ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾಳೆಯ ಕನಸುಗಳಲ್ಲಿ ನಿನ್ನೆ ಮರೆವಾಗ…

ಹೀಗೊಂದು ಲಹರಿ….

– ರಘುನಂದನ ಹೆಗಡೆ, ಗಿರಣೀಮನೆ

“A Thing Lost is Valued The Most” ನಿಜ, ಕಳೆದ ವಸ್ತು ಯಾವಾಗಲೂ ಅತ್ಯಂತ ಬೆಲೆಯುಳ್ಳದ್ದು, ಅಥವಾ ಇಲ್ಲವಾದಾಗ ಮಾತ್ರ ಅದರ ಬೆಲೆ ಅರ್ಥವಾಗುತ್ತದೋ ಏನೋ. ಎಷ್ಟೋ ಸಲ ಅದು ನಮ್ಮೊಡನೆ ಇದ್ದುದರ ಅರಿವೂ ಇಲ್ಲದಂತೆ ಇದ್ದುಬಿಟ್ಟಿರುತ್ತೇವೆ ನಾವು.
ಈಗ ಬೆಂಗಳೂರಿನ ಎಷ್ಟೋ ರಸ್ತೆಗಳು ತಮ್ಮೊಡಲ ಮರಗಳನ್ನು ಕಳೆದುಕೊಂಡು ಝಳಪಿಸುತ್ತಿವೆ. ಎಷ್ಟೋ ವರ್ಷಗಳಿಂದ ಇದ್ದೂ ಇಲ್ಲದಂತಿದ್ದುಬಿಟ್ಟಿದ್ದ ಆ ಮರಗಳು ಅಭಿವೃದ್ಧಿಯ ಕನಸಿನ ನಾಳೆಗಾಗಿ ನಿಶ್ಯಬ್ದವಾಗಿ ಜಾರಿಹೋಗಿವೆ. ಬಿದಿರ ಸೀಳಿ ಬುಟ್ಟಿ ನೇಯುವವರ ಆಸರೆಯಾಗಿ, ಎಲೆಯ ಸಂದಿಯಿಂದ ಜಾರುವ ಬೆಳಕಿನ ಕಿರಣಗಳ ಹುಡುಕುತ್ತಿದ್ದ ಹರಿದ ತಡಿಕೆಯ ಗುಡಿಸಲಿನೊಳಗಿನ ಕಂದಮ್ಮಗಳ ಕಣ್ಣ ಬೆಳಕಾಗಿ, ಹದಿಹರೆಯದವರ ಸ್ವಪ್ನ ಭೂಮಿಯ ಮಾತುಗಳಿಗೆ ಕಿವಿಯಾಗಿ, ಹಕ್ಕಿಗಳ ಕಲರವಕ್ಕೆ ಎಲೆಗಳ ಮರ್ಮರವ ಸೇರಿಸುತ್ತ ಜೊತೆಯಾಗಿ ನಿಂತಿದ್ದ ಮರಗಳೆಲ್ಲ ಈಗ ಮುರಿದು ಬಿದ್ದಿವೆ, ಅಲ್ಲ ಕಡಿದು ಕೆಡವಲಾಗಿದೆ. ಈಗ ಅಲ್ಲುಳಿದಿರುವುದು; ಉರುಳಿದ ಉಸಿರಿನ ಅವಶೇಷಗಳ ಚಡಪಡಿಕೆ ಮಾತ್ರ – ಕಾಲೇಜಿನ ಮಕ್ಕಳೆಸೆದ ಕಸದಂತೆ, ಸೀಳಿಬಿದ್ದ ಬಿದಿರಿನ ಚೂರುಗಳಂತೆ.
ನಿಜ, ಇದ್ದಾಗ ಬೆಲೆ ಅರ್ಥವಾಗದು. ನಮ್ಮ ಹೆತ್ತವರು ಹೆಮ್ಮರದಂತೆ ನಮ್ಮ ಹಿಂದೆ ನಿಶ್ಶಬ್ದವಾಗಿ ನಿಂತಿರುವುದು ಮರೆತುಹೋಗಿದ್ದೇವೆ ನಾವೀಗ. ಅವರೂ ಮರಗಳಂತೆ ನಿಂತೇ ಇರುತ್ತಾರೆ – ಬೆಳೆಯಬೇಕೆಂಬ ಧಾವಂತದಲ್ಲಿ ಮಗ – ಮಗಳು ನಾಳೆಗಳ ಬೆನ್ನತ್ತಿ ಓಡುತ್ತ ತಮ್ಮನ್ನ ಮರೆತಾಗಲೂ. ‘ನಮ್ಮ ಭಾವನೆಗಳೇ ಅವರಿಗೆ ಅರ್ಥವಾಗುವುದಿಲ್ಲ, Genaration Gap ಅಂತ ತಿರಸ್ಕರಿಸಿದಾಗಲೂ, ‘ಸುಮ್ಮನೆ ಬಾಯಿ ಮುಚ್ಚಿಕೊಂಡಿರುತ್ತೀರಾ’ ಎನ್ನುತ್ತ ಕೋಪದ ಜ್ವಾಲೆಗಳ ಅಪ್ಪಳಿಸಿದಾಗಲೂ – ನಿಂತೇ ಇರುತ್ತಾರೆ, ಮಕ್ಕಳು ಸೋತು ಹಿಂತಿರುಗಿದರೆ ಆಸರೆಗೆ, ಧೈರ್ಯಕ್ಕೆ, ಏನೋ ಬೇಕೆಂದು ತುಡಿವ ಮಕ್ಕಳ ಕಂಗಳ ಗೊಂದಲ ಕಳೆಯಲು ತಮ್ಮ ಬದುಕನ್ನೇ ಸವೆಸುತ್ತ, ಎಂದೋ ಒಂದು ದಿನ ನಿಶ್ಶಬ್ಧವಾಗಿ ಧರಶಾಯಿಗಳಾಗುತ್ತಾರೆ ಮರಗಳಂತೆ. ಅವರ ಬೆಲೆ ಈಗಲಾದರೂ ಅರ್ಥವಾದೀತಾ? ಬಿಸಿಲ ಝಳ ಮೈ ಸುಡುವಾಗ, ಧೂಳು-ಹೊಗೆ ಆವರಿಸಿ ಕಣ್ತುಂಬುವಾಗ, ತಂಪ ನೀಡುತ್ತಿದ್ದ ಮರಗಳು ನೆನಪಾಗುತ್ತವೆ.
ಉರುಳಿದ ಮರಗಳ ಕೊನೆಯುಸಿರು ಕಳೆವ ಮೊದಲೇ ನಾವು ಅವುಗಳ ಮರೆತು ಮತ್ತೆ ಜಂಜಾಟಗಳ ಹಿಂದೆ ಹೊರಟಿದ್ದೇವೆ. ನಮ್ಮ ನಾಳೆಯ ಕನಸುಗಳಲ್ಲಿ ನಾವಿದ್ದೇವೆ, ನಮ್ಮ ಸಂಸಾರ, ಮಕ್ಕಳಿದ್ದಾರೆ. ಅದರಲ್ಲಿ ಹಿಂದೆ ನಿಂತು ನಮ್ಮನ್ನೇ ಕನಸಾಗಿಸಿಕೊಂಡವರಿಲ್ಲ. ಒಂದೊಮ್ಮೆ, ಅವರೂ ನಾಳೆಯ ಕನಸುಗಳಲ್ಲಿ ನಿನ್ನೆಗಳನ್ನ ಮರೆತಿದ್ದಿರಬಹುದೇ… ಗೊತ್ತಿಲ್ಲ, ನಾವಂತೂ ಮರೆತಿದ್ದೇವೆ. ನಮಗೀಗ ಬಿಸಿಲ ಝಳ, ಹೊಗೆ-ಧೂಳುಗಳು ಅಭ್ಯಾಸವಾಗಿ ಬಿಟ್ಟಿವೆ. ತಿಂಗಳು ಕಳೆಯುವುದರೊಳಗೆ ಅಪ್ಪ-ಅಮ್ಮ ಮರೆತೇ ಹೋಗುತ್ತಾರೆ, ಬದುಕು ಕೈ ಬೀಸಿ ಕರೆಯುತ್ತದೆ, ಕಾಲ ಸರಿಯುತ್ತಲೇ ಇರುತ್ತದೆ, ಮನಸ್ಸು ಹೀಗೆ ಏನೇನೋ ಧ್ಯಾನಿಸುತ್ತಲೇ ಇರುತ್ತದೆ.

‍ಲೇಖಕರು avadhi

27 February, 2013

2 Comments

  1. ಮಂಜುನಾಥ ದಾಸನಪುರ

    ನಿಜ ಸಾರ್ ನಿಮ್ಮ ಮಾತು. ಬೆಂಗಳೂರಿನಲ್ಲಿ, ಸೂರ್ಯನ ಕಿರಣಗಳ ತಾಪವನ್ನು ಈ ಮರಗಳು ಸಹಿಸಿಕೊಂಡು ನಮಗೆ ನೆರಳನ್ನು ನೀಡುತ್ತಿದ್ದವು, ಅಮ್ಮನ ಹಾಗೆ…..ನಾನು ಓದಿದ ವಿ.ವಿ.ಪುರಂ ಕಾಲೇಜಿನ ಎದುರಿಗೆ ಇದ್ದ ರಸ್ತೆಯ ಇಕ್ಕೆಲಗಳಲ್ಲಿ ಸಾಲಾಗಿ ದೊಡ್ಡ ದೊಡ್ಡ ಮರಗಳು ತನ್ನ ಕೊಂಬೆಗಳನ್ನು ಅಗಲಿಸಿ ನಿಂತಿದ್ದವು ನೆರಳನ್ನು ಚಾಚುತ್ತಾ…ಕೆಂಪೇಗೌಡ ಆಸ್ಪತ್ರೆಯಿಂದ ನ್ಯಾಷನಲ್ ಕಲೇಜಿನವರೆಗೆ ದಿನಪೂರ್ತಿ ನೆರಳು ಹಾಸಿಕೊಂಡು ಮಲಗಿರುತ್ತಿತ್ತು. ಈ ಮಾರ್ಗದಲ್ಲಿ ಬಸ್ಸಿಗಿಂತ ನಡೆದುಕೊಂಡು ಹೋಗುವುದೇ ಚೆಂದವಿತ್ತು. ತಂಪಾದ ಗಾಳಿ, ಅಕ್ಕಿ ಪಕ್ಷಿಗಳ ನಿನಾದ ಕಿವಿಗಳಿಗೆ ತಂಪನ್ನು ನೀಡುತ್ತಿತ್ತು.
    ಆದರೆ, ಮೈಟ್ರೊ ಕಾಮಗಾರಿಗಾಗಿ ಅಲ್ಲಿನ ಮರಗಳನ್ನು ತರಗೆಲೆಗಳಂತೆ ಕಡಿದು ಹಾಕಿದ್ದಾರೆ. ಈಗ ಆ ಪ್ರದೇಶಕ್ಕೆ ಕಾಲಿಟ್ಟರೆ ಆಗೋಚರವಾದ ಮೂಕವೇದನೆ ಕೇಳಿಸುತ್ತದೆ.

  2. Raghunandan K

    ಅವಧಿಯ ನಿರಂತರ ಪ್ರೋತ್ಸಾಹಕ್ಕೆ ಧನ್ಯವಾದ ಹೇಳದಿರಲಾರೆ,
    ಈ ಬರಹಕ್ಕೆ ಅವಧಿ ಹಾಕಿದ ಚಿತ್ರ ತುಂಬಾ ಇಷ್ಟವಾಗುವಂತಿದೆ, ಹೊಸ ಬರಹಕ್ಕೆ ಸ್ಪೂರ್ತಿಯೂ…
    ಸುಳಿತಿರುಗುವ ಬಣ್ಣ ಬಣ್ಣದ ಕಣ್ಣುಗಳಲ್ಲಿ ಬದುಕು ನಳನಳಿಸಲಿ…
    ಮಂಜುನಾಥ ದಾಸನಪುರ ಜೀ, ನಾನೂ ಕೂಡ ಕೆ ಆರ್ ರಸ್ತೆ, ಗಾಯನ ಸಮಾಜದ ಸುತ್ತೆಲ್ಲ ನಿರಂತರ ಓಡಾಡಿದವ, ಅಲ್ಲಿದ್ದ ಬಿದಿರು ನೇಯುವವರ ಬದುಕ ಕಂಡವ, ಮೆಟ್ರೋ ಗಾಗಿ ಮರಗಳೆಲ್ಲ ಕಳೆದಾಗ ಬಿಸಿಲ ಝಳ, ಧೂಳು ಕವಿದ ರಸ್ತೆಯ ನೋಡಿ ದುಃಖಿಸಿದವ. ಇದಲ್ಲದೆ ಹಸಿರು ಸದಾ ನನ್ನ ಕಾಡುವ ವಿಷಯವೂ ಹೌದು. ಈ ಬರಹ ಕೂಡ ಆ ದಿನಗಳಲ್ಲೇ ಬರೆದದ್ದು… ಅವಧಿ ಪ್ರೋತ್ಸಾಹದಿಂದ ಈಗ ಹಸಿರಾಗಿದೆಯಷ್ಟೆ..
    ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ.

Trackbacks/Pingbacks

  1. ನಾಳೆಯ ಕನಸುಗಳಲ್ಲಿ ನಿನ್ನೆ ಮರೆವಾಗ… | ಸಮುದ್ರ ತೀರ.... - [...] ದಿನಾಂಕ: 27.02.2013ರಂದು “ಅವಧಿ” ಯಲ್ಲಿ ಪ್ರಕಟಿಸಲ್ಪಟ್ಟಿದೆ. ಅವಧಿಯ ಪುಟಗಳಲ್ಲಿ ಓದಲು ಈ ಲಿಂಕ್ ಬಳಸಿ – http://avadhimag.online/?p=78985  [...]

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading