ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾ ದಿವಾಕರರ 10 ಪುಸ್ತಕಗಳ ಬಿಡುಗಡೆ…

ಪುರುಷೋತ್ತಮ ಬಿಳಿಮಲೆ

ನಾ. ದಿವಾಕರ ಅವರ 10 ಪುಸ್ತಕಗಳು ಮೈಸೂರಲ್ಲಿ ಬಿಡುಗಡೆಯಾದ ಸುದ್ದಿ ಕೇಳಿ ಸಂತೋಷ ಪಟ್ಟವರಲ್ಲಿ ನಾನೂ ಒಬ್ಬ. ನಾನು ಅವರನ್ನು ಒಮ್ಮೆಯೂ ಕಂಡಿಲ್ಲ. ಆದರೆ ಅವರು ಫೇಸ್ ಬುಕ್ಕಲ್ಲಿ ಬರೆಯುವುದನ್ನು ನಿತ್ಯವೂ ಓದುತ್ತಿದ್ದೇನೆ. ಬಹುಶ: ಅವರಂಥ ಕೆಲವರು ಇಲ್ಲದಿದ್ದರೆ ನಾನು ಫೇಸ್ ಬುಕ್ ಬಿಟ್ಟು ಎಂದೋ ಓಡಿಹೋಗುತ್ತಿದ್ದೆ.

ದಿವಾಕರರು ವರ್ತಮಾನದ ಭಾರತಕ್ಕೆ ತಾಳ್ಮೆಯಿಂದ ಪ್ರತಿಕ್ರಿಯಿಸುತ್ತಲೇ ಇರುತ್ತಾರೆ. ತನ್ನ ಮೇಲೆ ಅಕ್ರಮಣ ಮಾಡುವವರಿಗೂ ಅಷ್ಟೇ ತಾಳ್ಮೆಯಿಂದ ಸಜ್ಜನಿಕೆಯಿಂದ ಉತ್ತರ ಕೊಡುತ್ತಾರೆ. ಹುಸಿ ರಾಷ್ಟ್ರೀಯತೆಯನ್ನು ಅವರು ಸದಾ ವಿಮರ್ಶಿಸುತ್ತಾರೆ. ಮಾಧ್ಯಮಗಳು ಹೇಳದ ವಾಸ್ತವಿಕತೆಯನ್ನು ಅವರು ನಮಗೆ ಹೇಳುತ್ತಾರೆ.

ಗಾಂಧೀಜಿಯ ನಾಡಲ್ಲಿ ಸುಳ್ಳುಗಳದೇ ರಾಜ್ಯಭಾರ ನಡೆಯುತ್ತಿರುವಾಗ ನಮಗೆ ದಿವಾಕರರನ್ನು ಓದದೆ ಬೇರೆ ಹಾದಿಯೇ ಇಲ್ಲ. ಅವರಿಗೆ ಸುಳ್ಳು ಮತ್ತು ಸತ್ಯಗಳ ನಡುವಣ ವ್ಯತ್ಯಾಸ ಗೊತ್ತಿದೆ. ನಮ್ಮ ಕಾಲಕ್ಕೆ ಅಗತ್ಯವಾದ ಮೌಲ್ಯವಿನ್ಯಾಸಗಳ ಬಗ್ಗೆ ತಿಳಿವಳಿಕೆಯಿದೆ.

ಪ್ರಾಚೀನ ಭಾರತದ ವೈದಿಕ-ಅವೈದಿಕ ಪರಂಪರೆಗಳಿಂದ ಇತ್ತೀಚಿನ ಫ್ರೆಂಚ್ ತತ್ವಜ್ಞಾನದವರೆಗೆ ಅವರು ಓದಿಕೊಂಡಿದ್ದಾರೆ. ಬುದ್ದ, ಬಸವ, ಅಂಬೇಡ್ಕರ್, ಮಾರ್ಕ್ಸ್‌ ಅವರ ಜೊತೆಗೆ ವಿಶ್ವದ ಇತರ ಅನೇಕರು ಸಾಮಾಜಿಕ ನ್ಯಾಯದ ಬಗ್ಗೆ ಹೋರಾಡಿದ ಇತಿಹಾಸವೂ ಅವರಿಗೆ ಗೊತ್ತಿದೆ. ಎಲ್ಲಕ್ಕಿಂತ ಮಿಗಿಲಾಗಿ ಸಮಕಾಲೀನ ಭಾರತದ ಅವ್ಯವಸ್ಥೆಗಳನ್ನು ಒಂದು ಮಾನವೀಯ ಚೌಕಟ್ಟಿನಲ್ಲಿ ಗ್ರಹಿಸಿ, ಗೊಂದಲವಿಲ್ಲದೆ ಮಂಡಿಸುವ ಪ್ರಖರ ವಿಚಾರಶೀಲತೆಯಿದೆ.

ದಿವಾಕರರ ಒಳಗೊಬ್ಬ ಕವಿಯೂ ಇರುವುದರಿಂದ ಅವರ ಲೇಖನಗಳು ಓದುಗನನ್ನು ಕೆರಳಿಸುವುದಿಲ್ಲ, ಬದಲು ಅರಳಿಸುತ್ತವೆ. ಒಂದು ನಿರ್ದಿಷ್ಟ ವಿಷಯದ ಬಗ್ಗೆ ಅಪಕಲ್ಪನೆಗಳು ಮೂಡುತ್ತಿರುವಾಗ, ಅದರ ಬಗ್ಗೆ ತಿಳಿವಳಿಕೆ ಹುಟ್ಟಿಸುವುದು ಅವರ ಕೆಲಸ.

ಈ ಅರ್ಥದಲ್ಲಿ ನಾ. ದಿವಾಕರ ಅವರು ಪ್ರಖರ ಸಾಮಾಜಿಕ ಬದ್ಧತೆಯ ಲೇಖಕ. ಹಿಂದುತ್ವದ ನಿರಂಕುಶ ಸರ್ವಾಧಿಕಾರವು ಬಂಡವಾಳಶಾಹಿಗಳೊಡನೆ ಸೇರಿಕೊಂಡಾಗ, ಭಾರತದಂಥ ಅಭಿವೃದ್ಧಿಶೀಲ ರಾಷ್ಟ್ರದಲ್ಲಿ ಉಂಟಾಗುವ ಅನಾಹುತಗಳಿಗೆ ಅವರು ಧ್ವನಿಯಾಗುವುದನ್ನು ನಾವೆಲ್ಲರೂ ಕೇಳಿಸಿಕೊಳ್ಳಬೇಕು.
ಶ್ರೀ ನಾ. ದಿವಾಕರರಿಗೆ ಅಭಿನಂದನೆಗಳು ಮತ್ತು ಕೃತಜ್ಞತೆಗಳು

‍ಲೇಖಕರು Admin

7 March, 2022

2 Comments

  1. Kotresh T A M

    ಅಭಿನಂದನೆಗಳು ಸರ್

  2. T S SHRAVANA KUMARI

    ನಾ ದಿವಾಕರ ಮತ್ತು ಪುರುಶೋತ್ತಮ ಬಿಳಿಮಲೆ ಇಬ್ಬರಿಗೂ ಅಬಿನಂದನೆಗಳು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading