
ಅಕ್ಷತಾ ರಾಜ್ ಪೆರ್ಲ
ಅದು 2003ನೇ ಇಸವಿ. ನಾನಾಗ 7ನೇ ತರಗತಿಯಲ್ಲಿ ಓದುತ್ತಿದ್ದೆ. ಮೂಡಬಿದ್ರೆಯಲ್ಲಿ 71 ನೇ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಲಿದೆ, ಅದಕ್ಕಾಗಿ ಕ್ಷೇತ್ರದ ಎಲ್ಲಾ ಶಾಲೆ, ಕಾಲೇಜುಗಳಿಂದ ಸ್ವಯಂ ಸೇವಕರನ್ನು ಆಯ್ಕೆ ಮಾಡಿ ಕಳುಹಿಸಬೇಕು ಎಂಬ ಸುತ್ತೋಲೆ ನಮ್ಮ ಶಾಲೆಗೂ ಬಂದಿತ್ತು. ನಮಗೊಂದಿಷ್ಟು ಮಕ್ಕಳಿಗೆ ಆವಾಗಲೇ ಈ ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳೆಂದರೆ ಉಮೇದು ಒಂದು ಕೈ ಮೇಲೇ ಎಂಬುದು ಮುಖ್ಯ ಶಿಕ್ಷಕರಿಗೂ ತಿಳಿದಿದ್ದ ಕಾರಣ ನಮ್ಮ ಪ್ರಾಂತ್ಯ ಶಾಲೆಯಿಂದಲೂ ನನ್ನನ್ನು ಸೇರಿಕೊಂಡು ಐದು ಹೆಸರು ಹೋಗಿತ್ತು. ಮೂಡಬಿದ್ರೆ ಇಷ್ಟು ಪ್ರಸಿದ್ಧವಾಗಿರಲಿಲ್ಲದ ಆ ಕಾಲಘಟ್ಟದಲ್ಲಿ ಈ ಸಾಹಿತ್ಯ ಸಮ್ಮೇಳನದ ಬಹುಪಾಲು ಜವಾಬ್ದಾರಿ ತೆಗೆದುಕೊಂಡವರು ಡಾ.ಮೋಹನ ಆಳ್ವರೆಂಬುದು ಎಲ್ಲರಿಗೂ ಗೊತ್ತಿದ್ದ ವಿಷಯ. (ಈ ಸಾಹಿತ್ಯ ಸಮ್ಮೇಳನ ನಂತರದ ನುಡಿಸಿರಿಗಳಿಗೆ ನಾಂದಿಯೂ ಹೌದು)
ಅಷ್ಟು ದೊಡ್ಡ ಮಟ್ಟದ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರಾಗಿ ಆಯ್ಕೆಯಾದವರು ಕಮಲಮ್ಮ. ಅವರ ಬರೆಹಗಳನ್ನು ಓದಿದ್ದವರಿಗೆ ಅವರನ್ನು ಮುಖತ: ಭೇಟಿಯಾಗುವ ಅವಕಾಶ ಸಿಕ್ಕರೆ ಆನಂದ ಹೇಳತೀರುವುದೇ? ಸಾಲದ್ದಕ್ಕೆ ವೆಲೆಂಟಿಯರ್ ಎನ್ನುವ ಬ್ಯಾಡ್ಜ್ ಇದ್ದ ಕಾರಣ ಹತ್ತಿರದಿಂದ ಮಾತನಾಡಿಸಬಹುದು ಎಂಬ ಒಣಜಂಭ.

ಸಾಹಿತ್ಯ ಸಮ್ಮೇಳನದ ದಿನ ಬಂದೇ ಬಿಟ್ಟಿತ್ತು. ತೆರೆದ ವಾಹನದಲ್ಲಿ ಮೂಡಬಿದ್ರೆಯ ಜ್ಯೋತಿನಗರದ ನಿಸರ್ಗ ಪಾರ್ಕ್ ನಿಂದ ವಿದ್ಯಾಗಿರಿಯ ತನಕ ಕಮಲಾ ಹಂಪನರು ಸಾಗುತ್ತಿದ್ದಾಗ ಅಕ್ಕಪಕ್ಕದಲ್ಲಿ ಓಡಾಡುತ್ತಿದ್ದ ನಮಗೆ ಅದೇನೋ ಹೆಮ್ಮೆ. ನಂತರದ ಮೂರು ದಿನಗಳು ಕಮಲಮ್ಮರೊಡನೆ ಸನಿಹದಿಂದ ಮಾತನಾಡುವ ಅವಕಾಶ ಸಿಕ್ಕಿದ್ದಂತೂ ಸ್ವರ್ಗಕ್ಕೆ ಮೂರೇ ಗೇಣಾಗಿತ್ತು. ಒಂದು ಸಲವಂತೂ ಉಪ್ಪು ಮೆಣಸು ಹಿಡಿಯದ ಅದೇನೇನೋ ಹುಡುಗು ಪ್ರಶ್ನೆಗಳನ್ನು ಕೇಳುತ್ತಿದ್ದಾಗ ನಮ್ಮ ಶಿಕ್ಷಕರು ಗದರಿದ್ದಕ್ಕೆ “ಇರ್ಲಿ, ಮಕ್ಳು ಕೇಳಬೇಕಾದ್ದನ್ನು ಮಕ್ಳೇ ಕೇಳ್ಬೇಕು. ಇವತ್ತು ಅವರ ಬಾಯಿ ನಾವು ಕಟ್ಟಿ ಹಾಕಿದ್ರೆ ಮುಂದೊಂದು ದಿನ ನಮ್ಮ ಮಾತಿಗೆ ಅವಕಾಶ ಇಲ್ಲದಾಗುವುದು” ಅಂದು ಕಮಲಮ್ಮ ನುಡಿದುದರ ಮಾತಿಗೆಷ್ಟು ಅರ್ಥವಿತ್ತು! ಸಾಹಿತ್ಯ ಸಮ್ಮೇಳನದ ಕೊನೆಯ ದಿನ ಅಮ್ಮ ನಮಗೆಲ್ಲರಿಗೂ ಒಂದೊಂದು ಪೆನ್ನು ನೆನಪಿಗಾಗಿ ಕೊಟ್ಟಿದ್ದರು. (ಅದರಲ್ಲೇ 7ನೇ ತರಗತಿಯ ಪಬ್ಲಿಕ್ ಪರೀಕ್ಷೆ ಬರೆದಿದ್ದೆ).
ನಂತರ ನಾನು ಕಮಲಮ್ಮರನ್ನು ಭೇಟಿಯಾಗಿದ್ದು 2020ರಲ್ಲಿ. ಕಳೆದ ಆ ದಿನಗಳನ್ನು ಮತ್ತೆ ಅವರೆದುರು ಮೆಲುಕು ಹಾಕಿದಾಗ ಹಂಪನಾ ಸರ್ ಕೂಡಾ ಜೊತೆಗಿದ್ದರು. “ಓಹೋ, ಎಲ್ಲವನ್ನೂ ನೆನಪಿಸಿಕೊಂಡಿದ್ದೀರಿ. ಎಂದೋ ನಾವು ತೆಗೆಯುವ ಭಾವಚಿತ್ರಗಳು ಮಾಸಬಹುದು ಆದರೆ ನೆನಪುಗಳಿಗೆ ಸಾವಿಲ್ಲ” ಎಂದು ನಕ್ಕ ಹಂಪನಾ ಸರ್ ನಂತರ ಕೆಲವೊಂದು ಸಾಹಿತ್ಯಿಕ ಕಾರ್ಯಕ್ರಮಗಳ ಮಾಹಿತಿ ಕಳುಹಿಸುತ್ತಿದ್ದರು. ಹಂಪನಾ ದಂಪತಿಗಳ ಜೋಡಿ ಭಾವಚಿತ್ರ ನೋಡುವುದೇ ಕಣ್ಣಿಗೆ ಹಬ್ಬ. ಆದರೆ, ಇಂದು ಮುಂಜಾನೆ ಕೇಳಿ ಬಂದ ವಾರ್ತೆ “ಚಿತ್ರದ ಒಂದು ಭಾವ ಮರೆಯಾಯಿತು!”
ಹಂಪನಾ ಸರ್ ಹಾಗೂ ಕುಟುಂಬದವರಿಗೆ ನೋವು ಭರಿಸುವ ಶಕ್ತಿ ದೇವರು ಕರುಣಿಸಲಿ. ಸಾಹಿತ್ಯ ಪರಂಪರೆಯ ಒಂದು ತಲೆಮಾರಿನ ಕೊಂಡಿಗಳು ಕಳಚುತ್ತಿವೆ ಎಂಬ ಸುದ್ದಿ ಕಿವಿಗೆ ಬಿದ್ದಾಗೆಲ್ಲ ದಿಗಿಲು ಆವರಿಸಿಕೊಳ್ಳುತ್ತದೆ.






0 Comments