ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾವು ಸಾಹಿತ್ಯ ಅಕಾಡಮಿ ಪ್ರಶಸ್ತಿ ಮರಳಿಸಿದ್ದೇಕೆ?

ನಾವು ಸಾಹಿತ್ಯ ಅಕಾಡಮಿ ಪ್ರಶಸ್ತಿ ಮರಳಿಸಿದ್ದೇಕೆ?

ashok vajapeyi

ಅಶೋಕ್ ವಾಜಪೇಯಿ

ಸಾಹಿತ್ಯ ಅಕಾಡಮಿ ಪ್ರಶಸ್ತಿಯನ್ನು ಪ್ರತಿಭಟನಾರ್ಥವಾಗಿ ತಿರಸ್ಕರಿಸಿದ ನಾಲ್ಕು ಮಂದಿಯ ಪೈಕಿ ನಾವು ಮೂರು ವಿಭಿನ್ನ ಭಾಷೆಗಳ ಅಂದರೆ ಹಿಂದಿ, ಉರ್ದು ಹಾಗೂ ಇಂಗ್ಲಿಷ್ ಭಾಷೆಗಳ ಸಾಹಿತಿಗಳು ಹಾಗೂ ನಾಲ್ಕು ವಿಭಿನ್ನ ಪೀಳಿಗೆಯವರು. ನಾವು ಮಾತ್ರವಲ್ಲ; ವಿವಿಧ ಭಾಷೆಗಳಲ್ಲಿ ಹಾಗೂ ಕಲಾತ್ಮಕ ಹಾಗೂ ಬೌದ್ಧಿಕ ವೃತ್ತಿಗಳಲ್ಲಿ, ತಾಣಗಳಲ್ಲಿ ಇರುವ ಹಲವು ಮಂದಿ ನಮ್ಮಂತೆಯೇ ಪ್ರತಿಭಟನಾತ್ಮಕ ಮನೋಭಾವ ಹೊಂದಿದವರಿದ್ದಾರೆ. ನಮ್ಮಷ್ಟೇ ಸಿಟ್ಟು ಹಾಗೂ ಉದ್ವಿಗ್ನತೆ ಅವರಲ್ಲೂ ಇದೆ. ನಮಗೆ ರಾಜಕೀಯದ ಬಗ್ಗೆ ನಿರ್ದಿಷ್ಟ ನಿಲುವುಗಳಿದ್ದರೂ, ಯಾವುದೇ ರಾಜಕೀಯ ಪಕ್ಷಕ್ಕೆ ನಾವ್ಯಾರೂ ಸೇರಿದವರಲ್ಲ. ಆದರೆ ಭಾರತದ ರಾಜಕೀಯ ಮಾರ್ಗ ಮಾತ್ರ ನಮ್ಮಲ್ಲಿ ಆತಂಕ ಹುಟ್ಟಿಸಿದೆ.

mind manಉದಾರವಾದಿ ಮೌಲ್ಯ ಹಾಗೂ ಚಿಂತನೆಗಳ ಎಲ್ಲ ಅವಕಾಶಗಳು, ಭಿನ್ನಾಭಿಪ್ರಾಯ ಹಾಗೂ ಸಂವಾದದ ಎಲ್ಲ ಮಾರ್ಗಗಳು, ವಿವೇಕ ಹಾಗೂ ಪರಸ್ಪರ ನಂಬಿಕೆಯ ಎಲ್ಲ ಪ್ರಯತ್ನಗಳ ಮೇಲೆ ಸಾಮಾನ್ಯವಾಗಿ ಪ್ರತಿದಿನ ಹಲ್ಲೆ ನಡೆಯುತ್ತಿದೆ. ಜಾತೀಯ ಹಾಗೂ ಕೋಮುವಾದದಿಂದ ಹಿಡಿದು, ಕೊಳ್ಳುಬಾಕ ಸಂಸ್ಕೃತಿಯ ಮತ್ತು ಜಾಗತೀಕರಣದ, ಜಾತಿ ಆಧಾರಿತ ಹಾಗೂ ಸಾಂಸ್ಕೃ ತಿಕ, ಸಾಮಾಜಿಕ ಹಾಗೂ ಆಂತರಿಕ ಹೀಗೆ ಎಲ್ಲ ಬಗೆಯ ಹಿಂಸಾಚಾರ ಎಲ್ಲೆ ಮೀರುತ್ತಿದೆ. ಆಡಳಿತದ ಕೃಪಾಕಟಾಕ್ಷದಲ್ಲಿ ಕಾನೂನಿನ ಬಗ್ಗೆ ಎಳ್ಳಷ್ಟೂ ಭಯ ಇಲ್ಲದ ಶಕ್ತಿಗಳು ನಿಷೇಧ, ಸಂದೇಹ, ಹೃದಯ ಭಾವನೆಗಳ ತತ್ವಗಳನ್ನು ಉದ್ದೀಪಿಸುತ್ತಿವೆ. ಪ್ರಜಾಸತ್ತಾತ್ಮಕ ಹಕ್ಕುಗಳಾದ ಅಭಿವ್ಯಕ್ತಿ, ನಂಬಿಕೆ, ಖಾಸಗೀತನವನ್ನು ಕೀಳಾಗಿ ಕಂಡು ಅವುಗಳಿಗೆ ತಡೆ ಉಂಟುಮಾಡಲಾಗುತ್ತಿದೆ ಹಾಗೂ ಯಾವುದೇ ಪ್ರಚೋದನೆ ಅಥವಾ ದೋಷವಿಲ್ಲದೇ ಅವುಗಳಿಗೆ ಅಡ್ಡಿಪಡಿಸಲಾಗುತ್ತಿದೆ.

ಕೇಂದ್ರ ಹಂತದಲ್ಲಿ ಹೊಸ ರಾಜಕೀಯ ಬೂಟಾಟಿಕೆ ಉಗಮವಾಗಿದೆ. ಸಾಂವಿಧಾನಿಕವಾಗಿ ಸರಿ ಎನಿಸುವ ಸ್ವಾತಂತ್ರ್ಯ, ಸ್ವಾಯತ್ತತೆ, ಜಾತ್ಯತೀತ ಬಂಧ, ಸಹನೆಗಳ ಕುರಿತು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆದರೆ ದೇಶದ ಸಂವಿಧಾನದ ಆಶಯಗಳನ್ನು ಹಾಗೂ ನಾಡಿನ ಕಾನೂನುಗಳ ನ್ನು ರಾಜಾರೋಷವಾಗಿ ಉಲ್ಲಂಘಿಸುವವರ ಮೇಲೆ ತೀರ ದುರ್ಬಲವಾಗಿ ಕ್ರಮ ಕೈಗೊಳ್ಳಲಾಗುತ್ತದೆ ಅಥವಾ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ದೇಶದ ನಾಗರಿಕರಿಗೆ ಬಹುತೇಕ ಜೀವಿಸುವ ಹಕ್ಕು, ಸ್ವಾತಂತ್ರ್ಯದಂಥ ಮೂಲಭೂತ ಹಕ್ಕುಗಳೇ ಇಲ್ಲದಂತಾಗಿದೆ. ಅವರು ಅವಕಾಶ ನೀಡಿದರೆ ಮಾತ್ರ ಜೀವಿಸಬಹುದು, ಬದುಕಬಹುದು ಎಂಬ ವಾತಾವರಣ ನಿರ್ಮಾಣವಾಗುತ್ತಿದೆ.

ಭಾರತದ ಸಂಪ್ರದಾಯ ಹಾಗೂ ಸಂಸ್ಕೃತಿ ಹೆಸರಿನಲ್ಲಿಇಂಥ ಹಲವು ಕೃತ್ಯಗಳು ನಡೆಯುತ್ತಿವೆ. ಭಾರತದ ಪರಂಪರೆಗೆ ಇದಕ್ಕಿಂತ ದೊಡ್ಡ ಹಾನಿ ಅಥವಾ ಅವಮಾನ ಬೇರಿಲ್ಲ್ಲ. ವಿಶ್ವದಲ್ಲಿ ಅತ್ಯಂತ ಪ್ರಾಚೀನ ಎನ್ನಲಾದ ನಾಗರಿಕತೆ ನಮ್ಮದು. ಬಹುಶಃ ವಿಶ್ವದಲ್ಲೇ ಅತ್ಯಂತ ದೊಡ್ಡ, ಭಾಷೆ, ಧರ್ಮ, ಆಚರಣೆ, ಖಾದ್ಯವೈವಿಧ್ಯ, ಕುಶಲಕಲೆ ಹೀಗೆ ಯಾವುದನ್ನು ತೆಗೆದು ಕೊಂಡರೂ, ವಿಶ್ವದಲ್ಲೇ ಅತ್ಯಂತ ವಿಸ್ತೃತವಾದ ನಾಗರಿಕತೆ ಇದು.ಭಾರತದಲ್ಲಿ ದೇವರು, ತತ್ವ, ನಂಬಿಕೆ ಯಾವುದೂ ದೀರ್ಘಕಾಲದವರೆಗೆ ಏಕತ್ವವಾಗಿ ಉಳಿಯುವುದು ಸಾಧ್ಯವೇ ಇಲ್ಲ. ತಕ್ಷಣವೇ ಪ್ರತಿಯೊಂದೂ ಬಹುತ್ವವಾಗಿ ರೂಪುಗೊಳ್ಳುತ್ತದೆ ಹಾಗೂ ಅಂತಿಮವಾಗಿ ವಿಸ್ತೃತ ಅರ್ಥದ ಬಹುತ್ವವಾಗಿ ಬೆಳೆಯುತ್ತದೆ.

ಆದರೆ ಯಾವಾಗಲೂ ನಮ್ಮ ನಡುವಿನ ಕೆಲ ಶಕ್ತಿಗಳೇ ಇಂಥ ಬಹುತ್ವ ಬೆಳೆಯುವುದನ್ನು ಇಚ್ಛಿಸುವುದಿಲ್ಲ. ಅಂಥವರು ಏಕ ಸಂಸ್ಕೃತಿಯನ್ನು ತರುವ ಯೋಚನೆಯಲ್ಲೇ ತೊಡಗಿರುತ್ತಾರೆ. ಅದನ್ನು ನಿರ್ವಹಿಸಿಕೊಂಡು ಹೋಗುವುದು ಸಾಧ್ಯ ಎಂಬ ನಂಬಿಕೆ ಹೊಂದಿರುತ್ತಾರೆ, ನಮ್ಮ ಪರಂಪರೆ ಅಥವಾ ಸಂಪ್ರದಾಯ ಕೇವಲ ಬಹುತ್ವವನ್ನು ಹೊಂದಿರುವುದಷ್ಟೇ ಅಲ್ಲದೇ ಪರಸ್ಪರ ಸಂವಾದ ಹಾಗೂ ಹೊಸದನ್ನು ಸೇರಿಸಿಕೊಳ್ಳುವ, ಆತ್ಮಾವಲೋಕನ ಹಾಗೂ ಭಿನ್ನಾಭಿಪ್ರಾಯ, ಸಾರ್ವಜನಿಕ ಚರ್ಚೆ, ಅನುಶೋಧನೆ pencil birdಹಾಗೂ ಪರಿಶೀಲನಾತ್ಮಕವಾಗಿಯೂ ಇದೆ. ನಮ್ಮ ಯೋಚನೆಗಳನ್ನು, ಅಂತರ್‌ದೃಷ್ಟಿಯನ್ನು ಸಾರ್ವಜನಿಕವಾಗಿ ಪರೀಕ್ಷಿಸುವ ಶಾಸ್ತ್ರಾರ್ಥದ ವಿಶಿಷ್ಟ ಸಂಸ್ಥೆ. ಸಾರ್ವಜನಿಕವಾಗಿ ಪರಸ್ಪರ ಪೈಪೋಟಿಯ ದೃಷ್ಟಿಕೋನಗಳನ್ನು ಪರೀಕ್ಷಿಸುತ್ತಲೇ ಇರುತ್ತದೆ. ಭಾರತೀಯರು ಎಂದೂ ಭಿನ್ನಾಭಿಪ್ರಾಯ ಅಥವಾ ಚರ್ಚೆಗೆ ಹಿಂಜರಿದವರಲ್ಲ. ಆದರೆ ಎಂದಿಗೂ ಅಸಹನೆ ಪ್ರದರ್ಶಿಸಿದವರಲ್ಲ.

ಸಮಾಜದಲ್ಲಿ ಸ್ವೀಕೃತವಾದ ನಂಬಿಕೆ ಅಥವಾ ನೀತಿಸಂಹಿತೆಯನ್ನು ಉಲ್ಲಂಘಿಸಿದಾಗ ದೇವರನ್ನೂ ಪ್ರಶ್ನಿಸುವ, ಶಿಕ್ಷಿಸುವ ಪರಿಪಾಠ ನಮ್ಮಲ್ಲಿದೆ. ಸುಮಾರು ಅರ್ಧ ಶತಮಾನದ ಸ್ವಾತಂತ್ರ್ಯೋತ್ತರ ಭಾರತದ ಇತಿಹಾಸದಲ್ಲಿ ಸಾಹಿತ್ಯವಲಯ ಬಹುತೇಕ ಆಡಳಿತ ವಿರೋಧಿಯಾಗಿಯೇ ಕಾರ್ಯನಿರ್ವಹಿಸುತ್ತಾ ಬಂದಿದೆ. ತುರ್ತುಪರಿಸ್ಥಿತಿ, ಸಿಖ್ ಗಲಭೆ, ಬಾಬರಿ ಮಸೀದಿ ಧ್ವಂಸ, ಪಂಜಾಬ್ ಭಯೋತ್ಪಾದನೆ, ನಂದಿಗ್ರಾಮ ಹಿಂಸಾಚಾರ, ನಕ್ಸಲೀಯ ಚಟುವಟಿಕೆ ಮತ್ತು ಬುಡಕಟ್ಟು ಪ್ರದೇಶಗಳಲ್ಲಿನ ಹಿಂಸೆ, ಗುಜರಾತ್ ಹತ್ಯಾಕಾಂಡದಂಥ ಘಟನೆಗಳು ಸಾಹಿತಿಗಳನ್ನು ಹಾಗೂ ಕಲಾಕಾರರನ್ನು ಇಂಥ ಅನಿಷ್ಟಗಳ ವಿರುದ್ಧ ಪ್ರತಿಭಟನೆ ನಡೆಸುವಂತೆ ಪ್ರಚೋದಿಸಿವೆ.

ಸಾಮಾಜಿಕ ಸಾಮರಸ್ಯಕ್ಕೆ ಹಾನಿ ಮಾಡಿದ, ಕೋಮುಸಾಮರಸ್ಯ ಹಾಗೂ ಸೃಜನಶೀಲ ಬದುಕಿಗೆ ಹಾನಿ ಮಾಡಿದ್ದನ್ನು ಬಲವಾಗಿ ಖಂಡಿಸಿವೆ. ಹಾಗೆ ಮಾಡಿಲ್ಲವೆಂದರೆ ಅವರು ತಮ್ಮ ಕರ್ತವ್ಯ ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ ಎಂದೇ ಅರ್ಥ. ಒಳ್ಳೆಯ ಅಥವಾ ಕೆಟ್ಟ ವಿಷಯಗಳಲ್ಲಾಗಲೀ ಸೃಜನಶೀಲ ಹಾಗೂ ಪ್ರತಿಫಲನ ಸಮುದಾಯ ಈ ದೇಶದ ಆತ್ಮಸಾಕ್ಷಿಯನ್ನು ಕಾಪಾಡಿಕೊಂಡು ಬರುವ ಕೆಲಸದಲ್ಲಿ ನಂಬಿಕೆ ಇಟ್ಟಿದೆ. ನಮ್ಮಲ್ಲಿ ಕೆಲವರು ನಮ್ಮ ಸ್ವಂತ ಪವಿತ್ರ ಪರಂಪರೆ ಎನಿಸಿದ ಆಡಳಿತ ವರ್ಗಕ್ಕೆ ಕಟುಸತ್ಯವನ್ನು ಹೇಳುವ ಸಂಪ್ರದಾಯಕ್ಕಷ್ಟೇ ಬದ್ಧರಾಗಿದ್ದೇವೆ. ಈ ಕಾರಣದಿಂದ ನಾವು ಸಾಹಿತ್ಯ ಅಕಾಡಮಿ ಪ್ರಶಸ್ತಿಯನ್ನು ಪ್ರತಿಭಟನಾರ್ಥವಾಗಿ ವಾಪಸು ಮಾಡಲು ನಿರ್ಧರಿಸಿದೆವು.

ನಮ್ಮ ಸ್ವಾತಂತ್ರ್ಯದ ಮೇಲೆ ನಡೆಯುತ್ತಿರುವ ಹಲ್ಲೆ ಹೆಚ್ಚುತ್ತಿದೆ ಎನ್ನುವುದನ್ನು ಸಾರ್ವಜನಿಕರ ಗಮನಕ್ಕೆ ತರುವುದು ನಮ್ಮ ಉದ್ದೇಶ. ಲೇಖಕರು, ಕಲಾಕಾರರು ಹಾಗೂ ಬುದ್ಧಿಜೀವಿಗಳಾದ ನಮಗೆ ಈ ಬಗ್ಗೆ ಅತೀವ ಆತಂಕ ಹಾಗೂ ಕಳಕಳಿ ಇದೆ.

‍ಲೇಖಕರು admin

13 October, 2015

1 Comment

  1. KVTirumalesh

    ಇಷ್ಟು ಕಾಲದಿಂದಲೂ ನಿಮ್ಮ ದೊಡ್ಡ ಧ್ವನಿ ಕೇಳಿಸುತ್ತಲೇ ಬಂದಿದೆ. ಈಗಲೂ ಕೇಳಿಸುತ್ತದೆ, ಇನ್ನು ಮುಂದೆಯೂ ಕೇಳಿಸುತ್ತದೆ. ನಾವು ಕೇಳುತ್ತ ಬಂದಿದ್ದೇವೆ.
    ನನ್ನಂಥವರು ನಿಜಕ್ಕೂ ಹೆದರುವುದು ನಿಮಗೇ! ನಿಮ್ಮ ಈ ಸಾಹಿತ್ಯಿಕ ಯಾಜಮಾನ್ಯದ ವಿರುದ್ಧ ದನಿಯೆತ್ತುವವರು ಯಾರು? ನಿಮ್ಮ ಪಾಂಚಜನ್ಯದ ಮುಂದೆ ನಮ್ಮದು ಕವಡೆ.

    ತಾಕದ್ದಿದ್ದರೆ ಈ `ಪಶಸ್ತಿ’ ಎಂಬ ಪ್ರಹಸನದ ವಿರುದ್ಧವೇ ಹೋರಾಡಿ–ಯಾಕೆಂದರೆ ಅದು ಕೆಲವರಿಗೆ ಅನಗತ್ಯದ ಪ್ರಸಿದ್ಧಿಯನ್ನು, ತನ್ಮೂಲದ ಶಕ್ತಿಯನ್ನು, ಭ್ರಮೆಯನ್ನು ನೀಡುತ್ತದೆ. ಆಮೇಲೆ ಅವರು ಭೂಮಿಯ ಮೇಲೆ ಇರುವುದಿಲ್ಲ–ಆಕಾಶದಲ್ಲಿ ಇರುತ್ತಾರೆ.
    ನಮ್ಮನ್ನು ನೀವು ಯಾವತ್ತೂ ಸ್ವೀಕರಿಸುವುದಿಲ್ಲ.
    ಸಾಹಿತಿಗಳಲ್ಲಿ ಇಂತಹ ವರ್ಗೀಕರಣ ಯಾಕೆ??

    ಕೆ.ವಿ. ತಿರುಮಲೇಶ್

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading