ಸದಾ ಹುರುಪಿನ, ಅಗಾಧ ಚಟುವಟಿಕೆಯ, ಜೊತೆಯಲ್ಲಿದ್ದವರಿಗೆ ನಗುವನ್ನು ಮಾತ್ರವೇ ಹಂಚುವ, ಎಲ್ಲರನ್ನೂ ತನ್ನವ.. ತನ್ನವ.. ಎಂದು ಭಾವಿಸುವ ನಾ ದಾಮೋದರ ಶೆಟ್ಟರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ.
ನಾ ದಾ ಎಂದೇ ಇವರು ಎಲ್ಲರಿಗೂ ಪರಿಚಿತ. ಅನುವಾದ ಕ್ಷೇತ್ರದಲ್ಲಿ ದಶಕಗಳಿಂದ ಹೆಸರುವಾಸಿ. ಕವಿತೆ ಕಥೆ ನಾಟಕ ಪ್ರವಾಸ ಕಥನ ಅಂಕಣ ಹೀಗೆ ಹಲವು ಕ್ಷೇತ್ರದಲ್ಲಿ ತಮ್ಮ ಛಾಪು ಮೂಡಿಸಿರುವ ನಾ ದಾ ಗೆ ಇದು ಹೆಮ್ಮೆಯ ಕ್ಷಣ.
ನಾ ದಾ ಮಲಯಾಳಂನಿಂದ ಅನುವಾದಿಸಿದ ನಾರಾಯನ್ ಅವರ ‘ಕೊಚ್ಚರೇತ್ತಿ’ ಕೃತಿಯ ಅನುವಾದಕ್ಕಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಈ ಪ್ರಶಸ್ತಿ ನೀಡಿದೆ
‘ಅವಧಿ’ಯ ಓದುಗ, ಹಿತೈಷಿ, ಕಿವಿ ಹಿಂಡಿ ಬುದ್ದಿ ಹೇಳುವಷ್ಟು ಸಲಿಗೆ ಹೊಂದಿರುವ ನಾದಾ ಅವರ ಸಂತಸದಲ್ಲಿ ನಾವೂ ಭಾಗಿಯಾಗುತ್ತಿದ್ದೇವೆ.
ಎಲ್ ಸಿ ಸುಮತ್ರಾ ಅವರು ‘ಕೊಚ್ಚರೇತ್ತಿ’ ಕೃತಿ ಹಾಗೂ ಅದರ ಅನುವಾದದ ಸೊಗಡಿನ ಬಗ್ಗೆ ಇಲ್ಲಿ ಕಣ್ಣನ್ನು ಹಾಯಿಸಿದ್ದಾರೆ.
‘ಕೊಚ್ಚರೇತ್ತಿ’ ಆದಿವಾಸಿ ಕಥನ.

ಡಾ ಎಲ್ ಸಿ ಸುಮಿತ್ರಾ.
ತೀರ್ಥಹಳ್ಳಿ
ಸೃಜನಶೀಲ ಲೇಖಕರಾಗಿ ಹೆಸರಾಗಿರುವ ನಾ.ದಾ. ಉತ್ತಮ ಅನುವಾದಕರೂ ಹೌದು. ಮಲಯಾಳಂನ ಪ್ರಮುಖ ಲೇಖಕರ ಕೃತಿಗಳನ್ನು ಅವರು ಕನ್ನಡಕ್ಕೆ ತಂದಿದ್ದಾರೆ. ಕಮಲಾದಾಸ್ ಅವರ ‘ಬಾಲ್ಯದ ನೆನಪುಗಳು, ಮುಕುಂದನ್ ಅವರ ‘ದೇವರ ವಿಕರಾಳಗಳು’ ‘ಅಶ್ವತ್ಥಾಮನ್’ ಅವರ ಅನುವಾದಗಳಲ್ಲಿ ಕೆಲವು. ಅವರು ಅನುವಾದಕ್ಕಾಗಿ ಆಯ್ದುಕೊಂಡ ಕೃತಿಗಳೇ ಅವರ ಅಭಿರುಚಿ ಮತ್ತು ಆದ್ಯತೆಗಳನ್ನು ತಿಳಿಸುತ್ತವೆ.
ಕೇರಳದ ಪಶ್ಚಿಮ ಘಟ್ಟಗಳ ಸೆರಗಿನ ವೈನಾಡು ಮತ್ತು ಇಡುಕ್ಕಿ ಜಿಲ್ಲೆಗಳಲ್ಲಿ ಲಕ್ಷಾಂತರ ಆದಿವಾಸಿಗಳಿದ್ದಾರೆ. ಇಡುಕ್ಕಿ ಜಿಲ್ಲೆಯ ಅರೆಯನ್ ಗಿರಿಜನರ ಸಮುದಾಯದವರೇ ಆದ ‘ನಾರಾಯನ್’ ಅವರು ಕೊಚ್ಚರೇತ್ತಿಯನ್ನು ಬರೆದಿದ್ದಾರೆ. ಸಾಹಿತ್ಯ ಕೃತಿಯಲ್ಲದೆ ಒಂದು ಸಂಸ್ಕೃತಿ ಚಿಂತನೆಯ ಕೃತಿಯಾಗಿಯೂ ಇದು ಮಹತ್ವದ್ದಾಗಿದೆ. ಈ ಕಾದಂಬರಿ ತಮ್ಮ ಸ್ವಾನುಭವವನ್ನು ಆಧರಿಸಿದೆ ಎಂದು ಲೇಖಕರು ಹೇಳಿಕೊಂಡಿದ್ದಾರೆ. ಸ್ವಾತಂತ್ರ ಹೋರಾಟದ ಮತ್ತು ಆ ನಂತರದ ಕಾಲದಲ್ಲಿ ಕೇರಳದ ಇಡುಕ್ಕಿ ಯ ಮಲೆಗಳಲ್ಲಿ ನೆಲೆಸಿದ್ದ ‘ಅರೆಯ’ ಗಿರಿಜನರ ಕಥೆಯಿದು.
‘ಕೊಚ್ಚರೇತ್ತಿ’ ಅಂದರೆ ಕೊಚ್ಚು+ಅರೆಯತ್ತಿ- ಎಳೆಯ ವಯಸ್ಸಿನ ಅರೆಯ ಸ್ತ್ರೀ ಎಂದರ್ಥ. ಆದಿವಾಸಿಗಳು ಮುಖ್ಯವಾಹಿನಿಗೆ ಬರಬೇಕೇ ಬೇಡವೇ ಎಂಬ ಚರ್ಚೆ ಕರ್ನಾಟಕದಲ್ಲೂ ಇದೆ. ಕಾಡಿನಿಂದ ಅವರು ಹೊರಗೆ ಬರಲಿ, ಆಧುನಿಕ ಅಭಯಾರಣ್ಯದ ಕಲ್ಪನೆಯಲ್ಲಿ ಗಿರಿಜನರು, ಆದಿವಾಸಿಗಳು
ಕಾಡಿನಿಂದ ಹೊರಗೆ ಕಟ್ಟಿದ ಪುನರ್ವಸತಿ ಕೇಂದ್ರಗಳಲ್ಲಿರಬೇಕು, ಎಂಬ ಆಳುವವರ ತಿಳಿವಳಿಕೆ ಪಶ್ಚಿಮ ಘಟ್ಟದ ಕಾಡುಗಳಿಗೆ ನಕ್ಸಲ್ ವಾದ ಬರುವಂತೆ ಮಾಡಿತು. ಈಗ ಕೇರಳದ ವೈನಾಡಿನಲ್ಲಿ ಆದಿವಾಸಿ ಮಕ್ಕಳಿಗಾಗಿಯೇ ವಸತಿಶಾಲೆಗಳನ್ನು ಸರ್ಕಾರ ಮಾಡಿದೆ.
‘ಕೊಚ್ಚರೇತ್ತಿ’ ಸ್ವಾತಂತ್ರ್ಯ ಪೂರ್ವದ ಕಥನವಾದರೂ ಕಳೆದ ಶತಮಾನದ ಎಪ್ಪತ್ತರ ದಶಕದವರೆಗಿನ ,ಅರೆಯನರು ವಿದ್ಯಾಭ್ಯಾಸ ಪಡೆದ ಮೇಲಿನ ಬದಲಾವಣೆಗಳನ್ನೂ ಒಳಗೊಂಡಿದೆ. ಮುಂದಿನ ತಲೆಮಾರು ಆಧುನಿಕತೆಯಲ್ಲಿ ಅತಂತ್ರರಾಗುವ ಚಿತ್ರವಿದೆ. ಅರೆಯನ್ ಸಮುದಾಯದ ದೇಸಿಬನಿಯ ಮಲೆಯಾಳವನ್ನು ಅನುವಾದಿಸುವಾಗ ನಾ ದಾ ಅವರು ಎಚ್ಚರದಿಂದ ಕಾಸರಗೋಡು ಸಮೀಪ ಬಳಕೆಯಲ್ಲಿರುವ ಕನ್ನಡ ಆಡುನುಡಿಯನ್ನು ಬಳಸಿದ್ದಾರೆ. ಇದರಿಂದಾಗಿ ಮಲಯಾಳ ಮೂಲದ ಸಂಭಾಷಣೆಯ ಸ್ವಾರಸ್ಯ ಅನುವಾದದಲ್ಲಿ ಉಳಿದುಕೊಂಡಿದೆ.
ಆದಿವಾಸಿಗಳ ಕಥೆಯನ್ನು ಒಬ್ಬ ಆದಿವಾಸಿಯೇ ಬರೆದಿರುವುದು ಈ ಕೃತಿಯ ಮಹತ್ವ. ಈ ಕುರಿತು ಲೇಖಕರು, ‘ಕೊಚ್ಚರೇತ್ತಿ’ ಓರ್ವ ಕೊಚ್ಚರೇತ್ತಿಯ ಮಗನಾದ ನಾನು ಬರೆದದ್ದು , ಯಾರನ್ನೂ ಅನುಕರಿಸಿಯೂ ಅಲ್ಲ ನನ್ನದೇ ಸ್ವಂತ ನನಗೆ ತೋಚಿದ ಶೈಲಿಯಲ್ಲಿ … ಎಂದು ಹೇಳಿಕೊಂಡಿದ್ದಾರೆ.
ಮಲೆಯಾಳಮ್ ನ ಮೊದಲ ಕಾಡಿನ ಕಥನವೆಂದರೆ ಎಸ್ ಕೆ.ಪೊಟ್ಟೇಕಾಟ್ ಅವರ ‘ವಿಷಕನ್ನಿಕ’. ವೈನಾಡಿನ ಟೀ ತೋಟಗಳಲ್ಲಿ ದುಡಿಯಲು ಹೋಗಿ ಕಷ್ಟ ಅನುಭವಿಸಿದವರ ಕಥೆ. ಅವರ ಪಾಲಿಗೆ ಪೃಕೃತಿ ತಾಯಿಯಲ್ಲ, ವಿಷಕನ್ಯೆ.
ಅರೆಯ ಸಮುದಾಯದ ಗಿಡಮೂಲಿಕೆ ವೈದ್ಯ ಕೊಚ್ಚುರಾಮನ ಮಗಳು ಪಾರ್ವತಿ ಮೊದಲ ತಲೆಮಾರಿನ ವಿದ್ಯಾವಂತೆ. ಅವಳು ತಾನು ಮೆಚ್ಚಿದವನನ್ನು ಮದುವೆಯಾಗಿ ಪಟ್ಟಣದಲ್ಲಿ ನೆಲೆಸುತ್ತಾಳೆ. ಆದರೆ ಅವಳ ತಂದೆ, ತಾಯಿ ತಮ್ಮ ನಂಬಿಕೆಗಳ ಜಗತ್ತಿನಿಂದ ಹೊರಬರುವುದಿಲ್ಲ. ಖಾಯಿಲೆಯಾಗಿ ಅಸ್ಪತ್ರೆಗೆ ಹೋದವರು ಡಾಕ್ಟರನ್ನು ನಂಬದೆ ಮರಳಿ ಕಾಡಿಗೆ ಬರುತ್ತಾರೆ. ವಿದ್ಯಾಭ್ಯಾಸ, ಕೆಲಸ ಪಾರ್ವತಿಯನ್ನು ಪಾರುಮಾಡುತ್ತದಾದರೂ ಅವಳ ತಂದೆ, ತಾಯಿಯರನ್ನಲ್ಲ. ಒಂದು ಸಮುದಾಯ ಪೂರ್ತಿ ಆಧುನಿಕ ವಿದ್ಯೆಯ ಪ್ರಯೋಜನ ಪಡೆಯುವುದು ಯಾವಾಗ? ಅದು ಸಾಧ್ಯವೇ ? ಎಂಬ ಪ್ರಶ್ನೆಗಳನ್ನು ಕಾದಂಬರಿ ನಮ್ಮ ಮುಂದಿಡುತ್ತದೆ.
ಅರೆಯನ್ನರು, ನಾಗರಿಕ ಜಗತ್ತಿನವರಂತೆ ನಾಜೂಕಾದ ಮಾತು, ಉಡಿಗೆ ಇಲ್ಲದವರಾದರೂ ಹೃದಯಸಂಪನ್ನರು, ತಮ್ಮದೇ ಆದ ಸಂಸ್ಕೃತಿ, ಜೀವನ ಶೈಲಿಗಳನ್ನು ರೂಪಿಸಿಕೊಂಡವರು. ಸಿನೆಮಾ ಮತ್ತಿತರ ಮಾಧ್ಯಮಗಳಲ್ಲಿ ಕಂಡುಬರುವ ಆದಿವಾಸಿಗಳ ಅತಿರಂಜಿತ ಚಿತ್ರಗಳಿಗೂ, ಕೊಚ್ಚರೇತ್ತಿ ಚಿತ್ರಿಸುವ ಸಹಜ ಪರಿಸರದ ಜನಗಳಿಗೂ ಹೋಲಿಕೆಯೇ ಇಲ್ಲ. ಕೊಚ್ಚುರಾಮ, ಅವನ ಕೊಚ್ಚರೇತ್ತಿ, ಹಿಂದಿನ ತಲೆಮಾರಿನವರು. ಪಾರ್ವತಿ, ಪದ್ಮನಾಭ ವರ್ತಮಾನದಲ್ಲಿ ನಾಗರಿಕ ಜಗತ್ತಿಗೆ ಅಡಿಯಿಟ್ಟವರು. ಪಟ್ಟಣವಾಸಿಗಳಾಗಿ ಮೂಲ ಕುಟುಂಬದಿಂದ ದೂರ ಇರುವವರು.
ಇದು ಆದಿವಾಸಿ ಕಥನವಾಗಿರುವಂತೆಯೇ ಕಳೆದ ಶತಮಾನದ ಮೊದಲಾರ್ಧದ ವಸಾಹತುಶಾಹಿಯ ಚಿತ್ರವೊಂದನ್ನೂ ಕಟ್ಟಿಕೊಡುತ್ತದೆ. ಕುವೆಂಪು ‘ಮಲೆಗಳಲ್ಲಿ ಮದುಮಗಳು’ ನಲ್ಲಿ ಚಿತ್ರಿಸಿರುವಂತೆ ಪಾದ್ರಿ ಜೀವರತ್ನಯ್ಯ ಮಲೆನಾಡಿನ ಜನರನ್ನು ಕ್ರಿಸ್ತ ಮತಕ್ಕೆ ಸೆಳೆಯಲು ಮಾಡಿದ ಪ್ರಯತ್ನದಂತೆ , ಅರೆಯನ್ನರ ಬದುಕಿನಲ್ಲೂ ಪಾದ್ರಿಯ ಪ್ರವೇಶವಾಗುತ್ತದೆ. ಪೆಂತಿಕೋಸ್ತ್ ಕುರಿತು ಅರೆಯನ್ನರು ಎಚ್ಚರ ವಹಿಸುತ್ತಾರೆ.
ಆನೆಗಳ ದಾಳಿಯಿಂದ ಬೆಳೆ ಹಾಳು, ವ್ಯಾಪಾರಿಗಳ ಮೋಸ ಇವುಗಳಿಂದ ನಲುಗಿ ಹೋಗಿದ್ದ ಆದಿವಾಸಿಗಳು ಮರಗಳ್ಳರ ಕೋಪಕ್ಕೂ ಗುರಿಯಾಗುತ್ತಾರೆ. ಅವರ ಕೃಷಿಭೂಮಿಯ ಲ್ಲಿದ್ದ ಬೀಟೆ ಮುಂತಾದ ಬೆಲೆಬಾಳುವ ಮರಗಳನ್ನು ಅರಣ್ಯ ಇಲಾಖೆಯವರು ಕಡಿದೊಯ್ಯುವಾಗ ಇವರ ಬೆಳೆ,ವಸತಿಗಳಿಗೆಲ್ಲ ಹಾನಿ ಮಾಡಿ, ಪ್ರತಿಭಟಿಸಿದವರ ಮೇಲೆ ಹಲ್ಲೆ ನಡೆಸುತ್ತಾರೆ. ಈ ಎಲ್ಲ ಕಷ್ಟಗಳ ನಡುವೆ ಕೊಚ್ಚುಪಿಳ್ಳೆ ಮಾಸ್ತರು ಮಕ್ಕಳಿಗೆ ಅಕ್ಷರ ಕಲಿಸಲು ಬರುತ್ತಾರೆ. ಒಂದು ಬೆಳಕಿನ ಕಿರಣ ಮೂಡುತ್ತದೆ.
ತಲೆತಲಾಂತರದಿಂದ ಮಲೆಯಲ್ಲಿ ವಾಸ ಮಾಡಿದರೂ ಅರೆಯನ್ನರ ಬಳಿ ಭೂಮಿಯ ಹಕ್ಕುಪತ್ರಗಳಿರುವುದಿಲ್ಲ. [ಇದೇ ಸಮಸ್ಯೆ ಕರ್ನಾಟಕದ ಗಿರಿಜನರದೂ ಆಗಿದೆ]. ಅರೆಯನ್ ಆದಿವಾಸಿಗಳ ದೈನಂದಿನ ಬದುಕಿನ ಕಷ್ಟ, ಸಾಂಸ್ಕೃತಿಕ ಅನನ್ಯತೆ, ಸಾಮಾಜಿಕ ಸಮಸ್ಯೆ,ಸಂಘರ್ಷಗಳು, ಭೂತಾಯಿಯ,ಮಲಮಕ್ಕಳಂತೆ ಬದುಕಬೇಕಾದ ಸಂದಿಗ್ಧತೆಗಳನ್ನು ಈ ಪುಸ್ತಕದಲ್ಲಿ ಮನಮುಟ್ಟುವಂತೆ ಚಿತ್ರಿತವಾಗಿದೆ.
ಸ್ವಾತಂತ್ರ್ಯಾನಂತರದ ಹೊಸ ಅರಿವು, ಸಮಾಜಿಕ ಬದಲಾವಣೆಗಳು ಭಾರತದ ವಿವಿಧ ಸಮುದಾಯದ ಜನಜೀವನದಲ್ಲಿ ಬದಲಾವಣೆ ತಂದಂತೆ ಅರೆಯನ್ನರ ಬದುಕೂ ಬದಲಾಯಿತು. ಬದಲಾವಣೆ ಹೊಸ ಸಮಸ್ಯೆಗಳನ್ನೂ ಹುಟ್ಟುಹಾಕಿತು. ವಿದ್ಯೆ ಮತ್ತು ನಾಗರಿಕತೆಯ ಅರಿವು ಅರೆಯನ್ನರಿಗೆ ತಮ್ಮ ಸ್ಥಿತಿಯ ಕುರಿತು ಕೀಳರಿಮೆಯನ್ನು ಮೂಡಿಸಿತು. ಕೊಚ್ಚುರಾಮನ ಮಗಳು ಪಾರ್ವತಿಯನ್ನು ಅವನ ಬಂಧುವೊಬ್ಬ ಮದುವೆಯಾಗಲು ಕೇಳಿದಾಗ ಕೊಚ್ಚುರಾಮನ ಪ್ರತಿಕ್ರಿಯೆ ಹೀಗೆ. ‘ಶಾಲೆ ಕಲೀದೆ ಮರಹತ್ತಿ ತಿರುಗಾಡ್ತಿರೋ ಮರನಾಯಿಗಾ ಹುಡುಗಿ ಕೊಡೋದು? ನನ್ನ ಮಗಳಿಗೆ ಕೈ ಮಣ್ಣಾಗದ ಹಾಗೆ ನಾಲ್ಕು ಕಾಸು ಸಂಪಾದಿಸುವವ ಸಿಕ್ತಾನಂತ ನೋಡುವ. ಸರ್ಕಾರಿ ಕೆಲಸದವನಿಗೆ ಅವಳನ್ನು ಮದುವೆ ಮಾಡಿಕೊಡೋದು’. [ಪುಟ 179]
ನಾರಾಯನ್ [ಗಮನಿಸಿ: ನಾರಾಯಣ್ ಅಲ್ಲ] ಸರಳವಾಗಿ ನಿರೂಪಿಸಿರುವ ಕಥೆಯನ್ನು ನಾ. ದಾಮೋದರ ಶೆಟ್ಟರು ಸಮರ್ಥವಾಗಿ ನೈಜವಾಗಿ ಕನ್ನಡಿಸಿ ಅಪರೂಪದ ಕೃತಿಯನ್ನು ಕನ್ನಡ ಓದುಗರಿಗೆ ನೀಡಿದ್ದಾರೆ. ಉದಾಹರಣೆಗೆ ಈ ಗಾದೆಮಾತಿನ ಅನುವಾದವನ್ನು ಗಮನಿಸಬಹುದು. ‘ಯಾರಿಗ್ಗೊತ್ತು ಇವೆಲ್ಲ ನೆಟ್ರೆ ಮೊಳಕೆ ಬಾರದ ಸುಳ್ಳಲ್ಲಾಂತ’ [ಪುಟ 150] .ಈ ಬಗೆಯ ಸಹಜ ಆಡುನುಡಿ ಪುಸ್ತಕದುದ್ದಕ್ಕೂ ಬಳಕೆಯಾಗಿದೆ. ಮಲೆಯಾಳಮ್ ನ ಆಡುನುಡಿ ಮತ್ತು ಕಾಸರಗೋಡು ಗಡಿಯಲ್ಲಿ ಬಳಕೆಯಲ್ಲಿರುವ ಕನ್ನಡ ಆಡುಭಾಷೆಗಳೆರಡೂ ನಾ ದಾ ಅವರಿಗೆ ತಿಳಿದಿರುವುದರಿಂದ ಇದು ಸಾಧ್ಯವಾಗಿದೆ. ಸಹಜವಾದ ಕನ್ನಡದ ಲಯದಲ್ಲಿ ಅನುವಾದಿಸಿರುವುದ ರಿಂದ ಸುಲಭವಾಗಿ ಓದಿಸಿಕೊಳ್ಳುತ್ತದೆ.





Na Da
yestu sogasu nimma anuvaada ! !
malayaal dinda kannadisi kaadambari
mudigerisikondiri prashastiyagari 1 !
A B H I N D A N E G A L U > > > > >
Narayan Raichur
congatulation sir,
ಪ್ರಿಯ ನಾದಾ ಅವರನ್ನು ಹಾಗೂ ಅವರ ಅನುವಾದಿತ ಕೃತಿಯನ್ನೂ ಕುರಿತ ಡಾ. ಸುಮಿತ್ರಾ ಅವರ ಲೇಖನ ತುಂಬಾ ಅರ್ಥಪೂರ್ಣವಾಗಿದೆ. ಅನೇಕ ದಶಕಗಳಿಂದ ಅನುವಾದ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ನಾದಾ ಅವರಿಗೆ ಹಾರ್ದಿಕ ಅಭಿನಂದನೆಗಳು. ಇಂತಹ ಇನ್ನೂ ಹತ್ತು ಹಲವು ಪ್ರಶಸ್ತಿಗಳು ಅವರನ್ನು ಅರಸಿಕೊಂಡು ಬರಲಿ.
ಸಿ. ಎನ್. ರಾಮಚಂದ್ರನ್
curious to read full text.very rare literary writing category it is, all the best sir.
ಅಭಿನಂದನೆಗೆ ಪ್ರತಿವಂದನೆ! ಅವಧಿಗೆ ಕೂಡಾ.