ಹೀಗೊಂದು ಕಾಡಿದ ಪ್ರಶ್ನೆ…
ಮುದ್ರಣ ಮಾಧ್ಯಮದಲ್ಲಿ ಕೆಲಸ ಮಾಡಿದ ಅನುಭವಕ್ಕಿಂತ ಟಿವಿ ಜರ್ನಲಿಸಮ್ ತೀರಾ ಭಿನ್ನ, ಇಲ್ಲಿ ನಾವು ಹೇಳಬೇಕನ್ನಿಸಿದ್ದನ್ನು ಕೆಲವೇ ವಾಕ್ಯಗಳಲ್ಲಿ ಹೇಳಬೇಕಾಗುತ್ತದೆ, ನಮ್ಮ ಶ್ರಮಕ್ಕೆ ಪ್ರತಿಪಲ ದೊರೆಯಬೇಕಾದ್ರೆ ಕೇವಲ ರಿಪೋರ್ಟರ್ ಪರಿಶ್ರಮದಿಂದ ಅದು ಸಾಧ್ಯವಾಗದ ಮಾತು. ಇಲ್ಲಿ ಡ್ರೈವರ್, ಕ್ಯಾಮರಾ ಮ್ಯಾನ್ ಕೂಡ ತಮ್ಮದೇ ಆದ ಪ್ರಮುಖ ಭೂಮಿಕೆಯನ್ನು ನಿಭಾಯಿಸುತ್ತಾರೆ. ಹಾಗಾಗಿ ಶೂಟಿಂಗ್ ಅಂದ್ರೆ ಅದು ಒಂದು ತಂಡದ ಶ್ರಮವನ್ನು ಕೇಳುತ್ತಿತ್ತು. ಅದರ ಮೇಲೆ ರಿಸಲ್ಟ್ ಅವಲಂಬಿತವಾಗಿತ್ತು.
ಚಾನೆಲ್ ಇನ್ನು ಆರಂಭವಾಗೋದಕ್ಕೆ ಮುಂಚೆ ಬ್ಯಾಂಕಿಂಗ್ ಸ್ಟೋರಿಗಳತ್ತ ಗಮನವನ್ನು ಹರಿಸಿದ್ವಿ. ಚಾನೆಲ್ ಆರಂಭಕ್ಕು ಮುಂಚೆ ಅದೇನೋ ಸಂಭ್ರಮ, ಕನ್ನಡಿಯೆದುರು ನಿಂತು ಮಾತಾಡುವ ಕಸರತ್ತು. ನಿರರ್ಗಳವಾಗಿ ಕ್ಯಾಮರಾ ಮುಂದೆ ಮಾತಾಡಬೇಕಂದ್ರೆ ಇದೆಲ್ಲಾ ಅನಿವಾರ್ಯವಾಗಿತ್ತು. ಇನ್ನು ಆಗ ಇದ್ದಿದ್ದು ಕೇವಲ ಎರಡು ಚಾನೆಲ್ ಗಳು. ಉದಯ ಟಿವಿ ಮತ್ತು ದೂರದರ್ಶನ. ಈ ಚಾನೆಲ್ ಗಳ ಜೊತೆ ನಾವು ಸ್ಪರ್ಧೆ ನೀಡಬೇಕಿತ್ತು. ಜನರನ್ನು ತಲುಪಬೇಕಿತ್ತು.
ಚಾನೆಲ್ ಆರಂಭಕ್ಕು ಮುಂಚೆ ಫೀಲ್ಡ್ ಗೆ ಹೋಗೋವಾಗ ಕಾಣುತ್ತಿದ್ದದ್ದು ಕೇವಲ ಎರಡು ಲೋಗೋಗಳು.
ಚಾನೆಲ್ ಆರಂಭಕ್ಕು ಮುಂಚೆ ಕೆಲವು ಸ್ಟೋರಿಗಳನ್ನು ನಾನು ಮಾಡಬೇಕಿತ್ತು. ಅದಕ್ಕಾಗಿ ಸ್ಟೋರಿಗಳಿಗಾಗಿ ವಿಷಯಕ್ಕಾಗಿ ಹುಡುಕಾಡುತ್ತಿದ್ದೆ. ಆಗ ಕಣ್ಣಿಗೆ ಕಂಡಿದ್ದು ಬೆಂಗಳೂರಿನ ಕಲುಷಿತಗೊಂಡ ಕೆರೆಗಳು. ಪರಿಸರದ ಬಗ್ಗೆ ವಿಪರೀತ ಪ್ರೀತಿಯನ್ನು ಹೆಚ್ಚಿಸಿಕೊಂಡ ನನಗೆ ಅದ್ಯಾಕೋ ಪರಿಸರದ ಮೇಲೆ ನಡೆಯುವ ಮನುಷ್ಯನ ದೌರ್ಜನ್ಯ ತುಂಬಾನೆ ನೋವನ್ನು ಆಕ್ರೋಶವನ್ನು ಹುಟ್ಟಿಸಿತ್ತು. ಸ್ವಾರ್ಥಕ್ಕಾಗಿ ನಾವದನ್ನು ಬಲಿಕೊಡುವ ರೀತಿ ತುಂಬಾನೆ ನೋವು ಕೊಟ್ಟಿತ್ತು. ಮನುಷ್ಯನ ದೌರ್ಜನ್ಯಕ್ಕೆ ಪರಿಸರವೊಮ್ಮೆ ತಿರುಗೇಟು ನೀಡಿದ್ರೆ ಅದನ್ನು ಜೀರ್ಣಿಸಿಕೊಳ್ಳಲಾರದ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಮನಸ್ಸಿನಲ್ಲೇ ಯೋಚನೆ ಮಾಡುತ್ತಿದ್ದೆ.
ನಿಜ ನಾನು ಬಾಲ್ಯವನ್ನು ಕಳೆದದ್ದು ಈ ಹಸುರ ಪರಿಸರದಲ್ಲಿ. ಎದ್ದರೆ ಬಿದ್ದರೆ, ಮಲಗುವಾಗಲು ಕಣ್ಣಿಗೆ ಮರಗಳು ಕಂಡರೆ ಅದೇನೋ ಖುಷಿ. ಈಗಲು ಬಾಲ್ಕನಿಯಲ್ಲಿ ತೆಂಗಿನತೋಟವನ್ನು ನೋಡುತ್ತಾ ನಿದ್ದೆಗೆ ಜಾರೋದು ನನಗಿಷ್ಟವಾದ ಕ್ಷಣಗಳು.
ಇನ್ನು ಅಂದಿನ ದಿನಗಳನ್ನು ನೆನಪು ಮಾಡೋದಾದ್ರೆ, ಬೆಂಗಳೂರಿನ ಹೊಗೆಯ ಮಧ್ಯೆ ಹಳ್ಳಿಯ ಆ ಚಿತ್ರಣ ಕಣ್ಣ ಮುಂದೆ ಹಾದು ಹೋಗುತ್ತಿತ್ತು. ಪುಟ್ಟ ಕಾಲುಗಳಲ್ಲಿ ಆ ಮಣ್ಣ ಹಾದಿಯಲ್ಲಿ ಸಾಗುವಾಗ ಗುನುಗುತ್ತಿದ್ದ ಅರ್ಥವಾಗದ ಸಾಲುಗಳು ಕೊಡುತ್ತಿದ್ದ ಖುಷಿಯೇ ಬೇರೆ. ಬುತ್ತಿ ಹಿಡಿದುಕೊಂಡು ಆ ಗುಡ್ಡದಲ್ಲಿ ಸಾಗಿ ಅಣ್ಣನಿಗೆ ಹೆದರುತ್ತಾ ಶಾಲೆಗೆ ಸೇರಿದ ದಿನಗಳು. ಸಿಡಿಲಿಗೆ ಮೂಡುತ್ತವೆ ಎನ್ನಲಾದ ಅಣಬೆಗಳನ್ನು ಹೆಕ್ಕುತ್ತಿದ್ದ ಗೆಳತಿಯರೊಡನೆ ಸುತ್ತಾಡಿದ್ದ ಕ್ಷಣಗಳು. ಮೊದಲ ಸ್ಪ್ರಿಂಗ್ ಕೊಡೆ ಕೊಟ್ಟ ಖುಷಿ…ಹೀಗೆ ನೆನಪುಗಳು ಆಗಾಗ ಸ್ಪ್ರಿಂಗ್ ಕೊಡೆಯಂತೆ ಬಿಚ್ಚಿಕೊಳ್ಳುತ್ತಿದ್ದವು. ಇನ್ನು ನಾವಿದ್ದ ಜಾಗ ಹೇಳಬೇಕಾದ್ರೆ ಸಿಲಿಕಾನ್ ಸಿಟಿಯಲ್ಲಿ ಹಸುರಿಗಾಗಿ ಪರದಾಡಬೇಕಾದ ಜಾಗದಲ್ಲಿ ನಮ್ಮ ರೂಮ್ ಇತ್ತು.
ಇಬ್ಬರು ಗೆಳತಿಯರ ಜೊತೆ ಮೊದಲ ಬಾರಿಗೆ ಮನೆ ಬಿಟ್ಟು ಇದ್ದೆ. ಹಾಸ್ಟೆಲ್, ಅಣ್ಣನ ಮನೆಯಲ್ಲಿ ಇದ್ದು ಅಭ್ಯಾಸವಾದ್ರು, ಸ್ವತಂತ್ರ್ಯವಾಗಿದ್ದು ಗೊತ್ತಿರಲ್ಲಿಲ್ಲ. ಸಂಪೂರ್ಣ ಸ್ವಾತಂತ್ರ್ಯವು ಹೆಚ್ಚಿನ ಧೈರ್ಯವನ್ನು ನೀಡಿದ್ರು, ಕೆಲವೊಮ್ಮೆ ಮನೆ ನೆನಪು ಶಕ್ತಿಯನ್ನು ಕುಂದಿಸಿದಂತೆ ಭಾಸವಾಗುತ್ತಿತ್ತು.
ಸ್ಟೋರಿ ಬಗ್ಗೆ ಹೇಳೋಕೆ ಹೋಗಿ ಬೆಂಗಳೂರಿನ ಬದುಕಿನ ಮಧ್ಯೆ ಹಾದು ಹೋದ ನೆನಪುಗಳನ್ನು ಕೆದಕುವ ಪ್ರಯತ್ನ ಮಾಡಿದೆ. ಇರಲಿ ಮತ್ತೆ ಸ್ಟೋರಿ ಬಗ್ಗೆ ಹೇಳೋದಾದ್ರೆ, ಈಗ ಮತ್ತೆ ಸುದ್ದಿಯಲ್ಲಿರುವ ಬೆಳ್ಳಂದೂರು ಕೆರೆ, ವರ್ತೂರು ಕೆರೆಯ ಬಗ್ಗೆ ಸ್ಟೋರಿಗಳನ್ನು ಮಾಡಿದೆ. ವಿಷ ನೊರೆಯುಕ್ಕಿಸುವ ಬೆಳ್ಳಂದೂರು ಕೆರೆ ಒಂದು ಸಮಯದಲ್ಲಿ ಸ್ಫಟಿಕದಂತ ನೀರಿನಿಂದ ತುಂಬಿ ಹರಿಯುತ್ತಿತ್ತು. ಹಾಗೇನೆ ವರ್ತೂರು ಕೆರೆ ಕೂಡ..
ಆದರೆ ಕೆರೆಗಳಲ್ಲೆಲ್ಲವು ಸತ್ತ ಮೇಲು ಶಾಂತಿಯನ್ನು ಹೊಂದದಂತಹ ಪರಿಸ್ಥಿತಿ ನಿರ್ಮಾಣವಾಗಿರೋದರ ಬಗ್ಗೆ ಆ ಸ್ಟೋರಿಗಳಿದ್ದವು. ಸ್ಟೋರಿ ಎಡಿಟಿಂಗ್ ಅಂತ ರಾತ್ರಿ ಹಗಲು ಕೆಲಸ ಮಾಡೋದು ಅದೇನೋ ಖುಷಿ. ವಾರದ ರಜೆಗಳಿಲ್ಲದೆ ನಿರಂತರ ಕೆಲಸ ಮಾಡುತ್ತಿದ್ದ ನನಗೆ ಜ್ವರ, ಅನಾರೋಗ್ಯವಾದಾಗ ಮಾತ್ರ ರೆಸ್ಟ್.. ಜರ್ನಲಿಸಮ್ ನ್ನು ಯಾವುದೇ ನಾಟಕೀಯತೆಯಿಲ್ಲದೆ ನಾನಂತು ಉಸಿರಾಡುತ್ತಿದ್ದೆ. ಅದೇನೋ ಭಾರಿ ಬದಲಾವಣೆಯ ಕನಸ ಹೊತ್ತಿದ್ದೆ. ಆದ್ರೆ ಅನಿಸಿಕೊಂಡದ್ದೆಲ್ಲಾ ವಾಸ್ತವಿಕವಾಗಿ ಸಂಪೂರ್ಣವಾಗಿ ಕಾರ್ಯಗತಗೊಳಿಸೋದು ಕಷ್ಟ ಅನ್ನೋದು ನಿಧಾನವಾಗಿ ಗೋಚರಿಸತೊಡಗಿತು. ಹಾಗಂತ ಅದು ಪ್ರಬಲ ಅಸ್ತ್ರವೆನ್ನೋದು ಹಲವಾರು ಬಾರಿ ಸಾಬೀತಾಗಿದೆ ಅನ್ನೋದು ಅಷ್ಟೇ ಸತ್ಯ. ಹಾಗಾಗಿ ಭರವಸೆ ಬತ್ತಿರಲಿಲ್ಲ. ಆಸಕ್ತಿಯು ಕಡಿಮೆಯಾಗಿರಲಿಲ್ಲ.
ಕೊನೆಗು ಚಾನೆಲ್ ಜನತೆಗೆ ಸಮರ್ಪಣೆಯಾಗಿತ್ತು. ಜನರ ಮನಸ್ಸನ್ನು ತಲುಪಿತ್ತು. ಆ ದಿನಗಳಲ್ಲಿ ರಿಪೋರ್ಟರ್ಸ್ ಸ್ಕ್ರೀನ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದದ್ದು ಅಪರೂಪ. ಯಾವಾಗ ಒಮ್ಮೆ ಬಂದರು ಜನ ಗುರುತಿಸುತ್ತಿದ್ರು. ಫೋನೋ ಕೊಡೋವಾಗ ಬರುತ್ತಿದ್ದ ಫೋಟೋ ನೋಡಿ ಹಲವು ಮಂದಿ ನಮ್ಮನ್ನು ಗುರುತಿಸುತ್ತಿದ್ರು. ಯಾಕಂದ್ರೆ ಇವತ್ತಿನ ರೀತಿ ತುಂಬಾ ಚಾನೆಲ್ ಗಳು ಆಗ ಇರಲಿಲ್ಲ. ಸ್ಪರ್ಧೆ ಹೆಚ್ಚಿತ್ತು. ಬಯಸಿದ ಬೀಟ್ ಸಿಗೋದು ಕಷ್ಟ. ನಿಜ ಇದನ್ನು ನಾನು ಹೇಳೋಕೆ ಕಾರಣವಿದೆ. ಆರಂಭದ ದಿನಗಳಲ್ಲಿ ಬರೀ ನೃತ್ಯ, ನಾಟಕ , ಕಾರ್ಪೋರೇಟ್, ವಿಜ್ಞಾನ, ಅಪರಾದ ಹೀಗೆ ಎಲ್ಲ ರೀತಿಯ ಅಸೈನ್ ಮೆಂಟ್ ಕವರೇಜ್ ಮಾಡೋ ಅವಕಾಶ. ದಿನ ಇದನ್ನೇ ಕವರೇಜ್ ಮಾಡೋದು ನನಗ್ಯಾಕೆ ಬೇಜಾರು ಅನ್ನಿಸಿತ್ತು. ವಿಧಾನಸೌಧಕ್ಕೆ ಹೋಗೋ ರಿಪೋರ್ಟರ್ಸ್ ನೋಡಿ ನನಗ್ಯಾಕೆ ಅವಕಾಶ ನೀಡೋಲ್ಲ ಅನ್ನೋ ನೋವು ಮನಸ್ಸಿನಲ್ಲೇ ಕಾಡುತ್ತಿತ್ತು..
ರಾಜಕೀಯ ಎಂದ್ರೆ ನಿಮಗಲ್ಲ ಅನ್ನೋ ಮನಸ್ಥಿತಿ ಕೆಲವರಲ್ಲಿತ್ತು.. ಇದರಲ್ಲಿ ನಮ್ಮ ತಪ್ಪು ಇದೆ. ಅನ್ಯಾಯವಾದಾಗ ಅಥವಾ ನಮಗೆ ಅನ್ನಿಸಿದ್ದನ್ನು ಮಾಡುತ್ತೀನಿ ಅನ್ನೋ ಅಭಿಪ್ರಾಯವನ್ನು ಹೇಳಲು ಹಿಂಜರಿಯುತ್ತಿದ್ದ ದಿನಗಳವು. ಹಳ್ಳಿಯಿಂದ ಬಂದ ನನ್ನೊಳಗೆ ಕೇಳಲಾರದ ನಾಚಿಕೆಯೊಂದಿತ್ತು. ಹಾಗಾಗಿ ಪಡೆದದ್ದಕ್ಕಿಂತ ಬೇರೆಯವರಿಗೆ ಅವಕಾಶ ಮಾಡಿಕೊಟ್ಟದ್ದು ಜಾಸ್ತಿ.
ಹಾಗಂತ ಇದರ ಬಗ್ಗೆ ನೋವಿಲ್ಲ. ಬರೀ ಭಾವನೆಗಳನ್ನು ಹೊತ್ತುಕೊಂಡು ಈ ಜಗತ್ತಲ್ಲಿ ಬದುಕಲು ಸಾಧ್ಯವಿಲ್ಲ, ಭಾವನೆಗಳೇನಿದ್ರು ನಮ್ಮ ಆತ್ಮೀಯರ ಜೊತೆಗಷ್ಟೇ ಎಂದು ತಿಳಿದುಕೊಳ್ಳಲು ಕೆಲವು ವರ್ಷಗಳು ಹಿಡಿದಿದ್ದು ನಿಜ..
ಏನೋ ಹೇಳೋಕೆ ಬರೆಯೋಕೆ ಹೋಗಿ ಮತ್ತೆ ಭಾವನೆಗಳು ಮುತ್ತಿಕೊಂಡುಹಾಗೆ ಏನೇನೋ ಗೀಚುತ್ತಿದ್ದೇನೆ ಅನ್ನಿಸುತ್ತದೆ ಆದ್ರೆ ಏನನ್ನಿಸುತ್ತೋ ಅದನ್ನು ಪ್ರಾಮಾಣಿಕವಾಗಿ ಹೇಳೋ ಪ್ರಯತ್ನವನ್ನಷ್ಟೇ ಮಾಡುತ್ತಿದ್ದೇನೆ.
ಹೀಗೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಜರ್ನಲಿಸ್ ನ ಜರ್ನಿ ಸಾಗಿತ್ತು. ಇದನ್ನೆಲ್ಲಾ ಬರೀತಿರಬೇಕಾದ್ರೆ ಇನ್ನಷ್ಟು ಸ್ಟೋರಿಗಳ ನೆನಪುಗಳು ಹಾಗೆ ಕಣ್ಣ ಮುಂದೆ ಬಂದು ನಿಂತಿವೆ. ಅದನ್ನು ಹೇಳ್ತೀನಿ ,ಬರುವ ವಾರ…
‘ಅವಧಿ’ಗಾಗಿ
ಇರ್ವತ್ತೂರಿನಿಂದ
ಜ್ಯೋತಿ




>> ಪೊಲಿಟಿಕ್ಸ್ ಕವರೇಜ್
ಸರಿಯಾದ ಪ್ರಯೋಗ ಅನಿಸುತ್ತಿಲ್ಲ. ‘ಪೊಲಿಟಿಕಲ್ ಕವರೇಜ್’ ಅಥವಾ ‘ಪೊಲಿಟಿಕ್ಸ್ ಕವರ್’ ಸರಿಯಾಗಿರ್ತಿತ್ತು ಅನಿಸುತ್ತೆ.
ಅದಕ್ಕಿಂತಾ ಹೆಚ್ಚಾಗಿ ಕನ್ನಡ ಪದಗಳನ್ನು ಉಪಯೋಗಿಸದರೆ ಇನ್ನೂ ಒಳ್ಳೆಯದಾಗುತ್ತಿತ್ತು ಅನಿಸುತ್ತದೆ.