ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಿತ್ಯಾನಂದ ಪ್ರಕರಣ; ನಮಗೆ ಮಠಾಧಿಪತಿಗಳು ಯಾಕೆ ಬೇಕು?

– ಶಶಿಧರ ಭಟ್

ಕುಮ್ರಿ

ನಾನು ಈ ಲೇಖನವನ್ನು ಪ್ರಾರಂಭಿಸುವುದಕ್ಕೆ ಮೊದಲು ಒಂದು ಅಂಶವನ್ನು ಸ್ಪಷ್ಟ ಪಡಿಸುತ್ತೇನೆ. ನನಗೆ ದೇವ ಮಾನವರ ಬಗ್ಗೆಯಾಗಲೀ, ಈ ಮಠಾಧಿಪತಿಗಳ ಬಗ್ಗೆಯಾಗಲಿ ಅಂತಹ ಗೌರವ ಇಲ್ಲ. ಧರ್ಮದ ಹೆಸರಿನಲ್ಲಿ ಸಿಂಹಾಸನದ ಮೇಲೆ ವಿರಾಜಮಾನರಾಗುವ, ತಲೆಯ ಮೇಲೆ ಕಿರೀಟ ಇಟ್ಟು ಕೊಳ್ಳುವ ಸ್ವಾಮಿಗಳು ನನಗೆ ವಿಧೂಷಕರಂತೆ ಕಾಣುತ್ತಾರೆ. ಹಾಗೆ ನನಗೆ ಗೌರವ ನೀಡಬೇಕು ಎಂದು ಅನ್ನಿಸಿದ ಯಾವುದೇ ಸ್ವಾಮೀಜಿ ಇನ್ನೂ ದೊರಕಿಲ್ಲ. ಜೊತೆಗೆ ನಾನು ಹುಟ್ಟಿದ ಜಾತಿಯ ಮಠ ಈಗ ೨೫ ವರ್ಷಗಳ ಹಿಂದೆ ನನ್ನನ್ನು ಜಾತಿಯಿಂದ ಹೊರಗೆ ಹಾಕಿದ್ದರಿಂದ ಅವರ ಹಂಗು ನನಗೆ ಇಲ್ಲ. ನನಗೆ ಮೊದಲಿನಿಂದಲೂ ಈ ಸ್ವಾಮೀಜಿಗಳ ಬಗ್ಗೆ ಸಣ್ಣ ಅನುಮಾನ. ಇವರೆಲ್ಲ ನಮ್ಮ ಹಾಗೆ ಹುಲು ಮಾನವರೇ ಆಗಿರುವುದರಿಂದ ನಮಗೆ ಇರುವ ಎಲ್ಲ ರೀತಿಯ ರಾಗ ಧ್ವೇಷಗಳೂ ಅವರಿಗೂ ಇವೆ. ಆದ್ದರಿಂದ ಅವರನ್ನು ನಮಗಿಂತ ಮೇಲು ಎಂದು ಒಪ್ಪಲು ನಾನು ಸಿದ್ಧನಿಲ್ಲ.

ವ್ಯ೦ಗ್ಯ ಚಿತ್ರ : ಸತೀಶ್ ಆಚಾರ್ಯ

ಸ್ವಾಮೀಜಿಗಳ ಜೊತೆಗಿನ ಈ ಸಣ್ಣ ಭಿನ್ನಾಭಿಪ್ರಾಯಕ್ಕೆ ಇರುವ ಕಾರಣಗಳು ಸರಳವಾದವುಗಳು. ಮನುಷ್ಯನ ಬದುಕಿನ ಸತ್ಯವನ್ನು ಹುಡುಕಲು ಹೊರಟವರಿಗೆ ಅರಮನೆಯಂತಹ ಮಠದ ಅಗತ್ಯ ಇಲ್ಲ.ಅಡ್ಡಪಲ್ಲಕ್ಕಿ ಬೇಕಾಗಿಲ್ಲ. ಸಮಾಜದಲ್ಲಿ ಧಾರ್ಮಿಕ ಮತ್ತು ನೈತಿಕ ಮೌಲ್ಯಗಳನ್ನು ಬೋಧಿಸುವವರು ರಾಜಕಾರಣಿಗಳ ಏಜೆಂಟರಂತೆ ವರ್ತಿಸಕೂಡದು ಆದರೆ ಆಗಿಹೋದ ಕೆಲವು ಆಧ್ಯಾತ್ಮಿಕ ವಾದಿಗಳು ನನ್ನ ಮೇಲೆ ಪರಿಣಾಮ ಬೀರಿದ್ದಾರೆ. ಜಿದ್ದು ಕೃಷ್ಣಮೂರ್ತಿ ಮತ್ತು ಓಷೋ ಚಿಂತನೆಗಳು ನನ್ನ ಮೇಲೆ ಪರಿಣಾಮ ಬೀರಿವೆ. ಹಾಗೆ ಧ್ಯಾನ ನಮ್ಮ ಮನಸ್ಸನ್ನು ನಿಯಂತ್ರಣಕ್ಕೆ ತರುತ್ತದೆ ಎಂಬುರಲ್ಲಿ ನನಗೆ ಯಾವ ಅನುಮಾನವೂ ಇಲ್ಲ. ಯಾಕೆಂದರೆ ಇವತ್ತಿಗೂ ನಾನು ದಿನದಲ್ಲಿ ಕನಿಷ್ಟ ಅರ್ಧ ಗಂಟೆ ಧ್ಯಾನ ಮಾಡುತ್ತೇನೆ ಭಾರತೀಯ ಆಧ್ಯಾತ್ಮಿಕ ಜಗತ್ತಿನಲ್ಲಿ ಸಾಧನೆ ಮಾಡಿದ ಶಂಕರಾಚಾರ್ಯ, ಮಧ್ವಾಚಾರ್ಯ, ರಾಮಕೃಷ್ಣ ಪರಮಹಂಸ, ವಿವೇಕಾನಂದ ಅವರ ಚಿಂತನೆಗಳ ಪರಿಚಯವನ್ನು ನಾನು ಮಾಡಿಕೊಂಡಿದ್ದೇನೆ. ಇವಷ್ಟು ಪೂರ್ವ ಪೀಠಿಕೆ ಸಾಕು ಎಂದು ಅನ್ನಿಸುತ್ತದೆ. ಈಗ ನಾನು ಪ್ರಸ್ತಾಪಿಸಲು ಹೊರಟಿರುವ ವಿಚಾರಕ್ಕೆ ಪ್ರೇರಣೆಯಾಗಿರುವುದು ನಿತ್ಯಾನಂದ ಸ್ವಾಮೀಜಿ ಅವರ ಪ್ರಕರಣ. ನಿತ್ಯಾನಂದ ಸ್ವಾಮೀಜಿಯವರ ಬಗ್ಗೆ ಹೇಳುವುದಾದರೆ ಅವರು ರವಿಶಂಕರ್ ಸ್ವಾಮಿ ಅವರಂತೆ ವಿದೇಶಿ ಭಕ್ತರನ್ನು ಆಕರ್ಷಿಸಿ ಅವರಿಂಿ ಹಣ ಸಂಗ್ರಹಿಸಿ ಸಾಮ್ರಾಜ್ಯ ಕಟ್ಟಲು ಹೊರಟವರು. ಈ ವಿಚಾರದಲ್ಲಿ ರವಿಶಂಕರ್ ಸ್ವಾಮೀಜಿಗೆ ತೀವ್ರ ಪೈಪೋಟಿಯನ್ನು ನೀಡುತ್ತಿರುವವರು ನಿತ್ಯಾನಂದ ಸ್ವಾಮೀಜಿ. ಅವರು ಬಿಡದಿ ಬಳಿ ಸ್ಥಾಪಿಸಿದ ಆಶ್ರಮ ಕೋಟ್ಯಾಂತರ ರೂಪಾಯಿ ಬೆಲೆ ಬಾಳುತ್ತದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದು ಇಳಿಯುವ ಬಹುತೇಕ ವಿದೇಶಿಯರು ಬಿಡದಿ ಆಶ್ರಮಕ್ಕೆ ಭೇಟಿ ನೀಡತ್ತಾರೆ. ಯೋಗ ಮತ್ತು ಧ್ಯಾನಕ್ಕೆ ವಿದೇಶಗಳಲ್ಲಿ ಭಾರಿ ಬೇಡಿಕೆ ಬಂದ ತಕ್ಷಣ ಅದನ್ನು ಮಾರಾಟ ಮಾಡುವ ನೂರಾರು ಬಾಬಾಗಳು ಹುಟ್ಟಿಕೊಂಡರು. ಸಂವಹನ ಶಕ್ತಿ ಹೊಂದಿದವರು ಯಶಸ್ವಿಯೂ ಆದರು. ಇದು ಸ್ವಲ್ಪ ಮಟ್ಟಿಗೆ ದೇಶಿ ಸ್ವಾಮಿಗಳ ವಿರೋಧಕ್ಕೆ ಕಾರಣವಾಯಿತು. ಜಾತಿಯತೆಯನ್ನು ರಕ್ಷಿಸಿಕೊಂಡು ಬರುತ್ತಿದ್ದ ಈ ಸಾವಿರಾರು ಮಠಾಧಿಪತಿಗಳನ್ನು ವಿದೇಶದಿಂದ ಹರಿದು ಬರುತ್ತಿರುವ ಹಣ ಕಂಗಾಲಾಗಿ ಮಾಡಿತು. ಇದೆಲ್ಲ ಉತ್ತುಂಗಕ್ಕೆ ತಲುಪಿದ್ದು ಆಚಾರ್ಯ ರಜನೀಶ್ ವಿದೇಶಗಳಲ್ಲಿ ಭಾರಿ ಜನಪ್ರಿಯತೆಯನ್ನು ಪಡೆದಾಗ. ಆಚಾರ್ಯ ರಜನೀಶ್ ಅಥವಾ ಓಷೋ ಯೋಗ ಧ್ಯಾನ ಮತ್ತು ಸೆಕ್ಸ್ ಅನ್ನು ಮಿಳಿತಗೊಳಿಸಿದರು. ಜೊತೆಗೆ ಅದ್ಬುತ ವಾಗ್ಮಿಯೂ ಚಿಂತಕರೂ ಆಗಿದ್ದ ಓಷೋ ಸೆಕ್ಸ್ ಅನ್ನು ಸೆಲಿಬ್ರೇಷನ್ ಎಂದು ಕರೆಯುವ ಮೂಲಕ ಸಂಚಲನವನ್ನು ಉಂಟು ಮಾಡಿ ಬಿಟ್ಟಿದ್ದರು. ಇದನ್ನು ಜೀರ್ಣಿಸಿಕೊಳ್ಳುವ ಶಕ್ತಿ ಸಂಪ್ರದಾಯವಾದಿ ಮಠಾಧಿಪತಿಗಳಿಗೆ ಇರಲಿಲ್ಲ. ಆಗ ಈ ಜನ ಎತ್ತಿದ್ದು ನೈತಿಕತೆಯ ಪ್ರಶ್ನೆ. ಒಷೋ ಸೆಕ್ಸ್ ಮೂಲಕವೇ ಆಧ್ಯಾತ್ಮಿಕ ದಾರಿಯನ್ನು ಹುಡುಕುವ ವ್ಯಕ್ತಿಯಾಗಿದ್ದರು. ಆದರೆ ಕೊನೆಗೆ ಅವರು ದೇಶವನ್ನೇ ತೊರೆದು ಹೋಗಬೇಕಾಯಿತು. ಆದರೆ ರಜನೀಶ್ ಮಹೇಶ್ ಯೋಗಿಯಂಥವರು ಭಾರತೀಯ ಆಧ್ಯಾತ್ಮಕ ಜಗತ್ತನ್ನು ಬೇರೆ ಬೇರೆ ರೀತಿಯಲ್ಲಿ ವಿದೇಶದಲ್ಲಿ ಮಾರಾಟ ಮಾಡಿ ಬಿಟ್ಟಿದ್ದರು. ಭಾರತೀಯ ಆಧ್ಯಾತ್ಮಿಕತೆಗೆ ಬಹು ದೊಡ್ಡ ಮಾರುಕಟ್ಟೆ ಆಗಲೇ ದೊರಕಿ ಬಿಟ್ಟಿತ್ತು. ಈ ಮಾರುಕಟ್ಟೆಯನ್ನು ಯಶಸ್ವಿಯಾಗಿ ಬಳಸಿಕೊಂಡವರು ಮೂರು ಸಲ ಶ್ರೀ ಎಂಬುದನ್ನು ತಮ್ಮ ಹೆಸರಿನ ಜೊತೆ ಸೇರಿಸಿಕೊಂಡಿರುವ ರವಿಶಂಕರ್ ಸ್ವಾಮೀಜಿ. ಅವರು ಯೋಗವನ್ನು ಹಿಡಿದುಕೊಂಡರೂ ಸೆಕ್ಸ್ ಅನ್ನು ಮುಟ್ಟಲು ಹೋಗಲಿಲ್ಲ. ಅವರಿಗೆ ಸಂಪ್ರದಾಯವಾದಿ ಮಠಾಧಿಪತಿಗಳ ವಿರೋಧವನ್ನು ಎದುರಿಸುವ ಶಕ್ತಿ ಇರಲಿಲ್ಲ. ಜೊತೆಗೆ ಓಷೋ ಅವರಂತೆ ಆಧ್ಯಾತ್ಮಿಕ ಚಿಂತಕರೂ ಆಗಿಲ್ಲದ, ಒಳನೋಟಗಳೂ ಇಲ್ಲದ ರವಿಶಂಕರ್ ಅವರಿಗೆ ತಮ್ಮ ದೌರ್ಬಲ್ಯದ ಅರಿವು ಇತ್ತು. ಆದರೆ ನಿತ್ಯಾನಂದ ಸ್ವಾಮೀಜಿ ಹಾಗಿರಲಿಲ್ಲ. ಅವರು ರವಿಶಂಕ್ರ್ ಗುರೂಜಿ ಬಿಟ್ಟಿದ್ದ ಸೆಕ್ಸ್ ಅನ್ನು ಆಧ್ಯಾತ್ಮಿಕ ಸಾಧನೆಯ ದಾರಿಯಾಗಿ ಬಳಸಿಕೊಳ್ಳಲು ಮುಂದಾದರು. ಹೀಗಾಗಿ ವಿದೇಶಗಳಲ್ಲಿ ಅವರ ಪ್ರಭಾವ ಹೆಚ್ಚತೊಡಗಿತು. ವಿದೇಶಿ ಹಣ ನಿತ್ಯಾನಂದ ಸ್ವಾಮಿಗಳತ್ತ ಹರಿದು ಬರತೊಡಗಿತು. ಜೊತೆಗೆ ಹಿಂದುಳಿದ ವರ್ಗಕ್ಕೆ ಸೇರಿದ ನಿತ್ಯಾನಂದ ಈ ರೀತಿಯ ಜನಪ್ರಿಯತೆ ಪಡೆದಿದ್ದು ಮೇಲ್ಜಾತಿಯ ಮಠಾಧಿಪತಿಗಳ ಕೆಂಗಣ್ಣಿಗೆ ಗುರಿಯಾದದ್ದು ನಿಜ. ಈ ನಡುವೆ ಬಿಡದಿ ಬಳಿಯ ನಿತ್ಯಾನಂದ ಆಶ್ರಮದ ಭೂಮಿಯ ಮೇಲೆ ಕಣ್ಣಿಟ್ಟಿದ್ದ ನೆಲ ಗಳ್ಳರು ಭೂಗತ ಲೋಕದ ದೊರೆಗಳು ಅಖಾಡಕ್ಕೆ ಇಳಿದರು. ಕೆಲವು ರಾಜಕಾರಣಿಗಳು ಇದಕ್ಕೆ ಕೈಜೋಡಿಸಿದರು. ನಿತ್ಯಾನಂದ ಆಶ್ರಮದ ಭೂಮಿಯ ಮೇಲೆ ಕಣ್ಣಿದೆ ಎಂದು ಭಹಿರಂಗವಾಗಿ ಹೇಳುವ ಸ್ಠಿತಿಯಲ್ಲಿ ಅವರು ಇರಲಿಲ. ಹೀಗಾಗಿ ನೈತಿಕತೆ ಮತ್ತು ಭಾಷಾ ವಿವಾದವನ್ನು ಎಳೆದು ತಂದರು. ಯಾವತ್ತೂ ನೈತಿಕತೆ ಮತ್ತು ಭಾಷೆಯಂತಹ ಭಾವನಾತ್ಮಕ ವಿಚಾರಗಳು ಬಹುಬೇಗ ಜನರನ್ನು ತಲುಪುತ್ತವೆ. ಹಾಗೆ ಇವುಗಳು ಅಮಲು ಹುಟ್ಟಿಸುವಂತಹುಗಳು. ಅಮಲು ಹುಟ್ಟಿಸುವಂತಹುಗಳ ಮೂಲ ಗುಣ ದರ್ಮ ಎಂದರೆ ಅದು ಸತ್ಯದ ಮೇಲೆ ತಾತ್ಮಾಲಿಕ ಮರೆವಿನ ಪರದೆಯನ್ನು ಬಿಟ್ಟು ಬಿಡುತ್ತದೆ. ನಿತ್ಯಾನಂದ ಸ್ವಾಮೀಜಿಯನ್ನು ಬೇರೆ ಬೇರೆ ಕಾರಣಕ್ಕಾಗಿ ವಿರೋಧಿಸುವವರು ಮೊದಲು ಎತ್ತಿರುವ ನೈತಿಕತೆಯ ಪ್ರಶ್ನೆಯನ್ನೇ ತೆಗೆದುಕೊಳ್ಳಿ. ಆಶ್ರಮದಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದೆ ಎಂದು ಬೊಬ್ಬೆ ಹಾಕುತ್ತಿರುವ ಅವರು ಅಲ್ಲಿ ನಡೆಯುತ್ತಿರುವ ಅನೈತಿಕ ಚಟವಟಿಕೆ ಯಾವುದು ಎಂದು ಹೇಳುವುದಿಲ್ಲ. ನಿತ್ಯಾನಂದ ಸ್ವಾಮೀಜಿ ಮುಕ್ತ ಲೈಂಗಿಕತೆಯ ವಿರೋಧಿ ಅಲ್ಲದಿದ್ದರೆ ಅಲ್ಲಿ ಅದೇ ನಡೆಯುತ್ತಿದ್ದರೆ ಅದನ್ನು ಸಾಬೀತು ಮಾಡಬೇಕಾದ ಹೊಣೆಗಾರಿಕೆ ಆರೋಪ ಮಾಡಿದವರ ಮೇಲೆ ಇರುತ್ತದೆ. ಜೊತೆಗೆ ಯಾವುದು ನೈತಿಕ ಯಾವುದು ಅನೈತಿಕ ? ಈ ಬಗ್ಗೆ ಮೊದಲು ಸ್ಪಷ್ಟತೆ ಬೇಕು. ಇನ್ನು ನಿತ್ಯಾನಂದ ಸ್ವಾಮೀಜಿ ಅಮೇರಿಕದ ಹೆಂಗಸೊಬ್ಬಳನ್ನು ಬಳಸಿಕೊಂಡ ಎಂಬ ಆರೋಪ. ಬಳಸಿಕೊಳ್ಳುವುದು ಎಂದರೇನು ? ಅತ್ಯಾಚಾರ ಎನ್ನುವುದು ಐದು ವರ್ಷಗಳ ಕಾಲ ನಡೆದರೆ ಅದು ಅತ್ಯಾಚಾರ ಹೇಗಾಗುತ್ತದೆ ? ಅದು ಇಬ್ಬರ ಒಪ್ಪಿಗೆಯ ಮೇಲೆ ನಡೆದಿರಬಹುದಾದ ಸಾಮಾನ್ಯ ಕ್ರಿಯೆ ಆಗಿರಬಹುದಲ್ಲವೆ ? ಈ ರಾಜ್ಯದ ಮಠಗಳ ಇತಿಹಾಸವನ್ನು ಗಮನಿಸಿದರೆ, ಲೈಂಗಿಕ ಆರೋಪವನ್ನು ಹೊತ್ತ ಹಲವಾರು ಸ್ವಾಮೀಜಿಗಳು ಆಗಿ ಹೋಗಿದ್ದಾರೆ. ಇಂತಹ ಲೈಂಗಿಕ ಪ್ರಕರಣಗಳ ಬಗ್ಗೆ ವಿಧಾನ ಸಭೆಯಲ್ಲಿ ಚರ್ಚೆ ನಡೆದಿದ್ದು ಇದೆ. ನನಗೆ ಗೊತ್ತಿರುವ ಪ್ರಕರಣವೊಂದರಲ್ಲಿ ಸ್ವಾಮೀಜಿ ಒಬ್ಬರು ಭಕ್ತರೊಬ್ಬರು ಕೊಟ್ಟ ಬಂಗಾರದ ಸರವೊಂದನ್ನು ಭಕ್ತರ ಹೆಂಡತಿಗೆ ಕೊಟ್ಟು ಬಿಟ್ಟಿದ್ದರು. ಭಕ್ತರ ಹೆಂದತಿಗೂ ಸ್ವಾಮೀಜಿಗೂ ಇರುವ ಸಂಬಂಧ ಬಹಿರಂಗಗೊಂಡಿತ್ತು. ಇನ್ನೊಂದು ಪ್ರಕರಣದಲ್ಲಿ ಮಠ ಬಿಟ್ತು ಹೊರಟ ಸ್ವಾಮೀಜಿ ಒಬ್ಬರಿಗೆ ಅವರು ಗುರುವಾಗಿದ್ದ ದೊಡ್ಡ ಸ್ವಾಮೀಜಿ ಮಠವನ್ನು ಬಿಡದಂತೆ ಬೇಕಾದರೆ ಗಂಡ ಸತ್ತ ಹೆಂಗಸೊಬ್ಬಳನ್ನು ಇಟ್ಟುಕೊಳ್ಳುವಂತೆಯೂ ಸೂಚಿಸಿದ್ದರು ! ಇನ್ನೊಬ್ಬ ದೊಡ್ದ ಸ್ವಾಮೀಜಿ ಚಿತ್ರ ನಟಿಯೊಬ್ಬರ ತಂದೆ ಎಂಬ ಗುಸು ಗುಸು ಇದೆ. ಈ ಸ್ವಾಮಿಗಳು ಇಂದು ಸಮಾಜದಲ್ಲಿ ಗೌರವದ ಸ್ಥಾನ ಹೊಂದಿದ್ದಾರೆ. ಅವರ ಬಗ್ಗೆ ಏಕ ವಚನದಲ್ಲಿ ಮಾತನಾಡುವ ಧೈರ್ಯವನ್ನು ಯಾರೂ ಮಾಡುವುದಿಲ್ಲ. ಮಾಧ್ಯಮಗಳ ಕಚೇರಿಗೂ ಬಂದು ಪಾದ ಪೂಜೆ ಮಾಡಿಸಿಕೊಳ್ಳುವಷ್ಟ್ಉ ಪ್ರಭಾವಿಗಳು ಅವರು. ಆದರೆ ನಿತ್ಯಾನಂದ ಅವರ ಬಗ್ಗೆ ಹಾಗಲ್ಲ. ಅವರು ಇನ್ನು ಕೇವಲ ಆಪಾದಿತರಾದರೂ ಅವರನ್ನು ಏಕ ವಚನದಲ್ಲಿ ಬೈಯ ಬಹುದು. ಲೇವಡಿ ಮಾಡಬಹುದು. ಯಾಕೆಂದರೆ ಅವರನ್ನು ಬೆಂಬಲಿಸುವ ಪ್ರಬಲ ಜಾತಿ ಅವರ ಹಿಂದೆ ಇಲ್ಲ. ನಿತ್ಯಾನಂದ ಬೇರೆ ಸ್ವಾಮಿಗಳು ಮಾಡದಿರುವ ತಪ್ಪನ್ನು ಮಾಡಿಲ್ಲ. ಬೇರೆ ಸ್ವಾಮೀಜಿಗಳಂತೆ ಅವರೂ ಬದುಕಿದ್ದಾರೆ. ಹಾಗಿದ್ದರೆ ಅವರನ್ನು ಗುರಿಯಾಗಿಸಿಕೊಂಡು ಯಾಕೆ ಅವರ ಹಿಂದೆ ಬೀಳಲಾಗುತ್ತಿದೆ ಎಂಬುದು ಬಹು ಮುಖ್ಯ ಪ್ರಶ್ನೆ. ನಿತ್ಯಾನಂದ ಸ್ವಾಮೀಜಿ ಕೆಲವು ವಿಚಾರಗಳಲ್ಲಿ ಬೇರೆ ಸ್ವಾಮಿಗಳಿಗಿಂತ ಭಿನ್ನವಾಗಿದ್ದಾರೆ. ಅವರ ಆಶ್ರಮದಲ್ಲಿ ಫಂಕ್ತಿ ಬೇಧ ಇಲ್ಲ. ಜಾತಿಯತೆ ಇಲ್ಲ. ತಮ್ಮ ಜಾತಿಯ ರಾಜಕಾರಣಿ ಜೈಲಿಗೆ ಹೋದ ಎಂಬ ಕಾರಣಕ್ಕಾಗಿ ಅವರು ಜೈಲಿಗೆ ಹೋಗಿ ಸಾಂತ್ವನ ಹೇಳಿಲ್ಲ. ಸ್ವಜಾತಿಯ ರಕ್ಷಣೆಗಾಗಿ ಬೀದಿಗೆ ಇಳಿದು ಪ್ರತಿಭಟನೆ ಮಾಡಿಲ್ಲ. ಈ ವಿಚಾರಗಳು ನಮ್ಮ ಕಣ್ಣಿಗೆ ಕಾಣುತ್ತಿಲ್ಲ. ಬಹುತೇಕ ಸ್ವಾಮೀಜಿಗಳು ಒಂದೇ ತಕ್ಕಡಿಯಲ್ಲಿ ತೂಗುವಂಥವರು. ಇವರ ನಡುವೆ ಯಾವ ವ್ಯತ್ಯಾಸವೂ ಇಲ್ಲ. ಇನ್ನು ಇವರೆಲ್ಲ ಎತ್ತಿರುವ ನೈತಿಕತೆಯ ಪ್ರಶ್ನೆ ಎಂಬುದು ಹಾಸ್ಯಾಸ್ಪದವಾಗಿ ಕಾಣುತ್ತಿದೆ. ನೈತಿಕತೆ ಎನ್ನುವುದು ಆಯಾ ಕಾಲಕ್ಕೆ ಬದ್ಧವಾದ ಬದುಕುವ ರೀತಿ. ಇಲ್ಲಿ ವೈಯಕ್ತಿಕತೆಗಿಂತ ಸಾಮಾಜಿಕ ನಿಲುವುಗಳು ಬಹಳ ಮುಖ್ಯ. ಲೈಂಗಿಕತೆಯ ಕಟ್ಟುಪಾಡುಗಳು ಸಮಾಜದಿಂದ ಸಮಾಜಕ್ಕೆ ಬದಲಾಗುವಂತೆ ಕಾಲದಿಂದ ಕಾಲಕ್ಕೆ ಬದಲಾಗುತ್ತವೆ. ಆದ್ದರಿಂದ ಸಾವಿರಾರು ವರ್ಷಗಳ ಹಿಂದಿನ ನೈತಿಕತೆ ಇವತ್ತಿನ ಜರೂರತ್ತು ಆಗಿರಬೇಕಿಲ್ಲ. ಅದು ಬದಲಾಗಿರಬಹುದು, ಬದಲಾಗುತ್ತಿರುತ್ತದೆ. ಇದನ್ನು ಸರಳವಾಗಿ ಹೇಳುವುದಾದರೆ ಇಬ್ಬರು ಪರಸ್ಪರ ಒಪ್ಪಿಗೆಯ ಮೇಲೆ ನಡೆಸುವ ಲೈಂಗಿಕ ಕ್ರಿಯೆ ಅದು ಖಾಸಗಿಯಾಗಿದ್ದರೆ ಅದನ್ನು ಸಾಮಾಜಿಕವಾಗಿ ಪ್ರಶ್ನಿಸುವುದು ಸರಿಯಲ್ಲ. ನಿತ್ಯಾನಂದ ಸ್ವಾಮೀಜಿ ಯಾರ ಜೊತೆ ಎನನ್ನೂ ನಡೆಸಿದರೋ ಬಿಟ್ಟರೂ ಅದನ್ನು ಒಂದು ಮಿತಿಯನ್ನು ಮೀರಿ ಚರ್ಚಿಸಬೇಕಾದ ವಿಚಾರ ಎಂದೂ ನನಗೆ ಅನ್ನಿಸುತ್ತಿಲ್ಲ. ನನಗೆ ಅನ್ನಿಸುವ ಹಾಗೆ ನಮಗೆಲ್ಲ ಧರ್ಮ ಬೇಕಾಗಿಲ್ಲ, ಧಾರ್ಮಿಕತೆ ಬೇಕಾಗಿದೆ. ಈ ಧಾರ್ಮಿಕತೆ ಇಡೀ ಮಾನವ ಜನಾಂಗದ ಒಳಿತಿನ ಧರ್ಮ ಆಗಿರಬೇಕು. ಹಾಗೆ ಸೋಗಿನ ಧಾರ್ಮಿಕ ಮುಖಂಡರು ಮತ್ತು ಮಠಾಧಿಪತಿಗಳ ನಮಗೆ ಬೇಕಾಗಿಲ್ಲ. ಸಮಾಜದಲ್ಲಿ ಮಠಾಧಿಪತಿಗಳನ್ನು ಇಟ್ಟುಕೊಂಡು ಅವರ ಅಧರ್ಮವನ್ನು ನೋಡುವ ಕರ್ಮ ನಮಗೆ ಯಾಕೆ ?]]>

‍ಲೇಖಕರು G

11 June, 2012

26 Comments

  1. prasad raxidi

    ಶಶಿಧರ ಭಟ್ರೆ, ಕೆಲವು ದಿನದಿಂದ ನಮ್ಮ ಕೆಲವು ಟಿವಿ ಛಾನಲ್ಗಳು ನಿತ್ಯಾನಂದನ ವಿರುದ್ಧ (ಆತ ವಂಚಕ ಎನ್ನುವುದರಲ್ಲಿ ಎರಡು ಮಾತಿಲ್ಲ) ತಮಟೆ -ತುತ್ತೂರಿ ಊದುತ್ತಿರುವುದು ನೋಡಿ ಅನುಮಾನವಾಗುತ್ತಿತ್ತು. ನೀವು ಸರಿಯಾಗಿಯೇ ಹೇಳಿದ್ದೀರಿ.ನಿತ್ಯಾನಂದನ ವಿರುದ್ಧ ಚೀರಾಡುತ್ತಿರುವವರು,(ಸಿನಿಮಾದವರು ಸೇರಿದಂತೆ) ಅವರನ್ನು ಬೆಂಬಲಿಸದವರು ಕನ್ನಡಿಗರಲ್ಲ-ಮನುಷ್ಯರಲ್ಲ ಎಂದೆಲ್ಲ ತೆಗಳುತ್ತಿದ್ದಾರೆ. ಅವರೆಲ್ಲರಲ್ಲಿ- ಮುಖ್ಯವಾಗಿ ಮಾಧ್ಯಮದರಲ್ಲಿ ನನ್ನ ಮನವಿ ನಿತ್ಯಾನಂದ ಮಾತ್ರವಲ್ಲ ಕರ್ನಾಟಕದ ಎಲ್ಲ ಮಠ-ಪೀಠಾಧಿಪತಿಗಳು, ಸನ್ಯಾಸಿ-ಯತಿಗಳು,ಅತಿಮಾನವರು, ಎಂದುಕೊಳ್ಳುತ್ತಿರುವ ಎಲ್ಲರ ಬಗ್ಗೆಯೂ ತನಿಖೆ ನಡೆಸಿ ನಾವೆಲ್ಲ ನಿಮ್ಮ ಜೊತೆಗಿರುತ್ತೇವೆ ಹೋರಾಡೋಣ…

  2. shanthi k.a.

    ನಿಮ್ಮ ಲೇಖನ ನನ್ನ ಯೋಚನೆಯ ದಿಸೆಯನ್ನು ಬದಲಾಯಿಸಿತು..ನಾವು ಪೂರ್ವಾಗ್ರಹ ಪೀಡಿತರಾಗಿ ಯಾವುದೇ ವಿಚಾರಗಳನ್ನು ನೋಡುವಾಗುವ ಅದರೊಳಗಿನ ವಾಸ್ತವಾಂಶವನ್ನು ಗಮನಿಸುವುದರಲ್ಲಿ ಎಡವುತ್ತೇವೆ…..
    ಆ ನಿಟ್ಟಿನಲ್ಲಿ ನೀವು ನಿತ್ಯಾನಂದ ಪ್ರಕರಣವನ್ನು ಬೇರೊಂದು ಆಯಾಮದಿಂದ ಗಮನಿಸಿ ,ಪ್ರಸ್ತುತ ಸಮಾಜದಲ್ಲಿ ನಿಜಕ್ಕೂ ಆಗಬೇಕಾದ ಸುಧಾರಣೆಯತ್ತ ಬೆಳಕು ಚೆಲ್ಲಿದ್ದೀರಿ..

    Shaanu.

  3. ಅಶೋಕವರ್ಧನ ಜಿ.ಎನ್

    ಸರಿಯಾದ ಮಾತು. ನಿಮ್ಮನ್ನು ಅನುಮೋದಿಸುವವರಲ್ಲಿ ನಾನೂ ಒಬ್ಬ.

  4. ದಿನೇಶ್ ಕುಕ್ಕುಜಡ್ಕ

    ಸರ್,ಎದೆ ಗುದ್ದುವ ವಿಚಾರವೆಂದರೆ, ಈ ನಿತ್ಯಾನಂದನನ್ನು ‘ಓಡಿಸುವುದರ’ ಹಿನ್ನೆಲೆಯೊಳಗಿನ ಕೆಲವೊಂದು ಭೀಕರ ಸತ್ಯಗಳನ್ನು ಅರಗಿಸಿಕೊಳ್ಳಲು ಅಕ್ಷರಶಃ ತೊಳಲಾಡುತ್ತಿದ್ದೇನೆ ನಾನೀಗ! ಉಣ್ಣುವ ತುತ್ತು ತನ್ನ ಸೃಷ್ಟಿಮೂಲದತ್ತ ನೋಡಿ ಅಣಕಿಸಿದಂತಾಗುತ್ತಿದೆ! ಯಾವ ‘ಮೌಲ್ಯ’ ಸ್ವಸ್ಥ ಸಮಾಜದ- ಈ ಪ್ರಜಾತಂತ್ರದ ಉಳಿವಿಗೆ ಜೀವರಸದಂತೆ ಬಳಕೆಯಾಗಬೇಕಿತ್ತೋ,ಅದುವೇ ವಿಷವಾಗಿ; ಕೃತ್ರಿಮವಾದ ಹುಸಿನೀತಿಗಳನ್ನು ಸೃಷ್ಟಿಸಿ-ಸಮಾಜದ ಮೋರೆಗೊಡ್ಡಿ ಬಲವಂತವಾಗಿ ಒಪ್ಪಿಸಿಕೊಳ್ಳುವ ಈ ಹೀನ ಕಪಟಗಳಿಗೇನನ್ನೋಣ????

    • prasad raxidi

      ದಿನೇಶ್ ,ಉಳಿದವರಿಗೆ ಹೋಲಿಸಿದರೆ ದಡ್ಡ ವಂಚಕನಂತೆ ಕಾಣುವ ನಿತ್ಯಾನಂದನನ್ನು ಓಡಿಸಲು ನಡೆಯುತ್ತಿರುವ ಕೆಲಸದ ಹಿನ್ನೆಲೆ ಎಲ್ಲರಿಗೂ ಗೊತ್ತು, ಆದರೆ ಯಾರೂ ಸಾರ್ವಜನಿಕವಾಗಿ ಮಾತಾಡಲಾರರು, ಅದರ ಬಗ್ಗೆ ಅಧಿಕೃತವಾಗಿ ತಿಳಿದವರು ಹೆಚ್ಚಿನವರು ಗಾಜಿನ ಮನೆಯಲ್ಲಿದ್ದಾರೆ, ಇನ್ನು ಕೆಲವರಿಗೆ ಭಯ, ಉಳಿದ ನಮ್ಮಂತವರು,ಹೀಗೇ ಮೈಪರಚಿಕೊಳ್ಳುವ ಸ್ಥಿತಿಯಲ್ಲಿದ್ದೇವೆ… …ಮಜಾ ಪ್ರಭುತ್ವ..

  5. D.RAVI VARMA

    ನನಗೆ ಅನ್ನಿಸುವ ಹಾಗೆ ನಮಗೆಲ್ಲ ಧರ್ಮ ಬೇಕಾಗಿಲ್ಲ, ಧಾರ್ಮಿಕತೆ ಬೇಕಾಗಿದೆ. ಈ ಧಾರ್ಮಿಕತೆ ಇಡೀ ಮಾನವ ಜನಾಂಗದ ಒಳಿತಿನ ಧರ್ಮ ಆಗಿರಬೇಕು.
    ಹಾಗೆ ಸೋಗಿನ ಧಾರ್ಮಿಕ ಮುಖಂಡರು ಮತ್ತು ಮಠಾಧಿಪತಿಗಳ ನಮಗೆ ಬೇಕಾಗಿಲ್ಲ. ಸಮಾಜದಲ್ಲಿ ಮಠಾಧಿಪತಿಗಳನ್ನು ಇಟ್ಟುಕೊಂಡು ಅವರ ಅಧರ್ಮವನ್ನು ನೋಡುವ ಕರ್ಮ ನಮಗೆ ಯಾಕೆ ? idu appata satya . aadare bekkige ghante kattuvavaru yaaru ee namma mugda janarige tilisuvavaru yaaru ನನಗೆ ಮತ್ತೆ ದಾಸರ ಹಾಡು ನೆನಪು ಬರ್ತಿದೆ” ನಗೆಯು ಬರುತಿದೆ, ನನಗೆ ನಗೆಯು ಬರುತಿದೆ, ಜಗದೊಳಿರುವ ಜಾಣರೆಲ್ಲ ಹಗರಣ ಮಾಡೊದ ಕಂಡು ನಗೆಯು ಬರಿತಿದೆ, ನನಗೆ ನಗೆಯು ಬರುತಿದೆ ”
    ರವಿ ವರ್ಮ ಹೊಸಪೇಟೆ

  6. prakash hegde

    ಶಶಿಧರ್ ಭಟ್ರೇ ಹೀಗೆ…
    ಸಿಕ್ಕಾಪಟ್ಟೆ ನೇರ…

  7. ಈಶ್ವರ ಕಿರಣ

    ಗಂಭೀರ ಚಿಂತನೆಯ ವಿಚಾರ. ಒಳ್ಳೆಯ ಲೇಖನ .

  8. Pramod ambekar

    Sir,
    Namage Mathadipathigalu beku snatanavada EE dhrmacharane bharat smaskritige vaggide adare, nityanandnathaha dhramadhipatigalu beda,
    Sanatanavagi yavanu yavdae dhrma jatiyalli janisali avan hiriyaru hakikotta ondu dharma idde ide,
    BhagwatGeetadalli helidant, yavane obba vyakti janisali avanige avan tande tayi, avan dharma avande aad padhati idde ide adannu tannshtakke tanu palisadare skau namage hechhina dhram gurugalu beda
    Ambekar Pramod

  9. M.Ramesh

    ನಿತ್ಯಾನಂದರ ಬಗ್ಗೆ ನಿಮ್ಮ ಅಭಿಪ್ರಾಯವನ್ನು ನಾನೂ ಅನುಮೋದಿಸುತ್ತೇನೆ. ಈ ವಿಚಾರದಲ್ಲಿ ನಾವೆಲ್ಲಾ ವಸ್ತುನಿಷ್ಟರಾಗಿ ಯೋಚನೆ ಮಾಡಬೇಕು. ನಿತ್ಯಾನಂದ ಮಾತ್ರವಲ್ಲ ಎಲ್ಲಾ ಸ್ವಾಮಿಗಳ ಬಗ್ಗೆಯೂ ವಿಚಾರಣೆ ನಡೆಸಿದರೆ ಇದಕ್ಕಿಂಥ ರೋಚಕ ವಿಷಯಗಳು ಬೆಳಕಿಗೆ ಬರಬಹುದು. ಆದರೆ ಬೆಕ್ಕಿನ ಕೊರಳಿಗೆ ಘಂಟೆ ಕಟ್ಟುವವರು ಯಾರು? ನಮ್ಮ ಸರಕಾರವೇ ಇಂಥ ಸ್ವಾಮಿಗಳ ಪಾದಪೂಜೆ ಮಾಡುತ್ತಿರುವಾಗ ಮತ್ತು ಈ ಸ್ವಾಮಿಗಳು ಸ್ವತಹ ರಾಜಕೀಯದಲ್ಲಿ ಹಸ್ತಕ್ಷೇಪ ಮಾಡುತ್ತಿರುವಾಗ ಇದು ಸಾಧ್ಯವೇ?

  10. Subhashini

    ಇಂತಹ ನಿರ್ಭೀತ ಲೇಖನಗಳೇ ಇವತ್ತಿನ ಸಂದರ್ಭದಲ್ಲಿ ಬೇಕಾಗಿರುವುದು…

  11. Keshava Prakash

    I am not accepting your idea. India and Hindu culture is different in many aspects from other civilisation and culture. Whether Mattadhipathis or so called religious leaders may be right or wrong. You please go through our heritage. For example the instances quoted in Ramayana or Mahabharatha, Sita case or Draupadi case, which will reveal what is the position of ladies in good old days. Hence in my opinion it is not a new thing. It is inherited in the so called “PRAKRUTHI” or “NISARGA”. Hence it is a going concern till this “Bhootai” exists.
    However please remember the words of Shrikrishna “Yogaha Karmasu Kaushalam”. It is not easy to live in this word from time to time withought any circus. We are part of it. Live with respect and one day abandon this “Bhouthika Sharira”. That is all.

  12. Ramachandra Bhat

    ಶಶಿಧರಣ್ಣ, ನೀವು ಹೇಳುವ ಎಲ್ಲ ವಿಚಾರಗಳೂ ಸ್ವಾನುಭವಜನ್ಯವಾದವುಗಳಾದ್ದರಿಂದ ಪ್ರಶ್ನೆಗೆ ಅವಕಾಶವೇ ಇಲ್ಲ. ಆದರೂ ನನ್ನ ಒಂದೆರಡು ಪ್ರಶ್ನೆ ಅಲ್ಲ ಅನಿಸಿಕೆಗಳನ್ನೂ ಹಾಗೇ ನಿಮ್ಮ ವಿಚಾರಕ್ಕೆ ಪುಷ್ಟಿ ನೀಡಬಹುದಾದ ವಿಚಾರಗಳನ್ನೂ ಇಲ್ಲಿ ಸಾದರ ಪಡಿಸ ಬಯಸುತ್ತೇನೆ.
    ” ಪಾಪ ಮಾಡದವನಿಗೆ ಪ್ರಾಯಶ್ಚಿತ್ತದ ಅವಶ್ಯಕತೆಯಿಲ್ಲ” ಎಂಬ ತತ್ವದವನು ನಾನೂ ಕೂಡಾ. ತಾವು ಹೇಳಿದಿರಿ, ಯಾವುದೇ ಮಠಮಾನ್ಯಗಳ ಸಾಧು ಸಂತರೆನಿಸಿಕೊಂಡವರ ಬಗ್ಗೆ ನಿಮ್ಮ ಅಭಿಪ್ರಾಯ ಅಷ್ಟಕ್ಕಷ್ಟೇ ಎಂದು ಆದರೂ ರಾಮಕೃಷ್ಣ, ಓಶೋ ಇತ್ಯಾದಿ ಕೆಲ ವ್ಯಕ್ತಿಗಳ ಚಿಂತನೆಯನ್ನು ಓದಿ ಅನುಸರಿಸಿದ್ದೇನೆ ಎಂದಿರಿ ಇದು ನನಗ್ಯಾಕೋ ಸಮಂಜಸವೆನಿಸಲಿಲ್ಲ.ಇನ್ನೊಂದು, ನೀವು ತಿಳಿಸಿದಂತೆ ಈ ಮಹಾಮಹಿಮರು ಸಂತರು ಎಂಬವರು ಯಾವುದೋ ಲೋಕದಿಂದ ಇಳಿದು ಬಂದವರಲ್ಲ, ನಮ್ಮಂತೆ ಅವರೂ ಕೂಡಾ ರಾಗದ್ವೇಷಗಳಿಗೆ ಒಳಗಾಗಬಲ್ಲವರು ಎಂದು . ಹೌದು ಖಂಡಿತವಾಗಿ ನಿಮ್ಮ ಮಾತು ಸತ್ಯವೇ, ಆದರೂ ಈ ದೇವರು, ದೇವಾಲಯ, ಸನ್ಯಾಸಿಗಳು ಮಹಿಮರು ಎಂದು ಕಾಣಿಸಿಕೊಳ್ಳುವುದು ನಮ್ಮವರ ಹತಾಶ ಭಾವದ ಅಭಿವ್ಯಕ್ತಿಯಿಂದಾಗಿ ಮತ್ತೂ ಯೆಲ್ಲರಲ್ಲಿಯೂ ಪರಮಾತ್ಮನಿದ್ದಾನೆ ಎಂದು ಒಪ್ಪಿಕೊಂಡ ಮತಾನುಯಾಯಿಗಳಾದ ನಾವೇ ಇಂದು ಹಲವು ದೇವರುಗಳನ್ನು ಸೃಷ್ಟಿಸಿಕೊಂದು ಹಲುಬುತ್ತಿದ್ದೇವೆ. ಆದರೂ ನನಗೊಂದು ತಾತ್ವಿಕವಾದ ವಿಚಾರ ಹೊಳೆಯುತ್ತಿದೆ. ಅದೇನೆಂದರೆ, ‘ ಯೆಲ್ಲಾ ಕಡೆಯಲ್ಲೂ ದೇವರಿದ್ದಾನೆ ಎಂದು ಒಪ್ಪಿಕೊಂಡ ನಾವು ಈ ದೇವಸ್ಥಾನ-ಗುಡಿ ಎಂದು ದೇವರನ್ನು ಕೂಡಿ ಹಾಕಿದ್ದು ಏಕೆ? ಎಂಬ ಮಾತು ಬಂದಾಗ ಈ ವಿಚಾರ ಯೆಲ್ಲೋ ಓದಿ ತಿಳಿದದ್ದು ಅರಿವಿನ ತೀರಕ್ಕೆ ಬಂದಿದ್ದು ಅದೆಂದರೆ ಈ ‘ಗಾಳಿ’ ಎಲ್ಲಾ ಕಡೆಯಲ್ಲೂ ಇದ್ದರೂ ನಮ್ಮ ಸೈಕಲ್ಲಿನ ಟ್ಯೂಬಿಗೆ ವಿಶೇಷವಾಗಿ ಆ ಗಾಳಿಯನ್ನು ಪಂಪು ಮಾಡಿ ಚಕ್ರ ತಿರುಗುವಂತೆ ಮಾಡುತ್ತೇವೆ ಇದು ಯಾಕಾಗಿ ಎಂದರೆ ಗಾಳಿಯ ಒತ್ತಡಕ್ಕೆ ಬೇಕಾಗಿ, ಅಂತೆಯೇ ದೇವರೂ ಕೂಡಾ, ಅವನ ಶಕ್ತಿಯ ಏಕೀಭಾವಕ್ಕಾಗಿ ದೇವಾಲಯಗಳು ಎಂಬುದು.
    ಇನ್ನು ಈ ಕಾವಿ, ಖಾಕೀ, ಖಾದಿ ಇವು ಮನುಷ್ಯನಾಗಿ ಬದುಕಲು ಯೋಗ್ಯತೆಯಿಲ್ಲದವರ ಒಕ್ಕೂಟ ಎಂದೇ ನನ್ನ ನಂಬಿಕೆ. ಕೇವಲ ನಿತ್ಯಾನಂದ ಒಬ್ಬನಲ್ಲ, ನಮ್ಮ ಕರ್ನಾಟಕದಲ್ಲಿ ಇರುವ್ ಬಹುತೇಕ ಪೀಠಾಧಿಪತಿಗಳು, ಬಾಬಾಗಳು, ಕೊನೆಗೆ ಈ ದೇವಸ್ಥಾನದ ಅರ್ಚಕರು ಎನಿಸಿಕೊಂಡವರ ಮೇಲೂ ಅನುಮಾನವಿದೆ, ನಾವು ದೊಡ್ಡ ಮಟ್ಟದ ಸ್ವಾಮೀಜಿ ಬಾಬಾಗಳನ್ನು ಮಾತ್ರ ಗಣನೆಗೆ ತೆಗೆದುಕೊಳ್ಳುತ್ತಿದ್ದೇವೆ ಅದಲ್ಲದೇ ಈ ಊರೂರುಗಳಲ್ಲಿ ಬೂದಿ, ತೀರ್ಥ ಹಾಳೆ ಮಣ್ಣು ಮಂತ್ರಿಸಿ ಕೊಡುವ ವ್ಯಕ್ತಿಗಳು ಇವರಿಗಿಂತ ಭಿನ್ನರೇನಲ್ಲ. ನಮ್ಮ ಊರಿನ ಸಮೀಪವೂ ಓರ್ವ ಇಂತಹುದೇ ವ್ಯ್ಕ್ತಿ ಒಂದು ದೇವಾಲಯದಲ್ಲಿ ತಳವೂರಿದ್ದು ಅವನ ಮಹಿಮೆ ಹಲವರ ನಿದ್ದೆಗೆಡಿಸುತ್ತಿದೆ. ಕೇವಲ ದೇವಾಲಯವಿದ್ದಿದ್ದು ಈಗ ಅಕ್ಕ ಪಕ್ಕ ರೆಸಾರ್ಟುಗಳು ಲಾಡ್ಜುಗಳಿಗೆ ಬದಾಗುತ್ತಿದೆ ದೇವರು ನಾನೇ ಎಂದುಕೊಳ್ಳುತ್ತಿದ್ದಾನೆ.
    ಇದನ್ನೆಲ್ಲಾ ನೋಡಿದಾಗ ನನ್ನ ಮನದಲ್ಲಿ ಒಂದು ಪ್ರಶ್ನೆ ಏಳುತ್ತಿದೆ ಶಶಿಧರಣ್ಣ, ಈ ಕಲಿತವರ ಹಣೆಬರವೇ ಹೀಂಗಾ? ಅಥವಾ ಕಲಿತದ್ದು ಬದನೇಕಾಯಿಯಾ? ಉತ್ತಮ ಮೌಲ್ಯಗಳು ಇವರ ಕಲಿಕೆಯಲ್ಲಿ ಇರಲಿಲ್ಲವಾ? ಅಥವಾ ನಮ್ಮ ಈ ಜನಗಳು ಇಷ್ಟೊಂದು ಪಾಪ ಮಾಡಿದ್ದಾರಾ? ತೊಳಕ್ಕೊಳ್ಳೋದಕ್ಕೆ..!

  13. sham

    ellaa swamigalu kettavaralla kelavaru samajakke poorakavaagi kelasa maadutthaare innu ardhadastu swamigalu baree dhandapindagalu illi hesru helalla.ee nithyaanandana thraha iro kaamukaindaagi kelave beralenikeya olle swamygaligu ketta hesru kododu nanna mattige sarikaanolla…………………

  14. ರವಿ ಮುರ್ನಾಡು, ಕ್ಯಾಮರೂನ್

    ನಮ್ಮ ಭಾರತೀಯ ಸಮಾಜದಲ್ಲಿ ದೈವತ್ವದ ಮೌಡೈತೆ ಮತ್ತು ಭಕ್ತಿ ಅನ್ನುವ ದೌರ್ಬಲ್ಯಕ್ಕೆ ಇದಕ್ಕಿಂತ ದೊಡ್ಡ ದಾಖಲೆ ಇನ್ನೊಂದಿಲ್ಲ.
    ಒಂದು ಆಶ್ಚರ್ಯದ ಸಂಗತಿಯೆಂದರೆ ಈ ನಿತ್ಯಾನಂದನ ಅ೦ಗರಕ್ಷರೆಲ್ಲಾ ದೌರ್ಬಲ್ಯಕ್ಕೆ ಮೊದಲ ಸ್ಥಾನದಲ್ಲಿ ನಿಲ್ಲುವ ಹೆಂಗಸರೇ ಏಕಾದರು ಅಂತ.
    ಇನ್ನೊಂದು ಕುತೂಹಲದ ವಿಚಾರವೆಂದರೆ ಬೆಂಗಳೂರಿನಲ್ಲಿ ಈ ಇಂಗ್ಲೀಷ್ ಮತ್ತು ತಮಿಳು ಸ್ವಾಮಿನಿಯರು ಕನ್ನಡಿಗರಗೇ ಇಂಗ್ಲೀಷ್ ಮತ್ತು ತಮಿಳಿನಲ್ಲಿ ವಾಚಾಮಗೋಚರ ಮಂತ್ರ ಪ್ರೋಕ್ಷಣೆ ಮಾಡಿದ್ದು.
    ಗಂಡನೊಂದಿಗೆ ಬಾಳುವೆ ನಡೆಸಲು ಕಲಿಯದ ವಿಚಾರವಂತ ಹೆಂಗಸೊಬ್ಬಳು ಹೇಳಿಕೆ ನೀಡಿ ,ಈ ಯಾವ “ದೇವರ ಕ್ವಾಲಿಫಿಕೇಶನ್” ಪಡೆಯದ ನಿತ್ಯಾನಂದ ಐದು ವರ್ಷಗಳ ಕಾಲ ಅತ್ಯಾಚಾರ ಮಾಡಿದ ಅಂದರೆ ಜನರನ್ನು ಎಷ್ಟೊಂದು ಮರಳು ಮಾಡುವ ಮಾತು.ಇದು ಈ ಅರೆಬೆತ್ತಲೆ ಫ್ಯಾಶನ್ ಷೋ ಕಾಲದಲ್ಲಿ ಹೌದು ಎನ್ನಲು ಸಾಧ್ಯವಾ? .
    ಶಶಿಧರ ಭಟ್ರೇ , ನೀವು ಲೇಖನದಲ್ಲಿ ಕೆಲವು ಕಡೆ ರವಿಶಂಕರ ಸ್ವಾಮಿ, ನಿತ್ಯಾನಂದ ಸ್ವಾಮೀಜಿ ಅಂತ ಗೌರವ ಸಂಭೋಧನೆ ಮಾಡಿದ್ದೀರಿ.
    ಯಾವ ತಪಸ್ಸನ್ನು ಮಾಡಿ ಇವರು ದೈವತ್ವನ್ನು ಸಾಧಿಸಿ ದೇವರಾದರು? ಇವತ್ತು ಅಯ್ಯಪ್ಪ ಸ್ವಾಮಿ ಇದ್ದಾರೆ , ಪಳನಿ ಸ್ವಾಮಿ ಇದ್ದಾರೆ, ಈಶ್ವರ ಸ್ವಾಮಿ, ಹಲವು ಸ್ವಾಮಿಗಳು ದೇಗುಲ ಗುಡಿಯಲ್ಲಿ, ಮಂದಿರದಲ್ಲಿ ಮನೆಯಲ್ಲಿ ಮೂರ್ತಿಗಳಾಗಿ , ಭಾವಚಿತ್ರಗಳಾಗಿ ಕುಳಿತಿದ್ದಾರೆ.
    ಹಣವಿದ್ದರೆ ಹಳ್ಳಿಯಲ್ಲಿರುವ ಮೂರು ನಾಮ ಎಳೆದುಕೊಂಡ ಕುಂಕುಮದ ವ್ಯಕ್ತಿ ಅಮೆರಿಕಾದಲ್ಲಿ ಚಾರಿಟಿ ತೆರೆದು ಶ್ರೀ ಶ್ರೀ ಅನ್ನುವ ಸಾವಿರ ಶ್ರೀಗಳ ನಂತರ ಸ್ವಾಮೀಜಿ ಅನ್ನುವ ಬಿರುದು ಪಡೆದುಕೊಳ್ಳಬಹುದು. ಅದಕ್ಕೆ ಹತ್ತಾರು ಸಂಘಗಳು ಪಾದ ಪೂಜೆ ಮಾಡಬಹುದು. ಅಲ್ಲಿ ಒಂದಷ್ಟು ಹೆಂಗಳೆಯರು ಸುಗಂಧ ದ್ರವ್ಯ ಬಳಿದು ಆ ಸ್ವಾಮಿಯ ಸುತ್ತ ಸುಲಿದಾಡಬಹುದು.ಅದೊಂದು ತರದ ಜಾಹೀರಾತಿನಂತೆ. ಬಂದ “ಭಕ್ತರೆಂಬ ದೇವರ ಸುಳ್ಳರಿಗೆ” ಒ೦ದಷ್ಟು ಕಣ್ಣಿಗೆ ಹಬ್ಬವನ್ನು ನಡೆಸಬಹುದು.ರಾಜಕೀಯ ಪಕ್ಷಗಳು, ಅತಿರಥ ಮಹಾರಥರು ಅಲ್ಲಿಗೆ ಭೇಟಿಯಾಗಬಹುದು. ನಂತರ ನಡೆಯುವುದು ಗೊತ್ತೇ ಇದೆ. ಅದು ಈ ನಿತ್ಯಾನಂದನಲ್ಲಿ ನಡೆಯುತ್ತಿತ್ತು ಅಂದರೆ ನಂಬಲು ಸಾಕಷ್ಟು ಕಥೆಗಳು ಈಗಷ್ಟೆ ಹುಟ್ಟಿ ಕೊಳ್ಳಬಹುದು.
    ಈ ಆಗಿರುವ ಅವಮಾನವೆ೦ದರೆ, ಭಾರತೀಯ ಧಾರ್ಮಿಕ ಸಂಸ್ಕೃತಿಯಲ್ಲಿ ನಿಜವಾದ ಸ್ವಾಮೀಜಿಗಳು, ಮತ್ತು ಋಷಿ ಮುನಿಗಳಿಗೆ. ಇತಿಹಾಸದ ಮತ್ತಷ್ಟು ಅಧ್ಯಾಯನ ಪ್ರಾರಂಭವಾಗುವುದು. ಮನುಷ್ಯನ ಹಲವು ದೌರ್ಬಲ್ಯಗಳಲ್ಲಿ ಈ ಭಕ್ತಿ ಅನ್ನುವ ದೌರ್ಬಲ್ಯದ ವ್ಯಾಪಾರೀಕರಣದ ಚಿಂತನೆ ತುಂಬಾ ಚೆನ್ನಾಗಿದೆ. ಸ್ವಾಮೀಜಿ ಆಗಲು ವಿಶ್ವವಿದ್ಯಾನಿಲಯ ಮಟ್ಟದಲ್ಲಿ ” ಡಿಪ್ಲೊಮಾ ಕೋರ್ಸು ” ಆರಂಭಿಸಬಹುದು.
    ” ಕಾಲಾಯ ತಸ್ಮಹೇ ನಮಃ”

  15. prakash shetty

    ಕತ್ತೆಗಳನ್ನು ಆರಾಧಿಸುವವರನ್ನು ತಡೆಯುವುದು ಸಾಧ್ಯವೇ ಭಟ್ರೇ? ಇದ್ದಕ್ಕಿದ್ದಂತೆ ಕಾರುಗಳ ಸನ್ ಗ್ಲಾಸ್ ಸ್ಕ್ರೀನ್ ಗಳನ್ನು ತೆಗೆದು ಹಾಕಿ ಎಂದು ಸರಕಾರ ಆಜ್ನೆ ಹೊರಡಿಸಿದ್ದಂತಿದ್ದರೆ ಎಷ್ಟು ಚೆನ್ನಗಿತ್ತು ಅಲ್ಲವೆ?

  16. shama, nandibetta

    ಒಳ್ಳೆಯ ಲೇಖನ… ಅದ್ಭುತ ಒಳನೋಟ…

  17. asha

    Mr.Bhat,
    You are completely missing the point here. Osho was a great thinker and even though he elevated sex to a higher level to achieve samadhi (super consciousness..Read his book from sex to super consciousness) he never himself indulged in sex with his disciples. On the other hand this charlatan self styled Paramahamsa Nithyananda Swami has been caught on camera having sex with a ex-filmstar. Just hear the discourse by this crook nithyananda and you can realize he knows nothing about spirituality/or hindu dharma. The proof is his “Panchaagni” homa that he conducted after he was released from Jail last time. He is one and only sanyasi to use kerosene to perform a homa in the history of hindu rituals…so dont go overboard defending this crook.

    • D.RAVI VARMA

      ಹೌದು ಓಶೋ ಒಬ್ಬ ದೊಡ್ಡ ದಾರ್ಶನಿಕ, ತತ್ವಜ್ಞಾನಿ, ಅವರ ಎಂದು ತನ್ನನ್ನು ತಾನು ಗುರು ಎಂದು ಕರೆದುಕೊಲ್ಲಲಿಲ್ಲ, ಆದರೆ ಅವರ ಚಿಂತನೆ, ತತ್ವ ಕ್ಕೆ ಅವರ ಅನುಯಾಯಿಗಳು ಹಿಂದೆ ಬಿದ್ದಿದ್ದುಂಟು ,ಅವರ ಪುಸ್ತಿಕೆಗಳಲ್ಲಿ ಅವಾರ ಆಲೋಚನಾ ಕ್ರಮ, ಬದುಕಿದ ರೀತಿ ,ಎಲ್ಲವು ತಿಳಿಯುತ್ತದೆ ,ನನ್ನು ಅತಿಯಾಗಿ ಕಾಡಿದ ಪುಸ್ತಿಕೆ “ಸಂಭೋಗದಿಂದ ಸಮಾಧಿಯೆಡೆಗೆ ” ನಿಜಕ್ಕೂ ಒಂದು ಹೊಸ ಅದ್ಬುತಕ್ಕೆ ನನ್ನನ್ನು ಕೊದ್ಯ್ದಿತ್ತು . ಇಂದು ಅವರಿಲ್ಲ, ಆದರೆ ಅವರ ವಿಚಾರಧಾರೆ , ಅವರು ಶಿಸ್ಯನ್ದಿರು ನಡೆಸುತ್ತಿರುವ ಯೋಗ ಶಿಬಿರಗಳು , ಚಿಂತನೆಗಳು ಜೀವಂತವಾಗಿವೆ
      ರವಿ ವರ್ಮ ಹೊಸಪೇಟೆ

  18. Balu

    ಭಟ್ರೇ, ನಿಮ್ಮ ಲೇಖನದ ಒಟ್ಟಾರೆ ಆಶಯವನ್ನು ಒಪ್ಪಬಹುದಾದರೂ ಕೆಲವು ವಿಚಾರಗಳು ಸ್ವಲ್ಪ ಗೊಜಲಾಗಿವೆ ಹಾಗು ಕೆಲವು ನಾಪತ್ತೆ ಆಗಿದೆ.
    “ಅತ್ಯಾಚಾರ ಎನ್ನುವುದು ಐದು ವರ್ಷಗಳ ಕಾಲ ನಡೆದರೆ ಅದು ಅತ್ಯಾಚಾರ ಹೇಗಾಗುತ್ತದೆ ?” ಒಬ್ಬ ಮಹಿಳೆಗೆ ಇಲ್ಲ ಸಲ್ಲದ ನೆಪ ಕೊಟ್ಟು, ಲೈ0ಗಿಕವಾಗಿ ಬಳಸಿ ಕೊಂಡು ಕೊನೆಗೆ ನಾನು ಕೊಟ್ಟ ಕಾರಣ ಎಲ್ಲ ಸುಳ್ಳು ಎಂದರೆ ಅದು… ಅತ್ಯಾಚಾರಕ್ಕೆ ಸಮ ಅಲ್ಲವೇ?
    ಇರಲಿ ಬಿಡಿ, ಇಲ್ಲಿ ನಿತ್ಯಾನಂದನ ವಿರುದ್ದ ನಡೆಯುತ್ತಿರುವ ಗಲಾಟೆ ಗೆ ಮುಖ್ಯ ಕಾರಣ, ಆತನಿಗೆ ಜಾತಿ ಬೆಂಬಲ ವಿಲ್ಲದೆ ಇರುವುದು ಎಂಬ ವಾದ ಒಪ್ಪಲು ಸಾದ್ಯ ಇಲ್ಲ. ಯಾಕೆಂದರೆ ನಮ್ಮಲ್ಲಿ ದೇವ ಮಾನವ ಆಗಲಿಕ್ಕೆ ಜಾತಿ ಅಗತ್ಯ ಇಲ್ಲ. ಯೋಗ, ನೆಮ್ಮದಿ, ಸುದರ್ಶನ ಚಕ್ರ, ಬೂ ಚಕ್ರ ಎಂದೆಲ್ಲ ಹೇಳಿ, ಜನರನ್ನ ನಂಬಿಸುವ ಕಲೆ ಗೊತ್ತಿದ್ದರೆ ಸಾಕು. ಮಹೇಶ್ ಯೋಗಿ, ರವಿ ಶಂಕರ್.. ಅಷ್ಟೇಕೆ ಸಾಯಿ ಬಾಬ ಗೆ ಕೂಡ ಯಾವುದೇ ಜಾತಿ ಯಾ ಸಂಬಂದ ಇರಲಿಲ್ಲ. ಇದ್ದಿದ್ದು ಬರಿ ದುಡ್ಡಿ ನೊಂದಿಗೆ ನಂಟು ಮಾತ್ರ. ಇದು ಕೇವಲ ಹಿಂದೂ ದರ್ಮಕ್ಕೆ ಸೀಮಿತ ಅಲ್ಲ. ಕ್ಷಣಾರ್ದದಲ್ಲಿ ಕೇವಲ ಕೈ ಇಂದ ಆಪರೇಷನ್ ಮಾಡೋ ಬಾಬಾ ಇದ್ದರೆ, ಕೆಲವು ವರ್ಷ ಗಳ ಹಿಂದೆ ಆದ್ಯರೋ ಬೆನ್ನಿ ಹಿನ್ ಬಂದಿದ್ದ!
    ಮಠ / ಆಶ್ರಮ ಅನ್ನುವುದೇ ಬಹುತೇಕ ಕಡೆ ಧಾರ್ಮಿಕ ಮುಖ ವಾಡ ಹೊಂದಿರುವ ಭೂ ಮಾಫಿಯ ಅಲ್ಲವ? ಈ ನಿತ್ಯಾನಂದ ಆ ಆಶ್ರಮ ದ ಜಾಗವನ್ನ ಕೊಂಡು ಕೊಂಡಿದ್ದನ? ಉತ್ತರ ಮಾತ್ರ ಇಲ್ಲ ಅನ್ನುವುದು ಅಷ್ಟೇ.
    ನಿತ್ಯಾನಂದ, ರಜನೀಶ ನ ಹಾಗೆ ಸೆಕ್ಸ್ ನಿಂದ ಮುಕ್ತಿ ಕೊಡಿಸುವೆ ಎಂದು ಹೇಳಿದ್ದರೆ ಖಂಡಿತ ಸಮಸ್ಯೆ ಆಗುತ್ತಿರಲಿಲ್ಲ. ಇಷ್ಟ ಇದ್ದವರು ಹೋಗುತ್ತಿದ್ದರು!
    ಎಲ್ಲರೂ ಕಳ್ಳರೇ , ನಿತ್ಯಾನಂದ ನನ್ನ ಮಾತ್ರ ಯಾಕೆ ಕೋರ್ಟ್ ಗೆ ತರುವಿರಿ ಎಂದು ಪ್ರಶ್ನಿಸಿದ್ದೇ ಆದಲ್ಲಿ, ಎಲ್ಲ ಮುಖ್ಯ ಮಂತ್ರಿ ಗಳು ಬ್ರಷ್ಟಾಚಾರ ಮಾಡಿದ್ದಾರೆ! ಕೇವಲ ಯೆಡಿಯೂರಪ್ಪ ಗೆ ಮಾತ್ರ ಯಾಕೆ ಶಿಕ್ಷೆ ಎಂದು ಪ್ರಶ್ನಿಸಿದಷ್ಟು ಅಸಹ್ಯ ಅಲ್ಲವೇ?
    ಎಲ್ಲಕ್ಕೂ ಮಿಗಿಲಾಗಿ ನಿತ್ಯಾನಂದ ನ ಅಕ್ರಮ ಬಯಲಿಗೆ ಎಳೆಯುವ ಜರೂರತ್ತು ನಮ್ಮ ಕನ್ನಡ ಮಾದ್ಯಮಗಳಿಗೆ ಇತ್ತು. ಒಂದು ದೊಡ್ಡ ಬ್ರೇಕಿಂಗ್ ನ್ಯೂಸ್ ಬೇಕಿತ್ತು. ಕೆಲವು ಸಂಘಟನೆ ಗಳಿಗೆ ತಮ್ಮ ಅಸ್ತಿತ್ವವನ್ನು ಸಾಬೀತು ಮಾಡಬೇಕಿತ್ತು. ಆ ಸಮಯಕ್ಕೆ ನಿತ್ಯ ಸಿಕ್ಕ ಅಷ್ಟೇ.
    ಆದದ್ದೆಲ್ಲಾ ಒಳ್ಳೇದಕ್ಕೆ, ಜನ ಇನ್ನೂ ಮುಂದೆ ಈ ರೀತಿಯ ವಂಚನೆಗೆ ಒಳಗಾಗೊದು ನಿಂತರೆ, ಕಡಿಮೆ ಆದರೆ ಸಮಾಜಕ್ಕೆ ಲಾಭ.

    • prasad raxidi

      ನಮ್ಮಂತವರ ತಕರಾರಿರುವುದು, ನಿತ್ಯಾಂದನನ್ನು ಬಯಲಿಗೆಳೆಯುತ್ತಿರುವದರ ಬಗ್ಗೆ ಖಂಡಿತಾ ಅಲ್ಲ, ಆತ ಎಂದೋ ಜೈಲು ಸೇರಬೇಕಾದವನು, ಆದರೆ ಪ್ರಜಾಪ್ರಭುತ್ವ ಕಾವಲು ನಾಯಿಗಳಾಗಬೇಕಾಗಿರುವ ಮಾಧ್ಯಮಗಳು ನಿತ್ಯಾನಂದನ ಹಗರಣವನ್ನು ಬಳಸಿಕೊಳ್ಳುತ್ತಿರುವ ರೀತಿ ಅದರ ಹಿಂದಿರುವ ಭಯಾನಕ ಸತ್ಯಗಳ ಬಗ್ಗೆ,- ನೂರಾರು ನಿತ್ಯಾನಂದರು ಇದ್ದರೂ ಮಾಧ್ಯಮಗಳು ಜನಪರವಾಗಿದ್ದರೆ ಎದುರಿಸಬಹುದು, (1976 ತುರ್ತುಪರಿಸ್ಥಿತಿಯನ್ನೇ ಎದುರಿದ ಖ್ಯಾತಿ ಭಾರತೀಯ ಮಾಧ್ಯಮಕ್ಕಿದೆ)ಆದರೆ ಇಂದಿನ ಸಂದರ್ಭವೇ ಬೇರೇಯಾಗಿದೆ, ಬೇರೆ ವಂಚಕರಿಗಿಂತ ನಿತ್ಯಾನಂದ ಸ್ವಲ್ಪ ದಡ್ಡನಿರಬಹುದು, ಮಾಧ್ಮಮದವರು ತಾವು ಬುದ್ದಿವಂತರೆಂದುಕೊಂಡಿದ್ದಾರೆ, ಆದರೆ ಜನರಿಗೆ ಈ ಹಗರಣದ ಹಿಂದಿನ ಹಲವು ಸತ್ಯಗಳು ತಿಳಿದಿದೆ…

  19. ankam

    I really glad to appreciate your views on Nityananda Swamigi.I too dont believe in gods and Matadhipatis. They are the main reason to divide the society in the name of castism. Then comes political leaders. Really I wondered when I saw the interview of the lady in some kannada channel she ought to go to police wrather than the media because she was talking about two years old case which was alredy filed in the court. She might have provided some evidences to the police. There should be a through investigation why she she has kept quite such a long time after filing the case against the Nityanda Swami. Why media gave so much time and energy to this issue while other issues like state and national has sidelined.Is there is any conspiracy behind these things as you have said?

  20. GURURAJ

    GOOD AND TIMELY ARTICLE,WE NEED THIS KIND OF REAL AND THINKING ARTICLES MORE .THANK YOU BHATRE,

  21. ambarish

    ನಿತ್ಯನಂದನ ಪ್ರಕರಣವನ್ನು ಹಲವಾರು ಆಯಾಮಗಳಲ್ಲಿ ಅವಲೋಕಿಸುವುದು ಅವಶ್ಯವಿದೆ. ಆದರೆ ಶಶಿಧರ ಭಟ್ಟರು ಹೇಳಿದಂತೆ ಜಾತಿ ಬೆಂಬಲ ಇಲ್ಲದ ಕಾರಣ ಅಂತಾಗಲಿ,ಅವನು ಹಿಂದುಳಿದ ಜಾತಿಗೆ ಸೇರಿದವನು ಅಂತಾಗಲಿ ಈ ಪಡಿಪಾಟಿಲಿಗೆ ಸಿಲುಕಿದ್ದಾನೆ ಅನ್ನುವುದು ನಂಬಲು ಆಗುವುದಿಲ್ಲ.
    ಇನ್ನು
    ೧.ಐದು ಆರು ವರ್ಷದಿಂದ ಅತ್ಯಾಚಾರ ಮಾಡಿಸಿಕೊಂಡ ಆರತಿ ಇಷ್ಟು ದಿನ ಎಲ್ಲಿದ್ದರು ..?
    ೨. ನಿತ್ಯಾನಿಂದ ಶೋಷಣೆಗೆ ಒಳಗಾದ ಅಸಂಖ್ಯಾತರು ಯಾಕೆ ಇಲ್ಲಿವರೆಗೂ ಸುಮ್ಮನಿದ್ದರು..?
    ೩. ಒಂದು ಮಾಧ್ಯಮದ ಪ್ರತಿನಿಧಿ ಕಾನೂನಿ ಸಂಬಂಧಿ ಸಮನ್ಸ್ ನೀಡಲು ಅಧಿಕಾರ ಹೊಂದಿರುವರೆ..?
    ೪. ಎಲ್ಲೇ ಏನೇ ಕಾನೂನಿ ಬಾಹಿರ ಚಟುವಟಿಕೆ ನಡೆದರೂ ಅಲ್ಲಿ ವಿಚಾರಣೆ,ತನಿಖೆ ನಡೆಸವ ಅಧಿಕಾರ ಇಲ್ಲವೇ..? ಇದ್ದರು ಸ್ವಯಂ ಪ್ರೇರಿತರಾಗಿ ಯಾಕೆ ಅಲ್ಲಿ ನಡೆಯುವ ಅನೈತಿಕ ಕಾರ್ಯಗಳ ಕುರಿತು ಕ್ರಮ ಕೈಗೊಳ್ಳಲಿಲ್ಲ..?
    ೫.ಬೇರೆ ರಾಜ್ಯದ ಒಬ್ಬ ವ್ಯಕ್ತಿ ಬಂದು ಇಷ್ಟೆಲ್ಲಾ ಆಸ್ತಿ ಮಾಡಿಕೊಂಡು ಈ ಹಂತಕ್ಕೆ ಬೆಳೆದಿದ್ದಾನೆ ಅಂದರೆ ಇದರಲ್ಲಿ ಯಾರೆಲ್ಲರ ಸಹಕಾರ ಇದೆ..?
    ೬.ಇದರ ಹಿಂದೆ ರಾಜಕೀಯ ಇದೆಯೇ..? ರಾಜಕಾರಣಿಗಳು ಶಾಮೀಲು ಇರುವರೇ..?
    ೭. ನಮ್ಮ ಪೋಲಿಸ್ ಉನ್ನತ ಅಧಿಕಾರಿಗಳಿಗೆ ಪ್ರವೇಶ ನೀಡದೆ ಇರುವಷ್ಟು ನಿತ್ಯ ಬೆಳೆದಿದ್ದಾನೆ ಅಂದರೆ ಅರ್ಥ ಏನು..?
    ೮.ಮುಖ್ಯಮಂತ್ರಿಗಳು ಆಶ್ರಮದ ಶೋಧ,ಬೀಗಮುದ್ರೆಯ ನಿರ್ಣಯ ತೆಗೆದುಕೊಂಡಿದ್ದು ಜನರ ಹಿತಾಸಕ್ತಿಗಾಗಿಯೋ..? ಬಿಡದೆ ಬೆನ್ನು ಹತ್ತಿದ ಮಾಧ್ಯಮದ ಒತ್ತಾಯಕ್ಕೋ..?
    ಪ್ರಶ್ನೆಗಳು ಮುಗಿಯಲ್ಲ ಬಿಡಿ.
    ಆದರೆ ಎಲ್ಲ ಸ್ವಾಮಿಗಳು ಕಳ್ಳ,ಕಾಮುಕರಲ್ಲ. ನಿತ್ಯಾ ಮಾತ್ರ ಎಲ್ಲರಂತಲ್ಲ.
    ವಿದ್ಯಾವಂತ ಮೂರ್ಖರು ದ್ಹೊಂಗಿ ಸ್ವಾಮಿಗಳನ್ನು ಅರ್ಥಮಾಡಿಕೊಳ್ಳುವುದು ಅವಶ್ಯವಿದೆ. ಕೆಟ್ಟ ಮೇಲೆ ಬುದ್ಧಿ ಬಂದರೆ ಫಲವೇನು..?
    ಭಟ್ಟರ ಅಭಿಪ್ರಾಯಕ್ಕೆ ನನ್ನದು ಅರ್ಧ ಸಮ್ಮತಿ ಖಂಡಿತಾ ಇದೆ.

  22. ಶ್ರೀಪತಿ ಮ. ಗೋಗಡಿಗೆ

    ಶಶಿಧರ‍್ ಭಟ್ ಅವರೇ,
    ನಿಮ್ಮ ಮನೋಭಾವ ಸಕಾಲಿಕವಾಗಿದೆ. ನಿಜವಾಗಿ ನೋಡಿದರೆ ಎಲ್ಲರೂ ಈ ರೀತಿಯ ಮನೋಭಾವವನ್ನು ಕಷ್ಟಪಟ್ಟಾದರೂ ಬೆಳೆಸಿಕೊಳ್ಳಬೇಕಿದೆ. ನಿತ್ಯನಂದ ಸಿಕ್ಕಿಬಿದ್ದ ಮಠಾಧಿಪತಿ ಅಷ್ಟೇ. ಅವನು ಅತ್ಯಾಚಾರ ಮಾಡಿದರೆ ಇನ್ನು ಕೆಲವರು ಅನಾಚಾರ ಮಾಡಿದ್ದಾರೆ. ಆಚಾರದ ಹೆಸರಲ್ಲಿ ತಮ್ಮ ಜಾತಿಯನ್ನು ಎತ್ತಿ ಕಟ್ಟಿ ಅಥವಾ ಇತರೆ ಜಾತಿಯನ್ನು ಕೀಳಾಗಿ ಕಂಡು ತಾವೇಶ್ರೇಷ್ಠ ಎಂದು ಹೇಳುವುದೂ ಕೂಡಾ ಅನಾಚಾರವಲ್ಲದೇ ಬೇರೇನು ? ನಾನೂ ಕೂಡಾ ಇಂದಿನ ಯಾವ ಸ್ವಾಮೀಜಿಗಳನ್ನೂ ಬೆಂಬಲಿಸುವುದಿಲ್ಲ.
    ರಜಿನಿಕಾಂತ್ ಆಗಾಗ ಹಿಮಾಲಯ ಹೋಗುತ್ತಿರುತ್ತಾರೆ. ಅಲ್ಲಿನ ಕೆಲವು ಪ್ರದೇಶದಲ್ಲಿ ತಪಸ್ಸು ಮಾಡುತ್ತಿರುವ ಮನುಷ್ಯರನ್ನು ತಾನು ನೋಡಿದ್ದಾಗಿ ಅವರು ಹೇಳಿದ್ದಾರೆ. ನಿಜವಾದ ಸ್ವಾಮೀಜಿಗಳೆಂದರೆ ಅವರೇ ಅಲ್ಲವೇ ? ಎಲ್ಲವನ್ನೂ ಬಿಟ್ಟು ಪರಿತ್ಯಕ್ತರಾದವರು ಸನ್ಯಾಸಿಗಳೇ ಹೊರತೂ ಈ ರೀತಿ ಮಠ ಕಟ್ಟಿ (ಹಿಂದಿನ ರಾಜರುಗಳು ಕೋಟೆ ಕಟ್ಟಿ ಮೆರೆದಂತೆ), ಜಾತಿ ರಾಜಕಾರಣ ಮಾಡುತ್ತಾ, ಕೋಟಿ ಕೋಟಿ ಸರ್ಕಾರದ ಹಣ ನುಂಗುತ್ತಾ, ಸಮಾಜದ ಕಣ್ಣಿಗೆ ಮಣ್ಣೆರಚಲು ಒಂದಿಷ್ಟು ಉತ್ತಮ ಕಾರ್ಯ ಮಾಡಿದಂತೆ ನಟಿಸುವ ಇವರ ಅಗತ್ಯ ಇದೆಯಾ ?
    ರಾಜ್ಯದ ಎಲ್ಲಾ ಮಠಗಳನ್ನೂ ಒಮ್ಮೆ ರೈಡ್ ಮಾಡಿ ಅಲ್ಲಿರುವ ಕಪ್ಪು ಹಣವನ್ನು ಹೊರ ತೆಗೆಯಬೇಕಾಗಿದೆ. ಮಠಾಧೀಶರ ಮರ್ಜಿಯಲ್ಲೇ ಬಿದ್ದು ನರಳಾಡುವ ಇಂದಿನ ರಾಜಕಾರಣಿಗಳಿಂದ ಇದನ್ನೆಲ್ಲಾ ನಿರಿಕ್ಷೆ ಮಾಡೋದು ಸಾಧ್ಯವೇ ಇಲ್ಲ ಬಿಡಿ.

  23. Soory Hardalli

    I agree with you Bhatre. Still i believe is how they can attacts divotees and how fools are these divotees. Thank you for your article.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading