆ. ಜಾಗತೀಕರಣದ ಪ್ರಭಾವಗಳು, ಹೈಪರ್ ರಾಷ್ಟ್ರವಾದದ ಹುಟ್ಟು, ಕೋಮುವಾದ ಉಲ್ಬಣಗೊಂಡದ್ದು, ಈಡನ್ ಗಾರ್ಡೆನ್ ಕ್ರೀಡಾಂಗಣ ರಣರಂಗವಾಗಿದ್ದು, ಕಾರ್ಗಿಲ್ ಯುದ್ಧದ ಮುನ್ಸೂಚನೆಗಳು, ಡರ್ರೆಲ್ ಹೇರ್ ಮುರುಳಿಧರನ್ ಕಿತ್ತಾಟದಿಂದ ಮತ್ತೆ ತಲೆಯಿತ್ತಿದ ವರ್ಣಭೇದದ ವಿಕೃತ ಮುಖ, ಅಂತಿಮವಾಗಿ ಪುಟ್ಟ ಶ್ರೀಲಂಕಾದ ರೋಚಕ ಗೆಲುವು.
1994ರ ಪುಟ್ಬಾಲ್ ವಿಶ್ವಕಪ್ನಲ್ಲಿ ಆಕಸ್ಮಿಕವಾಗಿ ತನ್ನದೇ ಗೋಲ್ ಒಳಕ್ಕೆ ಚೆಂಡನ್ನು ಒದ್ದ ಕೊಲಂಬಿಯಾ ದೇಶದ ಅಂದ್ರೆಸ್ ಎಸ್ಕೋಬಾರ್ ಮತ್ತವನ ಕೊಲೆ. ಕೊಲೆಗು ಕೊಲಂಬಿಯವನ್ನ ಒಳಗಿನಿಂದಲೇ ತಿನ್ನುತ್ತಿರುವ ಡ್ರಗ್ ಕಾರ್ಟೇಲ್ಗಳ ನಂಟು. ಕ್ರೀಡಾ ಪಂದ್ಯಾವಳಿಗಳು ಎಷ್ಟೆಲ್ಲಾ prophetic ಆಗಿರುತ್ತವೆ ಅಲ್ಲವೇ? ಡ್ರಗ್ ದಂಧೆಯ ಅಧಿಪತಿ ಪಾಬ್ಲೋ ಎಸ್ಕೋಬಾರ್ 1993ರಲ್ಲೇ ಹತನಾದರು ಡ್ರಗ್ ಕಾರ್ಟೇಲ್ ಜೀವಂತವಾಗಿರುತ್ತವೆಯೆಂದು ಫುಟ್ಬಾಲ್ ವಿಶ್ವಕಪ್ ಜಗತ್ತಿಗೆ ಸಾರಿಬಿಟ್ಟಿತ್ತು.
ಈ ಎರಡು ಪಂದ್ಯಾವಳಿಗಳನ್ನ ತುಂಬ ಹತ್ತಿರದಿಂದ ಫಾಲೋ ಮಾಡಿದ್ದೆ ಮತ್ತು ಅದಕ್ಕೆ ವಿಟ್ನೆಸ್ ಕೂಡ ಆಗಿದ್ದೆ. 1996ರ ವಿಶ್ವಕಪ್ ಸೆಮಿಫೈನಲ್ನಲ್ಲಿ ಭಾರತ ಸೋಲುವುದು ಖಚಿತವಾಗಿ ಕ್ರೀಡಾಂಗಣಕ್ಕೆ ಬೆಂಕಿ ಹಚ್ಚಿ, ಗಾಜಿನ ಬಾಟಲ್ಗಳನ್ನ ಆಟಗಾರರತ್ತ ತೂರಿದಾಗ ಭಾರತ ಶಾಶ್ವತವಾಗಿ ಬದಲಾಗಿ ಹೋಗಿತ್ತು ಎಂಬುದು ತಿಳಿದಿತ್ತು.

I understood something had changed forever. was India really shining? I didn’t know. How could Indians turn violent over a game of cricket? ಕ್ರೀಡೆ ಗೆಳೆತನವನ್ನ ಬೆಳೆಸದೆ ಹಿಂಸೆ ಮತ್ತು ದ್ವೇಷಕ್ಕೆ ದಾರಿ ಮಾಡಿಕೊಟ್ಟದ್ದಾದರು ಹೇಗೆ ಎಂದು ದಿಗಿಲುಗೊಂಡಿದ್ದೆ. ಹೀಗೆ ಕೆಲ ಪಂದ್ಯಾವಳಿಗಳು ಬರಲಿರುವ ಕರಾಳ ದಿನಗಳನ್ನ ಸೂಚಸಿದರೆ, ಇನ್ನೂ ಕೆಲ ಪಂದ್ಯಾವಳಿಗಳು ಬೇರೆಯದೇ ಭವಿಷ್ಯ ನುಡಿಯುತ್ತವೆ.
ಭವಿಷ್ಯ ಸೂಚಕ ಪಂದ್ಯಾವಳಿಗಳು ಎಂದೊಡನೆ ನನಗೆ ಥಟ್ ಅಂತ ನೆನಪಾಗೋದು 1936ರ ಬರ್ಲಿನ್ ಒಲಿಂಪಿಕ್ಸ್. ನಾಟ್ಜಿ ಜರ್ಮನಿಯಲ್ಲಿ ನಡೆದ ಕ್ರೀಡೆಯದು. ಹಿಟ್ಲರ್ ಪ್ರತಿಪಾದಿಸುತ್ತಿದ ಸಿದ್ದಾಂತ, ವಾದಗಳೆಲ್ಲಾ ಬಹುಕಾಲ ಉಳಿಯಲಾರವೆಂಬ ಸೂಚನೆ ಸೂಕ್ಷ್ಮ ಮತಿಗಳಿಗೆ ಸ್ಪಷ್ಟವಾಗಿ 1936ರ ಒಲಿಂಪಿಕ್ಕಿನಲ್ಲೆ ಕಾಣಿಸಿತ್ತು. 1932ರ ಲಾಸ್ ಅಂಜಲೀಸ್ ಒಲಿಂಪಿಕ ಅನ್ನು ನಾಚಿಸುವಂತೆ 1936ರ ಜರ್ಮನ್ ಒಲಿಂಪಿಕ್ಸ್ ನೆಡೆಸಬೇಕೆಂದು ಹಿಟ್ಲರ್ ನಿರ್ಧರಿಸಿದ. ಅದರಂತೆ ಒಂದು ಬೃಹತ್ ಕ್ರೀಡಾಂಗಣವೊಂದನ್ನು ನಿರ್ಮಿಸಿದ. ಆ ಕ್ರೀಡಾಂಗಣದಲ್ಲಿ ಬರೋಬ್ಬರಿ ಲಕ್ಷ ಮಂದಿ ಕೂತು ಕ್ರೀಡೆಗಳನ್ನ ವೀಕ್ಷಿಸಿಬಹುದಿತ್ತು.
ಕ್ರೀಡಾಂಗಣದಲ್ಲಿ ಆರು ಜಿಮ್ ಹಾಗೂ ಹಲವು ಡ್ರೆಸ್ಸಿಂಗ್ ರೂಮ್ಗಳಿದ್ದವು. ಮೊದಲ ಬಾರಿಗೆ ದೂರದರ್ಶನದಲ್ಲಿ ಮತ್ತು ರೇಡಿಯೋದಲ್ಲಿ ಕ್ರೀಡೆಗಳ ನೇರ ಪ್ರಸಾರವಾಯಿತು. ಹಿಟ್ಲರ್ ಸಾಕಷ್ಟು ಹಣ ಖರ್ಚು ಮಾಡಿ ಒಲಿಂಪಿಕ್ ಕುರಿತಾದ ಒಂದು ಫಿಲ್ಮ್ ಕೂಡ ತೆಗೆಸಿದ. ಲೆನಿ ರಿಫನ್ ಸ್ಟಾಲ್ (Triumph of the will ಖ್ಯಾತಿಯ) ಒಲಿಂಪಿಯ ಎನ್ನುವ ಚಿತ್ರ ತೆಗೆದಳು. ಅಲ್ಲಿ ಬಳಕೆಯಾದ ತಂತ್ರಜ್ಞಾನ ಈಗಲೂ ಫ್ಯಾಷನಲ್ಲಿದೆ.
ಹಿಟ್ಲರ್ ಇಷ್ಟು ಅದ್ದೂರಿಯಾಗಿ ಈ ಒಲಿಂಪಿಕನ್ನು ನಡೆಸುವ ಉದ್ದೇಶ ಪ್ರಪಂಚಕ್ಕೆ ಬಲಿಷ್ಠ ಜರ್ಮನಿಯ ಪರಿಚಯ ಮಾಡಿಕೊಡುವುದು ಒಂದು ಕಡೆಯಾದರೆ. ತನ್ನ ಆರ್ಯನ್ ರೇಷಿಯಲ್ ಸುಪಿರಿಯಾರಿಟಿ ಸಿದ್ದಾಂತವನ್ನ ಹರಡಲು ಅದೊಂದು ಸದವಕಾಶವಾಗಿತ್ತು. ಮೊದಲಿಗೆ ಕರಿಯರಿಗೆ ಮತ್ತು ಯಹೂದಿಗಳಿಗೆ ಕ್ರೀಡೆಯಲ್ಲಿ ಪಾಲ್ಗೊಳ್ಳಲು ಅವಕಾಶ ಕೊಡದಿರಲು ನಿರ್ಧರಿಸಿದ್ದ ಹಿಟ್ಲರ್. ಜಗತ್ತಿನಾದ್ಯಂತ ಪ್ರತಿರೋಧ ವ್ಯಕ್ತವಾದ ಮೇಲೆ ಒಲ್ಲದ ಮನಸ್ಸಿನಿಂದ ಅವರಿಗೂ ಭಾಗವಹಿಸಲು ಅವಕಾಶ ಮಾಡಿಕೊಟ್ಟ.
ಪಿ. ಲಂಕೇಶ್ ತಮ್ಮ ಆಟ ಜೂಜು ಮತ್ತು ಮೋಜು ಹೀಗೆ ಬರೆಯುತ್ತಾರೆ “ಹಿಟ್ಲರ್ ಧಿಮಾಕು ಮುಗಿಲು ಮುಟ್ಟಿತ್ತು. ಜರ್ಮನಿಯ ಜನ ಇಡೀ ಜಗತ್ತಿನಲ್ಲೇ ಶ್ರೇಷ್ಟರು ಎಂಬ ವಿಶ್ವಾಸ ಆತನದು. ಯುದ್ಧದಲ್ಲಿ, ಆಟದಲ್ಲಿ, ವಿಜ್ಞಾನದಲ್ಲಿ ಯಾರು ಅವರನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಅವನು ನಂಬಿದ್ದ, ಜರ್ಮನಿ. ಪೋಲೆಂಡ್, ಹಂಗೇರಿಗಳಲ್ಲಿದ್ದ ಯೆಹೂದ್ಯರನ್ನು ತೀವ್ರ ತಾತ್ಸಾರದಿಂದ, ದ್ವೇಷದಿಂದ ನೋಡುತ್ತಿದ್ದ ಹಿಟ್ಲರ್ ಮಿಲಿಯಗಟ್ಟಲೆ ಯಹೂದ್ಯರನ್ನು ಕೊಂದುಹಾಕುವ ಯೋಜನೆ ತಯಾರಿಸಿಕೊಂಡಿದ್ದ. ಹಾಗೆಯೇ ಕಪ್ಪು ಜನ, ಕಂದು ಜನರನ್ನು ಕೀಳೆಂದು ನೋಡುತ್ತಿದ್ದ. ಈತ ಜರ್ಮನಿಯ ಪರಿಶುದ್ಧ, ಶ್ರೇಷ್ಠ ಜನರನ್ನ ಬಿಟ್ಟರೆ ಬೇರೆಲ್ಲರೂ ಕೀಳು ಎಂದು ತಿಳಿದಿದ್ದ. ಬೈಬಲ್ನ ವಿನಯವಂತ ಜನ, ಸರಳ ಜನ ಅವನಿಗೆ ಹುಳುಗಳಂತೆ ಕಾಣುತ್ತಿದ್ದರು. Meek ಜನರನ್ನು ಸೂಪರ್ ಮ್ಯಾನ್ಗಳು ಮುಗಿಸಬೇಕೆಂದು. ಇಡೀ ಜಗತ್ತು ಅತ್ಯುತ್ತಮ ತಳಿಯಿಂದ ತುಂಬಿರಬೇಕೆಂದು ಅವನ ಆಶಯವಾಗಿತ್ತು.”
ಹಿಟ್ಲರ್ ತನ್ನ ದೇಶದ ಕ್ರೀಡಾ ಪಟುಗಳಿಗೆ ಒಳ್ಳೆಯ ತರಬೇತಿ ಕೊಡಿಸಿದ. ಎಲ್ಲ ಕ್ರೀಡೆಗಳಲ್ಲೂ ಬಿಳಿಯ ಅರ್ಯನ್ನರೆ ಗೆಲ್ಲುತ್ತಾರೆಂಬ ಅಚಲ ನಂಬಿಕೆ ಅವನದು. ಆದರೆ (ಕಪ್ಪು ವರ್ಣದ) ಅಫ್ರೋ ಅಮೇರಿಕನ್- ಜಸ್ಸಿ ಒವೆನ್ಸ್ ಅತಿ ಹೆಚ್ಚು ಪದಕಗಳನ್ನ ಗೆದ್ದ. ನೂರು ಮೀಟರ್ ಓಟ, ಇನ್ನೂರು ಮೀಟರ್ ಓಟ, ಲಾಂಗ್ ಜಂಪ್ ಮತ್ತು ರಿಲೇ ಓಟದಲ್ಲಿ ಚಿನ್ನದ ಪದಕ ತನ್ನದಾಗಿಸಿಕೊಂಡು ಹಿಟ್ಲರ್ಗೆ ಬಾರಿ ಕಸಿವಿಸಿವುಂಟು ಮಾಡಿದ್ದ. ಹಿಟ್ಲರ್ ಪ್ರತಿಪಾದಿಸುತ್ತಿದ್ದ “ಆರ್ಯನ್ನರೆ ಶ್ರೇಷ್ಠರೆಂಬ” ವಾದ ಅಲ್ಲಿಗೆ ಮಣ್ಣು ಮುಕ್ಕಿತ್ತು.

ನೂರು ಮೀಟರ್ ಓಟಕ್ಕೆ ಮುಂಚೆ ಜೆಸ್ಸಿ ಕಟ್ಟುಮಸ್ತಾದ ದೇಹ ನೋಡಿ ದಂಗಾದ ಹಿಟ್ಲರ್ ಬಲಗೈ ಬಂಟ ಗಾಬೇಲ್ಸ್ ಹೇಳಿದನಂತೆ- ಈ ಓಟದ ಸ್ಪರ್ಧೆಯೇ ದೊಡ್ಡ ಅನ್ಯಾಯ, ಮನುಷ್ಯ ಹಾಗು ಜಿಂಕೆಯ ನಡುವೆ ಓಟ ಹೇಗೆ ಸಾಧ್ಯ? ಎಂದನಂತೆ. ಅವನ ದೃಷ್ಟಿಯಲ್ಲಿ ಕಪ್ಪು ವರ್ಣದ ಜೆಸ್ಸಿ ಮಾನವ ಕೂಡ ಆಗಿರಲಿಲ್ಲ. ಜೆಸ್ಸಿ ಸಾಧನೆಗಳು ನಾಟ್ಜಿ ಸಿದ್ದಾಂತಗಳಿಗೆ ಕೊಡಲಿ ಪೆಟ್ಟನ್ನು ನೀಡಿದಂತೂ ನಿಜ. ಕ್ರೀಡೆ ಎಂತಹ ಸಮಾನತೆಯನ್ನ ಸಾರಿಬಿಡುತ್ತದೆ ಅಲ್ಲವೇ? Sports is a great equalizer.
ಲಂಕೇಶ್ ಮೇಷ್ಟ್ರು ಹೇಳದ ಇನ್ನೆರಡು ರೋಚಕ ಘಟನೆಗಳು 1936ರ ಒಲಿಂಪಿಕ್ಸ್ನಲ್ಲಿ ನಡೆದವು. ಈ ಎರಡು ಘಟನೆಗಳು ನಡೆಯದಿದ್ದರೆ ಜೆಸ್ಸಿ ಎರಡು ಚಿನ್ನದ ಪದಕಗಳಿಗಷ್ಟೇ ತೃಪ್ತಿ ಪಡಬೇಕಾಗಿತ್ತು. ಲಾಂಗ್ ಜಂಪ್ ಭಾಗವಹಿಸಿದ್ದ ಜೆಸ್ಸಿ ತನ್ನ ಅರ್ಹತಾ ಸುತ್ತುಗಳಲ್ಲಿ ಗೆರೆ ತುಳಿದು ಫೌಲ್ ಮಾಡಿದ್ದ. ಕೊನೆಯ ಅರ್ಹತಾ ಸುತ್ತು ಮಾತ್ರ ಬಾಕಿ ಉಳಿದಿತ್ತು. ಆಗ ಜೆಸ್ಸಿಗೆ ಸರಿಯಾದ ಸಲಹೆ ನೀಡಿದ್ದು ಜರ್ಮನಿಯ ಲಾಂಗ್ ಜಂಪರ್ ಮತ್ತು ಪ್ರತಿಸ್ಪರ್ಧಿ ಕಾರ್ಲ್ ಲುಡ್ವಿಗ್ ಲುಜ್ ಲಾಂಗ್! “ನೀನು ಓಡಿ ಬಂದು ನೆಗೆಯುವಾಗ ಗೆರೆಗೆ ಒಂದೆರಡು ಇಂಚು ಹಿಂದೆಯಿಂದಲೇ ನೆಗೆದುಬಿಡು, ಖಂಡಿತ ನೀನು ಕೊನೆಯ ಸುತ್ತಿಗೆ ಅರ್ಹತೆಯನ್ನ ಪಡೆಯುವೆ” ಎಂಬ ತಾಂತ್ರಿಕ ಸಲಹೆ ನೀಡಿದನಂತೆ ಲುಜ್ ಲಾಂಗ್. ಲುಜ್ ಲಾಂಗ್ ನೀಡಿದ ಸಲಹೆಯನ್ನ ಗಂಭೀರವಾಗಿ ಪರಿಗಣಿಸಿದ ಜೆಸ್ಸಿ, ಚಾಚು ತಪ್ಪದೆ ಹಾಗೆ ಮಾಡಿದ. ಫೈನಲ್ ಪ್ರವೇಶಿಸಿ ಲುಜ್ ಲಾಂಗ್ ನನ್ನೇ ಫೈನಲ್ನಲ್ಲಿ ಸೋಲಿಸಿದ. ಜೆಸ್ಸಿ ಚಿನ್ನದ ಪದಕ ಗೆದ್ದರೆ ಲುಜ್ ಲಾಂಗ್ ಬೆಳ್ಳಿ ಪದಕಕ್ಕೆ ತೃಪ್ತನಾಗಬೇಕಾಯಿತು.
ಚಿನ್ನ ಕೈ ತಪ್ಪಿದಕ್ಕೆ ಯಾವ ಬೇಸರ ಲುಜ್ ಲಾಂಗ್ನಲ್ಲಿರಲಿಲ್ಲ. ಜೆಸ್ಸಿ ಕೈ ಹಿಡಿದು ಕ್ರೀಡಾಂಗಣವನ್ನೆಲ್ಲಾ ಸುತ್ತಿದ, ಇಬ್ಬರು ಹುಲ್ಲು ಹಾಸಿನ ಮೇಲೆ ಜೊತೆಗೆ ಮಲಗಿ ಫೋಟೋ ತೆಗೆಸಿಕೊಂಡರು. “ಹಿಟ್ಲರ್ ಸಮ್ಮುಖದಲ್ಲೇ ನನ್ನ ಕೈ ಹಿಡಿದು ಕ್ರೀಡಾಂಗಣ ಸುತ್ತುವುದಕ್ಕೆ ಭಾರಿ ಧೈರ್ಯವೆ ಬೇಕಿತ್ತು. ನನ್ನ ಬಳಿಯಿರುವ ಚಿನ್ನದ ಪದಕ, ಟ್ರೋಫಿಗಳನ್ನೆಲ್ಲಾ ಕರಗಿಸಿದರು ಆ ದಿನ, ಆ ಕ್ಷಣ ನಾನು ಅನುಭವಿಸಿದ 24 ಕ್ಯಾರಟ್ ಗೆಳೆತನಕ್ಕೆ ಸಮನಾಗಲಾರದು.” ಎಂದ ಜೆಸ್ಸಿ. ಆರ್ಯನ್ನರೇ ಶ್ರೇಷ್ಠರು ಎಂದು ಸಾಬೀತು ಪಡಿಸಲು ನಡೆಸಿದ ಒಲಿಂಪಿಕ್ಸ್ನಲ್ಲಿ ಕಪ್ಪು ವರ್ಣದ ಜೆಸ್ಸಿ ವಿಶ್ವದಶ್ರೇಷ್ಠ ಕ್ರೀಡಾಪಟುವಾಗಿ ಹೊರಹೊಮ್ಮಿದ. ಕ್ರೀಡಾಂಗಣದಲ್ಲಿ ದ್ವೇಷ ಬಿತ್ತುವ ಕೆಲಸ ಮಾಡ ಹೊರಟ ಹಿಟ್ಲರ್, ಆದರೆ ಅದೇ ಕ್ರೀಡಾಂಗಣದಲ್ಲಿ ಸ್ನೇಹದಿಂದ ಎರಡು ಹೂಗಳು ಅರಳಿದವು!
ನಾಲ್ಕು ಓಟಗಾರರ ಅಮೇರಿಕಾದ 4×100 ರಿಲೇ ತಂಡದಲ್ಲಿ ಇಬ್ಬರು ಯಹೂದಿಯರಿದ್ದರು- ಮಾರ್ಟಿ ಗ್ಲಿಕ್ಮನ್ ಮತ್ತು ಸ್ಯಾಮ್ ಸ್ತ್ರೋಲರ್. ಯಹೂದಿಯರು ಗೆದ್ದುಬಿಟ್ಟರೆ ಆಗಲೇ ಅವಮಾನಕ್ಕೊಳಗಾಗಿದ್ದ ಹಿಟ್ಲರ್ ಇನ್ನಷ್ಟು ಅವಮಾನ ಎದುರಿಸಬೇಕಾಗುತ್ತದೆ ಎಂದು ಅವರಿಬ್ಬರನ್ನು ತಂಡದಿಂದ ಹೊರಗಿಟ್ಟು ಕಪ್ಪು ವರ್ಣದ ಜೆಸ್ಸಿ ಮತ್ತು ಮೆಟ್ ಕಾಲ್ಫ್ ರನ್ನು ಕಣಕ್ಕಿಳಿಸಲಾಯಿತು.

ಒಂದು ವರದಿಯ ಪ್ರಕಾರ ಇದು ಅಮೇರಿಕಾ ತಂಡ ಪ್ರಜ್ನಾಪೂರ್ವಕವಾಗಿ ತೆಗೆದುಕೊಂಡ ನಿರ್ಧಾರವಾದರೆ, ಯಹೂದಿಯರು ಓಟದಲ್ಲಿ ಭಾಗವಹಿಸುವ ಹಾಗಿಲ್ಲವೆಂದು ಹಿಟ್ಲರ್ ತಾಕೀತು ಮಾಡಿದನೆಂಬುದು ಇನ್ನೊಂದು ಕತೆ. ವರದಿಗಳು ಏನೇ ಇರಲಿ ಮಾರ್ಟಿ ಮತ್ತು ಸ್ಯಾಮ್ ನುರಿತ ಓಟಗಾರರಾಗಿದ್ದರು. ಅವರ ಗೆಲುವು ಖಚಿತವಾಗಿತ್ತು. ಅಷ್ಟು ವರ್ಷದ ಪರಿಶ್ರಮ, ಕನಸು ತಂಡದ ನಿರ್ಧಾರದಿಂದ ಕ್ಷಣಾರ್ಧದಲ್ಲಿ ನುಚ್ಚುನೂರಗಿತ್ತು. ಯಾವುದೇ ಅಳುಕಿಲ್ಲದೆ ಜೆಸ್ಸಿ ಮತ್ತು ಮೆಟ್ ಗೆ ದಾರಿ ಮಾಡಿಕೊಟ್ಟಿದ್ದರು ಈ ಯಹೂದಿಯರು. ಅಮೇರಿಕಾ ರಿಲೇ ಗೆದ್ದ ನಂತರ ಎಲ್ಲರೊಡನೆ ಸೇರಿ ಸಂಭ್ರಮಿಸಿದ್ದರು. ಸೌಹಾರ್ದತೆ ಮತ್ತು ತ್ಯಾಗಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆಬೇಕಿಲ್ಲ.
ಈ ಜಗವೆಂಬ ಕ್ರೀಡಾಂಗಣದಲ್ಲಿ ಹಿಟ್ಲರ್ ಸಂತತಿ ಇನ್ನೂ ಸತ್ತಿಲ್ಲ, ಶ್ರೇಷ್ಠತೆಯ ವ್ಯಸನವು ಮಾಯವಾಗಿಲ್ಲ, ನಿರಂತರ ದ್ವೇಷ ಬಿತ್ತುವ ಕೆಲಸವು ಎಗ್ಗಿಲ್ಲದೆ ನೆಡೆಯುತ್ತಿದೆ, ಇಂದೊಂದು ದುರಿತ ಕಾಲ ಆದರೆ All Things Must Pass. ಹಿಟ್ಲರ್ ಸಂತತಿಗಳು ಏನೇ ಮಾಡಿದರು ಜೆಸ್ಸಿ-ಲುಜ್ ಲಾಂಗ್ ನಂತಹ ಗೆಳೆತನ ಅರಳುತ್ತಲೇ ಇರುತ್ತವೆ. ಮಾರ್ಟಿ ಮತ್ತು ಸ್ಯಾಮ್ ನಂತಹವರು ಸ್ಪರ್ಧಿಸದೆ ಮಿನುಗುತ್ತಲೇ ಇರುತ್ತಾರೆ. ಜೆಸ್ಸಿ ಸಾಧನೆ ಅದ್ಭುತವಾದ್ದು ಆದರೆ ಲುಜ್ ಲಾಂಗ್, ಮಾರ್ಟಿ, ಸ್ಯಾಮ್ ಸಾಧನೆ ಅದ್ವಿತೀಯವಾದುದು






0 Comments