ಮಿನುಗು ಮಿನುಗೆಲೆ ನಕ್ಷತ್ರಿಕ
ಪ್ರಜ್ಞಾ ಮತ್ತೀಹಳ್ಳಿ
ಕಪ್ಪು ಛತ್ರಿಯ ಚಿಕ್ಕ ಚಿಕ್ಕ ರಂದ್ರಗಳ ಹಾಗೆ ಪಿಳಿಪಿಳಿ ಹೊಳೆವ ತಾರೆಗಳ ಕುರಿತು ಹೇಳ ಹೊರಟಿಲ್ಲ. ಅಂಥ ನಕ್ಷತ್ರಗಳನ್ನು ಗಲಗಲ ಅಲುಗಿಸಿ ನೆಲಕ್ಕುದುರುವಂತೆ ಮಾಡಬಲ್ಲ ಈ ನೆಲದ ಬೆಳಕಿನ ಕಿಡಿಗಳ ಬಗ್ಗೆ ಹೇಳುತ್ತಿದ್ದೇನೆ. ಇದನ್ನು ಬರೆಯಹೊರಟಾಗ ಒಂದು ಗುಂಪಿನ ಬಗ್ಗೆ ನನಗೆ ಭಯವಿದೆ. ಮಕ್ಕಳ ಕೊಡು ಶಿವನೆ ಮತ್ತೊಂದ ನಾನೊಲ್ಲೆ ಎಂದು ಅಂಗಲಾಚುವ ಮಾತಾಮಣಿಗಳು ನನ್ನ ಮೇಲೆ ಧಾಳಿ ಮಡುವ ಅಪಾಯವಿದೆ. ಕೆಟ್ಟರೆ ಕೆಡಲಿ ಮನೆಗೆಲಸ ಈ ಕೂಸು ನನಗಿರಲಿ ಎನ್ನುವ ಆ ಶಿಶುಪ್ರೇಮಿಗಳು ನನ್ನ ವಿಳಾಸ ಹುಡುಕುತ್ತಾರೋ ಏನೋ. ಇರಲಿ ಆಮೇಲೆ ನೊಡಿಕೊಂಡರಾಯಿತು. ನಾನಂತೂ ಈ ಭೂಮಿಗಿಳಿದ ನಕ್ಷತ್ರಗಳಿಂದ ನಿರಂತರ ಧಾಳಿಗೆ ಸಿಲುಕಿದ ಸತ್ಯವನ್ನಷ್ಟೇ ಹೇಳುತ್ತಿದ್ದೇನೆ. ಸತ್ಯವನ್ನಲ್ಲದೇ ಬೇರೇನನ್ನೂ ಹೇಳುವುದಿಲ್ಲ. ಅವರವರ ಮನೆಯ ದೀಪಗಳು, ಆಯಾ ತಂದೆ ತಾಯಿಗಳ ಖುಷಿಯಾಕಾಶದ ತಾರೆಗಳೂ ಆದ ಮಕ್ಕಳನ್ನು ನಾನು ಅಕ್ಕರೆಯುಕ್ಕಿ ನಕ್ಷತ್ರ ಎನ್ನುತ್ತಿಲ್ಲ. ಅವರಿಂದ ಪರಿಪರಿಯ ಪೀಡನೆಗೆ ಸಿಲುಕಿ ಹಿಂದೆ ಹರಿಶ್ಚಂದ್ರನನ್ನು ಹಿಂಸಿಸಲು ಪೀಡನಾತಜ್ಞ ಎಂದು ವಿಶ್ವಾಮಿತ್ರನಿಂದಲೇ ನೇಮಕಾತಿ ಆದೇಶ ಪಡೆದಿದ್ದ ನಕ್ಷತ್ರಿಕನನ್ನು ನೆನೆಪಿಸಿಕೊಳ್ಳುತ್ತಿದ್ದೇನೆ. ನನ್ನ ಮಾತಿನಲ್ಲಿ ಹುರುಳಿದೆಯೋ ಇಲ್ಲವೋ ಎಂದು ನಿರ್ಣಯಿಸಲಿಕ್ಕೆ ಪೂರಕ ಮಾಹಿತಿಯನ್ನು ಈ ಕೆಳಗಿನ ಘಟನೆಗಳ ಮೂಲಕ ನೀವೇ ನೋಡಿ.
ನಮ್ಮ ಮನೆಯ ಸ್ವಂತ ನಕ್ಷತ್ರ ತುಂಬಾ ಹಠಮಾರಿ. ಹೇಳಿದ್ದು ಆಗುವ ತನಕ ಅಳು ನಿಲ್ಲಿಸುವುದಿಲ್ಲ. ಕೆಲವು ಮಕ್ಕಳು ರಮಿಸಿದರೆ ಸುಮ್ಮನಾಗುತ್ತವೆ. ಕೆಲವು ಹೆದರಿಸಿದರೆ ತಣ್ಣಗಾಗುತ್ತವೆ. ನಮ್ಮದಕ್ಕೆ ಭಯವೂ ಇಲ್ಲ. ಓಲೈಕೆಯೂ ಇಲ್ಲ. ಆಹಾರ-ಔಷಧ ಎನೇ ಇದ್ದರೂ ಬೇಡ ಅನ್ನುವುದು ಒತ್ತಾಯ ಮಾಡಿ ಬಾಯಿಗೆ ಹಾಕಿದರೆ ಉಗುಳಿ ಬಿಡುವುದು. ಹೊತ್ತೊತ್ತಿಗೆ ಹೊಟ್ಟೆಗೆ ಕೂಳಿಲ್ಲದೆ ಕೂಸು ಹಂಚಿಕಡ್ಡಿಯಾಗಿತ್ತು. ಅದರಲ್ಲೊಮ್ಮೆ ಜ್ವರ ಬಂತು. ಉಗುಳುವ ಗಿರಾಕಿಗೆ ಔಷಧ ಹಾಕುವುದಾದರೂ ಹೇಗೆ? ಕೈ-ಕಾಲು ಹಿಡಿದು ಬಾಯಿಗೆ ಹೊಯ್ದೆ. ಉಗುಳಲು ನೋಡಿದಾಗ ಮೂಗು ಹಿಡಿದು ಬಲವಂತದಿಂದ ಕುಡಿಸಿದೆ. ಆ ಹಠಮಾರಿ ಒದ್ದಾಡಿ ಒದ್ದಾಡಿ ಔಷಧ ಅನ್ನನಾಳದ ಬದಲು ಶ್ವಾಸನಾಳಕ್ಕೆ ಹೋಗಿಬಿಟ್ಟಿತು. ಕೂಸಿಗೆ ನ್ಯೂಮೋನಿಯಾ ಆಗಿ ಆಸ್ಪತ್ರೆಗೆ ಸೇರಿಸಬೇಕಾಯಿತು. ಅಲ್ಲಾದರೂ ಸುಮ್ಮನೆ ಮಲಗಿಕೊಳ್ಳುತ್ತದೆಯೆ? ಊಹೂಂ ಸಂಜೆಯಾಗುತ್ತಿದ್ದ ಹಾಗೆ ನಿತ್ಯದ ರೂಢಿಯ ವಾಕಿಂಗ್ ಮಾಡಿಸಿರೆಂದು ಬೊಬ್ಬೆ ಹಾಕಲು ಶುರು. ಏನೇನು ಮಾಡಿದರು ಸುಮ್ಮನಾಗುವುದಿಲ್ಲ. ಬೇರೆ ಉಪಾಯವಿಲ್ಲದೇ ಕೈಗೆ ಚುಚ್ಚಿದ ಸಲೈನು ಮುಖಕ್ಕೆ ಹಾಕಿದ ಮಾಸ್ಕಿನ ಸಹಿತ ನಮ್ಮ ವಾಕಿಂಗು ಶುರುವಾಯಿತು. ಅಜ್ಜನ ಹೆಗಲ ಮೇಲೆ ಮಲಗಿದ ಕೂಸು. ನನ್ನ ಕೈಲಿ ಸಲೈನು ಬಾಟಲಿ ಕಟ್ಟಿದ ಕಂಬ. ಆಸ್ಪತ್ರೆಯ ಕಾರಿಡಾರಿನಲ್ಲಿ ಹಾದು ಹೊರ ಬಂದು ಗಾರ್ಡನ್ನಿನ ತುಂಬೆಲ್ಲ ಅತ್ತಿತ್ತ ಅಡ್ಡಾಡುವ ಮೆರವಣಿಗೆ. ಒಳ-ಹೊರ ರೋಗಿಗಳ ಪರಿವಾರವೆಲ್ಲ ಬೆರಗಾಗಿ ಹೀಗೂ ಉಂಟೆ ಎಂದು ನೋಡಿದ್ದೇ ನೋಡಿದ್ದು.
ಆಸ್ಪತ್ರೆ ಕಂಡು ಬಂದರೂ ನಮ್ಮ ಚಿಲ್ಟಾರಿಯ ಆಹಾರದ್ವೇಷದಲ್ಲಿ ಏನೂ ಸುಧಾರಣೆಯಾಗಲಿಲ್ಲ. ನಾನೂ ಬೇತಾಳದ ಬೆನ್ನು ಬಿಡದ ವಿಕ್ರಮನಂತೆ ಅನ್ನ ಉಗುಳಿದರೆ ರೊಟ್ಟಿ ಅದನ್ನೂ ಉಗುಳಿದರೆ ಚಪಾತಿ ಅದೂ ಹೊರ ಬಂದರೆ ಹಣ್ಣು ಹೀಗೆ ತುರುಕುತ್ತಲೇ ಇರುತ್ತಿದ್ದೆ. ಕೂಸೂ ಅಷ್ಟೇ. ಚೂರೂ ಕಡಿಮೆಯಾಗದ ರಭಸದಲ್ಲಿ ಥೂ ಎಂದು ಉಗುಳುತ್ತಲೇ ಇರುತ್ತಿತ್ತು. ನಮ್ಮ ಉಗುಳಾಟ-ತುರುಕಾಟಗಳು ಹೆಚ್ಚಾಗಿ ಹೊರಾಂಗಣ ಕ್ರೀಡೆಯಾಗಿದ್ದು ಕಂಪೌಂಡಿನ ಮೇಲೆ ನಡೆಯುತ್ತಿದ್ದವಾದ ಕಾರಣ ಸುತ್ತ ಮುತ್ತಲಿನ ಮನೆಯವರು ಪ್ರೇಕ್ಷಕರಾಗಿ ಕೆಲವೊಬ್ಬರು ಸಲಹಾ ಸಮಿತಿಯ ಸದಸ್ಯರಾಗಿ ಕೆಲವರು ಸ್ವಯಂಸ್ಫೂರ್ತಿಯಿಂದ ಆಟಗಾರರಾಗಿ ಒದಗುತ್ತಿದ್ದರು. ಆದರೆ ನಮ್ಮ ನಕ್ಷತ್ರದ ಹಠದ ಹೊಳಪಿಗೆ ಸೋತು ಒಳ ಸೇರುತ್ತಿದ್ದರು. ಒಮ್ಮೆ ಮಾತ್ರ ಒಬ್ಬರ ಮನೆಯ ಅಜ್ಜಿ ತಾನು ಮಾಡಿದ ಒಣಕಲು ರೊಟ್ಟಿಗೆ ಅದೆಂಥದೋ ತೊಕ್ಕು ಸವರಿ ತಿನ್ನಿಸಿದಳು. ಅಚ್ಚರಿಯೆಂಬಂತೆ ನಮ್ಮ ಎದುರಾಳಿ ಉಗುಳಲೇ ಇಲ್ಲ. ಅಷ್ಟನ್ನೂ ಗುಳುಂಗುಳುಂ ನುಂಗಿ ನೀರು ಕುಡಿಯಿತು. ಆದರೆ ಆವತ್ತೇ ನಡುರಾತ್ರಿ ಎದ್ದು ತನಗೆ ಆ ರೊಟ್ಟಿ-ತೊಕ್ಕು ಮತ್ತೆ ಬೇಕೆಂದು ಹಠ ಹಿಡಿಯಿತು ನೋಡಿ, ನಮಗೆ ಏಳು ಜನ್ಮ ನೆನಪಾಗಿ ಬಿಟ್ಟಿತು. ಯಾವ ಜನ್ಮದಲ್ಲಿ ಯಾರಿಗೆ ತ್ರಾಸು ಕೊಟ್ಟು ಓಡಿ ಬಂದೆವಪ್ಪ ಅಂತ. ನಡುರಾತ್ರಿ ಪಕ್ಕದ ಮನೆಯ ಬಾಗಿಲು ತಟ್ಟಿ ರೊಟ್ಟಿ ಬೇಡುವ ಘೋರಸ್ಥಿತಿ ಯಾವ ವೈರಿಗೂ ಬೇಡ. ಕಲ್ಲು ಕರಗುವ ಸಮಯದಲ್ಲಿ ಕಲ್ಲು ಹೊಡೆದು ಕೊಲ್ಲುವಷ್ಟು ಸಿಟ್ಟು ಬರುವಂತೆ ಕರೆಗಂಟೆ ಅಮುಕಿ ಅಮುಕಿ ರೊಟ್ಟಿ ತಂದು ತಿನ್ನಿಸಿಯಾಯಿತು. ಅಯ್ಯೋ ಎಲ್ಲಾ ಮಕ್ಕಳು ಹಾಗೇ ಅಲ್ವೇ ಅವೆಲ್ಲ ಬಾಲಲೀಲೆಗಳು ಅಂತೆಲ್ಲ ದೊಡ್ಡ ದೊಡ್ಡ ಮಾತಾಡಿ ಬಾಯಿಯೆಳೆಯುವ ಸಂಬಂಧಿಕರಿಗೆ ನಾನು ನಮ್ಮ ಮಿನುಗು ತಾರೆಯನ್ನು ಒಂದು ವಾರ ಸಾಕಿಕೊಡುವ ಸವಾಲು ಹಾಕಿದ್ದೆ. ಒಂದು ತಾಸು ಅದರ ಕಾರುಬಾರು ನೋಡಿದವರು ಮತ್ತೆ ಉಸಿರೆತ್ತಿದರೆ ಕೇಳಿ.
ನಮ್ಮ ಬಳಗದವರ ಮಗ ಉಗ್ರ ನಕ್ಷತ್ರ. ಜನರನ್ನು ಕಂಡಿದ್ದೇ ಹಾ ಎಂದು ಕೂಗುತ್ತ ಮೈಮೇಲೆ ಹಾರಿ ಗುದ್ದುವ ಹೊಡೆಯುವ ಆಟ ಆಡತೊಡಗುತ್ತಾನೆ. ಎದುರಿಗಿನವರ ವಯಸ್ಸು-ಲಿಂಗ-ಸ್ಥಾನ-ಮಾನ ಇವೆಲ್ಲ ಲೆಕ್ಕಕ್ಕಿಲ್ಲ. ಗೊತ್ತಿಲ್ಲದೇ ಅವರ ಮನೆ ಹೊಕ್ಕವರ ಪಾಡು ಕರಡಿ ಗುಹೆಗೆ ನುಗ್ಗಿದ ಮೊಲದ ಹಾಗೆ ಚಿಂದಿ ಚಿತ್ರಾನ್ನ. ಅವನಿಗೋ ಅದು ಅಪಾರ ಇಷ್ಟದ ಆಟ. ಹೋದವರಿಗೆ ಪ್ರಾಣ ಸಂಕಟ. ಅವನ ಅಪ್ಪ ಓದಿನಲ್ಲಿ ಅಮ್ಮ ಕೆಲಸದಲ್ಲಿ ಮುಳುಗಿರುತ್ತಾರೆ. ಅವರಿಗೆ ನೆಂಟರ ಆರ್ತನಾದ ಕಿವಿಗೆ ಬಿದ್ದು ಬಂದು ಕಾಪಾಡುವ ತನಕ ಉಗ್ರನಕ್ಷತ್ರ ಬೆಂಕಿ ಚೆಂಡಿನಂತೆ ಪುಟಿಯತ್ತಲೇ ಇರುತ್ತದೆ. ಅವನ ತಮ್ಮ ಎಸೆನಕ್ಷತ್ರ. ಅಂದರೆ ಕಣ್ಣಿಗೆ ಬಿದ್ದ ಸಕಲ ಚರಾಚರ ವಸ್ತುಗಳನ್ನು ಬೇಧಭಾವವಿಲ್ಲದೇ ಸರಕ್ಕನೆ ಕೈಗೆ ಎತ್ತಿಕೊಂಡು ಚೂರೂ ತಡಮಾಡದೇ ಅವರ ಮನೆಯಿರುವ ನಾಲ್ಕನೇ ಮಹಡಿಯ ಕಿಡಕಿಯಿಂದ ರೊಯ್ಯನೆ ಬೀಸಿ ಎಸೆಯುತ್ತಾನೆ. ಅವರ ಬಂದುಗಳೆಲ್ಲ ವಾಚು-ಪಸರ್ು-ಮೊಬೈಲು-ಕೀಲಿ ಹೀಗೆ ತಮ್ಮ ಕೈಲಿ ಹಿಡಿದುಕೊಂಡ ವಸ್ತುಗಳನ್ನೆಲ್ಲ ಕಣ್ಣೆದುರೇ ಕಳೆದುಕೊಂಡು ಕಡೆಗೆ ಕೈ ಕೈ ಹಿಸುಕಿಕೊಂಡಿದ್ದಾರೆ. ಕೈಯನ್ನಲ್ಲದೇ ಮಗುವಿನ ಕತ್ತು ಹಿಸುಕಲಿಕ್ಕೆ ಆಗುತ್ತದೆಯೇ? ಎಷ್ಟೆಂದರೂ ಅದು ಬಳಗದವರ ಮನೆ ನಕ್ಷತ್ರ. ಇದರ ಉಪಾಯಾರ್ಥವಾಗಿ ಅವರ ಮನೆಯ ಎಲ್ಲಾ ಕಿಡಕಿಗಳನ್ನು ಗಾಜು ಹೊಡಿಸಿ ಬಂದು ಮಾಡಿಸುವ ಪ್ರಸಂಗ ಬಂತು.
ನನ್ನ ಗೆಳತಿಯ ಮನೆಯಲ್ಲಿ ಒಂದು ಪ್ರತಿಭಾವಂತ ನಕ್ಷತ್ರ ಭೂಮಿಗಿಳಿದಿದೆ. ಕಷ್ಟವೆಂದರೆ ಅದು ನಿದ್ದೆ ಮಾಡುವ ಕೆಲವು ತಾಸುಗಳ ಹೊರತು ಉಳಿದಷ್ಟೂ ಹೊತ್ತು ಕಾರ್ಯಕ್ರಮ ಕೊಡುತ್ತದೆ. ಹಾಡು-ನ್ರತ್ಯ-ನಾಟಕ-ಭಾಷಣ-ಹರಿಕತೆ ಎಲ್ಲವನ್ನೂ ತನಗೆ ತಿಳಿದ ಹಾಗೆ ಮಾಡುತ್ತಲೇ ಇರುತ್ತದೆ. ಪ್ರತಿ ಸಲ ನಾವು ಅನೌನ್ಸು ಮಾಡಬೇಕು. ಹಾಗೂ ಮುಗಿದದ್ದೇ ಜೋರಾಗಿ ಚಪ್ಪಾಳೆ ಹೊಡೆಯಬೇಕು. ಅತ್ತಿತ್ತ ತಿರುಗದೇ ಅದನ್ನೇ ನೋಡಬೇಕು. ಆ ಕಡೆ ಈಕಡೆ ತಿರುಗಿದರೆ ಅಳಲು ಶುರು. ಅದಕ್ಕೆ ಹದಪೆಟ್ಟಿಗೆ ಸುಸ್ತೂ ಆಗುವುದಿಲ್ಲ. ದಿನಗಟ್ಟಲೆ ಕುಣಿಯುತ್ತದೆ. ನೋಡಿ ದಣಿದವರ ಪಾಡು ಬೇಡ. ಈ ಸರ್ವಕಲಾ ವಲ್ಲಭ ಮರಿಯನ್ನು ಸರ್ವಋತು ಸಹಿಸಿ ಸಹಿಸಿ ಸಾಕಾದವರು ಅವರ ಮನೆ ದಿಕ್ಕಿಗೆ ಹೋಗುವುದೇ ಬಿಟ್ಟಿದ್ದಾರೆ. ಅವರೇ ಬರುತ್ತಾರಂತ ಗೊತ್ತಾದರೂ ಮನೆಗೆ ಬೀಗ ಹಾಕಿ ಓಡುತ್ತಾರೆ. ಆ ಗೆಳತಿಯೂ ಊರಲ್ಲೇ ಹೆಚ್ಚಿನ ಅವಧಿ ತೆರೆದಿರುವ ಶಾಲೆ ಹುಡುಕಿ ಮರಿಯನ್ನು ಸೇರಿಸಿ ಉಸಿರು ಬಿಟ್ಟಿದ್ದಾಳೆ. ಇನ್ನೇನಾದರೂ ಮರಿಯ ಚಟ ಬಿಡುತ್ತದಾ ಅಥವಾ ಶಾಲೆ ಮುಚ್ಚುತ್ತದಾ ನೋಡಬೇಕು.
ನಮ್ಮ ಸಹೋದ್ಯೋಗಿಯ ಮಗು ಹರಕೆ-ಪೂಜೆ-ಪುನಸ್ಕಾರದ ನಂತರ ಮದುವೆಯ ದಶಕ ಕಳೆದ ಮೇಲೆ ದಯೆತೋರಿದ ಅಪರೂಪದ ನಕ್ಷತ್ರ. ಐದಾರು ವರ್ಷ ಕಳೆದರೂ ಶಾಲೆಗೆ ಹೋಗಲು ತಯಾರಿರಲಿಲ್ಲ. ಆರನೆ ಬರ್ಥಡೇಗೆ ಅವರಪ್ಪ ತಾಕೀತು ಮಾಡಿದರು. ನಾಳೆಯಿಂದ ನೀನು ಶಾಲೆಗೆ ಹೋಗುವುದಾದರಷ್ಟೇ ಬರ್ಥಡೆ ಮಾಡುತ್ತೇವೆ ಅಂತ. ಸರಿ ಮರುದಿನ ಮಗು ಶಾಲೆಗೆ ಹೋಗಿ ಬಂತು. ಮರುದಿನ ಮನೆಯಲ್ಲೇ ಉಳಿಯಿತು. ಯಾಕೆ ಅಂದರೆ ಮತ್ತೆ ಬರ್ಥಡೆ ಆದಮೇಲೆ ಹೋಗುವುದು ಅಂತು. ಸಂಜೆಗೆ ಅವರಪ್ಪ ಕೇಕು ತಂದ. ಮತ್ತೆ ಓಣಿಯ ಮಕ್ಕಳಿಗೆಲ್ಲ ಕರೆ ಹೋಯಿತು. ಹ್ಯಾಪಿ ಬರ್ಥಡೆ ಟು ಯೂ ಅಂತ ಹಾಡಿ ಕೇಕು ತಿಂದಾಯಿತು. ಮರುದಿನ ಕಮಕ್ ಕಿಮಕ್ ಎನ್ನದೆ ಮಗು ಶಾಲೆಗೆ ಹೋಗಿ ಬಂತು. ಅದರ ಮರು ದಿನ ಮತ್ತೆ ಬರ್ಥಡೆ ಮಾಡು ಅಂತ ಕೂತಿತು. ಇಡೀ ವರ್ಷ ದಿನ ಬಿಟ್ಟು ದಿನ ಬರ್ತಡೆ ಮಾಡಿಸಿಕೊಂಡ ಏಕೈಕ ನಕ್ಷತ್ರ ಅದು. ಅದರ ಪುಣ್ಯದಿಂದ ಓಣಿಯ ಮಕ್ಕಳೆಲ್ಲ ಕೇಕು ತಿಂದು ನಲಿದರು. ಬೇಕರಿಯವನಿಗೆ ಈ ತರದ ಗಿರಾಕಿ ಇದೊಂದೇ ಆದ ಕಾರಣ ಅವನೂ ಚಾಚೂ ತಪ್ಪದೇ ಕೇಕು ತಯಾರಿಸಿ ಮನೆಗೇ ಕಳಿಸಲಾರಂಭಿಸಿದ. ಓಣಿ ಮಕ್ಕಳು ಕರೆಸಿಕೊಳ್ಳದೇ ಸಂಜೆಗೆ ಹಾಜರಾಗತೊಡಗಿದರು. ಕಡೆಗೆ ಮಗು ಮರೆತರೂ ಕೇಕು-ಹುಡುಗರು ಹಾಜರಾಗಿ ನೆನಪು ಮಾಡುವ ಹಾಗಾಯ್ತು.
ನನ್ನ ನಾದಿನಿಯ ಮಗ ಸಣ್ಣಕಿರುವಾಗ ಅವಘಡ ನಕ್ಷತ್ರ. ಅಂದರೆ ತಾಸಿಗೊಂದು ಅವಗಡ ಮಾಡಿಕೊಳ್ಳುತ್ತಿದ್ದ. ಓಡಿದರೆ ಬೀಳುವುದು,ನಿಂತಲ್ಲೇ ಬಡಿಸಿಕೊಳ್ಳುವುದು, ಏನಾದರೊಂದನ್ನು ಮೈ ಮೇಲೆ ಹಾಕಿಕೊಳ್ಳುವುದು ಹೀಗೆ ನಿರಂತರ ಅಪಘಾತಗಳು. ಸ್ಟಾಂಡು ಹಾಕಿಟ್ಟ ಸ್ಕೂಟರ್,ಸೈಕಲ್ಲುಗಳಿಂದ ಹಿಡಿದು ಶೆಲ್ಪಿನ ಮೇಲಿಟ್ಟ ಡಬ್ಬದ ತನಕ ಅವನ ಮೇಲೆ ಬೀಳದಿರುವ ವಸ್ತುಗಳೇ ಇಲ್ಲ. ಕಡೇಪಕ್ಷ ದಿನಕ್ಕೊಂದಾದರೂ ಭಾನಗಡಿ ಆಗಲೇ ಬೇಕು. ಕಡೆಗೆ ಡೈನಿಂಗ ಟೇಬಲ್ ಮೇಲೆ ತಾಟಿಗೆ ಹಾಕಿಟ್ಟ ಬಿಸಿ ಅನ್ನವನ್ನಾದರೂ ಮೈಮೇಲೆ ಕೆಡವಿಕೊಂಡು ಅಳುತ್ತಿದ್ದ. ಪಾಪ ಅವಳು ಕಣ್ಣಲ್ಲಿ ಎಣ್ಣೆ ಹಾಕಿಕೊಂಡು ಕಾದರೂ ಎನಾದರೂ ಆಗುತ್ತಿತ್ತು. ಅವನ ಸಕಲ ಅಂಗಾಂಗಗಳೂ ಒಮ್ಮೆಯಲ್ಲ ಒಮ್ಮೆ ರಿಪೇರಿಯಾಗಿವೆ. ಬಂಧುಗಳ್ಯಾರೂ ಅವರನ್ನು ಮನೆಗೆ ಕರೆಯುತ್ತಿರಲಿಲ್ಲ. ಏಕೆಂದರೆ ಬಂದ ಅರ್ಧ ತಾಸಿನೊಳಗೆ ಆಸ್ಪತ್ರೆಗೆ ಕರೆದೊಯ್ಯ ಬೇಕಾಗುತ್ತಿತ್ತು. ಸಣ್ಣ-ಪುಟ್ಟ ಬ್ಯಾಂಡೇಜು ಟಿಂಕ್ಚರ್ ಅವಳು ಬ್ಯಾಗಲ್ಲೇ ಇಟ್ಟುಕೊಳ್ಳೂತ್ತಿದ್ದಳು. ಫೋನು ಮಾಡಿದರೆ ಆರಾಮಾ ಅಂತ ಯಾರೂ ಕೇಳುತ್ತಿರಲಿಲ್ಲ. ಇವತ್ತೇನಾತೇ ಎಂದೇ ಶುರುವಿಟ್ಟುಕೊಳ್ಳುವುದು. ಆಜ ಕಿ ತಾಜಾ ಖಬರ್ ಅಂತ ಅವಳು ಹೇಳುವುದು.
ನಮ್ಮ ಓಣಿಯಂತೂ ಕೆಳಮಧ್ಯಮವರ್ಗದ ಪುಟ್ಟ ಪುಟ್ಟ ಮನೆಗಳ ಸಾಲು. ಮನೆಗೆ ಎರಡು-ಮೂರರಹಾಗೆ ಅಸಂಖ್ಯಾತ ತಾರೆಗಳು. ಅವರ ಮನೆ, ಇವರ ಅಂಗಳ ಅಂತೆಲ್ಲ ಭೇದ ಭಾವ ತೋರದೇ ಹಗಲಿರುಳೂ ಓಣಿ ತುಂಬಾ ಕೇಕೆ ಗದ್ದಲ ಪುಂಡಾಟಗಳಲ್ಲಿ ತೊಡಗಿಕೊಂಡು ಫಳಫಳ ಹೊಳೆಯುತ್ತಲೇ ಇರುತ್ತವೆ. ಎಂಟು ತಿಂಗಳ ಅಂಬೆಗಾಲಿನ ಮರಿಯಿಂದ ಹಿಡಿದು ಕಾಲೇಜು ಲಲನೆಯರ ತನಕ ಎಲ್ಲಾ ವಯೋಮಾನದವೂ ಇವೆ. ಚಿಕ್ಕ ಚಿಕ್ಕ ಮರಿಗಳ ಲೆಕ್ಕವೂ ಸಿಗುವುದಿಲ್ಲ. ಗೇಟು ಮನೆಬಾಗಿಲು ತೆರೆದಿಟ್ಟರೆ ಸಪ್ಪಳವಿಲ್ಲದೇ ಒಳ ಬಂದು ಬಿಡುತ್ತವೆ. ಯಾವ್ಯಾವುದೋ ರೂಮಿನಲ್ಲಿ ಎನೇನೋ ಮಾಡುತ್ತ ಕೂತಿರುತ್ತವೆ. ಅವುಗಳ ಕೈಗೆ ಮೊಬೈಲು,ಪಸರ್ು,ಕೀಲಿ ಸಿಕ್ಕರೆ ಕಷ್ಟ. ಆಡಿ ಹಾಗೇ ಹೊರಗೆ ಹೊತ್ತೊಯ್ದು ಎಸೆದು ಬಿಡುತ್ತವೆ. ತೊಂದರೆ ಎಂದರೆ ಇವು ಮ್ಯೂಟ್ ಮಾಡಿದ ಮೊಬೈಲ ಹಾಗೆ ಸದ್ದಿಲ್ಲದೇ ಒಡಾಡುವುದು. ಕೆಲವು ಸಲ ನಾನು ಹೊರ ಹೊರಟು ಬೀಗ ಹಾಕಿ ಗಾಡಿ ಸ್ಟಾಟರ್ು ಮಾಡಿದ ಮೇಲೆ ಅವು ಒಳಗಿಂದ ಬಾಗಿಲು ಬಡಿದಿವೆ. ಯಾವಾಗ ಒಳ ಸೇರಿದ್ದವೋ ಹಾಗೇ ಹೋಗಿದ್ದರೆ ಏನು ಗತಿ ಅಂತ ನಾನು ಎದೆ ಒಡೆದುಕೊಂಡೆ. ಆಗಿನಿಂದ ಮನೆ ಬಾಗಿಲು ಹಾಕೇ ಇರಬೇಕು. ನಾಯಿ-ಬೆಕ್ಕಿಗಿಂತ ಲಿಟ್ಲ ಸ್ಟಾರುಗಳಿಗೆ ಹೆದರಿ ಹೆದರಿ ಸಾಯುವುದು. ನಾವಿಲ್ಲದಾಗ ಕಂಪೌಂಡ ಒಳ ಬಂದು ಕುಂಡದೊಳಗಿನ ತುಳಸಿ ಗುಲಾಬಿ ಗಿಡಗಳನ್ನೆಲ್ಲ ಹರಿದು ಎಲೆ ರಾಶಿ ಹಾಕಿ ಅಂಗಡಿ ಆಟ ಆಡಿ ನನ್ನ ಪಿತ್ತ ಕೆರಳಿ ಅವರಮ್ಮಂದಿರ ಹತ್ತಿರ ಕೂಗಿ ಅವರು ಇವಕ್ಕೆ ದಬದಬ ಬಡಿದು ಇವು ಅತ್ತು ನೋಡಲಾಗದೇ ನಾನೇ ಬಿಡಿಸಿ ಮತ್ತೆ ಮರುದಿನ ಯಥಾ ಪ್ರಕಾರ ಗೇಟೊಳಗೇ ಆಟ. ನಾನು ಬಂದೊಡನೆ ಒಂದರ ಮೇಲೆ ಒಂದು ಚಾಡಿ ಹೇಳುತ್ತವೆ. ಆಂಟಿ ಇವ ಗಿಡ ಹರಿದ, ನಾನಲ್ರೀ ಇವ ಕುಂಡ ಒಡೆದ. ನಾನು ಗಾರ್ಡನ್ ಉಸಾಬರಿ ಬಿಟ್ಟು ನಿಸೂರಾಗಬೇಕಾಯಿತು.
ಅಯ್ಯೋ ಇದೆಲ್ಲ ಹೇಳಿ ಮುಗಿಯುವ ಸುದ್ದಿಯಲ್ಲ ಬಿಡಿ. ಆಕಾಶವಿರುವ ತನಕ ತಾರೆಗಳು ಫಳಫಳ ಹಲ್ಲು ಕಿಸಿದು ಮೂಡುತ್ತವೆ. ನಮ್ಮ ನಿಮ್ಮ ಮನೆ ಕಿಡಕಿಯಲ್ಲಿ ಹೊಳೆಯುತ್ತವೆ. ನಮ್ಮ ಕಣ್ಣ ಕನ್ನಡಿಯ ನಯವಿದ್ದಷ್ಟು ಮಿನುಗುತ್ತವೆ. ನಾವೆಷ್ಟೇ ಗುಣುಗುಣು ಗೊಣಗಿದರೂ ಹಾಡುತ್ತೇವೆ. ಆಡಿ ಬಾ ನನ ಕಂದ ಅಂಗಾಲ ತೊಳೆದೇನ ತೆಂಗಿನ ಕಾಯಿ ತಿಳಿ ನೀರ ತಕ್ಕೊಂಡು ಬಂಗಾರ ನಿನ ಪಾದ ತೊಳದೇನ…







Ha ha ha sogasada lekhana Pragna. Nakku, nakku hotte hunnaythu.
ಕೈಯನ್ನಲ್ಲದೇ ಮಗುವಿನ ಕತ್ತು ಹಿಸುಕಲಿಕ್ಕೆ ಆಗುತ್ತದೆಯೇ?
hahahahaha. Loved it madam. Superb narration!!