ಸಂಗೀತ ರವಿರಾಜ್
ಅಂತಾರಾಷ್ಟ್ರೀಯ ಖ್ಯಾತಿಯ ಚಿತ್ರ ಕಲಾವಿದ ಡಾ. ಎಂ. ಎಸ್. ಮೂರ್ತಿಯವರ ‘ನಿಜದ ನೆರಳು’ ಅಂಕಣ ಬರಹಗಳ ಕೃತಿ ಅವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯೆಂದರೆ ಅತಿಶಯೋಕ್ತಿ ಅಲ್ಲ. ಬದುಕಿನ ಒಳ ಹೊರಗನ್ನು ಛಾಯಾಚಿತ್ರದಂತೆ ಮನ ಪಟಲದಲ್ಲಿ ಅಚ್ಚೊತ್ತುವಂತೆ ಮಾಡಿದೆ ಇಲ್ಲಿನ ಕೃತಿ.
ಈ ನಿಜದ ಛಾಯೆ ನಮ್ಮ ಬದುಕಿನ ಉದ್ದಕ್ಕೂ ಹಿಂಬಾಲಿಸಿ ಬರುವ ನೈಜ ಬರವಣಿಗೆ. ಚಿತ್ರಕಲಾವಿದ ಮತ್ತು ಕವಿ ಒಬ್ಬರಲ್ಲೇ ಮಿಳಿತವಾದ ಮನಸ್ಸೇ ಒಂದು ಅದ್ಭುತವಾದ ಅಪರೂಪವಾದ ಚಿತ್ರ. ಈ ಚಿತ್ರವನ್ನು ನಾವಿಲ್ಲಿ ಮನಸಾರೆ ಆಸ್ವಾದಿಸಬಹುದು. ಇಲ್ಲಿ ಅತೀ ಸಾಮಾನ್ಯ ವಿಚಾರವನ್ನು ಅಸಾಮಾನ್ಯವೆನ್ನುವಂತೆ ಚಿತ್ರಿಸಿದ ಪರಿ ಅಭೂತಪೂರ್ವವಾಗಿ ನಮ್ಮನ್ನು ತಟ್ಟುತ್ತದೆ.
ಕಲೆಯಲ್ಲಿಯು ಹೀಗೆ ಅಲ್ಲವೇ? ಸಾಮಾನ್ಯವೆನ್ನುವಂತಹ ವಿಷಯ ದೃಶ್ಯಕಲೆಯಲ್ಲಿ ಪಡಿಮೂಡಿದಾಗ ಅದರ ಫಲಿತಾಂಶವೇ ಅಸಾಮಾನ್ಯವಾಗಿರುತ್ತದೆ. ಅಕ್ಷರಜ್ಞಾನ ಮಾತ್ರವೇ ಬಲ್ಲ ಯಾವುದೇ ವ್ಯಕ್ತಿಗೂ ಓದಿನ ರುಚಿಯನ್ನು ಹತ್ತಿಸಬಲ್ಲ ಬರಹಗಳಿವು ಎಂಬುದರ ಜೊತೆಗೆ, ಅತೀ ಶ್ರೇಷ್ಠ ಚಿಂತಕರು, ಬರಹಗಾರರು ಇವರ ಓದಿಗು ಬಲು ಆಪ್ತವಾಗಿ ದಕ್ಕುವಂತೆ ಮಾಡುವಂತಹ ಬಹುದೊಡ್ಡ ವಿಶೇಷತೆಯನ್ನು ನಿಜದ ನೆರಳು ಹೊಂದಿದೆ.

ಮುಖ್ಯವಾಗಿ ಬದುಕನ್ನು ಬಲು ಕುತೂಹಲದಿಂದ ಮತ್ತು ಸೂಕ್ಷ್ಮವಾಗಿ ಗಮನಿಸುವ ಸೃಜನಶೀಲ ಮನಸ್ಸು ಇವರದ್ದಾಗಿದೆ. ಇದುವೆ ಇವರ ಅತ್ಯುತ್ತಮ ಬರಹಗಳಿಗೆ ಪೂರಕವಾದ ಅಂಶವಾಗಿದೆ.
ನಿಜದ ನೆರಳು ಎಂಬ ಶೀರ್ಷಿಕೆಯೆ ಈ ಕೃತಿಗೆ, ಇವರ ಅಭಿರುಚಿಗಳಿಗೆ, ಜೊತೆಗೆ ಕೃತಿಯನ್ನು ಓದಿ ನಾವು ಅರ್ಥ ಮಾಡಿಕೊಂಡ ಇವರ ವ್ಯಕ್ತಿತ್ವಕ್ಕೆ ಬಲು ಸೂಕ್ತವಾಗಿ ಹೊಂದಿಕೊಳ್ಳುತ್ತದೆ.
ಧಾವಂತದ ಬದುಕಿನಲ್ಲಿ, ಸಂಘರ್ಷದಿಂದ ಬದುಕುತ್ತಿರುವ ಪ್ರಸ್ತುತ ದಿನಗಳಲ್ಲಿ ಜಾತೀಯತೆ, ಕೋಮುವಾದ, ಬಡತನ ಇತ್ಯಾದಿ ನಮ್ಮ ನೆಲದ ಇಂತಹ ಸಮಸ್ಯೆಗಳನ್ನು ತಳಮಟ್ಟದಿಂದ ನಿರ್ಮೂಲನಗೊಳಿಸುವ ಆಶಯ ಹೊತ್ತಿರುವ ಇಲ್ಲಿನ ಬಹುತೇಕ ಲೇಖನಗಳು ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವಂತದ್ದು .
ಸಂಪೂರ್ಣ ಸಮಾಜಮುಖಿ ನೆಲೆಯಲ್ಲಿಯೆ ರೂಪುಗೊಳ್ಳುವ ವಿಚಾರಗಳು ನಮ್ಮನ್ನಿಲ್ಲಿ ಚಿಂತನೆಗೆ ಹಚ್ಚುತ್ತವೆ. ಅಕ್ಷರದಿಂದ ಏನೂ ಸಾಧ್ಯವಿಲ್ಲ ಅಂತ ಹಲವರ ಅಭಿಪ್ರಾಯವಿದೆ.
ಆದರೆ ಇಲ್ಲಿನ ಲೇಖನಗಳಿಗೆ ಜನರು ಸ್ಪಂದಿಸಿದ ರೀತಿಯಿಂದಲೇ ಅಕ್ಷರದ ಪ್ರಭಾವದ ಅರಿವು ನಮ್ಮನ್ನು ನಿಬ್ಬೆರಗಾಗುವಂತೆ ಮಾಡಿದೆ. ಓದಿ ಪರಿವರ್ತನೆ ಆಗಬೇಕು ಎಂಬ ನಿಜದ ಅರಿವೊಂದು ಅರಿವಾಗುವ ಗುಣ ಇವರ ಪ್ರಬಂಧಗಳಲ್ಲಿದೆ ಎಂಬುದು ನನ್ನಭಿಪ್ರಾಯ.
ಲೇಖಕರ ಯಾವುದೋ ಅನುಭವದ ಸಾಲೊಂದನ್ನು ಓದುವಾಗ ಇನ್ನು ಮುಂದೆ ನಾನು ಈ ರೀತಿಯ ಉತ್ತಮ ವರ್ತನೆಯನ್ನು ಅಳವಡಿಸಿಕೊಳ್ಳಬೇಕು ಎಂಬ ಹೊಸ ಜ್ಞಾನವೊಂದು ಪಡಿಮೂಡುತ್ತದೆ. ಇದು ಬರಹದ ಸಾರ್ಥಕತೆ.
ಉದಾಹರಣೆಗೆ ಸೊಗದೆ ಬೇರಿನ ಕಷಾಯ ಮತ್ತು ಜಾಕ್ ಡೇನಿಯಲ್ ವಿಸ್ಕಿ ಕೃತಿಯಲ್ಲಿ ಮದ್ಯ ಎನ್ನುವುದು ಬೆಂಕಿ ಇದ್ದ ಹಾಗೆ. ಚಳಿಯಾದಾಗ ಬೆಂಕಿ ಕಾಯಿಸಿಕೊಳ್ಳಬೇಕು ಮೈ ಸುಟ್ಟುಕೊಳ್ಳಬಾರದು.
ಬೆಂಕಿಯನ್ನು ದೀಪದ ಹಾಗೆ ಬೆಳಗಲೂ ಬಹುದು , ಕೊಳ್ಳಿಯ ಹಾಗೆ ಬಳಸಲೂಬಹುದು. ಆಯ್ಕೆ ನಮ್ಮದು. ನಮ್ಮ ವಿಕೃತಿಗಳನ್ನು ನಾವು ಬಳಸುವ ವಸ್ತುಗಳಿಗೆ ಆರೋಪಿಸಬಾರದು. ಎಷ್ಟು ಅರ್ಥಪೂರ್ಣವಾಗಿ ಇದರ ಕುರಿತು ಹೇಳಿದ್ದಾರೆಂದರೆ ಕೆಡುಕಾಗುವ ಮುಂದೆ ಕೆಟ್ಟದ್ದನ್ನು ಬಿಡಲೇಬೇಕು ಎನ್ನುವ ಛಲ ನಮ್ಮೊಳಗು ಆವರಿಸಿಕೊಂಡು ಬಿಡುತ್ತದೆ.
ಕಲಾವಿದನಾಗುವ ಮೊದಲು ಸಂವೇದನಾಶೀಲ ಮನುಷ್ಯನಾಗಬೇಕು. ಇದು ಲೇಖಕರ ಗಾಢ ನಂಬಿಕೆ.ಇದಕ್ಕೆ ಪೂರಕವಾದ ಹಲವಾರು ಬರಹಗಳು ನಿಜದ ನೆರಳಿನಲ್ಲಿದೆ. ನಮ್ಮ ಚಿತ್ರದಲ್ಲಿ, ಬರಹದಲ್ಲಿ ಅಭಿವ್ಯಕ್ತಿಗೊಂಡ ಉತ್ತಮ ವಿಚಾರಗಳು, ಸಂವೇದನೆಗಳು ನಿಜದ ಬದುಕಿನಲ್ಲು ಅಳವಡಿಸಿಕೊಳ್ಳುವ ವ್ಯಕ್ತಿಯೆ ಎಲ್ಲರಿಗಿಂತ ಎತ್ತರದಲ್ಲಿ ನಿಲ್ಲುತ್ತಾನೆ ಎಂಬುದು ಲೇಖಕರ ಅಚಲ ನಂಬಿಕೆ.
ಲೇಖಕರ ಅತಿಮುಖ್ಯ ಕ್ಷೇತ್ರವಾದ ದೃಶ್ಯಕಲೆ ಇಂತಹ ಸಂಕೀರ್ಣ ಪ್ರಶ್ನೆಯನ್ನು ಮತ್ತೆ ಮತ್ತೆ ಅವರೊಳಗೆ ಎತ್ತುತ್ತದೆ. ದೃಶ್ಯಕಲೆ ಜನರ ಒಳನೋಟಕ್ಕೆ ಸ್ಪಂದಿಸುವ ಮತ್ತು ತೆರೆದುಕೊಳ್ಳುವ ಪ್ರಯತ್ನ ಎಂಬ ಲೇಖಕರ ಮಾತು ಸರ್ವರಿಗೂ ಆದರ್ಶ. ಪಾದಯಾತ್ರೆ ಎಂಬ ಅಂತರಂಗದ ಪಯಣ ಪ್ರಬಂಧ ವಿವೇಚನಯುತವಾಗಿದೆ. ಪಾದಯಾತ್ರೆ ಮನುಷ್ಯ ಪ್ರೀತಿಯ ಪ್ರಜ್ಞೆ ಎಂಬ ವಿಚಾರವಾಗಿರಲಿ, ಪಾದಯತ್ರೆಯ ಬೇರೆ ಬೇರೆ ಆಯಾಮಗಳ ಕುರಿತು ಚರ್ಚಿಸಿ, ವಿಶ್ಲೇಷಿಸಿ ಕೊನೆಗೊಂದು ನೀತಿಯುತ ಮುಕ್ತಾಯದೊಂದಿಗೆ ಮುಗಿಯುವ ಈ ಬರಹ ಚಿಂತನೆಗೆ ಹಚ್ಚುತ್ತದೆ.
ಡಾ. ಎಂ.ಎಸ್. ಮೂರ್ತಿಯವರ ಕೃತಿಯ ವಿಶೇಷತೆಯೆಂದರೆ ಲೇಖನಗಳ ವಿಚಾರದ ಸ್ಪಷ್ಟತೆಯನ್ನು, ದಾಖಲೆಗಳನ್ನು ಇಲ್ಲಿ ಸಂಪೂರ್ಣ ಇವರ ಅನುಭವಗಳೊಂದಿಗೆ ಸೇರಿಸಿ ಅದನ್ನೆ ಸಾರ್ವತ್ರಿಕಗೊಳಿಸಿದ್ದಾರೆ. ಇದು ಬರಹ ಇನ್ನು ನಮ್ಮನ್ನು ಗಾಢವಾಗಿ ತಲುಪಲು ಸಹಕಾರಿಯಾಗಿದೆ. ಸ್ವತ: ಅನುಭವಗಳನ್ನು ಹೇಳಿದಾಗ ನೈಜ್ಯತೆಯ ಭಾವ, ಕೃತಿಮತೆ ಇಲ್ಲದಿರುವುದು ಲೇಖನದಲ್ಲಿ ಎದ್ದು ತೋರುತ್ತದೆ.
ಜೊತೆಗೆ ಲೇಖನಗಳಿಗೆ ಪೂರಕವಾಗಿ ತಮ್ಮದೇ ಕವಿತೆಯ ಸಾಲುಗಳನ್ನು ಸೇರಿಸಿ ಓದುಗರ ಚಪಲವನ್ನು ತಣಿಸಿರುವುದು ಗಮನಾರ್ಹ. ಬರಹಗಳಲ್ಲಿ ಇಂತಹ ಭಿನ್ನತೆಯನ್ನು ಕಾಯ್ದುಕೊಳ್ಳುವುದು ಒಬ್ಬ ಸೃಜನಶೀಲ ಬರಹಗಾರನ ಕರ್ತವ್ಯವು ಹೌದು.
ಕಲಾವಿದನ ಕೈಯಲ್ಲಿ ಅರಳಿದ ಅಕ್ಷರಗಳು ಮನಸೂರೆಗೊಳ್ಳಲು ಇನ್ನೂ ಒಂದು ಕಾರಣವಿದೆ. ಪ್ರತಿ ಲೇಖನಗಳಿಗು ಆಕರ್ಷಿಸುವಂತಹ ಮತ್ತು ಆಸಕ್ತಿದಾಯಕ ಶೀರ್ಷಿಕೆಗಳಿವೆ. ಶೀರ್ಷಿಕೆಗಳನ್ನು ಕಲಾತ್ಮಕವಾಗಿ ಬರೆಯುವುದು ಖಂಡಿತ ಸುಲಭ ಅಲ್ಲ . ಓದುವಾಗ ನಾಲ್ಕೈದು ಸಾಲಿನ ಶಬ್ಧ ಚೆನ್ನಾಗಿದೆ ಎಂದೆನಿಸಿದರು ಸಹ , ದ್ವಂದರ್ಥ ಬರುವಂತೆ ಪ್ರಾಸ ಪದವಿರುವಂತೆ ಮೇಳೈಸಿ ಬರೆಯುವುದು ಕ್ಲಿಷ್ಟಕರ.
ತಣ್ಣೀರನ್ನು ಆರಿಸಿಕೊಂಡು ಕುಡಿಯುವ ಕಾಲ ಎಂಬುದು ಅವರ ಹಿರಿಯರು ಹೇಳುತ್ತಿದ್ದ ಮಾತು ಎಂಬುದಾಗಿ ಉಲ್ಲೇಖಿಸಿದ್ದಾರೆ. ಇದೇ ಶೀರ್ಷಿಕೆಯನ್ನು ಅದಕ್ಕೆ ಹೊಂದುವಂತಹ ಬರಹಕ್ಕೆ ನೀಡಿ ಬರಹದ ಸಾಧ್ಯತೆಗಳನ್ನು ಹೆಚ್ಚಿಸಿದ್ದಾರೆ.
ನಾನೆಂಬ ಕೃತಿಯ ಮುಂದೆ ನಾನೆಷ್ಟು ಸಣ್ಣವನು, ಸೊಗದೆ ಬೇರಿನ ಕಷಾಯ ಮತ್ತು ಜಾಕ್ ಡೇನಿಯಲ್ ವಿಸ್ಕಿ, ಗರಿಕೆ ಹುಲ್ಲು ಮತ್ತು ಸಾವಿರ ಅಲ್ಲಮ್ಮ ಪ್ರಭುಗಳು, ಬದುಕಿನ ಚೈತನ್ಯವನ್ನೇ ಅಲುಗಾಡಿಸುವ ಸರಿ ತಪ್ಪುಗಳು, ಶಂಕರಪುರದ ಮಲ್ಲಿಗೆ ಮತ್ತು ದಕ್ಷಿಣ ಕನ್ನಡದ ಜನರು, ನ್ಯಾಷನಲ್ ಜಿಯಾಗ್ರಫಿ ಎಂಬ ಮಹಾಲೋಕ, ಉರಿವ ಸೂರ್ಯನ ಸಾಕ್ಷಿ ನಮ್ಮ ಬದುಕು, ನಿಶ್ಯಬ್ದದೊಂದಿಗೆ ತರ್ಕದ ಸದ್ದು ಇತ್ಯಾದಿ ಶೀರ್ಷಿಕೆಗಳು ಬಲು ಅಪ್ಯಾಯಮಾನವಾಗಿದೆ. ಶೀರ್ಷಿಕೆ ಓದಿಯೇ ಓದಿನ ಹುಮ್ಮಸ್ಸನ್ನು ಹುಟ್ಟಿಸಿಬಿಡುವಂತವು.
ಕೃತಿಯ ಒಂದೊಂದು ಬರಹಗಳನ್ನು ಓದುತ್ತ ಹೋದಂತೆ ಬದುಕಿನ ಹಲವು ಮಜಲುಗಳು ಅನಾವರಣಗೊಳ್ಳುತ್ತ ಹೋಗುತ್ತದೆ. ಇವರ ಗದ್ಯಕ್ಕೆ ಪದ್ಯದ ಸ್ಪರ್ಶವಿದೆ. ಕಲಾತ್ಮಕವಾಗಿ ಬರೆಯಲ್ಪಟ್ಟದ್ದು ಕಾವ್ಯಾತ್ಮಕವಾಗಿ ಮೂಡಿಬಂದಿದೆ. ಓದು ಕಲಿಕೆಯಾಗುವ ಪ್ರಕ್ರಿಯೆ ನಿಜದ ನೆರಳಿನಲ್ಲಿದೆ. ಇಲ್ಲಿ ಓದು ಮನರಂಜನೆಗೆ ಮಾತ್ರ ಸೀಮಿತವಲ್ಲ.

ಅರಿವಿನ ಪ್ರಯಾಣ ಹೋಗುವಂತೆ ಭಾಸವಾಗುತ್ತದೆ. ಅದೆಷ್ಟೋ ರೀತಿಯ ಜ್ಞಾನ ಮತ್ತು ತಿಳುವಳಿಕೆ ನಮಗಿಲ್ಲಿ ಸಿಗುತ್ತದೆ. ದೇಶ-ವಿದೇಶಗಳ ಅಸಂಖ್ಯಾತ ಕಲಾವಿದರ ಪರಿಚಯ ನಮಗಾಗುತ್ತದೆ. ‘ಅರ್ಧ ಸತ್ಯದ ಕಪ್ಪು ಚಿತ್ರ’ ಎಂಬ ಬರಹ ಇಡೀ ಜಗತ್ತಿಗೆ ತಿಳಿದಿರುವ ವಿಚಾರವಾದ ಛಾಯಚಿತ್ರಕ್ಕಾಗಿ ಪುಲಿಟ್ಜರ್ ಪ್ರಶಸ್ತಿ ಪಡೆದ ಕೆವಿನ್ ಕರ‍್ಟರ್ ಕುರಿತಾದ್ದದು ಆಗಿದೆ. ಇದೊಂದು ರೋಮಾಂಚನಗೊಳ್ಳುವಂತಹ ಸತ್ಯ ಕಥೆ.
ಇಂತಹ ಸತ್ಯ ಘಟನೆಯನ್ನು ಪ್ರತಿ ಪ್ರಜೆಯು ತಿಳಿದಿರಲೇಬೇಕು ಎಂಬುದು ನನ್ನ ಅನಿಸಿಕೆ. ಮನ ಮಿಡಿಯುವ ಈ ವಿಚಾರವನ್ನು ಮನಮುಟ್ಟುವಂತೆ ಬರೆದ ಲೇಖಕರ ವಿಚಾರಧಾರೆ ಓದುಗರನ್ನು ನಿಬ್ಬೆರಗಾಗಿಸುತ್ತದೆ. ಇಂತಹ ಅನೇಕ ಬರಹಗಳು ನಿಜದ ನೆರಳು ಕೃತಿಯಲ್ಲಿದೆ.
ಒಟ್ಟಿನಲ್ಲಿ ಎಂ.ಎಸ್. ಮೂರ್ತಿಯವರು ಹಿಂದಿನ ಮತ್ತು ಪ್ರಸ್ತುತ ಕಾಲಮಾನದ ಸಂಗತಿಗಳನ್ನು ಆಧುನಿಕ ಜನಮಾನಸದಲ್ಲಿ ಅನುಸಂಧಾನಿಸುತ್ತಲೇ ತಮ್ಮ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇಂದಿನ ದಿನಗಳ ವೈರುಧ್ಯಗಳನ್ನು ತೆರೆದಿಟ್ಟು ವ್ಯತ್ಯಾಸಗಳನ್ನು ನವಿರಾಗಿ ಹೇಳಿ ನಮ್ಮನ್ನು ನಾವು ಸಮಾಜಕ್ಕೆ ಒಡ್ಡಿಕೊಳ್ಳುವ ಪರಿಯನ್ನು ತಿಳಿಸಿದ ರೀತಿ ವಿಶೇಷವಾಗಿದೆ.
ನಮಗೆ ಬದುಕಲು ಬೇಕಾದಷ್ಟು ಆಧುನಿಕತೆ ಸಾಕು ಎನ್ನುವ ಕಳಕಳಿ ಮತ್ತು ಅಗತ್ಯಗಳನ್ನು ಪೂರೈಸಿಕೊಳ್ಳುವಷ್ಟು ಹಣಕಾಸು ಸಾಕು ಎನ್ನುವ ವಿಚಾರಕ್ಕೆ ಪೂರಕವಾಗಿ ಹಲವಾರು ಬರಹಗಳಿವೆ. ಇಂತಹ ಇವರ ಸಮಾಜಮುಖಿ ಧೋರಣೆ ಎಂದೆದಿಗು ಶಾಶ್ವತವಾಗಿರಲಿ ಮತ್ತು ಎಲ್ಲೆಡೆಯು ಪಸರಿಸಲಿ ಎಂಬ ಆಶಯ ಮನಸ್ಸಲ್ಲಿ ಮೂಡುತ್ತದೆ.
ವರ್ಷಗಳು ಉರುಳುತ್ತಿರುವಾಗ ಆಗುವ ಎಲ್ಲ ಸೋರಿಕೆಗಳು ಆಗಿ ಲೋಕವೆ ಹಾಳಾಗುವ ಮುನ್ನ ಜನರು ಎಚ್ಚೆತ್ತುಕೊಳ್ಳಲಿ ಎಂಬ ಆಶಾವಾದದ ಪ್ರಖರ ಲೇಖನಗಳು ಜನರನ್ನು ಮುಟ್ಟಬೇಕು. ನಮ್ಮ ಅರಿವಿನ ಲೋಕದ ಪರಿಧಿಗಳನ್ನು ಗಮನಾರ್ಹವಾಗಿ ವಿಸ್ತರಿಸಿದ ಕಲಾವಿದರಾದ ಎಂ. ಎಸ್. ಮೂರ್ತಿಯವರ ಬರವಣಿಗೆಯ ಬದುಕು ಸಹ ನಿರಂತರವಾಗಿರಬೇಕು ಎಂಬುದು ನಮ್ಮೆಲ್ಲರ ಆಶಯ.






dhanyavadagalu avadhi
ಒಳ್ಳೆಯ ವಿಮರ್ಶೆ