ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾ ದಾ ಕಂಡಂತೆ ರಂಗಪ್ರವೇಶ

ರಂಗಪ್ರವೇಶದಲ್ಲಿ ಮಿಂಚಿದ ರಚನಾ ಮತ್ತು ರೂಹಿ

ನಾ ದಾಮೋದರ ಶೆಟ್ಟಿ

ಭಾರತೀಯರು ಅಮೇರಿಕಾದಲ್ಲಿದ್ದರೂ ಭರತನಾಟ್ಯ ತಮ್ಮ ಮಣ್ಣಿನದ್ದು ಎಂಬ ಅಭಿಮಾನ ಇಟ್ಟುಕೊಂಡೇ ಅಧ್ಯಯನ ಮಾಡುತ್ತಾರೆ ಎಂಬುದಕ್ಕೆ ರಚನಾ ಪ್ರಸಾದ್ ಹಾಗೂ ರೂಹಿ ಪ್ರಸಾದ್ ಎಂಬ ಅಕ್ಕತಂಗಿಯರು ರವೀಂದ್ರ ಕಲಾಕ್ಷೇತ್ರದಲ್ಲಿ ತನ್ಮಯತೆಯಿಂದ ನೀಡಿದ ಪ್ರದರ್ಶನವೇ ಸಾಕ್ಷಿ. ಕಲಾಶ್ರೀ ಆಶಾಗೋಪಾಲ್ ಕಳೆದ ಮೂರು ದಶಕಗಳ ಹಿಂದೆ ಫೀನಿಕ್ಸ್ ನಲ್ಲಿ ಪ್ರಾರಂಭ ಮಾಡಿದ ಆರತಿ ಸ್ಕೂಲ್ ಆಫ್ ಇಂಡಿಯನ್ ಡ್ಯಾನ್ಸಸ್ ನಲ್ಲಿ ಆರು ವರ್ಷಗಳ ಕಾಲ ಅಭ್ಯಾಸ ನಡೆಸಿ, ಬಳಿಕ ಭಾರತದಲ್ಲಿ ನೆಲೆಗೊಳ್ಳುವ ತೀರ್ಮಾನ ನಿಮಿತ್ತವಾಗಿ ಬೆಂಗಳೂರಿನ ಕಲಾಶ್ರೀ ವೀಣಾಮೂರ್ತಿ ಅವರ ರಾಜರಾಜೇಶ್ವರಿ ಕಲಾನಿಕೇತನದಲ್ಲಿ ಅಭ್ಯಾಸ ಮುಂದುವರಿಸಿದರು. ರಂಗಪ್ರವೇಶದ ಸಂದರ್ಭದಲ್ಲಿ ಇಬ್ಬರು ಕಲಾಗುರುಗಳೂ ಸೇರಿಕೊಂಡು ನೀಡಿದ ಕಠಿಣ ತರಬೇತಿ ನಿಮಿತ್ತವಾಗಿ ರಂಗಪ್ರವೇಶವು ಅಭೂತಪೂರ್ವ ಯಶಸ್ಸನ್ನು ಕಂಡಿತು.

ಇಡಿಯ ವೇದಿಕೆಯು ಕಂಬಗಳಿಂದ ಕೂಡಿ ಬೇಲೂರಿನ ಶಿಲ್ಪವೈಭವವನ್ನು ನೆನಪಿಸುವಂತಿತ್ತು. ಹಿನ್ನೆಲೆಯಲ್ಲಿ ಪ್ರತಿ ನೃತ್ಯದ ಪ್ರಾರಂಭಕ್ಕೂ ಶ್ವೇತ ಪರದೆಯ ಮೇಲೆ ಆಯಾ ನೃತ್ಯಕ್ಕೆ ಕಾರಣೀಭೂತ ದೇವತೆಗಳು ಮಿಂಚಿ ಮರೆಯಾಗುತ್ತಿದ್ದುದೊಂದು ಅಪೂರ್ವ ತಂತ್ರಗಾರಿಕೆ.
ಗಣೇಶ ಪ್ರಸಾದ ಹಾಗೂ ಮಮತಾ ಪ್ರಸಾದರ ಪುತ್ರಿಯರಾದ ರಚನಾ ಹಾಗೂ ರೂಹಿ ತರಗತಿಯಲ್ಲಿ ಪ್ರಥಮ ಸ್ಥಾನದಲ್ಲಿದ್ದಂತೆಯೇ ಭರತನಾಟ್ಯದಲ್ಲೂ ಆ ಗುಣಮಟ್ಟವನ್ನು ಕಾಯ್ದುಕೊಂಡಿದ್ದರು. ಸುಮಾರು ಎರಡೂವರೆ ಗಂಟೆಗಳ ಕಾಲ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದ ಮಕ್ಕಳಿಬ್ಬರು ಪ್ರದರ್ಶಸಿದ ದೀಪಾಂಜಲಿಯಂತೂ ಕಣ್ಣಿಗೆ ಹಬ್ಬವೇ ಆಗಿತ್ತು. ಪುಷ್ಪಾಂಜಲಿಯಿಂದ ತೊಡಗಿ ತಿಲ್ಲಾನದವರೆಗೆ ಪ್ರತಿ ಹಂತದಲ್ಲೂ ಶಾಸ್ತ್ರೀಯತೆಯ ಗಂಧಕ್ಕೆ ಕಿಂಚಿತ್ತೂ ಊನ ಒದಗಲಿಲ್ಲ. ಮನೋಧರ್ಮ ಪ್ರದರ್ಶಿಸುವುದಕ್ಕೆ ವಯಸ್ಸೊಂದು ಮಾನದಂಡವಲ್ಲ ಎಂಬುದನ್ನು ರಚನಾ ಹಾಗೂ ರೂಹಿ ಸಾಬೀತು ಪಡಿಸಿದರು.


 

‍ಲೇಖಕರು G

3 October, 2013

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading